• ತಾವು ಮುಖ್ಯಮಂತ್ರಿಯಾಗಿರುವ ಸಂದರ್ಭ ಬಹಳ ಮಹತ್ವದ್ದು ಅನ್ಕೊತೀನಿ, ಏಕೆಂದರೆ ಒಂದು ಶತಮಾನದ ಕೊನೆಯಾಗಿ ಹೊಸ ಶತಮಾನದ ಶುರುವಾಗುವುದಷ್ಟೇ ಅಲ್ಲ ಹೊಸ ಸಹಸ್ರಮಾನವೂ ಶುರುವಾಗ್ತಾ ಇದೆ. ಆದ್ದರಿಂದ ಚೆಲುವ ಕನ್ನಡ ನಾಡು ಎನ್ನುವ ನಮ್ಮ ಕಲ್ಪನೆಯಲ್ಲಿ ಕಲ್ಪನೆ ಮುಂದಿನ ಶತಮಾನದಲ್ಲಿ ಯಾವ ರೀತಿಯಲ್ಲಿ ಸಾರ್ಥಕತೆ ಪಡೆಯುತ್ತದೆ. ಅದರಲ್ಲಿರುವ ಆತಂಕಗಳೇನು? ನಮಗಿರುವ ಭರವಸೆಗಳೇನು? ಇದನ್ನೆಲ್ಲ ಮಾತನಾಡುವುದಕ್ಕೆ ನಿಮಗಿಂತ ಯೋಗ್ಯರಾದ ಮನುಷ್ಯ, ನೀವು ಮುಖ್ಯಮಂತ್ರಿಯಾಗಿರುವುದರಿಂದ, ನಮಗೆ ಸಿಗುವುದಿಲ್ಲ. ನಿಮ್ಮ ಆತಂಕಗಳೇನು ಎಂದು ಮೊದಲು ಹೇಳಿದರೆ, ಆಮೇಲೆ ಉಳಿದದ್ದನ್ನು ಮಾತನಾಡಬಹುದು.

ಒಂದು ಶತಮಾನ ಅದು ಮುಗಿಯುವ ಕ್ಷಣಗಳು ಮತ್ತೊಂದು ಶತಮಾನ ಉದ್ಭವ ಆಗತಕ್ಕಂಥ ಸನ್ನಿವೇಶ ಇವುಗಳೆರಡು ಕೂಡ ಒಂದು ರಾಜ್ಯದ ಮೇಲೆ ಪ್ರಬಲವಾದಂಥ ಮುದ್ರೆಯನ್ನ ಒತ್ತಕ್ಕಂಥ ಕಾಲ. ಇಂಥ ಅಪೂರ್ವವಾದಂಥ ಕ್ಷಣಗಳಲ್ಲಿ ನಾವು ಕರ್ನಾಟಕದ ಭವಿಷ್ಯದ ಬಗ್ಗೆ, ಅದು ನಮಗೆ ತಂದು ಕೊಡಬಹುದಾದಂಥ ಸುಂದರವಾದಂಥ ಕನಸುಗಳು, ಅದರಲ್ಲಿರುವ ಆತಂಕಗಳ ಬಗ್ಗೆ ನೀವು ಕೇಳಿದಿರಿ. ಯಾವೊಂದು ರಾಜ್ಯವೂ ಕೂಡ ಸಮಸ್ಯೆಯಿಂದ ಅತೀತವಾಗಿಲ್ಲ. ಪ್ರತಿಯೊಂದು ರಾಜ್ಯವೂ ಕೂಡಾ ತನ್ನದೆ ಆದಂಥ ಸಮಸ್ಯೆಗಳ ಸುಳಿಯಲ್ಲಿ ಸಿಕ್ಕಿ ಆ ಸಮಸ್ಯೆಗಳನ್ನು ಪರಿಹರಿಸಿಕೊಂಡು ಉತ್ಕರ್ಷದ ಹಾದಿಯನ್ನು ನೋಡತಕ್ಕಂಥ ದಿನಗಳು ಇವು. ನನ್ನ ಕನಸುಗಳ ವಿಚಾರ ತಾವೇ ಹೇಳ್ತಾ ಇದ್ರಿ. ಈಗ ಆತಂಕಗಳೇನು ಎನ್ನುವುದರ ಬಗ್ಗೆ ಹೇಳ್ತೀನಿ. ಆತಂಕಗಳು ಹಲವಾರು ಇವೆ. ನಿನ್ನೆ ತಾನೇ ಓದ್ತಾ ಇದ್ದೆ. ೧೯೦೨ ನೇ ಇಸವಿಯಲ್ಲಿ ಭಾರತ, ದೇಶದಲ್ಲೇ ಮೊಟ್ಟ ಮೊದಲನೆಯ ಹೈಡ್ರಲ್ ಜನರೇಟಿಂಗ್ ಪವರ್ ಸ್ಟೇಷನ್ ನಮ್ಮ ಜಿಲ್ಲೆಯ ಶಿವನಸಮುದ್ರದಲ್ಲಿ ಪ್ರತಿಷ್ಠಾಪನೆ ಆಯ್ತು. ಶಿವನಸಮುದ್ರದಿಂದ ಕೋಲಾರ ಚಿನ್ನದ ಗಣಿಗಳಿಗೆ ಪವರ್‌ ಕರೆಂಟನ್ನು ನಾವು ಟ್ರಾನ್ಸ್‌ಮಿಟ್ ಮಾಡ್ತಾ ಇದ್ದ ದಿನಗಳನ್ನು ನೆನಪಿಸಿಕೊಂಡಾಗ ಕರ್ನಾಟಕಕ್ಕೆ, ಅಂದರೆ ಇಂದಿನ ಕರ್ನಾಟಕಕ್ಕೆ, ಅಂದಿನ ಮೈಸೂರಿಗೆ ಎಂಥ ಭವ್ಯವಾದಂಥ ಪರಂಪರೆ ಇತ್ತು ಎನ್ನುವುದಕ್ಕೆ ಇದಕ್ಕಿಂತಲೂ ಬೇರೆ ನಿದರ್ಶನ ಪಡೆಯಲು ಸಾಧ್ಯವಾಗುವುದಿಲ್ಲ.

ಇವತ್ತು ಬಂದ ಕ್ರೂರ ವೈಪರೀತ್ಯ ಏನು ಅಂದ್ರೆ, ವಿಪರ್ಯಾಸ ಏನು ಅಂದ್ರೆ ಯಾವ ರಾಜ್ಯ ಇಡೀ ದೇಶಕ್ಕೆ ಒಂದು ಕಾಲದಲ್ಲಿ ಮಾದರಿಯಾಗಿತ್ತೋ ಇವತ್ತು ಆ ರಾಜ್ಯ ವಿದ್ಯುತ್ ಕ್ಷೇತ್ರದಲ್ಲಿ ಎಷ್ಟು ದಾಪುಗಾಲನ್ನು ಹಾಕಬೇಕಿತ್ತೊ ಅದನ್ನ ಹಾಕೋದಿಕ್ಕೆ ಸಾಧ್ಯವಾಗಿಲ್ಲ ಅಂತ ಮರುಕ ಒಂದು ಕಡೆ, ಎರಡನೆಯದು ಇದರಿಂದ ನಮ್ಮ ರಾಜ್ಯದ ಸರ್ವತೋಮುಖ ಆರ್ಥಿಕ ಬೆಳವಣಿಗೆಗೆ, ಕೈಗಾರಿಕಾ ಅಭಿವೃದ್ಧಿಗೆ, ವ್ಯವಸಾಯ ಕ್ಷೇತ್ರದ ವಿಸ್ತರಣೆಗೆ, ಇವೆಲ್ಲದಕ್ಕೂ ಕೂಡ ವಿದ್ಯುತ್ ಕೊರತೆ ದೊಡ್ಡ ಅಡ್ಡಗಾಲು ಹಾಕ್ತಾ ಇದೆ. ಇದು ನನಗೆ ಬಹಳ ಆತಂಕವನ್ನು ತರುವಂಥ ಬೆಳವಣಿಗೆ. ಇದಕ್ಕೆ ನಾವು ಯೋಗ್ಯವಾದಂಥ ಪರಿಹಾರಗಳನ್ನು ಕಂಡು ಹಿಡಿಯಲೇ ಬೇಕು. ಇನ್ನು ನಮ್ಮ ರಾಜ್ಯಕ್ಕೆ ಒಂದು ಶಾಪ. ಯಾವುದು ಆ ಶಾಪ ಅಂತಂದ್ರೆ, ನಾವು ಕಾವೇರಿನದಿಯ ಪಾತ್ರವನ್ನು ಗಮನಿಸಿದಾಗ, ಕೃಷ್ಣಾ ನದಿಯ ಪಾತ್ರವನ್ನು ಗಮನಿಸಿದಾಗ, ಕಾವೇರಿ ನದಿ ನಮ್ಮಲ್ಲಿ ಉದ್ಭವವಾಗಿ ತಮಿಳುನಾಡಿಗೆ ಹರಿದು ಹೋಗ್ತಾ ಇದೆ. ಇನ್ನು ಕೃಷ್ಣಾನದಿ ವಿಚಾರ. ನಾವು ಆಂಧ್ರಪ್ರದೇಶಕ್ಕೆ ನೀರು ಬಿಟ್ಟುಕೊಡುವಂಥ ಪರಿಸ್ಥಿತಿ ಇದೆ. ಈ ಎರಡೂ ನದಿ ವ್ಯವಹಾರಗಳಲ್ಲಿ ಕರ್ನಾಟಕ ಅತ್ಯಂತ ಕಷ್ಟಕರ ಪರಿಸ್ಥಿತಿ ಆಗಿಂದ್ದಾಗೆ – ಆಗಿಂದ್ದಾಗೆ ನಾವು ಸಿಕ್ಕಿ ಹಾಕಿಕೊಳ್ತಾ ಇರೋದು ಮತ್ತೊಂದು ಆತಂಕ. ಏಕೆ ಆತಂಕ ಅಂತಂದ್ರೆ ನಾವು ಯಾವ ಪ್ರಮಾಣದಲ್ಲಿ ನಮ್ಮ ನೀರಾವರಿ ಸೌಕರ್ಯವನ್ನು ಈ ರಾಜ್ಯದಲ್ಲಿ ಇರ‍್ತಕ್ಕಂಥ ವ್ಯವಸಾಯವನ್ನೇ ತಮ್ಮ ವೃತ್ತಿಯನ್ನಾಗಿ ಅವಲಂಬಿಸಿರತಕ್ಕಂಥ ಲಕ್ಷಾಂತರ ಜನಗಳಿಗೆ ಕಲ್ಪಿಸಿಕೊಡಬೇಕು ಅಂತ ಏನು ಆಸೆ ಇತ್ತು, ಆ ಆಸೆಯನ್ನು ನಾವು ಈಡೇರಿಸಲು ಆಗದೆ ಇದ್ದದಕ್ಕೆ, ಕೇವಲ ನಮ್ಮ ಸರ್ಕಾರವೇ ಕಾರಣವಲ್ಲ, ಕರ್ನಾಟಕದ ಜನಗಳೇ ಕಾರಣವಲ್ಲ. ಆದರೆ ನಾವು ಈ ಭೌಗೋಳಿಕ ಆಧಾರದ ಮೇಲೆ ಯಾವ ಸ್ಥಾನದಲ್ಲಿದ್ದೀವಿ ಅವು ನಮ್ಮನ್ನು ಬಹಳ ಇಕ್ಕಟ್ಟಿಗೆ ಸಿಕ್ಕಿ ಹಾಕಿಸಿದೆ. ಅದು ನನಗೆ ಆತಂಕವನ್ನು ತಂದು ಒಡ್ಡುವಂಥ ವಿಚಾರ ಮತ್ತು ಬೆಳವಣಿಗೆ. ಈ ಕನ್ನಡ ನಾಡು ಸಮೃದ್ಧಿಯಾಗಬೇಕು, ಅದು ದಷ್ಟ ಪುಷ್ಟವಾಗಿ ಬೆಳೆಯಬೇಕು ಅನ್ನುವಂಥ ಕೋಟ್ಯಾಂತರ ಕನ್ನಡಿಗರ ಆಸೆ ಏನು ಇದೆ, ಆ ಆಸೆಗೆ ಇಂಬು ಕೊಡ್ತಕ್ಕಂಥ ಈ ಕನ್ನಡದ ಜನರಿಗೆ ತಮ್ಮ ಬಗ್ಗೆ ಇರುವಂಥ ಅಭಿಮಾನ (ನಿರಾಸೆ, ನಿಟ್ಟುಸಿರು, ಸ್ವಲ್ಪ ವ್ಯಂಗ್ಯವಾಗಿ ನಗುತ್ತಾ) ನೋಡಿ ನನಗೆ ಇತ್ತೀಚಿನ ದಿನಗಳಲ್ಲಿ ಕೊಂಚ ಕಳವಳ ಆಗುತ್ತಿದೆ. ಕನ್ನಡತನದ ಬಗ್ಗೆ ನಾವು ಸ್ಪಷ್ಟವಾದಂಥ ಹೆಮ್ಮೆಯನ್ನು ಪಡೆಯದೆ ಇದ್ರೆ, ಕನ್ನಡ ನಾಡಿನ ಬಗ್ಗೆ ನಿಚ್ಚಳವಾದ ಭರವಸೆಯನ್ನು, ನಿಚ್ಚಳವಾದಂಥ ಅಭಿಮಾನವನ್ನು ನಾವು ತಾಳದೆ ಹೋದ್ರೆ ಕನ್ನಡವನ್ನು ಉದ್ಧರಿಸುವ ಬಗೆ ಹೇಗೆ? ನಾಡು-ನುಡಿ ಎರಡನ್ನೂ ಮುಂದುವರಿಸುವ ಬಗ್ಗೆ ಒಂದು ಜ್ವಲಂತ ಅಭಿಮಾನ ಇರಬೇಕು. ಇವತ್ತು ಅಭಿಮಾನದ ಬ್ಯಾಟರಿ ಸ್ವಲ್ಪ ಡೌನ್ ಆದ ಹಾಗೆ ಕಾಣ್ತಿದೆ. ಅದಕ್ಕೆ ರೀ ಚಾರ್ಜ್‌ ಮಾಡುವ ಅವಶ್ಯಕತೆಯಿದೆ. ಅದು ಆತಂಕಕ್ಕೆ ಎಡೆಮಾಡಿದೆ.

