• ಶ್ರೋತೃವಿಗೂ, ಗಾಯಕನಿಗೂ ಭಾರತೀಯ ಸಂಗೀತದಲ್ಲಿ ಅತ್ಯಂತ ನಿಕಟವಾದ ಸಂಬಂಧ ಇದೇಂತ ಹೇಳಿದ ಹಾಗೂ ಆಯಿತು ನೀವು. ಏಕೆಂದರೆ ಅದು ಶ್ರೋತೃವಿನ ಜೊತೆಗೇ ಹುಟ್ಟಿಕೊಂಡು, ಮತ್ತೆ ಶ್ರೋತೃವನ್ನು ತಲುಪುತ್ತದೆ. ಈಗ ಸದ್ಯದ ಸ್ಥಿತಿಯಲ್ಲಿ, ಹಿಂದೆ ಸಂಗೀತಕ್ಕೆ ರಾಜಾಶ್ರಯ ಇವುಗಳಿದ್ದ ಕಾಲ. ಸಿನಿಮಾ ಸಂಗೀತ ಇವು ಹೆಚ್ಚೆಚ್ಚು ಜನಪ್ರಿಯವಾಗ್ತಾ ಇರೋವಾಗ ನಿಮ್ಮ ಸಂಗೀತದ ಒಂದು ಆದರ್ಶ ಇದೆಯಲ್ಲ, ಅದು ಉಳಿದುಕೊಳ್ಳುವ ಕ್ರಮ ಹೇಗೆ? ಇದಕ್ಕೆ ನಿಮ್ಮ ಅನೇಕ ಉತ್ತರಗಳನ್ನು ನಾನು ಬಯಸ್ತೀನಿ. ಒಂದು: ಶಾಸ್ತ್ರೀಯ ಸಂಗೀತ ನಮ್ಮ ಜಾನಪದದ ಜೊತೆ ಯಾವ ರೀತಿ ಸಂಬಂಧ ಹೊಂದಿರಬೇಕು? ಎರಡು : ಸಿನಿಮಾ ಸಂಗೀತದ ಜೊತೆ ಯಾವ ರೀತಿ ಸಂಪರ್ಕ ಉಳಿಸಿಕೊಳ್ಳಬಹುದು? ಏಕೆಂದರೆ ಭಾರತೀಯ ಶ್ರೋತೃವನ್ನೇ ಕಳೆದುಕೊಂಡರೆ ಅಥವಾ ಶ್ರೋತೃಗಳ ಜೊತೆ ನಮ್ಮ ಬಂಡವಾಳ ಶಾಹಿ ವ್ಯವಸ್ಥೆ ಇತ್ಯಾದಿಗಳೆಲ್ಲ ಬೇರೆ ಬೇರೆ ಕಡೆ ಅವನನ್ನು ಆಕರ್ಷಿಸುತ್ತ, ನಮ್ಮ ಸಂಗೀತದ ಯುಗದ ಒಳ್ಳೆಯ ಶ್ರೋತೃವರ್ಗಕ್ಕೆ ಯಾವ ಪರಿಶ್ರಮ ಬೇಕೋ ಅದರಿಂದ ಅವನನ್ನು ದೂರ ಮಾಡಿ, ಸುಲಭವಾದ್ದನ್ನೇ ಕೇಳುವಂತೆ ಅಥವಾ ಒಪ್ಪುತ್ತಾ ಹೋದರೆ, ಆಗ ಏನಾಗುತ್ತೆ ಅನ್ಸುತ್ತೆ? ಇದರ ಬಗ್ಗೆ ನೀವು ಏನು ಯೋಚಿಸುತ್ತೀರಿ? ಏನು ಮಾಡ್ತೀರಿ? ಇಂಥ ಸಮಸ್ಯೆ ಪರಿಹಾರದ ಸಲುವಾಗೇ ಪ್ರಶ್ನೆ ಕೇಳ್ತಿದ್ದೀನಿ. ಶ್ರೋತೃಗಳ ಜೊತೆಗೆ ಇವು ಬದಲಾವಣೆ ಆಗಬೇಕಾಗುತ್ತದೆ ಅಲ್ವೆ? ನಿಮ್ಮದೊಂದು ಪ್ಯೂರ್ ಆದ ಸಂಗೀತವನ್ನ ಇಟ್ಕೊಂಡು ನೀವು ದೂರ ಇರೋದು ಸಾಧ್ಯವೇ ಇಲ್ಲ. ಸಾಹಿತ್ಯವಾದರೋ ನಾನು ಪುಸ್ತಕ ಬರೆದಿಟ್ಟುಬಿಡಬಹುದೇನೋ. ಆದರೆ ಸಂಗೀತಗಾರ ಅಲ್ಲೇನೆ ಅಂದರೆ ಶ್ರೋತೃವಿನ ಎದುರೇ ಫಲಿಸಬೇಕು ಅಲ್ಲವೆ?

