• ಇದ್ರಲ್ಲಿ ಧ್ವನಿ ಇಲ್ಲ ಅಂತಿದ್ರು. ಅವರ ಧ್ವನಿತತ್ವವನ್ನ ಉಪಯೋಗಿಸಿ ಇದ್ರಲ್ಲಿ ಧ್ವನಿಯೇ ಇಲ್ಲ ಅಂತಿದ್ರು. ಅದೇ ಅಡಿಗರ ಯಾವುದು, ’ಪ್ರಾರ್ಥನೆಬಂತಲ್ಲಾ ಅದ್ರಲ್ಲಿ ಕೆಲವು ಶಬ್ದಗಳೇ ಇದ್ದಾವೆ. ಶಬ್ದಗಳು ಇಲ್ಲದೇ ಇದ್ರೆ ಚೆನ್ನಾಗಿರೋದು ಅದ್ರ ಭಾವಾರ್ಥವೇ, ವಾಚ್ಯಾರ್ಥವೇ ಮುಖ್ಯವಾಗಿ ಬಿಡುತ್ತೆ ಅನ್ನುವ ಥರದ್ದನ್ನು ಅವರು ಹೇಳ್ತಾ ಇದ್ರು.

ಅದನ್ನ ಒಪ್ಪೋಕಾಗೋದಿಲ್ಲ

 • ಅಂದ್ರೆ ನೀವು ಬೇರೆ ಥರ ಯೋಚನೆ ಮಾಡ್ತೀರಿ.

ನನಗೆ ಮೊದಲಿನಿಂದ್ಲೂ ಅಡಿಗರ ಪದ್ಯ ಇಷ್ಟ ಇತ್ತು.

 • ಅದು ನನಗೆ ಗೊತ್ತಿದೆ. ಅಡಿಗರಿಗೂ ನಿಮ್ಮ ಕೆಲವು ಪದ್ಯಗಳು ಬಹಳ ಇಷ್ಟ ಇದ್ದು. ಅವರಿಗೆ ಜಡೆ ಬಹಳ ಇಷ್ಟವಾಗಿತ್ತು. ಅವರಿಗೆ ಮೀಮಾಂಸೆ ಬಹಳ ಇಷ್ಟವಾಗಿ ಬಿಟ್ಟಿತ್ತು. ಆಗ ಅವರ ಥರನೇ ಯೋಚನೆ ಮಾಡುವ ಎಸ್.ವಿ.ರಂಗಣ್ಣನವರು ನಮ್ಮ ಮೇಷ್ಟ್ರಾಗಿದ್ರು.

ನನಗೂ ಕೀಟಲೆ ಮಾಡ್ತಾ ಇದ್ರು, ಬಹಳಷ್ಟು.

 • ಅವರ ಹತ್ರ ಕೂತ್ಕೊಂಡು ಕೇಳಿಸ್ಕೋಬೇಕು. ಅವರು ಯಾರೋ ಒಬ್ಬ ಕೀಟ್ಸ್ ಲೈಫ್ ಟು ಮಿಲ್ಟನ್ ಈಸ್ ಡೆತ್ ಟು ಮಿಅದನ್ನು ಒಂದು ಚರ್ಚೆಯಲ್ಲಿ ವಾಟ್‌ ಈಸ್‌ ಪ್ಯೂನಿ ಕೀಟ್ಸ್ ಬಿಫೋರ್‌ ಮೈಟಿ ಮಿಲ್ಟನ್ಅಂದರು. ಅದು ಇದ್ದಿದ್ರಿಂದೆಲ್ಲಾ ಅವೆಲ್ಲ ಕಡಿಮೆ ಆಗ್ಬಿಟ್ಟಿದೆ ಸರ್. ಈಗ ಒಂದು ಪದದ ಬಗ್ಗೆ ಚರ್ಚೆ ಮಾಡೋಣ ಸರ್‌. ಗತಿಬಿಂಬ ಅನ್ನೋ ಪದದ ಬಗ್ಗೆ, ಥಿಂಕ್, ಇದೊಂದು ಕಾನ್‌ಟ್ರಿಬ್ಯೂಶನ್, ಶಬ್ದ. ಸಾಹಿತ್ಯ ಪ್ರತಿಬಿಂಬ ಅಲ್ಲ, ಗತಿಬಿಂಬ ಅಲ್ವಾ? ಸಾಹಿತ್ಯದ ಕೆಲಸ ಏನೂಂದ್ರೆ ಅದು ಗತಿಬಿಂಬವಾಗೋದು ಅಂತ ನೀವು ಹೇಳೋದಲ್ವಾ?

ಗತಿ ಅನ್ನೋದಕ್ಕೆ ಗತಿಬಿಂಬ. ಅದು ಪ್ರತಿಬಿಂಬ ಅಲ್ಲ, ಆಗೋದಕ್ಕೆ ಸಾಧ್ಯವಿಲ್ಲ. ಗತಿ ಅನ್ನೋ ಮಾತಿಗೆ ಡೈರೆಕ್ಷನ್ ಅಂತ ಒಂದು ಅರ್ಥ. ಆಮೇಲೆ ದಿಕ್ಕು, ಯಥಾಸ್ಥಿತಿ ಅಂತಾನೂ ಇದೆ. ಯಾವಾಗ ಯಾವ ಸ್ಥಿತಿಲೀ ಸ್ಥಿತಿಗತಿ ಅಂತೇನು ಹೇಳ್ತೇವೊ, ಈಗ ಅದಕ್ಕಿಂತ ಭಿನ್ನವಾದ ರೀತೀಲಿ ಸಾಹಿತ್ಯದ ನಿಯೋಗವನ್ನು ಎಕ್ಸ್‌ಚೇಂಚ್ ಮಾಡ್ತೇವೆ.

 • ನಿಮ್ಮ ಕಾವ್ಯಕ್ಕೂ ಪ್ರೇರಣೆ ಆಗಿರೋದು ರೀತಿಯದ್ದೇ ತತ್ತ್ವ. ಇದನ್ನ ಯಾಕೆ ಕೇಳ್ತಿದ್ದೇನೆ ಅಂದ್ರೆ, ಇನ್ನೊಂದು ಆಶ್ಚರ್ಯ ನನಗೆ. ಕನ್ನಡದಲ್ಲಿ ನಮ್ಮ ಯಾವ ಮಹತ್ವದ ಲೇಖಕರೂ ತಮ್ಮ ತಮ್ಮ ಜಾತಿಯ ಬಂಧನಕ್ಕೆ ಒಳಗಾಗ್ಲಿಲ್ಲ. ನಿಮ್ಮದಂತೂ ನಮಗೆ ಬಹಳ ಮೆಚ್ಚುಗೆ ಆದದ್ದು ಕಾರಣಕ್ಕಾಗಿಯೇ. ಮಾಸ್ತಿಯವರ ಪುಸ್ತಕಕ್ಕೆ ವಿರೋಧ ಬಂದಾಗ ನೀವೂ ಪ್ರಭುಶಂಕರರೂ ಇಬ್ರೂ ಕಾಗದನೂ ಬರ್ದಿದ್ರಿ. ಇನ್ನು ಕನ್ನಡದಲ್ಲಿ ಸಾಮಾನ್ಯವಾಗಿ ಯಾರೂ ತಮ್ಮ ತಮ್ಮ ಜಾತಿಯನ್ನು ಎತ್ತಿಹಿಡಿಯುವ ಲೇಖಕರು ಆಗಿರ್ಲಿಲ್ಲ. ಕುವೆಂಪುರವರು ಒಕ್ಕಲಿಗ ಲೇಖಕರು. ಆದರೆ ಅವರ ಹೂವಯ್ಯನ ಕಥೆಯನ್ನ ಓದಿದ್ರೆ ಗೌಡ್ರಿಗೆ ಬಹಳ ಸಿಟ್ಟು ಬರೋ ಹಾಗೆ ಅವರೆಲ್ಲಾ ಮೂಢಾಚಾರಣೆಗಳನ್ನು ಖಂಡಿಸಿ ಬರೀತಾರೆ. ಅದು ನಮ್ಮ ಕಾಲದಲ್ಲಿರುವ ಎಲ್ಲಾ ಲೇಖಕರೂ ತಮ್ಮ ತಮ್ಮ ಮತಗಳು ಮತ್ತು ಜಾತಿಗಳಿಂದ ಬಿಡುಗಡೆ ಪಡೆದಿದ್ದಾರೆ. ಪಂಪನ ಕಾಲದಿಂದ್ಲೂ ಅದು ಆಗಿದೆ ಅನಿಸ್ತದೆ. ದೃಷ್ಟಿಯಿಂದ ನಿಮ್ಮ ಪಾತ್ರವೂ ಬಹಳ ಮಹತ್ವದ್ದು. ಇಂಥ ಪ್ರಯತ್ನದಲ್ಲಿ ನೀವು ಎದುರಿಸಿದ ಸವಾಲುಗಳೇನು ಸರ್‌?