 • ಒಂದೊಂದು ಸಾರಿ, ಅತಿ ಅಭಿಮಾನದಿಂದಲೂ ಅಪಾಯವಿರುತ್ತದೆ. ಅಭಿಮಾನ ಶೂನ್ಯತೆಯಿಂದಲೂ ಬಹಳ ಅಪಾಯವಿರುತ್ತದೆ. ಪುತಿನ ಒಂದು ಕಡೆ ಅಭಿಮಾನ ಕೃಪಣಅಂತಾರೆ. ಅಭಿಮಾನದಲ್ಲಿ ಕೃಪಣತೆ ತೋರಿಸ್ತಾರೆ ಅಂತ. ಈಗ ನೀವು ಹೇಳಿದ ಒಂದೊಂದೇ ವಿಷಯವನ್ನು ಎತ್ತಿಕೊಂಡು ಮಾತನ್ನು ಮುಂದುವರೆಸೋಣ. ಹಿಂದೆ ಮೈಸೂರು ದೇಶದ ಒಡೆಯರ ಆಡಳಿತದಲ್ಲಿ ವಿಶ್ವೇಶ್ವರಯ್ಯ, ಮಿರ್ಜಾ ಇಸ್ಮಾಯಿಲ್, ರಂಗಾಚಾರ್ ಇವರೆಲ್ಲ ದಿವಾನರಾಗಿ ಒಳ್ಳೆ ಕೆಲಸ ಮಾಡಿದವರು. ಹಾಗಾಗಿ ಮೈಸೂರು ಒಡೆಯರ ಆಡಳಿತದಲ್ಲಿ ಬಹಳ ಮುಂದೆ ಇತ್ತು ಅನ್ನೋದನ್ನ ಕೇಳಿದ್ದೇವೆ. ಅಂದರೆ ಪ್ರಗತಿಪರವಾದ ಆಡಳಿತ ಪರಂಪರೆಯೇ ನಮಗಿತ್ತು. ಪಶುವೈದ್ಯ ಶಾಲೆ ಇಲ್ಲೇ ಪ್ರಾರಂಭವಾಗಿದ್ದು, ಈಗ ತಾವು ಹೇಳಿದ ವಿದ್ಯುತ್, ಆಮೇಲೆ ರಾಷ್ಟ್ರೀಕರಣ, ಅಂದ್ರೆ ವಿಶ್ವೇಶ್ವರಯ್ಯನವರು ಬ್ಯಾಂಕು ಮಾಡಿದ್ರು ಹೀಗೆ ಎಲ್ಲವು ಆಯಿತು. ಆದರೆ ಕರ್ನಾಟಕ ಏಕೀಕರಣವಾದ ಮೇಲೆ ಬಹಳ ಹಿಂದುಳಿದ ಪ್ರದೇಶಗಳು ಮೈಸೂರಿನ ಜೊತೆಗೆ ಸೇರಿದ್ದಾವೆ. ಹಿಂದುಳಿದ ಪ್ರದೇಶಗಳ ಕನ್ನಡದ ಅಭಿಮಾನ ಬಹಳ ಉಜ್ವಲವಾಗಿಯೇ ಇದೆ. ಆಮೇಲೆ ಅವು ಸಾಕಷ್ಟು ಬೆಳೆಯುವ ಸಾಧ್ಯತೆಯನ್ನು ಹೊಂದಿರುವ ಪ್ರದೇಶಗಳೂ ಹೌದು. ಈಗಲೂ ಕರ್ನಾಟಕದಲ್ಲಿ ಪ್ರದೇಶಗಳ ನಡುವಿನ ಅಸಮಾನತೆ ಇದೆ. ಮುಖ್ಯಮಂತ್ರಿಯಾಗಿರುವ ತಾವು ಚೆಲುವ ಕನ್ನಡ ನಾಡನ್ನು ಕಟ್ಟುವ ಕ್ರಿಯೆಯಲ್ಲಿ ಪ್ರಾದೇಶಿಕ ಅಸಮಾನತೆಯನ್ನ ಕಡಿಮೆ ಮಾಡಲು ಪ್ರಯತ್ನಿಸಬೇಕು. ಯಾಕೆ ಇದನ್ನ ಹೇಳ್ತಾ ಇದೀನಿ ಅಂದ್ರೆ ನಾನು ಸ್ವಲ್ಪ ದಿನ ಉಡುಪಿಯಲ್ಲಿ ಇದ್ದೆ. ಅಲ್ಲಿ ಇದ್ದಾಗ ಮನೆ ಕಟ್ಟೋದಕ್ಕೆ ಬಂದೋರು ಬೀದರ್‌ನವರು. ಅವರು ಅಲ್ಲೆಲ್ಲ ಗುಡಿಸಲು ಹಾಕ್ಕೊಂಡು ಇರೋದು. ಅಲ್ಲಿ ಕೆಲವರಿಗೆ ಮಣಿಪಾಲ ಗಲ್ಫ್ ಇದ್ದ ಹಾಗೆ. ಹೀಗೆ ಮನೆ ಕಟ್ಟಲು ಬಂದವರಿಗೆ ಮಣಿಪಾಲ ಗಲ್ಫಾಗೋದು, ಅದು ನಮ್ಮ ಪ್ರಾದೇಶಿಕ ಅಸಮಾನತೆಯ ಸ್ವರೂಪ ಎಂಥದ್ದು ಎನ್ನುವುದನ್ನು ಹೇಳುತ್ತದೆ. ನೀವು ಬಹಳ ವರ್ಷಗಳಿಂದ ಸಮಾಜವಾದಿ ಚಳವಳಿ ಪರಂಪರೆಯಲ್ಲಿ ಬೆಳೆದುಬಂದು ಈಗ ಮುಖ್ಯಮಂತ್ರಿ ಆಗಿರುವವರು. ಹಿನ್ನೆಲೆಯಲ್ಲಿ ನಾವೇ ಒಂದು ಗಲ್ಫಾಗುವ ಮತ್ತು ಗಲ್ಫ್‌ ಇನ್ ದಿ ಅದರ್ ಸೆನ್ಸ್‌ ಆಲ್ಸೊ, ಸಮಸ್ಯೆಯನ್ನು ಹೇಗೆ ಸರಿ ಮಾಡುವುದಕ್ಕೆ ಸಾಧ್ಯ?

