• ಪ್ರಸನ್ನ : ಗಿರೀಶರ ಎರಡು ಪ್ರಮುಖ ನಾಟಕಗಳನ್ನ ನಮ್ಮ ಚರ್ಚೆಗೆ ಎತ್ತಿಕೊಂಡು ಚರ್ಚೆ ಪ್ರಾರಂಭಿಸಬಹುದು. ಒಂದು ತುಘಲಕ್ ಹಾಗೂ ಇನ್ನೊಂದು ತಲೆದಂಡ. ನಾಟಕ ಪ್ರಕಾರದಲ್ಲಿ ಆಧುನಿಕ ಸಂವೇದನೆಯನ್ನು ಬಹಳ ಗಟ್ಟಿಯಾಗಿ ಒಳತಂದ ನಾಟಕಕಾರು ಗಿರೀಶ್. ಗಿರೀಶರ ನಾಟಕದಲ್ಲಿ ತುಘಲಕ್, ಆಧುನಿಕ ಜಗತ್ತಿನ ಎಲ್ಲಾ ತೊಳಲಾಟಗಳನ್ನೂ ಕಂಡು, ಅನುಭವಿಸಿ, ಕಡೆಗೆ ಪಾಪಿಯಾಗಿ ಭ್ರಷ್ಟನಾಗಿ ಹೋಗುತ್ತಾನೆ. ನಾಟಕದ ಕಡೆಯಲ್ಲಿ ತುಘಲಕ್‌ನಿಗೆ ಬರುವ ನಿದ್ರೆ, ಅದು ನಿದ್ರೆಯೂ ಆಗಬಹುದು, ಸಾವೂ ಆಗಬಹುದು, ಅಥವಾ ಅಪಾರವಾದ ಸುಸ್ತು ಕೂಡ ಆಗಬಹುದು. ನಂತರ ಗಿರೀಶರು ತಲೆದಂಡ ಬರೆದಾಗ, ಮತ್ತೊಮ್ಮೆ ತುಘಲಕ್‌ನಷ್ಟೆ ಮಹತ್ವಾಕಾಂಕ್ಷೆಯ ಒಂದು ಪ್ರಯತ್ನ ಮಾಡುತ್ತಾರೆ. ತುಘಲಕ್ ನಾಟಕದ ಪಾತ್ರಗಳು ಹಾಗೂ ಪರಿಸ್ಥಿತಿ, ಕನ್ನಡದ ಪರಿಸರಕ್ಕೆ ಹೊರಗಿನದ್ದಾದರೆ, ತಲೆದಂಡದಲ್ಲಿ ಭಕ್ತಿ ಚಳುವಳಿಯಿಂದ ಪ್ರೇರಿತವಾದ ಒಂದು ಪ್ರಸಂಗವನ್ನು ಎತ್ತಿಕೊಂಡು, ಆಧುನಿಕತೆಯ ಅದೇ ಸಮಸ್ಯೆಯನ್ನು ಮತ್ತೆ ಎದುರಿಸುತ್ತಾರೆ ಗಿರೀಶ್.

ಅನಂತಮೂರ್ತಿಯವರು ಕಳೆದ ರುಜುವಾತಿನಲ್ಲಿ ಭಕ್ತಿಯ ಬಗ್ಗೆ ದಾಖಲಿಸಿದ ಒಂದು ಅಭಿಪ್ರಾಯದಿಂದ ನಮ್ಮ ಚರ್ಚೆಯನ್ನ ಶುರುಮಾಡಬಹುದು. ಅದೆಂದರೆ, ಆಧುನಿಕರು ಭಕ್ತಿಯ ಪಸಂಗವನ್ನು ಎತ್ತಿಕೊಂಡಾಗ ಕೂಡಾ, ಅದನ್ನು ಬರೀ ಪಠ್ಯವಾಗಿ ಗ್ರಹಿಸುತ್ತಾರೆಯೇ ಹೊರತು, ಅದರ ಒಟ್ಟು ಪರಿಸರವನ್ನು ಕಾಣಲಾರರು ಅಂತ. ಸರಳವಾಗಿ ಹೇಳುವುದಾದರೆ ಆಧುನಿಕರು ಭಕ್ತರಾಗಲಾರರು ಎಂದು ಅನಂತಮೂರ್ತಿಯವರ ಅಭಿಪ್ರಾಯ.

 • ಅನಂತಮೂರ್ತಿ: ಭಕ್ತಿ ಚಳುವಳಿ ಸಾಮಾಜಿಕ ಭೇದಗಳನ್ನು ತೊಡೆದು ಹಾಕಿ ಕ್ರಾಂತಿಕಾರಕವಾಗಿ ಕೆಲಸ ಮಾಡಿತ್ತು ಎನ್ನುವ ಅಂಶ ಆಧುನಿಕರಿಗೆ ಮುಖ್ಯವಾಗುತ್ತದೆ. ನಾವುಗಳು ಅದಕ್ಕೇ ಪ್ರತಿಕ್ರಿಯಿಸುತ್ತೀವಿ, ಭಕ್ತಿಗೆ ಅಲ್ಲ. ಇದು ನನಗೆ, ನಿಮಗೆ, ಮಾತ್ರವಲ್ಲ ಅಡಿಗರಿಎ ಕೂಡಾ ಸಾಧ್ಯವಾಗಲಿಲ್ಲ. ಭಕ್ತ ತನ್ನ ಸಂಪೂರ್ಣ ವ್ಯಕ್ತಿತ್ವವನ್ನು ಸರೆಂಡರ್ ಮಾಡಿಕೊಳ್ಳುತ್ತಾನೆ.

ಇರಬಹುದು, ನಾಟಕದಲ್ಲಿ ಒಂದು ಕಡೆ ಬಿಜ್ಜಳನೇ ’ಅವರ ಪಾದೋದಕ ಗೀದೋದಕ ನನಗೆ ಹಿಡಿಸೋದಿಲ್ಲ’ ಅಂತಾನೆ. ಪಾದೋದಕದ ಹಿಂದಿರುವ ಆಶಯವನ್ನ ಒಪ್ಪಿಕೊಳ್ಳೋದಕ್ಕೆ ಬಿಜ್ಜಳನಿಗೂ ಆಗುವುದಿಲ್ಲ.

 • : ಅಕ್ಕಮಹಾದೇವಿ ಒಬ್ಬಳನ್ನು ಬಿಟ್ಟರೆ ಪ್ರಾಯಶಃ ತೊಳಲಾಟ ಭಕ್ತರಿಗೂ ಇತ್ತು. ಇದನ್ನು ರಾಮಾನುಜನ್ ಒಂದು ಕಡೆ ಹೇಳುತ್ತಾರೆ. ನಾನು ಪೂರ್ತಿಯಾಗಿ ನಾನಿಷ್ಟಪಟ್ಟಂತೆ ಆಗಿಬಿಡಲಿಲ್ಲ. ಆಗಲಿಲ್ಲ ಎನ್ನುವ ತೊಳಲಾಟ ಮೇಲ್ಜಾತಿಯವರಿಗೆ ಇದೆ. ಆದರೆ ಶೂದ್ರರಿಗೆ, ಸ್ತ್ರೀಯರಿಗೆ ಅದಿಲ್ಲ ಅಂತಾರೆ. ಗಿರೀಶರ ಎಲ್ಲ ನಾಟಕದಲ್ಲೂ ಒಂದು ಲಿರಿಕಲ್ ಗುಣ ಇದೆ. ನಿಮ್ಮ ನಾಟಕದ ಪಾತ್ರಗಳು, ತನ್ನ ತನ್ಮಯ ಸ್ಥಿತಿಯಲ್ಲಿ ತನ್ನೊಳಗೆ ಮಾತಾಡಿಕೊಳ್ಳುವ ಹಾಗೆ ಮಾಡಬಲ್ಲಿರಿ ನೀವು. ತುಘಲಕ್ ತನ್ನೊಳಗೇ ಮಾತನಾಡಿಕೊಳ್ಳಬಲ್ಲ, ಬಸವಣ್ಣ ತನ್ನೊಳಗೇ ಮಾತನಾಡಿಕೊಳ್ಳಬಲ್ಲ. ಹೀಗೆ ಮಾತನಾಡಿಕೊಳ್ಳುತ್ತಲೇ ಅವರು ನಾಟಕದ ಪಾತ್ರಗಳೂ ಆಗಬಲ್ಲರು. ಮ್ಯಾಕ್‌ಬೆತ್ ತನ್ನೊಳಗೇ ಮಾತಾಡಿಕೊಂಡಾಗ ಶೇಕ್ಸ್‌ಪಿಯರ್‌ನ ನಾಟಕಕ್ಕೆ ಒಂದು ಲಿರಿಕಲ್ ಗುಣ ಬರುತ್ತೆ. ಲೇಡಿ ಮ್ಯಾಕ್‌ಬೆತ್ ಕೂಡಾ ಹಾಗೇನೆ. ಬಸವಣ್ಣ ಮಾತನಾಡಿಕೊಂಡಾಗ ಮೂಲಕ ಭಕ್ತಿ ಕಾಣಿಸೋದರಲ್ಲಿ ನಿಮಗೆ ತೊಡಕಾಗಿದೆಯೇ ಎಂದು ನನ್ನ ಪ್ರಶ್ನೆ.
 • ಪ್ರ: ಭಕ್ತಿಯ ಒಟ್ಟಾರೆ ಗ್ರಹಿಕೆಯ ದೃಷ್ಟಿಯಿಂದ ಪ್ರಾಯಶಃ ಲಂಕೇಶರ ಇದೇ ವಸ್ತುವಿನ ಸಂಕ್ರಾಂತಿ ಹೆಚ್ಚು ಯಶಸ್ವಿ ನಾಟಕ ಅನ್ನಿಸುತ್ತದೆ. ಆದರೆ ಇದೇ ಕಾರಣಕ್ಕಾಗಿ ನನಗೆ ಗಿರೀಶರ ತಲೆದಂಡ ಹೆಚ್ಚು ಮಹತ್ವಾಕಾಂಕ್ಷಿ ನಾಟಕ ಎನಿಸುತ್ತದೆ. ಲಂಕೇಶ್ ಕೆಲವು ಕಡೆ ಸ್ವಲ್ಪ ರೊಮ್ಯಾಂಟಿಕ್ ಆಗಿ ಬಿಡುತ್ತಾರೆ. ಅವರ ಉಜ್ಜ ಇತ್ಯಾದಿ ಪಾತ್ರಗಳ ಮೂಲಕ ಸಣ್ಣ ಸಣ್ಣ ರೊಮ್ಯಾಂಟಿಸ್‌ಮ್ ಹುಟ್ಟುತ್ತವೆ.

