• : ಬಸವಣ್ಣನ ಕ್ರಾಂತಿಕಾರತೆ ಇರುವುದು ಇಲ್ಲಿಯೇ. ನೀನು ಒಮ್ಮೆ ಶರಣನಾದರೆ ಶರಣನ ಸ್ಥಿತಿಯಲ್ಲಿ ನಿನ್ನ ಜಾತಿ ತಿಳಿಯುವುದಿಲ್ಲ, ಆದ್ದರಿಂದ ಜಾತಿಯ ಕಸುಬಿನಲ್ಲಿದ್ದೂ ಜಾತಿಯವನಲ್ಲವಾಗಬಹುದು ಅನ್ನುತ್ತಾನೆ ಬಸವಣ್ಣ. ಇದು ಚಾರಿತ್ರಿಕವಾಗಿ ಗಮನಿಸಬೇಕಾದ ಅಂಶ. ಹೊತ್ತಿನ ಮಾರ್ಕ್ಸ್‌‌ವಾದಿಗಳು ಇದೇ ಮಾತನ್ನ, ಇದಕ್ಕೆ ವಿರುದ್ಧವಾದ ರೀತಿಯಲ್ಲಿ ಹೇಳುತ್ತಾರೆ. ಮೊದಲು ಉತ್ಪಾದನಾ ಸಂಬಂಧಗಳು ಬದಲಾಗಲಿ, ಅದರ ಮೂಲಕ ವ್ಯಕ್ತಿಗತ ಸಂಬಂಧ ಬದಲಾಗುತ್ತದೆ, ಕ್ರಾಂತಿಯಾಗುತ್ತದೆ ಅನ್ನುತ್ತಾರೆ.

ಮಾರ್ಕ್ಸ್‌‌ವಾದಿಗಳದ್ದು ಒಂದು ಬಗೆಯಾದರೆ, ಗಾಂಧಿ, ಟಾಲ್‌ಸ್ಟಾಯ್, ಬಸವಣ್ಣ, ಮುಂತಾದವರದ್ದು ಮತ್ತೊಂದು ಬಗೆ. ಇವರು ಮೊದಲು ಹೃದಯವನ್ನು ಬದಲಿಸು, ಅನಂತರ ಉತ್ಪಾದನಾ ಸಂಬಂಧಗಳು ತಾನೇ ಬದಲಾಗುತ್ತವೆ ಅನ್ನುತ್ತಾರೆ.

 • ಪ್ರ : ಗಿರೀಶರು, ಅನಂತಮೂರ್ತಿ ಹೇಳುವ ಸಾಮಾಜಿಕ ಪರಿವರ್ತನೆಯ ಸಾಂಸ್ಕೃತಿಕ ದ್ವಂದ್ವದ ಕಡೆಗೆ ನಮ್ಮ ಗಮನ ಹರಿಸುತ್ತಿದ್ದಾರೆ ಎಂದು ನನ್ನ ಅನಿಸಿಕೆ. ಅವರ ನಾಟಕದಲ್ಲಿ ಬ್ರಾಹ್ಮಣ ತಾಯಿ, ಮಗಳು ಹರಿಜನನ್ನ ಮದುವೆಯಾಗುವ ಬಗ್ಗೆ ಆತಂಕ ವ್ಯಕ್ತಪಡಿಸುತ್ತ ಹೀಗೆ ಹೇಳುತ್ತಾಳೆ. ’ಅಯ್ಯೋ! ಅದೆಲ್ಲಾ ಸರಿ. ನನ್ನ ಮಗಳಿಗೆ ಕರ್ಪೂರದ ವಾಸನೆ ಬಂದರೇನೆ ವಾಂತಿ ಬರುತ್ತದೆ. ಅಂತಹದರಲ್ಲಿ ಸಮಗಾರರ ಮನೆಯಲ್ಲಿ ಹೇಗೆ ಬದುಕಿಯಾಳು ಅವಳುಅಂತಾಳೆ. ಗಿರೀಶರ ಪ್ರಕಾರ ಭಾಷೆ ಮತ್ತು ಜಾತಿ, ಕಸುಬು ಮತ್ತು ಜಾತಿ, ಸಮುದಾಯಗಳು ಮತ್ತೆ ಜಾತಿ ಒಂದಕ್ಕೊಂದು ಅಂಟಿಕೊಂಡಿರುವಾಗ, ಒಂದನ್ನ ಬಿಡದೆ ಇನ್ನೊಂದನ್ನ ಹೇಗೆ ಬಿಡುತ್ತೀರಿ? ಅಂದರೆ ಸಾಮಾಜಿಕವಾಗಿ ಜಾತಿಯನ್ನ ಬಿಟ್ಟರೂ ಬಿಡಬಹುದು, ಸಾಂಸ್ಕೃತಿಕವಾಗಿ ಹೇಗೆ ಬಿಡುತ್ತೀರಿ?
 • : ಅದು ಬಿಜ್ಜಳ ಕೇಳೋ ಪ್ರಶ್ನೆ. ಬಸವ, ’ಇದು ಯಾವುದೂ ನಿಜವಲ್ಲ. ಇದನ್ನ ನೀವು ಮೀರಬಹುದುಅಂತಾನೆ. ಇದನ್ನೆ ನಾನು ಭಕ್ತಿ ಎನ್ನುತ್ತೀನಿ. ಭಕ್ತಿ ಎಲ್ಲವನ್ನೂ ಕರಗಿಸಿಬಿಡುತ್ತದೆ ಎಂದು ಭಕ್ತರು ನಂಬುತ್ತಾರೆ.

ತಲೆದಂಡದ ಕಡೆಯಲ್ಲಿ ನಾನೊಂದು ದೃಶ್ಯ ಬರೆದಿದ್ದೇನೆ. ಕೆಳಜಾತಿಯ ಕೆಲಸದ ಹುಡುಗನೊಬ್ಬನನ್ನ ಹೆಗಲ ಮೇಲೆ ಏರಿಸಿಕೊಂಡು ಬಿಜ್ಜಳ, ಹುಡುಗನ ಕಣ್ಣಿಂದ ನಡೆಯುತ್ತಿರುವುದನ್ನು ಗ್ರಹಿಸಲು ಪ್ರಯತ್ನಿಸುತ್ತಾನೆ. ನಾನು ಸಾಧಿಸಲು ಹೊರಟಿದ್ದು, ಅನಂತಮೂರ್ತಿ ಹೇಳುತ್ತಿರುವ ಸ್ಥಿತಿಯನ್ನೇ. ರಾಜನ ಹೆಗಲಮೇಲೆ ಕಳಜಾತಿಯವರು ಏರಿದ ಅನ್ನುವ ಸಾಮಾನ್ಯ ರಾಜಕೀಯ ಅರ್ಥವಷ್ಟೇ ನನಗೆ ಮುಖ್ಯವಲ್ಲ. ಬಸವಣ್ಣ ಬರಬೇಕಾಗಿರುವುದು ಬಿಜ್ಜಳನ ಬಿಡುಗಡೆಗಾಗಿ. ಹಾಗಾಗಿ ಅಲ್ಲಿ ಎಷ್ಟು ಜನ ಇದ್ದಾರೆ, ಏನು ಆಗ್ತಾ ಇದೆ, ಬಸವಣ್ಣ ಯಶಸ್ವಿ ಆಗಬಲ್ಲನೇ, ಎನ್ನುವ ಎಲ್ಲಾ ಸಂಗತಿಗಳಿಗೂ ಬಿಜ್ಜಳನ ಬಿಡುಗಡೆಗೆ ಮುಖ್ಯವಾದವುಗಳೇ. ಅದನ್ನವನು, ಹೆಗಲ ಮೇಲೆ ಹೊತ್ತ ಕೆಳಜಾತಿಯ ಹುಡುಗನಿಂದ ತಿಳಿಯುವುದು ಕೂಡ ಮುಖ್ಯವಾದದ್ದು, ನಾಟ್ ಜಸ್ಟ್ ಪೊಲಿಟಿಕಲಿ.

ನನ್ನ ನಾಟಕ ನೋಡಿದ ಹೆಚ್.ವೈ.ಶಾರದಾಪ್ರಸಾದ್ ತಲೆದಂಡದಲ್ಲಿ ರಾಜಕೀಯ ಚೆನ್ನಾಗಿ ಮೂಡಿಬಂದಿದೆ ಎಂದರು. ಇಂದಿರಾಗಾಂಧಿಯವರ ಬಲಗೈಯಾಗಿದ್ದು, ರಾಜಕೀಯದಲ್ಲಿ ನುರಿತ ಶಾರದಾಪ್ರಸಾದ್ ಹೀಗೆ ಹೇಳಿದರು ಅಂದ ಮೇಲೆ ನನಗೂ ನಂಬಬೇಕು ಅನ್ನಿಸಿತು. ಶಾರದಾ ಪ್ರಸಾದರು ಅಲ್ಕಾಜಿಯವರ ಪ್ರದರ್ಶನವನ್ನ ನೋಡಿ ಹೇಳಿದ ಮತ್ತೊಂದು ಮಾತು ಕುತೂಹಲಕಾರಿಯಾಗಿದೆ. ಅಲ್ಕಾಜಿಯವರಿಗೆ ನಾಟಕದ ಬಿಟ್ರೇಯಲ್ ಅರ್ಥವಾಗಲಿಲ್ಲ ಅಂದರು.