ಸರ್ ಎಂ. ವಿಶ್ವೇಶ್ವರಯ್ಯನವರು ನಮ್ಮ ಮಂಡ್ಯ ಸಮೃದ್ಧಗೊಳಿಸುವುದಕ್ಕೆ, ಶ್ರೀಮಂತಗೊಳಿಸುವುದಕ್ಕೆ ಆಗ ’ಇರ್ವಿನ್ ಕೆನಾಲ್’ ಅಂತ (ಈಗ ವಿಶ್ವೇಶ್ವರಯ್ಯ ನಾಲೆ) ಮಾಡಿದ್ರು. ಇದರಿಂದ ಯಾರು ಆಹಾರ ಬೆಳೀತಿದ್ರೋ ಅವರು ಚಿನ್ನದ ಬೆಳೆಯನ್ನ ಬೆಳೆಯೋಕೆ ಕಾರಣಿಭೂತರಾರು. ಈಗ ನಾವು ಮುಂಬೈನಲ್ಲಿ ಏನು ಸಿಮೆಂಟ್ ರೋಡ್ಗಳು ನೋಡ್ತಾ ಇದ್ದೀವಿ, ಆದ್ರೆ ರಾಜ್ಯದಲ್ಲಿ ಮೊಟ್ಟ ಮೊದಲಿಗೆ ಸಿಮೆಂಟ್ ರೋಡ್ ಮಾಡಿದವರು ಸರ್ ಮಿರ್ಜಾ ಇಸ್ಮಾಯಿಲ್. ಅದು ೧೯೪೦ ರಲ್ಲಿ ಅಂತ ಕಾಣ್ತದೆ. ನಮ್ಮ ಮಂಡ್ಯದ ಹತ್ತಿರ ಮೊದಲ ಪ್ರಯೋಗ ಮಾಡಿದರು. ಅದು ಬಹಳ ಕಾಲದವರೆಗೆ ಇತ್ತು ಈ ಸಿಮೆಂಟ್ ರೋಡ್. ಇಂಥ ಹೆಡ್ ಸ್ಪಾರ್ಟ್‌ ಅಂತ ಹೇಳ್ತಿವಲ್ಲ ಅದು ಕರ್ನಾಟಕಕ್ಕೆ, ಆವತ್ತಿನ ಮೈಸೂರು ರಾಜ್ಯಕ್ಕೆ ಸಿಕ್ತು. ಈಗ ತಾನೇ ತಾವೇ ಹೇಳಿದ ಹಾಗೆ ಕರ್ನಾಟಕ ಏಕೀಕರಣವಾಯ್ತು. ಕರ್ನಾಟಕದ ಜನರ ಆಸೆಗೆ ಒಂದು ರೂಪ ಸಿಕ್ತು. ಒಂದು ಅಭಿವ್ಯಕ್ತಿ ಸಿಕ್ತು. ಹಿಂದುಳಿದಿರುವಂಥ ಹಲವಾರು ಪ್ರದೇಶಗಳು ನಮಗೆ ಸಿಕ್ವು. ಇತ್ತೀಚೆಗೆ ನಮ್ಮ ಕರ್ನಾಟಕ ಸರ್ಕಾರ ’ಹ್ಯೂಮನ್ ರಿಪೋರ‍್ಸ್ ಡೆವಲಪ್‌ಮೆಂಟ್ ಇಂಡಿಸಸ್’ ಅಂತ ಮಾಡ್ತಿದಾರೆ. ಇದರಲ್ಲಿ ನಮಗೆ ಎದ್ದು ಕಾಣುವ ಅಂಶ ಏನು ಅಂದ್ರೆ ಹೈದ್ರಾಬಾದಿನ ಭಾಗಗಳಾದಂಥ ಈ ಗುಲ್ಬರ್ಗ, ರಾಯಚೂರು, ಬೀದರ್, ಕೋಲಾರ, ತುಮಕೂರಿನ ಕೆಲವು ಭಾಗಗಳು ಬರಗಾಲ ಪೀಡಿತ ಪ್ರದೇಶಗಳು. ಮಳೆಯನ್ನೇ ಅವಲಂಬಿಸಿಕೊಂಡಿರುವಂಥ ಸೀಮೆ. ಇಲ್ಲಿ ನಾವು ಹೈದ್ರಾಬಾದ್ ಕರ್ನಾಟಕ, ಮುಂಬೈ ಕರ್ನಾಟಕ ಅಂತ ಜನರಲೀ ಏನು ಹೇಳ್ತೀವಿ, ಸಾಮಾನ್ಯವಾಗಿ ಗುರುತಿಸುತ್ತೀವಿ, ಈ ಪ್ರದೇಶಗಳಲ್ಲಿ, ಕಾರಣಾಂತರಗಳಿಂದ ಅದಕ್ಕೆ ಚಾರಿತ್ರಿಕ ಕಾರಣಗಳಿವೆ. ಚಾರಿತ್ರಿಕ ಕಾರಣಗಳು ಏನೆಂದರೆ ಕನ್ನಡ ಮಾತನಾಡುವ ಜನಗಳ ಬಗ್ಗೆ ಅಂದಿನ ಆಡಳಿತ ಮಾಡಿದ ಉಪೇಕ್ಷೆ, ನಿರ್ಲಕ್ಷ್ಯ ಈಗ ಮುಂಬೈ ಪ್ರೆಸಿಡೆನ್ಸಿ, ಬಹಳ ದೂರ, ಮುಂಬೈಗೂ ಹುಬ್ಬಳ್ಳಿ-ಧಾರವಾಡಕ್ಕೂ ಅನ್ನೊದನ್ನ ಗಮನಿಸಬೇಕು ಮತ್ತು ಈ ಪ್ರದೇಶಗಳ ಬಗ್ಗೆ ಆಳೋರಿಗೆ ಅಭಿಮಾನ ಇರಲಿಲ್ಲ ಮತ್ತು ಇವರ ಬಗ್ಗೆ ಕಾಳಜಿ ಇರಲಿಲ್ಲ. ಆದ್ದರಿಂದ ಈ ಪ್ರದೇಶಗಳು ಬಹಳ ಹಿಂದುಳಿದ ಪ್ರದೇಶಗಳಾಗೇ ಉಳಿದವು. ಆದರೆ ಕಳೆದ ೫೬ನೇ ಇಸವಿಯಲ್ಲಿ ಕರ್ನಾಟಕ ಏಕೀಕರಣ ಆದ ಮೇಲೆ ಈ ಪ್ರದೇಶಗಳು ಬಹಳ ಮಟ್ಟಿಗೆ ಆಗಿನ ಕಾಲದ ಸ್ಥಿತಿಗೆ ಹೋಲಿಸಿದಾಗ ಸುಧಾರಣೆಯಾಗಿದೆ. ಉತ್ತಮವಾಗಿವೆ. ಒಳ್ಳೆಯ ರಸ್ತಗಳಾಗ್ತ ಇವೆ, ಅಣಕೆಟ್ಟನ್ನು ಕಟ್ತಾ ಇದ್ದೀವಿ. ಇವತ್ತು ಕೃಷ್ಣಾ ಪ್ರಾಜೆಕ್ಟ್, ಅದಕ್ಕೆ ನಾವು ಖರ್ಚು ಮಾಡ್ತಾ ಇರುವ ಸಹಸ್ರಾರು ಕೋಟೆ ರೂಪಾಯಿ, ಉತ್ತೋರೊತ್ತರ ಆ ಭಾಗದ ಜನಗಳಿಗೆ ಕಲ್ಪವೃಕ್ಷವಾಗಲಿದೆ. ಅವರ ಜೀವನವನ್ನು ಸುಧಾರಣೆ ಮಾಡ್ಲಿಕ್ಕೆ. ಇವುಗಳೆಲ್ಲವೂ ಕುಡ ಒಂದು ಟೈಮ್ ಫ್ರೇಮ್‌ನಲ್ಲಿ ಫಲಿತಾಂಶವನ್ನು, ಜನಜೀವನದ ಮೇಲೆ ಆಗುವಂಥ ಪರಿಣಾಮವನ್ನು ಅವರು ಸ್ವೀಕಾರ ಮಾಡೋದಕ್ಕೆ ತಯಾರು ಆಗಬೇಕಾಗುತ್ತೆ. ಆ ದೃಷ್ಠಿಯಿಂದ ನಾನು ಮುಂದಿನ ೫ ವರ್ಷಗಳಲ್ಲಿ ಈ ಅಸಮತೋಲನ ಎನ್ನುವ ಮಾತೇನಿದೆ ಆ ಸೊಲ್ಲನ್ನು ಅಡಗಿಸಬೇಕು ಅನ್ನುವ ದೃಷ್ಠಿಯಲ್ಲಿ ಪ್ರಖರವಾದ ಹೆಜ್ಜೆಗಳನ್ನು ಇಡಬೇಕೆಂಬುದು ಈ ಸರ್ಕಾರದ ಬಯಕೆ. ಆ ಉದ್ದೇಶದಿಂದಲೇ ಮೊದಲು ಯಾವ ಯಾವ ಕ್ಷೇತ್ರದಲ್ಲಿ ಈ ಅಸಮತೋಲನ ಎದ್ದುಕಾಣುತ್ತವೆ ಆ ಕ್ಷೇತ್ರಗಳನ್ನು ಗುರುತಿಸಲಿಕ್ಕೆ ಒಂದು ಮೂರು ಜನ ಮೇಧಾವಿಗಳ, ಪರಿಣತರ ಸಮಿತಿ ಮಾಡಿ ಆ ಸಮಿತಿಗೆ ಒಂದು ಟೈಮ್ ಫ್ರೇಮ್‌ನ್ನು ಕೊಟ್ಟು ವರದಿ ತರಿಸಿ ಆನಂತರ ಅವರೇ ಏನು ಸಲಹೆಗಳನ್ನು ಕೊಡುತ್ತಾರೆ, ಆ ಸಲಹೆಗಳನ್ನು ನಮ್ಮ ಸಂಪನ್ಮೂಲಗಳನ್ನು ಅಳವಡಿಸಿಕೊಂಡು ಸಂಪನ್ಮೂಲಗಳ ಇತಿಮಿತಿಯನ್ನು ಗಮನದಲ್ಲಿಟ್ಟುಕೊಂಡು ನಾವು ಈ ಅಸಮತೋಲನದ ವಿಚಾರದಲ್ಲಿ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡುತ್ತೇವೆ.