ಇಲ್ಲಿ ಒಂದು ತಪ್ಪಿದೆ. ಬಹುಶಃ ನಾನು ಹೇಳಿದ್ದು ನೀವು ತಪ್ಪು ಅರ್ಥ ಮಾಡಿಕೊಂಡಿದ್ದೀರಿ. ನಮ್ಮ ಸಂಗೀತ ಶ್ರೋತೃ ಇದ್ದರೇ ಫಲಿಸ್ತದೆ, ಇಲ್ಲದೇ ಇದ್ದರೆ ಇಲ್ಲಾಂತಲ್ಲ. ನಾನು ಹೇಳಿದ್ರಲ್ಲಿ ಬೇರೆ ಅಂಶಗಳಿವೆ. ಸಂಗೀತ ಒಂದು ಮೆಡಿಟೇಶನ್. ಸಂಗೀತವೇ ಒಂದು ತಪಶ್ಚರ್ಯೆ ಅಂತ ನಾನು ಇಟ್ಕೊಂಡಿದ್ದಾಗ ಒಬ್ಬನೇ ಮಾಡಲೂ  ಸಾಕು. ಅದು ಬಿಡಿ, ಶ್ರೋತೃಗಳೂ ಇರಬೇಕಾದರೆ, ಅವರೂ ಸಂಗೀತವನ್ನ ತಿಳಕೊಂಡರೆ. ಆಗ ಅವರಿಗೂ  ನಮಗೂ ಮಧ್ಯೆ  ಇರುವಂಥ ಒಂದು ಕ್ರಿಯೇಷನ್ ಆಗ್ತದೆ.  ಅಂದರೆ ಅದು ಸಂಗೀತದ ಒಂದು ’ಪಕಳೆ’ ಅಷ್ಟೇ. ಒಬ್ಬನೇ ಸಂಗೀತಗಾರನೂ ತಾನೇ ಸಂಗೀತವನ್ನು ಅಭ್ಯಾಸ ಮಾಡಿ. ಅದರಲ್ಲೇ ಅವನು ಬಹಳ ಸಾಫಲ್ಯ ಕಾಣುವುದು, ಸ್ಪಿರಿಚುವಲ್ ಆಗೋದು ಸಾಧ್ಯ. ಅದೊಂದು ಕಡೆ ಇರಲಿ. ಈಗ ನಾನು ಹೇಳೋ ಎಲ್ಲ ಮೂಲ ಜಾನಪದ ಸಂಗೀತದಲ್ಲಿ ಸಿಗ್ತಾವೆ. ಸ್ವಲ್ಪ ಮ್ಯುಟೆಶನ್ಸ್ ಇರ್ತಾವೆ. ಅಂದರೆ ಬಹಳ ಮುದ್ದಾದ ಫೋಕ್‌ಸಾಂಗ್ಸ್ ಇರ್ತಾವೆ. ಅದು ಅದರಿಂದಲೇ ಹುಟ್ಟಿರ‍್ತವೆ. ನಾನೀಗ ಸಿನಿಮಾ ಸಂಗೀತದಲ್ಲಿ ಹೇಳ್ತೀನಿ. ಇದರಲ್ಲೂ ಬಹಳ ಮಟ್ಟಿಗೆ ನಮ್ಮ ಸಂಗೀತದ ಅಂಶಗಳೇ ಇರ್ತವೆ. ಈಗ ನೀವೇನು ಜಾಝೀ ಫಿಲ್ಮ್ ಬಗ್ಗೆ ಹೇಳಿದಿರಿ, ಅದರಲ್ಲೂ ಸುಮಾರು ಶೇ. ೭೫ ರಷ್ಟು ನಮ್ಮ ಸಂಗೀತದ ತಳಹದಿ ಇರ್ತದೆ. ಅಂದ್ರೆ ಸರ್ಫೇಸ್ ಸ್ಟ್ರಕ್ಚರ್ ಬಹಳಷ್ಟು ಬೇರೆ ಇದ್ದರೂ ಬೇಸ್ ಸ್ಟ್ರಕ್ಚರ್ ಇವೇ ಇರ್ತಾವೆ. ಇದರ ಮುಂದೆ… ನೀವು ಕೇಳಿದಿರಲ್ಲಾ ಜನಗಳು ಈಗ ಸಾಮಾಜಿಕ ಬಂಡವಾಳ ಶಾಹಿಯಾಗಲೀ, ಸಾಮಾಜಿಕ ಬದಲಾವಣೆಗಳೇ ಈ ಸಂಗೀತದಿಂದ ಓಡಿ ಹೋಗ್ತಿದಾವೆ, ಇದಕ್ಕೇನು ಮಾಡಬೇಕಂತ. ಇದಕ್ಕೆ ಒಂದು ಸೀದಾ ಜವಾಬಿಲ್ಲ. ಒಂದು ರೀತಿಯಿಂದ ಕೇಳಿದರೆ ಅವರು ದೂರ ಹೋಗ್ತಾ ಇಲ್ಲ. ನಿಜವಾಗಿಯೂ ಸೀರಿಯಸ್ ಆಗಿ ಕೇಳುವಂಥ ಪಬ್ಲಿಕ್ ಈಗ ಹೆಚ್ಚಿಗೆ ಇದೆ. ಮೊದಲು ರಾಜಾಶ್ರಯ ಇತ್ತು. ರಾಜರು, ಅಲ್ಲಿಯ ಕೆಲವರು ಮಾತ್ರ ಕೇಳುತ್ತಿದ್ದರು. ಈಗ ಕನ್ಸರ್ಟ್ಸ್ ಆಗ್ತಿದೆ ಅಂದ್ರೆ ಸಾವಿರಾರು ಮಂದಿ ಬಂದು ಸಂಗೀತ ಕೇಳ್ತಾರೆ. ಅದರಿಂದ ಆ ದೃಷ್ಟಿಯಲ್ಲಿ ನಾನು ನಿರಾಶನಲ್ಲ. ಎಷ್ಟೋ ತರಹದ ಸಂಗೀತ, ಬೇರೆ ರೀತಿಯವು ಬಂದರೂ, ರಾಜಾಸ್ಥಾನದಲ್ಲಿದ್ದವನು, ಯಾವುದೋ ಫ್ಯಾಕ್ಟರಿ ಒಳಗೆ ಕೆಲಸ ಮಾಡೋವನಿಗೂ ಸಹ ಒಳಗೆ ಸಂಗೀತದ ಈ ಸುಖಪಡುವ ಸ್ವಭಾವ ಇದ್ದೇ ಇರ್ತದೆ. ಅವನು ಇಷ್ಟರವರೆಗೂ ಗುನುಗುನುಸ್ತಿರ್ತಾನೆ, ಅದೇ ಸುಖ ಅವನು ಪಡೀತಾನೆ. ನಾವು ಸಂಗೀತವನ್ನು ತುಂಬ ಪ್ರೀತಿಸೋ ಜನಗಳು. ಇವತ್ತು ಫಿಲ್ಮ್‌ನ ಮಟ್ಟುಗಳನ್ನು ನಾವು ಹಾಕ್ತೀವಿ. ಅದರಿಂದ ನಾವು ಪಡೆಯೋ ಸುಖ ನಮ್ಮಪ್ಪ ಬೇರೆ ಯಾವುದೇ ಸಂಗೀತದ ಮಟ್ಟು ಹಾಡಿದ್ದ ಸುಖವೋ ಅದನ್ನ ನಾವು ಪಡೀತೀವಿ. ಅದರಿಂದ ಸಂಗೀತಕ್ಕೆ ರೆಸ್ಪಾನ್ಸ್ ಇದೆ. ನಮ್ಮ ಸಂಸ್ಕೃತಿ ಒಡೆದುಹೋಗಿದೆ, ಆರ್ಗ್ಯಾನಿಕ್ ಆಗಿ ಉಳೀಲಿಲ್ಲ ಎಂಬುದು ನಿಮ್ಮ ಪ್ರಶ್ನೆಯಾದರೆ ಆ ಪ್ರಶ್ನೆಯ ಸಾರ ಇಷ್ಟು. ಯಾವುದೋ ಒಂದು ಕಾಲದಲ್ಲಿ ಕಲೆಗಾರನಿಗೂ ಸಂಗೀತಗಾರನಿಗೂ ಸಾಹಿತಿಗೂ ಮತ್ತೆ ಪಬ್ಲಿಕ್‌ಗೂ ಒಂದು ಆರ್ಗ್ಯಾನಿಕ್ ಸಂಬಂಧ ಇತ್ತು, ಈಗ ಅದು ಇಲ್ಲ ಅಂತ. ಅದಕ್ಕೆ ಎಷ್ಟೋ ಕಾರಣ ಇದೆ. ಒಪ್ಪಬೇಕಾದ್ದೆ. ಆದರೆ ಇದರ ಮೇಲೂ ಅವರಿಗೆ ಸಂಗೀತ ಮುಟ್ತದೆ ಅನ್ನೋದನ್ನು ನಾನು ಹೇಳ್ತಾ ಇದ್ದೀನಿ. ಹಳೇಕಾಲದಲ್ಲಿ ಸಂಗೀತವನ್ನು ದೊಡ್ಡ ದೊಡ್ಡ ಉಸ್ತಾದರು ಬಾರಿಸ್ತಿದ್ದರು. ಈಗಲೂ ಬಾರಿಸ್ತಾರೆ. ನಾನೂ ಬಾರಿಸ್ತೀನಿ. ಇದಕ್ಕೆ ಅದಕ್ಕು ಏನಪ್ಪ ಭೇದ ಆಗ್ತಿದೆ ಅಂದರೆ ನಾವು ಬಾರಿಸೋ ರಾಗ ಕ್ರಮ ಅದೇ. ಅದೇ ವಿಸ್ತಾರಗಳೇ. ಆದರೆ ಸ್ವಲ್ಪ ಮಟ್ಟಿಗೆ ನಾವು ಅದನ್ನ ಇಲ್ಲಿ ಅಲ್ಲಿ ನುಣುಪುಗೊಳಿದಿದ್ದೀವಿ ಅನ್ಸತ್ತೆ. ಅದರಲ್ಲಿರೋ ಖಾರವಾದ ಅಂಶಗಳು, ಯಾವ ಅಂಶಗಳನ್ನು ಕೇಳಿ ಸುಖಿಸಲಿಕ್ಕೆ ಹೆಚ್ಚು ಸಹನೆ, ಸಾಂಸ್ಕೃತಿಕ ಸಹನೆ ಬೇಕ್ತಾಗ್ತದೆ, ಆ ಅಂಶಗಳನ್ನು ಸ್ವಲ್ಪ ಮಟ್ಟಿಗೆ ಕೆಲವು ಸನ್ನಿವೇಶಗಳಲ್ಲಿ ನಾವು ಇಳಿಸ್ತೀವಂತ ಅನ್ನಿಸ್ತದೆ. ಅವು ನಮಗೆ ಗೊತ್ತು. ಕೆಲವು ಕಡೆ ನಾವು ಅದನ್ನ ಬಾರಿಸ್ತೀವಿ. ಕೇಳೋರು ಇರ್ತಾರೆ. ಈ ಮಟ್ಟುಗಳನ್ನು ಹ್ಯಾಗೆ ಕೇಳ್ತಾರಂತಲೂ ಗೊತ್ತು. ಆ ಮಟ್ಟುಗಳನ್ನು ಎಷ್ಟೋ ಸಲ ಬಾರಿಸಲಿಕ್ಕೆ ಶುರು ಮಾಡಿದಾಗ ಸ್ವಲ್ಪ ಸಾಧಾರಣ ಮಟ್ಟದಲ್ಲಿ ಶುರು ಮಾಡ್ತೀವಿ. ಶ್ರೋತೃಗಳ ರಿಯಾಕ್ಷನ್ ನೋಡಿ, ಪುನಃ ಪ್ರಿಸ್ಪೈನ್ ರೂಪ ತರ್ತೀವಿ. – ಇವತ್ತು ಕೂಡ ಅಂದರೆ ೧೯೭೪ ರಲ್ಲಿ – ಅವರೆದುರಿಗೆ ಒಡ್ಡುತ್ತೀವಿ, ಅವರು ಕೇಳ್ತಾರೆ. ಅದರಿಂದ ಅದರ ಬಗ್ಗೆ ನನಗೆ ಸಮಸ್ಯೆ ಇಲ್ಲ.