 • : ತಲೆದಂಡ ನಾಟಕವನ್ನ ಮೆಚ್ಚಿಕೊಳ್ಳುತ್ತಲೇ, ನನಗೆ ನಾಟಕದಲ್ಲಿ ಅರ್ಥವಾಗದ ಕೆಲವು ವಿಷಯಗಳು ಉಳಿದುಬಿಟ್ಟಿದೆ ಎಂದು ಹೇಳಬೇಕಾಗುತ್ತದೆ. ಉದಾಹರಣೆಗೆ ತಲೆದಂಡದ ಎರಡು ಮುಖ್ಯ ಪಾತ್ರಗಳು ಒಂದು ರೀತಿಯಲ್ಲಿ ವಿರೋಧಿಗಳು. ಆದರೆ ಇಬ್ಬರೂ ಒಳ್ಳೆಯ ಪಾತ್ರಗಳೇ. ಬಿಜ್ಜಳನೂ ಕೆಟ್ಟವನಲ್ಲ, ಬಸವಣ್ಣನೂ ಕೆಟ್ಟವನಲ್ಲ, ಬಸವಣ್ಣನೂ ಕೆಟ್ಟವನಲ್ಲ. ಹಾಗಾಗಿ ಕೆಟ್ಟತನವನ್ನಾಚೆ ಹಾಕ್ತೀರಿ ನೀವು. ಜಗದೇವನಲ್ಲಿ ತರ್ತೀರಿ. ಜಗದೇವನಲ್ಲಿರುವ ಕೆಟ್ಟತನ ಅಷ್ಟೊಂದು ಕನ್ವಿನ್ಸಿಂಗ್ ಆಗಿ ಬಂದಿಲ್ಲ. ಅವನು ಕೆಟ್ಟವನೋ ಅಥವಾ ದುಷ್ಟನೋ? ಜಗದೇವ ಬೇಕಂತಲೇ ದುಷ್ಟತನವನ್ನು ಆವಿರ್ಭವಿಸಿಕೊಳ್ಳುತ್ತಾನೆ ತನ್ನಲ್ಲಿ. ಹಟ ಮಾಡಿ ಬಿಜ್ಜಳನನ್ನು ಕೊಲ್ಲುತ್ತಾನೆ. ಹೆಂಡತಿಯ ಹತ್ತಿರ ದುಷ್ಟತನ ಮಾಡುತ್ತಾನೆ. ಪ್ರಾಯಶಃ ಎಲ್ಲ ಮಹಾನ್ ಚಳುವಳಿಗಳಲ್ಲೂ ರೀತಿಯ ಅತಿವಾದಿಗಳು ಹುಟ್ಟಿಕೊಂಡು ಬಿಡುತ್ತಾರೆ ಅಂತ ಕಾಣುತ್ತದೆ. ಮಾರ್ಕ್ಸ್‌‌ವಾದಿಗಳ ನಡುವಿನಿಂದ ನಕ್ಸಲ್‌ವಾದಿಗಳು ಹುಟ್ಟಿಕೊಂಡ ಹಾಗೆ.
 • ಪ್ರ: ಯಾವುದೇ ಚಳುವಳಿಗಳ ಕಾರ್ಯಕರ್ತನಿರಲಿ, ಆತ ಬೇಕೆಂದೇ ದುಷ್ಟತನವನ್ನು ಅವಿರ್ಭವಿಸಿಕೊಳ್ಳುತ್ತಾನೆ ಎನ್ನುವುದನ್ನು ನಾನು ಸಂಪೂರ್ಣ ಒಪ್ಪಲಾರೆ. ನೀವು ಕೆಟ್ಟತನ ದುಷ್ಟತನ ಬೇರೆ ಮಾಡಿ ಮಾತನಾಡಿದಿರಿ. ಅರ್ಥದಲ್ಲಿ ದುಷ್ಟತನಹವನ್ನು ಫ್ಯಾಸಿಸ್‌ಮ್ ಎಂದು ಕರೆಯಬಹುದು. ಫ್ಯಾಸಿಸ್‌ಮ್ ಈಸ್ ನಾಟಕ ಪೊಲಿಟಿಕಲ್ ಆಕ್ಟಿವಿಸಮ್, ಪೊಲಿಟಿಕಲ್ ಆಕ್ಟಿವಿಸ್‌ಮ್ ಕಾಣೆಯಾದಾಗ ಮಾತ್ರ ಫ್ಯಾಸಿಸ್‌ಮ್ ಕಂಡು ಬರುತ್ತದೆ. ನಕ್ಸಲೀಯರನ್ನ ದುಷ್ಟರು ಎಂದು ಕರೆಯಲಾರೆ. ಅತಿವಾದಿಗಳು ಎಂದು ಕರೆಯಬಲ್ಲೆ.

ತಲೆದಂಡದಲ್ಲಿ ಯಾವುದೇ ಒಂದು ವ್ಯಕ್ತಿ ಅಥವಾ ಪಾತ್ರವನ್ನು ಫ್ಯಾಸಿಸ್ಟ್ ಎಂದು ಕರೆಯಬಹುದಾದರೆ, ಅದು ಸೋವಿದೇವನನ್ನ ಹೊರತು ಜಗದೇವನನ್ನಲ್ಲ.

 • ಪ್ರ : ತಲೆದಂಡದ ಜಗದೇವ ಜೀವ ವಿರೋಧಿ. ಸಾಯುತ್ತಾ ಬಿದ್ದಿರುವ ತಂದೆಯನ್ನು ಕಡೆಗಣಿಸುತ್ತಾನೆ. ಹೆಂಡತಿಯನ್ನು ಬೇಕೆಂದೇ ಗೋಳು ಹೊಯ್ದುಕೊಳ್ಳುತ್ತಾನೆ. ಬಿಜ್ಜಳನನ್ನು ವಿನಾ ಕಾರಣ ಕೊಲ್ಲುತ್ತಾನೆ. ಜಗದೇವನನ್ನು ಜೀವವಿರೋಧಿಯನ್ನಾಗಿ ಮಾಡಿ, ಅತಿವಾದಿ ಕಾರ್ಯಕರ್ತರುಗಳನ್ನು ಜೀವವಿರೋಧಿಗಳು ಎಂದು ತಾಳೆ ಹಾಕುತ್ತಿದ್ದಿರೇನೋ ಎಂದು ನನಗೆ ಅನುಮಾನವಿದೆ. ರಾಜಕೀಯ ಕಾರ್ಯಕರ್ತರುಗಳು, ಅದರಲ್ಲೂ ಅತಿವಾದಿಗಳು ರೊಮ್ಯಾಂಟಿಕ್‌ಗಳು.

ಇಲ್ಲ. ಅಬ್‌ಸ್ಟ್ರ್ಯಾಕ್ಟ್ ಆದ ವಾದಗಳ ಬೆನ್ನು ಹತ್ತಿದವರಿಗೆ ಜೀವ ವಿರೋಧಿಯಾಗುವ ಅಪಾಯ ಇದ್ದೇ ಇರುತ್ತದೆ. ಮಹಾತ್ಮಾ ಗಾಂಧಿಯನ್ನೇ ಜೀವ ವಿರೋಧಿ ಎಂದು ಕರೆದವರಿದ್ದಾರೆ. ಆತ ಹೆಂಡತಿಯ ಜೊತೆ ಮಲಗಿಕೊಳ್ಳುವುದಿಲ್ಲ ಎಂದು ಹೇಳಿದಾಗ, ಆಕೆಗೆ ಏನನ್ನಿಸಿರಬಹುದು ಎನ್ನುವ ಪ್ರಶ್ನೆಯನ್ನ ಅನೇಕ ಪಾಶ್ಚಿಮಾತ್ಯರ ಎತ್ತಿದ್ದಾರೆ. ಅಬ್‌ಸ್ಟ್ರ್ಯಾಕ್ಟ್ ವಿಚಾರಗಳ ಮೋಹ ಅತಿಯಾದರೆ, ಜೀವ ತೃಣವಾಗಿ ಕಾಣುತ್ತದೆ.

ಜಗದೇವನಿಗೆ, ಶರಣನಾಗುವುದೆಂದರೆ ಬ್ರಹ್ಮಚರ್ಯೆ ಪಾಲಿಸುವುದೂ ಎನ್ನುವ ಭ್ರಮೆಯಿದೆ. ಬಸವಣ್ಣ ಬ್ರಹ್ಮಚಾರಿಯಲ್ಲ. ಬ್ರಹ್ಮಚರ್ಯವನ್ನ ಬೋಧಿಸಲೂ ಇಲ್ಲ. ಪಂಜಾಬಿನ ಆತಂಕವಾದಿಗಳ ಹಲವು ದೌರ್ಬಲ್ಯಗಳು ಜಗದೇವನಲ್ಲೂ ಇದೆ. ಹೆಣ್ಣುಮಕ್ಕಳನ್ನು ಕೀಳಾಗಿ ಕಾಣುವುದ, ಬೆರಳು ಕೊಯ್ದುಕೊಂಡು ರಕ್ತ ಹಚ್ಚಿಕೊಳ್ಳುವುದು, ಬ್ರಹ್ಮಚರ್ಯೆ ಪಾಲಿಸುವುದು, ಹೆಂಡತಿಯ ಜೊತೆ ಮಾತನಾಡದೇ ಇರುವುದು, ಇದೆಲ್ಲ ಒಂದು ರೀತಿಯ ಸ್ಟಾಂಡರ್ಡ್ ಪ್ಯಾಟರ‍್ನ್‌ಗಳು. ಗಂಡಸುತನ ಶ್ರೇಷ್ಠ. ಗಂಡಸನ್ನ ಕೆಡಿಸಲಿಕ್ಕೆ ಇರುವ ವಸ್ತು, ಇತ್ಯಾದಿ.

ಈಗ ಮತ್ತೆ ಬ್ರಹ್ಮಚರ್ಯದ ಗದ್ದಲ ಎದ್ದಿದೆ. (ನಗು)

 • : ಹೌದಾ?

ಹೌದು ಅದೇ ಎಂ.ಎಂ.ಕಲಬುರ್ಗಿ ಅವರ ಬಗ್ಗೆ ಎದ್ದ ಗದ್ದ.

 • : ನೀಲಾಂಬಿಕೆಯ ಬಗ್ಗೆ
 • ಹೆಚ್.ಜಿ.ಸೋಮಶೇಖರ್‌: ಪ್ರಸಾದದಿಂದ ಹುಟ್ಟಿದವನು ಮನುಷ್ಯ ಸಂಬಂಧದಿಂದ ಹುಟ್ಟಿದ ಎಂದು ಕಲ್ಬುರ್ಗಿಯವರು ಹೇಳಿದರು ಎಂದು ಆತನ ಮೇಲೆ ಸಿಟ್ಟು.