 • ಬಹಳ ಒಳ್ಳೆಯ ಪ್ರಯತ್ನ. ಆದರೆ ನಿಮ್ಮ ಕನಸು ನನಸಾಗಲಿಕ್ಕೆ ನಿಮಗೆ ರಾಜಕೀಯ ಬೆಂಬಲ ಬೇಕು. ನೀವು ಒಂದು ಪತ್ರದಲ್ಲಿ ನನಗೆ  ನಿಮ್ಮ ಆತಂಕಗಳಲ್ಲಿ ಪ್ರಜಾತಾಂತ್ರಿಕ ವ್ಯವಸ್ಥೆ ಗಟ್ಟಿಮುಟ್ಟಾಗಿ ಉಳಿದು ಬೆಳೆಯುತ್ತಿರುವುದರ ಬಗ್ಗೆ ಇರಬಹುದಾದ ಅನುಮಾನಗಳು, ಆತಂಕಗಳನ್ನು ವ್ಯಕ್ತಪಡಿಸಿದ್ದೀರಿ, ಅದು ಎಲ್ಲರಿಗೂ ಇದೆ, ನನಗೂ ಇದೆ. ಕರ್ನಾಟಕದ ಜನ ಅಂತೂ ತುಂಬಾ ಎಕ್ಸ್‌ಪೆರಿಮೆಂಟ್ ಮಾಡುತ್ತಿದ್ದಾರೆ. ಒಂದು ಪಕ್ಷವನ್ನು ಸೆಂಟರ್‌ಗೆ ಕಳುಹಿಸುತ್ತಾರೆ, ಇನ್ನೊಂದು ಪಕ್ಷವನ್ನು ಇಲ್ಲಿ ಆಡಳಿತ ಮಾಡಲು ಬಿಡುತ್ತಾರೆ. ಅವರು ಸರಿಯಾಗಿ ಮಾಡದಿದ್ದರೆ ಇನ್ನೊಂದು ಪಕ್ಷವನ್ನು ತರುತ್ತಾರೆ. ಎಕ್ಸ್‌ಪೆರಿಮೆಂಟ್‌ನ ಭಾಗವಾಗಿಯೇ ಈಗ ತಮ್ಮನ್ನು ಅಧಿಕಾರಕ್ಕೆ ತಂದಿದ್ದಾರೆ. ಕನ್ನಡದ ಜನ. ಜನ ಕೆಲಸ ಮಾಡುತ್ತಾ ಇದ್ದಾರೆ. ಆದರೆ ರಾಜಕೀಯ ಪಕ್ಷಗಳು (ಎಲ್ಲ ಪಕ್ಷಗಳು) ಒಂದೇ ಪಕ್ಷ ಅಂತಲ್ಲ, ಜನರ ಅಭಿಮಾನ, ಜನರು ಮಾಡುತ್ತಿರುವ ಪ್ರಯೋಗಗಳು ಇದೆಯಲ್ಲ, ಅದರ ಎಲ್ಲ ಪ್ರಯೋಗಗಳ ಅರ್ಥಪೂರ್ಣತೆ ಹಾಗೂ ಮಹತ್ವವನ್ನು ರಾಜಕಾರಣಿಗಳು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದಾರೋ ಇಲ್ಲವೋ ಅಂತ ಒಂದೊಂದು ಬಾರಿ ನನ್ನಂಥವನಿಗೆ ಅನುಮಾನವಾಗುತ್ತದೆ. ಎಕ್ಸ್‌ಪೆರಿಮೆಂಟ್‌ನಲ್ಲಿ ಜನ ಒಂದು ಸಣ್ಣ ಪಕ್ಷವನ್ನು ದೊಡ್ಡ ಪಕ್ಷ ಮಾಡುತ್ತಾರೆ. ದೊಡ್ಡ ಪಕ್ಷವನ್ನು ಸಣ್ಣ ಪಕ್ಷ ಮಾಡುತ್ತಾರೆ. ತಾವು ಒಂದು ರಾಜಕೀಯ ವ್ಯವಸ್ಥೆಯಲ್ಲಿ ಹೆಣಗಿಕೊಂಡು ಹೋರಾಡಿಕೊಂಡು ಬಂದೋರು. ಏನೋ ಒಂದು ಆದರ್ಶ ಉಳಿಸಿಕೊಂಡು ಬಂದೋರು. ಅದಕ್ಕಾಗಿ ಇವನ್ನೆಲ್ಲ ಮಾಡ್ಲಿಕ್ಕೆ ಜನ ಇರ್ತಾರೆ, ಆದರೆ ಪಕ್ಷಗಳೂ ಇರ್ಬೇಕು. ಮತ್ತೆ ವಿರೋಧಪಕ್ಷಗಳೂ ಕೂಡ ಒಳ್ಳೆಯ ಕೆಲಸಗಳನ್ನು ಮೆಚ್ಚಿ, ಟೀಕೆಯನ್ನು ಮಾಡ್ತಾ ಇರ್ಬೇಕು. ಸತ್ ಸಂಪ್ರದಾಯ ಮುಂದಿನ ಶತಮಾನದಲ್ಲಿ ಬೆಳೆಯಬಹುದೇ? ಅದಕ್ಕಿರಬಹುದಾದ ಆತಂಕಗಳೇನು, ಭರವಸೆಗಳೇನು? ಇದನ್ನು ನೀವೊಬ್ಬ ಮುಖ್ಯಮಂತ್ರಿಯಾಗಿದ್ದೀರಿ ಅನ್ನೋ ಕಾರಣಕ್ಕಷ್ಟೇ ಅಲ್ಲ, ನೀವು ಒಬ್ಬ ರಾಜಕೀಯ ಚಿಂತಕನಾಗಿಯೂ ಇರೋದ್ರಿಂದ ಕೇಳ್ತಾ ಇದ್ದೀನಿ.

ರಾಜಕಾರಣ ಈ ದೇಶದಲ್ಲಿ ಗುಣಾತ್ಮಕವಾದಂಥ ಪರಿವರ್ತನೆ ಇತ್ತೀಚಿನ ದಿನಗಳಲ್ಲಿ ಹೊಂದಿದೆ. ಒಂದು ಕಾಲದಲ್ಲಿ ರಾಜಕಿಯ ಧ್ರುವೀಕರಣದ ವಿಚಾರ ಎಲ್ಲರನ್ನೂ ಸೆಳೆದಿತ್ತು. ಎಲ್ಲರೂ ಕೂಡ ಈ ದೇಶದಲ್ಲಿ ಅಂತಿಮವಾಗಿ ಮೂರ‍್ನಾಲ್ಕು ರಾಜಕೀಯ ಸ್ತರಗಳು ನಿಲ್ಲಬಹುದು ಮತ್ತು ಜನ ಎಲ್ಲ ಆ ಮೂರ‍್ನಾಲ್ಕು ರಾಜಕೀಯ ಪಕ್ಷಗಳನ್ನು ಅವಲಂಬಿಸಿ ಅವರು ಏನೂ ಕಾರ್ಯಕ್ರಮ, ಸಿದ್ಧಾಂತ ಇವುಗಳನ್ನು ಪ್ರಚುರಪಡಿಸುತ್ತವೆ, ಆ ಸಿದ್ಧಾಂತ ಕಾರ್ಯಕ್ರಮಕ್ಕೆ ಬೆಂಬಲ ಕೊಟ್ಟು ನಿಲ್ತಾರೆ ಅನ್ನೊ ಆಸೆ ಇತ್ತು. ೧೯೬೦ನೇ ಇಸವಿಯಲ್ಲಿ ೭೦ರ ಇಸವಿಯಲ್ಲಿ ಆದ ರಾಜಕೀಯ ಧ್ರುವೀಕರಣ ನಾವಿಂದು ನೋಡ್ತಾ ಇಲ್ಲ ಇಂದು ರಾಜಕಾರಣ ಛಿದ್ರ ಛಿದ್ರ ಆಗ್ತಾ ಇರೋದನ್ನ ಕಾಣ್ತಾ ಇದ್ದೇವೆ.

 • ಅನೇಕ ಸಾರಿ ವೈಯಕ್ತಿಕ ಆಂಬಿಷನ್‌ಗೂ ಇದಾಗುತ್ತೆ ಅಲ್ಲವಾ?

ಅದೇನಾಗುತ್ತೆ ಅಂದ್ರೆ ಸಿದ್ಧಾಂತದ ಲವಲೇಶವೂ ಇಲ್ಲದಂಥ ಈಗಿನ ರಾಜಕೀಯ ಪಕ್ಷಗಳು. ಇತ್ತೀಚಿನ ಎರಡು ಉದಾಹರಣೆ ಗಮನಿಸಿದರೆ ಸಣ್ಣರಾಜ್ಯ ಗೋವಾದಲ್ಲಿ ನಡೆದಿರುವ ಬೆಳವಣಿಗೆ. ೧೧ ವರ್ಷಗಳಲ್ಲಿ ೧೦ ಜನ ಮುಖ್ಯಮಂತ್ರಿಯನ್ನು ನೋಡಿರುವಂಥ ರಾಜ್ಯ ಇದು. ೪೦ ಶಾಸನಸಭೆ ಸದಸ್ಯರನ್ನು ಹೊಂದಿರುವಂಥ ಒಂದು ಪುಟ್ಟ ರಾಜ್ಯ ಹಾಗೇನೇ ಅತ್ಯಂತ ಜನಸಾಂಧ್ರತೆಯನ್ನು ಹೊಂದಿರತಕ್ಕಂಥ ಉತ್ತರಪ್ರದೇಶ. ಇಲ್ಲಿ ಇವತ್ತು ಕಲ್ಯಾಣಸಿಂಗ್ ಬೇರೆ ಪಕ್ಷ ಮಾಡ್ತೀನಿ ಅಂತ ಹೊರಟಿದ್ದಾರೆ. ಈ ಬೆಳವಣಿಗೆಯನ್ನು ನೋಡಿದಾಗ ನನಗೆ ರಾಜಕಾರಣ ಒಂದು ಕುರ್ಚಿಯನ್ನು ಆವರಿಸಿಕೊಂಡು ಬೆಳೆದಿರುವಂಥ ಪ್ರಕ್ರಿಯೆಯೇ ಅಥವಾ ರಾಜಕಾರಣ ಅಂತಿಮವಾಗಿ ಪವರನ್ನು ವಶಪಡಿಸಿಕೊಳ್ಳಲೇಬೇಕೆಂಬ ಕಾರ್ಯಕ್ರಮವಾಗಿದೆಯೇ, ಇದು ನನಗೆ ಗಂಭೀರವಾದ ರೀತಿಯಲ್ಲಿ ಕೆಲವು ಸಮಯ ರಾತ್ರಿ ಯೋಚನೆ ಮಾಡಲಿಕ್ಕೆ ಆರಂಭ ಮಾಡಿದಾಗ, ನಮ್ಮ ಜನತಂತ್ರದ ಭವಿಷ್ಯದ ಬಗ್ಗೆ ನಮಗೆ ಕೊಂಚ ಅನುಮಾನ ಬರುವುದು ಸ್ವಾಭಾವಿಕವೇ. ಆದರೆ ಇನ್ನೂ ಕೆಲವು ರಾಜ್ಯಗಳಿವೆ. ಉದಾಹರಣೆಗೆ ಪಶ್ಚಿಮ ಬಂಗಾಳ. ಜ್ಯೋತಿ ಬಸು ಅವರು ಕಳೆದ ೨೧ ವರ್ಷಗಳಿಂದ ಮುಖ್ಯಮಂತ್ರಿಗಳಾಗಿದ್ದಾರೆ. ನಾನು ಮುಖ್ಯಮಂತ್ರಿ ಸ್ಥಾನ ಬಿಡುತ್ತೇನೆ ಅಂದರೂ ಅವರ ಪಕ್ಷ ಅವರನ್ನು ಬಿಡುತ್ತಾ ಇಲ್ಲ. ಎರಡು ವಿಭಿನ್ನವಾದ ಭಾರತವನ್ನು ನಾವು ಈ ದೇಶದಲ್ಲಿ ನೋಡುತ್ತಾ ಇದ್ದೇವೆ. ಒಂದು ಉತ್ತರ ಪ್ರದೇಶ ಮತ್ತು ಗೋವಾ, ಇನ್ನೊಂದು ಪಶ್ಚಿಮ ಬಂಗಾಲ. ಆದ್ದರಿಂದ ನನಗೆ ಅನಿಸುತ್ತಿದೆ ನಿಜಕ್ಕೂ ಕರ್ನಾಟಕದಲ್ಲಿ ಪ್ರಬುದ್ಧರಾದ ಮತದಾರರಿದ್ದಾರೆ ಅವರು ಕೊಡತಕ್ಕಂಥ ಅತ್ಯಂತ ಸೋಜಿಗ ಎನಿಸುವಂಥ ಫಲಿತಾಂಶಗಳೂ ಕೂಡ ಕೆಲವು ಸಮಯ ಕೆಲವರು ಸೋತು ಚಿಂತಾಕ್ರಾಂತರಾಗುತ್ತಾರೆ, ಗೆದ್ದೋರು ಹುಷಾರಾಗಿರಬೇಕಾಗುತ್ತದೆ.