ತುಘಲಕ್ ಬರೆಯಲಿಕ್ಕೆ ಹೊರಟಾಗ ನಾನು ನಾಸ್ತಿಕ ಅಂದುಕೊಂಡಿದ್ದೆ. ನಾನಿನ್ನೂ ನಾಸ್ತಿಕನೇ. ಮನೆಯಲ್ಲಿ ದೇವರು, ಗೀವರು ಏನೂ ಇಟ್ಟಿಲ್ಲ. ಈಗಲೂ ದೇವರಲ್ಲಿ ನನಗೆ ಸಂಪೂರ್ಣ ವಿಶ್ವಾಸ ಇಲ್ಲ. ಆದರೆ ಆಗ, ನಾಸ್ತಿಕ ಅಂದರೆ ಅದೊಂದು ಸೈದ್ಧಾಂತಿಕವಾದ ಹಟ. ತುಘಲಕ್‌ನನ್ನೇ ನಾಸ್ತಿನನ್ನಾಗಿ ಮಾಡಲು ಹೊರಟೆ ನಾನು.ಸಾರ್ತ್ರನ ನಾಸ್ತಿಕವಾದ ತುಂಬಾ ಪ್ರಚಾರದಲ್ಲಿದ್ದ ಕಾಲ ಅದು. ಆದರೆ ತುಘಲಕ್‌ನ ಚರಿತ್ರೆಯನ್ನು ಗಮನಿಸಿದರೆ, ಆತನದ್ದು ದೇವರ ಜೊತೆಗೆ ಸಂಪೂರ್ಣವಾದ, ಆತ್ಯಂತಿಕವಾದ ತೊಡಗಿಕೊಳ್ಳುವಿಕೆ. ಏಳು ವರ್ಷ ಅವನು ಪ್ರಾರ್ಥನೆಯನ್ನೇ ಗಡೀಪಾರು ಮಾಡುತ್ತಾನೆ. ಆನಂತರ ಖಲೀಫನ ಮೊಮ್ಮಗನನ್ನು ಕರೆಸಿ ಪುನಃ ಪ್ರಾರ್ಥನೆಯನ್ನು ಆರಂಭಿಸುತ್ತಾನೆ. ದೇವರು, ಧರ್ಮದ ಬಗೆಗಿನ ಅವನ ವಿಶ್ವಾಸ ತುಂಬ ಫ್ಯಾಸಿನೇಟಿಂಗ್ ಆಗಿದೆ ಅನ್ನಿಸಿತು. ಈ ಫ್ಯಾಸಿನೇಶನ್ ನನ್ನಲ್ಲಿ ಒಂದು ರೀತಿಯ ಬದಲಾವಣೆಯನ್ನು ತಂದುಬಿಟ್ಟಿತು. ಒಮ್ಮೊಮ್ಮೆ ಹೀಗಾಗುತ್ತದೆ. ನಮ್ಮ ನಾಟಕವೇ ನಮ್ಮನ್ನು ಬದಲು ಮಾಡಿಬಿಡುತ್ತವೆ. ದೇವರು ಹಾಗೂ ಮನುಷ್ಯನ ಸಂಬಂಧ ನನ್ನ ನಾಟಕಗಳಲ್ಲಿ ನನ್ನನ್ನು ಬಾಧಿಸುವ ಒಂದು ಪ್ರಮುಖ ಅಂಶ.

ರಾಮಾನುಜನ್ ಯಾವಾಗಲೂ ಹೇಳುತ್ತಿದ್ದರು, ’ಐ ಡೋಂಟ್ ಬಿಲೀವ್ ಇನ್ ಗಾಡ್; ಐ ಬಿಲೀವ್ ಇನ ಪೀಪಲ್ ಹೂ ಬಿಲೀವ್ ಇನ್ ಗಾಡ್’ ಅಂತ. ಈ ರೀತಿಯ ಧರ್ಮ ಸಂಬಂಧವಾದ ಹುಡುಕಾಟ ಹಿಟ್ಟಿನ ಹುಂಜ, ತಲೆದಂಡ ನಾಟಕಗಳಲ್ಲಿ ಕೂಡಾ ಇದೆ. ಆದರೆ ಎಷ್ಟರ ಮಟ್ಟಿಗಿನ ಕನ್ವಿಕ್ಷನ್ ಇದೆ ಎಂದು ನೀವು ಕೇಳುತ್ತಿರುವುದಾದರೆ ನನಗೆ ಗೊತ್ತಿಲ್ಲ.

 • : ಕನ್ವಿಕ್ಷನ್ ಅನ್ನೋ ಮಾತನ್ನ ಕೃತಿಯ ಮಟ್ಟಿಗೆ ಸೀಮಿತಗೊಳಿಸಿ ಆಡುತ್ತಿದ್ದೇನೆ. ಗಿರೀಶರ ಖಾಸಗೀ ಬದುಕ್ನನ ಕೆದಕಿ ಅಲ್ಲ. ಶೇಕ್ಸ್‌ಪಿಯರ್‌ ಬಗೆಗೆ ಒಂದು ದೊಡ್ಡ ಚರ್ಚೆ ಇದೆ. ಅವನಿಗೆ ದೆವ್ವಗಳ ಬಗ್ಗೆ ನಂಬಿಕೆ ಇತ್ತೇ, ಇಲ್ಲವೇ ಅಂತ. ಶೇಕ್ಸ್‌ಪಿಯರ್‌ ದೆವ್ವಗಳನ್ನು ನಂಬುತ್ತಿದ್ದನೋ ಇಲ್ಲವೋ, ಅಂತೂ ನಂಬುವವರ ಹಾಗೆ ಬರೆಯುತ್ತಿದ್ದ. (ನಗು) ಅಥವಾ ತನ್ನ ಪಾತ್ರಗಳು ನಂಬಿದ್ದಾವೆ ಎಂದು ತಿಳಿದು ಗೌರವದಿಂದ ಬರೆಯುತ್ತಿದ್ದ. ಇದು ನಾಟಕಕಾರನಲ್ಲಿ ಇರುವ ಒಂದು ವಿಶೇಷ ಗುಣ ಇರುವುದನ್ನು ಇರುವ ಹಾಗೆ ನೋಡುವ ಶಕ್ತಿ.