ನೀಲಾಂಬಿಕೆಯ ಬಗ್ಗೆ ಇನ್ನೊಂದು ಸುಂದರವಾದ ಕಥೆಯಿದೆ. ಶಿವ ಬಸವಣ್ಣನನ್ನು ಪರೀಕ್ಷಿಸಲಿಕ್ಕಾಗಿ ಜೋಗಿಯ ರೂಪದಲ್ಲಿ ಬರುತ್ತಾನೆ. ಬಂದು, ನನಗೊಂದು ಹೆಣ್ಣು ಬೇಕು, ಕೊಡು ಎನ್ನುತ್ತಾನೆ. ಬಸವಣ್ಣ ಹೆಣ್ಣಿಗಾಗಿ ಎಲ್ಲ ಕಡೆಗೂ ಹುಡುಕುತ್ತಾನೆ. ಆದರೆ ಯಾರೂ ಲಭ್ಯವಿರುವುದಿಲ್ಲ. ವೇಶ್ಯಯರೂ ಯಾರೂ ಕೂಡಾ! (ನಗು) ಜಂಗಮ ಕೇಳಿದಾಗ ಇಲ್ಲ ಅನ್ನಲಾರದ ಬಸವಣ್ಣ ತನ್ನ ಎರಡನೆಯ ಹೆಂಡತಿಯಾದ ನಿಲಾಂಬಿಕೆಯನ್ನೇ ಕೊಟ್ಟುಬಿಡುತ್ತಾನೆ. ಶಿವ ಪ್ರಸನ್ನನಾಗಿ ನೀಲಾಂಬಿಕೆಯನ್ನು ತಿರುಗಿ ಕೊಡುತ್ತಾನೆ. ಆದರೆ ಬಸವಣ್ಣ ನೀನು ನನ್ನ ತಾಯಿಯ ಹಾಗೆ, ನಿನ್ನ ದೆಸೆಯಿಂದ ನನಗೆ ಶಿವ ಪ್ರತ್ಯಕ್ಷನಾದ, ನಿನ್ನನ್ನ ಹೆಂಡತಿಯಾಗಿ ಹೇಗೆ ನೋಡಲಿ? ಅನ್ನುತ್ತಾನೆ.

ಕಲ್ಬುರ್ಗಿಯವರು ನೀಲಾಂಬಿಕೆಯ ವಚನಗಳನ್ನ ಅರ್ಥೈಸುತ್ತ, ಆಕೆಯ ಧ್ವನಿಯಲ್ಲಿ ಕಹಿಯನ್ನ ಗುರುತಿಸುತ್ತಾರೆ. ಕಲ್ಬುರ್ಗಿಯವರು ಹಾಗೆ ಮಾಡುವ ಮುಲಕ ನೀಲಾಂಬಿಕೆಗೂ ಬಸವಣ್ಣನವರಿಗೂ ದೈಹಿಕ ಸಂಬಂಧ ಗುರುತಿಸಿದ್ದಾರೆ ಎಂಬ ಕಾರಣಕ್ಕೆ ಗದ್ದಲ ಎದ್ದಿತು.

 • : ಬ್ಲೇಕ್‌ನಿಗೆ, ತನ್ನ ತಮ್ಮ ಮೃತನಾದಾಗ, ಅವನು ಸ್ವರ್ಗಕ್ಕೆ ಏರಿದ ಹಾಗೆಯೂ, ಚಪ್ಪಾಳೆ ತಟ್ಟಿಕೊಂಡು ಏರಿದ ಹಾಗೆಯೂ ಕಂಡಿತಂತೆ. ಬ್ಲೇಕ್‌ನನ್ನು ಕೇಳಿದರೆ, ಹೌದು ನಿಜವಾಗಿ ಹಾಗೆ ಕಂಡೆ ಎನ್ನುತ್ತಿದ್ದನಂತೆ. ಇವು ಬರೇ ಪ್ರಮೇಯಗಳು ಮಾತ್ರವಲ್ಲ, ಸಾಕ್ಷಾತ್ಕಾರಗಳು ಅನ್ನಬಹುದೋ ಏನೋ. ಯೇಟ್ಸ್ ಒಂದು ಕಡೆ ಇದನ್ನ ಲಿಟರ್ಯಾಲಿಟಿ ಆಫ್ ಇಮ್ಯಾಜಿನೇಶನ್ ಅಂತಾನೆ. ಭಕ್ತಿಯಲ್ಲಿ ಒಂದು ಅಂಶ ಇದೆ. ಅಕ್ಕಮಹಾದೇವಿಗೆ ಯಾವುದೂ ಪ್ರತಿಮೆಯಲ್ಲ, ಎಲ್ಲವೂ ಸಾಕ್ಷಾತ್ಕಾರಳೇ. ಪರಮಹಂಸರಿಗೆ ಕೂಡಾ ರೀತಿಯ ಸಾಕ್ಷಾತ್ಕಾರ ಸಾಧ್ಯವಾಗಿತ್ತು. ಅವರು ಒಂದು ಸಾರಿ, ಕಾಳಿಪೂಜೆ ಮಾಡಿ ದೇವರಿಗೆ ಪ್ರಸಾದ ನೀಡುತ್ತಾರೆ. ಕಾಳಿಯ ಪ್ರತಿಮೆ ಪ್ರಸಾದ ತಿನ್ನುವುದಿಲ್ಲ. ಪರಮಹಂಸರು ದೊಡ್ಡ ಗದ್ದಲ ಮಾಡುತ್ತಾರೆ. ಅಳುತ್ತಾರೆ, ಆಗ ಒಂದು ಕಪ್ಪು ಬೆಕ್ಕು ಬಂದು ಪ್ರಸಾದ ತಿಂದುಕೊಂಡು ಹೋಗುತ್ತದೆ. ಪರಮಹಂಸರು ಕಪ್ಪು ಬೆಕ್ಕು ಕಾಳಿ ಎಂದು ತಿಳಿದು ಸಂತೋಷಪಡುತ್ತಾರೆ. (ನಗು)

ಪರಮಹಂಸರಿಗೆ ಕಪ್ಪು ಬೆಕ್ಕು ಕಾಳಿಯೇ.

 • : ಇದೊಂದು ಅದ್ಭುತ ಸಂಗತಿ. ಇದು ಬರೀ ಹಸ್ಯಾಸ್ಪದ ಅಲ್ಲ. ಮನುಷ್ಯನ ಮನಸ್ಸಿಗೆ ಇದು ಹೇಗೆ ಸಾಧ್ಯವಾಗುತ್ತೆ ಎನ್ನುವುದೇ ನನಗೆ ಅರ್ಥವಾಗುವುದಿಲ್ಲ. ನನಗೆ ಸಾಧ್ಯವಿಲ್ಲ.
 • ಪ್ರ : ನಿಮ್ಮ ವಾರಿಗೆಯ ಹಿಂದೀ ಲೇಖಕ ನಿರ್ಮಲ ವರ್ಮ ಹೇಳಿಕೊಳ್ಳುವುದನ್ನ ಕೇಳಿದ್ದೀರಲ್ಲ ನೀವು. ಅವರು ಹಾಗೂ ಆತನ ಸ್ನೇಹಿತರೊಬ್ಬರು ಮಥುರಾಕ್ಕೆ ಹೋಗಿದ್ದಾಗ, ಮಥುರಾದ ಬೀದಿಗಳಲ್ಲಿ ದಾರಿ ತಪ್ಪಿ ಬಿಟ್ಟರಂತೆ. ಆಗ ಬಾಲಕೃಷ್ಣ ಬಂದು ಬಸ್‌ಸ್ಟ್ಯಾಂಡ್ ತೋರಿಸಿ ಹೋದನಂತೆ. (ನಗು) ಪರಮಹಂಸರಿಗೆ ಪ್ರತಿಮೆ ಸಾಕ್ಷಾತ್ಕಾರವಾಗುವ ಮಾತನ್ನ ಒಪ್ಪಿಕೊಳ್ಳಬಹುದೋ ಏನೋ. ನಿರ್ಮಲ ವರ್ಮ ಅವರಿಗೆ ಮುದ್ದುಕೃಷ್ಣ ಹಾದಿ ತೋರಿಸಿದ ಎಂಬ ಮಾತನ್ನು ಒಪ್ಪಿಕೊಳ್ಳುವುದು ಕೊಂಚ ಕಷ್ಟ.
 • : ಹಿಂದೆಯೂ ಹೀಗೆಯೇ ಇತ್ತು ಪ್ರಸನ್ನ. ಬ್ಲೇಕ್ ನ್ಯೂಟನ್ನನನ್ನ ತುಂಬಾ ಬಯ್ತಾನೆ. ಶನಿ ಬಂದು ನಮ್ಮನ್ನೆಲ್ಲಾ ಹಾಳು ಮಾಡಿದ ಅನ್ನುತ್ತಾಳೆ. ಯೇಟ್ಸ್ ಕೂಡಾ ಆಧುನಿಕ ಯುಗ ನಂಬುವ ಶಕ್ತಿಯನ್ನೇ ಕಳೆದುಬಿಟ್ಟಿದೆ ಎಂದು ಹಳಹಳಿಸುತ್ತಾನೆ. ಆದರೆ ಯೇಟ್ಸ್‌ನಿಗೆ ನಿಮಗಿರುವಂತೆ ಅನುಮಾನವಿತ್ತು. ಅವನು ತನ್ನ ಅನುಮಾನದ ಬಗ್ಗೆ ಸುಖಪಡುತ್ತಿರಲಿಲ್ಲ ಅಷ್ಟೆ.

