• ನಾವೆಲ್ಲ ಪ್ರೀತಿಯಿಂದ ಮೇಷ್ಟು ಅಂತ ಕರೆಯುವ ಜಿ.ಎಸ್.ಶಿವರುದ್ರಪ್ಪ ಅವರನ್ನು ಮಾತಾಡ್ಸೋದಕ್ಕೆ ಅಂತ ಬಂದಿದ್ದೇನೆ. ಆರೋಗ್ಯ ಅಷ್ಟು ಚೆನ್ನಾಗಿಲ್ಲದೇ ಇರುವುದರಿಂದ ದಣಿವು ಮಾಡ್ಕೊಳ್ಳದೆನೇ ಆರಾಮವಾಗಿ ಮಾತಾಡ್ಬಹುದು. ಮುಖ್ಯವಾಗಿ ಮೇಷ್ಟ್ರನ್ನ ಮೂರು ದೃಷ್ಟಿಯಿಂದ ನೋಡ್ತೇನೆ. ಒಂದು, ಅಪಾರವಾದ ಸಂಖ್ಯೆ ವಿದ್ಯಾರ್ಥಿಗಳನ್ನ ಪಡೆದ ಮೇಷ್ಟ್ರು ಅವರು. ಬಹುಶಃ ಕರ್ನಾಟಕದ ಅತ್ಯುತ್ತಮವಾದ ಇಲಾಖೆಯನ್ನು ಕಟ್ಟಿದವರು ಇವರು. ನನ್ನ ದೃಷ್ಟಿಯಿಂದ ಅದು ಮೊದಲನೆಯದ್ದು. ಎರಡನೆಯದ್ದು, ಅಪಾರವಾದ ಸಂಖ್ಯೆಯ ಲೇಖಕರನ್ನು ಬೆಳೆಸಿದವರು ಇವರು. ನಾನು ಎಷ್ಟೋ ಜನರನ್ನು ನೋಡಿದ್ದೇನೆ. ಜಿ.ಎಸ್.ಎಸ್.ರವರನ್ನು ಓದೋದ್ರಿಂದ ತಮ್ಮ ಕಾವ್ಯಪ್ರೇಮವನ್ನು ಬೆಳೆಸಿಕೊಂಡವರು ಅಸಂಖ್ಯ ಮಂದಿ ಇದ್ದಾರೆ. ಮೂರನೆಯದ್ದು, ಇವರು ಕಾವ್ಯಶಾಸ್ತ್ರಜ್ಞರು. ಇವತ್ತು ಭಾರತೀಯ ಕಾವ್ಯಮೀಮಾಂಸೆಯನ್ನು ಅಧಿಕಾರಯುತವಾಗಿ ತೀ.ನಂ. ಶ್ರೀಕಂಠಯ್ಯನವರ ನಂತರ ಮಾತಾಡಬಲ್ಲವರು ಜಿ.ಎಸ್.ಎಸ್. ಅಂತ ನಾನು ತಿಳಿದುಕೊಂಡಿದ್ದೇನೆ. ಇವೆಲ್ಲದಕ್ಕೂ ಮೂಲವಾಗಿರೋದು ಅವರ ಕವಿತ್ವಕವಿಶಕ್ತಿ. ಯಾಕೆಂದ್ರೆ ಇವು ಮೂರೂ ಇದ್ದಾಗ ಕವಿಶಕ್ತಿ ಇಲ್ಲದೇ ಇರಬಹುದು. ಶಾಸ್ತ್ರಜ್ಞನಾದಾಗ ಕವಿ ಆಗ್ಬೇಕು ಅಂತೇನೂ ಇಲ್ಲ. ಆದ್ರೆ ಇಷ್ಟನ್ನೂ ಜಿ.ಎಸ್.ಎಸ್. ಮೇಳೈಸಿದ್ದಾರೆ. ಇಷ್ಟು ವರ್ಷ ಕಾಲ ನಮ್ಮ ಜೊತೆಗಿದ್ದಾರೆ. ಇವರ ಜೊತೆ ಇವೆಲ್ಲದರ ಬಗ್ಗೇನೂ ಸಾಧ್ಯವಾದಷ್ಟು ನಾನು ಮಾತನಾಡಲು ಪ್ರಯತ್ನಪಡುತ್ತೇನೆ.
 • ಸರ್, ೧೯೪೪ನೇ ಇಸವಿಯಲ್ಲಿ ನೀವೊಂದು ಪದ್ಯ ಬರೆದಿದ್ದೀರಾ. ಥಾಮಸ್ ಗ್ರೇನ ಎಲಿಜಿಪದ್ಯದ ಹೊಳಹುಗಳು ಅಲ್ಲಿವೆ. ಆಗ ನನಗೆ ೧೨ ವರ್ಷ, ನಿಮಗೆ ೧೮ ವರ್ಷ. ನಮಗೆ ಆಗ ಪದ್ಯ ಇಷ್ಟವಾಗಿತ್ತು. ನಂಗೆ ಪು.ತಿ.. ಹೇಳಿದ್ದು ನೆನಪಿದೆ – ’ಎಲ್ಲ ಕಾವ್ಯಗಳಿಗೂ ಅವುಗಳಿದ್ದೇ ಆದ ಅಸ್ತಿತ್ವದ ನೆಲೆಗಳಿರುತ್ತವೆ. ಹರಿಯುವ ನೀರಿನ ಶಕ್ತಿ ಇದ್ದರೆ ಅವು ಕಾಲಪ್ರವಾಹದಲ್ಲಿ ಮುಂದೆ ಹೋಗುತ್ತವೆ. ಇಲ್ಲದೇ ಹೋದರೂ ಯಾವುದನ್ನು ನಿಂತ ನೀರು ಅಂದುಕೊಳ್ಳುತ್ತೇವೋ ಅದರೊಳಗೆ ಕಮಲ ಹುಟ್ಟುವ ಸಾಧ್ಯತೆಯೂ ಇರುತ್ತದೆ.’ ನಿಮ್ಮ ಪದ್ಯ ಸಾಹಿತ್ಯನಿಧಿ ಹೇಳೋದು ಇದನ್ನೇ. ಅದನ್ನು ಈಗ ಸಂತೋಷದಿಂದ ಓದ್ತೀನಿ ಸರ್‌‌

ಕಡಲಿನ ಕತ್ತಲ ಗವಿಯಲ್ಲಿ
ಅಡಗಿಹವೆಷ್ಟೋ ರತ್ನಗಳು
ಘೋರಾರಣ್ಯದ ತರುಗಳಲಿ
ಅರಳಿಹವೆಷ್ಟೋ ಕುಸುಮಗಳು
ಹೊಳೆಯುವ ರನ್ನವ ಧರಿಸುವರಾರೋ
ಕಡಲಿನ ಗವಿಯಿಂ ಹೊರೆತೆಗೆದು
ಕುಸುಮದ ಕಂಪನು ಸೇವಿಪರಾರು
ತುಂಬಿದ ಕಾನನ ಮಧ್ಯದಲಿ
ಕನ್ನಡ ಸಾಹಿತ್ಯಾಬ್ಧಿಯಲಿ
ಮುಳುಗಿಹವೆಷ್ಟೋ ಕಾನನದಿ
ತುಂಬಿವೆ ಕಬ್ಬಿಗ ಕುಸುಮಗಳು.