ನಾಟಕಕಾರ ತನ್ನ ನಾಟಕದ ಮೂಲಕ ಪರ್‌ಸುವೇಡ್ ಮಾಡುತ್ತಿರುತ್ತಾನೆ. ಒಂದು ಪಾತ್ರ ಇನ್ನೊಂದು ಪಾತ್ರವನ್ನು, ತಾವು ಹೇಳಿದ್ದೇ ಖರೆ ಎಂದು ಒಪ್ಪಿಸುತ್ತಾ ಇರುತ್ತೆ. ನೀವು ಹೇಳಿದ್ದೀರಲ್ಲಾ, ತನ್ಮಯತೆ, ಹಾಗೆ. ಪ್ರತಿಯೊಂದು ಪಾತ್ರವೂ ಇನ್ನೊಂದು ಪಾತ್ರಕ್ಕೆ ತಾನು ಮಾಡಿದ್ದೇ ಸರಿ ಅಂತ ಒಪ್ಪಿಸಲಿಕ್ಕೆ ಪ್ರಯತ್ನಿಸುತ್ತದೆ. ನಾವು ನಮ್ಮ ಬದುಕಿನಲ್ಲಿ ಮಾಡುವ ಹಾಗೇನೇ. ಈಗ ಇಲ್ಲಿ ನಾವು ಮೂರು ಜನ ಮಾಡ್ತಾ ಇದ್ದೀವಲ್ಲ, ಹಾಗೇನೆ. ಈ ತರಹದ ಡಿಬೇಟ್ ಆಫ್ ಪರ್‌ಸುವೇಶನ್ ನಾಟಕಕಾರ ಪ್ರೇಕ್ಷಕರ ಜೊತೆಗೂ ಮಾಡ್ತಾ ಹೋಗ್ತಾನೆ. ನನ್ನಗನ್ನಿಸುವುದು ಇದು, ಇದನ್ನು ನೀವು ಒಪ್ಪಿಕೊಳ್ಳಬೇಕು ಅಂತಾನೆ. ಹಾಗಾಗಿ ನಾಟಕ ಒಂದು ರೀತಿಯಲ್ಲಿ ಪ್ರೇಕ್ಷಕ ಹಾಗೂ ನಾಟಕಕಾರನ ನಡುವಿನ ವಾಗ್ವಾದೂ ಹೌದು. ಪ್ರೇಕ್ಷಕ ಇದು ನನಗೆ ಕನ್‌ವಿನ್ಸ್ ಆಗ್ತಾ ಇಲ್ಲ ಅಂತಾನೆ. ನಾಟಕಕಾರ ಪರ್‌ಸುವೇಡ್ ಮಾಡ್ತಾನೆ.

ಹ್ಯಾಮ್ಲೆಟ್‌ನಲ್ಲಿ ಭೂತ ಇದೆಯಲ್ಲ. ಹ್ಯಾಮ್ಲೆಟ್ ಭೂತವನ್ನು ನಂಬಿದ್ದನೋ ಇಲ್ಲವೋ ಗೊತ್ತಿಲ್ಲ. ಆದರೆ ಶೇಕ್ಸ್‌ಪಿಯರ್ ಭೂತ ಹೇಳಿದ್ದನ್ನ ಬೆಂಬಿಡದೆ ಹಿಂಬಾಲಿಸುತ್ತಾನೆ. ಭೂತದ ಮಾತಿಗೂ ಬೆಲೆ ಇದೆ ಅಂತ ಶೇಕ್ಸ್‌ಪಿಯರ್ ಹಟ ಹಿಡೀತಾನೆ. ಹ್ಯಾಮ್ಲೆಟ್ ಅದನ್ನ ನಂಬುತ್ತಾನೆ. (ನಗು) ಆಂಡ್ ದಿ ಹೋಲ್ ಕ್ವೆಶ್ಚನ್ ಆಫ್ ಹ್ಯಾಮ್ಲೆಟ್ಸ್ ರಿವೇಂಜ್ ಆಫ್ಟರ್‌ಆಲ್, ಈಸ್ ಡಿಪೆಂಡೆಂಟ್ ಆನ್ ದಿ ವರ್ಡ್ ಆಫ್ ದಿ ಗೋಸ್ಟ್ ಅಷ್ಟೆ; ಇಲ್ಲದಿದ್ರೆ ನಾಟಕವೇ ಇಲ್ಲ ಅಲ್ಲಿ. ನಾವು ಭೂತವನ್ನ ನಂಬದೇ ಇದ್ರೆ, ಹ್ಯಾಮ್ಲೆಟ್ ಏನೂ ಇಲ್ಲ ಅಲ್ಲಿ. ಭೂತ ಹೇಳಿ ಹೋಗಿತ್ತು ಸೇಡು ತೀರಿಸಿಕೋ ಅಂತ. ನೀವು ಹೇಳಿದ ಹಾಗೆ ಶೇಕ್ಸ್‌ಪಿಯರ್‌ಗೆ ನಂಬಿಕೆ ಇತ್ತೋ ಇಲ್ಲವೋ ಅನ್ನುವುದು ಮುಖ್ಯ ಆಗುವುದಿಲ್ಲ.

 • ಪ್ರ: ನಾವು ಈಗ ಚರ್ಚೆ ಮಾಡುತ್ತಿರುವ ಒಂದು ಮುಖದ ಜೊತೆಗೆ ಗಿರೀಶರ ನಾಟಕಗಳಿಗೆ ಇನ್ನೊಂದು ಇಂಟರೆಸ್ಟಿಂಗ್ ಆದ ಮುಖವೂ ಇದೆ. ಉದಾಹರಣೆಗೆ ಗಿರೀಶರು ತಮ್ಮ ನಾಟಕಗಳಲ್ಲಿ ಒಂದೇ ವ್ಯಕ್ತಿಯನ್ನ ಒಡೆದು ಎರಡು ಮಾಡಿ, ಅಂದರೆ ಎರಡು ಪಾತ್ರಗಳನ್ನಾಗಿ ಮಾಡಿ ಇಡುತ್ತಾರೆ. ಎರಡು ಪಾತ್ರಗಳು ಹೀರೋ, ವಿಲನ್ ಆಗಬಹುದು, ಮತ್ತೇನೋ ಆಗಬಹುದು. ತುಘಲಕ್‌ನಲ್ಲಿ ತುಘಲಕ್ ಮತ್ತು ಅಜೀಜ್‌, ತಲೆದಂಡದಲ್ಲಿ ಬಿಜ್ಜಳ ಮತ್ತು ಬಸವಣ್ಣ, ಯಯಾತಿಯಲ್ಲಿ ತಂದೆ ಮಗ, ಅಂಜುಮಲ್ಲಿಗೆಯಲ್ಲಿ ಅಕ್ಕ ತಮ್ಮ, ಹಯವದನದಲ್ಲಂತೂ ರೀತಿಯ ಒಡೆಯುವಿಕೆಯೇ ನಾಟಕದ ವಸ್ತು. ಕಪಿಲ ಮತ್ತು ದೇವದತ್ತ ದೇಹ ಮತ್ತು ಮನಸ್ಸು, ಬದಲಾಗುವ ತಲೆಗಳು ಇತ್ಯಾದಿ.

ಹೌದು ಅಲ್ಲಿ ಅದೇ ವಸ್ತು

 • ಪ್ರ : ಗಿರೀಶರ ಬೇರೆ ಬೇರೆ ನಾಟಕಗಳಲ್ಲಿ ತಂತ್ರ ಬೇರೆ ಬೇರೆ ಪರಿಸ್ಥಿತಿಗಳಲ್ಲಿ ಬಳಕೆಯಾಗುವುದರಿಂದ ಹೊಸ ಆಯಾಮಗಳನ್ನ ಕೊಡುತ್ತಾ ಹೋಗುತ್ತದೆ. ಅಂಜುಮಲ್ಲಿಗೆಯಲ್ಲದು ಯಮಾ ಯಮಿಯ ಸಂವಾದದ ರೂಪ ಪಡೆದರೆ, ತುಘಲಕ್‌ನಲ್ಲಿ ಧಾರ್ಮಿಕ ರಾಜಕೀಯ ಸಂವಾದವಾಗುತ್ತದೆ. ಯಯಾತಿಯಲ್ಲಿ ಯೌವನದ ಆಶಯವಾಗುತ್ತದೆ. ತಲೆದಂಡದಲ್ಲಿ ಧಾರ್ಮಿಕತೆ ಹಾಗೂ ಸಾಮಾಜಿಕತೆಯ ಸಂವಾದವಾಗುತ್ತದೆ. ಇದು ನಾಟಕಕಾರರಾಗಿ ಗಿರೀಶರ ಯಶಸ್ಸಿನ ಗುಟ್ಟು. ಒಂದೇ ವ್ಯಕ್ತಿತ್ವ ಎರಡಾಗಿ ಒಡೆದು ಚರ್ಚೆಗೆ ಇಳಿದಾಗ, ಎರಡು ಪಾತ್ರಗಳ ನಡುವಿನ ಚರ್ಚೆ, ಒಂದೇ ವ್ಯಕ್ತಿತ್ವದ ಅಂತರಂಗದ ಚರ್ಚೆಯೂ ಆಗಬಲ್ಲದು. ಕನ್ನಡದ ಹೊಸ ನಾಟಕಕಾರರಿಗೆ ರೀತಿ ನಾಟಕದ ಒತ್ತಾಸೆಯನ್ನ ಪಾತ್ರಗಳ ಒತ್ತಾಸೆಯಾಗಿ ಮಾಡಲಿಕ್ಕೆ ಬಂದಿಲ್ಲ.

ಬರೆ ಸ್ಟೇಟ್‌ಮೆಂಟ್ ನಾಟಕ ಆಗುವುದಿಲ್ಲ. ಅದನ್ನೇ ನಾನು ಹೇಳಿದ್ದು. ಪ್ರತಿಯೊಂದು ಪಾತ್ರವೂ ಪರ್‌ಸುವೇಡ್ ಮಾಡಬೇಕು ಅಂತ.