ಹೌದು, ಟಾರ್ಚರ್ ಆಫ್ ಫೈತ್. ನಮ್ಮ ನಂಬಿಕೆಗಳನ್ನು ಉಳಿಸಿಕೊಳ್ಳುವುದೇ ಒಂದು ದೊಡ್ಡ ಟಾರ್ಚರ್. ಒಂದು ಕತೆಯಿದೆ. ಗುರು-ಶಿಷ್ಯರ ಕತೆ. ಶಿಷ್ಯನಿಗೆ ಸದೇಹವಾಗಿ ವೈಕುಂಠ ಸೇರಬೇಕು ಎನ್ನುವ ಆಸೆ ಆಗುತ್ತದೆ. ಗುರುವನ್ನು ಕೇಳುತ್ತಾನೆ. ಗುರು, ನಾಲ್ಕು ರಸ್ತೆ ಸೇರುವ ಒಂದು ಜಾಗ ತೋರಿಸಿ, ’ಇಲ್ಲಿ ನೀನು ಹತ್ತು ವರ್ಷ ಕೂತುಕೊಂಡಿದ್ರೆ, ಸದೇಹವಾಗಿ ವೈಕುಂಠಕ್ಕೆ ಹೋಗುತ್ತೀಯಾ’ ಎಂದು ಹೇಳಿ ಹೋಗಿಬಿಡ್ತಾನೆ. ಹತ್ತು ವರ್ಷ ಎಲ್ಲೆಲ್ಲೋ ಸುತ್ತು ಹಾಕಿಕೊಂಡು ಗುರು, ತಿರುಗಿ ಅದೇ ಸ್ಥಳಕ್ಕೆ ಬಂದು ನೋಡುತ್ತಾನೆ – ಶಿಷ್ಯ ಇನ್ನೂ ಅಲ್ಲೇ ನಾಲ್ಕು ರಸ್ತೆ ಸೇರುವಲ್ಲೇ ಕೂತಿರುತ್ತಾನೆ. ಗುರುವಿಗೆ ಆ ದೃಶ್ಯ ಕಂಡು ಬಹಳ ದುಃಖವಾಗುತ್ತದೆ. ’ಅರೆ, ಇವನನ್ನು ಹುಚ್ಚನನ್ನಾಗಿ ಮಾಡಿಬಿಟ್ಟೆನಲ್ಲಾ’ ಅನ್ನಿಸಿ, ತನ್ನ ತಪ್ಪಿಗೆ ಕ್ಷಮೆ ಕೇಳಬೇಕೆಂದು ಅವನತ್ತ ಹೊರಡುತ್ತಾನೆ. ಆ ಕ್ಷಣಕ್ಕೆ ವೈಕುಂಟದಿಂದ ವಿಮಾನವೊಂದು ಇಳಿದು ಬಂದು, ಶಿಷ್ಯನನ್ನೆತ್ತಿಕೊಂಡು ಹೊರಡಲು ಸಿದ್ಧವಾಗುತ್ತದೆ. ಅದನ್ನು ನೋಡಿದ ಗುರು, ಶಿಷ್ಯನ ಕಾಲು ಹಿಡಿದುಕೊಂಡು ತಾನೂ ಸದೇಹವಾಗಿ ವೈಕುಂಠ ಸೇರಬೇಕೆಂದು ಓಡುತ್ತಾನೆ (ದೊಡ್ಡ ನಗು)

 • : ಸ್ವಲ್ಪವಿಷಯ ಪಲ್ಲಟ ಮಾಡಬಹುದು ಅಂತ ಕಾಣುತ್ತೆ. ಗಿರೀಶರ ವಿಮರ್ಶಾð ಲೇಖನಗಳ ಬಗ್ಗೆ ಪ್ರಸ್ತಾಪ ಮಾಡಬೇಕು. ಹೆಚ್ಚಿನವ ವಿಮರ್ಶೆ ಕೇವಲ ಜಡ್ಜ್‌‌ಮೆಂಟಲ್ ಆಗ್ಬಿಡುತ್ತೆ. ಗಿರೀಶ್ ಕಡಿಮೆ ಬರೆದಿದ್ರೂನೂ ಅವರಿಗೆ ಕೃತಿಯೊಳಗಿನ ಸೃಜನಾತ್ಮಕ ಪ್ರಕ್ರಿಯೆಯನ್ನು ಗುರುತಿಸಲಿಕ್ಕೆ ಸಾಧ್ಯವಾಗಿದೆ. ರುಜುವಾತುವಿನಲ್ಲಿ ಹಿಂದೆ ಪ್ರಕಟವಾಗಿತ್ತಲ್ಲ ಹಿಟ್ಟಿನ ಕೋಳಿ ಅನ್ನುವ ಲೇಖನ.

ಹೌದು, ಆ ಲೇಖನ ನನ್ನ ನಾಟಕದ ಬಗ್ಗೆ ಅಲ್ಲಾ ಎಂದು ತೋರಿಸಲಿಕ್ಕೆ ’ಹಿಟ್ಟಿನ ಕೋಳಿ’ ಎಂದು ಕರೆದಿದ್ದೆ.

 • : ಲೇಖನ ತುಂಬಾ ಚೆನ್ನಾಗಿದೆ. ಹಾಗೇನೇ, ಕಾಕನಕೋಟೆ ನಾಟಕದ ಬಗ್ಗೆ ನೀವು ಬರೆದಿರೋ ವಿಮರ್ಶೆ. ನೀವು ಇನ್ನೊಂದು ಲೇಖನ ಬರೆದಿದ್ದೀರಂತೆ, ನಾನು ಓದಿಲ್ಲ.

ಶ್ರೀ ರಂಗರ ಹರಿಜನ್ವಾರ ಕುರಿತ ಲೇಖನವದು. ಮನ್ವಂತರದಲ್ಲಿ ಬಂದಿದೆ.

 • ಪ್ರ : ನನಗೊಂದು ಪ್ರಶ್ನೆ ಕಾಡುತ್ತಿದೆ. ಗಿರೀಶರು, ಕನ್ನಡದಲ್ಲಿ ಇಷ್ಟೆಲ್ಲಾ ನಾಟಕ ಬರೆದಿದ್ದಾರೆ. ಇತರ ಕನ್ನಡ ಲೇಖಕರ ಕೃತಿಗಳ ವಿಮರ್ಶೆ ಮಾಡಿದ್ದಾರೆ, ಸಂವಾದ ನಡೆಸಿದ್ದಾರೆ. ಆದರೂ, ಎಲ್ಲೋ ಕನ್ನಡದ ಜಾಯಮಾನದಿಂದ ಹೊರಗೆ ಉಳಿದು ಬಿಡುತ್ತಾರೆ. ಇನ್‌ಫ್ಯಾಕ್ಟ್, ಹಿ ಡಸ್‌ನಾಟ್ ವಾಂಟ್ ಟು ಬಿ ಆನ್ ಇನ್‌ಸೈಡರ್ ಇನ್ ಕನ್ನಡ. ಚಂಪಾ, ಮಾತನ್ನು ಅತಿರೇಕಕ್ಕೆ ಒಯ್ದು, ಗಿರೀಶರು ಕನ್ನಡದಲ್ಲಿ ಬರೆಯುವುದೇ ಇಲ್ಲ ಅನ್ನುತ್ತಾರೆ.

ನನ್ನ ತಲೆಮಾರಿನ ಅನಂತಮೂರ್ತಿ, ಲಂಕೇಶ್ ಅಥವಾ ತೇಜಸ್ವಿ, ಕನ್ನಡ ಸಂಸ್ಕೃತಿಯೊಳಗೆ ಇನ್‌ವಾಲ್ವ್ ಆದ ಹಾಗೆ ನಾನು ಆಗಿಲ್ಲ. ಏಕೆ ಎಂದು ನನಗೆ ಗೊತ್ತಿಲ್ಲ. ಆಗೋಕೆ ಸಾಧ್ಯವೂ ಆಗಿಲ್ಲ. ಪ್ರಾಯಶಃ ಅನಂತಮೂರ್ತಿ, ಲಂಕೇಶ್ ಅವರೆಲ್ಲಾ ಯೂನಿವರ್ಸಿಟಿಗಳಲ್ಲಿ ಕಳೆದರು ಅನ್ನುವುದು ಕಾರಣವಿರಬಹುದು.

 • ಪ್ರ: ಇಲ್ಲ. ಇದು ಬರೇ ವೃತ್ತಿಯ ಸಮಸ್ಯೆ ಮಾತ್ರ ಅಲ್ಲ. ನಿಮ್ಮ ಕೃತಿಯ ಸಮಸ್ಯೆಯೂ ಹೌದು. ಕೃತಿಯ ವಸ್ತುವಿನ ಆಯ್ಕೆಯ ಸಮಸ್ಯೆಯೂ ಹೌದು. ಅನಂತಮೂರ್ತಿ, ನಿಮಗಿಂತ ಹೆಚ್ಚು ವೆಸ್ಟರ್ನೈಸ್ ಆಗಿದ್ದಾರೆ, ನಿಮಗಿಂತ ಹೆಚ್ಚು ಪರದೇಶಗಳಲ್ಲಿ ಓಡಾಡುತ್ತಾರೆ. ಆದರೂ ಅವರಿಗೆ ಹೊರಗಿನವನಾಗುವ ಸಮಸ್ಯೆ ಇಲ್ಲ.

ಯಯಾತಿ ಬರೆಯುವ ತನಕ, ನಾನು ಕನ್ನಡದಲ್ಲಿ ಬರೆಯುತ್ತೀನಿ ಅಂದುಕೊಂಡಿರಲೆ ಇಲ್ಲ. ಇಂಗ್ಲಿಷ್‌ನಲ್ಲಿ ಬರೆಯುತ್ತೇನೆ, ಅಂತರರಾಷ್ಟ್ರೀಯ ಕವಿಯಾಗುತ್ತೇನೆ ಎನ್ನುವ ಆಸೆ ನನಗಿತ್ತು. (ನಗು) ಇಂಗ್ಲೆಂಡಿಗೆ ಹೋಗುವವರೆಗೆ, ನಾನು ತಿರುಗಿ ಬರುವುದಿಲ್ಲವೆಂದೇ ತಿಳಿದಿದ್ದೆ. ಆದರೆ ಅಲ್ಲಿ, ಬರೇ ಎಲಿಯಟ್, ಆಡೆನ್‌ಗಳನ್ನು ಓದುವ ದೇಶದಲ್ಲಿ, ನಾನು ಬರೆಯಲು ಶುರು ಮಾಡಿದಾಗ, ಇದ್ದಕ್ಕಿದ್ದಂತೆ ಕನ್ನಡ ಬಂತು. ಸೋ, ಯಯಾತಿ ನಾಟಕ ಬರೆಯಲು ಕೂತಾಗ, ಅದು ಕನ್ನಡದಲ್ಲಿ ಬಂದುಬಿಟ್ಟಿತು. ಸಡನ್‌ಲಿ, ಐ ರಿಯಲೈಸ್‌ಡ್ ದಟ್ ಐ ಆಮ್‌ ಕಂಡೆಮ್ನ್‌ಡ್ ಟು ಮೈ ಲಾಂಗ್ವೇಜ್. ಇದಕ್ಕೆ ಬಿಡುಗಡೆ ಇಲ್ಲ.

