• ಭಾರತದ ರಾಜಕಾರಣದಲ್ಲಿ ಕ್ರಿಯಾಶೀಲರಾದವ್ರು ಇದ್ದಾರೆ. ಆದ್ರೆ ಅವ್ರು ತಾತ್ತ್ವಿಕವಾಗಿ ಚಿಂತನೆ ಮಾಡಲಾರರು. ತುಂಬಾ ತಾತ್ತ್ವಿಕವಾಗಿ ಚಿಂತನೆ ಮಾಡುವವರು ಕ್ರಿಯಾಶೀಲರಲ್ಲ. ಜೆ.ಹೆಚ್.ಪಟೇಲ್ ಒಬ್ಬ ಅಪರೂಪದ ವ್ಯಕ್ತಿ. ಯಾಕೆಂದ್ರೆ ಇವರು ಕ್ರಿಯಾಶೀಲರು, ಮುಖ್ಯಮಂತ್ರಿ ಆದ್ರು. ಅದ್ರ ಜೊತೆಗೆ ಹಲವು ವರ್ಷ ಜೈಲಲ್ಲೂ ಇದ್ರು. ತಮ್ಮ ತಾತ್ತ್ವಿಕ ಚಿಂತನೆಗಾಗಿ ಜೈಲಿಗೆ ಹೋಗಿದ್ರು. ಆದ್ರಿಂದ ಅವರ ಜೊತೆ ಇವತ್ತು, ನಮ್ಮ ಚೆಲುವ ಕನ್ನಡನಾಡು ಮುಂದಿನ ಶತಮಾನದಲ್ಲಿ ಯಾವ ಸ್ವರೂಪದ್ದಾಗಿರುತ್ತೆ ಅನ್ನೋದರ ಬಗ್ಗೆ ಸ್ವಲ್ಪ ತಾತ್ತ್ವಿಕವಾಗಿ ಚಿಂತನೆ ಮಾಡೋಣ ಅಂತ ಪ್ರಯತ್ನ ಪಡ್ತಾ ಇದ್ದೀನಿ.

ಪಟೇಲರೇ, ನೀವು ಲೋಹಿಯಾರವರ ಜೊತೆಗಿದ್ದಾಗ, ಅವರು ಸಾಮಾನ್ಯವಾಗಿ ಒಂದು ಮಾತು ಹೇಳ್ತಾ ಇದ್ರು; ಭಾರತದಲ್ಲಿ ಮೂರು ರಥದ ಜನರಿದ್ದಾರೆ. ಒಬ್ರು ಸುಮ್ನೆ ಹಿಂದಕ್ಕೆ ನೋಡೋವ್ರು; ಪುರಾತನ ಕಾಲದ ವೈಭವವನ್ನೆಲ್ಲಾ ಮತ್ತೆ ತರ್ಲಿಕ್ಕೆ ಸಾಧ್ಯ ಅಂತ; ಅದೇ ರಾಜಕಾರಣವನ್ನು ಮಾಡುವ ಪಕ್ಷಗಳು, ಇನ್ನೊಂದು ಅಕ್ಕಪಕ್ಕ ನೋಡ್ರೋವು ಅಂತ; ನಾವು ಅಮೇರಿಕದಂಗ್ಹಾಗ್ಬೇಕೋ, ರಷ್ಯಾದಂಗ್ಹಾಗ್ಬೇಕೋಂತ, ಕಡೆನೂ ನೋಡೋದು, ಕಡೆನೂ ನೋಡೋದು ಥರದ ಜನ. ಇನ್ನೊಂದು ಮುಂದೆ ನೋಡುವ ಜನ; ಭವಿಷ್ಯವನ್ನು ನೋಡೋವ್ರು, ತಾವು ಹಾಗಾಗ್ಬೇಕು ಅಂತ ಲೋಹಿಯಾ ಬಯಸಿದ್ರು. ಅಂದ್ರೆ ಅಕ್ಕಪಕ್ಕನೂ ನೋಡದೇ, ಸೋವಿಯತ್‌ ಮಾಡೆಲ್ ಬಿಟ್ಟು, ಅಮೆರಿಕ ಮಾಡೆಲ್‌ನ್ನೂ ಬಿಟ್ಟು ಅಥವಾ ಪುರಾತನ ಭಾರತದ ವೈಭವದ ನಮ್ಮ ಕಲ್ಪನೆಗೆ ಸರಿಯಾಗಿ ಬದುಕಕ್ಕೆ ಹೋಗಿ, ಆಧುನಿಕ ಕಾಲದ ಸವಾಲುಗಳನ್ನು ಮುರಿಯೋದು, ಎರಡನ್ನು ಬಿಟ್ಟೂ ಮುಂದೆ ನೋಡ್ಬೇಕು ಅಂತ. ಹಾಗೆ ಮುಂದೆ ನೋಡುವ ದೃಷ್ಟಿಯಲ್ಲಿ, ಇವತ್ತಿನ ಒತ್ತಡದಲ್ಲಿ, ಚೆಲುವ ಕನ್ನಡನಾಡು ಅನ್ನೋದು ತನ್ನ ಚೆಲುವನ್ನು ಚೆಲುವು ಅನ್ನೋ ವಿಶಾಲವಾದ ಅರ್ಥದಲ್ಲಿ ಉಳಿಸಿಕೊಳ್ಳುತ್ತಾ ಅನ್ನೋ ಆತಂಕಗಳಿವೆಯೋ ಅಥವಾ ಭರವಸೆಗಳಿವೆಯೋ ಅನ್ನೋದನ್ನ ನನ್ನಲ್ಲಿ. ಹಂಚಿಕೊಳ್ಳಿ.