 • ಪ್ರ : ಒಂದೇ ವ್ಯಕ್ತಿತ್ವವನ್ನ ಎರಡು ಪಾತ್ರವಾಗಿಸುವ  ನಿಮ್ಮ ತಂತ್ರ, ತಲೆದಂಡ ನಾಟಕದಲ್ಲಿ ಮಾತ್ರ ನನಗಿನ್ನೂ ಗೂಢವಾಗಿಯೇ ಉಳಿದಿದೆ. ಹಾಗಾಗಿಯೇ ತಲೆದಂಡದಲ್ಲಿ ನೀವು ಯಶಸ್ವಿಯೋ ಅಲ್ಲವೋ ಎಂದು ನಿರ್ಧರಿಸುವುದು ಕಷ್ಟವಾಗುತ್ತದೆ. ತಲೆದಂಡದಲ್ಲಿನ ಸಂಬಂಧ ಬಹಳ ಮಹತ್ವದ್ದು. ಬಿಜ್ಜಳ ಬಸವಣ್ಣರಲ್ಲಿ ವೈರುಧ್ಯಗಳಿಲ್ಲ. ಅಂದರೆ ಅದು ಆಂಟಗನಿಸ್ಟಿಕ್ ರಿಲೇಶನ್‌ಶಿಪ್ ಅಲ್ಲ. ಹಾಗಾಗಿಯೇ ನಿಮ್ಮ ನಾಟಕದಲ್ಲಿ ಬಸವಣ್ಣ, ಒಂದು ಆದರ್ಶೀಕೃತ ಪಾತ್ರ ಆಗಿ ಬಿಡುವ ಅಪಾಯ ಇದೆ.

ಇದೊಂದು ಸಮಸ್ಯೆ ಹೌದು. ಇದನ್ನ ಬೇರೆಯವರು ಹೇಳಿದ್ದಾರೆ. ಒಬ್ಬ ಸಂತನನ್ನ ನಾಟಕದ ಪಾತ್ರ ಮಾಡುವ ಬಗೆ ಹೇಗೆ? ಎಲಿಯಟ್‌ನ ಮರ್ಡರ್ ಇನ್ ದಿ ಕ್ಯಥೀಡ್ರಲ್, ಸೇಂಟ್ ಜೋನ್ಸ್‌ಗಳಲ್ಲಿ ಕೂಡಾ ಕಾಡುವ ಸಮಸ್ಯೆ ಇದು: ಹೌ ಡಸ್ ಒನ್ ಮೇಕ್ ಎ ಸೇಂಟ್ ಆನ್ ಇಂಟರೆಸ್ಟಿಂಗ ಕ್ಯಾರೆಕ್ಟರ್. ರಾಮಾನುಜಂ ತಲೆದಂಡ ಓದಿದಾಗ, ’ನನಗೆ ಬಸವಣ್ಣ, ವೀಕ್ ಅನ್ನಿಸಿಬಿಡ್ತಾನೆ. ಯಾಕೆ ಅಂದ್ರೆ ಅಂವಾ ಸಿಟ್ಟಿಗೇಳೋದಿಲ್ಲ. ಅಂವಾ ಸಿಟ್ಟಿಗೆ ಏಳಬೇಕು. ಖಂಡನೆ ಮಾಡಬೇಕು. ಅದನ್ನೆಲ್ಲಾ ನಿಮ್ಮ ಬಸವಣ್ಣ ಮಾಡೋದಿಲ್ಲ’ ಅಂತ ಅಂದ್ರು. ರಾಮಾಜನಂಗೆ ಬಸವಣ್ಣ ಆದರ್ಶೀಕೃತ ಪಾತ್ರ ಅನ್ನಿಸಲಿಲ್ಲ.

 • : ಬಸವಣ್ಣನಲ್ಲಿ ವ್ಯವಹಾರಜ್ಞತೆ ಇದೆ, ಬಿಜ್ಜಳನಲ್ಲಿ ಆದರ್ಶವಿದೆ.

ಹೌದು.

 • : ಬಿಜ್ಜಳನಲ್ಲಿ ಗೊತ್ತಾದ ಒಂದು ಆದರ್ಶವಿದೆ. ಅದರಿಂದಾಗಿಯೇ ಆತ ಕೊನೆಯಲ್ಲಿ ತೊಳಲಾಟಕ್ಕೆ ಸಿಕ್ಕಿಹಾಕಿಕೊಳ್ಳಬೇಕಾಗುತ್ತದೆ. ನಿಮ್ಮ ಬಸವಣ್ಣನಲ್ಲಿ ವ್ಯವಹಾರಜ್ಞತೆಯಿದೆ. ಮದುವೆಯ ಸಂದರ್ಭವನ್ನೇ ತೆಗೆದುಕೊಳ್ಳಿ. ಮದುವೆ ತನ್ನ ಆದರ್ಶನ ಮೇಲೆ ಆಗುತ್ತಾ ಇದೆ ಅಂತಲೂ ಗೊತ್ತು. ಮದುವೆ ಆಗುವುದರಿಂದ ಅಪಾಯವಿದೆ ಅಂತಲೂ ಗೊತ್ತು. ಮದುವೆ ಅಗಲಿಕ್ಕೆ ಹೊರಟವರಿಗೆ ಇದು ಗೊತ್ತಿಲ್ಲ. ನಿಮ್ಮ ಬಸವಣ್ಣ, ತಾನು ಉಂಟು ಮಾಡಿದ ಅಲೆ ತನ್ನನ್ನೇ ಮೀರಿ, ಮುಳುಗಿಸಿ ಹೋಗುವ ಸಾಧ್ಯತೆ ಇದೆ ಎಂದು ಕಂಡುಕೊಳ್ಳಬಲವಲ. ಆತ ಒಬ್ಬ ವ್ಯವಹಾರಸ್ಥನೂ ಹೌದು. ಸಂಸಾರಸ್ಥನೂ ಹೌದು, ಶರಣನೂ ಹೌದು. ಇವು ಮೂರೂ ಸೇರಿರುವುದರಿಂದಲೇ ನಾಟಕದ ಬಹಳ ದೊಡ್ಡ ವಸ್ತು ಅವನು.

ನಿಜ. ನಿನ್ನೆ ನೀವು ಗಾಂಧಿಯ ಬಗ್ಗೆ ಹೇಳುತ್ತಿದ್ದ ಮಾತು ಬಸವಣ್ಣನಿಗೂ ಅನ್ವಯಿಸುತ್ತದೆ. ಆತ – ಒಬ್ಬ ಸ್ಟ್ರಿಕ್ಟ್ ಟ್ಯಾಕ್ಟಿಶಿಯನ್ ಕೂಡಾ ಹೌದು.

 • : ಖಂಡಿತ. ಹಾಗೆ ಬಿಜ್ಜಳನಲ್ಲೂ ವ್ಯವಹಾರಜ್ಞತೆ ಇದೆ. ಶರಣರೆಲ್ಲ ಕಾಯಕ ಮಾಡುವುದರಿಂದಲೇ ತನ್ನ ರಾಜ್ಯದ ಆರ್ಥಿಕ ಸ್ಥಿತಿ ಉತ್ತಮವಾಗಿದೆ ಎಂದು ಅವನಿಗೆ ಗೊತ್ತು.

ಹೌದು, ಶರಣರು – ಸಚ್ ಎ ರ್ಯಾಡಿಕಲ್ ಫಿಲಾಸಫಿ, ಅವರು ಹೇಗೆ ಅಷ್ಟೊಂದು ಸಮೃದ್ಧಿಗೆ ಕಾರಣರಾದರು ಎಂದು ನಾನು ವಿಚಾರ ಮಾಡಿದ್ದೇನೆ.

 • : ಖಂಡಿತ, ಗಿರೀಶ್‌ಗೆ ಸತ್ಯ ನಿರ್ವಹಿಸಲಿಕ್ಕೆ ಬರುತ್ತೆ. ಆದರೆ ಭಕ್ತಿ ಭಾವದ ಸಂಪೂರ್ಣ ಶರಣಾಗತಿಯನ್ನು ನಿರ್ವಹಿಸಲಿಕ್ಕೆ ಬರುತ್ತದೆಯೇ? (ನಗು) ನಮಗ್ಯಾರಿಗೂ ಬರುವುದಿಲ್ಲ ಅಂತ ಕಾಣುತ್ತೆ. ಬೇಂದ್ರೆ ಅದು ಗೊತ್ತಾಗುತ್ತಾ ಇತ್ತೋ ಏನೋ. ಗೊತ್ತಾಗಿ ಭಯವಾಗುತ್ತಿತ್ತೋ ಏನೋ. ಅದು ಭಯವನ್ನು ಹುಟ್ಟಿಸುವ ವಿಷಯವೇ. ದಾಸ್ತೋವ್‌ಸ್ಕಿಯಲ್ಲಿ ಅದು ಕಾಣುತ್ತದೆ.