ಕವಿತೆಯಲ್ಲಿ ಬಹಳ ಮುಖ್ಯವಾದ ಒಂದು ಮಾತನ್ನು ನೀವು ಹೇಳ್ತಾ ಇದ್ದೀರಾ. ಹನ್ನೆರಡನೇ ಶತಮಾನದ ನಂತರ ಬಹಳ ಸಮೃದ್ಧವಾದ ಕನ್ನಡ ಕಾವ್ಯದ ಕೃಷಿಯ ಕಾಲ ಅನ್ನೋದನ್ನ. ೧೯೪೪ನೇ ಇಸವಿಯಲ್ಲಿ ಬರೆದ ಪದ್ಯದಲ್ಲಿ ಅದರ ಹೊಳಹುಗಳಿವೆ. ಇಲ್ಲಿ ಎಲ್ಲೋ ಕೆಲವು ಕಡೆ ಸಂಸ್ಕೃತ ಶಬ್ದಗಳು ಇವೆ ಅನ್ನೋದನ್ನ ಬಿಟ್ರೆ ಓದ್ಲಿಕ್ಕೆ ಬಹಳ ಸುಲಲಿತವಾಗಿವೆ. ಸಾಹಿತ್ಯಾಬ್ಧಿಯಲ್ಲಿ ಅನ್ನೋದು ಕಾಲದ ಮಟ್ಟಿಗೆ ಉಳಿಸಿ ಬಳಸ್ತಾ ಇದ್ದಂಥದ್ದು. ಈಗ ನೀವು ಶಬ್ದವನ್ನು ಬಳಸದೇ ಇರ್ಬಹುದು. ಆದ್ರೆ ಆವಾಗ ಅದು ಸಲ್ಲುವ ಶಬ್ದ ಸಾಹಿತ್ಯದ ಅಬ್ಧಿಯಲಿ ಮೂಡಿಹವೆಷ್ಟೋ ಕಾವ್ಯಗಳು ಕನ್ನಡ ಭಾಷೆಯ ಕಾನನದಿ ತುಂಬಿವೆ ಕಬ್ಬಿಗ ಕುಸುಮಗಳುಅವುಗಳನ್ನು ರಿಯಲೈಸ್ ಮಾಡಿದ್ರಿ.

ಆ ಪದ್ಯದ ಜೊತೆಗೆ ಕೆಲವು ನೆನಪುಗಳಿವೆ. ರಾಜರತ್ನಂ ನೆನಪು, ಮಾಸ್ತಿಯವರ ನೆನಪು. ಆ ಪದ್ಯದ ಕಾರಣದಿಂದ ನನಗೆ ರಾಜರತ್ನಂ ಮತ್ತು ಮಾಸ್ತಿ ಇಬ್ಬರೂ ಬಹಳ ಹತ್ತಿರವಾದ್ರು.

 • ಮಾಸ್ತಿಯವರು ಎಲ್ಲಿ ಓದಿದ್ರು ಪದ್ಯವನ್ನ?

ಈ ಪದ್ಯ ಬರೆದ ಮೇಲೆ ತುಮಕೂರು ಇಂಟರ್‌ ಮೀಡಿಯೆಟ್ ಕಾಲೇಜಿನೊಳಗೆ ರಾಜರತ್ನಂ ನನಗೆ ಅಧ್ಯಾಪಕರು. ಜಟ್ಟಿಯ ಮೈಕಟ್ಟಿನ ಕಂಚಿನ ಕಂಠದ ರಾಜರತ್ನಂ ನನಗೆ ಕನ್ನಡ ಅಧ್ಯಾಪಕರಾಗಿದ್ದರು. ಅವರಿಗೆ ಕವನ ತಗೊಂಡು ಹೋಗಿ ತೋರ‍್ಸಿದೆ ನಾನು. ತೋರ‍್ಸಿದ್ರೆ ಅವರು ಬಹಳ ಚೆನ್ನಾಗಿದೆ ಪದ್ಯ, ನೀನು ಕಾಪಿ ಮಾಡಿ ತಂದುಕೊಡು, ಎಲ್ಲಾದ್ರೂ ಪಬ್ಲಿಶ್ ಮಾಡೋಣ ಅಂತ ಹೇಳಿದ್ರು. ನಾನು ಅದನ್ನ ಪ್ರತಿಮಾಡಿ ಅವರ ಕೈಯಲ್ಲಿ ಕೊಟ್ಟೆ. ಮರುದಿವಸ ಅವರು ಆ ಪದ್ಯವನ್ನು ಮಾಸ್ತಿಯವರು ಬೆಂಗಳೂರಿನಲ್ಲಿ ನಡೆಸುತ್ತಿದ್ದ ಜೀವನ ಪತ್ರಿಕೆಗೆ ಕಳುಹಿಸಿಕೊಟ್ರು. ಒಂದು ತಿಂಗಳೊಳಗೆ ಆ ಪದ್ಯ ಮಾಸ್ತಿಯವರ ಜೀವನ ಪತ್ರಿಕೆಯಲ್ಲಿ ಪ್ರಕಟವಾಗಿ ಬಂತು. ಅದು ನನ್ನ ಮೊಟ್ಟಮೊದಲ ಪ್ರಕಟಿತವಾದ ಪದ್ಯ. ಆವಾಗಿನಿಂದ ರಾಜರತ್ನಂ ಅವರು ನನ್ನ ವಿಚಾರದಲ್ಲಿ ಬಹಳ ಕಣ್ಣು ಇಡ್ತಾ ಇದ್ರು. ಅವರು ಮುಂದೆ ಸೆಂಟ್ರಲ್ ಕಾಲೇಜಿನಲ್ಲಿ ಸಿಕ್ಕಾಗ, ಆ ವೇಳೆಗೆ ಅವರು ನನಗೇನು ಅಧ್ಯಾಪಕರಾಗಿರ್ಲಿಲ್ಲ. ನಾನು ಹೀಗೇಂತ ಜ್ಞಾಪಿಸಿದೆ. ನಂತರದಲ್ಲಿ ಮಾಸ್ತಿಯವರು ಈ ಪದ್ಯನ ಪ್ರಕಟ ಮಾಡಿದ್ರಿಂದ ಕೆಲವು ಸ್ನೇಹಿತರ ಕುಟದಲ್ಲಿರುವಾಗ ಶಿವರುದ್ರಪ್ಪನ ಮೊದಲ ಪದ್ಯ ಪ್ರಕಟಮಾಡಿದ್ದು ನಾನೇಂತ ಬಹಳ ಪ್ರೀತಿಯಿಂದ ಹೆಗಲ ಮೇಲೆ ಕೈಹಾಕಿ ಹೇಳಿದ್ರು, ಬಹಳ ಅಪರೂಪ ನನಗೆ ಇದು. ಮಾಸ್ತಿ ಜೊತೆ ಈ ಎಲ್ಲಾ ನೆನಪುಗಳು ಇವೆ. ರಾಜರತ್ನಂ ಅವರ ಪ್ರೀತಿ, ಮಾಸ್ತಿಯವರ ಆಶೀರ್ವಾದ ನಾನು ನಿಜವ್ಯಕ್ತಿತ್ವದೊಳಗೆ ಸೇರಿಕೊಂಡ ಸಂದರ್ಭ ಅದು ಅಂತ ನಾನು ತಿಳ್ಕೊಂಡಿದ್ದೇನೆ.