 • : ನಿಮ್ಮ ನಿಶ್ಚಯಕ್ಕೆ ರಾಮಾನುಜನ್ ಕಾರಣರೇನು?

ಇಲ್ಲ, ಆಗಿನ್ನೂ ರಾಮಾನುಜನ್ ಪ್ರಭಾವ ಅಷ್ಟಿರಲಿಲ್ಲ. ಅದೂ ಅಲ್ಲದೆ ಅವರೂ ಕೂಡಾ ಆಗ ಇಂಗ್ಲಿಷಿನಲ್ಲಿ ಬರೆಯುತ್ತಿದ್ದರಲ್ಲ. ಅವರೂ ಕೂಡ ಅಮೇರಿಕೆಗೆ ಹೊರಟಿದ್ದರು. ನನಗೆ ಈಗಲೂ ನಾಟಕ ಅಂದ್ರೆ ಕಂಪನಿ ನಾಟಕವೇ! ಸಣ್ಣಂದಿನಿಂದಲೂ ಕಂಪನಿ ನಾಟಕ ನೋಡಿ ನೋಡಿ ಅದೇ ಇಮೇಜ್ ಉಳಿದುಬಿಟ್ಟಿದೆ. ಆಧುನಿಕ ನಾಟಕ ಎಂದು ಯೋಚನೆ ಮಾಡಿದರೂ, ಕಂಪೆನಿ ನಾಟಕದಿಂದಲೇ ಹೊರಟು ಬರಬೇಕು ನಾನು. ನಾಟಕ ಬರೆಯಬೇಕು ಅನ್ನುವುದೇ ನನ್ನ ಜಾಯಮಾನವಾಗಿದ್ರಿಂದ, ಹಾಗೂ ನಾನು ನೋಡಿದ ಅಷ್ಟೂ ನಾಟಕಗಳು ಕನ್ನಡದವೇ ಆಗಿದ್ದರಿಂದ, ಬಹುಶಃ ಯಯಾತಿ ಕನ್ನಡದಲ್ಲೆ ಘಟಿಸಿರಬಹುದು. ಇಂಗ್ಲೆಂಡಿನಿಂದ ಬಂದೆ, ಬಂದ ಮೇಲೆ ಕನ್ನಡದಲ್ಲಿ ತುಘಲಕ್ ಬರೆದೆ.

ನನ್ನ, ಔಟ್‌ಸೈಡರ್ ಎನ್ನುವ ಭಾವನೆಗೆ, ನಾನು ಸಾರಸ್ವತ ಎಂಬುದೂ ಕಾರಣವಿಬರಬಹುದು. ಸಾರಸ್ವತರ ಕಮ್ಯುನಿಟಿಯೆ ಹಾಗೆ. ಇಟ್ ಹ್ಯಾಸ್ ಆಲ್ವೇಸ್ ರಿಮೆಯ್ನಡ್ ಪೆರಿಫೆರಲ್. ಪಂಜೆ ಮಂಗೇಶರಾಯರ ಪೀಳಿಗೆಯನ್ನು ಬಿಟ್ಟರೆ, ಉಳಿದವರೆಲ್ಲಾ ಅರ್ಧ ಮರಾಠೀ, ಅರ್ಧ ಕನ್ನಡ-ಜತೆಗೆ ಮನೆ ಮಾತು ಕೊಂಕಣಿ, ಈ ಜನಾಂಗ ಇಡಿಯಾಗಿ ಕನ್ನಡ ಚಳುವಳಿಯ ಭಾಗಿ ಆಗಿಯೇ ಇಲ್ಲ. ನನಗೆ ನಿಜವಾಗಿ ಕನ್ನಡ ಸಂಸ್ಕೃತಿ ಮೊದಲು ಪರಿಚಯವಾಗಿದ್ದು, ಸಂಸ್ಕಾರದಲ್ಲಿ ಇನ್‌ವಾಲ್ವ್ ಆದಾಗ. ಸಂಸ್ಕಾರ ಸಿನಿಮಾ ಮಾಡಬೇಕೆಂದು, ಸಂಸ್ಕಾರ ಪುಸ್ತಕ ಓದಿದ ಮೇಲೆ, ಆನಂತರವೇ ನನ್ನ ಓದು, ಒಡನಾಟ ಶುರುವಾದದ್ದು, ಧಾರವಾಡದಲ್ಲಿ ಮನೋಹರ ಗ್ರಂಥಮಾಲೆಯ ಕೆಲವರ ಪರಿಚಯವಿತ್ತಷ್ಟೆ, ಇಲ್ಲದಿದ್ದರೆ, ಮದರಾಸಿನಲ್ಲಿ ಇರ್ತಿದ್ದೆ ನಾನು. ಸಂಸ್ಕಾರ ನನ್ನ ಮೇಲೆ ತುಂಬ ಪರಿಣಾಮ ಬೀರಿದೆ.

 • : ನನಗೆ ಜಾತಿ ಬಿಟ್ಟು ಮದುವೆಯಾಗುವ ಸಂದರ್ಭದಲ್ಲಿ ತುಂಬ ಕಷ್ಟವಾಯ್ತು. ಗಿರೀಶರಿಗೆ ಅವರ ತಂದೆಯ ಕಾಲದಿಂದಲೇ ರೀತಿಯ ಬಿಡುಗಡೆಗಳು ಆಗಿ ಹೋಗಿದ್ದವು. ನಾಳೆ, ನನ್ನ ಮಗನಿಗೆ ಏನೊಂದು ಸ್ಥಿತಿ ಸಾಧ್ಯವೋ ಅದನ್ನು ಗಿರೀಶರು ಆಗಲೇ ದಾಟಿಬಿಟ್ಟಿದ್ದರು.

ನನ್ನ ತಾಯಿ ಒಬ್ಬ ವಿಧವೆ, ಹತ್ತೊಂಬತ್ತನೇ ವಯಸ್ಸಿಗೇ ಗಂಡನನ್ನ ಕಳೆದುಕೊಂಡರು. ಆಕೆ ೧೯೨೧ ರಲ್ಲಿ ವಿಧವೆಯಾದರು. ೧೯೩೧ ರಲ್ಲಿ ನನ್ನ ತಂದೆಯನ್ನು ಲಗ್ನವಾದರು. ಅವರ ಮೊದಲ ಮದುವೆಯ ಮಗ, ನನ್ನ ದೊಡ್ಡಣ್ಣ ಇದ್ದಾನೆ. ಅವನೂ ಕಾರ್ನಾಡ್ ಎಂದೇ ಕರೆದುಕೊಳ್ಳುತ್ತಾನೆ. ನಿಜವಾಗಿಯೂ ಅವನು ಗೋಕರ್ಣ ಎಂದಾಗಬೇಕು. ನನ್ನ ತಾಯಿ ಎರಡನೆಯ ಲಗ್ನವಾಗಿ, ನಾವೆಲ್ಲ ಹುಟ್ಟಿದ ಮೇಲೆ, ಅಣ್ಣತಮ್ಮಂದಿರಲ್ಲಿ ಗದ್ದಲ ಬ್ಯಾಡಾ ಅಂತ, ಅವನೂ ಕಾರ್ನಾಡ್ ಎಂದೇ ಹೇಳಿಕೊಳ್ಳಲಾರಂಭಿಸಿದ. ಬಾಲಚಂದ್ರ ರಘುನಾಥ್ ಕಾರ್ನಾಡ್ ಎಂದವನ ಹೆಸರು. ನಮ್ಮ ತಂದೆ ತೀರಿಕೊಂಡಾಗ ಒಂದು ದೊಡ್ಡ ಸಮಸ್ಯೆ ಎದುರಾಯ್ತು. ತಂದೆಯ ಚಿತೆಗೆ ದೊಡ್ಡ ಮಗ ಅಗ್ನಿ ಕೊಡಬೇಕು, ಇಲ್ಲವೇ ಸಣ್ಣವನು ಕೊಡಬೇಕು. ಸಣ್ಣವನು ಅಂದ್ರೆ ನಾನು ಕೊಡಬೇಕು. ನಾನು ಕೊಡುವುದಿಲ್ಲ ಅಂದೆ. ಯಾಕೆಂದರೆ, ನಮ್ಮ ತಂದೆಗೆ ಇದರಲ್ಲೆಲ್ಲಾ ವಿಶ್ವಾಸ ಇದ್ದಿರಲಿಲ್ಲ. ತಿಥಿ-ಗಿಥಿ ಎಲ್ಲಾ ಮಾಡೋದಿಲ್ಲ ಅಂತಿದ್ರು ಅವರು. ಆದರೆ ನಮ್ಮ ತಾಯಿಗೆ ರಿಚ್ಯುವಲ್ ಬೇಕಿತ್ತು. ಆಗ ದೊಡ್ಡ ಮಗ ಯಾರು ಅನ್ನುವ ಪ್ರಶ್ನೆ ಬಂತು. ಆಗ ನಾನು, ಬಾಲಚಂದ್ರನೆ ಮಾಡಲಿ ಅಂದೆ. ಪುರೋಹಿತರೆಲ್ಲಾ ಬಹಳ ಗದ್ದಲ ಎಬ್ಬಿಸಿದರು. ಪುರೋಹಿತರ ದೃಷ್ಟಿಯಲ್ಲಿ ಅಂವಾ ಮಗ ಅಲ್ಲ, ನಮ್ಮ ದೃಷ್ಟೀಲಿ ಅಂವಾ ಮಗ ಅಷ್ಟೇ; ಕಾರ್ನಾಡ್ ಅಷ್ಟೇ. ಸಾರಸ್ವತ ಜನಾಂಗ ಸಾಕಷ್ಟು ಅರ್ಬನೈಸ್ ಆಗಿಬಿಟ್ಟಿದೆ. ಜಾತಿ, ಸಂಪ್ರದಾಯಗಳ ಕಟ್ಟು ಸಡಿಲಾಗಿದೆ.