 • ಈಗ ನೀವು ಆಸ್ಟ್ರೇಲಿಯಾಕ್ಕೆ ಹೋಗ್ತಿದ್ದೀರಿ. ಅಲ್ಲಿ ಇರುವ ಜನರಿಗೆ ನೀವು ಸರೋದ್ ಬಾರಿಸ್ತೀರಿ. ಯಾವ ರೀತಿ ಸಂಗೀತವನ್ನು ನೀವು ಅಲ್ಲಿ ಬಾರಿಸಬಹುದು? ಜನ ಹೇಗೆ ಕೇಳ್ತಾರೆ? ಬಗ್ಗೆ ನೀವು ಯೋಚನೆ ಮಾಡಿದೀರಾ? ಬಾರಿಸುವ ಕ್ರಮದಲ್ಲಿ ಏನಾದರೂ ಬದಲಾವಣೆ ಆಗುತ್ತದೆಯೇ? ರವಿಶಂಕರ್ ಭಾರತದಲ್ಲಿ ಬಾರಿಸಿದಾಗ ಮತ್ತು ಬೇರೆ ದೇಶದಲ್ಲಿ ಬಾರಿಸಿದಾಗ ಏನಾದರೂ ಅವರಲ್ಲಿ ಬದಲಾವಣೆ ಆಗುತ್ತದೆಯೇ? ಇದನ್ನ ನೀವು ಗಮನಿಸಿದೀರಾ?

ನಾನು ಆಸ್ಟ್ರೇಲಿಯಾಕ್ಕೆ ಹೋಗ್ತೀನೀಂತ ನಾನೂ ಕೇಳಿದೀನಿ. ಹೋದರೆ, ನನ್ನ ಮಟ್ಟಿಗೆ ಹೇಳೋದಾದರೆ, ಯಾವಾಗಲೂ ಬಾರಿಸೋ ಸಂಗೀತಾನೇ ಅಲ್ಲೂ ಬಾರಿಸ್ತೀನಿ. ಪ್ರೋಗ್ರಾಮ್ ಸಣ್ಣದಾದರೆ ರಾಗ ವಿಸ್ತಾರದ ಕ್ರಮವನ್ನ ಸಣ್ಣದರಲ್ಲೇ ಮುಗಿಸಬಹುದು. ಇಷ್ಟೇ ನಾನು ಅಂದುಕೊಂಡಿರೋದು. ಯಾಕೆಂದರೆ ನಾನು ಕೇಳಿ ತಿಳಿದ ಹಾಗೆ ಪಾಶ್ಚಾತ್ಯ ದೇಶದಲ್ಲಿ (ಆಸ್ಟ್ರೇಲಿಯಾ) ನಾಲ್ಕೈದು ತಾಸು ಕುಳಿತು. ಒಂದು ರಾಗದ ವಿಸ್ತಾರಾನಾ ಕೇಳೋ ಸಹನೆ ಅವರಿಗಿಲ್ಲ – ಆ ಸಂಸ್ಕಾರ ಇಲ್ಲಾಂತ. ಈಗ ನಮ್ಮಲ್ಲಿ ಬಾರಿಸಬೇಕಾದರೆ ಒಂದು ಪ್ರೋಗ್ರಾಮ್‌ನ ಆರಂಬದಲ್ಲಿ ದೊಡ್ಡ ವಿಸ್ತಾರ ಅಲಾಪನೆ ಶುರು ಮಾಡ್ತೀವಿ. ಇದು ಅಲ್ಲಿ ಆಗಲ್ಲ. ಏಕೆಂದರೆ ಮೊದಲೇ ಹೇಳಿದ ಹಾಗೆ ಅವರಿಗೆ ಅಷ್ಟು ಸಮಯ ಇರಲ್ಲ. ಮೊದಲು ಆ ಮಂದಿಯ ಮನಸ್ಸನ್ನು ಹಿಡಿಯೋ ಪ್ರಯತ್ನ ಮಾಡ್ತೀವಿ.

 • ಹ್ಯಾಗೆ?

ಧ್ರುತಗತಿಗಳನ್ನು ಬಾರಿಸ್ತೀವಿ. ವೇಗವಾಗಿ ಹೋಗುವ ಚಮತ್ಕಾರ ಗತ್ತು (ಕೀರ್ತನೆ ಹಾಗೆ) ಸರೋದ್ ಸಿತಾರ್‌ನಲ್ಲಿ ಬಾರಿಸ್ತೀವಿ. ಅಷ್ಟೆ. ಅದನ್ನು ಬಿಟ್ಟರೆ ಸಂಗೀತ ಹ್ಯಾಗೆ? ಬಹಳ ಮಟ್ಟಿಗೆ ರವಿಶಂಕರ್ ಹೀಗೆ ಮಾಡಿದ್ದರಿಂದ ಪ್ರಭಾವಿತರಾಗಿದಾರೇಂತ. ಕೆಡಿಸಿದಾರೆ ಅಂತ ಕೆಲವರು ಹೇಳಿದ್ದನ್ನು ಕೇಳಿದೀನಿ. ಅದು ತಪ್ಪು ಅನ್ನಿಸುತ್ತೆ.

 • ನಿಮಗೆ ಅಲಿ ಅಕ್ಬರ್ ಮೇಲಿನ ಆಕರ್ಷಣೆ ಇದೆಯಲ್ಲ, ಅದಕ್ಕೆ ಸಂಗೀತ ಒಂದೇ ಅಲ್ಲದೇ ಬೇರೆ ಯಾವ ಕಾರಣಗಳಿದಾವೆ? ಅವರಿಂದ ನೀವು ಕಲಿತ ಕ್ರಮ ಇತ್ಯಾದಿಗಳ ಬಗ್ಗೆ ಒಂದೆರಡು ಮಾತು ಹೇಳಿ.

ಕಲಿತ ಕ್ರಮದ ಬಗ್ಗೆ ೧೯೭೨ ರಲ್ಲಿ ಬಿ.ವಿ.ಕೆ. ಶಾತ್ರೀ ಸುಧಾದಲ್ಲಿ ಸಾಕಷ್ಟು ಬರೆದಿದ್ದಾರೆ. ಅದನ್ನು ನೋಡ್ರೀ. ಸಂಕ್ಷಿಪ್ತದಲ್ಲಿ ಹೇಳೋದಾದ್ರೆ ಅವರಿಂದ ಕಲಿತಿದ್ದು ಹಳೆಯ ಗುರುಶಿಷ್ಯ ಸಂಪ್ರದಾಯದಂತೆಯೇ. ಅದರಿಂದ ನನಗೆ ಈಗ ಏನು ಅನ್ನಿಸ್ತದೆ. ಅಂದ್ರೆ ಅದರಲ್ಲಿ ಒಂದು ಕ್ರಮ ಇತ್ತು. ಆಗ ಕ್ರಮ ಇದೆಯೋ ಇಲ್ಲೋ ಅನ್ನಿಸ್ತಿತ್ತು; ಬಹಳ ಬೇಜಾರು ಆಗ್ತಿತ್ತು. ನಾನು ಕಾಲೇಜ್‌ ಶಿಕ್ಷಣ ತಗೊಂಡು ಸ್ವಲ್ಪ ಜಂಭದ ದೊಡ್ಡ ಮನುಷ್ಯನಾಗಿಯೇ ಹೋಗಿದ್ದೆ. ಓದಿದವ ಅನ್ನೋ ಅಹಂಕಾರ ಇತ್ತು. ಅದನ್ನು ಎಲ್ಲಾ ರೀತಿಯಿಂದ ಹೊಡೆದು ನಾಶ ಮಾಡಿದ್ರು. ಅಂದ್ರೆ ಒಟ್ಟು ಈಗ ಏನು ಅನ್ನಿಸ್ತದೆ ಅಂದ್ರೆ ಸಂಗೀತ ಒಬ್ರಿಗೆ ಕಲಿಸಬೇಕು ಅನ್ನಿಸ್ತದೆ. ಆ ಮನುಷ್ಯನಲ್ಲಿ ತನ್ನ ಪ್ರಜ್ಞಾಪೂರ್ವಕ ಸಂಸ್ಕಾರ ಏನಿರ‍್ತದೆ ಅವನ್ನೆಲ್ಲ ಮರೀಬೇಕು. ಅವನ ಇಗೋಟಿಸ್‌ಮ್ ತೆಗೀಬೇಕು. ಅವ ಒಂದು ಪಾತ್ರೆಯಾಗಿ ಇರಬೇಕು. ಆಗಲೇ ಅವನಿಗೂ ನಮಗೂ ಕಮ್ಯೂನಿಕೇಷನ್ ಸಾಧ್ಯ.