ಸಾಕಷ್ಟು ತೊಂದ್ರೆಗಳಾಯ್ತು. ಯಾಕೆಂದ್ರೆ ಅಂಥ ಮಾತಾಡಿದ್ರೆ ನಮ್ಮ ಬಹಳ ಜನರಿಗೆ ತಮ್ಮ ಕಾನ್ಸ್‌ಟಿಟ್ಯುಯೆನ್ಸಿ ಕಳ್ಕೊಂಡು ಬಿಟ್ಹಾಗೆ ಅನಿಸುತ್ತೆ. ರಾಜಕಾರಣಿಗಳಂತೂ ಸಿಡಿದು ಬೀಳ್ತಾರೆ. ಆದ್ರೆ ಕವಿಗಳಿಗೆ ಸಾಹಿತ್ಯದ್ದೇ ಒಂದು ಕಾನ್ಸ್‌ಟಿಟ್ಯೂಯೆನ್ಸಿ ಇದೆ ಅಂತ ಕನ್ನಡದಲ್ಲಿ ನಾವು ಯಾವಾಗಲೂ ಸ್ಥಾಪಿಸಿದ್ದೇವೆ. ಪಿ.ವಿ. ನಾರಾಯಣ ಆವರದ್ದು ಧರ್ಮಕಾರಣ ಅಂತ ಕಾದಂಬರಿ ಬಂತು. ಆ ಕಾದಂಬರೀಲಿ ನಾನು ಅವರ ನಿಲುವನ್ನು ಸಂಪೂರ್ಣವಾಗಿ ಸಮರ್ಥಿಸಿ ಮಾತಾಡಿದೆ. ಅದಕ್ಕೆ ನನಗೆ ಬಹಿಷ್ಕಾರ ಹಾಕಿದ್ರು. ಸುಮ್ನೆ ಮಾಹಿತಿಗೆ ಇದನ್ನು ಹೇಳಿದೆ. ಅದನ್ನ ದೊಡ್ಡದಾಗಿ ಹಾಕಿದ್ರು. ಇವರನ್ನ ಯಾರೂ ಭಾಷಣಕ್ಕೆ ಕರೀಬಾರ್ದು. ಭಾಷಣಕ್ಕೆ ಕರೆದರೂ ಯಾರೂ ಅಲ್ಲಿರಬಾರದು ಇತ್ಯಾದಿ ಇತ್ಯಾದಿ. ಇವೆಲ್ಲ ಬಹಳ ಕ್ಷುಲ್ಲಕವಾದ ವಿಷಯಗಳು.

 • ನೀವು ಯಾರ ಧೈರ್ಯದಲ್ಲಿ ನಿಮ್ಮ ಇಲಾಖೆ ಕಟ್ಟಿದ್ರಿ? ಅಲ್ಲಿ ಎಷ್ಟು ಬೇರೆ ಬೇರೆ ರೀತಿಯ ಪ್ರತಿಭೆಗಳನ್ನೆಲ್ಲಾ ಒಟ್ಟಿಗೆ ತಂದ್ರಿ. ಅದು ನಿಮಗೆ ಹೇಗೆ ಸಾಧ್ಯವಾಯ್ತು ಸರ್‌? ಕಾಲ ಅನುಕೂಲವಾಗಿತ್ತ ಅದಕ್ಕೆ? ಮತ್ತೆ ಅಂಥ ಕೆಲ್ಸ ಎಲ್ಲೂ ಆಗಿಲ್ಲ. ಎಲ್ಲಾ ಯಂಗ್‌ಸ್ಟರ್ಸ್‌ನ್ನೂ ಪ್ರೋತ್ಸಾಹಿಸಿದ್ರಿ. ಅದಕ್ಕೆ ಒಂದು ಕಾರಣ ನೀವೇ ಲಿಬರಲ್ ಆಗಿದ್ದದ್ದು. ನೀವೇನೋ ಲಿಬರಲ್ ಆಗಿ ಯೋಚನೆ ಮಾಡ್ತಿದ್ದಿರಿ. ಎಲ್ಲಾ ರೀತಿಯ ವಾದಗಳಿಗೂ ಒಂದು ಅವಕಾಶ ಇರ್ಬೇಕು ಅಂತ. ಆದ್ರೂ ಒಂದು ಡಿಪಾರ್ಟ್‌‌ಮೆಂಟ್ ಬೆಳೆಯೋದು ಹ್ಯಾಗೆ ಅಂತ ತಿಳಿಯೋದು ಇದೆಯಲ್ಲ, ಅದು ಬೆಳೆಯೋದು ಹಾಗೇನೆ. ಬಹಳ ಜನ ಅದನ್ನು ತಿಳಿಯೋದಿಲ್ಲ. ತಾವು ಯೋಚನೆ ಮಾಡೋ ಥರದವರನ್ನೇ ತುಂಬ್ಕೋಬಿಟ್ಟಿರ್ತಾರೆ. ಅದನ್ನು ನೀವು ಹೆಂಗೆ ಯೋಚ್ನೇ ಮಾಡಿದ್ರಿ? ನಮಗೆ ಸದ್ಯದಲ್ಲೇನೆ ಯಾವ ಉದಾಹರಣೆಗಳಿರ್ಲಿಲ್ಲ. ನೀವು ಆವಾಗ ಯುನೀಕ್ ಆಗಿದ್ರಿ. ನೀವು ಹೇಳ್ದೆ ಇರ್ಬಹುದು. ನಾವು ಗಮನಿಸುವ ಹಾಗೆ, ಅದಕ್ಕೆ ನಿಮಗೆ ಏನು ಪ್ರೇರಣೆ ಬಂದಿರ್ಬಹುದು? ಮತ್ತು ಒಂದು ರಿಸ್ಕ್ ತಗೊಂಡ್ರಿ, ಯಾಕೆಂದ್ರೆ ನೀವು ತಗೊಂಡವರೆಲ್ಲಾ ನನ್ನ ಸ್ನೇಹಿತರು. ಅವ್ರು ಎಷ್ಟು ರಿಸ್ಕೀ ಪೀಪ್‌ಲ್ ಅನ್ನೋದು ನನಗೆ ಗೊತ್ತಿದೆ. ಅಲ್ಲ, ಆವಾಗ ನೀವು ನಡೆಸ್ತಿದ್ದ ಸೆಮಿನಾರ್‌ಗಳು, ಯುದ್ಧಗಳಿದ್ದ ಹಾಗೆ ಇರ್ತಾ ಇದ್ದು. ಅಲ್ಲಿ ಎಷ್ಟು ಯುದ್ಧಗಳಲ್ಲಿ ಭಾಗವಹಿಸಿದ್ದಿ, ಅಂದ್ರೆ ಶಿವರುದ್ರಪ್ಪನವರು ಅರೇಂಜ್ ಮಾಡಿದ ಯುದ್ಧಗಳಲ್ಲಿ ಭಾಗವಹಿಸಿದ್ದೆವು ಅಂತ ಜನ ಹೇಳ್ತಾ ಇದ್ರು.

ನಮ್ಮನ್ನು ಕೂಡ್ಸುವಂಥ ಯುದ್ಧಗಳು ಒಳ್ಳೆಯದು.

 • ಕೂಡಿಸಿತು ನಮ್ಮನ್ನು. ನಮ್ಮಲ್ಲಿ ಹೊಸ ವಿಚಾರ ಹುಟ್ಲಿಕ್ಕೆ ಶುರುವಾಯಿತು. ನನ್ನನ್ನು ಮೊದಲು ಪಠ್ಯಪುಸ್ತಕ ಮಾಡಿದವರು ಇವರು. ನನ್ನನ್ನು ಒಂದು ಪಠ್ಯಪುಸ್ತಕ ಮಾಡಿದ್ರಿ ಸಾರ್ ನೀವು. ನಾನು ಹಾಗೆ ಇರ್ಲಿಲ್ಲ. ಕನ್ನಡನಾಡು ಬಹಳ ಅಂದ್ರೇನೇ ವಿಶಾಲವಾಗಿದೆ.

ಈ ಸಂದರ್ಭ ಚೆನ್ನಾಗಿತ್ತು. ಹಿಸ್ಟಾರಿಕಲ್ ಆಕ್ಸಿಡೆಂಟ್ ಅಂತ ಕರೀತೀನಿ ಅಷ್ಟೆ. ಅದ್ರಲ್ಲಿ ನಾನು ಒಬ್ಬ ಸೇರಿಕೊಂಡಿದ್ದೇನೆ ಅಷ್ಟೆ. ಜೊತೆಗೆ ಆ ಕಾಲದ ವಾತಾವರಣ ಹಾಗಿತ್ತು.