ಹಾಗಾಗಿ ನಾನು ಕನ್ನಡದ ಒಳಗೆ ಬಂದದ್ದು ತೀರಾ ತಡವಾಗಿ; ಸಂಸ್ಕಾರ ಒಂದು ರೀತಿಯ ಕನ್ನಡ ಸಮಾಜದ ಚಿತ್ರಣವಾದರೆ, ಕಾಡು ಮತ್ತೊಂದು ಸಮಾಜದ ಚಿತ್ರಣ. ಅಬ್ರಾಹ್ಮಣ ಸಮಾಜ ಒಕ್ಕಲಿಗರು, ಗೌಡರು. ಆ ಸಿನಿಮಾ ಮಾಡುತ್ತಿದ್ದಾಗ ಕೃಷ್ಣ (ಕೃಷ್ಣ ಆಲನಹಳ್ಳಿ) ಎದುರಿಗೇ ಇರ್ತಿದ್ದ. ಒಂದು ದಿನ ಮೇಕಪ್ ನಡೀತಿದ್ದಾಗ ಬಂದು, ಬಸಕ್ಕ ವಿಭೂತಿ ಹಾಕ್ಕೋಬೇಕು ಅಂದ. ಆಮೇಲೆ ಶಿವಗಂಗನೂ ಹಾಕ್ಕೋಬೇಕು ಅಂದ. ನಾನು, ಇಲ್ಲ ಬಸಕ್ಕ ಯಾಕೆ ವಿಭೂತಿ ಹಾಕ್ಕೋಬೇಕು ಅಂತ ಕೇಳಿದೆ. ಅದಕ್ಕವನು – ಆಕೆ ಲಿಂಗವಂತೆ, ವೀರಶೈವಳು ಅಂದ. ನಾನಂದೆ – ಇಲ್ಲ ಕೃಷ್ಣ, ಕ್ಲಿಯರ್ ಆಗಿ ಹೇಳು – ಇದರಲ್ಲಿ ಯಾರು, ಎಷ್ಟು ಜನ ಲಿಂಗಾಯಿತರು, ಎಷ್ಟು ಜನ ಗೌಡರು ಅಂದ್ರೆ, ಅಂವಾ ಅಂತಾನೆ – ’ಒಳ್ಳೆ ಪಾತ್ರಗಳು ಎಲ್ಲಾ ಗೌಡ್ರು’ (ದೊಡ್ಡ ನಗು). ಆ ಕಥೆಯಲ್ಲಿ ಬರುವ, ಸೂಳೆಯಾಗಿ ಇಟ್ಟುಕೊಂಡಿರುವಾಕೆ. ರೇಪ್ ಮಾಡುವ ಶಿವಗಂಗಾ ಇವರೆಲ್ಲಾ ಲಿಂಗಾಯಿತರು, ಕೃಷ್ಣನ ಪ್ರಕಾರ. ನಾನೆಂದೆ, ’ಇದು ನಿನ್ನ ಸೋಶಿಯಾಲಜಿ ಇರಬಹುದು. ನಾನಿದನ್ನು ಸಿನಿಮಾದಲ್ಲಿ ಹಾಕಿಕೊಳ್ಳೋದಿಲ್ಲ’ ಅಂತ. ಎಲ್ಲಾ ಪಾತ್ರಗಳನ್ನು ಗೌಡರನ್ನಾಗಿಯೇ ಮಾಡಿದೆ. ಕೃಷ್ಣ ವಾಸ್ ಟು ಸಮ್ ಎಕ್ಸ್‌ಟೆಂಟ್ ಸಿಂಪಲ್ ಮೈಂಡೆಡ್ ಇನ್ ಹಿಸ್ ನೋಶನ್ಸ್.

 • : ಪಾರ್ಟ್ ಆಫ್ ಹಿಮ್

ಕಾಡು ಕಾದಂಬರಿಯ ಜಾತಿಗಳ ಒಳಸುಳಿಗಳನ್ನು ಮರೆತು ನೋಡಿದರೆ, ಆಗ ಅದರಲ್ಲಿಯೇ ಒಂದು ವರ್ಗಶ್ರೇಣೀ ಗೋಚರಿಸುತ್ತದೆ. ಉದಾ – ಚಂದ್ರೇಗೌಡನನ್ನು ಅಟ್ಯಾಕ್ ಮಾಡಬೇಕಾದ್ರೆ ಶಿವಗಂಗ, ಚಂದ್ರೇಗೌಡನ ಕಾಳು ಕಡಿ ಸುಡುವುದಿಲ್ಲ, ಚಂದ್ರೇಗೌಡನ ಆಳು ಮಕ್ಕಳಿಗಾಗಿ ಇಟ್ಟಿರುವ ಕಾಳು ಕಡಿ ಸುಡುತ್ತಾನೆ. ಹಾಗೇನೇ, ಶಿವಗಂಗ, ಚಂದ್ರೇಗೌಡನನ್ನು ಅಟ್ಯಾಕ್ ಮಾಡುವುದಿಲ್ಲ, ಅವನ ಹೆಂಡತಿಯನ್ನು ಅಟ್ಯಾಕ್ ಮಾಡುತ್ತಾನೆ. ಆ ಕಾದಂಬರಿಯಲ್ಲಿ ಬರುವ ಬಲಾತ್ಕಾರದ ದೃಶ್ಯವನ್ನೇ ಗಮನಿಸಿ – ಶಿವಗಂಗನಿಗೆ ಗೌಡತಿಯ ಮೇಲೆ ಮೋಹವೇನೂ ಇರುವುದಿಲ್ಲ. ಇಟ್ ಈಸ್ ನಾಟ್ ಎ ಸೆಕ್ಯುವಲ್ ರೇಪ್, ಇಟ್ ಈಸ್ ಒನ್ ವೇ ಆಫ್ ಹ್ಯುಮಿಲಿಯೇಟಿಂಗ್ ಚಂದ್ರೇಗೌಡ.

 • : ಆರ್.ಕೆ. ನಾರಾಯಣರ ಕಾದಂಬರಿಗಳಲ್ಲಿ ಕೂಡ ಹೀಗೇನೆ. ಅಲ್ಲಿ ಜಾತಿಗಳಿಲ್ಲ. ಹಾಗಾಗಿಯೇ ಮಾಲ್ಗುಡಿಯನ್ನ, ಇಡೀ ಭಾರತ ದೇಶಕ್ಕೇ ಅನ್ವಯಿಸುವ ಮಾದರಿ ಹಳ್ಳಿ ಎಂದು ನಂಬಿಸುವುದು ಸುಲಭವಾಗುತ್ತದೆ. ನಾರಾಯಣ್, ಜಾತಿಉಪಜಾತಿಗಳ ಪ್ರಪಂಚವನ್ನು ಸಪ್ರೆಸ್ ಮಾಡಿ, ಮತ್ತೊಂದು ರೀತಿಯ ಸತ್ಯ ಎದ್ದು ಕಾಣುವಂತೆ ಮಾಡುತ್ತಾರೆ.
 • ಪ್ರ : ಹೀಗೆ ಸಪ್ರೆಸ್ ಮಾಡುವ ತಂತ್ರ, ಕೆಲವೊಮ್ಮೆ ಕೃತಿಯ ಸಂರ್ಕೀನತೆಗೆ ಅಡ್ಡ ಬರುತ್ತದೆ. ಉದಾವಿಜಯ ತೆಂಡೂಲ್ಕರ್‌ರ ಘಾನ್ಶೀರಾಂ ಕೊತ್ವಾಲ್‌ ನಾಟಕ ತೆಗೆದುಕೊಳ್ಳಿ ಇಡೀ ನಾಟಕದಲ್ಲಿ ಎಲ್ಲರೂ ಬ್ರಾಹ್ಮಣರೇ: ಕೋರಸ್‌ನ ಹಾಡುಗಾರರೂ ಬ್ರಾಹ್ಮಣರೇ, ಗೋಡೆಯೂ ಬ್ರಾಹ್ಮಣರೆ, ರಾಜನೂ ಬ್ರಾಹ್ಮಣನೆ, ಕೆಟ್ಟವನು ಒಳ್ಳೆಯವನು ಎಲ್ಲಾ ಬ್ರಾಹ್ಮಣರೇ. ಹೀಗಾಗಿ: ಅದೊಂದು ವಿಚಿತ್ರವಾದ, ಅಸಹಜವಾದ ಪರಿಸ್ಥಿತಿ, ಪೇಶ್ವೆಗಳ ಕಾಲ ನಿಜವಾಗಿಯೂ ಹಾಗಿರ್ಲಿಲ್ಲ. ಪೇಶ್ವೆಗಳ ಕಾಲದಲ್ಲಿ ಡಿಕೆಡೆನ್ಸ್ ಯಾವ ರೀತಿಯದ್ದಾಗಿತ್ತು ಅಂತ ನೋಡಬೇಕಾದರೆ, ಬೇರೆ ಜಾತಿಗಳ ಜತೆಗೆ, ಬ್ರಾಹ್ಮಣ ಆಳುವ ವರ್ಗವನ್ನು ಇಟ್ಟು ನೋಡಬೇಕು.