ಆತಂಕ ಇದೆ. ನಾನು ಪ್ರಮಾಣಿಕವಾಗಿ ಹೇಳೋದು ಬರೀ ವೈಭವೀಕರಣದಿಂದ ಮುಂದೆ ಬಹಳ ಏನೋ ಮಾಡ್ತೇವೆ ಈ ರಾಜ್ಯದ ಆಡಳಿತ ಸೂತ್ರದಲ್ಲಿ ಭಾಗವಹಿಸಿ ಬಹಳ ಮಾಡ್ತೇವೆ ಹಿಂದೆ ಸರ್ಕಾರಗಳ ವಿರುದ್ಧ ಏನು ಮಾಡಿದ್ರು, ಏನು ಮಾಡ್ಲಿಲ್ಲ ಅನ್ನೋದನ್ನೇ ಹೇಳಿದ್ಮೇಲೆ, ಮುಂದೆ ಯಾವುದೇ ಸರ್ಕಾರ ಬರ್ಲಿ, ಯಾವುದೇ ಪಕ್ಷ ಬರ್ಲಿ ಈ ಕನ್ನಡನಾಡು ಚೆಲುವ ಕನ್ನಡ ನಾಡು ಒಂದು ರೀತಿಯ ಬಣ್ಣನೆಯ ಮಾತಾಗ್ಬಹುದು. ಕನ್ನಡ ನಾಡು ಒಂದಾದಮೇಲೆ ಕನ್ನಡಿಗರೆಲ್ಲ ಒಂದು ಕಡೆ ಸೇರಿದ್ಮೇಲೆ ಎಷ್ಟು ಶಕ್ತಿದಾಯಕವಾಗಿ ನಾವು ಆಗ್ಬೇಕಾಗಿತ್ತೋ ಅದು ಆಗ್ಲಿಲ್ಲ. ಅದು ಬಹುಶಃ ನಮ್ಮಲ್ಲಿರುವ ಆಂತರಿಕ ಸೂಕ್ಷ್ಮತೆ ಇರ್ಬಹುದು. ನಾನು ಪಕ್ಕದ ರಾಜ್ಯದವರನ್ನು, ಪಕ್ಕದ ಭಾಷೆಯವರನ್ನು ಅವರು ಹಾಗೆ, ಇವರು ಹೀಗೇಂತ ಹೇಳೋದ್ರಲ್ಲಿ ಸಾರ್ಥಕತೆ ಏನೂ ಇಲ್ಲ. ಸಾಹಿತಿಗಳನ್ನು, ಭಾರತದಲ್ಲೇ ಯಾಕೆ, ಪ್ರಪಂಚದಲ್ಲಿ ಇವತ್ತು ಮೆಚ್ಚಿಕೊಳ್ಳತಕ್ಕಂಥ ಬರಹಗಾರರನ್ನು, ನಾಟಕಕಾರರನ್ನು, ಸಂಗೀತಗಾರರನ್ನು, ಚಿತ್ರ ತೆಗೆಯೋರನ್ನು, ಶಿಲ್ಪಕಲೆಯಲ್ಲಿ ಹೀಗೆ ಆ ಕೆಲವು ವಿಷಯಗಳಲ್ಲಿ ತುಂಬಾ ಚೆನ್ನಾಗಿ ಇವತ್ತು ನಡ್ಕೋಳ್ತಾ ಇದ್ದೇವೆ. ಆದ್ರೆ ಒಂದು ಜನಾಂಗ ಸ್ವಯಂಶಕ್ತಿಯಿಂದ ಬಲಾಢ್ಯವಾಗದೆ ಯಾವುದೇ ರೀತಿಯ ವೈಚಾರಿಕ ಅಥವಾ ಆಧ್ಯಾತ್ಮಿಕ ಉನ್ನತಿಯನ್ನು ಪಡೆದು ಉಳಿಸಿಕೊಳ್ಳೋಕೆ ಆಗೋದಿಲ್ಲ. ಈ ಕಿರೀಟವನ್ನು ಇಟ್ಟುಕೊಂಡಿರುವ ತಲೆ ಭದ್ರವಾಗಿರಬೇಕು. ಕಿರೀಟ ಇದೆ ನಮ್ಮಲ್ಲಿ, ಕಿರೀಟ ಮಾಡೋರಿದ್ದಾರೆ. ಆದ್ರೆ ಅದನ್ನು ಧರಿಸತಕ್ಕಂಥ ತಲೆ, ಅದು ದುರ್ಬಲ ಆಗ್ಬಾರ್ದು. ಅದು ಯಾವ್ಯಾವುದೋ ಕಾರಣಕ್ಕೆ ಒಡೆದು ಛಿದ್ರ ಆಗ್ಬಾರ್ದು. ಇನ್ನು ರಾಜಕೀಯದ ಬಗ್ಗೆ, ಅನಂತಮೂರ್ತಿ ಅವರೇ, ನೀವೂ ನಾನೂ ಸುಮಾರು ಮೂರು ನಾಲ್ಕು ದಶಕಗಳಿಂದ ನೋಡ್ತಾ ಬಂದಿದ್ದೇವೆ, ಒಂದು ಅನಿಸ್ತದೆ ವಿಚಿತ್ರ! ಅದು ಪ್ರಕೃತಿಯ ವೈಚಿತ್ರವೋ ಅಥವಾ ಮನುಷ್ಯನ ಸ್ವಭಾವ ವೈಚಿತ್ರವೋ, ನಾವು ಇವತ್ತು ಎಲ್ಲಾ ರೀತಿಯ ಆರ್ಥಿಕ, ಸಾಂಸ್ಕೃತಿಕ ಮತ್ತು ದಿನನಿತ್ಯದ ಜೀವನದಲ್ಲು ಸಹ ಬೇರೆಯದನ್ನು ಅಳವಡಿಸಿಕೊಳ್ಳೋದಿಕ್ಕೆ ಹೋಗ್ತಾ ಇಲ್ಲ. ಅಲ್ಲಿ ನಮ್ಮ ಭಾರತೀಯ ವೈಭವ, ನಮ್ಮ ಕಲ್ಪನೆ, ನಮ್ಮ ಪೂರ್ವಜರ ಆಲೋಚನೆಗಳೆಲ್ಲಾ ಮಸುಕಾಗಿ ಎಲ್ಲ ನಾಶವಾಗಿ ಹೋಗ್ತಾ ಇದೆ.

  • ನೀವು ಸರಿ ಹೇಳ್ತಾ ಇದ್ದೀರಿ. ಒಂದು ರೈಲಲ್ಲಿ ಹೋಗ್ತಾ ಇದ್ದಾವಾಗ ಪೂರ್ವದಿಕ್ಕಿಗೆ ಮುಖ ಮಾಡ್ಕೋಂಡಿದ್ದೀವಿ ಅಂತ ತಿಳ್ಕೊಂಡು ಪಶ್ಚಿಮಕ್ಕೆ ಹೋಗ್ತಾ ಇದ್ದೇವೆ. ಅಂದ್ರೆ ಲೋಹಿಯಾರವರು ಅಕ್ಕಪಕ್ಕ ನೋಡೋವ್ರು ಅಂದ್ರಲ್ಲ, ಅದೇ ನಾವು ಅಕ್ಕಪಕ್ಕ ನೋಡ್ಕೊಂಡು ಅದಾಗ್ಲೋ, ಇದಾಗ್ಲೋಂತ ಇರ್ತೀವೆ. ನಾನು ಕೇಳೋದು ಏನು ಅಂದ್ರೆ ಕರ್ನಾಟಕದಲ್ಲಿ ಒಂದು ಆರ್ಥಿಕವಾಗಿ, ಇನ್ನೊಂದು ಶೈಕ್ಷಣಿಕವಾಗಿ ಪೂರ್ಣ ಪ್ರಮಾಣದ ಅಕ್ಷರಜ್ಞಾನ ಬಂದು ಎಲ್ಲಾ ಆದ್ಮೇಲೆ ಇದು ಸರಿ ಹೋಗುತ್ತೋ? ಜೊತೆಗೆ ಇನ್ನೊಂದು, ಇದನ್ನು ನಾನು ನಿಮ್ಹತ್ರ ಮಾತ್ರ ಕೇಳ್ಬೇಕು ನೋಡಿ, ಆಂಧ್ರಕ್ಕೆ ಹೋಗಿ, ಗುಜರಾತ್‌ಗೆ ಹೋಗಿ ಅಲ್ಲಿ ದೊಡ್ಡ ದೊಡ್ಡ ಕೈಗಾರಿಕೋದ್ಯಮಿಗಳಿದ್ದಾರೆ. ಭಾರೀ ಶ್ರೀಮಂತರಿದ್ದಾರೆ. ಹಿಂದಿಯಲ್ಲೂ ಇದ್ದಾರೆ ಕನ್ನಡದಲ್ಲಿ ಅಂಥ ಕುಟುಂಬಗಳೇ ಇಲ್ಲ.