 • ಅದನ್ನೇ ನಾನು ಸಾಹಿತ್ಯದ ಮೇಲಿನ ಪ್ರಶ್ನೆಯಿಂದ ಆರಂಭ ಮಾಡಿದೆ. ಅಂದ್ರೆ ಸಾಹಿತ್ಯಕ್ಕೂ ಸಂಗೀತಕ್ಕೂ ಇರುವ ಸಂಬಂಧದಿಂದ. ಗುರು ಶಿಷ್ಯ ಸಂಬಂಧ ಸಂಗೀತದಲ್ಲಿ ಸಾಧ್ಯವಿರುವ ಹಾಗೆ ಒಂದು ಗುರು ಪರಂಪರೆ ಸಾಹಿತ್ಯದಲ್ಲಿ ಸಾಧ್ಯವೇ? ಅದನ್ನು ಅಪೇಕ್ಷಿಸೋಕೆ ಸಾಧ್ಯವೇ?ಸಾಧ್ಯವೇ ಇಲ್ಲದಿದ್ದರೆ ಏಕೆ?

ಒಂದು ದೊಡ್ಡ ಅಂತರ ಇದೆ. ಸಂಗೀತದಲ್ಲಿ ಕಸುಬು (ಸ್ಕಿಲ್) ಕಲಿಸಬೇಕಾಗ್ತದೆ. ಆ ಕಸುಬು ನಾನ್ ವರ್ಬಲ್. ಅದು ಬರೆದರೆ ಮ್ಯಾನುವಲ್ ಆಗುತ್ತೆ. ಆದ್ದರಿಂದ ಆ ಸಂಗೀತಾನ ನಾವು ಬಾರಿಸೋದು. ಕೆಲವರೆಲ್ಲ ಇದು ಹ್ಯಾಗೆ ಬಾರಿಸ್ತೀರಿ ಅಂದ್ರೆ ಅದನ್ನ ಹೇಳಿದರೆ ಆಗಲ್ಲ. ಗುರುಗಳ ಜೊತೆಗೆ ಬಾಳಿ, ಅವರು ಬಾರಿಸೋ ಕ್ರಮ, ಯೋಚಿಸೋ ಕ್ರಮ, ಇದನ್ನು ಸುಮ್ಮನೆ ಹಾಗೆ ತಿಳ್ಕೋಬೇಕು. ಆ ಒಂದು ವಾತಾವರಣದಿಂದ ತಿಳೀತದೆ. ಸ್ಥೂಲವಾಗಿ ಬಹಳ ಸಂಗೀತ ನಮ್ಮ ಕಿವಿಗೆ ಯಾವಾಗಲೂ ಬೀಳ್ತಿರ‍್ತದೆ. ಅದು ಆಗಲೇ ನಮ್ಮ ಕೈಗೆ ಬರೋದಿಲ್ಲ. ಅವರು ಪ್ರಜ್ಞಾ ಪೂರ್ವಕವಾಗಿ ಏನು ಹೇಳಿಕೊಡ್ತಾರೆ, ಅದು ತಾವು ಬಾರಿಸೋದೇ ಹೇಳಿಕೊಡೋದಿಲ್ಲ. ಇನ್ನೇನೋ ಹೇಳಿಕೊಡ್ತಾರೆ. ಇದೇನಪೊಪ ಇವರು ನಮ್ಮಿಂದ ಮುಚ್ಚಿಡ್ತಿದಾರೆ ಅಂತ ಒಮ್ಮೊಮ್ಮೆ ಬೇಜಾರಾಗ್ತಿತ್ತು. ಈಗ ನನಗೆ ತಿಳೀತದೆ, ಅವರು ಒಂದೊಂದೂ ಹೇಳಿಕೊಟ್ಟಿದ್ದು ಟೆಕ್ನಿಕ್ಸ್ ಅಷ್ಟೆ. ಅವನ್ನ ನಾನೇ ನನ್ನಲ್ಲೇ ಹರಡಿ, ಬೆಳೆದು ಪಕ್ವವಾಗಿ ಅದು ಯಾವುದೋ ಕಾಲದಲ್ಲಿ ನನ್ನ ಅನುಭವ ಸರಿಯಾದಾಗ ಅವರು ಬಾರಿಸಿದಂತೆ ಬರಬಹುದೇನೋಂತ ಕಲ್ಪನೆ ಇತ್ತು. ಅದು ಈಗ ಒಂದೊಂದಾಗಿ ಬರ್ತಿದೆ. ಇದು ನಾನು ಬದುಕಿರೋವರೆಗೂ ಬರ‍್ತದೆ. ಅದರಿಂದ ನಾನು ತಿಳ್ಕೊಂಡಿರೋ ವಿಷಯ ನೂರರಲ್ಲಿ ಒಂದು ಭಾಗ ಕೂಡ ಇಲ್ಲ. ಸಾಧಿಸಲಿಕ್ಕಾಗಲಿಲ್ಲ ಅಂದ್ರೆ ಸಾಧಿಸೋದರ ಮಟ್ಟಿಗೆ ನನಗೆ ಬೇಕಾದಷ್ಟು ಅನುಭವ ಆಗಿದೆ. ಒಟ್ಟು ಒಬ್ಬ ಗುರು ಏನ್ಮಾಡ್ತಾನೆ ಅಂದ್ರೆ ತನ್ನ ಅನುಭವಗಳನ್ನು ಒಡ್ಡುತ್ತಾನೆ. ಶಿಷ್ಯಹನೆದುರು ಬದುಕಿಬಿಡ್ತಾನೆ. ಯಾಕೆಂದರೆ ಗುರುವಿಗೆ ಬದುಕೇ ಒಂದು ಸಂಗೀತ, ಅವನ ಬದುಕು ಸಂಗೀತದಲ್ಲಿ ಹೇಗೆ ಹೋಗುತ್ತೇಂತ ನಾವು ಸುಮ್ಮನೆ ಅವನ ಬದುಕಿನಿಂದ ತಿಳಕೋಬೇಕು ಅಷ್ಟೆ. ಅದನ್ನ ಹೇಳಿಕ್ಕಾಗಲ್ಲ. ಸಾಹಿತ್ಯದ ಪ್ರಶ್ನೆ ಬೇರೆ ಆಗುತ್ತೆ. ಸ್ಕಿಲ್ಸ್ ನಾವು ಹೇಳಿಕೊಡೋದಿಲ್ಲ. ಸಾಹಿತ್ಯದಲ್ಲೂ ಯಾವುದೋ ಒಂದು ಪರೋಕ್ಷ ರೀತಯಲ್ಲಿ ಇವರು ನಮ್ಮ ಗುರುಗಳೂಂತ ನಾವು ಭಾವಿಸಬೇಕಾಗುತ್ತದೆ. ಸ್ವಲ್ಪಮಟ್ಟಿಗೆ ಅಡಿಗರೂ ಆ ಸ್ಥಾನದಲ್ಲಿದ್ದಾರೆ. ನೀವು ಈ ಮಾತು ಒಪ್ತೀರೋ ಬಿಡ್ತೀರೋ, ಅಡಿಗರು ಬರೆದ ಹಾಗೆ ಬರೀಬೇಕಾದ್ದಿಲ್ಲ. ಆದರೆ ಅವರ ಬರವಣಿಗೆಯಿಂದ ನಮ್ಮ ಮೇಲೆ ಏನೇನು ಗಾಢವಾದ ಪರಿಣಾಮಗಳಾದವು, ಅದರಿಂದ ನಾವೂ ಬರೆದೆವು.

 • ಅಂದರೆ ಪರಂಪರೆ ಮತ್ತೆ ವ್ಯಕ್ತಿ ಪ್ರತಿಭೆ ಇವೆರಡೂ ಸೇರಿಯೇ ಎಲ್ಲ ಕಲೆಯೂ ಹುಟ್ಟುತ್ತೆ ಅನ್ನೋದಾದ್ರೆ ಸಂಗೀತದಲ್ಲಿ ವ್ಯಕ್ತಿ ಪ್ರತಿಭೆಗಿಂತ ಪರಂಪರೆ ಹೆಚ್ಚು. ಸಾಹಿತ್ಯದಲ್ಲಿ ವ್ಯಕ್ತಿ ಪ್ರತಿಭೆ ಅಂತ ಪರಂಪರೆಗಿಂತ ಹೆಚ್ಚಿಗೆ ಇರುತ್ತೆ. ಒಪ್ತೀರಾ ಇದನ್ನ. ಆದ್ದರಿಂದ ಇಲ್ಲಿ ಗುರು ಪರಂಪರೆ ಸಾಹಿತ್ಯದಲ್ಲಿ ದೃಷ್ಟೀಲಿ ಕೆಲಸ ಮಾಡೋಕೆ ಆಗೋದಿಲ್ಲ.