 • ಮೇಷ್ಟ್ರೇ ನಾನು ಇನ್ನೊಂದನ್ನ ಹೇಳ್ತೀನಿ. ನೀವು ಮಹಾರಾಜ ಕಾಲೇಜಿನಲ್ಲಿ ಮೇಷ್ಟ್ರಾಗಿದ್ರಿ, ತರುಣ ಅಧ್ಯಾಪಕರು ನೀವು. ನಾನು ಆಗ ವಿದ್ಯರ್ಥಿ ಆಗಿದ್ದೆ. ನಾನು ಎಂದೆಂದೂ ಮುಗಿಯದ ತರುಣ ಅಧ್ಯಾಪಕರು ನೀವು. ನಾನು ಆಗ ವಿದ್ಯಾರ್ಥಿ ಆಗಿದ್ದೆ. ನಾನು ಎಂದೆಂದೂ ಮುಗಿಯದ ಕಥೆಎಂಬ ಕಥೆಯನ್ನ ಬರೆದೆ. ನೀವು ಬಂದು ನನ್ನನ್ನು ನಾನಾಗ ಹೆದರಿಕೊಂಡು ಕೂತಿದ್ದೆ – ’ಕಥೆ ಬಹಳ ಚೆನ್ನಾಗಿದೆ, ನೀನು ಚೆನ್ನಾಗಿ ಬರೀತಿಯಾ ಅಂತ ಹೇಳದ್ರಿಆಮೇಲೆ ಮುಂದೇನು ಹೇಳಿದ್ರಿ ಅಂದ್ರೆ ಅಗ್ಗಿಷ್ಟಿಕೆ ಹಿಂದೆಮುಂದೆ ಕೂತಿರೋದು ಸ್ವಲ್ಪ ಇಂಗ್ಲೀಷ್ ಕಾವ್ಯವನ್ನು ನೆನಪಿಸುತ್ತೆಅಂದಿದ್ದಿರಿ. ಅಗ್ಗಿಷ್ಟಿಕೆ ಎದುರಿನಲ್ಲೆ ಕೂತ್ಕೊಂಡು ಮಾತಾಡೋದು ಮಲೆನಾಡಿನಲ್ಲಿಅದು ಬಚ್ಚಲಮನೆಯಲಿ ಅಂತ ನಾನು ನಿಮಗೆ ಹೇಳಿದ್ದೆ.

ನೀವು ಹೀಗೇನೆ ಬಹಳ ಜನ ಲೇಖಕರನ್ನು ಅವರು ಹೇಗೆ ನಿಮ್ಮನ್ನು ಗುರುತಿಸಿದ್ರೋ ಹಾಗೇ ನೀವೂ ಗುರುತಿಸಿದ್ರಿ. ಕನ್ನಡದ ಪುಣ್ಯ ಅಂತ ಕಾಣುತ್ತೆ. ಕನ್ನಡದಲ್ಲಿ ಒಂದು ತತ್ತ್ವ ಇದೆ. ಈಗ ನಿಮ್ಮ ಕಾವ್ಯದಲ್ಲೇನೆ ನವೋದಯ ಕಾಲದ ಮಾತಿದೆ. ಆಮೇಲೆ ಬಂಡಾಯಕ್ಕೆ ಬಂದಾಗ ಮಾತಿದೆ. ನನ್ನ ಪ್ರಕಾರ ನೀವು ಒಪ್ಪಬಹುದು, ಇಲ್ದೇ ಇರಬಹುದು. ನಿಮ್ಮ ಕೃಷ್ಣನ ಬಗ್ಗೆ ಓದಿದಾಗ ನೀವು ನವ್ಯರು ಅನಿಸುತ್ತೆ ನನಗೆ. ಯಾಕೆಂದ್ರೆ ಅಲ್ಲಿ ನಿಮ್ಮ ಲಯವೇ ಬದಲಾವಣೆ ಆಗುತ್ತಾ, ಇಲ್ಲೆಲ್ಲ ಸುಲಭವಾದ ಲಯಗಳು ಸಿಕ್ರೆ, ಅಲ್ಲಿ ಒಂದು ಸಾಲು ಇನ್ನೊಂದು ಸಾಲಿನ ಒಳಗೆ ಹೋಗುವ, ಅದರಿಂದ ಎತ್ತಿಕೊಳ್ಳುವ, ಎತ್ತಿಕೊಂಡು ಅದನ್ನು ಬೆಳೆಸುವ ಬೇರೆ ಲಯವನ್ನು, ಬೇರೆ ಮಾತಿನ ಸಂಗೀತವನ್ನು ಹುಡುಕ್ತಾ ಇದ್ರಿ. ಆಮೇಲೆ ನಿಮ್ಮ ಒಂದು ರೀತಿಯ ಪರಿಪಕ್ವತೆಯೂ ಬಂದಿದೆ, ಕೃಷ್ಣನ ಕಥೆಯಲ್ಲಿ. ಇರ್ಲಿ, ಅದನ್ನು ಆಮೇಲೆ ನೋಡೋಣ. ಆಮೇಲೆ ನೀವು ಬರಿಯಕ್ಕೆ ಶುರುಮಾಡಿದ ಕಾಲದಲ್ಲಿ ಕೂಡಾ ಬಹಳಾ ಒಳ್ಳೊಳ್ಳೆಯ ಕವಿಗಳಿದ್ದ ಕಾಲ ಅದು. ಎಕ್ಕುಂಡಿ, ಅಡಿಗರು ಇದ್ದರು. ಗಂಗಾಧರ ಚಿತ್ತಾಲರು, ಕಣವಿ ಇದ್ರು. ಯಾವುದೇ ಅತಿಗೆ ಹೋಗದಿರುವ ನಿಮ್ಮ ಕಾವ್ಯವನ್ನು ಆಗ ಸಮನ್ವಯ ಅಂತ ಕರೆದು ಒಂದು ತಪ್ಪಾಯಿತು. ನಮ್ಮಲ್ಲಿ ತರದ ಚೀಟಿ ಅಂಟಿಸಿದ ಕೂಡ್ಲೇ ಇದು ಸಮನ್ವಯದ ಕಾವ್ಯ ಆಗಿಬಿಡ್ತವೆ. ಏನು ಸಮನ್ವಯ ಅಂದ್ರೆ? ಎಲ್ಲಾ ಸಮನ್ವಯದ ಕಾವ್ಯವೇ. ನಮ್ಮಲ್ಲಿರುವ ಅತಿಯನ್ನು, ನಮ್ಮಲ್ಲಿರುವ ಮಿತಿಯನ್ನು, ನಮ್ಮಲ್ಲಿರುವ ಸಾಧ್ಯತೆಯನ್ನು ಒಗ್ಗೂಡಿಸಿಕೊಳ್ಳುವುದು ಸಮನ್ವಯ ಅಲ್ಲವೇ?

ಸಮನ್ವಯದ ಕಲ್ಪನೆ ಒಳ್ಳೆ ಕಲ್ಪನೆ.

 • ಅದು ಎಲ್ಲರಿಗೂ ದಿಟವೇ ಸಾರ್‌. ಕಾವ್ಯದಲ್ಲಿ ಎಲ್ಲರೂ ಸಮನ್ವಯ ಮಾಡ್ತಿರ್ತಾರೆ. ಆದ್ರೆ, ಹಣೆಪಟ್ಟಿ ಹಬ್ಬಿರೋದ್ರಿಂದ ಅದೊಂದು ಏನೋ ಬೇರೆ ಅರ್ಥವಾಗ್ಲಿಕ್ಕೆ ಶುರುವಾಗ್ಬಿಟ್ಟಿತು, ಸಮನ್ವಯ ಕವಿಗಳು ಅಂತ. ಆದ್ರೆ ಬಹಳ ಒಳ್ಳೆಯ ಕವಿಗಳ ನಡುವೆ ನೀವು ಕವಿತೆಯನ್ನು ಬರೀತಾ ಇದ್ರಿ ಮತ್ತು ನಿಮ್ಮತನವನ್ನು ಕೂಡ ಅಲ್ಲಿ ನೀವು ಪ್ರತ್ಯೇಕವಾಗಿ ಸ್ಥಾಪಿಸಿಕೊಂಡ್ರಿ. ಇವರಲ್ಲಿ ಕುವೆಂಪು ಹೇಗೆ ನಿಮಗೆ ನೆರವಾದ್ರು? ಯಾಕೆಂದ್ರೆ ನಿಮಗೆ ಮೂಲ ನೀವು ಯಾವಾಗ್ಲೂ ಹೇಳ್ತಾ ಇರ್ತೀರಿ – The greatest person for you in your life – ಅದು ಕುವೆಂಪು.

ಕಾವ್ಯ ಬರೆಯೋದ್ರೊಳಗೆ ನನ್ನ ಮೇಲೆ ಪ್ರಭಾವ ಬೀರಿದವರು ಕುವೆಂಪು ಅಂತ.