ಬರ್ಲಿಲ್ಲ.

  • ಏನದಕ್ಕೆ ಕಾರಣ?

ಇಲ್ಲಿ ಔದ್ಯೋಗೀಕರಣ ಮುಗ್ಗರಿಸಿದ್ದು ವಿದ್ಯುಚ್ಛಕ್ತಿ ಕೊರತೆಯಿಂದ. ಪ್ರಾರಂಭದಲ್ಲಿ ನಾವು ಏನು ವಿದ್ಯುಚ್ಛಕ್ತಿಯನ್ನು ಉತ್ಪಾದನೆ ಮಾಡಿದ್ವಿ ಅದ್ರ ಆಧಾರದ ಮೇಲೆ ಆಗ ವಿಶ್ವೇಶ್ವರಯ್ಯನವರು ಒಂದು ಉಕ್ಕಿನ ಕಾರ್ಖಾನೆ, ಅದನ್ನು ಸಾರ್ವಜನಿಕ ವಲಯದಲ್ಲಿ ಪ್ರಾರಂಭ ಮಾಡಿದ್ರು. ಅವರು ಹೇಳಿದ್ರು ನೀವು ಔದ್ಯೋಗೀಕರಣ ಮಾಡಿ ನೀವು ಎಲ್ಲರೂ ಏನಾದ್ರೂ ಮಾಡಿ ಕೆಲಸ ಕೊಡದೆ ಇದ್ರೆ ಹಾಳಾಗಿ ಹೋಗ್ತೀರಿ ಅಂತ್ಹೇಳಿದ್ರು. ಆಮೇಲೆ ನೀವು ಪ್ರಾರಂಭದಲ್ಲಿ ಹೇಳಿದ ಹಾಗೆ ನಾವು ಅಕ್ಕಪಕ್ಕ ಅಂದ್ರೆ ಸೈದ್ಧಾಂತಿಕವಾಗಿ ಮಾರ್ಕ್ಸ್‌‌ನ ಜೊತೆಗೆ ಹೋಗೋದೋ ಪಬ್ಲಿಕ್ ಸೆಕ್ಟರ್‌ಗೆ ಹೋಗೋದೋ ಅಥವಾ ಅಮೆರಿಕಾದ ತರದ ಲೈಸೆಫೇರ್ ಎಕಾನಮಿ ಥರ ಖಾಸಗಿ ಬಂಡವಾಳ ಬೆಳೆಸೋದೋ ಈ ೫೦ ವರ್ಷದಲ್ಲಿ ೪೦ ವರ್ಷ ಗೊಂದಲದಲ್ಲೇ ಕಳೆದ್ವಿ. ೪೦ ವರ್ಷ ಒಂದು ದಿಕ್ಕಿನಲ್ಲಿ ಬಂದ್ವಿ ಇನ್ನು ೧೦ ವರ್ಷ ಇನ್ನೊಂದು ದಿಕ್ಕಿನಲ್ಲಿ ಬಂದ್ವಿ. ನಮ್ಮ ದಾರಿ ಸಾಗಿದೆ ಅಂದ್ಕೊಂಡ್ರೂನೂ ಯಾವ ದಾರೀಲಿ ಹೋಗಿದ್ದೇವೇಯೋ ಆ ದಾರೀಲಿ ವಾಪಾಸು ಬಂದು ಬಿಟ್ವು. ದೂರ ಜಾಸ್ತಿ ಆಗಿದೆ ಆದ್ರೆ ಗುರಿ ದೃಷ್ಟಿಯಿಂದ ಸಾಗಿಲ್ಲ. ಕರ್ನಾಟಕದಲ್ಲೂ ಅದೇ ಆಯ್ತು, ಔದ್ಯೋಗೀಕರಣಕ್ಕೆ ಇಲ್ಲಿ ಬಹಳ ಅವಕಾಶ ಇತ್ತು. ಇಲ್ಲಿ ಒಳ್ಳೊಳ್ಳೆ ಮೂಲ ದ್ರವ್ಯಗಳು ಇತ್ತು. ಹೀಗೆ ನಮ್ಮಲ್ಲಿ ಹಂಪಿ, ಬಳ್ಳಾರಿ ಜಿಲ್ಲೆಯ ಕಬ್ಬಿಣ, ಮ್ಯಾಂಗನೀಸ್ ಓರ್ ಜಪಾನ್‌ಗೆ ಹೋದ್ವು. ನಮ್ಮ ಮೂಲವಸ್ತುಗಳನ್ನೇ ನಾವು ಉಪಯೋಗ ಮಾಡ್ಲಿಲ್ಲ. ಹಾಗಾಗಿ ನಮ್ಮ ರಾಜ್ಯದವರೇ ಅನ್ನಿಸಿಕೊಂಡಂಥ ಯಾರೂ ಕಾರ್ಪೋರೇಟ್ ಸೆಕ್ಟರ್‌ನಲ್ಲಾಗಲೀ ಅಂತಾರಾಷ್ಟ್ರೀಯ ಮಟ್ಟದಲ್ಲಾಗಲೀ ಇಂಡಸ್ಟ್ರಿಯಲಿಸ್ಟ್‌ಗಳು ಬೆಳೀಲಿಲ್ಲ. ಅಲ್ದೇ ನಮ್ಮ ಒಂದು ಭಾಗ ರಾಜರು, ಇನ್ನೊಂದು ಭಾಗ ಹೈದ್ರಾಬಾದ್, ಇನ್ನೊಂದು ಭಾಗ ಬಾಂಬೆ ಪ್ರೆಸಿಡೆನ್ಸಿ, ಮತ್ತೊಂದು ಭಾಗ ಮದ್ರಾಸ್ ಹೀಗೆ ಬೇರೆ ಬೇರೆ ರಾಜಕೀಯದ ಅಧಿಕಾರಕ್ಕೆ ಒಳಪಟ್ಟು ನಾವು ಬಂದಿದ್ರಿಂದ ನಮ್ಮ ಬೆಳವಣಿಗೆ ಆಗ್ಲಿಲ್ಲ. ಎಲ್ಲರೂ ನಮ್ಮನ್ನು ಉಪಯೋಗಿಸಿಕೊಂಡ್ರು. ಹಾಗಾಗಿ ವಿದ್ಯುಚ್ಛಕ್ತಿ ಕೊರತೆ ಅಪಾರವಾಗಿ ಆಯ್ತು. ನಮ್ಮ ಮೂಲವಸ್ತುಗಳನ್ನೆಲ್ಲಾ ನಾವು ರಫ್ತು ಮಾಡಿ ಅದರಲ್ಲೇ ಸಮಾಧಾನ ಪಟ್ಟುಕೊಂಡ್ವಿ. ನಮ್ಮದೇ ಆದಂಥ ಕಾರ್ಖಾನೆಗಳನ್ನು ನಾವು ಮಾಡ್ಲಿಲ್ಲ. ಮಾಡೋಕೂ ಹೋಗ್ಲಿಲ್ಲ. ಆದ್ರಿಂದ ಯಾರೂ ಇಲ್ಲ. ಈಗ ಇರೋದು ಅಂದ್ರೆ ಒಂದು ದೃಷ್ಟಿಯಿಂದ ಒಂದಿಬ್ರು ಮದ್ಯ ತಯಾರಿಕೆಯಲ್ಲಿ ಈಗ ಪ್ರಪಂಚದಲ್ಲಿ ಎಲ್ಲಾ ಕಡೆನೂ ಅವು ಸಿಗುತ್ತವೆ. ಅದೊಂದು ಕುಟುಂಬ ಮಾತ್ರ ಕನ್ನಡಿಗರು. ಇನ್ನು ಮಲ್ಯ ಅವರ ಕಾರ್ಖಾನೆಗಳಿದ್ದಾವೆ ಮತ್ತೆ ಅವ್ರಿಗೆ ಬೇರೆ ಕಡೆಯ ಉದ್ಯಮಗಳಲ್ಲಿ ಹೆಚ್ಚು ಆಸಕ್ತಿ.

  • ಆದ್ರೆ ಕನ್ನಡದ ಹುಡುಗ, ಹುಡುಗಿಯರು, ನಮ್ಮ ಇಂಜಿನಿಯರ್‌ಗಳು ಬಹಳ ಬುದ್ಧಿವಂತರಾಗಿ ಅಮೇರಿಕಾಕ್ಕೆ ಹೋಗಿ ನೆಲೆಸಿದ್ದಾರೆ. ಹೀಗೆ ವೈಯಕ್ತಿಕ ನೆಲೆಯಲ್ಲಿ ಬೇಕಾದಷ್ಟು ಸಾಧನೆ ಮಾಡಿದ್ದಾರೆ. ಆದ್ರೆ ಕರ್ನಾಟಕದ ಸಾಧನೆ ಅನ್ನೋದನ್ನ ಒಟ್ಟಾಗಿ ತೋರಿಸುವಂಥದ್ದು ಆರ್ಥಿಕ ಕ್ಷೇತ್ರದಲ್ಲಿ ಆಗ್ಲಿಲ್ಲ. ಶೈಕ್ಷಣಿಕ ಕ್ಷೇತ್ರದಲ್ಲಿ ನೀವು ಮುಖ್ಯಮಂತ್ರಿ ಆಗಿದ್ದಾಗಲೂ ಕೂಡಾ ಎಲ್ಲರಿಗೂ ಅಕ್ಷರ ಬರುವಂಥ ಒಂದು ದೊಡ್ಡ ಚಳವಳಿಯನ್ನು ಯಾಕೆ ನಮಗೆ ಮಾಡಕ್ಕಾಗಿಲ್ಲ? ಗ್ರಹಿಕೆಗೆ ಇಂಗ್ಲಿಷ್ ಬೇಕು. ಅಭಿವ್ಯಕ್ತಿಗೆ ನಮ್ಮ ನಮ್ಮ ಭಾಷೆ ಈಗ ಅವರು ಕೇಳ್ತಾ ಇರೋದು. ಮ್ಯಾಕ್ಸ್‌ ಮುಲ್ಲರ್ ಸಂಸ್ಕೃತದ ಎಲ್ಲಾ ಮುಖ್ಯ ಕೃತಿಗಳನ್ನ ಜರ್ಮನ್‌ಗೆ, ಇಂಗ್ಲಿಷ್‌ಗೆ ಮಾಡಿದ್ದಾನೆ. ಸಂಸ್ಕೃತದಲ್ಲಿ ಅವನಿಗೆ ಬರೀಲಿಕ್ಕೆ ಬರ್ತಿರಲಿಲ್ಲ. ಆದ್ರೆ ಅರ್ಥ ಮಾಡ್ಕೊಳ್ಲಿಕ್ಕೆ ಸಂಸ್ಕೃತ ಗೊತ್ತಿತ್ತು. ನಾವು ಅರ್ಥ ಮಾಡ್ಕೋಳ್ಳೋದಕ್ಕೆ ನಮಗೆ ಪ್ರೆಂಚ್ ಬೇಕು. ಜರ್ಮನ್ ಬೇಕು. ಇಟಾಲಿಯನ್ ಬೇಕು. ಆವಾಗ ಪ್ರಾಯಶಃ ಕರ್ನಾಟಕ ಒಂದು ಕಿಟಕಿಯನ್ನು ಅಂದ್ರೆ ಇಂಗ್ಲಿಷ್‌ನ ಕಿಟಕಿ ಒಂದನ್ನು ಮಾತ್ರ ತೆರಿಯೋದಲ್ಲ, ಫ್ರೆಂಚ್ ಕಿಟಕಿನೂ ತೆರೀಬೇಕು. ಕಿಟಕಿಗಳಾಗಿ ಮಾತ್ರ ಇರಬೇಕು. ಅಂದ್ರೆ ಅವು ಬಾಗಿಲುಗಳಾಗಿ ಬಿಡ್ಬಾರ್ದು ಅಂತ. ಅಂದ್ರೆ ಅದರ ಮೂಲಕ ಹೊರಟು ಹೋಗುವ ಬಾಗಿಲುಗಳಾಗದೆ ಕಿಟಕಿಗಳಾಗಿ ತೆರೀಬೇಕು. ಅದು ಒಂದು ನಾವು ಮುಂದಿನ ಶತಮಾನದಲ್ಲಿ ಮಾಡ್ಬೇಕು ಅನಿಸುತ್ತೆ. ಇನ್ನೇನು ನಾವು ಮಾಡ್ಬೇಕಾಗಿ ಬರ್ಬಹುದು ಮುಂದಿನ ಶತಮಾನದಲ್ಲಿ?