ದಾಸ್ತೋವ್‌ಸ್ಕಿಯಲ್ಲಿ ಬಹಳ ಕಾಣುತ್ತದೆ. ಅದೇ ಆತನ ವಸ್ತು ಕೂಡಾ. ದಿ ಟೆರರ್ ಆಫ್ ಫೈತ್.

 • : ಹಾಂ! ದಿ ಟೆರರ್ ಆಫ್‌ ಫೈತ್

ಈಗ ನಾನು ಬರೀತಿರೋ ಹೊಸ ನಾಟಕ ಯವಕ್ರೀತ (ಅಗ್ನಿ ಮತ್ತು ಮಳೆ), ಅದರ ಕೇಂದ್ರ ವಸ್ತು ಯಜ್ಞ. ಒಂದು ಯಜ್ಞ ನಡೀತಿರುತ್ತೆ. ಅದರ ಸುತ್ತ ನಡೆಯೋ ಘಟನೆಯೇ ಈ ನಾಟಕದ ವಸ್ತು. ಮಹಾಭಾರತದ ಅರಣ್ಯ ಪರ್ವದಲ್ಲಿ ಈ ಘಟನೆ ಬರುತ್ತದೆ. ಈ ಘಟನೆಯ ಬಗ್ಗೆ ಓದುತ್ತಿದ್ದಾಗ ಮೀಮಾಂಸಕರುಗಳನ್ನು ಮತ್ತೆ ಓದಿದೆ. ಈ ಮೀಮಾಂಸಕರುಗಳದ್ದು ಒಂದು ರೀತಿಯ ಕೋಲ್ಡ್ ಲಾಜಿಕ್, ಕುಮಾರಿಲ ಭಟ್ಟ ಇತ್ಯಾದಿ. ಅವರಿಗೆ ಕ್ರಿಯಾ ವಿಧಿಗಳೇ ಕೇಂದ್ರ. ಅವರು ತಮ್ಮ ಕರ್ಮಠತೆಯನ್ನ ಸಮರ್ಥಿಸಿಕೊಳ್ಳುವ ರೀತಿ ಆಕರ್ಷವಾಗಿರುತ್ತದೆ. ಅವರೊಟ್ಟಿಗೆ ವಾಗ್ವಾದ ಸಾಧ್ಯ. ದೇವರನ್ನು ಒಪ್ಪುವುದೇ ಇಲ್ಲ ಅವರು. ಈಶ್ವರ ಬೇಕಾಗಿಲ್ಲ ಅವರಿಗೆ ಯಜ್ಞದಿಂದ ಅಪೂರ್ವವಾದ್ದು ಸಾಧಿಸಲಿಕ್ಕೆ, ಯಜ್ಞದ ಫಲ ದೊರಕಲಿಕ್ಕೆ ವಿಧಿಗಳು ಸಾಕು. ಒಂದು ಫಾರ್ಮಲ್ ಸ್ಟ್ರಕ್ಚರ್ ಸಾಕು.

ಇಷ್ಟು ಯಜ್ಞ ಮಾಡಿದರೆ ಇಷ್ಟಿಷ್ಟು ಫಲಗಳು ಬರುತ್ತವೆ, ಯಜ್ಞಕ್ಕೆ ಇಂದ್ರ ಬೇಕು, ರುದ್ರ ಬೇಕು, ವರುಣ ಬೇಕು ನಿಜ. ಆದರೆ ಇವರೆಲ್ಲ ಯಜ್ಞದ ಹಂದರಕ್ಕೆ ಪ್ರತಿಮೆಗಳು ಮಾತ್ರ. ನಿಯಮಗಳು ಮಾತ್ರ. ಅಲ್ಲಿ ಅವರು ಭಕ್ತಿಯ ದೇವರಲ್ಲ. ನೋಡಿದ ಕೂಡಲೇ ಕಣ್ಣೀರು ಬರುವ, ಕಾಲಿಗೆ ಬೀಳಬೇಕು ಅನ್ನಿಸುವ, ಹೃದಯ ತಾಕುವ ಭಕ್ತಿಯ ದೇವರುಗಳಲ್ಲವೇ ಅಲ್ಲ ಯಜ್ಞದ ಇಂದ್ರ, ವರುಣ, ರುದ್ರರು. ಯಜ್ಞಗಳು ಒಂದು ತರಹ ಎಲೆಕ್ಟ್ರಿಕ್ ಪ್ಲಗ್ ಪಾಯಿಂಗ್‌ ಇದ್ದ ಹಾಗೆ. ಅಲ್ಲಿ ಸ್ವಿಚ್ಛ್ ಹಾಕಿದರೆ ಇಲ್ಲಿ ದೀಪ  ಹತ್ತಬೇಕು. ಇವರೆಲ್ಲ ದೇವರಿಗೆ ಯಜ್ಞ ಮಾಡಿಆಹುತಿ ನೀಡಿ ಹವಿಸ್ಸನ್ನ ಸುರಿಯುತ್ತಿರಬೇಕಾದರೆ ಒಬ್ಬ ನಿರೀಶ್ವರವಾದಿ ಬಂದು ’ಈಶ್ವರ ಇಲ್ಲ’ ಅಂದುಬಿಡುತ್ತಾನೆ. ಇದು ನನಗೆ ಬಹಳ ಆಕರ್ಷಣೀಯವಾಗಿ ಕಾಣುತ್ತೆ. ನಮ್ಮಲ್ಲಿ, ಪಾಶ್ಚಿಮಾತ್ಯರಲ್ಲಿ ಇದ್ದ ಹಾಗೆ ಒಂದೇ ದೇವರು ಅಂತಿದ್ದಿದ್ದರೆ ಆಗ, ಒಂದು ಧರ್ಮ ಅಥವಾ ಒಂದೇ ಧರ್ಮ ಎನ್ನುವ ಗಟ್ಟಿ ನಂಬಿಕೆ ಬೇರೂರುತ್ತಿತ್ತೇನೋ. ಇವರು ನಾಸ್ತಿಕರೇನೂ ಅಲ್ಲ. ಆದರೂ ಈಶ್ವರನನ್ನು ನಂಬುತ್ತಿರಲಿಲ್ಲ.

 • : ಆಗ ಬೇಕಾಗಿರಲಿಲ್ಲ. ಅಲ್ಲಿ ಈಶ್ವರ, ರಸಾಯನ ಶಾಸ್ತ್ರದಲ್ಲಿ ಹೇಳುವಂತೆ ವೇಗವರ್ಧಕ ಅಷ್ಟೆ. ಆದರೆ ಭಕ್ತಿಯಲ್ಲಿ ಹಾಗಲ್ಲ. ಭಕ್ತಿಮಾರ್ಗದಲ್ಲಿ ಅವನು ಇದ್ದಾನೆ. ನನ್ನ ಸರ್ವಸ್ವವನ್ನು ಅವನಿಗೆ ಕೊಟ್ಟುಕೊಳ್ಳಬಹುದು, ಅವನನ್ನು ಕಾಣಬಹುದು.

ದಾಸ್ತೋವ್‌ಸ್ಕಿಯನ್ನು ಒಬ್ಬನು ಒಂದು ಕಡೆ ನೀನು ದೇವರನ್ನ ನಂಬುತ್ತೀಯಾ?’ – ಅಂತ ಕೇಳುತ್ತಾನೆ. ನಂಬುತ್ತೀಯ ಎನ್ನುವ ಪ್ರಶ್ನೆಯೇ ದಾಸ್ತೋವ್‌ಸ್ಕಿಗೆ ಭಯಾನಕವಾಗಿ ಕಾಣುತ್ತದೆ. ಟೆರರ್‌ ಆಗಿ ಕಾಣುತ್ತದೆ. ದೇವರನ್ನು ನಂಬುತ್ತೀನಿ ಅನ್ನುವದೇ ದೇವರನ್ನು ಹೊರಗಿಡಬಲ್ಲ, ಭಯ ಹುಟ್ಟಿಸಬಲ್ಲ ಪ್ರಶ್ನೆಯಾಗುತ್ತದೆ. ಬಹುಶಃ ಶರಣರ ಕಾಲದಲ್ಲಿ ಕೂಡಾ, ದೇವರು ಇದ್ದಾನೆ ಅನ್ನುವ ಉತ್ಕಟ ನಂಬಿಕೆ ಇಲ್ಲದಿದ್ದರೆ, ಆಗ ಸಾಮಾಜಿಕವಾಗಿ ಜಾರಿಯಲ್ಲಿದ್ದ ಅನೇಕ ವಿಚಾರಗಳನ್ನು ಸರಿಸಿ ಹಾಕಲಿಕ್ಕೆ ಸಾಧ್ಯವಾಗುತ್ತಿರಲಿಲ್ಲ. ಟ್ರಾನ್ಸೆಂಡೆಂಟಲ್ ಆದ ಇಂಥ ಸತ್ಯಗಳನ್ನ ನಾಟಕ ಕೆದಕಬೇಕು ಎನ್ನುವುದಾದರೆ ಅದರ ಆಕಾರದೇ ಬದಲಾಗಬೇಕಾಗುತ್ತದೆ. ಕೊನೆಕೊನೆಗೆ ಶೇಕ್ಸ್‌ಪಿಯರ್ ಮಾಡಿಕೊಂಡಿದ್ದ ಒಂದು ಆಕಾರವನ್ನ ಮೊದಲ ಆಕಾರಕ್ಕಿದ್ದ ವಾಸ್ತವಿಕ ಅಂಶಗಳನ್ನೆಲ್ಲ ತೆಗೆದು ಹಾಕಿ, ಟೆಂಪೆಸ್ಟ್ ಮೊದಲಾದ ನಾಟಕಗಳಲ್ಲಿ ಆತ ಹುಡುಕಿಕೊಂಡಿದ್ದ ಆಕಾರ ಅಂಥ ಪ್ರಯತ್ನ ಗಿರೀಶರಿಗೆ ಕೂಡಾ ಸಾಧ್ಯವಿದೆ.