 • ಹೌದು. ನಿಮ್ಮ ಕಾವ್ಯ ಬರಿಯೋದ್ರೊಳಗೆ, ಉಳಿದಿದ್ದನ್ನು ಆಮೇಲೆ ನೋಡೋಣ.

ಕುವೆಂಪು ಕಾವ್ಯವೇ ಯಾರನ್ನಾದರೂ ಕವಿಯಾಗಿ ಮಾಡೋವಷ್ಟು ಪ್ರಭಾವಶಾಲಿಯಾಗಿತ್ತು. ನಾನು ಐದು ವರ್ಷಗಳ ಕಾಲ ಅವರ ವಿದ್ಯಾರ್ಥಿಯಾಗಿದ್ದೆ. ಮಹಾರಾಜಾ ಕಾಲೇಜಿನಲ್ಲಿ ಮೂರು ವರ್ಷ ಬಿ.ಎ. ಆನರ್ಸ್‌. ಎರಡು ವರ್ಷ ಎಂ.ಎ., ಅವರ ವ್ಯಕ್ತಿತ್ವ ಮುಖ್ಯವಾಗಿ ಕಾವ್ಯ, ಪರೋಕ್ಷವಾಗಿ ಬಹಳ ಗಾಢವಾದ ಪರಿಣಾಮ ಬೀರ್ತು. ನನ್ನ ಮೊದಲನೇ ಸಂಗ್ರಹ ಸಾಮಗಾನ. ಆನಂತರದ ಅನೇಕ ಪದ್ಯಗಳು ಕುವೆಂಪು ಅವರ ಛಾಯೆಯನ್ನು ಧಾರಾಳವಾಗಿ ಬಿಂಬಿಸುತ್ತವೆ. ಮುಂದಿನ ಸಂಕಲನ ಚೆಲುವು-ಒಲವು ಹೊತ್ತಿಗೆ ಅದ್ರಿಂದ ಬಿಡಿಸಿಕೊಳ್ಳುವ ಪ್ರಯತ್ನವನ್ನು ಕಾಣಬಹುದಷ್ಟೇ. ಕುವೆಂಪುರವರ ಇಡೀ ಕಾವ್ಯ ಅನ್ನೋದೇ ನನಗೆ ಸ್ಫೂರ್ತಿದಾಯಕವಾಗಿತ್ತು. ಆಗಿನ ಕಾಲದಲ್ಲಿ ಬರೆದ್ರೆ ಅವನ ಹಾಗೆ ಬರೀಬೇಕು, ಮಾತಾಡಿದ್ರೆ ಅವರ ಹಾಗೆ ಮಾತಾಡ್ಬೇಕು ಅನ್ನೋ ಒಂದು ಪರಿಸ್ಥಿತಿ. ದಾಸ್ಯ ಅಂತ ಹೇಳಲಾರೆ ಆದರೆ ಒಂದು ಭಾವುಕವಾದ ಮನಸ್ಥಿತೀಲಿ ನಾವು ಇದ್ವಿ. ಬಹಳ ಮುಖ್ಯವಾಗಿ ನಮ್ಮ ಮೇಲೆ ಪರಿಣಾಮ ಮಾಡಿದ್ದು ಅವರ ತರಗತಿಯ ಪಾಠಗಳು. ಅದ್ರಲ್ಲೂ ಕಾವ್ಯ ಮೀಮಂಸೆಯ ತರಗತಿಗಳು, ಅಥವಾ ಕ್ಲಾಸಿಕ್ಸ್‌ನ್ನು ಅವರು ಪಾಠ ಮಾಡುತ್ತಿದ್ದ ರೀತಿ. ಉದಾಹರಣೆಗೆ ಅವರು ನಮಗೆ ಪಂಪನ ಆದಿಪುರಾಣ ತಗೋತಾ ಇದ್ರು. ಆದಿಪುರಾಣ ತಗೊಂಡು ಪಾಠ ಮಾಡುವಾಗ ಎಲ್ಲೋ ಒಂದು ಕಡೆ ಭರತ ಚಕ್ರವರ್ತಿ ತನ್ನ ಹೆಸರನ್ನು ವೃಷಭಾಚಲದ ಭಿತ್ತಿಯ ಮೇಲೆ ಶಾಶ್ವತವಾಗಿ ನಿಲ್ಲುವ ಹಾಗೆ ಬರೆಸ್ತಾನೆ, ಮಹಾತ್ವಾಕಾಂಕ್ಷಿಗಳ ಚಿತ್ತವಿಕಾರವನ್ನು ಇದಕ್ಕಿಂತ ಚೆನ್ನಾಗಿ ಹೇಳೋಕು ಸಾಧ್ಯವಿಲ್ಲ.

 • ಅದು ಅವರ ಶಬ್ದ. ಅವರು ಕೀರ್ತಿಶನಿ ಎಂಬ ಶಬ್ದವನ್ನು ಬಳಸ್ತಾ ಇದ್ರು. ಮುಕ್ತಿರಾಹು ಕೀರ್ತಿಶನಿ ಅಂತೆ.

ಇದನ್ನು ಮಾಡುವಾಗ ಕುವೆಂಪು ಆದಿಪುರಾಣವನ್ನು ಮಾಡ್ತಾ ಅದರ ಜೊತೆಗೆ ಮಹಾಕವಿ ಶೆಲ್ಲಿಯ ಓಜಿಮಾಂಡಿಯಾಸ್ ಪದ್ಯಕ್ಕೆ ಕಂಪೇರ್ ಮಾಡ್ತಾ ಇದ್ರು.  I met a traveller from an antique land  / Who said – Two vast and trunkless legs of stone / Stand in the desert ಅಂತ ಶುರುವಾಗಿ ಕೊನೆಗೆ ಮುರ್ದುಬಿದ್ದ ಭಗ್ನಾವೇಶದ ಪಕ್ಕದಲ್ಲಿ Nothing beside remains. Round the decay of that colossal wreck ಅನ್ನೋದನ್ನ ಓದಿ ಹೇಳ್ತಾ ಇದ್ರು. ಅವರು ಏನು ಹೇಳ್ತಾ ಇದ್ರೋ ಆ ಮಾತನ್ನು ನಾನು ಹೇಳ್ತಾ ಇದ್ದೇನೆ. ಈ ಪದ್ಯ ಬಹಳ ಹಿಡಿಸಿದೆ ನನಗೆ. ಹೀಗೆ ಪಂಪನನ್ನು ಮಾಡೋ ಹೊತ್ತಿಗೆ ಇಂಗ್ಲಿಷ್ ಪದ್ಯವನ್ನೂ ಮಾಡಿ ಸಮನ್ವಯ ಮಾಡ್ತಿದ್ರು. ಎಲ್ಲೂ ಕೂಡಾ ಓಜಿಮಾಂಡಿಯಾಸ್ ಪದ್ಯದಲ್ಲಿ ಓಜಿಮಾಂಡಿಯಾಸ್ ರಾಜ king of kings /  Look on my works, ye mighty, and despair ಅಂತ ಬರೆಸ್ತಾನಲ್ಲಿ ಪದಪೀಠದ ಮೇಲೆ. ಆದಿಪುರಾಣಕ್ಕೆ ಹೀಗೆ ಸಂವಾದಿ ಆಗಿದೆ. ಹೀಗೆ ಕುವೆಂಪುರವರು ತಮ್ಮ ವಿದ್ಯಾರ್ಥಿಗಳು ಕೇವಲ ಕನ್ನಡ ಪರಿಚಯದಲ್ಲಿ ಮಾತ್ರ ಕಲಿಬೇಕಾಗಿಲ್ಲ. ಜಾಗತಿಕ ಪ್ರಜ್ಞೆಯ ವಿಸ್ತಾರದಲ್ಲಿ ಕನ್ನಡದ ಮನಸ್ಸುಗಳು ಅರಳಿಕೊಲ್ಳುವುದು ಹೇಗೆ ಅನ್ನೋದನ್ನು ಹೇಳ್ತಾ ಇದ್ರು. ಹಾಗೇನೇ ಪೊಯೆಟಿಕ್ಸ್ ಮಾಡುವ ಹೊತ್ತಿಗೂ ಅಷ್ಟೇನೇ. ತೌಲನಿಕ ವಿಧಾನದಿಂದ ಮಾತ್ರ ನಮ್ಮ ಪ್ರಜ್ಞೆ ವಿಸ್ತಾರವಾಗೋದಕ್ಕೆ ಸಾಧ್ಯ ಅಂತ ಅವರು ತಿಳ್ಕೊಂಡಿದ್ರು.