ನಿಜಾಂತ ಕಾಣುತ್ತೆ. ಮತ್ತೆ ತಿರುಗ ಹೇಳೋದೇನೂಂದ್ರೆ ಆ ಕಸುಬು ಒಬ್ರಿಂದ ಒಬ್ರಿಗೆ ಹೋಗುತ್ತೆ. ಸಂಗೀತ ಒಂದೇ ಅಲ್ಲ – ನಗಬೇಡ್ರೀ – ಕುಸ್ತಿ, ಚಿತ್ರಕಲೆ, ಶಿಲ್ಪಕಲೆ, ಇದರಲ್ಲಿ ಆಗತಕ್ಕಂಥ ಒಂದು ಕಮ್ಯೂನಿಕೇಷನ್ ಇರ‍್ತದೆ. ಇದು ಬಹಳ ನಿಕಟವಾದ ಒಂದು ಸಂಬಂಧವನ್ನು ಯಾವಾಗಲೂ ಗುರು ಶಿಷ್ಯರಲ್ಲಿ ಬೆಳಸ್ತದೆ. ಆ ಗುರುವಿನಿಂದ ತಪ್ಪಿಸಿಕೊಳ್ಳೋಕೆ ಶಿಷ್ಯ ಬಹಳಷ್ಟು ತ್ರಾಸು ಪಡಬೇಕಾಗ್ತದೆ. ಸಾಹಿತ್ಯ ಇಂಥದ್ರಿಂದ ಸ್ವಲ್ಪ ಮುಕ್ತ. ಆದರೆ ಸಾಹಿತ್ಯದಲ್ಲೂ ಹೀಗಾಗಕ್ಕೆ ಸಾಧ್ಯ.

 • ಸಾಧ್ಯ ನಿಜ. ಆದರೆ ನೀವು ಅಲಿ ಅಕ್ಬರ್‌ಗಿಂತ ಬೇರೆ ವ್ಯಕ್ತಿಯೇ? ಅವರಿಗೆ ಬಂಗಾಲದ ಸಂಸ್ಕಾರ ಇದೆ. ಜಾನಪದದ ಸಂಸ್ಕಾರ ಇದೆ ಇತ್ಯಾದಿ. ಆದರೆ ನೀವು ದಕ್ಷಿಣದವರು. ಇಲ್ಲಿಯ ಹಾಡುಗಳನ್ನು ಕೇಳಿದೀರಿ. ಇಲ್ಲಿಯ ಜೀವನದಲ್ಲಿ ಬದುಕಿದ್ದೀರಿ. ನೀವು ಅವರಿಂದ ಸರೋದ್ ಕಲಿತರೂನೂ ನೀವು ಬಾರಿಸುವ ಕ್ರಮದಲ್ಲಿ ವೈಯಕ್ತಿಕವಾದ ಹಿನ್ನೆಲೆ ಇಟ್ಟುಕೊಂಡಿದ್ದು, ಅದರಿಂದಾಗಿ ನೀವು ಸ್ವಲ್ಪ ಮಟ್ಟಿಗೆ ಬೇರೆ ರೀತಿಯಲ್ಲಿ ಬಾರಿಸ್ತೀರಂತ ಹೇಳಬಹುದೇ?

ಈ ಮಾತು ಬೆಂಗಳೂರಲ್ಲಿ ಇರುವ ಒಬ್ಬ ಮ್ಯೂಸಿಕ್ ಕ್ರಿಟಿಕ್ ಅಂದ್ರು. ಅವರು ನನ್ನ ಬಗ್ಗೆ ಒಂದು ಕಡೆ ಬರೀತ, ಇವರು ಸರೋದ್ ಬಾರಿಸಬೇಕಾದರೆ ದಕ್ಷಿಣದವರು ಅಂತ ಗೊತ್ತಾಗುತ್ತೇಂತ ಬರೆದಿದ್ರು, ಎಲ್ಲಿ ನನ್ನ ಆ ಅಂಶ ಬರುತ್ತೇಂತ ನನಗೆ ಗೊತ್ತಿಲ್ಲ.

 • ನಿಮ್ಮ ಲಯಜ್ಞಾನದಲ್ಲೀಂತ ಅನ್ನಬಹುದೇ?

ನನ್ನ ಲಯಜ್ಞಾನ ಅಲಿ ಅಕ್ಬರ್ ಲಯಜ್ಞಾನ. ಅದನ್ನ ಹೊಂದಿಕೊಂಡು ಹೋಗ್ತದೆ ಸುಮಾರು ಆ ಲಯಜ್ಞಾನದ ಬಗ್ಗೆ ಹೇಳಕ್ಕೆ ಹೋದರೆ ದಾಕ್ಷಿಣಾತ್ಯ ಲಯವಿನ್ಯಾಸ ಉತ್ತರ ಹಿಂದೂಸ್ತಾನಕ್ಕೆ ಉಪಯೋಗಿಸಿರೋರು ಸ್ವಲ್ಪ ಮಟ್ಟಿಗೆ ಅಂತಂದ್ರೆ ರವಿಶಂಕರ್ ಒಬ್ಬರೇ. ಅದರ ಪ್ರಭಾವ ನನಗಿಲ್ಲ. ಅದನ್ನು ನಾನು ಖಡಾಖಂಡಿತ ಹೇಳ್ತೀನಿ. ನನಗೆ ಈಗಿನ ಇಲ್ಲಿಯ ಸಂಸ್ಕಾರ ನನ್ನ ಸಂಗೀತದಲ್ಲಿ ಹೇಗೆ ರೂಪುಗೊಳ್ಳುತ್ತೇಂತ ಹೇಳೋದು ಕಷ್ಟ. ಹೇಳಿದರೂ ತಪ್ಪಾಗುತ್ತೆ. ಇನ್ನೂ ಬಾರಿಸಬೇಕು, ಬಹಳ ಬಾರಿಸಿ ಮುಂದೆ ಯಾವಾಗಾದ್ರೂ ಆ ವಿಚಾರ ಸ್ವಲ್ಪ ಮಟ್ಟಿಗೆ ಗೊತ್ತಾಗಬಹುದು.

 • ನೀವು ಹೆಚ್ಚೆಚ್ಚು ಇನ್ನು ಮುಂದೆ ಸಿನಿಮಾ ಸಂಗೀತ ಕೊಡೋ ಸಾಧ್ಯತೆ ಇದೆಯೋ? ಇದ್ದರೆ ಯಾಕೆ? ಅದು ನಿಮ್ಮನ್ನು ಆಕರ್ಷಿಸಿದೆಯಾ?

ಸಿನಿಮಾ ಸಂಗೀತ, ನಾನು ಇದುವರೆಗೂ ಒಂದು ಚಿತ್ರ ’ಸಂಸ್ಕಾರ’ಕ್ಕೆ ಕೊಟ್ಟೆ.

 • ಅದು ನಿಮಗೆ ಚಾಲೆಂಜಿಂಗ್ ಆಗಿತ್ತಾ?

ಹೌದು.

 • ಒಬ್ಬರೇ ಕೂತು ಬಾರಿಸಿದಾಗ ಹೇಗೆ ಅದು ಸವಾಲಾಗಿತ್ತೋ ಹಾಗೇ ಸಂಗೀತ ಕಲೆ ಒಂದು ಸಿನಿಮಾಕ್ಕೆ ಅಂಥದೇ ಸವಾಲಾಗುತ್ತದೆಯಾ?