 • ಕಾಲದ ವಾತಾವರಣಕ್ಕೆ ನೀವು ಹಾಗಿದ್ರಿ. ಇಲ್ದೇ ಇದ್ರೆ ನಮಗೆ ಗೊತ್ತಿರುವ ಹಾಗೆ ಇದು ಆಗಿಲ್ಲ. ನಮ್ಮ ಥರದ ಯೋಚನೆ ಮಾಡುವವರನ್ನು ಇಟ್ಟುಕೊಂಡು ಮೀಡಿಯೋಕರ್ ಆಗಿ ಹೋಗಿಬಿಡ್ತೇವೆ. ಅದರಲ್ಲೂ ಕನ್ನಡ ವಿಭಾಗ ಮೀಡಿಯೋಕರ್ ಆಗ್ಬಿಟ್ರೆ ನಾಡೇ ಮೀಡಿಯೋಕರ್ ಆಗಿಬಿಡ್ತದೆ. ಅದೊಂದು ತುಂಬ ಒಳ್ಳೆಯ ಇಲಾಖೆಯಾಗಿರ್ಬೇಕು. ಈಗ ನೋಡಿ ಸರ್, ಇಂಗ್ಲಿಷ್ ಸಾಹಿತ್ಯ ಎಷ್ಟು ಜನ ಓದ್ತಾರೋ ಅದ್ರ ಮಟ್ಟಿಗೆ ಅದು ಉಳಿದಿರೋದಲ್ಲ. ಹೇಗೆ ಅದು ಪಠ್ಯವಾಗಿ ಇವತ್ತು ಸತತವಾಗಿ ಇದೆ. ಇಲ್ಲದಿದ್ರೆ ಡ್ರೈಡನ್ನಿನ ಮೇಲೆ, ನೀವು ಇಂಗ್ಲೆಂಡಿನ ಒಂದು ಬುಕ್‌ಸ್ಟಾಲ್‌ಗೆ ಹೋದ್ರೆ, ಇತ್ತೀಚೆಗೆ ಒಬ್ಬ ಬರ್ದ ಒಂದು ಪುಸ್ತಕ ಇರುತ್ತೆ. ನಮ್ಮಲ್ಲಿ ಇತ್ತೀಚೆಗೆ ನಮ್ಮ ಹಳಬ್ರು ಬಗ್ಗೆ ಬರೆದ ಪುಸ್ತಕಗಳು ಇರ್ಬೇಕು. ಬರೇ ಆಧುನಿಕ ಅಲ್ಲ. ಒಂದು ಸಾಹಿತ್ಯ ಜೀವಂತವಾಗಿದೆ ಅನಿಸೋದು ಯಾವಾಗ ಅಂದ್ರೆ ಒಂದು ಬುಕ್‌ಸ್ಟಾಲ್‌ನಲ್ಲಿ ಆಧುನಿಕರಲ್ಲದೇ ಹಿಂದಿನವರೂ ಕೂಡ ಸಿಕ್ಕಾಗ. ಅದು ಕನ್ನಡದಲ್ಲಿ ಸ್ವಲ್ಪ ಹೆಚ್ಚಾಗಿದ್ದು ನಿಮ್ಮ ಕಾಲದಲ್ಲಿ. ಇಲ್ದೇ ಇದ್ರೆ ಅದು ಸ್ವಲ್ಪ ಮಾಯವಾಗುವ ಸಾಧ್ಯತೆಯೂ ಇದೆ. ಪಂಪನ ಮೇಲೆ ಬರೆಯುವಂಥವರನ್ನು ಸೃಷ್ಟಿಸದೇನೇ ಹೋಗ್ಬಹುದು, ನಾವು. ಇನ್ನು ಮುಂದೆ ಬಹುಶಃ ಅಪಾಯ ಕಾಣೋದು ಏನಂದ್ರೆ ಅಂಥವರ ಬಗ್ಗೆ ಮತ್ತೆ ಅದನ್ನು ಜೀವಂತಗೊಳಿಸಿ ಬರೆಯುವಂಥವರು. ನೀವು ಪುಣ್ಯವಂತರು, ಯಾಕೆಂದ್ರೆ ಕುವೆಂಪು ಎಲ್ಲವನ್ನೂ ಜೀವಂತವಾಗಿಟ್ಟಿದ್ರು. ಅಲ್ದೇ ಹೊಸದಾಗಿ ಯೋಚನೆ ಮಾಡ್ತಾ ಇದ್ರು. ನನಗೂ ಈಗ್ಲೂ ನೆನಪಿದೆ. ಯಶೋಧರ ಚರಿತೆ ಬಗ್ಗೆ ಬಹಳ ಅನನ್ಯವಾದ ಒಂದು ಲೇಖನವನ್ನೇ ಕುವೆಂಪುರವರು ಬರ್ದಿದ್ರು. ಅದನ್ನು ಅವರು ಕೆ.ವಿ.ಸುಬ್ಬಣ್ಣ ಅವರಿಗೆ ಹೇಳಿ ಬರ‍್ಸಿದ್ರು. ನೆನಪು ನನ್ನದು. ತಪ್ಪಿರಬಹುದೇನೋ? ಆಮೇಲೆ ಸುಬ್ಬಣ್ಣ ಅವನು ಪಾಸಾದ ವರ್ಷ ದಶರೂಪಕವನ್ನು ಬರ್ದ. ಇದಕ್ಕೆ ಸಾಹಿತ್ಯ ಅಕಾಡೆಮಿ ಪ್ರೈಸ್ ಬರ್ಬೇಕು ಅಂದಿದ್ರು ಕುವೆಂಪು. ಇದೆಲ್ಲಾ ಒಂದು ರೀತಿಯ ಬೇರೆ ಮನಸ್ಥಿತಿಯನ್ನೇ ತೋರಿಸುತ್ತೆ. ಮನಸ್ಥಿತಿಯಿಂದ ಬಹಳ ದೂರ ಹೋಗ್ಬಿಟ್ಟಿದ್ದೇವೆ ನಾವು. ಆಗ ಸುಬ್ಬಣ್ಣ ಆನರ್ಸ್‌ ಮಾಡ್ತ ಇದ್ದ ಹುಡುಗ ಆಗಿದ್ದ.

ಮುಖ್ಯವಾಗಿ ನಮಗೆ ಆಚಾರ್ಯ ಪರಂಪರೆ ಇದೆ ಅಲ್ವಾ. ಅದ್ರ ಪರಿಣಾಮ ಅಂತ್ಲೇ ತಿಳ್ಕೊಂಡಿದೇನೆ ನಾನು.

 • ಸಣ್ಣ ವಯಸ್ಸಿನಲ್ಲಿ ಪದ್ಯದ ಬಗ್ಗೆ ಆಸೆ ಹುಟ್ಟಿಸೋರು ಯಾರಿದ್ರು ನಿಮ್ಮ ಮನೆಯಲ್ಲಿ? ನಿಮ್ಮ ಸುತ್ತಮುತ್ತಲಿನ ಸ್ನೇಹಿತರು ಯಾರ್ಯಾರು ಇದ್ರು?

ನಮ್ಮ ಮನೆಯಲ್ಲಿ ಅಂಥ ವಾತಾವರಣ ಇರ್ಲಿಲ್ಲ. ನಮ್ಮ ತಂದೆ ಮಿಡ್‌ಲ್‌ಸ್ಕೂಲ್ ಮೇಷ್ಟ್ರಾಗಿದ್ರು. ಆ ಕಾರಣದಿಂದ ಒಂದು ವಿಶೇಷವಾದ ಲೈಬ್ರರಿ, ಪುಸ್ತಕಗಳ ಪರಿಚಯ ಚೆನ್ನಾಗಾಯ್ತು.

 • ಹೌದಾ! ನೀವು ನಿಮ್ಮ ಚಿಕ್ಕ ವಯಸ್ಸಿನಲ್ಲಿ ಓದ್ತಾ ಇದ್ದ ಕೃತಿಗಳು  ಯಾವುವು? ಕಾದಂಬರಿಗಳು.

ಆಶ್ಚರ್ಯಪಡಬಹುದು, ಅಳಸಿಂಗಾಚಾರ್ಯರ ಮಹಾಭಾರತ.

 • ನನಗೂ ಅಷ್ಟೇ ಸರ್. ಅದು ಸಿಕ್ಕಿದಾಗ ತುದಿಯಿಂದ ತುದಿಗೆ ಮಹಾಭಾರತ ಓದಿದ್ದೇನೆ.