 • .. ರಿಚರ್ಡ್ಸ್‌‌ನನ್ನು ಕುವೆಂಪು ತುಂಬ ಇಷ್ಟಪಡ್ತಾ ಇದ್ರು.

ಹೌದು, ತುಂಬಾ ಇಷ್ಟಪಡ್ತಾ ಇದ್ರು, ಐ.ಎ. ರಿಚರ್ಡ್ಸ್ ಪಾಠವನ್ನು ತಂದು ಅದನ್ನು ಇಟ್ಕೊಂಡೇ ಪಾಠ ಮಾಡ್ತಾ ಇದ್ರು. ಅವರು ಯಾವುದೇ ನೋಟ್ಸ್ ಗೀಟ್ಸ್ ಇರ್ತಿರಲಿಲ್ಲ. Model in Search of a Soul ಅಂತ ಹೀಗೆ ಒಂದು ಪುಸ್ತಕ, ಅದನ್ನು ಇಟ್ಕೊಂದು ಅದರೊಳಗಡೆ ಒಂದು ಮನಸ್ಸು ಹೇಗೆ ದೊಡ್ಡ ಮಹತ್‌ ಕೃತಿಗಳಲ್ಲಿ ಪ್ರತಿಬಿಂಬಿತವಾಗಿರುತ್ತದೆ ಅನ್ನೋದನ್ನ ಹೇಳುವಾಗ ಐ.ಎ. ರಿಚರ್ಡ್ಸ್‌ನ ಇಟ್ಕೊಂಡೇ ಪಾಠ ಮಾಡ್ತಾ ಇದ್ರು. ಹೀಗೆ ನಮ್ಮನ್ನು ಇಂಗ್ಲಿಷ್ ಸಾಹಿತ್ಯದ ಹಿನ್ನೆಲೆಯೊಳಗೆ ಕನ್ನಡ ವಿದ್ಯಾರ್ಥಿಗಳನ್ನು ತಯಾರಿ ಮಾಡಿದ್ರು. ಹೀಗಾಗಿ ನನಗೆ ಮುಂದೆ ಬೇರೆ ಬೇರೆ ವಿಶ್ವವಿದ್ಯಾನಿಲಯದಲ್ಲಿ ನಾನು ಪಾಶ್ಚಾತ್ಯ ಸಾಹಿತ್ಯ ಅಂತ ಒಂದು ಪತ್ರಿಕೆಗೆ ತೌಲನಿಕ ಅಧ್ಯಯನಕ್ಕೆ ಎಂ.ಎ. ಸಿಲೆಬಸ್ ಮಾಡುವಾಗ ಅದೆಲ್ಲವು ಉಪಯೋಗಕ್ಕೆ ಬಂತು. ಹೀಗಾಗಿ,

 • ನಡುವೆ ಒಂದು ಪ್ರಶ್ನೆ ಕೇಳ್ಲಾ ಸರ್, ಕುವೆಂಪು ಎಷ್ಟು ಪಾಶ್ಚಾತ್ಯರಿಂದ ಉದಾಹರಣೆ ತಗೊಂಡು ನಮ್ಮ ಮನಸ್ಸನ್ನು ಬೆಳೆಸ್ತಾ ಇದ್ರು. ಹಿಂದಿನ ಕಾಲದಲ್ಲಿ ಸಂಸ್ಕೃತದಿಂದ ತಗೊಂಡು ಮಾಡ್ತಾ ಇದ್ರು.ನೀವು ವಿದ್ಯಾರ್ಥಿಯಾಗಿದ್ದಾಗ ಇಂಗ್ಲಿಷ್ ಮತ್ತು ಪಾಶ್ಚಾತ್ಯದಿಂದ ಬರುವ ಪ್ರೇರಣೆ ಅಲ್ಲದೇನೇ ನಮ್ಮ ಪುರಾತನ ಕಾಳಿದಾಸ, ಭಾಸ, ಹಾಂ, ತೀ.ನಂ.ಶ್ರೀ. ಎಲ್ಲರೂ ಇದ್ರು, ನೀವು ಬಹಳ ಪುಣ್ಯವಂತರು.

ತೀ.ನಂ.ಶ್ರೀಕಂಠಯ್ಯನವರಿದ್ರು, ಡಿ.ಎಲ್. ನರಸಿಂಹಾಚಾರ್ಯರಿದ್ರು, ಬಲು ಅದ್ಭುತ ಅದು. ನಾನು ತೀ.ನಂ.ಶ್ರೀ ಅವರ ನೇರ ವಿದ್ಯಾರ್ಥಿ ಅಲ್ಲ. ಆದ್ರೆ ಅವರ ಅನುಮತಿ ತಗೊಂಡು ಅಧ್ಯಾಪಕನಾಗಿದ್ದ ಎರಡು ವರ್ಷಗಳ ಕಾಲದಲ್ಲಿ ಅವರ ಎಂ.ಎ. ತರಗತಿಯಲ್ಲಿ ವಿದ್ಯಾರ್ಥಿಗಳ ಜೊತೆಗೆ ನಾನು ಕೂತ್ಕೊಳ್ತಾ ಇದ್ದೆ.

 • ನಾನೂ ಕೂಡ ಅಧ್ಯಾಪಕನಾಗಿದ್ದಾಗ ಅವರ ಕ್ಲಾಸ್‌ಗಳಲ್ಲಿ ಅವರ ಅನುಮತಿ ತಗೊಂಡು ಕೂತ್ಕಳ್ತಾ ಇದ್ದೆ.

ಅವರ ಆ ಉತ್ಕೃಷ್ಟತೆ, ಖಚಿತತೆ ಮತ್ತು ಶಾಸ್ತ್ರದ ಸರಿಯಾದ ತಿಳುವಳಿಕೆ, ಇವೆಲ್ಲ ಎಷ್ಟು ಅಗತ್ಯ ಅಂದ್ರೆ ಕುವೆಂಪು ಅವರಲ್ಲಿ ಇದೆಲ್ಲಾ ಕೇಳ್ಬೇಡಿ. ಅದರಲ್ಲಿ ಒಂದು ವ್ಯವಸ್ಥೇನೇ ಇರ್ಲಿಲ್ಲ. ಅಲ್ಲಿ ಅನೇಕ ಮಿಂಚುಗಳು ಇದ್ವು. ಆ ಮಿಂಚುಗಳನ್ನು ನಾವು ಕಷ್ಟಪಟ್ಟು ಪಡ್ಕೊಳ್ಬೇಕಾಗಿತ್ತು.

 • ತೀ.ನಂ.ಶ್ರೀಯವರಲ್ಲಿ ಪಾಠ ಮಾಡುವಾಗ ಒಂದು ವ್ಯವಸ್ಥೇನೇ ಇರೋದು. ಬರ್ಕೊಂಡ್ರೆ ಒಂದು ಎಸ್ಸೇನೇ ಆಗಿಹೋಗೋದು.

ಹೌದು, ಹೌದು.

 • ಕುವೆಂಪುರವರಲ್ಲಿ ಆಳವಾದ ಹೊಳಹುಗಳು ಬರ್ತಾ ಇದ್ವು.

ಹೌದು.

 • ಡಿ.ಎಲ್.ಎನ್. ಹೇಗಿದ್ರು ಸರ್‌?