ಜತೆಗೆ, ಬ್ರಾಹ್ಮಣರೂ ಕೂಡಾ ಒಂದು ನೋನೋಲಿತ್ ಅಲ್ಲ. ಆ ನಾಟಕದಲ್ಲಿ ಎಲ್ಲರೂ ಚಿತ್ಪಾವನ ಬ್ರಾಹ್ಮಣರೇ ಎನ್ನುವಂತೆ ತೆಂಡೂಲ್ಕರ್ ತೋರಿಸಿಬಿಟ್ಟಿದ್ದಾರೆ. ಮರಾಠಿ ಬ್ರಾಹ್ಮಣರಲ್ಲೂ ಇಂಟರ್‌ನಲ್ ಟೆನ್ಶನ್ ಬಹಳ ಇತ್ತು.

 • : ನಮ್ಮಲ್ಲಿ ನೋಡಿ ಮೈಸೂರಿನಲ್ಲಿ ಮೊದಲು ಮೀಸಲಾತಿಯನ್ನು ಕೇಳಿದವರು ಮೈಸೂರು ಬ್ರಾಹ್ಮಣರು, ಮೈಸೂರಿನ ಶೂದ್ರರಲ್ಲ! ಏಕೆಂದರೆ, ತಮಿಳುನಾಡಿನಿಂದ ಬಂದ ಬ್ರಾಹ್ಮಣರು ಇಲ್ಲಿ ಆಳ್ತಾ ಇದ್ರಲ್ಲ, ಸ್ಥಳೀಯರಿಗೊಂದು ಮೀಸಲಾತಿ ಬೇಕು ಅಂತ ಮೈಸೂರು ಬ್ರಾಹ್ಮಣರ ವಾದ. (ನಗು) ಸಮಾಜದಲ್ಲಿ ಇಷ್ಟೊಂದು ಒಳಸುಳಿಗಳಿರುವಾಗ, ಲೇಖಕ ಒಳಸುಳಿಗಳ ಬಗ್ಗೆ, ಎಷ್ಟು ಸ್ಪೆಸಿಫಿಕ್ ಆಗಿರ್ಬೇಕು, ಎಷ್ಟು ಜನರಲ್ ಆಗಿ ಬರೆಯಬೇಕು ಎಂದು ನಿರ್ಧರಿಸಬೇಕಾಗುತ್ತದೆ.

ಪ್ರ : ಗಿರೀಶರು ಸಾರಸ್ವತರ ಬಗ್ಗೆ ಹೇಳುತ್ತಾ ಇರುವ ಮಾತುಗಳು ನನಗೆ ಯಹೂದ್ಯ ಜನಾಂಗದ ನೆನಪನ್ನು ತರುತ್ತಿದೆ.

 • : ನೀವು ಏನನ್ನು ಗಿರೀಶರ ಸಮಸ್ಯೆ ಎಂದು ಗುರ್ತಿಸ್ತೀರೋ ಅಥವಾ ಏನನ್ನು ನನ್ನಲ್ಲಿ, ಲಂಕೇಶರಲ್ಲಿ, ತೇಜಸ್ವಿಯಲ್ಲಿ ಗುಣ ಎನ್ನಬಹುದೋ, ಅದೇ ನನಗಿವತ್ತು ಸಮಸ್ಯೆಯಾಗಿದೆ. ಗುಣವನ್ನು ಬಿಟ್ಟು ಬರೆಯದೇ ಹೋದರೆ ನನಗೆ ಹೊಸದನ್ನು ಹೇಳುವುದಕ್ಕೆ ಸಾಧ್ಯವಾಗುವುದಿಲ್ಲ.

ನಾನು ಈಗ ಯೋಚನೆ ಮಾಡುತ್ತಿರುವ ಹೊಸ ನಾಟಕ, ನನ್ನದೇ ಸಮಾಜಕ್ಕೆ ಸಂಬಂಧಿಸಿದ್ದು. ಸುಮಾರು ೨೦ ವರ್ಷಗಳ ಹಿಂದೆ, ನನ್ನ ತಂದೆಯ ತಂಗಿಯ ಲಗ್ನ ಆಗಬೇಕಿತ್ತು. ಅಮೇರಿಕೆಯಿಂದ ಬಂದ ಸಾರಸ್ವತರ ಹುಡುಗ; ಅವನು ಸುಶಿಕ್ಷಿತ, ನಮ್ಮ ಮನೆಯಲ್ಲೂ ಸುಶಿಕ್ಷಿತರು. ಯಾವುದೇ ಸಮಸ್ಯೆ ಇಲ್ಲದೆಯೇ ಮದುವೆ ಆಗಬೇಕಿತ್ತು. ಆದರೆ ಆಗಲಿಲ್ಲ. ವರದಕ್ಷಿಣೆ ಕೇಳ್ತಿರಲಿಲ್ಲ. ಮತ್ತಾವುದೇ ಸಮಸ್ಯೆ ಇರಲಿಲ್ಲ. ಮದುವೆ ಅಂದಾಕ್ಷಣ, ಒಂದು ಪರಿಸರ ಸೃಷ್ಟಿಯಾಗುತ್ತದೆ ನೋಡಿ; – ಭಯಂಕರ ಟೆನ್ಶನ್, ಗೌಜು – ಗದ್ದಲದ ಪರಿಸರ. ಅದರಲ್ಲಿ, ಯಾರಿಗೋ ಚಾ ಸಿಗ್ಲಿಲ್ಲ, ಇನ್ಯಾರಿಗೋ ಮನೆತನದ ಹೊಟ್ಟೆಕಿಚ್ಚುಗಳು ತಲೆ ಹಾಕಿತು ಅನ್ನುವ, ಇಂಥದ್ದೇ ಸಣ್ಣ ಪುಟ್ಟ ವಿಷಯಗಳು ಬೆಳೆದು, ದೊಡ್ಡ ವಾಸ್ತವವಾಗಿ ಬಿಟ್ಟಿತು. ಅದನ್ನೇ ಬರೆಯೋಣ ಅಂತಿದ್ದೇನೆ. ನೀವಂದದ್ದು ನಿಜ. ನಾವೆಲ್ಲರೂ ಒಂದು ಸಲ ಬ್ರೇಕ್-ಔಟ್ ಆಗಬೇಕು. ನಮ್ಮದೇ ಚೌಕಟ್ಟುಗಳಿಂದ ಹೊರಬರಬೇಕು.

 • ಪ್ರ : ಇದನ್ನ ಹೇಗೆ ಮಾಡಬೇಕು ಅಂತಿದೀರಿ.

ಭಾರತೀಯ ರಂಗಭೂಮಿಯನ್ನೇ ತೆಗೆದುಕೊಳ್ಳಿ. ನಾವು ತೆಂಡೂಲ್ಕರ್ ಅವರನ್ನ, ಶ್ರೀ ರಂಗರನ್ನ ಅಥವಾ ಒಟ್ಟಾರೆಯಗಿ ವಾಸ್ತವವಾದಿ ಪರಂಪರೆಯನ್ನ ಹಾಗಂತ ವಾಸ್ತವವಾದವನ್ನ ಭಾರತೀಯ ರಂಗಭೂಮಿಯಲ್ಲಿ ಪೂರ್ತಿಯಾಗಿ ದುಡಿಸಿಕೊಂಡೂ ಇಲ್ಲ. ಒಬ್ಬ ಚೆಕಾಫ್ ಓದಿದರೆ ಹೇಗೆ ರಷಿಯಾದ ವಾಸ್ತವ ನಮ್ಮ ಮುಂದೆ ಸೃಷ್ಟಿಯಾಗುತ್ತೋ ಆ ಅರ್ಥದಲ್ಲಿ ನಾವು ಯಾರೂ ಮಾಡೋದಕ್ಕೆ ಆಗಿಲ್ಲ. ಭಾರತೀಯ ರಂಗಭೂಮಿಯನ್ನ ಸ್ವಲ್ಪ ಮಟ್ಟಿಗೆ ದಾರಿ ತಪ್ಪಿಸಿದವನು ಬರ್ನಾರ್ಡ್ ಷಾ. ಬ್ರಿಟೀಷರು ನಮ್ಮನ್ನ ಆಳ್ತಾ ಇದ್ದರು. ಆಳುವ ಜನ ಬರ್ನಾರ್ಡ್ ಷಾನೇ ಮಹಾನ್ ನಾಟಕಕಾರ ಅಂದುಬಿಟ್ಟರು. ನಾವು ಒಪ್ಪಿಕೊಂಡು ಬಿಟ್ಟೆವು. ಷಾ ನಮ್ಮನ್ನ ಎಷ್ಟರ ಮಟ್ಟಿಗೆ ಹಿಡಿದುಬಿಟ್ಟಿದ್ದಾನೆ ಅಂದರೆ, ಇಬ್ಸನ್ನನ ಡಾಲ್ಸ್ ಹೌಸ್‌‌ನ್ನು ಕೂಡಾ, ಷಾನ ಮುಖಾಂತರವೇ ಅರ್ಥ ಮಾಡಿಕೊಂಡೆವು. ಬಹಳಷ್ಟು ವರ್ಷ ನಮಗೆ ಚೆಕಾಫ್ ಇತ್ಯಾದಿ ನಾಟಕಕಾರರು ಗೊತ್ತೇ ಇರಲಿಲ್ಲ.