ಮಹಾಭಾರತ ಮತ್ತು ರಾಮಾಯಣ ಓದಿದ್ದು ತುಂಬಾ ಇಷ್ಟವಾದದ್ದು. ಇವತ್ತಿನ ಪ್ರೈಮರಿಸ್ಕೂಲಿನ ಮಕ್ಕಳಿಗೆ ಮಹಾಭಾರತ, ರಾಮಾಯಣ ಹೆಸರುಗಳೇ ಗೊತ್ತಿಲ್ಲ.

 • ಅದ್ರ ಬಗ್ಗೆ ಒಂದು ಮಾತಿದೆ. ರಾಮಾನುಜನ್ ಹೇಳಿರೋದು. ಭಾರತದಲ್ಲಿ ರಾಮಾಯಣ ಮತ್ತು ಮಹಾಭಾರತವನ್ನ ಯಾರೂ ಒಂದು ಗ್ರಂಥವಾಗಿ ಮೊದಲನೇ ಸಾರಿ ಓದಿರಲ್ಲ. ಈಗ ಹೋಮರನ್ನು ಮೊದಲ ಸಾರಿ ಓದಿರ್ತಾರೆ. ನಮಗದು ಗೊತ್ತಿರುತ್ತೆ, ಆಮೇಲೆ ಓದ್ತೇನೆ. ರಾಮಾಯಣ ಮತ್ತು ಮಹಾಭಾರತದ ಬಗ್ಗೆ ಆಮೇಲೆ. ನೀವು ಸ್ವಲ್ಪ ಕಾಲ ಸಿದ್ಧಗಂಗಾ ಮಠದಲ್ಲಿ ಇದ್ರಿ. ಅದರ ಬಗ್ಗೆ ಒಳ್ಳೆ ಪದ್ಯವನ್ನು ಬರ್ದಿದ್ರಿ, ಎಲ್ಲೋ ಓದಿದ ನೆನಪಿದೆ. ಗುರುಗಳ ಬಗ್ಗೆ. ಯಾಕೆಂದ್ರೆ ನಿಮ್ಮ ಪ್ರತಿಯೊಂದು ವರ್ತನೆಯಲ್ಲೂ ನಿತ್ಯ ಜೀವನದಲ್ಲೂ ನೀವು ತುಂಬಾ ಸೆಕ್ಯುಲರ್ ಆದವ್ರು. ಆದ್ರೆ ಗುರುಗಳೊಬ್ಬರ ಮಟ್ಟಿಗೆ ನಿಮ್ಮ ಮೇಲೆ ತುಂಬಾ ಪರಿಣಾಮ ಆಗಿದೆ. ನೀವು ಅದಕ್ಕೇ ನಮಗೆ ಇಷ್ಟ. ಯು ರೆಸ್ಪಾಂಡ್ ಟು ಅದರ್ ಥಿಂಗ್ಸ್ ಆಲ್ಸೋ.

ಹರನ ಕರುಣೋದಯದ ತೆರದಲಿ
ಬೆಳಗು ತೆರೆಯುವ ಹೊತ್ತಿಗೆ
ವೇದಘೋಷದ ದಿವ್ಯಲಹರಿಯು ಮನವ ತೊಳೆಯಲು ಮೆಲ್ಲಗೆ
ಬರುವ ಶ್ರೀಗುರುಪಾದುಕೆಯ ದನಿ
ಅನುರಣಿತವಾಗಲು ಮೌನಕೆ
ಸಿದ್ಧಗಂಗೆಯ ನೆಲವು ಜಲವು
ನಮಿಸಿ ನಿಲುವುದು ಸುಮ್ಮಗೆ
ಬೆಟ್ಟ-ಬಂಡೆಯ ನಡುವೆ ಗಿಡಮರ
ಹೂವನೆತ್ತಿರೆ ಪೂಜೆಗೆ
ದೇಗುಲದ ಪೂಜಾರತಿಯ ಗಂಟೆಯ
ಮೊಳಗು ಮುಟ್ಟಲು ಬಾನಿಗೆ
ಧೂಪಗಂಧವು ಮಂದ ಮಂದಾನಿಲದ ಮನಸಿಗೆ
ಸಂಭ್ರಮವನುಕ್ಕಿಸೆ
ಬೆಳಗು ಇಳಿವುದು ಸಿದ್ಧಗಂಗೆಯ ಕ್ಷೇತ್ರಕೆ
ಇಲ್ಲಿ ಇಲ್ಲ ಪವಾಡದದ್ಭುತ
ಅಥವಾ ಉತ್ಸವದಬ್ಬರ
ಮುಡಿಯನೆತ್ತಿದ ಸರಲ ಸಾಧಾರಣದ ಬದುಕಿನ ಗೋಪು
ಅದರ ಮೇಲಿದೆ ತ್ಯಾಗಧ್ವಜ ಕೈಬೀಸಿ ಕರೆವುದು ಪಥಿಕರ
ಪರಮ ನಿರಪೇಕ್ಷೆಯಲಿ ದಿನವು ಸೇವೆಗಾಗಿದೆ ಸರ್ವರ
ಭಿಕ್ಷೆ ಹೊರಟಿಗೆ ಜಂಗಮದ ಜೋಳಿಗೆ
ಲಕ್ಷ ಜನಗಳ ಪೊರೆದಿದೆ
ತೀರ್ಥವಾಗಿದೆ ಭಕ್ತರಿಗೆ, ಚಿರಸ್ಫೂರ್ತಿಯಾಗಿದೆ ಬುದ್ಧಿಗೆ
ಬಂದ ಹಣತೆಗೆ
ಎಣ್ಣೆ ಬತ್ತಿಯ ದೀಪ್ತಿದಾನವ ಮಾಡಿದೆ
ರಕ್ಷಿಯಾಗಿದೆ ಮುಗಿಲನೇರಿದ ಎಷ್ಟೊ ರೆಕ್ಕೆಯ ಹಾದಿಗೆ
ಸದ್ದುಗದ್ದಲವಿರದ ಸಾಧನೆ ಇಲ್ಲಿ ಗದ್ದುಗೆ ಏರಿದ
ಕಾಯಕವೆ ಕೈಲಾಸ ಎನ್ನುವ ಮಾತು ಕೃತಿಯೊಳು ಮೂಡಿದೆ
ಕಾವಿ ಉಡುಗೆಯನುಟ್ಟು ನಭವೇ ಕಿರಣ ಹಸ್ತವ ಚಾಚಿದೆ
ಎಲ್ಲ ನನ್ನವರೆನುವ ಭಾವದ ಕರುಣೆಯೇ ಕಣ್ತೆರೆದಿದೆ.
(ಸಿದ್ಧಗಂಗೆಯ ಶ್ರೀಚರಣಕ್ಕೆ)

ಕುವೆಂಪುರವರಿಗೆ ಕಂಡದ್ದು ಪುರೋಹಿತಶಾಹಿ ಶೋಷಣೆಯ ಮಠಗಳು, ದೇವರುಗಳು. ನನಗೆ ಕಂಡದ್ದು ಎಲ್ಲರನ್ನೂ ಕರೆದು ಅನ್ನಕೊಡುವಂಥ ಒಂದು ಸ್ಥಳ, ಬಹಳ ಅದ್ಭುತ.

 • ಅದು ಬಹಳ ಚೆನ್ನಾಗಿದೆ. ಆಮೇಲೆ ನೀವು ಯಾವ ವಯಸ್ಸಿನಲ್ಲಿ ಅಲ್ಲಿ ಇದ್ರಿ ಸರ್?

೧೯೪೨. ಮೊದ್ಲೂ ಕಷ್ಟಪಟ್ಟೇನೇ ಓದಿದ್ದು. ಬೆಳಿಗ್ಗೆ ೮.೩೦ ಕ್ಕೆ ಊಟ ಮಾಡ್ಕೊಂಡು ಮೂರೂವರ ಮೈಲು ನಡೆದುಕೊಂಡು ಹೋಗಿ ವಾಪಾಸು ಬರ್ಬೇಕಿತ್ತು ಕಾಲೇಜಿಗೆ. ಅವು ಬಹಳ ಕಷ್ಟದ ದಿನಗಳು.

 • ಅವಸ್ಥೆನಿಮಗೆ ಬಹಳ ಇಷ್ಟವಾದ ಪದ್ಯ ಅಲ್ವಾ ಸರ್‌? ಅದರ ಬಗ್ಗೆ ಸ್ವಲ್ಪ ವಿವರಣೆ ಕೊಡಿ.