 • ಮತ್ತು ಅವರೂ ಸೋಲಬಹುದು.

ಏಕೆಂದರೆ ಈ ಕಾಲಚಕ್ರ ಕರ್ನಾಟಕದಲ್ಲಿ ಉರುಳಿದ್ದನ್ನ ನನ್ನ ಕಣ್ಣಲ್ಲೇ ನಾನು ನೋಡಿದ್ದೇನೆ. ಆದ್ದರಿಂದ ನನಗೆ ಅನ್ನಿಸ್ತದೆ, ಈ ಎಲ್ಲಾ ಬೆಳವಣಿಗೆಯಿಂದ ಪ್ರತಿಯೊಂದು ರಾಜಕೀಯ ಪಕ್ಷವೂ ಕೂಡ ಪಾಠವನ್ನು ಕಲಿಯೋದು ಬಹಳಷ್ಟಿದೆ. ಪ್ರತಿಯೊಂದು ರಾಜಕೀಯ ಪಕ್ಷ ತಾನೊಂದು ಪಕ್ಷ, ಹಾಗೆ ಅಂತ, ಹೇಳಿ ಮುಂದುವರೆಯಬೇಕಾದರೆ ಅದಕ್ಕೆ ಒಂದು ಸ್ಟೇಬಲ್ ಪಾಲಿಸಿ ಇರಬೇಕು. ದಟ್ ಈಸ್ ದಿ ಬೇಸಿಕ್ ರಿಕ್ವೈರ್‌ಮೆಂಟ್. ಎಲ್ಲಿಯವರೆಗೆ ಸ್ಟೇಬಲ್ ಪಾಲಿಸಿ ಇರುವುದಿಲ್ಲವೊ….

 • ಮತ್ತೆ ಶಿಸ್ತು ಇರಬೇಕು. ಒಬ್ಬ ನಾಯಕನನ್ನು ಆಯ್ಕೆ ಮಾಡಿದ ನಂತರ ಅದನ್ನು ಗೌರವಿಸುವಂಥ ಭಾವನೆ ಇರ್ಬೇಕು. ಇಷ್ಟಾದರೂ ಕರ್ನಾಟಕಕ್ಕೆ ಕೆಟ್ಟ ಮುಖ್ಯಮಂತ್ರಿಯಾಗಲೀ ತೀರ ಕೆಟ್ಟ ದಿವಾನ ಆಗಲೀ ಬರಲಿಲ್ಲ ಅಂತ. ನೋಡಿ ನಾನೊಬ್ಬ ಬರಹಗಾರನಾಗಿ ಒಂದು ವಿಷಯ ಹಂಚಿಕೋಬೇಕು ತಾವು ಮುಖ್ಯಮಂತ್ರಿ ಆಗಿರೋ ಕರ್ನಾಟಕ, ಸಾಂಸ್ಕೃತಿಕ  ಕ್ಷೇತ್ರದಲ್ಲಿ ಭಾರತದಲ್ಲಿ, ಬಹಳ ಮುಖ್ಯ ದೇಶವಾಗಿದೆ. ಸಾಹಿತ್ಯ ಕ್ಷೇತ್ರದಲ್ಲಿ ಬಂಗಾಳಿ, ಕೇರಳ, ಹಿಂದಿ ಯಾರಿಗಾದರೂ ಸರಿಸಮಾನವಾಗಬಹುದಾದ ದೊಡ್ಡ ಬರಹಗಾರರನ್ನು ನಾವು ಪಡೆದಿದ್ದೇವೆ. ಬಿ.ಎಂ.ಶ್ರೀ, ಕುವೆಂಪು, ಕಾರಂತ, ಮಾಸ್ತಿ, ಶ್ರೀರಂಗ. ಆಮೇಲೆ ಈಗಿನ ಕಾಲದಲ್ಲಿ ಇದನ್ನು ನಾವು ಮುಂದುವರೆಸಿಕೊಂಡು ಬಂದಿದ್ದೇವೆ. ಕನ್ನಡ ಭಾಷೆಯಲ್ಲಿ ಇವತ್ತು ಏನನ್ನಾದರೂ ಹೇಳಲಿಕ್ಕೆ ಸಾಧ್ಯ, ಯಾವ ತಾತ್ತ್ವಿಕ ಚಿಂತನೆಯನ್ನಾದರೂ ಮಾಡಲಿಕ್ಕೆ ಸಾಧ್ಯ. ನನಗಿಂತ ಕಿರಿಯನಾದ ಒಬ್ಬ ಗೆಳೆಯ ತೀರಿಕೊಂಡು ಹೋದರು. ಡಿ.ಆರ್.ನಾಗರಾಜ್‌ ಅಂತ. ಅವರು ಒಂದು ಪುಸ್ತಕ ಬರೆದಿದ್ದಾರೆ ಅಲ್ಲಮ ಮತ್ತು ಶೈವಪ್ರತಿಭೆ ಅಂತ. ಬಹಳ ಮಹತ್ವದ ಕೃತಿ ಅದು. ಯಾವ ಭಾಷೆಯಲ್ಲಿ ಬಂದರೂ ಕೃತಿ ಮಹತ್ವದ ಕೃತಿಯಾಗುತ್ತಿತ್ತು. ಇಂಥ ಬೆಳವಣಿಗೆ ನಮ್ಮ ಭಾಷೆಗೆ ಆಗಿದೆ. ಆದರೆ ಜಾಗತೀಕರಣದ ಪ್ರಕ್ರಿಯೆಯಲ್ಲಿ ನಮ್ಮೆಲ್ಲ ಭಾಷೆಗಳು ಕೇವಲ ಅಡಿಗೆಮನೆ ಭಾಷೆಯಾಗುವ ಅಪಾಯವಿದೆ, ಏಕೆಂದರೆ ಹೆಚ್ಚು ಹೆಚ್ಚು ಇಂಗ್ಲಿಷ್‌ಗೆ ಪ್ರಾಮುಖ್ಯ ಬರ್ತಾ ಇದೆ. ಒಂದು ಸಾವಿರ ವರ್ಷದ ಹಿಂದೆ ಸಂಸ್ಕೃತ ಬಹುಮುಖ್ಯ ಭಾಷೆಯಾಗಿತ್ತು. ಆದರೆ ಕವಿರಾಜಮಾರ್ಗದಲ್ಲಿ ಎಲ್ಲವನ್ನೂ ಕನ್ನಡದಲ್ಲಿ ಹೇಳುವ ಸಾಧ್ಯತೆಯನ್ನು ಒಂದು ಸಾವಿರ ವರ್ಷದ ಹಿಂದೆ ಅವನು ನಮಗೆ ತೋರಿಸಿಕೊಟ್ಟ. ಇದೇನು ಸಾಮಾನ್ಯ ಬೆಳವಣಿಗೆಯಲ್ಲ. ಸಂಸ್ಕೃತದೊಳಿನ್ನೇನು ಅಂತ ಹೇಳುವ ಸ್ಥಿತಿಗೆ ಕನ್ನಡ ಬಂತು. ಇನ್ನು ಇಂಗ್ಲಿಷ್‌ನಲ್ಲಿ ಬಂದದ್ದನ್ನೂ ಜೀರ್ಣಿಸಿಕೊಂಡಿತು. ಬಿ.ಎಂ.ಶ್ರೀ, ಕಾರಂತ, ಮಾಸ್ತಿ, ಕುವೆಂಪು ಎಲ್ಲರ ಕಾಲದಲ್ಲೂ ಸಮೃದ್ಧವಾಗಿ ಬೆಳೆಯಿತು. ಈಗ ಮತ್ತೆ ವಿಕೇಂದ್ರೀಕೃತವಾದ ಸಂಸ್ಕೃತಿ ಕೇಂದ್ರೀಕೃತವಾಗುವ ಅಪಾಯವಿದೆ. ಅಂದರೆ ಹೆಚ್ಚೆಚ್ಚು ಇಂಗ್ಲಿಷಿನಲ್ಲಿ ವ್ಯವಹಾರ ಮಾಡುವ ಅನಿವಾರ್ಯತೆಯಿದೆ. ಇದೇನು ಅಭಿಮಾನ್ಯ ಶೂನ್ಯತೆ ಅಂತ ನಾನು ಹೇಳ್ತಾ ಇರೋದಲ್ಲ. ಇಲ್ಲಿಗೆ ಬಹುರಾಷ್ಟ್ರೀಯ ಕಂಪನಿಗಳು ಬರ್ತಾ ಇವೆ, ಅವರು ಇಂಗ್ಲಿಷನ್ನು ಬಳಸುತ್ತಾರೆ. ತಾವು ಮುಖ್ಯಮಂತ್ರಿಯಾಗಿ ಕನ್ನಡದ ಪ್ರಾಮುಖ್ಯ ನಮ್ಮ ಒಟ್ಟೂ ವ್ಯವಸ್ಥೆಯಲ್ಲಿ ಕಡಿಮೆಯಾಗದೇ ಇರುವ ಹಾಗೆ ಏನು ಮಾಡೋಕೆ ಸಾಧ್ಯ.