ಅದು ಹೇಗಾಗುತ್ತೆ ನೋಡ್ರಿ, ಆಗಿದ್ದು ಹೇಳ್ತೀನಿ. ನಿಮಗೆ ಇಂಟರೆಸ್ಟಿಂಗ್ ಆಗಬಹುದು. ಸಂಸ್ಕಾರ ಚಿತ್ರ ತೆಗೆದರು. ಆಮೇಲೆ ಸಂಗೀತ ಕೊಡೋ ಮುಂಚೆ ಒಮ್ಮೆ ಅದನ್ನ ನನ್ನೆದುರು ಪ್ರದರ್ಶಿಸಿದರು. ನೀವು ಇದ್ದಿರಲ್ಲ ಅಲ್ಲಿ. ಸಂಸ್ಕಾರ ಚಿತ್ರ ಚೆನ್ನಾಗಿದೆ, ಆದರೆ ದೃಶ್ಯಗಳೆಲ್ಲ ಬಿಡಿಬಿಡಿಯಾಗಿವೆ. ಸಂಬಂಧವಿಲ್ಲದೇ ಬರ್ತಾ ಇದೆ. ಏನೋ ಇದರ ಒಕ್ಕಣೆ ಒಲ್ಲಾಂತನ್ಸತ್ತೆ ನಮಗೆ ಅಂತ ಅಲ್ಲಿದ್ದೋರು ನನಗೆ ಹೇಳಿದರು. ನೋಡ್ರಿ, ಈ ಬಿಡಿಬಿಡಿಯಾಗಿರೋ ಚಿತ್ರಾನ ಒಂದಾಗಿಸೋ ಕೆಲಸ ನಿಮ್ಮದು ಅಂತ ಅಲ್ಲಿದ್ದೋರು ನನಗೆ ಹೇಳಿದರು. ಇದೊಂದು ಚಾಲೆಂಜ್ ನನಗೆ. ಹಾಡಿಲ್ಲದ ಚಿತ್ರಕ್ಕೆ ಹಿನ್ನಲೆ ಸಂಗೀತ ನಾನು ಕೊಡಬೇಕಾಗಿತ್ತು. ಆಮೇಲೆ ನಾನೂ ಸಂಗೀತ ನೀಡಿದೆ. ಈಗ ಚಿತ್ರ ಬಿಡಿಬಿಡಿಯಾಗಿ ಇದೆಯೋ, ಒಂದಾಗಿದೆಯೋ ನಾನು ಹೇಳಲಾರೆ. ನೀವು ಹೇಳಬೇಕು. ಆದರೆ ನನ್ನ ಕೇಳೋದಾದರೆ ಸ್ವಲ್ಪ ಮಟ್ಟಿಗೆ ಕೆಲವೆಲ್ಲ ಬೇರೆ ಬೇರೆಯಾದ ಅಂಶಗಳು ಸಂಗೀತವಿಲ್ಲದೆ ಸಿಕ್ಕಾಗ ಈಗ ಅದಕ್ಕೂ ಎಲ್ಲೋ ನಾದದಲ್ಲಿ ಒಂದು ಟೋನ್‌ನಲ್ಲಿ ಜೋಡಣೆ ಇದೆ ಅನ್ನಿಸುತ್ತದೆ. ಇದರ ಮೇಲೆ ಸಿನಿಮಾಗೆ ಸಂಗೀತ ನೀಡೋದು ಚಾಲೆಂಜ್ ಇದೆ. ಏಕೆಂದರೆ ನಾನು ಶಾಸ್ತ್ರೀಯ ಸಂಗೀತ ಬಾರಿಸ್ತೀನಿ. ಪಾಶ್ಚಾತ್ಯ ಸಂಗೀತ ನೋಡಿದರೆ ಅದರಲ್ಲಿ ಬೇರೆ ಸೆನ್ಸಸ್‌ನಿಂದ ಏನಿರ್ತದೆ ಏನೇನು ಇಂಪ್ರೆಶನ್ ಬರ್ತದೆ ಅದರ ಆಬ್ಜೆಕ್ಟಿವ್ ಕೊರಿಲೇಟಿವ್ ಆಗಿ ಬರ್ತದೆ. ಹೇಳ್ತಾರೆ, ಪಾಶ್ಚಾತ್ಯ ಸಂಗೀತ ಕೇಳಿದಾಗ ಯಾವುದೋ ಮನೆ ಬಿದ್ದಾಗೆ, ಕಾಡು ನೋಡಿದ ಹಾಗೆ ಭಾಸವಾಗ್ತದೆ ಅಂತ. ನಮ್ಮ ಸಂಗೀತದಲ್ಲಿ ಅದಿಲ್ಲ. ಇಲ್ಲಿ ಸಿಗೋ ಸೌಖ್ಯ ಯಾವ ಸ್ವರಗಳಾಗಲೀ ಅವರುಗಳದೇ ಕೌಶಲ್ಯದಿಂದ, ’ಯೋಗ ಕರ್ಮಸು ಕೌಶಲಂ’ ಅಂತ ಕೃಷ್ಣ ಹೇಳಿದ ಹಾಗೆ, ಆ ಕೌಶಲದಿಂದ ಬರುವಂಥ ಸುಖವೇ ನಮ್ಮ ಸಂಗೀತದ ಸುಖ. It does not appeal to any other sense of satisfaction. ಈಗ ಪಿಕ್ಚರ್ ವಿಶುವಲ್ ಇರ್ತದೆ. ಈ ಅಟಾನಮಸ್ ಆದಂಥ ಸಂಗೀತ ಇದಕ್ಕೆ ಜೋಡಿಸೋದು. ಇದರಲ್ಲಿ ಸ್ವಲ್ಪ ಮಟ್ಟಿಗೆ ನನಗೆ ಅನುಭವ ಇದೆ. ಯಾಕೆಂದರೆ ನನ್ನ ಗುರುಗಳು ನಿರ್ದೇಶನ ಮಾಡಿದ್ದ ಬೆಂಗಾಲಿ ಚಿತ್ರಕ್ಕೆ ನುಡಿಸಿದ್ದೇನೆ. ಆಗ ಆ ಪ್ರಾಬ್ಲಮ್‌ಗಳನ್ನು ಕಂಡಿದ್ದೇನೆ. ಅದರಿಂದ ಸ್ವಲ್ಪ ಸಹಾಯ ಆಗಿದೆ. ಇನ್ನೊಂದೇನಪ್ಪ ಅಂತಂದ್ರೆ ಈಗ ನಾನು ಬಾರಿಸೋ ಸಂಗೀತ ಮತ್ತು ಸಂಸ್ಕಾರದ ಕಥೆ ಇವರೆಡೂ ವಾತಾವರಣ ಬೇರೆ. ಸಂಸ್ಕಾರ ದಾಕ್ಷಿಣಾತ್ಯ ಒಂದೇ ಅಲ್ಲ, ದಕ್ಷಿಣದಲ್ಲಿ ಒಂದು ಊರು. ಒಂದು ಕಾಡು ಅಂದರೆ ಅಷ್ಟು ಲೋಕಲೈಸ್ಡ್ ಆದ ಕಥೆ. ಬೇರೆ ಯಾವುದೊ ದೇಶದ ಸಂಗೀತ ಅದಕ್ಕೆ ಜೋಡಿಸಬೇಕಾದರೆ ಇದು ಬೇರೆ ದೇಶದ ಸಂಗೀತ ಅಂತ ತಿಳೀಬಾರದು. ಅದು ಒಟ್ಟು ಹಿಂದೂಸ್ತಾನಿ ಕ್ಲಾಸಿಕಲ್ ಸಂಗೀತವಾಗೇ ನಿಂತರೆ ಹೊರಗೇ ಉಳಿದುಬಿಡುತ್ತದೆ. ಕಥೆ ಮೇಲೆ ಏನೂ ಪ್ರಭಾವ ಬೀಳಲ್ಲ. ಏಕೆಂದರೆ ಅದಕ್ಕೆ ಒಂದು ಹೆಸರಿರುತ್ತೆ. ತನ್ನ ಹೆಸರು ಕಳಕೊಂಡು ಇಲ್ಲಿ ಕೆಲಸ ಮಾಡಿದೆ. ಕೆಲವರಿಗೆಲ್ಲ ತೃಪ್ತಿ ಆಯಿತು. ಆದರೆ ಗಿರಿಜಾ ರಾಜೇಂದ್ರನ್ ಅನ್ನುವ ಕ್ರಿಟಿಕ್ ರಾಜೀವ್ ತಾರಾನಾಥ್ ಸಂಗೀತ ಬಹಳ ಸುಶ್ರಾವ್ಯವಾಗಿದೆ. ಆದರೆ ಅದು ದಕ್ಷಿಣ ಭಾರತೀಯ ಸಂಗೀತ ಆಗಿದ್ರೆ ಚೆನ್ನಾಗಿರ್ತಿತ್ತು ಅಂತ ಬರೆದಿದ್ರು.

 • ನಿಮ್ಮ ತಂದೆಯವರ ಪರಿಚಯ ಮಾಡಿಕೊಡ್ತೀರಾ?