ಇದು ೧೯೯೫ ರಲ್ಲಿ ವೋಕ್ಹಾರ್ಟ್‌ ಆಸ್ಪತ್ರೆಯಲ್ಲಿ ಓಪನ್ ಹಾರ್ಟ್ ಸರ್ಜರಿಗೆ ನಾನು ಸೇರಿದಾಗ ಆಪರೇಷನ್ ಆದ ಸಂದರ್ಭದಲ್ಲಿ ಒಂದು ಅನುಭವ ಇದು. ಬಹಳ ವಿಲಕ್ಷಣವಾದ ಪದ್ಯ ಇದು. ಆಪರೇಶನ್ ಮುಗಿದು ಮನೆಗೆ ಬಂದು ಬರ್ದೆ. ಮಾತಾಡಲಿಕ್ಕೂ ಶುರು ಮಾಡಿದ್ದೆ. ’ಅವಸ್ಥೆ’ ಅಂತ ಇದಕ್ಕೆ ಹೆಸರಿಟ್ಟಿದ್ದೇನೆ. ಭಾರತೀಯ ಚಿಂತನೆ ಪ್ರಕಾರ ಅವಸ್ಥೆಗಳು ನಾಲ್ಕು. ಜಾಗೃತ, ಸ್ವಪ್ನ, ತುರೀಯ, ಸುಷುಪ್ತಿ. ನಾಲ್ಕು ಅವಸ್ಥೆಗಳಲ್ಲಿ ನಮ್ಮ ಜೀವನ ಇದೆ. ಇದು ಯಾವ ಅವಸ್ಥೆಯೋ ಗೊತ್ತಿಲ್ಲ. ಆಸ್ಪತ್ರೆಯಿಂದ ಮನೆಗೆ ಬಂದ್ಮೇಲೆ ಒಂದು ಹದಿನೈದು ದಿವಸ ಆಗಿರ್ಲಿಲ್ಲ. ಇನ್ನೂ ಹಾಸಿಗೆ ಮೇಲೇ. ಇದು ಬರಿಯೋತನಕ ಬಿಡ್ಲಿಲ್ಲ. ಇದು ಪೂರ್ತಿ ಅಸ್ತಿತ್ವವಾದದ ಕವನ.

೧. ಅರಿವಳಿಕೆ ಸೂಜಿಮೊನೆ ತಾಗಿದ್ದಷ್ಟೇ ಗೊತ್ತು.
ಮೂರ್ತದಿಂದ ಅಮೂರ್ತಕ್ಕೆ ಒಂದೇ ನೆಗೆತ
ಬರೀ ನಿರಾಕಾರ ಶೂನ್ಯದ ಕಡಲು ಎತ್ತೆತ್ತಲೂ
ಅಲ್ಲಿ ರವಿಯಿಲ್ಲ, ಶಶಿಯಿಲ್ಲ, ನಕ್ಷತ್ರ-
ವೊಂದೂ ಇಲ್ಲ, ನಾನು ನೀನುಗಳಿಲ್ಲ, ನಾಮ
ರೂಪಗಳಿಲ್ಲ ಹಿಂದಿಂದೂ ಮುಂದುಗಳಿ-
ಗರ್ಥವೇ ಇಲ್ಲ. ಸೃಷ್ಟಿಪೂರ್ವದ ಪ್ರಳಯ-
ದಲ್ಲಿ ಹೆಪ್ಪುಗಟ್ಟಿದ ಕಪ್ಪು ಕಾಲಾತೀತದಲ್ಲಿ

ಲಯವಾಗಿ ಹೋಗಿದ್ದೆನೋ ಏನೋ! ಯಾವುದಕ್ಕೆ
ಹೋಲಿಸಿ ಹೇಳಲಿ ನಾನು ಈ ಅವಸ್ಥೆಯನ್ನು?
ಯೋಗಿಯ ಸಮಾಧಿಯೊಳಗಿನದ್ವೈತವೋ ಅಥವಾ
ಮಹಾಭ್ರಾಂತಿಯೋ? ಪರಮ ಶಾಂತಿಯೋ? ಇದನ್ನು

ಈ ಭವದ ಅನುಭವದ ಯಾವುದೇ ಆಕೃತಿ-
ಯೊಳಗೆ ಹಿಡಿದು ತೋರಿಸಲಾರೆ. ಅಷ್ಟು ಹೊತ್ತೂ
ಬಿದ್ದುಕೊಂಡಿದ್ದಾಗ ಈ ದೇಹ ಶಸ್ತ್ರಕ್ರಿಯೆಯೊಳಗಾಗುತ್ತಾ
ನೈನಂ ಛಿಂದಂತಿ ಶಸ್ತ್ರಾಣಿಯಾದ ಈ ಆತ್ಮ ಎಲ್ಲಿತ್ತು?

ಥಟ್ಟನೆಚ್ಚರವಾಗಿ ಕಣ್ಣುಕುಕ್ಕುವ ಬೆಳಕು ಪ್ರತ್ಯಕ್ಷ
-ವಾದ ಪಂಚೇಂದ್ರಿಯ ಪ್ರಪಂಚದೊಳಗೆರಡು
ಕರುಣಾಪೂರ್ಣ ಕಣ್ಣುಗಳು ಹಣೆ ಮೇಲೆ ಹೆಣ್ಣ
ಕೈ ಬೆರಳುಗಳ ಸಾಂತ್ವನದ ಸ್ಪರ್ಶ ಆ ಕುರುಡ
ಕತ್ತಲೆಯಿಂದ ಈ ಬೆಳಕಿನೆಚ್ಚರದೊಳಗೆ ಬಂ-
ದದ್ದು ಯಾವಾಗ? ನಾನಾರು? ಯಾಕಿದ್ದೇನೆ? ಎಲ್ಲಿ-
-ದ್ದೇನೆ? ಅರೆ! ನನ್ನ ಶರೀರವೆಲ್ಲಿ? ನೋಡುತ್ತೇನೆ
ಮೈ ತುಂಬ ಏನೇನೋ ನಳಿಗೆಗಳು! ಕಾಡುಬಳ್ಳಿ-

ಗಳು ಹೆಣೆದುಕೊಂಡಿರುವೊಂದು ಸಸ್ಯ ವಿಶೇಷದಂ-
ತಿದ್ದೇನೆ! ಈ ಮನುಷ್ಯತ್ವದಿಂದ ಹಿಮ್ಮುಖವಾಗಿ
ಸಸ್ಯಸ್ಥಿತಿಗೆ ಪಯಣ ಮಾಡುತ್ತಾ ಸ್ಥಗಿತಗೊಂ-
ಡಿದ್ದೇನೆಯೆ ಅಥವಾ ಅಲ್ಲಿಂದ ಮೇಲ್ಮುಖವಾಗಿ

ಬರುತ್ತಲಿದ್ದೇನೆಯೇ
ಅಲ್ಲ, ಮರವಲ್ಲ, ಮನುಷ್ಯ
ಈಗೀಗ ಪ್ರಜ್ಞೆಯೊಳಕೆ ತೇಲಿ ಬರುತಲಿವೆ ನಿಧ
ನಿಧಾನವಾಗಿ ನೆನಪುಗಳು ಕ್ಷೀಣದನಿಯಿಂದ
ಕೇಳಿದೆನು ಬಳಿ ನಿಂತ ಹಸಿರುಮುಸುಕಿನೊಳಿದ್ದ

ಹೆಣ್ಣನ್ನು: ’ನಾನು ಎಲ್ಲಿದ್ದೇನೆ? ಟೈಮೆಷ್ಟು?’ ’ನೀವೀಗ
ಇಂಟೆನ್ಸಿವ್ ಕೇರ್ ಯೂನಿಟಿನಲ್ಲಿದ್ದೀರಿ, ಸಮಯ
ಮಧ್ಯಾಹ್ನ ಮೂರುವರೆ ನಿಮಗೆ ಆಪರೇಷನ್ ಆಗಿ
ಹದಿನೆಂಟು ಗಂಟೆಗಳಾಯಿತು ಇನ್ನಿಲ್ಲ ಅಪಾಯ’

ದತ್ತವಾಗಿದೆ ಮತ್ತೆ ಮಕ್ತಮಧ್ಯದ ಬದುಕು,
ಮೊದಲಿಗಿಂತಲೂ ಹೊಸದಾಗಿ ಕಂಡಿದೆ ಲೋಕ,
ಈವರೆಗೂ, ಮಹಾವಿಸ್ಮೃತಿಯಲ್ಲಿ ಕರಗಿ ಹೊರಬಂದ
ಅಸ್ತಿತ್ವಕ್ಕೆ ಎಲ್ಲವನ್ನೂ ತಬ್ಬಿಕೊಳ್ಳುವ ತವಕ.