ಶಿಕ್ಷಣದ ದೃಷ್ಟಿಯಿಂದ, ಜ್ಞಾನಾರ್ಜನೆಯ ದೃಷ್ಟಿಯಿಂದ ಲೋಹಿಯಾರವರು ಹೇಳಿದಂತೆ ಯಾವ ಭಾಷೆಯ ಮೂಲಕವಾದ್ರು ಜ್ಞಾನವನ್ನು ಪಡಿ, ಆದ್ರೆ ಅಭಿವ್ಯಕ್ತಿ ನಿನ್ನ ಭಾಷೆಯಲ್ಲಾಗಲಿ. ಅದು ಸಾಧ್ಯ, ಮಾಡಿದ್ದಾರೆ. ನೀವು , ಪುಟ್ಟಪ್ಪನವರು, ಬೇಂದ್ರೆಯವರು, ನೀವೆಲ್ಲ ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಂಡವ್ರು ಬೇರೆ ರೀತಿಯಲ್ಲಿ. ಅದನ್ನು ಕನ್ನಡದಲ್ಲಿ ಸಾಧ್ಯವಾದಷ್ಟು ಪ್ರಕಟಿಸಿ, ನಮ್ಮ ಜನ ಅರ್ಥ ಮಾಡ್ಕೊಂಡು, ಹಾಂ, ನಮ್ಮ ಭಾಷೆಯಲ್ಲೂ ಇಂಥ ವಿಚಾರ ಮಾಡೋಕ್ಕೆ ಸಾಧ್ಯ. ಇಂಥ ಪದಗಳು ಬರೋಕೆ ಸಾಧ್ಯ. ಬಸವಣ್ಣನವರ ಕಾಲಕ್ಕೆ ಉಪಯೋಗ ಮಾಡಿದ ಪದಗಳು, ಅದಕ್ಕೆ ಸಮಾನಾಂತರವಾದ ಪದಗಳು ಯಾವ ಭಾಷೆಯಲ್ಲೂ ಇಲ್ಲ. ಇಂಗ್ಲಿಷ್‌ನವರಿಗೆ ಗೊತ್ತಿಲ್ಲ. ಆ ಕಾರಣ ನಾನು ಹೇಳೋದು, ಮನೆ ಭಾಷೆಯಾಗಿ ಉಳಿಸ್ಕೋತಾರೆ, ಈಗ ಕೆಲವು ಜಾತಿಗಳು. ಜಾತಿಗೂ ಭಾಷೆಗೂ ಸಂಬಂಧ ಇದೆ. ಇಲ್ಲಿ ಬೆಂಗಳೂರಲ್ಲೇನೆ ತೆಲುಗರು, ತೆಲುಗೇ ಮನೆ ಭಾಷೆ ಇಟ್ಕೊಂಡು ಮನೇಲಿ ತೆಲುಗು ಮಾತಾಡ್ತಾರೆ, ಹೊರಗೆ ಕನ್ನಡ ಮಾತಾಡ್ತಾರೆ ಅಥವಾ ಹೊರಗೆ ಅವರು ವ್ಯವಹಾರಕ್ಕೆ ಏನು ಅನುಕೂಲವೋ ಅದು. ಈಗ ಪೂನದಾದಲ್ಲಿರತಕ್ಕಂಥವರ ಆ ಕಲ್ಯಾಣಿ ಗ್ರೂಪಿನ ಇಂಡಸ್ಟ್ರಿಯಸ್ಟ್‌ಗಳು ಕನ್ನಡಿಗರು, ಅವರು ಮನೇಲಿ ಕನ್ನಡವೇ, ಹೊರಗೆಲ್ಲಾ ಮರಾಠಿ.

  • ಇದೊಂದು ಭಾರತದ ಅದ್ಭುತ ಮತ್ತು ಹೀಗೇ ಇರ್ಬೇಕಾಗಿತ್ತು.

ಅದಕ್ಕೇ ನಾನು ಹೇಳೋದು ಮನೆಯಲ್ಲಿ ಭಾಷೆಯಾಗಿ ಉಳೀತದೆ ಬರ್ತಾ ಬರ್ತಾ ಈ ಹುಡುಗ್ರು ಮನೆಯಲ್ಲೂ ಕನ್ನಡ ಭಾಷೆ ಬಿಟ್ಟು ಬೇರೆ ಭಾಷೆ ಮಾತಾಡ್ಲಿಕ್ಕೆ ಶುರುಮಾಡಿದ್ರೆ ಅಪಾಯವಿದೆ. ನೀವು ಹೇಳಿದಂತೆ ಸಂದೇಹ ಇದೆ. ಅದನ್ನು ಬಗೆಹರಿಸೋಕ್ಕೆ ಸಾಧ್ಯ ಇಲ್ಲ. ಅದು ಏನಾದ್ರು ಸರ್ವಾಧಿಕಾರಿ ಶಕ್ತಿಗಳು ಉಪಯೋಗಿಸಿದ್ರೆ ಮಾತ್ರ ಸಾಧ್ಯ ಆಗುತ್ತೆ.

  • ಇನ್ನೊಂದು ಕರ್ನಾಟಕದಲ್ಲಿ ಬಿಟ್ಟು ನಮ್ಮ ರಾಜಕಾರಣದಲ್ಲಿ ಹಲವು ಮುಖ್ಯಮಂತ್ರಿಗಳು ಬೇರೆ ಪ್ರದೇಶದ ಮುಖ್ಯಮಂತ್ರಿಗಳಿಗಿಂತ ಉತ್ತಮರಾಗಿದ್ರು ಎಂಬಂಥ ಭಾವನೆ ಇದೆ. ಹಿಂದೆ ವಿಶ್ವೇಶ್ವರಯ್ಯನವರಿದ್ರು, ನಮ್ಮ ಮೈಸೂರಿನ ದಿವಾನರೆಲ್ಲ ಒಳ್ಳೆಯವರಾಗಿದ್ರು. ಆದ್ರೂನೂ ನೀವು ಎಷ್ಟು ಹಿಂಸೆಗೆ ಒಳಗಾಗಿದ್ರಿ ಅನ್ನೋದು ಗೊತ್ತು ನನಗೆ. ರಾಜಕೀಯದ ಪಕ್ಷದ ಒಳಗೇನೇ ಇರುವ ಒಡಕುಗಳೆಲ್ಲ ಯಾವತ್ತು ನಾವು ಜಾತಿಯಿಂದ ಅಂದ್ರೆ ಜಾತಿಯನ್ನು ಸಮಾಜದ ಸಮಾನತೆಗೆ ಉಪಯೋಗಿಸೋದೇ ಬೇರೆ, ಅದನ್ನು ಲೋಹಿಯಾರವ್ರು ಉಪಯೋಗಿಸ್ತಾ ಇದ್ರು. ನೀವೂ ಉಪಯೋಗಿಸ್ತಾ ಬಂದಿದ್ರಿ. ಇನ್ನೊಂದು ಕೆಲವೇ ಕೆಲವು ಜನರ ಹಿತಾಸಕ್ತಿಯನ್ನು ಕಾಯೋದಕ್ಕೋಸ್ಕರ ಜಾತಿ ಅನ್ನೋದು ಬರೋಕೆ ಶುರು ಆದ್ರೆ ಕರ್ನಾಟಕ ತನ್ನ ರಾಜಕಾರಣದಲ್ಲಿ ಒಟ್ಟಿನಲ್ಲಿ ಭಾರತದಲ್ಲಿ ಯಾವ ಸ್ಥಾನವನ್ನು ಗಳಿಸ್ಬೇಕೋ ಅದನ್ನು ಬಳಿಸದೇ ಹೋಗ್ಬಹುದು ಅಂತ ಅನಿಸುತ್ತೋ ನಿಮಗೆ ಅಥವಾ ಇದು ಸ್ವಲ್ಪ ದಿನ ಇರುತ್ತೆ ಆಮೇಲೆ ಹೋಗುತ್ತೆ ಅಂತ ಅನ್ಸುತ್ತಾ?