ನಿಮ್ಮಂಥೋರು ಎಲ್ಲಿಯವರೆಗೆ ಕನ್ನಡ ನಾಡಿನಲ್ಲಿ ಇರ್ತಾರೊ, ಈಗ ತಾನೆ ನಾಗರಾಜರವರ ವಿಚಾರಾನ ತಾವು ಪರಸ್ತಾಪ ಮಾಡಿದ್ರಿ. ನಾನು ಕೂಡ ಅವರ ಒಂದೆರೆಡು ಭಾಷಣಗಳನ್ನು ಕೇಳಿದ್ದೇನೆ. ಬಹಳ ದೊಡ್ಡ ಚಿಂತನಕಾರರು. ಬಹಳ ದೊಡ್ಡ ಬರಹಗಾರರು. ಇವತ್ತು ಬೆಳಗ್ಗೆ ತಾನೆ ಕನ್ನಡ ಶಕ್ತಿ ಕೇಂದ್ರದವರು ಮತ್ತು ಕನ್ನಡ ಗಣಕೀಕೃತ ಮಾಡುವಂಥ ಸಂಸ್ಥೆಯವರು ಭೇಟಿ ಮಾಡಿದ್ರು. ಅವರು ಭೇಟಿ ಮಾಡಿದ ಉದ್ದೇಶೀ ಏನು ಅಂದ್ರೆ ಈ ಗಣಕೀಕರಣಕ್ಕೆ ಕನ್ನಡವನ್ನು ಅಳವಡಿಸೋದು. ಈ ಬಗ್ಗೆ ನಾನು ಕಳೆದ ೪೦ ದಿನಗಳಿಂದ ಚಿಂತನೆ ಮಾಡ್ತಾ ಇದ್ದೆ. ಈಗಾಗಲೆ ನಾವು ಗಣಕೀಕರಣದಲ್ಲಿ ಕನ್ನಡಕ್ಕೆ ಮಹತ್ವದ ಸ್ಥಾನ ಕಲ್ಪಿಸಿಕೊಡ್ತಾ ಇದ್ದೇವೆ. ಅದನ್ನು ಇನ್ನೂ ಹೆಚ್ಚು ವಿಸ್ತಾರ ಮಾಡಬೇಕು. ಅದು ಇನ್ನೂ ಹೆಚ್ಚು ವ್ಯವಸ್ಥೆಗೆ ಬರಬೇಕು ಅಂತ ಯೋಚನೆ ಮಾಡಿ ನಾನು ಮುಂದಿನ ೧೦-೧೨ ದಿನಗಳಲ್ಲಿ ನಮ್ಮ ಇನ್ಫರ್‌ಮೇಶನ್ ಟೆಕ್ನಾಲಜಿ ಕಾರ್ಯಾಲಯದ ಜೊತೆಗೆ ಮತ್ತು ಈ ಗಣಕೀಕರಣ ಮಾಡ್ತಾ ಇರೋ ಸಂಸ್ಥೆಗಳ ಜೊತೆ ಒಂದು ಚರ್ಚೆ ಮಾಡಿ ನಂತರ ಒಂದು ಕಾಂಪ್ರಹೆನ್ಸಿವ್ ಪಾಲಿಸಿ ಈ ಗಣಕೀಕರಣದ ವಿಚಾರದಲ್ಲಿ ಮಾಡಬೇಕೆಂದುಕೊಂಡಿದ್ದೇನೆ.

 • ಇಲ್ಲದಿದ್ರೆ ಕನ್ನಡ ಅಫೀಶಿಯಲ್ ಲ್ಯಾಂಗ್ವೇಜ್ ಆಗಿ ಉಳಿಯೋದೆ ಇಲ್ಲ. ನೀವು ಇದು ಮಾಡದೇ ಇದ್ರೆ ತಂತ್ರಜ್ಞಾನದಲ್ಲಿ ಅದು ಮುನ್ನಡೆಯದೆ ಇದ್ರೆ ಹಿನ್ನಡೆ ಶುರುವಾಗಿಬಿಡುತ್ತೆ.

ಈಗ ಅದಕ್ಕೆ ಒಂದು ಶಬ್ದಕೋಶವನ್ನೇ ಸಿದ್ಧಪಡಿಸಿದ್ದಾರೆ. ಕನ್ನಡದ ಗಣಕೀಕರಣದ ಬಗ್ಗೆ ಆಳವಾದ ಜ್ಞಾನವನ್ನು ಪಾಂಡಿತ್ಯವನ್ನು ಪಡೆದಿರತಕ್ಕಂಥವರು ಈ ಕೆಲಸ ಮಾಡಿದ್ದಾರೆ. ಆದ್ದರಿಂದ ನನಗೆ ಅನ್ನಿಸ್ತದೆ, ಏನೇ ಗ್ಲೋಬಲೈಸೇಶನ್ ಆಗಲಿ, ಲಿಬರಲೈಜೆಶನ್ ಆಗಲಿ, ಬಹುರಾಷ್ಟ್ರೀಯ ಕಂಪನಿಗಳು ನಮ್ಮ ರಾಜ್ಯಕ್ಕೆ ಬರಲಿ, ಕನ್ನಡ ನಾಲ್ಕೂವರೆ ಕೋಟಿ ಜನ ಏನಿದ್ದಾರೆ, ಈ ಗ್ಲೋಬಲೈಸೇಶನ್ ಎಲ್ಲರನ್ನೂ ಕೂಡ ಮುಟ್ಟೋದಿಲ್ಲ. ಅದು ಕೇವಲ ಭಾಗಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಆದ್ದರಿಂದ ಕನ್ನಡದ ಬೆಳವಣಿಗೆ ಬಗ್ಗೆ ನನಗೆ ಯಾವ ವಿಧವಾದಂಥ ಅನುಮಾನವಿಲ್ಲ. ಜೊತೆ ಜೊತೆಗೆ ಇವತ್ತು ಕನ್ನಡ ಈಗ ಮಾಹಿತಿ ತಂತ್ರಜ್ಞಾನದತ್ತ ದಾಪುಗಾಲು ಹಾಕಿ ಮುಂದೆ ಹೋಗ್ತಾ ಇದೆ. ಅದರ ಜೊತೆಯಲ್ಲಿ ನಮ್ಮ ಕರ್ನಾಟಕದ ಬುದ್ಧಿವಂತ ಜನ, ಮೇಧಾವಿಗಳೇನಿದ್ದಾರೆ, ಇದರ ಬಗ್ಗೆ ಹೆಚ್ಚು ಗಮನಕೊಟ್ಟು ಕನ್ನಡ ಹಿಂದೆ ಬೀಳದೆ ಇರ‍್ತಕ್ಕಂಥ ರೀತಿಯಲ್ಲಿ ಕೆಲಸ ಮಾಡುತ್ತಾರೆ ಎನ್ನುವ ನಂಬಿಕೆಯಿದೆ. ಇವತ್ತು ಹಿಂದಿಯಲ್ಲಿ ಸಾಫ್ಟ್‌ವೇರ್ ಇದೆ. ತಮಿಳಿನಲ್ಲಿ ಸಾಫ್ಟ್‌ವೇರ್ ಇದೆ. ಆದ್ದರಿಂದ ಕನ್ನಡ ಯಾವುದೇ ರೀತಿಯಲ್ಲಿ ಹಿಂದೆ ಬೀಳದೇ ಇರೋ ಹಾಗೆ ಕಾರ್ಯಕ್ರಮ ರೂಪಿಸಬೇಕು ಅನ್ನೊ ಇಚ್ಛೆ ಇದೆ.

 • ಏನಾದ್ರೂ ಆಗ್ಲಿ, ಪ್ರೈಮರಿ ಶಾಲೆಗೆ ಹೊಗುವ ನಮ್ಮ ಮಕ್ಕಳು ಕೊನೆ ಪಕ್ಷ ಏಳನೆ ಈಯತ್ತೆ ತನಕ ಕನ್ನಡದಲ್ಲಿ ಕಲಿತು ಬಿಟ್ರೆ ಯಾವ ಭಾಷೆಯನ್ನಾದರೂ ಕಲ್ತ್ಕೋತ್ತಾರೆ. ನಾನೂ ಕಲ್ತಿದ್ದು ಹಾಗೇನೆ.

ನಾನು ಕನ್ನಡ ಮೀಡಿಯಂನಲ್ಲೇ ಓದಿದ್ದು.