 • ತುಂಬಾ ಪೆಕ್ಯೂಲಿಯರ್ ಆದ ಪದ್ಯ. ಅದಕ್ಕೆ ವ್ಯಕ್ತಮಧ್ಯ ಎಂಬ ಮಾತು ಬಂದಿದೆ. ಗೀತೆಯಲ್ಲಿ ಬರುವ ಮಾತು ಅದು. ಅಡಿಗರೂ ವ್ಯಕ್ತಮಧ್ಯ ಎಂಬ ಶಬ್ದವನ್ನು ತುಂಬಾ ಚೆನ್ನಾಗಿ ಬಳಸಿಕೊಂಡಿದ್ದಾರೆ. ವ್ಯಕ್ತಮಧ್ಯಕ್ಕೆ ಬಂದುರಿವ ಶಬರಿ. ಇನ್ನೊಂದು ಸರ್, ನಾನು ಬಹಳ ಮೆಚ್ಚಿಕೊಂಡಿರುವುದು, ನಿಮ್ಮ, ಕೃಷ್ಣನ ಅವಸಾನದ, ’ಅಸ್ತಮಾನಪದ್ಯ. ಅದರಲ್ಲಿ ನನಗೊಂದು ಆಶ್ಚರ್ಯ ಆಗಿದ್ದು ಏನೂಂದ್ರೆ ಆಡೆನ್ನನ ಒಂದು ಪದ್ಯ ಇದೆ. ಅದು ನಿಮ್ಮ ಪದ್ಯದೊಳಗೆ ನುಸುಳಿಕೊಂಡಿದೆ. ಎಷ್ಟು ಚೆನ್ನಾಗಿ ನುಸುಳಿಕೊಂಡಿದೆ ಅಂದ್ರೆ ನೀವದನ್ನು ಜೀರ್ಣ ಮಾಡಿಕೊಂಡಿದ್ದೀರಿ. ನಂದೊಂದು ಮಾತಿದೆ, ಕನ್ನಡ ಭಾಷೆಯಲ್ಲಿ ಒಂದು ಜೀರ್ಣಾಗ್ನಿ ಇದೆ ಅಂತ. ಇನ್ನು ಐರೋಪ್ಯ ಮೂಲದಿಂದ ಏನು ಬರ್ಬಹುದು ಅದನ್ನೆಲ್ಲಾ ಮೈಗೂಡಿಸಿಕೊಂಡಿದೆ. ಅಂದಾಗ ನನಗೆ ಆಶ್ಚರ್ಯ ಆಗೋದು ಆಡೆನ್ನನ ಸಾಲುಗಳು ಅಷ್ಟೇ ಚೆನ್ನಾಗಿದೆ ನೀವಿಲ್ಲಿ ಬಳಸೋದು. ಆತ ಯಾವ ಕಾರಣಕ್ಕಾಗಿ ಬಳಸ್ತಾನೋ ನೀವು ಅದಕ್ಕಿಂತ ಭಿನ್ನ ಕಾರಣಕ್ಕಾಗಿ ಬಳಸ್ತಾ ಇದ್ದೀರಿ. ಪದ್ಯ ನನಗೆ ಬಹಳ ಇಷ್ಟ. ಪದ್ಯದಲ್ಲಿ ಒಂದು ಸಾಲು ಇನ್ನೊಂದು ಸಾಲಿನೊಳಗೆ ಮುಂದುವರಿಯೋದು ಇದೆಯಲ್ಲ. ಇದು ಲಯದ ದೃಷ್ಟಿಯಿಂದ ಬಹಳ ಅದ್ಭುತವಾಗಿದೆ. ವಯಸ್ಸಾಗ್ತಾ ಹೆಚ್ಚು ಹೆಚ್ಚು ಒಳ್ಳೆ ಪದ್ಯಗಳನ್ನು ಬರೆಯೋದು ಬಹಳ ಕಷ್ಟ, ವರ್ಡ್ಸ್‌‌ವರ್ತ್‌‌ಗೆ ಪಾಪ ಆಗ್ಲೇ ಇಲ್ಲ. ಏನಾಯ್ತು ಅವರಿಗೆ ಬಹಳ ಒಳ್ಳೆ ಗ್ರೇಟ್ ಪೊಯೆಟ್ರಿ ಬರ್ದ. ಬಹಳ ವರ್ಷಗಳ ಕಾಲ ಆತನಿಗೆ ಏನೂ ಬರಿಯಕಾಗ್ಲಿಲ್ಲ. ಆತ ತನ್ನ ಇಳಿವಯಸ್ಸಿನಲ್ಲಿ ಸರ್‌ಪ್ರೈಸ್ಡ್‌ ಬೈ ಜಾಯ್ಎಂಬ ಪದ್ಯ ಬರ್ದ. ಇಟ್ ಈಸ್ ಗ್ರೇಟ್ ಪೊಯಮ್. ಕೂಡ್ಲೆ ದತ್ತವಾಗಿ ಮರ್ತುಹೋಗ್ಬಿಡುತ್ತೆ. ನಿಮ್ಮಲ್ಲಿ ಒಂದು ಬೆಳವಣಿಗೆ ಇದೆ.

ಇವತ್ತ್ಯಾಕೋ ಮತ್ತೆ ಸ್ಟ್ಯಾಂಜಾ ಫಾರ್ಮ್‌‌ನಲ್ಲಿ ಹೊಸ ಪ್ರಯೋಗ ಮಾಡ್ಬೇಕು ಅಂತ ನಮ್ಮ ಹುಡುಗ್ರಿಗೆ ಅನಿಸ್ತಾ ಇದೆ, ಈಗೀಗ ಬರಿಯೋರಿಗೆ.

 • ನಿಮ್ಮಲ್ಲಿ ನಿಮ್ಮ ವಯಸ್ಸಿನಲ್ಲಿ ನೀವು ಪದ್ಯ ಬರಿಯುವಾಗ, ಕೆಲವರಿಗೆ ಅಡಿಗರು ಹೇಳ್ತಾ ಇದ್ರು ಯಾವುದೋ ಒಂದು ಫ್ರೇಸ್ ಮನಸ್ಸಿಗೆ ಬಂದುಬಿಡುತ್ತೆ. ಅದ್ರ ಸುತ್ತ ಕಟ್ತಾ ಕಟ್ತಾ ಅದು ಬೆಳೆಯುತ್ತೆ ಅಂತ. ಅಥವಾ ಒಂದು ಐಡಿಯಾ ಮನಸ್ಸಿಗೆ ಬರುತ್ತೆ ಅಥವಾ ಯಾವುದೊ ಒಂದು ಲಯ ಕಿವಿಗೆ ಹಿತವಾಗುತ್ತೆ. ಅದ್ರ ಸುತ್ತ ಕಟ್ತಾ ಹೋಗ್ತೇವೆ ಅಂತ. ನೀವು ಹೇಗೆ ಬರೀತೀರಿ ಸರ್‌? ಅದು ಯಾವುದೇ ಆಗ್ಲಿ ಥೀಮ್‌ನ ಮೇಲೆ ಯೋಚನೆ ಮಾಡ್ತಾ ಹೋಗ್ತೀರಾ, ಅದು ಕಟ್ಟಿಕೊಳ್ಳುವ ಬಗೆ ಹೇಗೆ?

ಉದಾಹರಣೆಗೆ ’ಜಡೆ’ ಪದ್ಯ ಬರ್ದೆ ನಾನು. ’ಜಡೆ’ ಪದ್ಯ ಬರೀವಾಗ ಮೈಸೊರೊಳಗೆ ನಾನು ಕೇಲೇಜಿನಿಂದ ಮನೆಗೆ ಹೋಗ್ತಾ ಇದ್ದೆ. ಮುಂದೆ ಒಬ್ಬ ಹುಡುಗಿ ಕಾಲೇಜಿನ ಸ್ಟೂಡೆಂಟ್ ಅಂತ ಕಾಣುತ್ತೆ, ಹಾದು ಹೋಗ್ತಾ ಇದ್ಲು. ಆ ಜಡೆ ಬೆನ್ನ ಹಿಂದೆ ಅಲ್ಲಾಡ್ತಾ ಇತ್ತು. ಅದನ್ನು ನೋಡ್ತಾ ಇರುವಾಗ ಇದ್ದಕ್ಕಿದ್ದ ಹಾಗೆ ಆಕೆ ಯಾವುದೋ ತಿರುವಿನಲ್ಲಿ ಹೊರಟೇ ಹೋದ್ಲು. ಜಡೆ ಉಳಕೋತು ನನ್ನ ಗಮನಕ್ಕೆ. ನನ್ನ ಪಾಡಿಗೆ ಆಗ ಲಲನೆಯರ ಬೆನ್ನಿನೆಡೆ ಹಾವಿನೊಲು ಜೋಲು ಜಡೆ ಅಂತ ಒಂದು ಪಂಕ್ತಿ ಬರ್ದೆ. ಮನೆಗೆ ಹೋಗಿ ಮುಂದಿನ ಪದ್ಯ ಹೇಗಿರಬಹುದು ಗೊತ್ತಿಲ್ದೆ ಮುಖ ತೊಳ್ಕೊಂಡು ನನ್ನ ಕೊಠಡಿಗೆ ಹೋದೆ, ಮುಂದುವರಿಸಿದೆ. ಮುಂದುವರಿಸ್ಲಿಕ್ಕೆ ಮೊದಲನೇ ಪಂಕ್ತಿ ಸಿಕ್ಕಿತ್ತು. It decided the whole pattern.