ಇಲ್ಲ, ಈ ಜಾತೀಯತೆ ಮೊದಲು ಇತ್ತು. ಇರ್ಲಿಲ್ಲ ಅಂತ ನಾನು ಹೇಳೋದಿಲ್ಲ. ಅದು ಪರಸ್ಪರ ಯೋಗಕ್ಷೇಮಕ್ಕೋಸ್ಕರ ಇತ್ತು. ಸಂಬಂಧ, ವ್ಯವಹಾರ ಇಂಥದ್ದಕ್ಕೆ ಇತ್ತು. ಈಗ ಉತ್ತರ ಪ್ರದೇಶ, ಬಿಹಾರ, ಪಂಜಾಬ್ ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶ ಇವುಗಳನ್ನು ನೋಡಿ ನನಗೆ ಸ್ವತಃ ಅನುಭವ ಆದ್ಮೇಲೆ ಅದೇ ಒಂದು ಅಸ್ತ್ರವಾಗಿ, ಅದನ್ನೇ ಉಪಯೋಗಿಸಿ ಸರ್ಕಾರ ಮಾಡ್ಬೇಕು. ಅದೇ ಶುರುವಾಗಿದೆ. ಈಗ ಅದಕ್ಕೆ ಬಹಳ ವಿಕೃತ ರೂಪ ಬಂದಿದೆ. ಇದು ಏನಾದ್ರೂ ನಾಶಕ್ಕೇ ಬಂದಿದೆಯೋ ಗೊತ್ತಿಲ್ಲ. ಆದ್ರೆ ಈಗ ಅದನ್ನೇ ಎಲ್ಲರೂ ಉಪಯೋಗಿಸ್ತಾ ಇದ್ದಾರೆ. ಯಾವುದನ್ನು ಉಪಯೋಗಿಸದೆ ಇದ್ರೆ ಆರೋಗ್ಯಕರವಾದ ರಾಜಕೀಯ ಇರ‍್ತದೇಂತ ನಾವೆಲ್ಲ ವಿಚಾರ ಮಾಡ್ಕೊಂಡು ಬಂದಿದ್ದೇವೆಯೋ, ಏನಾದ್ರು ಮಾಡಿ ಈ ಜಾತಿಪದ್ಧತಿ ಕಳಿಬೇಕೂಂತ; ಅದೇ ಈಗ ಬರ್ತಾ ಬರ್ತಾ ಬಿಗಿಯಾಗ್ತ ಇದೆ. ಆದ್ರಿಂದ ಸರ್ಕಾರ, ಪೊಲೀಸ್ ಇವ್ರು ಪ್ರವೇಶ ಮಾಡತಕ್ಕಂಥ ಸ್ಥಿತಿ ಬರ್ತಿದೆ. ಈ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ಅನಂತಮೂರ್ತಿಯವರೇ, ನನಗೆ ಆಶ್ಚರ್ಯ ಆಗುತ್ತದೆ. ಈಗ ಎಸ್ಸಿ, ಹಿಂದುಳಿದವರಿಗೆ ಇದೊಂದು ನಾಮಫಲಕ. ನಿಜವಾಗಿ ಆ ಜನರ ಹಿತಕ್ಕಾಗಿಯಾದ್ರೆ ಏನಾದ್ರೂ ಹೋರಾಟ ಮಾಡ್ಲಿ. ಆದ್ರೆ ಅದು ಆಗ್ತಾ ಇಲ್ಲ. ಎಲ್ಲಾ ದುರ್ಬಳಕೆ ಆಗ್ತಾ ಇದೆ. ಈ ಸೋಕಾಲ್ಡ್ ಮೇಲ್‌ಜಾತಿಯವರು ಅಂತೇವಲ್ಲ ಅವರ ದುರ್ಬಳಕೆ ಆಗ್ತಿದೆ. ಅದಕ್ಕೆ ಇಡೀ ವ್ಯವಸ್ಥೆಯಲ್ಲೇ ಅಡಗಿಕೊಂಡಿದ್ದಂಥ ಸೂಕ್ಷ್ಮತೆಗಳು ಕೆಲವು ಅವು ಕ್ರಿಮಿನಲ್ ಅಲ್ಲ. ವ್ಯವಸ್ಥೆಯಲ್ಲಿ ಇತ್ತು. ಈಗ ಹಾಗಾಗಿಲ್ಲ. ವ್ಯವಸ್ಥೆ ದೃಷ್ಟಿಯಿಂದ, ಅದು ಒಂದು ದೃಷ್ಟಿಯಿಂದ ವ್ಯವಸ್ಥೆಯನ್ನೇ ಮುರೀಬೇಕು, ಇನ್ನೊಂದು ದೃಷ್ಟಿಯಿಂದ ಇನ್ನೂ ಕೆಟ್ಟ ವ್ಯವಸ್ಥೆ ತರ್ಬಹುದು, ಇದು ನಡೀತಾ ಇದೆ ಇಡೀ ಭಾರತದಲ್ಲಿ.

  • ಅದನ್ನು ನಿವೂ ಹೇಳ್ತಾ ಇರ್ತೀರಿ. ಕುವ್ಯವಸ್ಥೆಯಿಂದ ಅವ್ಯವಸ್ಥೆ. ಅವ್ಯವಸ್ಥೆಯಿಂದ ಮತ್ತೆ ವ್ಯವಸ್ಥೆ ಬರ್ಬೇಕು ಅಂತ. ಅಂದ್ರೆ ಅವ್ಯವಸ್ಥೆ ಇದು ಅತಿಯಾದಾಗ ತನ್ನನ್ನೇ ತಾನು ನಿರಾಕರಿಸಬಹುದು ಅನ್ನೋ ಭರವಸೆ ಇದೆಯಾ ನಿಮಗೆ?