ಡಿ.ಎಲ್.ಎನ್. ಅವರೊಂದು ಶಬ್ದವಿಹಾರ. ಒಂದು ಶಬ್ದ ಬೆನ್ನಹತ್ತಿ ಅದರ ಮೂಲಕ್ಕೆ ಹೋಗುವ ಚರಿತ್ರೆ ಇದೆ ಅಲ್ವಾ, ಅದೇ ರೋಮಾಂಚಕಾರಿಯಾದ ಅನುಭವ.

 • ನಿಮಗೆ ಒಳ್ಳೆ ಇಂಗ್ಲಿಷ್ ಮೇಷ್ಟ್ರುಗಳಿದ್ರಾ ಸಾರ್‌ ನೀವು ಓದುವಾಗ?

ನಾನು ಓದುವಾಗ ಅಂಥ ಒಳ್ಳೇ ಇಂಗ್ಲಿಷ್ ಮೇಷ್ಟ್ರು ನನಗೆ ಸಿಕ್ಲಿಲ್ಲ.

 • ನಿಮ್ಮ ಇಂಗ್ಲಿಷ್ ಕೂಡಾ ಇಲ್ಲಿಂದ್ಲೇ ಬಂತಾ? ನಮ್ಮ ಅತ್ಯುತ್ತಮ ಬರಹಗಾರರೆಲ್ಲಾ ಹೀಗೇನೇ ಆಗಿರೋದು. ಆಮೇಲೆ ನಮಗೆ ನೀವು ಪ್ರಿಯವಾಗಿದ್ದು ನಾನು ವಿದ್ಯಾರ್ಥಿಯಾಗಿದ್ದಾಗ ನಿಮ್ಮ ಜಡೆ ಪದ್ಯದಿಂದ. ಅದನ್ನ ಸ್ವಲ್ಪ ಓದಕ್ಕಾಗುತ್ತಾ ಸರ್‌, ನಿಮಗೆ.

’ಜಡೆ’ ಪದ್ಯ ನನಗೆ ತುಂಬ ಹೆಸರು ತಂದು ಕೊಟ್ಟಂಥ ಪದ್ಯ ಆಗಿನ ಕಾಲದಲ್ಲಿ.

 • ಹೌದು, ಹೌದು.

ಗೋಕಾಕರು, ಮುಗಳಯವರು, ಬೇಂದ್ರೆಯವರು, ಕಣವಿಯವರು ಮತ್ತು ಶರ್ಮ ಅವರು, ನಾವೆಲ್ಲಾ ಧಾರವಾಡದ ಆಕಾಶವಾಣಿಯಲ್ಲಿ ಕವಿಗೋಷ್ಠಿಗೆ ಹೋಗಿದ್ವಿ. ಆಗ ಆ ’ಜಡೆ’ ಪದ್ಯನ ಓದಿ ಬೆಳಗಾಗೋದ್ರೊಳಗೆ ಪ್ರಸಿದ್ಧನಾಗ್ಬಿಟ್ಟೆ.

 • ಬಹಳ ಲೇಖಕರಿಗೆ ಅವರ ಹೀಗೇ ಯಾವುದೋ ಒಂದೊಂದು ಕೃತಿ ಜನರನ್ನು ಕೂಡ್ಲೇ ಹಿಡಿದುಬಿಡುತ್ತೆ. ಅದೂ ನಿಷ್ಕಾರಣವಾಗಿ. ಸಂಗೀತದಲ್ಲೂ ಕೂಡಾ ಹಾಗೇನೇ. ಸಿನಿಮಾ ಸಂಗೀತ ಬರುತ್ತೆ. ಯಾವನೋ ಅದನ್ನು ಹೊಸತರದಲ್ಲಿ ಹಾಡಿದ್ದೇ ಮನೇಲಿ ಮಕ್ಕಳು ಅದನ್ನು ಕ್ಯಾಚ್ ಮಾಡ್ತಾರೆ, ಹಾಡ್ತಾ ಇರ್ತಾರೆ. ಕಾವ್ಯಗಳಲ್ಲೂ ಹಾಗೇನೇ, ಒಂದು ಕ್ಯಾಚ್ ಮಾಡೋ ಗಳಿಗೆ ಅಂತ ಇರುತ್ತೆ.

ಹೌದು. ಪು.ತಿ.ನ. ಅವರಿಗೆ ಬಹಳ ಪ್ರಿಯವಾದ ಪದ್ಯ ಇದು.

 • ಇದಾ? ಯಾಕಂದ್ರೆ ಧ್ವನಿ ತತ್ತ್ವ ಅಂತೆಲ್ಲಾ ಇದೆಯೆಲ್ಲಾ ಇದರಲ್ಲಿ ಓದ್ತೀರಾ ಸಾರ್, ಕೊಡ್ಲಾ?

ಲಲನೆಯರ ಬೆನ್ನಿನೆಡೆ ಹಾವಿನಲು ಜೋಲು ಜಡೆ
ಕಾಳಿಂದೆಯಂತಿಳಿದು ಕೊರಳೆಡೆಗೆ ಕವಲೊಡೆದು
ಅತ್ತಿತ್ತ ಹರಿದ ಜಡೆ!
ಚೇಳ್ಕೊಂಡಿಯಂಥ ಜಡೆ ಮೋಟು ಜಡೆ
ಚೋಟುಜಡೆ, ಚಿಕ್ಕವರ ಚಿನ್ನಜಡೆ!
ಎಣ್ಣೆಕಾಣದೆ ಹೆಣೆದು ಹಿಣಿಲಾಗಿ ಹೆಣೆದ ಜಡೆ
ಬೆವರಿನಲಿ ಧೂಳಿನಲಿ ನೆನೆದಂಟಿಕೊಂಡಿರುವ ಗಂಟು ಜಡೆ
ಅಕ್ಕತಂಗಿಯ ಮುಡಿಯ ಹಿಡಿದು ನಾನೆಳೆದಂಥ
ಮಲ್ಲಿಗೆಯ ಕಂಪು ಜಡೆ
ಕೇದಗೆಯ ಹೆಣೆದ ಜಡೆ
ಮಾತೃಮಮತಾ ವೃಕ್ಷ ಬಿಟ್ಟ ಬಿಳಲಿನಂತೆ ಅರಳಿರುವ ತಾಯ ಜಡೆ!
’ಗುರುಕುಲಜೀವಾಕರ್ಷಣ ಪರಿಣತ’ ಆ ಪಾಂಚಾಲಿಯ ಜಡೆ!
ಸೀತೆಯ ಕಣ್ಣೀರೊಳು ಮಿಂದ ಜಡೆ
ಓಹೋ ಈ ಜಡೆಗೆಲ್ಲಿ ಕಡೆ!
ಸಂಜೆಯಲಿ ಹಗಲು ಕೆದಕುವ ಕತ್ತಲೆಯ ಕಾಳ ಜಡೆ
ಬೆಳಗಿನಲಿ ಇರುಳುಬಿಚ್ಚುವ ಬೆಳ್ಳನೆಯ ಬೆಳಕು ಜಡೆ
ಒಮ್ಮೊಮ್ಮೆ ಮುಗಿಲಲ್ಲಿ ತೇಲುತ್ತಾ ಬರುವಂಥ ಬೆಳ್ಳಕ್ಕಿಗಳ ಜಡೆ,
ಕ್ರೌಂಚಗಳ ಜಡೆ
ಮರಮರದಿ ಬಳಕುತಿಹ ಹೂಬಿಟ್ಟ ಬಳ್ಳಿ ಜಡೆ!
ಕಾಡುಬಯಲಿನ ಹಸುರು ಹಸಿರಿನಲಿ
ಹರಿಹರಿದು ಮುನ್ನಡೆವ ಹೊಳೆಯ ಜಡೆ!
ಶ್ರೇಣಿಶ್ರೇಣಿಗಳಾಗಿ ಹರಿದಿರುವ ಗಿರಿಯ ಜಡೆ!
ಗಿರಿಶಿವನ ಶಿರದಿಂದ ಹಬ್ಬಿ ಹಸರಿಸಿ ನಿಂತ ಕಾನನದ ಹಸಿರು ಜಡೆ
ನಕ್ಷತ್ರಗಳ ಮುಡಿದ ನಟ್ಟಿರುಳ ನಭದ ಜಡೆ!
ಮುಂಗಾರು ಮೋಡಗಳು ದಿಕ್ಕುದಿಕ್ಕಿಗೆ ಬಿಚ್ಚಿ
ಹರಡಿರುವ ಮಳೆಯ ಜಡೆ
ಚಂದ್ರಚೂಡನ
ವ್ಯೋಮಕೇಶ
ವಿಶ್ವವನೆ ವ್ಯಾಪಿಸುತ ತುಂಬಿರುವ ಜಡೆ
ಗಾನಗಳ, ಕಾವ್ಯಗಳ ಶಿಲ್ಪಗಳ ಕಲೆಯ ಜಡೆ
ಎಲ್ಲವೂ ರಮ್ಯವೆಲ್ಲ!
ಜಡೆಯಾಚೆ ತಿರುಗಿಸಿದ ತಾಯ ಮುಖ ಮಾತ್ರ
ಇಂದಿಗೂ ಕಾಣದಲ್ಲ.