 • ಅಲ್ದೇನೆ ಒಬ್ಬ ನಿಜವಾದ ಕವಿಗೆ ಒಂದು ಅಪ್ರಜ್ಞಾಪೂರ್ವಕತೆ (ಅನ್‌ಕಾನ್ಶಿಯಸ್) ಇರತ್ತೆ. ಅದಕ್ಕೆ ಕೈ ಹಾಕುವ ಕ್ಷಣ ಇದೆಯಲ್ಲ ಅದು ಪ್ರಜ್ಞಾಪೂರ್ವಕವಾಗಿ ಬರುತ್ತೆ. ಮತ್ತೆ ಉಳಿದವೆಲ್ಲಾ ಉದ್ಭವ ಆಗುತ್ತೆ. ’ಅಸ್ತಮಾನಪದ್ಯವನ್ನು ಈಗ ನೋಡೋಣ್ವಾ, ಸರ್?

’ಅಸ್ತಮಾನ’ ಪದ್ಯ ಪ್ರಾರಂಭ ಆಗೋದು ಅನ್‌ಕಾನ್ಶಿಯಸ್‌ನಿಂದ

ಮೆಲ್ಲನಿಳಿಯುತ್ತಿದ್ದ ಸಂಜೆಯ ಸೂರ್ಯ, ಸುದ
-ರ್ಶನ ಚಕ್ರದ ಹಾಗೆ, ಪಡುವಣದ ಕಡಲಿಗೆ
ಅವಿಶ್ರಾಂತ ತರಂಗ ಜಲವಿಸ್ತಾರ ವಿವಿಧ
ವರ್ಣಗಳಲ್ಲಿ ಶೋಭಿಸಿತು ಶೇಷತಲ್ಪದ ಹಾಗೆ

ಕಡಲೀಚೆ ಕಾಡು; ಕಾಡಿನ ಬದಿಗೆ ಹೊಲ;
ದಲ್ಲಿ ಒಬ್ಬನೇ ತನ್ನ ಪಾಡಿಗೆ ತಾನು ನೇಗಿಲ
ಹೂಡಿ ದುಡಿಯುವ ರೈತ. ಪೀತಾಂಬರ ಪ್ರಭೆಯ
ಗಗನದಲ್ಲಿ ಗರಿತೆರೆದು ಹಾಯಾಗಿ ಹಾರುವ

ಗರುಡ; ಅಲ್ಲಲ್ಲಿ ಬೆಣ್ಣೆ ಮೋಡಗಳ ಮುಖದಲ್ಲಿ
ಏನೋ ನೆನಪು; ಎತ್ತರದ ಮರಮರದ
ಶಾಖೋಪಶಾಖೆಗಳಲ್ಲಿ ಕೊಳಲನೂದುವ
ಗಾಳಿ; ಈ ನಡುವೆ, ನಾಟಕ ಮುಗಿದ ರಂಗಸ್ಥಲದ

ನಿಶಬ್ದ ಕಾನನದೊಳಗೆ ಹಸಿರು ಹೆಡೆ ಬಿಡಿಸಿದ-
ಶ್ವತ್ಥ ವೃಕ್ಷದ ಕೆಳಗೆ ಮಂದಹಾಸದ
ಮೂರ್ತಿ; ಒಂದು ಕಾಲನ್ನಿನೊಂದು ಕಾಲಿನ ಮೇಲೆ
ನವಿಲುಗರಿಯಂತಿರಿಸಿ ಮಲಗಿದ ಮೌನ.

ಸೃಷ್ಟಿಪೂರ್ವದ ಅಥವಾ ಪ್ರಳಯದಾನಂತರದ
ವಿರಾಮದ ಕ್ಷಣವೋ, ಬಂದನೊಬ್ಬನು ವ್ಯಾಧ
ಬೇಟೆಯನ್ನರಸುತ್ತ ಕಪ್ಪು ಮೈ ನೆರಳನುದ್ದುದ್ದ
ಚೆಲ್ಲುತ್ತಾ ದಟ್ಟ ಹಸುರಿನ ಮೇಲೆ; ಶ್ರೀ ಹರಿಪಾದ

ಅಪೂರ್ವ ಪಕ್ಷಿಯ ಹಾಗೆ ತೋರಿರಲು ದಟ್ಟಪೊದೆ
-ಗಳ ನಡುವೆ, ಕೂಡಲೇ ಹೂಡಿ ಬಿಲ್ಲಿಗೆ ಬಾಣ
ಬಿಟ್ಟನು ಗುರಿಗೆ, ತಾಗಿದ್ದೇ ತಡ ಛಿಲ್ಲೆಂದು
ಚಿಮ್ಮಿತ್ತು ರಕ್ತ ಕೆಂಪಾಯಿತು ನೀಲಿಯ ಗಗನ!

ಹೊಲದಲ್ಲಿ ಗೇಯುತ್ತಿದ್ದ ಆ ರೈತ ಕಂಡನೊಂ-
ದದ್ಭುತವ; ಇದ್ದಕ್ಕಿದ್ದಂತೆ ಸಂಜೆಯ ಸೂರ್ಯ
ಜರ‍್ರನೆ ಜಾರಿ ಕಡಲೊಳಗೆ, ಪಾಂಚಜನ್ಯದ
ಮೊಳಗು ಒಂದೇ ಒಂದು ಕ್ಷಣ ಪರಮಾಶ್ಚರ್ಯ

ಪ್ರಭೆಯಾಗಿ ವ್ಯಾಪಿಸಿತು ಭೂಮಿ-ವ್ಯೋಮಗಳನ್ನು
ಬೆರಗಾಗಿ ನೇಗಿಲ ಹೊತ್ತು ನಡೆದನು ರೈತ
ಇಡೀ ದಿವಸ ಹರಗಿ ಹದಮಾಡಿದ್ದ ಹೊಲದೊ
ಳಗೆ ಬೀಜ ಬಿತ್ತು ಬಗ್ಗೆ ಯೋಚಿಸುತ್ತ

 • ಇನ್ನೊಂದು, ಪದ್ಯದ ಮಹತ್ವ ಏನೂಂದ್ರೆ ಇಲ್ಲಿ ಬರುವ ಎಲ್ಲಾ ಇಮೆಜಸ್ ಕೃಷ್ಣನಿಗೆ ಸಂಬಂಧಪಟ್ಟದ್ದು, ವಿಷ್ಣುಗೆ ಸಂಬಂಧಪಟ್ಟದ್ದು, ಪ್ರಕೃತಿಗೂ ಸಂಬಂಧಪಟ್ಟದ್ದು. ಹೀಗೆ ಎಲ್ಲಾ ಇಮೆಜಸ್ ಇದ್ದಾವೆ ಇದ್ರಲ್ಲಿ.

ಕೃಷ್ಣ ಅಥವಾ ಯಾವ ಅವಸಾನಕ್ಕೂ ಜಗತ್ತು ಕಾಯೋದಿಲ್ಲ. ತನ್ನ ಪಾಡಿಗೆ ತಾನು ಹೋಗ್ತಾ ಇರ‍್ತದೆ. ರೈತ ಬೀಜ ಬಿತ್ತುವ ಕೆಲಸ ನಡೀತಾ ಇದೆ.

 • ಕವಿ ತನ್ನನ್ನು ತಾನೇ ಮೀರುವ ಬಗೆ ಹೇಗೆ? ವ್ಯಕ್ತಿಯಾಗಿ ಕವಿ ತನ್ನನ್ನು ತಾನು ಮೀರ್ತಾನೆ ಪದ್ಯದಲ್ಲಿ, ಅಲ್ವಾ?

ಈಗ ನಾನೇನು ಪದ್ಯ ಬರಿಲಿಕಾಗ್ತ ಇಲ್ಲ. ಈ ಸ್ಥಿತೀಲಿ ನೋಡಿದಾಗ ಇಷ್ಟೊಂದೆಲ್ಲಾ ಯಾರು ಬರೆದ್ರು ಅಂತ ನನಗೇ ಆಶ್ಚರ್ಯ ಆಗುತ್ತೆ. ನಾನು ಬರ್ದೆ ಅಂತ ನನಗೇ ನಂಬಿಕೆ ಇಲ್ಲ. ಈಗ ಐ ಕಾಂಟ್ ರೈಟ್ ಲೈಕ್ ದಿಸ್.

 • ನಿಮಗೊಂದು ಮಹಾಕಾವ್ಯ ಬರೀಬೇಕು ಅಂತೇನಾದ್ರು ಅನಿಸಿದ್ಯಾ ಸರ್. ಯಾಕೆಂದ್ರೆ ಪರಂಪರೆಯಿಂದ ಬಂದವರು ನೀವು.