 • ಅಲ್ಲವೇ, ನಾವೆಲ್ಲ ಹಂಗೇ ಮಾಡಿರೋದು. ಅಮೇಲಿನಿಂದ ಯಾವ ಭಾಷೆಯನ್ನಾದರೂ ಕಲಿಯಬಹುದು. ಆದರೆ ಏಳನೇ ಈಯತ್ತೆವರಗೆ ಕನ್ನಡ ಮಾಡ್ದೆ ಇದ್ರೆ ಬಹಳ ಅಪಾಯವಿದೆ. ಆಗ ಕನ್ನಡ ಅಡುಗೆ ಮನೆ ಭಾಷೆಯಾಗಿ ಬಿಡ್ತದೆ. ದೃಷ್ಟಿಯಿಂದ ಹಳ್ಳಿಯ ನಮ್ಮ ಪ್ರೈಮರಿ ಸ್ಕೂಲ್‌ಗಳು ಮುಖ್ಯವಾದ ಪಾತ್ರ ವಹಿಸಬೇಕು. ನೀವು ಒಳ್ಳೊಳ್ಳೆ ಜನರನ್ನು ತಮ್ಮ ಮಂತ್ರಿಮಂಡಲದಲ್ಲಿ ಇಟ್ಕೊಂಡಿದ್ದೀರಾ, ಅವರು ಇಂಥ ಕೆಲಸ ಮಾಡಲಿಕ್ಕೆ ಅಂತ ಅದು ಆಗ್ಬೇಕು. ನಾನು ಹಿಂದೇನೂ ಸಹ, ಗೋವಿಂದೇಗೌಡ್ರು ಪ್ರೈಮರಿ ಸ್ಕೂಲ್‌ಗಳ ಬಗ್ಗೆ ಕಾಳಜಿ ವಹಿಸಿದ್ದನ್ನು ನೋಡಿ ಬಹಳ ಸಂತೋಷಪಟ್ಟಿದ್ದೆ. ಅವರು ಮಾಡಿದ ಕೆಲಸ ಇನ್ನಷ್ಟು ಬಲವಾಗಿ ಮುಂದುವರೆದರೆ ನಮ್ಮ ಹಳ್ಳಿಯ ಪ್ರೈಮರಿ ಶಾಲೆಗಳು ಕೆಲಸವನ್ನು ಚೆನ್ನಾಗಿ ಮಾಡುತ್ತವೆ ಅನ್ನಿಸತ್ತೆ. ನಾನು ತೀರ್ಥಹಳ್ಳಿಯಲ್ಲಿ ಓದ್ತಾ ಇರ್ಬೇಕಾದ್ರೆ ಶೇಕ್ಸ್‌ಪಿಯರ್‌ನ ಬಗ್ಗೆ, ಕಾಳಿದಾಸನ ಬಗ್ಗೆ ಮಾತನಾಡೋರು ಇದ್ರು. ತಾವು ಸಹ ಕೇಳಿರಬಹುದು. ಒಂದು ಹಳ್ಳಿಯಲ್ಲಿ ಕೂಡ ಇದು ಸಿಕ್ತಾ ಇತ್ತು. ಅಂಥ ಒಂದು ಸ್ಥಿತಿ ಮುಂದುವರೆಯುವ ಹಾಗೆ ಮಾಡಿದ್ರೆ.

ನಾನು ಚುನಾವಣೆ ಕಾಲದ ಉದ್ದಕ್ಕೂ ಕೂಡ ಎರಡು ವಿಚಾರಗಳಲ್ಲಿ ಬಹಳ ಗಂಭೀರವಾದ ಸ್ವರೂಪದ ನಿಲುವುಗಳನ್ನು ತೆಗೆದುಕೊಂಡೆ. ಅದು ಫ್ಯಾಶನೆಬಲ್‌ ಆಗಿ ಇಲ್ಲದೇ ಇದ್ದರೂ ಕೂಡ, ನನಗೆ ಅನಿಸಿದ್ದು ನನ್ನ ಅನುಭವಕ್ಕೆ ಬಂದಂಥ ವಿಚಾರ ಏನೂ ಅಂತ ಅಂದ್ರೆ, ನಮ್ಮ ಮೂಲಭೂತ ಶಿಕ್ಷಣವನ್ನು ಭದ್ರಪಡಿಸಿಕೊಳ್ಳಬೇಕು.  ಮುಖ್ಯವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಅದು ತಾವು ಹೇಳಿದ ಹಾಗೆ ಒಂದನೇ ತರಗತಿಯಿಂದ ಏಳನೆ ತರಗತಿವರೆಗೆ, ಮತ್ತು ಹೈಯರ್ ಎಜುಕೇಶನ್, ಇಟ್‌ ಕೆನ್ ಟೇಕ್ ಕೇರ್ ಆಫ್ ಇಟ್ ಸೆಲ್ಫ್‌. ಬಿಕಾಸ್ ವಿ ಹ್ಯಾವ ರೀಚ್ಡ್ ಎ ಸರ್‌ಟೈನ್ ಸ್ಟೇಜ್. ಇದು ಪ್ರಚಲಿತವಾಗಿಲ್ಲದೆ ಇದ್ದರೂ ಕೂಡ. ಅತಿ ರಂಜಿತವಾದ ಭರವಸೆಗಳನ್ನು ನಾನು ಕೊಡುವುದಿಲ್ಲ. ನಾವು ಮಾಡಬಹುದಾದ ಕೆಲಸ ಏನು ಅಂತಂದ್ರೆ ನಮ್ಮ ಮೂಲಭೂತ ವಿದ್ಯಾಭ್ಯಾಸವನ್ನು ಗ್ರಾಮೀಣ ಪ್ರದೇಶಗಳಲ್ಲಿ ಭದ್ರಪಡಿಸೋದು. ಹೀಗೆ ಭದ್ರಪಡಿಸಲು ಬೇಕಾದಂಥ ಕೆಲಸ ಕಾರ್ಯಗಳನ್ನು ಮಾಡಬೇಕು ಅನ್ನತಕ್ಕದ್ದು. ಎರಡನೆಯದು ಈ ಮೂಲಭೂತವಾದಂಥ ಹೆಲ್ತ್‌ ರಿಫಾರ್ಮ್ಸ್ ಹಳ್ಳಿಮಟ್ಟದಲ್ಲಿ, ಗ್ರಾಮಾಂತರ ಪ್ರದೇಶದಲ್ಲಿ ಮಾಡ್ಬೇಕು ಅಂತ.

 • ತಾವು ಹೇಳ್ತಾ ಇದ್ರಲ್ಲ, ಇದನ್ನೇ ಅಮರ್ತ್ಯಸೇನ್ ಮುಖ್ಯವಾಗಿ ಹೇಳೋದು. ಯಾವ ಅಭಿವೃದ್ಧಿಯೂ ಶಿಕ್ಷಣ, ಆರೋಗ್ಯ ಇವೆರಡನ್ನು ಮಾಡದೇ ಇದ್ದರೆ ಅದು ಅಭಿವೃದ್ಧಿಯಲ್. ತಾವು ಇವೆರಡನ್ನು ಮಾಡ್ತೀನಿ ಅಂತ ಕೆಲಸಕ್ಕೆ ಹೊರಟರೆ ಖಂಡಿತಾ ಅದರಿಂದ ಕರ್ನಾಟಕಕ್ಕೆ ಒಳ್ಳೆಯದಾಗತ್ತೆ.

ಅದಕ್ಕೇ ನಮ್ಮ ಪ್ರೈಮರಿ ಎಜುಕೇಶನ್ ಮಿನಿಸ್ಟರ್ ವಿಶ್ವನಾಥರಿಗೆ ಹೇಳಿದ್ದೇನೆ. ಅವರು ತಮ್ಮಂಥವರ ಜೊತೆಯಲ್ಲಿ ಚರ್ಚೆ ಮಾಡಿ ಅನಂತರ ಮೂಲಭೂತವಾಗಿ ಈ ಪ್ರೈಮರಿ ಎಜುಕೇಶನನ್ನು ಗಟ್ಟಿ ಮಾಡಲಿಕ್ಕೆ ಹೆಜ್ಜೆ ಇಡಬಹುದು. ತಮ್ಮಂಥವರ ಸಲಹೆ, ಮಾರ್ಗದರ್ಶನ ಇದಕ್ಕೆಲ್ಲ ಬೇಕು.

 • ನಾವು ಒಂದು ಸಹಸ್ರಮಾನದಿಂದ ಇನ್ನೊಂದು ಸಹಸ್ರಮಾನಕ್ಕೆ ಹೋಗುವಾಗ, ಹೋದ ಸಹಸ್ರಮಾನದ ಉತ್ತಮವಾದುದನ್ನು ಮುಂದುವರೆಸಿಕೊಂಡು ಹೋಗುವ ಸಾಧ್ಯತೆ ಭಾರತದಲ್ಲಿ ಆಗ್ಬೇಕು. ಕರ್ನಾಟಕದಲ್ಲೂ ಆಗ್ಬೇಕು. ಕರ್ನಾಟಕದಲ್ಲಿ ಆಗುವ ಸಾಧ್ಯತೆಯಿದೆ ಏಕೆಂದರೆ ನಮ್ಮ ಹಿಂದೆ ಬಸವ ಇದ್ದಾನೆ, ಪಂಪ ಇದ್ದಾನೆ. ಕನಮ್ಮ ಕಾಲದಲ್ಲೇ ಕುವೆಂಪು, ಮಾಸ್ತಿ, ಕಾರಂತರಂಥವರು ಇದ್ದರು (ಸಾಹಿತ್ಯ ವಲಯದಲ್ಲಿ). ಇನ್ನು ನಮ್ಮಲ್ಲಿ ಯಕ್ಷಗಾನವಿದೆ, ಹೊಸ ಹೊಸ ರೀತಿಯ ಕಲೆಗಳಿದ್ದಾವೆ, ಬಯಲುಸೀಮೆಯಲ್ಲಿ ಒಂದು ರೀತಿಯ ಕಲೆಗಳಿವೆ, ಮಲೆನಾಡಿನಲ್ಲಿ ಒಂದು ರೀತಿಯ ಕಲೆಯಿದೆ ಇಷ್ಟು ವೈವಿಧ್ಯ! ಅದಕ್ಕೆ ಕರ್ನಾಟಕ ಅಂದರೆ ಮಿನಿ ಇಂಡಿಯಾ ಅಂತ ಒಂದೊಂದು ಸಾರಿ ಅನ್ಸುತ್ತೆ. ಇಲ್ಲಿ ಎಲ್ಲಾ ಭಾಷೆಗಳೂ ಇದ್ದಾವೆ. ಮಿನಿ ಇಂಡಿಯಾದ ಒಂದು ತರಹದಲ್ಲಿ, ಪ್ರಧಾನಿ ಇದ್ದ ತರಹನೇ, ನೀವು ಒಬ್ಬ ಮುಖ್ಯಮಂತ್ರಿ ಮತ್ತು ಕೇಂದ್ರಕ್ಕೂ ಪ್ರದೇಶಗಳಿಗೂ ನಡುವೆ ಇರುವ ಸಂಬಂಧದಲ್ಲಿ ಮುಖ್ಯಮಂತ್ರಿ ಮತ್ತು ಕೇಂದ್ರಕ್ಕೂ ಪ್ರದೇಶಗಳಿಗೂ ನಡುವೆ ಇರುವ ಸಂಬಂಧದಲ್ಲಿ ಒಂದು ವಿಕೇಂದ್ರಿಕರಣವಾದ್ರೆ, ನಿಮಗೆ ಹೆಚ್ಚು ಅವಕಾಶ ಸಿಕ್ಕರೆ ಪ್ರಾಯಶಃ ನೀವು ಹೇಳಿದ್ದನೆಲ್ಲ ಸಾಧ್ಯಮಾಡೋದಕ್ಕೂ ಸಾಧ್ಯ. ಅದಕ್ಕೋಸ್ಕರ ಜನ ಎಲ್ಲ ವಿಕೇಂದ್ರಕರಣದ ಬಗೆಗೂ ಚರ್ಚಿಸಬೇಕಾಗುತ್ತೆ. ಈಗ ಎಲ್ಲ ಶಕ್ತಿನೂ ಬರೇ ಕೇಂದ್ರದಲ್ಲಿದ್ದು, ರಾಜ್ಯಕ್ಕೆ ಶಕ್ತಿಗಳು ಬರೋ ಹಾಗೆ, ಕೆಲಸವನ್ನು ನೀವು ಮುಂದೆ ನಿಂತು ಮಾಡಬೇಕು.