 • ಕೊನೆಯ ಎರಡು ಸಾಲು ಉಳಿದೆಲ್ಲ ಸಾಲುಗಳನ್ನು, ಅದರ ಮೇಲೆ ಬೆಳಕು ಚೆಲ್ಲಿಬಿಡುತ್ವೆ. ಆಮೇಲೆ ಇಡೀ ಪದ್ಯಕ್ಕೊಂದು ಒಟ್ಟಂದದ ಸ್ವರೂಪ ಬಂದು ಬಿಡುತ್ತೆ. ಸರ್‌ ಪದ್ಯವನ್ನು ಕುವೆಂಪು ಅವರು ಗಮನಿಸಿದ್ದಾರಾ ಸಾರ್‌?

ಅವರೇನೂ ನೋಡ್ತಾ ಇರ್ಲಿಲ್ಲ ಸಾಮಾನ್ಯವಾಗಿ. ಒಂದ್ಸಲ  ನನಗೆ ಮತ್ತು ಎ.ಕೆ.ರಾಮಾನುಜನ್ ಅವರಿಗೆ ಕರ್ನಾಟಕ ಸಂಘದ ಬಹುಮಾನ ಬಂತು. ಎ.ಕೆ.ರಾಮಾನುಜನ್ ನಾನು ಕ್ಲಾಸ್‌ಮೇಟ್ಸ್.

 • ಹೌದಾ?

ಹೌದು. ಅವರು ಇಂಗ್ಲಿಷ್ ಆನರ್ಸ್, ನಾನು ಕನ್ನಡ ಆನರ್ಸ್ ೧೯೪೪-೪೫-೪೬ ಇರ್ಬೇಕು. ಆಗ ನನ್ನ ಪದ್ಯಕ್ಕೊಂದು ಬಹುಮಾನ ಬಂತು. ಆ ಬಹುಮಾನ ತಗೊಳ್ಳೊದಕ್ಕೆ ಹೋದಾಗ ಪುಟ್ಟಪ್ಪನವರಿಗೆ ನಾನು ಪದ್ಯ ಬರೀತೀನಿ ಅನ್ನೋದು ಗೊತ್ತಾಯಿತು. ಮಾರನೇದಿನ ಅವರು ಕರ್ದು ಕೂರಿಸಿಕೊಂಡು ಏನೇನು ಬರ್ದೀದ್ದೀಯಾಂತ ಕೇಳಿ ಪ್ರಬುದ್ಧ ಕರ್ನಾಟಕಕ್ಕೆ ಅವರೇ ಆರಿಸಿಕೊಟ್ರು. ಇನ್ನೊಂದು ಪದ್ಯ. ಈ ಪದ್ಯ ಬರ್ದಾಗ ನಾನು ೧೯೫೩ ನೇ ಇಸವಿ. ಮೈಸೂರಿನಲ್ಲಿದ್ದೆ. ಆ ಕಾಲದಲ್ಲಿ ಬರ್ದಿದ್ದು.

 • ಆಗ ನವ್ಯ ಶುರುವಾಗಿತ್ತು.

ಹೌದು ಶುರುವಾಗಿತ್ತು. ಆದ್ರಿಂದ್ಲೇ ಈ ಛಂದಸ್ಸು ಬದಲಾಗಿದ್ದು.

 • ಆಗ ಮಹಾರಾಜಾ ಕಾಲೇಜಿನಲ್ಲಿ ಮೇಷ್ಟಾಗಿದ್ರಾ ಸರ್?

ಯುವರಾಜಾ ಕಾಲೇಜಿನಲ್ಲಿ

 • ಯುವರಾಜಾ ಕಾಲೇಜಿನಲ್ಲಿ ಸ್ವಲ್ಪ ದಿನ ನೀವು ರಾಜ್ಯ ಬಿಟ್ಟು ಹೋಗ್ಬೇಕಾಗಿ ಬಂತು. ಬೇರೆ ಊರಿನಲ್ಲಿ ಮೇಷ್ಟ್ರಾಗಿ ಇರ್ಬೇಕಾಗಿ ಬಂತು.

೧೯೬೦ರ ನಂತರ

 • ೧೯೬೦ರ ನಂತರ, ಆಗ ನೀವಿದ್ದದ್ದು ಒಸ್ಮಾನಿಯಾ ಯೂನಿವರ್ಸಿಟಿಯಲ್ಲಿ ಅಲ್ವಾ ಸಾರ್?

ಹೌದು. ಒಸ್ಮಾನಿಯಾ ಯೂನಿರ್ವಸಿಟಿಯಲ್ಲಿ. ಅದು ೧೯೬೨-೬೩ ರಲ್ಲಿ.

 • ಅಲ್ಲಿ ನಿಮಗೇನಾದ್ರು ತೆಲುಗು ಬರಹಗಾರರ ಸಂಪರ್ಕಗಳಿತ್ತಾ?

ಇಲ್ಲ. ಅಲ್ಲಿ ಗೋಕಾಕ್ ಇದ್ರು

 • ಗೋಕಾಕ್‌ ಇದ್ರಾ?

ಹೌದು. ಗೋಕಾಕ್ ಇದ್ರು. ಸಾಹಿತ್ಯ ಕೇಂದ್ರದಲ್ಲಿ ಆವಾಗ ಅವರ ಜೊತೆಗೆ ಅನೇಕ ಸಾಹಿತ್ಯ ವಿಷಯ ಚಟುವಟಿಕೆಗಳಲ್ಲಿ ಭಾಗವಹಿಸುವ ಅವಕಾಶಗಳಿತ್ತು. ಎರಡು ವರ್ಷ ಅಲ್ಲಿದ್ದಿದ್ದು ಅಷ್ಟೇನೆ. ಆಮೇಲೆ ಹಿಂದಕ್ಕೆ ಬಂದೆ.

 • ಆಮೇಲೆ ನಿಮ್ಮದೊಂದು ಪ್ರವಾಸ ಕಥನ ಬಂತು. ಆಮೇಲೆ ಭಾರತೀಯ ಕಾವ್ಯಮೀಮಾಂಸೆಯ ಕುರಿತ ಒಂದು ಕೃತಿ ಬಂತು. ಅದಕ್ಕೇನೇ ನಿಮಗೆ ಸಾಹಿತ್ಯ ಅಕಾಡೆಮಿ ಪ್ರೈಸ್ ಬಂದಿದ್ದು ಅಲ್ವಾ ಸರ್?