ನಮ್ಮ ತಂದೆಯವರ ಪರಿಚಯ ಹೇಗೆ ಮಾಡಿಕೊಡಲಿ? ಅವರು ಪಂಡಿತ ತಾರಾನಾಥರು. ಅವರದ್ದು ಬಹುಮುಖ ವ್ಯಕ್ತಿತ್ವ ಅಂತ ನಾನೂ ಕೇಳಿದ್ದೀನಿ. ಸ್ವಲ್ಪ ಮಟ್ಟಿಗೆ ನನಗೂ ಅನುಭವ. ಏಕೆಂದರೆ ಅವರು ನಾನು ಬಹಳ ಸಣ್ಣವನಿದ್ದಾಗಲೇ ತೀರಿಕೊಂಡರು. ಒಟ್ಟು ಕರ್ನಾಟಕದ ಅಥವಾ ದಕ್ಷಿಣ ಹಿಂದೂಸ್ತಾನದ ಸಾಂಸ್ಕೃತಿಕ ಚರಿತ್ರೆಯಲ್ಲಿ ಬಹಳ ಮುಖ್ಯವಾದ ವ್ಯಕ್ತಿ. ಅವರು ದಾರ್ಶನಿಕರೂ, ಸಂಗೀತಗಾರರೂ, ನಾಟಕಕಾರರೂ, ಭಾಷಾ ವಿಜ್ಞಾನಿಗಳೂ, ಮೇಲೆ ಬಹಳ ದೊಡ್ಡ ವೈದ್ಯರೂ ವಾಗ್ಮಿಗಳೂ ಆಗಿದ್ದರು. ಪವಾಡಪುರುಷ ಎನ್ನಲಿಕ್ಕೆ ಏನೇನು ಸಲಕರಣೆಗಳು ಬೇಕೋ ಅವೆಲ್ಲ ಅವರಲ್ಲಿದ್ದವು. ನನ್ನನ್ನು ಕೇಳಿದರೆ ಸ್ವಲ್ಪ ಮಟ್ಟಿಗೆ ಅವರ ಪ್ರಭಾವ ಈಗಿನ ಕಾಲದಲ್ಲಿ ಯಾಕಿಲ್ಲ ಅಂತ ನೋಡಿದರೆ ಅವರು ಪವಾಡ ಆಗಿರೋದೇ ಕಾರಣ. ಯಾಕೆಂದರೆ ನಾವು ಅವರ ಪವಾಡಗಳನ್ನು ಬಹಳ ಬೇಗ ಅರಗಿಸಿಕೊಂಡು ಬಿಡುತೀವಿ. ಎರಡು ಹೂಮಾಲೆ ಹಾಕಿ, ಅಲ್ಲೊಂದು ಇಲ್ಲೊಂದಿ ವಿಗ್ರಹ ಕಟ್ಟಿ ನಾವು ಹಳೇಕರ ನಾಯಿಬಾಲದ ದಾರಿ ಹಿಡಿದಿರುತೀವಿ. ಅವರು ಬದುಕಿರೋ ಸಮಯದಲ್ಲಿ ಬಹಳ ಕ್ರಾಂತಿಕಾರಿ ವ್ಯಕ್ತಿಯಾಗಿದ್ದರು. ಸಾಮಾಜಿಕ ದೃಷ್ಟಿಯಿಂದ ಈಗ ನೀವು ಬರ್ಟ್ರಂಡ್ ರಸಲ್, ಕಾರ್ಲ್‌ಮಾರ್ಕ್ಸ್‌ ಇಂಥ ವ್ಯಕ್ತಿಗಳ ಸಂಬಂಧ, ವಿಷಯದಲ್ಲಿ ಏನು ನೆನೆಸಿಕೊಂಡಿರ್ತೀರಿ ಇಂಥವೆಷ್ಟೋ ಅವರು ಕಾರ್ಯತಃ ಮಾಡಿ ತೋರಿಸಿದ್ದರು. ಕೆಲವೆಲ್ಲಾ ಅವರ ಬರಹ, ಅಭಿಪ್ರಾಯಗಳು ಬಹಳ ಕಟುವಾಗಿಯೂ, ರ್ಯಾಡಿಕಲ್ ಆಗಿಯೂ ಇದ್ದವು. ಅಸ್ಪೃಶ್ಯತೆ, ನಮ್ಮ ವಿವಾಹ ಸಂಪ್ರದಾಯ, ವಿಧವಾ ವಿವಾಹ, ವಿವಾಹದ ಹೊರಗೆ ಗರ್ಭ ನಿಲ್ಲೋಣ ಇದರ ಬಗ್ಗೆಲ್ಲ ಅವರು ಬಹಳ ರ್ಯಾಡಿಕಲ್ ಆಗಿದ್ದರು. ನನ್ನ ತಂದೆಯವರು ನನ್ನನ್ನು ಬಹಳ ಹತ್ತಿರದಲ್ಲೇ ಇಟ್ಟುಕೊಂಡಿದ್ದರು. ನಾನು ಸಣ್ಣವನಿದ್ದಾಗ ನನ್ನ ತಲೆ ದೊಡ್ಡದಿದ್ದು, ಕೈಕಾಲು ಸಣ್ಣವಿದ್ದವು. ಹೀಗಾಗಿ ನನಗೆ ಬೇರೆ ಮಕ್ಕಳ ಜೊತೆ ಆಟ ಇತ್ಯಾದಿಗಳು ಸಂಭವ ಆಗ್ತಿರಲಿಲ್ಲ. ಆದ್ರಿಂದ ಅವರ ಜೊತೆಗೇ ಬೆಳೆದ ನಾನು. ಅದು ಒಂದು ರೀತಿಯಿಂದ ಒಳ್ಳೆಯದೇ ಆಯ್ತು. ಏಕೆಂದರೆ ೪-೫ ನೇ ವಯಸ್ಸಿನಿಂದಲೇ ನನಗೆ ಸಂಗೀತ ಕಲಿಯುವ ಪ್ರಸಂಗ ಬಂತು. ಸಂಗೀತ, ಉರ್ದು, ಸಂಸ್ಕೃತ, ಕನ್ನಡ, ಇಂಗ್ಲಿಷ್ ಅನ್ನು ಅವರು ಮತ್ತು ತಾಯಿ ಕಲಿತಿದ್ರು, ನನಗೂ ಕಲಿಸಿದರು. ಸ್ವಲ್ಪಮಟ್ಟಿಗೆ ಎಂ.ಎನ್. ಸುಬ್ಬರಾಯರ ಕಲಾಮಂದಿರದಲ್ಲಿ ಕೂಡ ಕೆಲವು ದಿವಸ ಕಲಿತಿದ್ದಾಯಿತು. ಇದೆಲ್ಲಾ ಕಲಿಯುವ ಪ್ರಸಂಗ ತಂದೆಯವರಿಂದ ಒದಗಿತ್ತು. ಒಟ್ಟು ಪಂಡಿತ ತಾರಾನಾಥರು ಕೊಂಕಣಿ ಮಾತಾಡುವ ಮಂಗಳೂರಿನವರಾದರೂ ಈಗಿನ ಹೈದರಾಬಾದಿನಲ್ಲಿ ಬೆಳೆದರು. ಆದರೂ ಅವರ ಹೆಚ್ಚು ಕೊಡುಗೆ ಕನ್ನಡ ಸಂಸ್ಕೃತಿಗೆ ಆಯಿತೂಂತ ಕೇಳಿದೀನಿ. ಕನ್ನಡ ಬರಹದಲ್ಲಿಯೂ ಅವರು ಬೇಕಾದಷ್ಟು ಬದಲಾವಣೆ ಮಾಡಿದರು. ಅದರಿಂದ ಆಗಿನ ಕಾಲಕ್ಕೆ ಯುವಕ ಸಾಹಿತಿಗಳಾದ ಅನಕೃ, ಸಿದ್ದವನಹಳ್ಳಿ ಕೃಷ್ಣಶರ್ಮ, ಸ್ವಲ್ಪ ಮಟ್ಟಿಗೆ ತರಾಸು, ಭಾರದ್ವಾಜ್‌ರು ಡಿಕ್ಷನರಿ ಕಡೆಗೆ ಹೊರಟುಬಿಟ್ಟರು. ಗೋವರ್ಧನರಾಯರು, ಗೋಪಾಲಕೃಷ್ಣರಾಯರು, ಶ್ರೀರಂಗ ಇವರೆಲ್ಲ ಪ್ರಭಾವಿತರಾದರು. ಮ್ಯಾಲಿನ್ನೂ ಎಷ್ಟೋ ಜನರಿದ್ದಾರೆ, ನೆನಪಿಲ್ಲ. ಕೈಲಾಸಂ ಸಹ ನಮ್ಮ ತಂದೆಯಿಂದ ಪ್ರಭಾವಿತರಾದವರು, ಶೈಲಿಯಲ್ಲಿಲ್ಲ. ಆದರೆ ಎಷ್ಟೋ ಮಟ್ಟಿಗೆ ಅವರ ಅಭಿಪ್ರಾಯಗಳು ಕೈಲಾಸಂರಲ್ಲಿಯೂ ಮೂಡಿದೆ. ನಾಟಕ ರಂಗದಲ್ಲಿಯೂ ತಂದೆಯವರ ಕೊಡುಗೆ ಇತ್ತು. ಇಡೀ ದಕ್ಷಿಣ ಹಿಂದೂಸ್ತಾನದಲ್ಲಿ ಅವರೇ ಮೊದಲು ಹಿಂದಿಯಲ್ಲಿ ಒಂದು ನಾಟಕ ಬರೆದರು. ಅದನ್ನು ನಾನು ಓದಿದೀನಿ. ನನಗೆ ಅಷ್ಟಾಗಿ ಹಿಡಿಸೋದಿಲ್ಲ, ಆ ನಾಟಕ. ದೀನಬಂಧು ಕಬೀರ್ ಅಂತ. ಅಂದರೆ ಅದು ಗಾಂಧೀಜಿಯವರಿಗೆ ಬಹಳ ಹಿಡಿಸಿತ್ತಂತೆ. ನನ್ನ ಮಟ್ಟಿಗೆ ಹೇಳೋದಾದರೆ ಪಂಡಿತ ತಾರಾನಾಥರು ಏನು ಇವತ್ತೂಂತ ಅಂದರೆ ಎಂಥಾ ದೊಡ್ಡ ವ್ಯಕ್ತಿ ಕರ್ನಾಟಕದಲ್ಲಿ ನಮ್ಮೆದುರು ಸುಮ್ಮನೆ ಹಾಗೆ ಬದುಕಿ ಹೋಗಿಬಿಟ್ಟರು ಅನ್ನಿಸ್ತದೆ. ಅವರ ಎಷ್ಟೋ ವಿಚಾರಧಾರೆಗಳು ಇನ್ನೂ ಇವೆ. ಅವರ ಡೈರಿ, ಪತ್ರಗಳು, ಧರ್ಮಸಂಭವ ಪುಸ್ತಕಗಳಲ್ಲಿ ಸಿಗ್ತವೆ. ಅದನ್ನು ನಾವು ಸಾಕಷ್ಟು ಉಪಯೋಗಿಸಿಲ್ಲ. ಏಕೆಂದರೆ ನಾವಿನ್ನೂ ಆ ಮಟ್ಟಕ್ಕೆ ಬೆಳೆದೇ ಇಲ್ಲ. ನಾನು ಮೊದಲೇ ಹೇಳಿದ ಹಾಗೆ ಅವರು ಬಹಳ ರ್ಯಾಡಿಕಲ್ ಇದ್ದರು, ಒಟ್ಟಿನಲ್ಲಿ ಅವರಿಗೆ ಸಮಾಜದ ಜೊತೆ ಏನು ಸಂಬಂಧ ಅಂದರೆ ಒಂದೇ ಒಂದು ಸಂಬಂಧ. ಅದು ಸಹಾನುಭೂತಿಯ ಪ್ರೇಮದ ಸಂಬಂಧ, ಹೀಗೆಯೇ ಅವರು ರಾಯಚೂರಿನಲ್ಲಿ ಒಂದು ಸ್ಕೂಲ್ ಸ್ಥಾಪಿಸಿದ್ರು. ’ಮದ್ರಸಾ ಎ ಹಮದರ್ದ್’ ಅಂತ ಅದಕ್ಕೆ ಹೆಸರಿಟ್ಟಿದ್ರು. ಹಮ್‌ದರ್ದ್ ಎಂದರೆ ಸಿಂಪತಿ. ಮುಂದೆ ಇನ್ನೂ ಒಂದು ಇನ್‌ಸ್ಟಿಟ್ಯೂಶನ್ ಸ್ಥಾಪಿಸಿದ್ರು. ’ಪ್ರೇಮಾಯತನಿ’ ಅಂತ ಅದಕ್ಕೆ ಹೆಸರಿಟ್ಟಿದ್ರು. ಆಗಿನ ಕಾಲದಲ್ಲಿ ಅವರು ದೊಡ್ಡ ಜರ್ನಲಿಸ್ಟ್ ಆಗಿದ್ರು. ಅವರೊಂದು ’ಪ್ರೇಮ’ ಅನ್ನೋ ಪತ್ರಿಕೆ ಹೊರಡಿಸ್ತಿದ್ರು. ಅದರಲ್ಲಿ ಸಾಹಿತ್ಯ-ಚಿತ್ರಕಲೆ- ದರ್ಶನ ಇವೆಲ್ಲದರ ಬಗ್ಗೆ ಉತ್ತಮ ಬರಹಗಳು ಬರ್ತಿದ್ವು. ನನ್ನ ಕೇಳಿದರೆ ಅಂಥ ಒಂದು ಜರ್ನಲ್ ಈಗಿನವರೆಗೆ ಕರ್ನಾಟಕದಲ್ಲಿ ಬಂದಿಲ್ಲ. ಅದು ನಡೀತಿರಬೇಕಾದರೆ ಎಷ್ಟೋ ಮಂದಿ ಅವರಿಂದ ಪ್ರಭಾವಿತರಾದರು – ಈಗಿನ ಹಿರಿಯರಲ್ಲಿ ಆಗ ಪ್ರಭಾವಿತರಾದವರು ಕೆಲವರು ಇದ್ದಾರೆ. ಅವರ ಜೀವನದಲ್ಲಿ ಮುಖ್ಯವಾದ ಅಂಶ ’ಸಹಾನುಭೂತಿ’.