ವಿಕೇಂದ್ರಿಕರಣ, ಈಗ ರಾಜ್ಯಾಂಗದಲ್ಲೇ ಬಹಳ ನಿಖರವಾಗಿ ರಾಜ್ಯಕ್ಕೆ ಸಂಬಂಧಪಟ್ಟ ವಿಚಾರಗಳು, ಕೇಂದ್ರಕ್ಕೆ ಸಂಬಂಧಪಟ್ಟ ವಿಚಾರಗಳು, ಯಾವ ಯಾವ ಕ್ಷೇತ್ರಗಳಲ್ಲಿ ಎರಡು ಸರ್ಕಾರಗಳು ಕೈಯಾಡಿಸಬಹುದು, ಅವುಗಳು ಕೂಡ ನಮೂದಿತವಾಗಿದೆ. ತಾವು ಹೇಳಿದ್ರಿ ವಿಕೇಂದ್ರೀಕರಣವಾಗಬೇಕು ಅಂತ ಹೇಳಿ. ಇದು ಫೆಡರಲ್‌ ಸೆಟಪ್. ಇದು ವಿಕೇಂದ್ರೀಕರಣಕ್ಕೆ ಬಹಳ ಒತ್ತು ಕೊಡುತ್ತದೆ. ಸರ್ಕಾರಿಯಾ ಕಮಿಷನ್‌ನವರು ಒಂದು ಶಿಫಾರಸು ಮಾಡಿದ್ದಾರೆ. ಬಹಳ ವರ್ಷಗಳಾಗೋಯ್ತು. ನನಗೆ ಅನ್ನಿಸುತ್ತದೆ, ಇತ್ತೀಚಿಗೆ ರಾಜ್ಯಾಂಗದ ಬಗ್ಗೆ ’ಎ ಸೆಕೆಂಡ್ ಲುಕ್ ಈಸ್ ನೆಸಸರಿ’ ಹಾಗಂತ ಏನು ಹೇಳಿದ್ದಾರೆ. ಆ ಸೆಕೆಂಡ್ ಲುಕ್ ಇಟ್ ಬಿಕಮ್ಸ್ ನೆಸಸರಿ, ಐ ಥಿಂಕ್ ಒನ್ ಆಫ್ ದಿ ಮೋಸ್ಟ್ ಇಂರ್ಪಾಟೆಂಟ್ ಡೈಮೆನಷನ್ಸ್ ಈಸ್ ದಿ ರಿಲೇಷನ್ಸ್ ಬಿಟ್‌ವೀನ್ ದಿ ಸೆಂಟರ್ ಎಂಡ್ ದಿ ಸ್ಟೇಟ್ ಕುಡ್ ಬಿ ಮೇಡ್ ಮೋರ್ ಪವರ್‌ಫುಲ್. ಜಸ್ಟ್ ಲೈಕ್ ದಿ ಅಮೆರಿಕನ್ ಕಾನ್ಸೆಪ್ಟ್. ನಾಟ್ ದಿ ಫೆಡರಲ್ ಸೆಟಪ್. ಫೆಡರೆಲ್ ಸೆಟಪ್ ಅದು ಕೂಡ ಕೇವಲ ರಕ್ಷಣೆ, ವಿದೇಶಾಂಗ ವ್ಯವಹಾರಗಳಲ್ಲಿ ಇವುಗಳಿಗೆ ಸೀಮಿತವಾಗುತ್ತದೆ. ಮಿಕ್ಕೆಲ್ಲ ವಿಚಾರಗಳಲ್ಲಿ ಪ್ರತಿಯೊಂದು ಪ್ರಾಂತ್ಯವೂ ಕೂಡ ಸ್ವಶಕ್ತ ಆಗುತ್ತದೆ.

 • ನಿಜವಾದ ಅರ್ಥಪೂರ್ಣವಾದ ವಿಶನ್. ಏಕೆಂದರೆ ಇಂಡಿಯಾದಲ್ಲಿ ಇಫ್‌ ಯೂ ಓವರ್ ಸೆಂಟ್ರಲೈಸ್, ಯೂ ಮೇ ಭಾಲ್ಕನೈಸ್; ಓವರ್ ಸೆಂಟ್ರಲೈಸ್ ಮಾಡಿದ್ರೆ ಒಡೆದು ಹೋಗುವ ಅಪಾಯಗಳೇ ಇರುತ್ತೆ. ಆದ್ದರಿಂದ ರೀತಿ ಇಲ್ಲಿ ಬಹು ಸಂಸ್ಕೃತಿಗಳಿದಾವೆ, ಬಹಳ ಭಾಷೆಗಳಿದಾವೆ, ನಿಮ್ಮ ನೇತ್ರತ್ವದಲ್ಲಿ ಕೆಲಸಗಳು ಆಗ್ಲಿ ಅಂತ ಆಸೆ ಪಟ್ಟು, ಇಷ್ಟು ಒಳ್ಳೆಯ ಸಂವಾದವನ್ನು ನಡೆಸುವಷ್ಟು ಆರಾಮವಾಗಿದ್ದೀರಲ್ಲ (ಕೃಷ್ಣ ನಗು) ಅದು ನನಗೆ ಬಹಳ ಸಂತೋಷ. ನಮಸ್ಕಾರ.

 

—-
ಅಕ್ಷರ ರೂಪ:
ಎಚ್.ಬಿ.ರಾಘವೇಂದ್ರ
ಮಹದೇವ್ ಪ್ರಕಾಶರ ಕೃತಿ ಬ್ಯಾನರ್‌ನಡಿ ದೂರದರ್ಶನದ ಚೆಲುವ ಕನ್ನಡನಾಡು
ಸರಣಿಯಲ್ಲಿ ಪ್ರಸಾರವಾದ ಸಂವಾದ. ಕೃಷ್ಣ ಆಗ ಮುಖ್ಯಮಂತ್ರಿ.

ಸೋಮನಹಳ್ಳಿ ಮಲ್ಲಯ್ಯ ಕೃಷ್ಣ, ಮೇ. ೧, ೧೯೩೨ ರಂದು ಜನಿಸಿದರು. ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಇವರು ಮಹಾರಾಷ್ಟ್ರ ರಾಜ್ಯದ ರಾಜ್ಯಪಾಲರೂ ಆಗಿದ್ದರು. ಪ್ರಸ್ತುತ ಕೇಂದ್ರ ವಿದೇಶಾಂಗ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೃಷ್ಣ ಅವರು ಮಹಾರಾಜಾ ಕಾಲೇಜಿನಲ್ಲಿ ಪದವೀಧರರಾದ ನಂತರ ಬೆಂಗಳೂರಿನ ಸರ್ಕಾರಿ ಕಾನೂನು ಕಾಲೇಜಿನಿಂದ ಪದವಿ ಪಡೆದರು. ಅನಂತರ ಅಮೆರಿಕದ ಟೆಕ್ಸಸ್ ರಾಜ್ಯದಲ್ಲಿರುವ ಸದರ್ನ್ ಮೆಥಡಿಸ್ಟ್ ವಿಶ್ವವಿದ್ಯಾಲಯದಲ್ಲಿ ಕಲಿತು ವಾಷಿಂಗ್ಟನ್‌ನಲ್ಲಿರುವ ಜಾರ್ಜ್ ವಾಷಿಂಗ್ಟನ್ ವಿಶ್ವವಿದ್ಯಾಲಯದಲ್ಲಿ ಪ್ರತಿಷ್ಠಿತ ಫುಲ್‌ಬ್ರೈಟ್ ವಿದ್ಯಾರ್ಥಿವೇತನವನ್ನು ಪಡೆದರು. ಭಾರತಕ್ಕೆ ಮರಳಿದ ನಂತರ ಬೆಂಗಳೂರಿನ ರೇಣುಕಾಚಾರ್ಯ ಕಾಲೇಜಿನಲ್ಲಿ ಸ್ವಲ್ಪ ಕಾಲ ಅಂತಾರಾಷ್ಟ್ರೀಯ ನ್ಯಾಯದ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು. ಆಮೇಲೆ ರಾಜಕಾರಣ ಪ್ರವೇಶಿದ ಕೃಷ್ಣ, ವಿಧಾನಸಭೆಗೆ ಮೊದಲ ಬಾರಿ ೧೯೬೨ ರಲ್ಲಿ ಚುನಾಯಿತರಾದರು. ೧೯೬೮ ರಲ್ಲಿ ಲೋಕಸಭೆಗೆ, ೧೯೭೨ ರಲ್ಲಿ ಕರ್ನಾಟಕದ ವಿಧಾನ ಪರಿಷತ್‌ಗೆ ಚುನಾಯಿತರಾದರು. ವಾಣಿಜ್ಯ, ಉದ್ಯಮ ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದರು. ೧೯೮೯ ರಿಂದ ೧೯೯೨ ರವರೆಗೆ ವಿಧಾನಸಭೆಯ ಸ್ಪೀಕರ್ ಆಗಿದ್ದರು. ಆಮೇಲೆ ಉಪಮುಖ್ಯಮಂತ್ರಿಯಾಗಿ, ೧೯೯೯ ರಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಕಾಂಗ್ರೆಸ್ ಪಕ್ಷದ ಸದಸ್ಯರಾದ ಇವರು ವಿದೇಶಗಳ್ಲಿ ಭಾರತವನ್ನು ಹಲವು ಬಾರಿ ಪ್ರತಿನಿಧಿಸಿದ್ದಾರೆ.

* * *