ಷಾನಲ್ಲಿ ಎಲ್ಲರೂ ನಿರಾಳವಾಗಿ, ನಿರರ್ಗಳವಾಗಿ, ಆಕರ್ಷಕವಾಗಿ, ಹಾಂಟಿಂಗ್ ಆಗಿ ಕನಿಷ್ಟ ಅರ್ಧಪುಟ, ಮಾತಾನಾಡುತ್ತಾರೆ. ಆ ಮಾತುಗಳು ಒಂದು ರೀತಿಯ ಆರ್ಕೆಸ್ಟ್ರಾ ಇದ್ದ ಹಾಗೆ. ಆದರೆ ಚೆಕಾಫ್‌ನಲ್ಲಿ ಹೆಚ್ಚಿನವರೆಗೆ ಮಾತೇ ಸಾಧ್ಯವಾಗುವುದಿಲ್ಲ. ಅದು ನಮ್ಮ ಇಂದಿನ ವಾಸ್ತವ ಕೂಡಾ. ಮಾವನ ಎದುರಿಗೆ ಸೊಸೆಗೆ ಮಾತು ಬರುವುದಿಲ್ಲ. ಗಂಡನ ಎದುರಿಗೆ ಹೆಂಡತಿಗೆ ಮಾತು ಬರುವುದಿಲ್ಲ. ನಮ್ಮ ಸಮಾಜ ಅಸಾಧಾರನ ಅಡೆತಡೆಗಳ ಸಮಾಜ. ಇಲ್ಲಿ ಎಲ್ಲವೂ ಪೂರ್ವ ನಿರ್ಧರಿತ. ಯಾರೂ ಎಲ್ಲೆಲ್ಲಿ ಮಾತನಾಡಬಹುದು, ಎಲ್ಲಿ ಮಾತನಾಡಬಾರದು, ಮೊದಲು ಆತ, ಆನಂತರ ಆಕೆ ಇತ್ಯಾದಿ ಎಲ್ಲವೂ ಪೂರ್ವ ನಿರ್ಧರಿತ. ಅಡಿಗೆ ಮನೆಯಲ್ಲಿ ಯಾರು ಮಾತನಾಡಬಹುದು, ಹೊರಗೆ ಯಾರು ಮಾತನಾಡಬಹುದು. ಇಂಥ ಸೂಕ್ಷ್ಮಗಳನ್ನ, ಇನ್ನೂ ಯಾವ ನಾಟಕಕಾರನೂ ಗ್ರಹಿಸಿಲ್ಲ.

ನಮ್ಮ ಮನೆಗಳಲ್ಲಿ ಹೆಣ್ಣು ಮಕ್ಕಳು ಬಡಿಸಬೇಕಾದರೆ ತುಂಬಾ ಮಾತನಾಡುತ್ತಾರೆ. ಅಡಿಗೆ ಮನೆಯಲ್ಲಿ, ಮಲಗುವ ಮನೆಯಲ್ಲಿ ಹೆಂಗಸರಿಗೆ ಮಾತನಾಡಲಿಕ್ಕೆ ಸ್ವಾತಂತ್ರ್ಯ ಇದೆ. ಅವರು ಊಟ ಕೊಡುತ್ತಾರೆ. ಸೆಕ್ಸ್ ಕೊಡುತ್ತಾರೆ, ಅನ್ನೋ ಕಾರಣಕ್ಕೆ ಇರಬಹುದು. ಅಲ್ಲಿ ಮಾತ್ರ ಗಂಡಸರು ಕೆಳಗೆ ಕೂತಿರುತ್ತಾನೆ; ಪಡೆಯುತ್ತಿರುತ್ತಾನೆ. ಹೆಂಗಸು ನೀಡುತ್ತಿರುತ್ತಾಳೆ. ಆಗ ಮಾತ್ರ ಹೆಂಗಸಿಗೆ ತನಗೆ ಅನ್ನಿಸಿದ್ದನ್ನ ಹೇಳಲಿಕ್ಕೆ ಸ್ವಾತಂತ್ರ್ಯ ಇರುತ್ತದೆ. ಅದಕ್ಕೇ ಅಂತ ಕಾಣುತ್ತೆ, ನಮ್ಮಲ್ಲಿ ಊಟ ಬಿಟ್ಟು ಹೋಗಿ ಬಿಡುವುದು ಅಂದರೆ ಅಂತಿಮ ಬಂಡಾಯ. ಗಂಡಸು ಆ ಕ್ಷಣದಲ್ಲಿ ಅಷ್ಟು ಮಾತ್ರ ಮಾಡಬಲ್ಲ. ಹೆಚ್ಚೆಂದರೆ ಊಟ ಅರ್ಧಕ್ಕೆ ಬಿಟ್ಟು ಹೋಗಿ ಬಿಡಬಲ್ಲ. ನಮ್ಮ ನಾಟಕದಲ್ಲಿ ಈ ರೀತಿಯ ಸೂಕ್ಷ್ಮಗಲು ಇನ್ನೂ ಬರಬೇಕಾಗಿದೆ.

 

—-
ಅನಂತಮೂರ್ತಿ
, ಪ್ರಸನ್ನ ಹಾಗೂ ಹೆಚ್.ಜಿ. ಸೋಮಶೇಖರ್‌
೧೯೯೪ ರುಜುವಾತುಗಾಗಿ ಜಂಟಿಯಾಗಿ ನಡೆಸಿದ ಸಂವಾದ

ಕತೆ, ವಿಮರ್ಶೆ ಮತ್ತು ಈಗ ತಮ್ಮ ಆತ್ಮಕತೆ ಆಡಾಡುತ ಆಯುಷ್ಯಗಳನ್ನು ವಿರಳವಾಗಿ ಬರೆದಿದ್ದಾರಾದರೂ ಕನ್ನಡ ಸಾಹಿತ್ಯದಲ್ಲಿ ನಾಟಕ ಕ್ಷೇತ್ರದ ಸಾಹಿತಿ ಎಂದು ಕರೆಯಲ್ಪಡುವ ಗಿರೀಶ್ ಕಾರ್ನಾಡ್ ಕನ್ನಡದಲ್ಲಿ ನಾಟಕ ರಚಿಸುತ್ತಾ, ಇತರ ಭಾರತೀಯ ಭಾಷೆಗಳೊಡನೆ ಸಂಪರ್ಕವನ್ನಿಟ್ಟುಕೊಂಡು ನಟರಾಗಿ, ನಿರ್ದೇಶಕರಾಗಿ, ಸಾಂಸ್ಕೃತಿಕ ವಕ್ತಾರರಾಗಿ ಕೆಲಸ ಮಾಡಿದವರು. ೧೯೩೪ ಮೇ, ೧೯ ರಂದು ಮಹಾರಾಷ್ಟ್ರದ ಮಾಥೇರಾದಲ್ಲಿ ಜನಿಸಿದರು. ಕಾರ್ನಾಡರ ಪ್ರಾಥಮಿಕ ಶಿಕ್ಷಣ ಉತ್ತರ ಕನ್ನಡದ ಶಿರಸಿಯಲ್ಲಿ, ಪ್ರೌಢಶಿಕ್ಷಣ ಧಾರವಾಡದ ಬಾಸೆಲ್ ಮಿಷನ್ ಹೈಸ್ಕೂಲಿನಲ್ಲಿ, ಹಾಗೂ ಪದವಿ ಶಿಕ್ಷಣ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಆಯಿತು. ಆ ಬಳಿಕ ಪ್ರತಿಷ್ಠಿತ ರ‍್ಹೋಡ್ಸ್ ಸ್ಕಾಲರ್‌ಶಿಪ್ ಪಡೆದುಕೊಂಡು ಆಕ್ಸ್‌ಫರ್ಡ್‌‌ನಲ್ಲಿ ಹೆಚ್ಚಿನ ವ್ಯಾಸಂಗ ಮಾಡಿದರು. ಆಕ್ಸ್‌ಫರ್ಡ್‌ನ ಡಿಬೇಟ್ ಕ್ಲಬ್‌ಗೆ ಅಧ್ಯಕ್ಷರಾಗಿ ಆಯ್ಕೆಯಾದ ಪ್ರಥಮ ಏಶಿಯನ್ ಇವರು. ಮದ್ರಾಸ್‌ನಲ್ಲಿ ನೌಕರಿಯಲ್ಲಿದ್ದ ಇವರು ಶಿಕಾಗೋ ವಿಶ್ವವಿದ್ಯಾಲಯದಲ್ಲಿ ಸಂದರ್ಶನ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಇಂಗ್ಲೆಂಡಿನಲ್ಲಿ ನೆಹರೂ ಸೆಂಟರಿನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ . ಪೂನಾ ಫಿಲ್ಮ್ ಇನ್ಸ್‌ಟಿಟ್ಯೂಟ್‌ನ ನಿರ್ದೇಶಕರಾಗಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿ ಕೂಡ ಅವರು ಕಾರ್ಯ ನಿರ್ವಹಿಸಿರುವವರು. ಯಯಾತಿ, ತುಘಲಕ್, ಹಯವದನ, ನಾಗಮಂಡಲ, ತಲೆದಂಡ, ಅಗ್ನಿ ಮತ್ತು ಮಳೆ, ಅಂಜುಮಲ್ಲಿಗೆ, ಹಿಟ್ಟಿನ ಹುಂಜ, ಟಿಪ್ಪುವಿನ ಕನಸುಗಳು ಮುಂತಾದವು ಕಾರ್ನಾಡರ ಪ್ರಮುಖ ನಾಟಕ ಕೃತಿಗಳು. ಅಲ್ಲದೆ ಹಲವಾರು ಭಾಷೆಗಳ ಚಲನಚಿತ್ರಗಳಲ್ಲಿ ನಟಿಸಿರುವ ಕಾರ್ನಾಡ್ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕರು ಕೂಡಾ ಹೌದು. ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೆ, ಕಾಡು, ಒಂದಾನೊಂದು ಕಾಲದಲ್ಲಿ, ಕಾನೂರು ಹೆಗ್ಗಡತಿ ಸಿನಿಮಾಗಳು, ಸೂಫಿ ಪಂಥ, ಕನಕ ಪುರಂದರ ಸಾಕ್ಷ್ಯಚಿತ್ರಗಳನ್ನು ನಿರ್ದೇಶಿಸಿದ್ದಾರೆ. ನಾಟಕ ಸಾಹಿತ್ಯ ರಚನೆಗೆ ಜ್ಞಾನಪೀಠ ಪ್ರಶಸ್ತಿ ಪಡೆದ ಕಾರ್ನಾಡರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಗುಬ್ಬಿ ವೀರಣ್ಣ ಪ್ರಶಸ್ತಿ, ಪದ್ಮಶ್ರೀ, ಪದ್ಮಭೂಷಣ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಹಾಗೂ ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ.

* * *