ಹೌದು ಹೌದು ಆಗತ್ತೆ. ಅದು ತಾನಾಗಿಯೇ ಆಗತ್ತೆ. ಆದ್ರೆ ಅಷ್ಟರ ಒಳಗಾಗಿ ಸಾಕಷ್ಟು ನಷ್ಟವೂ ಆಗಿರತ್ತೆ.

  • ಮುಖ್ಯವಾಗಿ ಕರ್ನಾಟಕ ಯಾವ ದಿಕ್ಕಿನಲ್ಲಿ ತನ್ನ ಭವಿಷ್ಯವನ್ನು ಪ್ರಪಂಚದಲ್ಲಿ ಸಾಧಿಸಕೊಳ್ಳತ್ತೇಂತ? ಒಂದು ನೀವು ಸಾಫ್ಟ್‌ವೇರ್ ಅಂದ್ರಿ ಇನ್ನು ಯಾವ್ಯಾವುದು?

ಇಲ್ಲಿ ಸ್ವಲ್ಪ ನೀರಾವರಿ ಜಾಸ್ತಿ ಮಾಡ್ಕೊಂಡ್ರೆ ವ್ಯವಸಾಯದಲ್ಲಿ ಆಗಬಹುದು. ಈಗ ಪಂಜಾಬಿನ ಶಕ್ತಿಯೇನು? ಕೃಷಿಯೇ ಬೆನ್ನೆಲುಬು ಆಗಿದೆ.

  • ಕರ್ನಾಟಕದಲ್ಲಿ ಹಿಂದುಳಿದ ಪ್ರದೇಶಗಳು ಅಂತ ನಮ್ಮನ್ನು ಸರಿಯಾಗಿ ಗಮನಿಸ್ಲೇ ಇಲ್ಲ ಅಂತ ಬೀದರ್‌ನಲ್ಲಿ, ಬಿಜಾಪುರ್‌ನಲ್ಲಿ ಎಲ್ಲಾ ಒಂದು ಭಾವನೆ ಇದೆ ಅಲ್ವಾ ಅದನ್ನು ನಿವಾರಿಸೋದು ಹೇಗೆ?

ಅಂದ್ರೆ ಕೆಲವು ಭಾಗ ಕೆಲವು ಕಡೆ ಈಗ ಹೈದ್ರಾಬಾದ್ ನಿಜಾಮರ ಕೆಳಗೆ ಇದ್ದಂಥ ಕೆಲವು ಜಿಲ್ಲೆಗಳು ತುಂಬಾ ಹಿಂದೆ ಬಿದ್ದಿವೆ. ಅದನ್ನು ನಿಧಾನವಾಗಿ ಸುಧಾರಿಸ್ತಾ ಹೋಗ್ತಾ ಇದ್ದೇವೆ. ಅನುಕೂಲತೆಗಳನ್ನು ಮಾಡ್ತಾ ಇದ್ದೇವೆ. ನೀರಾವರಿ ಬರ್ಬೇಕು. ಸಣ್ಣ ಸಣ್ಣ ಉದ್ಯಮಗಳು ಶುರುವಾಗಬೇಕು ಬೀದರ್, ಗುಲ್ಬರ್ಗ ಅಂಥ ಕಡೆ ಅದು ಬಯಲು. ಬೆಂಗಾಡು ಬಹಳ ಇದೆ ಅಲ್ಲಿ, ಫಲವತ್ತತೆ ಇದೆ. ಆದ್ರೆ ನೀರು ಬೇಕು. ಅದನ್ನು ಚೆನ್ನಾಗಿ ಮಾಡತಕ್ಕಂಥ ಕೃಷಿ ಕಾರ್ಮಿಕರು ಬೇಕು. ಅವ್ರೆಲ್ಲ ಈ ಕಡೆ ಬರೋದು ಬೆಂಗಳೂರು ಸೇರೋದು. ಗಾರೆ ಕೆಲಸ ಮಾಡೋದು. ಅದ್ರಿಂದ ನಾವು ಸಮೃದ್ಧವಾದ ಕರ್ನಾಟಕ ಮಾಡೋದು ಅದರಕ್ಕೋಸ್ಕರ ಬೇಕಾಗತಕ್ಕಂಥದು ನಾನು ಹೇಳೋದೂ ಶಿಕ್ಷಣ, ಕುಡಿಯೋ ನೀರು, ನೀರಾವರಿ, ವಿದ್ಯುಚ್ಛಕ್ತಿ ಇವುಗಳನ್ನು ನಾವು ಕೇಂದ್ರ ಕಾಳಜಿಗಳು ಅಂತ ಕಂಡೆವಲ್ಲ, ಇವುಗಳನ್ನು ಮಾಡಿಕೊಂಡ್ರೆ ಆಗ ನಮಗೆ ನಮ್ಮಲ್ಲೇನೇ ಉದ್ಯಮಿಗಳು ಹುಟ್ಟಬಹುದು. ಅಥವಾ ಬೇರೆಯವ್ರು ಬಂದು ಸ್ವಲ್ಪ ನಮ್ಮವರಿಗೆ ಕೆಲಸ ಸಿಗ್ಬಹುದು. ಈ ದೃಷ್ಟಿಯಿಂದ ಇವತ್ತು ವರಮಾನ ನೋಡಿದ್ರೆ ತೀರಾ ಕೆಲಗೂ ಇಲ್ಲ ತೀರಾ ಮೇಲೂ ಇಲ್ಲ ನಾವು ಮಧ್ಯಭಾಗದಲ್ಲಿದ್ದೇವೆ. ಮಧ್ಯಭಾಗದಲ್ಲಿ ಅಂದ್ರೆ ನಮಗೆ ತಕ್ಷಣ ನೆನಪಾಗೋದು ಪಕ್ಕದಲ್ಲಿರುವ ಆಂಧ್ರದವರು. ಅವರು ನಮಗಿಂತ ನೀರಾವರಿ ಚೆನ್ನಾಗಿ ಮಾಡಿಕೊಂಡಿದ್ದಾರೆ. ನಾವು ಕೋರ್ಟು, ಕಚೇರಿ ಅಂತ ಲಾ ಹಿಡ್ಕೊಂಡು ಹೊರಟ್ವಿ. ಅವ್ರೇನಿಲ್ಲ ಕೆಲಸ ಮುಗಿಸಿಕೊಂಡು ಆಮೇಲೆ ಕೋರ್ಟಿಗೆ ಹೋದ್ರು. ನಾವು ಕೋರ್ಟು ಮುಗಿಸಿಕೊಂಡು ಕೆಲ್ಸಕ್ಕೆ ಹೋಗ್ಬೇಕು ಅಂದ್ರೆ ಅವ್ರು ಕೆಲಸ ಮುಗಿಸ್ಕಂಡು ಕೋರ್ಟಿಗೆ ಹೋದ್ರು. ಈ ತರ ಮಾಡಿದೆವು ತಮಿಳನಾಡೂ ಅಷ್ಟೆ. ಆಂಧ್ರಪ್ರದೇಶನೂ ಅಷ್ಟೆ.