 

—-
ಅಕ್ಷರ ರೂಪ:
ಡಾ. ವಿಜಯಾ.
೧೯೭೪ರ ಉದಯವಾಣಿ ದೀಪಾವಳಿ ವಿಶೇಷಾಂಕದಲ್ಲಿ ಮೊದಲು ಪ್ರಕಟಿತ.

ರಾಜೀವ ತಾರಾನಾಥರು ಅಂತಾರಾಷ್ಟ್ರೀಯ ಖ್ಯಾತಿಯ ಸರೋದ್ ವಾದಕರು. ಅಕ್ಟೋಬರ್ ೧೭, ೧೯೩೨ ರಂದು ಬೆಂಗಳೂರಿನಲ್ಲಿ ಜನಿಸಿದ ರಾಜೀವ ತಾರಾನಾಥರು ತಮ್ಮ ಸಂಗೀತದ ಪ್ರಾರಂಭಿಕ ಶಿಕ್ಷಣವನ್ನು ತಂದೆ ಪಂಡಿತ್ ತಾರಾನಾಥರಿಂದಲೇ ಅಭ್ಯಾಸ ಮಾಡಿದರು. ಒಂಬತ್ತನೇ ವಯಸ್ಸಿನಲ್ಲೇ ಪ್ರಥಮ ಸಂಗೀತ ಕಚೇರಿ ನಡೆಸಿದ ಇವರು ತನ್ನ ೨೦ನೇ ವಯಸ್ಸಿಗೇ ಆಕಾಶವಾಣಿ ಕಲಾವಿದರಾಗಿದ್ದರು. ಸಾಹಿತ್ಯದಲ್ಲಿ ಪಿ.ಎಚ್.ಡಿ. ಪದವಿಯನ್ನು ಪಡೆದ ರಾಜೀವ ತಾರಾನಾಥ ಕಲ್ಕತ್ತಾದಲ್ಲಿ ಇಂಗ್ಲಿಷ್ ಸಾಹಿತ್ಯದ ಪ್ರಾಧ್ಯಾಪಕರಾಗಿ ವೃತ್ತಿಯನ್ನು ಆರಂಭಿಸಿದರು. ಅಲ್ಲಿ ಉಸ್ತಾದ್‌ ಅಲಿ ಅಕ್ಬರ್ ಖಾನ್‌ ಅವರಲ್ಲಿ ತನ್ನ ಸಂಗೀತಾಭ್ಯಾಸವನ್ನು ಮುಂದುವರೆಸಿದರು, ರಾಜೀವ ತಾರಾನಾಥರು ಭಾರತದಲ್ಲಷ್ಟೇ ಅಲ್ಲದೆ, ಆಸ್ಟ್ರೇಲಿಯಾ, ಯೂರೋಪ್, ಕೆನಡಾ ಮುಂತಾದ ಕಡೆ ಕಛೇರಿ ನೀಡುತ್ತಾ ಬಂದಿದ್ದಾರೆ. ಸಂಸ್ಕಾರ ಚಲನಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿರುವುದಲ್ಲದೆ, ಮನನ್-ಮೆಡಿಟೇಷನ್, ಹಾರ್ಮೊನಿ, ಓವರ್ ದಿ ಮೂನ್, ಇಂಡಿಯನ್ ಕ್ಲಾಸಿಕಲ್ ಮ್ಯೂಸಿಕ್ ಮುಂತಾದ ಶಾಸ್ತ್ರೀಯ ಸಂಗೀತದ ಸಿ.ಡಿ.ಗಳನ್ನು ಹೊರತಂದಿದ್ದಾರೆ. ಜೊತೆಗೆ ಅಮೆರಿಕಾದ ವಿಶ್ವವಿದ್ಯಾಲಯಗಳಲ್ಲಿ ಸಂದರ್ಶಕ ಸಂಗೀತ ಪ್ರಾಧ್ಯಾಪಕರಾಗಿಯೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯ ಪ್ರಶಸ್ತಿ, ಸಂಗೀತ ರತ್ನ ಮೈಸೂರು, ಟಿ. ಚೌಡಯ್ಯ ಮೆಮೋರಿಯಲ್ ಪ್ರಶಸ್ತಿ ಹೀಗೆ ಹಲವಾರು ಗೌರವಕ್ಕೆ ಪಾತ್ರರಾಗಿದ್ದಾರೆ. ಇತ್ತೀಚಿಗಷ್ಟೇ ಅವರ ಬದುಕು ಸಾಧನೆ ಕುರಿತ ಸರೋದ್ ಮಾಂತ್ರಿಕ ರಾಜೀವ ತಾರಾನಾಥ್ ಕೃತಿ ಪ್ರಕಟಗೊಂಡಿದೆ.

* * *