ಅದನ್ನ ಈಗ ಯತ್ನಿಸುತ್ತಿದ್ದೇನೆ.

 • : ಗಿರೀಶರ ತುಘಲಕ್ ಓದಿದಾಗ ನನಗೆ ಮತ್ತೊಂದು ಸಂಗತಿ ಗೋಚರಿಸುತ್ತದೆ. ಅದು ತುಘಲಕ್‌ನ ಮಹತ್ವಾಕಾಂಕ್ಷೆ. ತನ್ನ ಕನಸಿಗೆ ಸರಿಗಟ್ಟುವ ಪ್ರಪಂಚ ಕಟ್ಟಬೇಕು ಅನ್ನುವ ಮಹತ್ವಾಕಾಂಕ್ಷೆ. ಅದು ಅಹಂಕಾರ ಜನ್ಯವೂ ಇರಬಹುದು. ಆದರ್ಶ ಜನ್ಯವೂ ಇರಬಹುದು. ಮಹತ್ವಾಕಾಂಕ್ಷಿಗಳಿಗೆ ಇರುವ ತೊಡಕು ಅದೇ. ತನ್ನ ಮಹತ್ವಾಕಾಂಕ್ಷೆ ಆದಶ್ ಜನ್ಯ ಎಂದು ತಿಳಿಯುತ್ತಿರುತ್ತೇವೆ, ಒಮ್ಮೊಮ್ಮೆ ಅದು ಅಹಂಕಾರ ಜನ್ಯವೋ ಎನ್ನುವ ಅನುಮಾನ ಕಾಡುತ್ತದೆ. ಇದು ಗಾಂಧೀಜಿಯಲ್ಲೂ ಕಾಡಬಹುದಾದ ಪ್ರಶ್ನೆ. ಪ್ರಾಯಶಃ ಸ್ಟಾಲಿನ್‌ ಹಾಳಾದದ್ದು ದ್ವಂದ್ವವನ್ನ ಹಿಡಿಯಲಾರದೆಯೇ ಇರಬಹುದು. ರಾಜಕೀಯದಲ್ಲಿ ಬಹಳ ಮುಖ್ಯವಾದ ದ್ವಂದ್ವ ಗಿರೀಶರ ನಾಟಕದಲ್ಲಿ ಚೆನ್ನಾಗಿ ಬಂದಿದೆ.

ಗಿರೀಶರ ನಾಟಕದಲ್ಲಿ ನನಗೆ ಇಷ್ಟವಾಗುವ ಮತ್ತೊಂದು ಅಂಶ, ಅದರ ಟೆಕ್ಸ್‌ಚರ್, ವ್ಯಕ್ತಿ ವ್ಯಕ್ತಿಗಳ ನಡುವಿನ ಸಂಬಂಧದಲ್ಲಿ ಅವರಿಗಿರುವ ಸೂಕ್ಷ್ಮವಾದ ಒಳನೋಟ. ಹಯವದನ ನಾಟಕದಲ್ಲಿ ಹೊಟ್ಟೆ ಕಿಚ್ಚು ಹುಟ್ಟುವ ರೀತಿ ಕಂಡು, ಎಷ್ಟು ಚೆನ್ನಾಗಿ ಬರೀತಾರೆ ಗಿರೀಶ್ ಅನ್ನಿಸಿತ್ತು ನನಗೆ. ಹೆಣ್ಣು ಗಂಡಿನ ಸಂಬಂಧದಲ್ಲಿ, ಇಬ್ಬರು ಗಂಡುಗಳ ನಡುವೆ, ಅಸೂಯೆಯ ಬೀಜ ನಿಧಾನವಾಗಿ ಮೊಳೆಯುವ ಪರಿ, ಅಲ್ಲಿ ತುಂಬ ಚೆನ್ನಾಗಿ ಬಂದಿದೆ. ಕಾದಂಬರಿಕಾರನಿಗೆ, ಕಥೆಗಾರನಿಗೆ ಮೂಲ ವಸ್ತುವೇ ಅಸೂಯೆ. ತರಹದ ಸೂಕ್ಷ್ಮಗಳನ್ನ ಅವರು ಬೆಳಸಲಿಕ್ಕೆ ಪ್ರಯತ್ನಿಸಿದ ನಾಟಕ ಅಂಜುಮಲ್ಲಿಗೆ. ಅಲ್ಲಿ ಗಿರೀಶ್ ಮನಸ್ಸಿನ ಒಳ ಹೊಕ್ಕು ಸೈಕಲಾಜಿಕಲ್ ಆಗಿ ಆಳಗಳಿಗೆ ಇಳಿಯಲು ಪ್ರಯತ್ನಿಸುತ್ತಾರೆ. ಹಿಟ್ಟಿನ ಹುಂಜ ನಾಟಕದಲ್ಲಿ ಅವರಿಗೆ ಒಂದು ಧಾರ್ಮಿಕ ಚೌಕಟ್ಟು ಸಿಕ್ಕಿಬಿಡುತ್ತದೆ. ಪಾಪಪ್ರಜ್ಞೆಯನ್ನು ಅಲ್ಲಿ ಶೋಧಿಸುತ್ತಾರೆ.

ಅಂಜು ಮಲ್ಲಿಗೆ ಇಂಗ್ಲೆಂಡಿನಲ್ಲಿ ನಡೆಯುವ ನಾಟಕ. ಅತ್ಯಂತ ಆಧುನಿಕವಾದ ನಾಟಕವಾಗುವ ಸಾಧ್ಯತೆ ಅಂಜುಮಲ್ಲಿಗೆಗೆ ಇದ್ದರೂ, ಕನ್ನಡದ ಮನಸ್ಸು ಅದೇಕೋ ನಾಟಕವನ್ನು ಒಪ್ಪಿಕೊಳ್ಳಲಿಕ್ಕೆ ತಯಾರಿಲ್ಲ. ಗಿರೀಶರು ಒಳ್ಳೆಯ ನಾಟಕ ಬರೆದಿದ್ದಾರೋ ಇಲ್ಲವೋ ಎನ್ನುವುದು ನನ್ನ ಪ್ರಶ್ನೆ ಅಲ್ಲ. ಬಹುಶಃ ಮರಾಠಿಗರು ಇಂಥ, ಸಂಪೂರ್ಣ ವೈಯಕ್ತಿಕ ನೆಲೆಯಲ್ಲಿ ನಡೆಯುವ ಸಾಹಿತ್ಯವನ್ನ ಒಪ್ಪಿಕೊಳ್ಳುತ್ತಾರೋ ಏನೋ.

ನಾನು, ಶಾಂತಿನಾಥ ದೇಸಾಯಿ ಈ ಬಗ್ಗೆ ಮಾತನಾಡಿದ್ದೇವೆ. ಮರಾಠಿ ಸಾಹಿತ್ಯದಲ್ಲಿ ನಗರ ಪ್ರಜ್ಞೆ ಮೂಡಿರುವ ಹಾಗೆ ಕನ್ನಡದಲ್ಲಿ ಮೂಡಿಲ್ಲ. ನಮ್ಮಲ್ಲಿನ್ನೂ ನಗರ ಒಂದು ವಸ್ತು ಆಗಿಲ್ಲ. ನಮ್ಮ ಯಾವ ಕಾದಂಬರಿಯಲ್ಲೂ ಆಗಿಲ್ಲ. ಚಿತ್ತಾಲಯ ಪ್ರಯತ್ನ ಮಾಡಿದರು. ಆದರೆ ಕೊನೆಗೂ ಅವರ ಕಥೆಗಳಲ್ಲಿ ಬರುವವರು ಕುಮಟಾದ ಚಿತ್ತಾಲರೇ ಹೊರತು ಮುಂಬಯಿಯ ಚಿತ್ತಾಲರಲ್ಲ. (ನಗು)

 • : (ನಗುತ್ತಾ) ಹಳ್ಳಿಯಿಂದ ಬಂದ ಚಿತ್ತಾಲ.