ಹೀಗಾಗಿ ಅವ್ರು ನೀರಾವರಿಯಲ್ಲಿ ಬಹಳ ಮುಂದುವರೆದಿದ್ದಾರೆ. ಕೃಷಿ ಉತ್ಪಾದನೆ ಇದೆ. ಆದ್ರಿಂದ ಅಲ್ಲಿಂದ ಇಂಡಸ್ಟ್ರಿಯಲಿಸ್ಟ್‌ಗಳು ಹುಟ್ತಾರೆ. ಈ ನಾವು ಆ ಕಡೆ ಗಮನ ಕೊಟ್ರೆ ಮುಂದಿನ ಅಂದ್ರೆ ನಾನು ಹೇಳೋದು ಶತಮಾನ ಅನ್ನೋದಕ್ಕಿಂತ ಈಗ ಯಾವುದೇ ಪ್ರಗತಿ ಬಹಳ ವೇಗದಲ್ಲಿ ಬರ್ತಾ ಇದೆ, ಅದ್ರಿಂದ ಇನ್ನೊಂದು ಇಪ್ಪತ್ತು ವರ್ಷದಲ್ಲಿ ನಾವು ನಮ್ಮ ವರಮಾನ ಇಷ್ಟಾಗಬೇಕು. ಸಾಕ್ಷರತೆ ಸಂಪೂರ್ಣ ಶೇಕಡಾ ನೂರು ಆಗ್ಬೇಕು. ಈ ಥರ ಕೆಲವು ನಿರ್ದಿಷ್ಟ ಗುರಿಗಳನ್ನು ಇಟ್ಟುಕೊಂಡು ಹೋದ್ರೆ ಸಾಧ್ಯ ಇದೆ. ನಮ್ಮ ಜನ ಒಳ್ಳೆಯೋರು. ಹಾಗೆ ಲೆಕ್ಕ ಹಾಕಿದ್ರೆ ಈ ನಕ್ಸಲೀಯರಂತೆ, ಎಲ್‌ಟಿಟಿಇ ಅಂತೆ, ಕೇಳ್ಬಾರದ ಹಿಂಸೆಗಳೆಲ್ಲ ಇವೆ. ಕರ್ನಾಟಕದಲ್ಲಿ ಅದಿಲ್ಲ. ಇಲ್ಲೊಂದು ಸಂಸ್ಕೃತಿ ಇದೆ. ಅದು ಬಹಳ ಜನ ಅಧ್ಯಾತ್ಮಿಕರು, ಕೆಲವು ಅವರದೇ ಆದ ರೀತಿಯಲ್ಲಿ ಜನರನ್ನು ಅವರ ಮನಸನ್ನು ಒಳ್ಳೆಯದರ ಕಡೆ ಯೋಚನೆ ಮಾಡಲು ಕಲ್ಸಿದ್ದಾರೆ.

 

—-
ಅಕ್ಷರ ರೂಪ :
ಮಂಜುಳಾ ಸುಬ್ರಹ್ಮಣ್ಯ
ಕೃತಿ
ಬ್ಯಾನರ್‌ನಡಿ ಮಹದೇವ್ ಪ್ರಕಾಶ್ ನಿರ್ದೇಶನದಲ್ಲಿ ಚೆಲುವ
ಕನ್ನಡನಾಡು ಸರಣಿಯಡಿ ೨೦೦೧ ರಲ್ಲಿ ಪ್ರಸಾರವಾದ ಸಂವಾದ

ಜಯದೇವಪ್ಪ ಹಾಲಪ್ಪ ಪಟೇಲ್ ಈಗಿನ ದಾವಣಗೆರೆ ಜಿಲ್ಲೆಯ ಕಾರಿಗನೂರಿನಲ್ಲಿ ಅಕ್ಟೋಬರ್ ೧, ೧೯೩೦ ರಂದು ಜನಿಸಿದರು. ಪಟೇಲರು ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳು. ೧೯೪೭ ರಲ್ಲಿ ಸ್ವಾತಂತ್ರ್ಯ ಹೋರಟದಲ್ಲಿ ಭಾಗವಹಿಸಿ ಜೈಲು ಸೇರಿದ್ದರು. ೧೯೬೭ ರಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಅವರು ಲೋಕಸಭೆಗೆ ಆಯ್ಕೆಯಾದರರು. ಲೋಕಸಭೆಯಲ್ಲಿ ಅವರು ಕನ್ನಡದಲ್ಲೇ ಮಾತನಾಡಿ ದಾಖಲೆ ನಿರ‍್ಮಿಸಿದರು. ೧೯೭೮ ರಲ್ಲಿ ಮತ್ತು ೧೯೮೩ ರಲ್ಲಿ ಚೆನ್ನಗಿರಿ ಕ್ಷೇತ್ರದಿಂದ ಆಯ್ಕೆಗೊಂಡು ಶಾಸಕರಾದರು. ರಾಮಕೃಷ್ಣ ಹೆಗಡೆ ಹಾಗೂ ಎಸ್.ಆರ್. ಬೊಮ್ಮಾಯಿಯವರ ಸರ್ಕಾರದಲ್ಲಿ ಸಚಿವರಾಗಿದ್ದರು. ೧೯೯೪ ರಲ್ಲಿ ದೇವೇಗೌಡರ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾದರು. ದೇವೇಗೌಡರು ೧೯೯೬ ರಲ್ಲಿ ದೇಶದ ಪ್ರಧಾನಿಯಾದಾಗ ಪಟೇಲರು ಕರ್ನಾಟಕದ ಮುಖ್ಯಮಂತ್ರಿಗಳಾದರು. ಇವರು ಸಮಾಜವಾದಿ ಹಿನ್ನಲೆಯ, ಎಂದೂ ಕಾಂಗ್ರೆಸ್ ಸದಸ್ಯನಾಗಿರದಿದ್ದ ಮೊದಲ ಮುಖ್ಯಮಂತ್ರಿ ಕೂಡಾ. ಪಟೇಲರು ರಾಮಮನೋಹರ ಲೋಹಿಯಾರ ಆಪ್ತ ಅನುಯಾಯಿಯಾಗಿದ್ದರು. ಪ್ರಖರ ಮಾತುಗಾರಿಕೆಗೆ, ನುರಿತ ರಾಜಕಾರಣಕ್ಕೆ ಪ್ರಸಿದ್ಧರಾಗಿದ್ದ ಪಟೇಲರು ತಮ್ಮ ಕೊನೆಯ ಚುನಾವಣಾ ಹೋರಾಟದಲ್ಲಿ ಯುವ ಅಭ್ಯರ್ಥಿ ಒಬ್ಬರೆದುರು ಸೋಲನ್ನು ಅನುಭವಿಸಿದರು. ಪಟೇಲರು ೨೦೦೦ ರಲ್ಲಿ ನಿಧನರಾದರು.

* * *