ಹಾಂ, ಒಂದು ಕಾಲಕ್ಕೆ ಅನ್ಕೊಂಡಿದ್ದೆ. ಆದ್ರೆ ಆಗಲಿಲ್ಲ. ಗಾಂಧಿ ಬಗ್ಗೆ ಬರೀಬೇಕು ಅಂತಿದ್ದೆ.

 • ನಿಮ್ಮ ಕಾಲದಲ್ಲಿ ಅನ್ಯ ಭಾಷೆಯ ಯಾವ ಯಾವ ಕವಿಗಳು ನಿಮ್ಮ ಮೇಲೆ ಪರಿಣಾಮ ಬೀರಿದ್ರು?

ಟಾಲ್‌ಸ್ಟಾಯ್, ವರ್ಡ್ಸ್‌‌ವರ್ತ್

 • ಕಾಳಿದಾಸನ ಪ್ರಭಾವ ಏನಾದ್ರು ಇತ್ತ ನಿಮ್ಮೇಲೆ?

ಇಲ್ಲ. ನಾನು ಸಿದ್ಧಗಂಗೆ ಮಠದೊಳಗೆ ಅಷ್ಟು ವರ್ಷ ಇದ್ನಲ್ಲ. ನನಗೆ ಸಂಸ್ಕೃತ ಕಲೀಲಿಕ್ಕಾಗೇ ಇಲ್ಲ. ಸಂಸ್ಕೃತ ಕಲಿತಿದ್ರೆ ಚೆನ್ನಾಗಿತ್ತು ಅಂತ ಅನ್ನಿಸ್ತಾ ಇದೆ. ಸಂಸ್ಕೃತದ ಹಿನ್ನೆಲೆ ಬಹಳ ಅಗತ್ಯ.

 • ಅಂದ್ರೆ ಸಂಸ್ಕೃತದ ಬಹಳ ಒಳ್ಳೆಯ ಶಬ್ದಗಳು ನಿಮ್ಮಲ್ಲಿ ಬಹಳ ಅನಾಯಾಸವಾಗಿ ಬರ‍್ತವಲ್ಲ ನಿಮ್ಮ ವೊಕ್ಯಾಬ್ಯುಲರಿಯಲ್ಲಿ ಸಂಸ್ಕೃತ ಇದ್ದೇ ಇದೆ.

ನನಗೆ ಗೊತ್ತಿರುವ ಸಂಸ್ಕೃತ ಎಲ್ಲಾ ಕನ್ನಡದ ಮೂಲಕ ಬಂದಿರೋದು. ಕನ್ನಡ ಕವಿಗಳು ಕಟ್ಟಿಕೊಟ್ಟಿರುವ ಸಂಸ್ಕೃತ, ಸೃಜನಾತ್ಮಕವಾಗಿ ಬಳಸಿದ ಸಂಸ್ಕೃತ ಇದು.

 

—-
ಅಕ್ಷರ ರೂಪ:
ಮಂಜುಳಾಸುಬ್ರಹ್ಮಣ್ಯ
ಜಿ.ಎಸ್.ಶಿವರುದ್ರಪ್ಪ ಕುರಿತ ಕೃಷ್ಣ ಮಾಸಡಿ ನಿರ್ದೇಶನದ ಸಾಕ್ಷ್ಯಚಿತ್ರಕ್ಕಾಗಿ
೨೦೧೦ರ ಸೆಪ್ಟೆಂಬರ್‌ನಲ್ಲಿ ನಡೆದ ಸಂವಾದ

ಜಿ.ಎಸ್.ಶಿವರುದ್ರಪ್ಪನವರು ಫೆಬ್ರವರಿ , ೧೯೨೬ ರಲ್ಲಿ ಶಿವಮೊಗ್ಗದ ಶಿಕಾರಿಪುರದಲ್ಲಿ ಜನಿಸಿದರು. ಶಿವರುದ್ರಪ್ಪನವರು ಕವಿಯಷ್ಟೇ ಅಲ್ಲದೆ, ವಿಮರ್ಶೆ, ವಿಶ್ಲೇಷಣೆ, ಮೀಮಾಂಸೆ, ಅಧ್ಯಾಪನ, ಸಂಘಟನೆ ಮುಂತಾದ ಬಹುಮುಖಿ ಸಾಹಿತ್ಯಿಕ / ಸಾಂಸ್ಕೃತಿಕ ಚಟುವಟಿಕೆಗಳ ಮುಖಾಂತರ ಹಾಗೂ ನವೋದಯ, ನಮ್ಮ ಮುಂತಾದ ಸ್ಥಿತ್ಯಂತರಗಳ ಮುಖಾಮುಖಿ ಮತ್ತು ವಿಶ್ಲೇಷಣೆಗಳ ಸಂಘಟಿತ ಕಾರ್ಯಕ್ರಮಗಳ ಮೂಲಕ ದೊಡ್ಡ ಪ್ರತಿಭಾವಂತ ಶಿಷ್ಯವರ್ಗವನ್ನು ಸೃಷ್ಟಿಸಿದವರು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಬಿ.. (ಆನರ್ಸ್‌) ಮತ್ತು ಎಂ.. ಪದವಿಯನ್ನು ಪಡೆದ ಶಿವರುದ್ರಪ್ಪನವರು ಕುವೆಂಪುರವರ ಬರವಣಿಗೆಯಿಂದ ಗಾಢವಾಗಿ ಪ್ರಭಾವಿತರಾದರು. ಕುವೆಂಪುರವರ ಮಾರ್ಗದರ್ಶನದಲ್ಲಿ ಬರೆದ ಸೌಂದರ್ಯ ಸಮೀಕ್ಷೆ ಗ್ರಂಥಕ್ಕೆ ಪಿ.ಹೆಚ್‌.ಡಿ. ಪದವಿ ಪಡೆದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಾಪಕರಾಗಿ ವೃತ್ತಿಯನ್ನು ಆರಂಭಿಸಿದ ಶಿವರುದ್ರಪ್ಪನವರು ಹೈದರಾಬಾದಿನ ಒಸ್ಮಾನಿಯಾ ವಿಶ್ವವಿದ್ಯಾಲಯದ ಆಹ್ವಾನದ ಮೇರೆಗೆ ರೀಡರ್ ಮತ್ತು ಕನ್ನಡ ವಿಭಾಗದ ಮುಖ್ಯಸ್ಥರಾಗಿ ಅಲ್ಲಿ ಸೇವೆ ಸಲ್ಲಿಸಿದರು. ಅನಂತರ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕ ಹಾಗೂ ನಿರ್ದೇಶಕರಾಗಿ ಕನ್ನಡ ಅಧ್ಯಯನ ಕೇಂದ್ರದಲ್ಲಿ ಸೇವೆ ಸಲ್ಲಿಸಿರುತ್ತಾರೆ. ಉಡುಗಣ ವೇಷ್ಟಿತ, ಎದೆ ತುಂಬಿ ಹಾಡಿದೆನು ಅಂದು ನಾನು, ಹಾಡು ಹಳೆಯದಾದರೇನು ಭಾವ ನವನವೀನ, ಎಲ್ಲೋ ಹುಡುಕಿದೆ ಇಲ್ಲದ ದೇವರ, ವೇದಾಂತಿ ಹೇಳಿದನು ಮುಂತಾದವು ಶಿವರುದ್ರಪ್ಪನವರ ಜನಪ್ರಿಯ ಭಾವಗೀತೆಗಳು. ಸಾಮಗಾನ, ಚೆಲುವು ಒಲವು, ಅನಾವರಣ, ಪ್ರೀತಿ ಇಲ್ಲದ ಮೇಲೆ, ಗೋಡೆ, ಪರಿಶೀಲನ, ಕಾವ್ಯಾರ್ಥ ಚಿಂತನ, ಗಂಗೆಯ ಶಿಖರಗಳಲ್ಲಿ ಮುಂತಾದವು ಇವರ ಪ್ರಮುಖ ಕೃತಿಗಳು. ರಾಷ್ಟ್ರಕವಿ ಪ್ರಶಸ್ತಿ ಪುರಸ್ಕೃತರಾದ ಜಿ.ಎಸ್.ಎಸ್., ಪಂಪ ಪ್ರಶಸ್ತಿ, ನಾಡೋಜ, ಕೇಂದ್ರ ಸಾಹಿತ್ಯ ಮತ್ತು ಕರ್ನಾಟಕ ಅಕಾಡೆಮಿ, ಗೌರವ ಡಾಕ್ಟರೇಟ್ ಪುರಸ್ಕೃತರೂ ಕೂಡಾ ಹೌದು.