ಮರಾಠಿಗರಿಗೆ ಮುಂಬಯಿ, ಪುಣೆ, ಕೊಲ್ಲಾಪುರ, ನಾಗಪುರ ಹೀಗೆ ಪಟ್ಟಣಗಳು ಸಹಜವಾಗಿವೆ. ಕನ್ನಡ ಲೇಖಕರಿಗೆ ಬೆಂಗಳೂರು ಸಹ ನಂತರದ ಅನುಭವವೇ ಹೌದು. ನಮ್ಮ ಲೇಖಕರನ್ನೂ ಧಾರವಾಡ ಶಿರಸಿಗಳಿಂದ ಬಂದು ಬೆಂಗಳೂರಲ್ಲಿ ಬೀಡು ಬಿಡುತ್ತಿರುವ ಮೊದಲ ಸಂತತಿಗಳು.

 • ಪ್ರ: ಅಪ್ಪಟ ಆಧುನಿಕವನ್ನ ಕನ್ನಡದ ಮನಸ್ಸು ಸ್ವೀಕರಿಸುವುದಿಲ್ಲ ಎನ್ನುವ ಆತಂಕ ನಿಮ್ಮನ್ನ ಕೆಲವೊಮ್ಮೆ ದಾರಿ ತಪ್ಪಿಸಿರಬಹುದೆ ಎನ್ನುವ ಅನುಮಾನ ನನಗಿದೆ. ಹಯವದನ, ನಾಗಮಂಡಲ ಇತ್ಯಾದಿ, ಜಾನಪದದ ಭ್ರಮೆ ಹುಟ್ಟಿಸುವ ನಾಟಕಗಳನ್ನು ಬರೆಯುವುದು ನಿಮಗೆ ನೀರು ಕುಡಿದ ಹಾಗೆ. (ನಗು) ಪ್ರಾಯಶಃ ಭಾರತೀಯ ಭಾಷೆಗಳಲ್ಲೇ ನಾಟಕ ಕಟ್ಟುವ ಕೌಶಲ್ಯದಲ್ಲಿ ಪಳಗಿದವರು ನೀವೇ ಹೌದು. ಅದರಲ್ಲಿ ಅನುಮಾನವಿಲ್ಲ. ಹಾಗಾಗಿಯೇ ಹಯವದನ, ನಾಗಮಂಡಲ ನಾಟಕಗಳು ನಿಮಗೆ ಸುಲಭದ ಹಾದಿಗಳು ಎಂದು ನಾನನ್ನುವುದು. ಇಂತಹ ನಾಟಕಗಳನ್ನು ಬರೆಯುವಾಗ ನಿಮ್ಮ ಮಹತ್ವಾಕಾಂಕ್ಷೆಗೆ ನೀವೇ ಕಟ್ಟುಪಾಡುಗಳ ಹಾಕಿಕೊಳ್ಳುತ್ತಿರೇನೋ ಎನ್ನುವ ಅನುಮಾನವಿದೆ ನನಗೆ.
 • : ಅಡಿಗರ ಕಾವ್ಯದ ಒಂದು ಘಟ್ಟದಲ್ಲಿ ಅಪ್ಪಟ ಆಧುನಿಕ ಪ್ರತಿಮೆಗಳು, ಅಂದರೆ ನಗರದ ಪ್ರತಿಮೆಗಳು ತುಂಬಾ ಬರುತ್ತವೆ. ಆನಂತರ ಬಂದ ಅವರ ಭೂಮಿಗೀತ ನಡೆಯುವ ಜಾಗ ಹಳ್ಳಿ. ಅಡಿಗರ ಹತ್ತಿರ ಒಂದು ಸಾರಿ ನಾನು ಪ್ರಶ್ನೆ ಎತ್ತಿದ್ದೆ. ಅದಕ್ಕೆ ಅವರು ಹೇಳಿದ್ದು, ’ನೋಡಿ, ನಮ್ಮ ಕನ್ನಡ ಬದುಕುತ್ತಾ ಇರುವುದು ಹಳ್ಳಿಗಳಲ್ಲಿ. ನೀವು ಪೇಟೆಗೆ ಬಂದೊಡನೆ ಅರ್ಧ ಕನ್ನಡ ಬಳಸುತ್ತೀರಿ, ಅರ್ಧ ಇಂಗ್ಲಿಷ್ ಬಳಸುತ್ತೀರಿ. ಪೇಟೆಯಲ್ಲಿ ಸ್ಥಿರವಾದ ಒಂದು ಭಾಷೆ ಅಂತ ಇರುವುದಿಲ್ಲ’. ಗಿರೀಶ್ ಒಂದು ಅತ್ಯಾಧುನಿಕವಾದ ನಾಟಕ ಬರೆದರೆ ನಾಟಕದ ಪಾತ್ರಗಳು ನಿಜವಾಗಿಯೂ ಇಂಗ್ಲಿಷ್‌ನಲ್ಲಿ ಮಾತನಾಡಬೇಕು. ಆದರೆ ಗಿರೀಶ್ ಅದನ್ನು ಕನ್ನಡದಲ್ಲಿ ಬರೆದಿರುತ್ತಾರೆ. ಅಂಜುಮಲ್ಲಿಗೆಯಲ್ಲಿ ದ್ವಂದ್ವ ಸ್ಪಷ್ಟವಾಗಿ ಕಾಣುತ್ತದೆ.

ಹೌದು, ರಾಮಾನುಜನ್ ಹಾಗೆ ಅಂದಿದ್ದರು. ನೀನು ಈ ನಾಟಕವನ್ನ ಇಂಗ್ಲಿಷ್‌ನಲ್ಲಿ ಬರೆಯಬೇಕಿತ್ತು ಅಂದಿದ್ದರು. ಆದರೆ ಸಮಸ್ಯೆ ಏನೆಂದರೆ, ಇಂಗ್ಲಿಷ್‌ನಲ್ಲಿ ಬೇಕಾದ್ದನ್ನ ಬರೆಯಬಹುದು. ನನ್ನ ಪ್ರಕಾರ ಈ ಸಮಸ್ಯೆಯನ್ನ ನಾವು ಕನ್ನಡದಲ್ಲೇ ಎದುರಿಸಬೇಕು.

 • : ಹೌದು. ಚೋಮನ ದುಡಿ ನೋಡಿ. ಅಲ್ಲಿ ಅರ್ಧ, ಮುಕ್ಕಾಲು ಘಟನೆ ನಡೆಯುವುದು ತುಳುವಿನಲ್ಲಿ. ಕಾರಂತರು ಕಾದಂಬರಿಯನ್ನ ಬರೆದಿರುವುದು ಕನ್ನಡದಲ್ಲಿ. ಆದರೆ ಕಾರಂತರ ಕಾದಂಬರಿ, ಒಡೆದು ನಿಂತಂತೆ ಕಾಣುವುದಿಲ್ಲ. ಇಂಗ್ಲಿಷ್‌ನಲ್ಲಿ ನಡೆದ ಸಂಭಾಷಣೆಗಳನ್ನ ಕನ್ನಡದಲ್ಲಿ ಬರೆದಾಗ ಮಾತ್ರ ಅದು ಒಡೆಯುತ್ತದೆ.

ಲೇಖಕನಿಗೆ ಇದೂ ಒಂದು ಸವಾಲು. ನಾನೊಂದು ಚೀನೀ ಪಾತ್ರವನ್ನು ಕನ್ನಡದಲ್ಲಿ ತಂದೆ ಎನ್ನಿ. ಕನ್ನಡಕ್ಕೆ ಅದಿನ್ನೂ ಸಹಜವಲ್ಲದಿದ್ದರಿಂದ, ಭಾಷೆ ಅನುವಾದದ ತರಹ ಕಾಣಿಸುತ್ತದೆ. ಅದೇ ಚೀನೀ ಪಾತ್ರವನ್ನ ಇಂಗ್ಲಿಷ್‌ನಲ್ಲಿ ಬರೆದಿದ್ದರೆ ಹಾಗೆ ಅನ್ನಿಸುತ್ತಿರಲಿಲ್ಲ. ಇಂಗ್ಲಿಷ್ ಕ್ಯನ್ ಟೇಕ್ ಎವೆರಿಥಿಂಗ್‌.