ಹೌದು. ’ಕಾವ್ಯಾರ್ಥ ಚಿಂತನ’ಕ್ಕ

 • ಯಾವಾಗ್ಲೂ ಸಾಹಿತ್ಯ ಅಕಾಡೆಮಿ ಲೇಖಕರ ಬಹಳ ಮುಖ್ಯವಾದ ಕೃತಿಗೆ ಕೊಡದೇನೆ ಸಾಂಕೇತಿಕವಾಗಿ ಒಂದಕ್ಕೆ ಕೊಡ್ತಾರೆ. ’ಕಾವ್ಯಾರ್ಥ ಚಿಂತನವೂ ಬಹಳ ಒಳ್ಳೆ ಕೃತಿ. ಆದ್ರೆ ಕವಿಯಾಗಿ ನಿಮಗೆ ಕೊಡಬಹುದಿತ್ತು ಅನಿಸತ್ತೆ. ನಾನು ಮೂರು ಪದ್ಯಗಳನ್ನು ಆರಿಸಿಕೊಂಡಿದ್ದೇನೆ. ನಿಮ್ಮ ಬಹಳ ಪ್ರಿಯವಾದ ಪದ್ಯ ಯಾವುದು ಸರ್‌?

ನಿಮಗೆ ಅಥವಾ ರಾಘವಂದ್ರರಾವ್ ನಿಮಗೆ, ಯಾವುದು ನನ್ನ ಒಳ್ಳೆ ಪದ್ಯ ಅನ್ಸುತ್ತೆ? ನಾನು ’ಹಣತೆ’ ಇಷ್ಟಪಡ್ತೇನೆ. ಅದು ಸ್ಟಾಕ್ ಪೊಯಮ್.

 • ಏನೂ ಅಂದ್ರೆ ನಿಮಗೆ ಜನಪ್ರಿಯ ಆಗೋದೂ ಸಾಧ್ಯ ಆಯ್ತು. ಆದ್ರೂ ಕೂಡ್ಲೇ ಜನಪ್ರಿಯತೆ ಇಲ್ಲದೆ ಇರುವಂಥ ಬಿಗಿಯಾದ ಪದ್ಯಗಳನ್ನು ಬರೆಯೋದೂ ಸಾಧ್ಯವಾಯಿತು. ಎರಡನ್ನೂ ಕೂಡಾ ನೀವು ಕುವೆಂಪುರವರಿಂದ್ಲೇ ಪಡೆದಿರ್ಬಹುದೇನೋ? ಯಾಕೆಂದ್ರೆ ಅವರಲ್ಲಿ ಜನಪ್ರಿಯವಾಗುವಂಥ ಪದ್ಯಗಳೂ ಇದ್ದಾವೆ ಮತ್ತು ಜನಪ್ರಿಯತೆಗೆ ಅಷ್ಟು ಬೇಗನೆ ನಿಲುಕದೇ ಇರುವಂಥದ್ದೂ ಇವೆ.

ಅದು ಹೇಳಕ್ಕೆ ಬರೊದಿಲ್ಲ. ಏಕೆಂದ್ರೆ ಕರ್ಕೊಂಡು ಹೋದನಂತ್ರ ಅದು ಸ್ಟಾಕ್ ಟೇಕಿಂಗ್‌ಗೆ ಗೊತ್ತಾಗುವ ವಿಷಯ ಅದು.

 • ಕವಿ ಅಂದ್ರೆ ಜನರಿಂದ ದೂರವಾಗಿರ್ಬೇಕು ಅನ್ನುವಂಥ ದೃಷ್ಟಿಯನ್ನ ನೀವು ಯಾವತ್ತಾದ್ರು ಇಟ್ಕೊಂಡಿದ್ರ?

ಆ ತರದ ಭಾವನೆಗಳು ನನಗೆ ಯಾವತ್ತೂ ಇರ್ಲಿಲ್ಲ. ಕುವೆಂಪುಗೆ ಇದ್ದಿರಬಹುದೇನೋ ಗೊತ್ತಿಲ್ಲ.

 • ಕುವೆಂಪುರವರ ವ್ಯಕ್ತಿತ್ವದಲ್ಲಿದ್ದಿರ್ಬಹುದು. ಆದ್ರೆ ಅವರ ರಚನೆಯಲ್ಲಿ ಇರ್ಲಿಲ್ಲ. ಈಗ ನನಗೆ ಕುವೆಂಪುರವರಲ್ಲಿ ಆಶ್ಚರ್ಯ ಆಗೋದು ಏನಂದ್ರೆ, ಎಲ್ರೂ ಸೋವಿಯತ್ ರಷ್ಯಾವನ್ನು ಬಹಳ ಹೊಗಳುತ್ತಿದ್ದ ಕಾಲದಲ್ಲಿ ಇವರು ಸ್ವತಃ ಸಮಾಜವಾದಿಯಾಗಿ ಯೋಚನೆ ಮಾಡೋರು. ಕೋಗಿಲೆ ಮತ್ತು ಸೋವಿಯತ್ ರಷ್ಯಾ ಅನ್ನುವಂಥ ಪದ್ಯವನ್ನ ಬರ್ದ ಕಾಲದಲ್ಲಿ ಇನ್ನು ಯಾವ ಭಾರತೀಯ ಕವಿಗೂ ಅದನ್ನು ಬರಿಯೋದು ಸಾಧ್ಯವಾಗಿಲ್ಲ. ಠಾಗೋರ್ ಕೂಡಾ ಸೋವಿಯತ್‌ ಯೂನಿಯನ್‌ನಿಂದ ಬಂದು ಅದು ಅದ್ಭುತವಾದ ದೇಶ ಅಂದ್ರು.

ಸ್ವಾತಂತ್ರ್ಯ ಇಲ್ಲದ ಸಮಾನತೆಯನ್ನು ಯಾವತ್ತೂ ಕುವೆಂಪು ಮಾನ್ಯ ಮಾಡ್ಲೇ ಇಲ್ಲ. ಸೋವಿಯತ್ ಯೂನಿಯನ್ ಪದ್ಯದಲ್ಲಿ ಅದೇ ತಾನೆ ಬರೋದು.

 • ನೀವು ನವ್ಯವವನ್ನು ಮೈಗೂಡಿಸಿಕೊಂಡಿದೀರಿ ಸರ್. ಆದ್ರೆ ನವ್ಯ ಬಂದಾಗ ನಿಮ್ಮಂಥವರ ಮನಸ್ಸಿನಲ್ಲಿ ಅದಕ್ಕೊಂದು ವಿರೋಧ ಇತ್ತು. ವಿರೋಧ ಯಾವ ಬಗೆಯದಾಗಿತ್ತು?

ನನಗೆ ಯಾವತ್ತೂ ವಿರೋಧ ಇರ್ಲಿಲ್ಲ.

 • ನಿಮ್ಮ ಕಾಲದವರಿಗೆ, ಕಾಲದ ಪರವಾಗಿ ಮಾತನಾಡಿ ಅಂತ ಅಲ್ಲ ನಾನು ಕೇಳ್ತಿರೋದು ಆದ್ರೆ ಅದು ಇಮೇಜಸ್ಸನ್ನು ಬ್ರೇಕ್ ಮಾಡೋದು ಎಲ್ಲ ಇತ್ತಲ್ಲ. ಅದು ಕಾವ್ಯತತ್ತ್ವದ ದೃಷ್ಟಿಯಿಂದ ತಪ್ಪು ಮಾಡ್ತಾ ಇದ್ದೇನೆ ಅಂತೇನಾದ್ರು ಅನ್ಸಿತ್ತಾ? ಇನ್ನು ತೀ.ನಂ.ಶ್ರೀಯವರಿಗೂ ರೀತಿ ಅನ್ಸಿತ್ತಾ? ನಾನು ಅವರು ಇದ್ರ ಬಗ್ಗೆ ಬಹಳ ವಾಗ್ವಾದ ಮಾಡಿದ್ವಿ.

ತೀ.ನಂ.ಶ್ರೀಯವರು ಏನಂತಿದ್ರು?