 • : ಶೇಕ್ಸ್‌ಪಿಯರ್ ಗ್ರೀಕ್‌ ನಾಟಕಗಳನ್ನ ಇಂಗ್ಲಿಷ್‌ನಲ್ಲಿ ಬರೆದನಲ್ಲಪ್ಪ! ಜೂಲಿಯಸ್ ಸೀಸರ್ ಇಂಗ್ಲಿಷ್‌ನಲ್ಲಿ ಮಾತನಾಡುತ್ತಾನೆ. ಯಾರೂ ಜೂಲಿಯಸ್ ಸೀಸರ್ ಇಂಗ್ಲಿಷ್‌ನಲ್ಲಿ ಮಾತನಾಡಬಹುದಾಗ ಎಂದು ಕೇಳುವುದಿಲ್ಲ(ನಗು). ಕನ್ನಡ ಇಲ್ಲಿಯವರೆಗೂ ಕನ್ನಡತನವನ್ನು ಮಾತ್ರ ಸ್ವೀಕರಿಸುವ ಭಾಷೆಯಾಗಿ ಉಳಿದಿದೆ. ಕನ್ನಡೇತರವನ್ನ ಸಹಜವಾಗಿ ಸ್ವೀಕರಿಸುವ ಸ್ಥಿತಿಗೆ ಕನ್ನಡವನ್ನ ನಾವು ಲೇಖಕರು ಸಿದ್ಧಗೊಳಿಸಬೇಕು.
 • ಪ್ರ: ಭಾಷೆಯ ದೃಷ್ಟಿಯಿಂದ ತಲೆದಂಡಕುತೂಹಲಕಾರಿ ಪ್ರಯೋಗ. ರಾಜರು ಮಾತನಾಡಲ್ಲಿಕ್ಕೆಂದೇ ಒಂದು ರೀತಿಯ ಕನ್ನಡವನ್ನ ಹುಟ್ಟು ಹಾಕಿದರು ಸಂಸರು. ಸಂಸರ ನಂತರ ಕಂಪನಿ ನಾಟಕಗಳು ಚಾರಿತ್ರಿಕ ನಾಟಕಗಳಿಗೆಂದು ಮತ್ತೊಂದು ರೀತಿಯ ಕನ್ನಡವನ್ನು ಬೆಳೆಸಿದವು. ಆಮೇಲೆ ಬಂದದ್ದು ತುಘಲಕ್. ತುಘಲಕ್ ಆಧುನಿಕ ನಾಟಕ ಸಾಹಿತ್ಯದಲ್ಲಿ, ಚಾರಿತ್ರಿಕ ಪಾತ್ರಗಳಿಗೆಂದು ಮತ್ತೊಂದು ರೀತಿಯ ಕನ್ನಡವನ್ನು ಒದಗಿಸಿತು. ಅಲ್ಲಿಂದ ಮುಂದೆ ತಲೆದಂಡ, ಗಿರೀಶ್ ನಾಟಕದಲ್ಲಿ ಚಾರಿತ್ರಿಕ ಪಾತ್ರಗಳ ಭಾಷೆಯನ್ನ ತಲೆಕೆಳಗು ಮಾಡುತ್ತಾರೆ. ತಲೆದಂಡದ ರಾಜ ಗ್ರಾಮೀಣ ಬಳಸುತ್ತಾನೆ. ನನ್ನ ಪ್ರಕಾರ ಬದಲಾವಣೆ, ಅಥವಾ ತಲೆಕೆಳಗು ಮಾಡುವಿಕೆ, ಬರಿಯ ಭಾಷೆಗೆ ಸೀಮಿತವಾದ ಕೈಚಳಕವಲ್ಲ. ಗಿರೀಶರು ತನ್ನ ಒಟ್ಟು ನಿಲುವಿನಲ್ಲೇ ತಂದುಕೊಂಡ ಮೂಲಭೂತ ಬದಲಾವಣೆ ಇದು. ಅಂದರೆ ತುಘಲಕ್ ನಾಟಕದ ಆರ್ಕಿಟೈಪಲ್ ದೊರೆ ಮರೆಯಾಗಿ, ತಲೆದಂಡದಲ್ಲಿ ಜಾನಪದದ ರಾಜ ತಲೆ ಎತ್ತುತ್ತಾನೆ.
 • : ಇಲ್ಲಿ ಇನ್ನೊಂದು ಅಂಶ ಇದೆ ಪ್ರಸನ್ನ. ಅದು ಬಿಜ್ಜಳನ ಜಾತಿ. ಆತ ಕ್ಷೌರಿಕ. ಅದು ನಾಟಕದ ಮುಖ್ಯ ಅಂಶ. ಪ್ರಾಯಶಃ ಇಂಡಿಯಾದ ಅನೇಕ ರಾಜರು ರೀತಿ ಕೆಳ ಜಾತಿಯಿಂದ ಬಂದ ರಾಜರಾಗಿರಬಹುದು. ಅವರ ಭಾಷೆಯಲ್ಲಿ ದ್ವಂದ್ವ ತಲೆದೋರಿಬಹುದು. ಮನೆಯಲ್ಲಿ ಮಾತನಾಡುವಾಗ ಜಾತಿಯ ಭಾಷೆಯನ್ನೇ ಆಡುತ್ತಿದ್ದಿರಬಹುದು. ಹಾಗೆ ಮಾತನಾಡಲಿಕ್ಕಾಗ ಕಡೆ, ಅಂದರೆ ಆಸ್ಥಾನದಲ್ಲಿ, ಒಂದು ರೀತಿಯ ಕೃತಕ ಕನ್ನಡ ಮಾತನಾಡಿರಬಹುದು. ನಾವಿದನ್ನ ನಮ್ಮ ಮೈಸೂರು ಮಹಾರಾಜರಲ್ಲಿ ಗಮನಿಸಿದ್ದೆ. ಗಿರೀಶ್ ಬಿಜ್ಜಳನಲ್ಲಿ ಇದನ್ನ ತುಂಬ ಚೆನ್ನಾಗಿ ಬಳಸುತ್ತಾರೆ. ಬಸವಣ್ಣ ನೋಡಿ, ಬ್ರಾಹ್ಮಣನಾಗಿ ಬಂದವನು, ಸಂಸ್ಕಾರ ಗಿಂಸ್ಕಾರಗಳೆಲ್ಲ ಬಹಳ ಸಹಜವಾಗಿದ್ದವನು. ಅವನ ಭಾಷೆಯಲ್ಲಿ ಅದು ಕಾಣುತ್ತದೆ. ಯುರೂಪಿಯನ್ ನಾಟಕಗಳಲ್ಲಿ ಇವೆಲ್ಲ ಸಾಧ್ಯವೇ ಇಲ್ಲ. ನಮ್ಮ ಮಟ್ಟಿಗೆ ಒಂದೊಂದು ಜಾತಿಗೆ ಒಂದೊಂದು ಭಾಷೆ, ಉಪಭಾಷೆ ಇರುತ್ತದೆ.

ಜಾತಿ ಭೇದ ತೊಡೆಯಬೇಕು, ನಾವೆಲ್ಲ ಒಂದಾಗಬೇಕು ಅನ್ನುತ್ತೇವೆ. ಬಾಯಿ ತೆಗೆದರೆ ಅವರವರ ಜಾತಿ ಹೊರಬರುತ್ತದೆ. ಇವ ಬ್ರಾಹ್ಮಣ, ಇವ ಲಿಂಗಾಯಿತ, ಇವ ಇಂಥವರು ಇತ್ಯಾದಿ. ಯು ನೋ ಎವೆರಿ ಒನ್ ಈಸ್ ಬಾರ್ನ್‌ ಇನ್ ಎ ಲಾಂಗ್ವೆಜ್. ಆದ್ದರಿಂದ ಭಾಷೆ ಬಿಡದೆ ಜಾತಿ ಬಿಡಲಿಕ್ಕೆ ಸಾಧ್ಯವೇ ಎನ್ನುವುದು ಸಮಸ್ಯೆ. ಇದೇ ಸಮಸ್ಯೆ ಕಾಯಕಕ್ಕೆ ಕೂಡಾ ಸಲ್ಲುತ್ತದೆ. ಸಾಮಾಜಿಕವಾಗಿ ನಮ್ಮಲ್ಲಿ ಕಸುಬು ಮತ್ತು ಜಾತಿ ಎಷ್ಟೊಂದು ಹೆಣೆದುಕೊಂಡುಬಿಟ್ಟಿದೆ ಎಂದರೆ, ಒಬ್ಬ ಕ್ಷೌರಿಕ ಅಂದಾಗ, ಅವನ ಜಾತಿಯ ಬಗ್ಗೆ ಹೇಳುತ್ತಿದ್ದೇವೋ, ಅವನ ಉದ್ಯೋಗದ ಬಗ್ಗೆ ಹೇಳುತ್ತಿದ್ದೇವೋ ಎಂದು ವ್ಯತ್ಯಾಸ ಮಾಡಲಿಕ್ಕೆ ಕಷ್ಟವಾಗಿ ಬಿಡುತ್ತದೆ. ಹಾಗಾಗಿ ಶರಣರು, ಕಾಯಕವನ್ನ ಎತ್ತಿ ಹಿಡಿದು ಜಾತಿಗಳನ್ನು ಬಿಡಬೇಕು ಅಂದಾಗ ಒಂದು ಸಾಂಸ್ಕೃತಿಕ ದ್ವಂದ್ವ ಶುರುವಾಗುತ್ತದೆ.