ಸುಬ್ಬಣ್ಣ, ನಾವೀಗ ನಿಮ್ಮ ಕಲ್ಪನೆಯ ಚೆಲುವ ಕನ್ನಡನಾಡನ್ನು ಕುರಿತು ಮಾತಾಡೋಣ. ನಾವೆಲ್ಲ ಕೊನೆಯ ಪಕ್ಷ ಎರಡು ಕಾಲುಗಳಲ್ಲಿ, ಎರಡು ದೇಶಗಳಲ್ಲಿ ಬದುಕಿರುತ್ತೇವೆ. ಒಂದು ಇಂಡಿಯಾ. ಮತ್ತೊಂದು ಭಾರತ. ಆಧುನಿಕವಾದದ್ದು ಇಂಡಿಯಾ. ಪರಂಪರೆಯಿಂದ ನಮ್ಮ ಜೀವನ ಕ್ರಮವನ್ನು ನಿರೂಪಿಸುವುದು ಭಾರತ. ನಾವು ಭಾರತದಲ್ಲಿ ಇರುತ್ತೇವೆ. ಇಂಡಿಯಾದಲ್ಲೂ ಇರುತ್ತೇವೆ. ಕೆಲವು ಸಾರಿ ಭಾವುಕವಾಗಿ ಇಂಡಿಯಾದಲ್ಲಿರುತ್ತಾರೆ. ಆದರೆ ಅದು ತಪ್ಪು ಎಂದು ತಿಳಿದು  ವೈಚಾರಿಕವಾಗಿ ಭಾರತದ ಬಗ್ಗೆ ಮಾತನ್ನಾಡುತ್ತಾರೆ. ನಾವೆಲ್ಲ ಇಕ್ಕಟ್ಟಿನಲ್ಲಿದ್ದೇವೆ. ನೀವು ಹೆಗ್ಗೋಡಿನಲ್ಲಿ ಮಕ್ಕಳ ನಾಟಕ ಮಾಡಿಸುವಷ್ಟು ಸುಲಭವಾಗಿ ಬೆಂಗಳೂರಿನಲ್ಲಿ ಅದು ಸಾಧ್ಯವಾಗುವುದಿಲ್ಲ. ಯಾಕೆಂದರೆ ಮಧ್ಯಮವರ್ಗದ ಮಕ್ಕಳೆಲ್ಲ ಇಂಗ್ಲಿಷ್ ಮೀಡಿಯಂನಲ್ಲಿ ಓದುತ್ತಿರುವುದರಿಂದ ಕನ್ನಡ ನಾಟಕ ಸ್ವಲ್ಪ ಕಷ್ಟ. ತರದ ಶಕ್ತಿಗಳು ಕೆಲಸ ಮಾಡುತ್ತಿರುವಾಗ ಮುಂದಿನ ಶತಮಾನದಲ್ಲಿ ಚೆಲುವ ಕನ್ನಡ ನಾಡಿನ ಚೆಲುವನ್ನು ಹೇಗೆ ಉಳಿಸಿಕೊಳ್ಳಬೇಕು?

ಇದನ್ನು ನಾವು ಚರ್ಚೆಯ ಕಡೆಯಿಂದ ಯೋಚನೆ ಮಾಡಬಾರದು. ಚರ್ಚೆಯ ಕಡೆಯಿಂದ ಯೋಚನೆ ಮಾಡಿದಾಗೆಲ್ಲ ಅನೇಕ ರೀತಿಯ ಕಷ್ಟಗಳು ಬರುತ್ತವೆ. ನಮ್ಮ ಇವತ್ತಿನ ಕನ್ನಡ ಚಲವಳಿಯ ತಪ್ಪು ಹೀಗೆ ಆಗುತ್ತಿದೆ. ನೀವು ಕನ್ನಡ ಹೇಗಿರಬೇಕು ಎಂದು ಯೋಚಿಸುವುದಕ್ಕಿಂತ ಒಬ್ಬ ವ್ಯಾಪಾರಿ, ರೈತ, ಕೂಲಿಕಾರ ಹೇಗೆ ಕನ್ನಡ ಉಪಯೋಗಿಸುತ್ತಿದ್ದಾರೆ ಎಂಬುದು ನಮಗೆ ಮುಖ್ಯವಾಗಬೇಕು. ಇವರೆಲ್ಲಾ ಬಳಸುವ ಕನ್ನಡ ನಮಗೆ ಮುಖ್ಯವಾಗಬೇಕು. ವೈಜ್ಞಾನಿಕವಾಗಿ ಕೂಡಾ ನಾವು ಈ ಎಲ್ಲವನ್ನು ರೆಸಿಸ್ಟ್ ಮಾಡುವುದು ಅಥವಾ ಅಸರ್ಟ್ ಮಾಡಿಕೊಳ್ಳುವುದು ಅಥವಾ ಬೇರೆ ಕಡೆಯಿಂದ ತೆಗೆದುಕೊಳ್ಳುವುದು ಇಂಥ ಚಾತುರ್ಯಗಳೆಲ್ಲ ನಮಗೆ ಬೇಕಾಗುತ್ತದೆ. ಈ ಜ್ಞಾನ ಎನ್ನುವುದು ನಮ್ಮ ಭಾರತೀಯ ಮೀಮಾಂಸೆಯ ಪ್ರಕಾರ ಅಲ್ಲಿ ಇದೆ. ಪಶ್ಚಿಮದವ್ರು ಹೇಳುವಂತೆ ಡಿಸ್ಕವರಿ, ಇನ್ವೆನ್‌ಷನ್ ಅಂತ ಬೇರೆ ಬೇರೆ ಇಲ್ಲ. ನಮ್ಮ ಜ್ಞಾನದ ಕಲ್ಪನೆ ಮತ್ತು ಪಶ್ಚಿಮದವರ ಜ್ಞಾನದ ಕಲ್ಪನೆ ಎರಡೂ ಬೇರೆ ಬೇರೆ. ನಮಗೆ ಜ್ಞಾನ ಎನ್ನುವುದು ಅಲ್ಲಿ ಇದೆ. ನಾವು ಪ್ರತಿಕ್ಷಣ ನಮಗೆ ಬೇಕಾದ ಜ್ಞಾನದ ಭಾಗವನ್ನು ಕಾಣುತ್ತಿರುತ್ತೇವೆ. ಅದಕ್ಕೇ ನಾವು ಅಭಿಜ್ಞಾನ ಎನ್ನುವುದು.

 • ಗುರುತು ಮಾಡಿಕೊಳ್ಳಬೇಕು.

ಹಾಂ, ಗುರುತು ಮಾಡಿಕೊಳ್ಳಬೇಕು. ಜ್ಞಾನವನ್ನು ಗುರುತು ಮಾಡಿಕೊಳ್ಳಬೇಕು. ನಮಗೆ ಬೇಕಾದ ಜ್ಞಾನವನ್ನು ಗುರುತು ಮಾಡಿಕೊಳ್ಳಬೇಕು. ಆದ್ದರಿಂದಲೇ ಜ್ಞಾನಕ್ಕಾಗಿ ನಾವು ಪುನಃ ಪುನಃ ಕವಿರಾಜಮಾರ್ಗಕ್ಕೆ ಹೋಗಬೇಕು, ಅಥವಾ ೧೦ನೇ ಶತಮಾನಕ್ಕೆ ಹೋಗಬೇಕು. ಹೀಗೆ ಮಾಡಬೇಕಾದರೆ ಕನ್ನಡ ಹುಟ್ಟಿದ್ದಲ್ಲಿಂದ ಹಿಡಿದು ಸುಮಾರು ಹತ್ತು ಶತಮಾನಗಳ ಕಾಲ ಕನ್ನಡ ರೂಪುಗೊಳ್ಳಲು ನಡೆದ ಪ್ರಯತ್ನ ಎಂದು ನಾವು ತಿಳಿಯಬಹುದಾಗಿದೆ. ಇದು ಬಹಳ ಕುತೂಹಲಕಾರಿ. ಏಕೆಂದರೆ ಸುಮಾರು ಐದು ಧಾರೆಗಳಲ್ಲಿ ಕನ್ನಡ ರೂಪುಗೊಂಡಿದೆ ಎಂದು ತಿಳಿಯಬಹುದು. ಮೊದಲನೆಯದಾಗಿ ಕನ್ನಡನಾಡು ಎಂಬುದು ಜನಪದ. ಒಂದು ಕನ್ನಡದ ಜನಪದ. ಇದು ಜನರ ಗುಂಪು. ಇಲ್ಲಿ ರಾಜ್ಯ ಇರಲಿಲ್ಲ. ಹೀಗೆ ಜನಪದ ಬೆಳೆದುಕೊಂಡು ಬಂತು. ಇಲ್ಲಿ ಮುಖ್ಯವಾಗಿದ್ದು ಈ ಜನರ ನಡಾವಳಿ, ಇವರ ಜೀವನ ಕ್ರಮ, ಇಲ್ಲಿಯ ನೆಲ, ಬೆಟ್ಟ, ಗುಡ್ಡ ಹೀಗೆ ಕನ್ನಡ ಒಂದು ಪ್ರದೇಶಕ್ಕೆ ಸಂಬಂಧಿಸಿದ್ದು ಎಂಬ ಕಲ್ಪನೆ. ಇನ್ನೊಂದು ಇವರ ಭಾಷಿಕನೆಲೆ, ಭಾಷೆಯ ಧಾರೆ. ಇವರಿಗೆ ಕೇಳುವ ಭಾಷೆ ಹಾಗೂ ಲಿಪಿ ಬೆಳೆದುಕೊಂಡು ಬಂತು. ಇನ್ನೊಂದು ಕಲೆಯ ಧಾರೆ. ಅಂದರೆ ಭಾಷೆ ಮಾತ್ರವಲ್ಲದೆ ಇತರ ಅಭಿವ್ಯಕ್ತಿಗಳನ್ನು ಗಮನಿಸುತ್ತೇವೆ. ಉದಾಃ ಚಿತ್ರಕಲೆ. ಅಜಂತದಲ್ಲಿ, ಎಲ್ಲೋರದಲ್ಲಿರುವ ಗುಹೆಯಂತೆಯೇ ಕನ್ನಡದಲ್ಲೂ ಚಿತ್ರಕಲೆ ಬೆಳೆದುಬಂತು. ಆಮೇಲೆ ಚಾಲುಕ್ಯರ ಕಾಲಕ್ಕಂತೂ ದೊಡ್ಡ ಪ್ರಯೋಗವೇ ನಡೆಯಿತು. ದೇವಸ್ಥಾನಗಳನ್ನು ಕಟ್ಟುವ ಹಾಗೂ ಚಿತ್ರಕಲೆಯನ್ನು ಅಭಿವ್ಯಕ್ತಿ ಮಾಡುವ ಪ್ರಯತ್ನ. ಇಡೀ ಪ್ರಪಂಚಕ್ಕೆ ಇದು ಅದ್ಭುತ ಪ್ರಯೋಗ-ಬಾದಾಮಿ / ಐಹೊಳೆಯಲ್ಲಿ ಇದನ್ನು ಕಾಣಬಹುದು. ಈ ಧಾರೆಯನ್ನು ಹೊರತುಪಡಿಸಿದರೆ ಇರುವ ಇನ್ನೊಂದು ಧಾರೆ ರಾಜತ್ವದ ಧಾರೆ. ಈ ಎಲ್ಲ ಧಾರೆಗಳು ಸೇರುತ್ತಿರುವ ಬಿಂದು ಹತ್ತನೇ ಶತಮಾನ ಮತ್ತು ಕವಿರಾಜಮಾರ್ಗ. ಕವಿರಾಜಮಾರ್ಗದಲ್ಲಿ ನೃಪತುಂಗ ಏನು ಹೇಳುತ್ತಿದ್ದಾನೆ ಎಂಬುದಕ್ಕಿಂತ ಈ ಹತ್ತನೇ ಶತಮಾನದ ವಿವೇಕ – ಕನ್ನಡದ ಜನಪದ ವಿವೇಕ ನೃಪತುಂಗನಿಂದ ಹಾಗೆ ಹೇಳಿಸಿತು ಎಂದು ತಿಳಿಯಬೇಕು. ಅವನಿಗೆ ವಿಲಕ್ಷಣ ಸಮಸ್ಯೆಗಳಿದ್ದವು. ಇವತ್ತು ನಮಗಿರುವಂತೆಯೇ. ಉದಾ ತಮಿಳರು ಕ್ರಿ.ಪೂ. ಒಂದನೇ ಶತಮಾನದ ಎಡ-ಬಲದಲ್ಲಿ ಭಾಷೆ / ಲಿಪಿ ಕಂಡುಕೊಂಡರು. ಅವರು ತಮಗೆ ಬೇಕಾದ ೨೫-೨೬ ಉಚ್ಛಾರದ ಅಕ್ಷರಗಳನ್ನು ಮಾತ್ರ ಆಯ್ದುಕೊಂಡರು (ನಮಗೆ ಇಷ್ಟೇ ಸಾಕು ಎಂದು). ಕನ್ನಡ ಇದಾದ ಎರಡು ಶತಮಾನಗಳ ನಂತರ ೫೨ ಅಕ್ಷರಗಳನ್ನು ಉಳಿಸಿಕೊಂಡಿತು. ಯಾಕೆಂದರೆ ನಮ್ಮ ಉಚ್ಛಾರಗಳು ಸೀಮಿತವಾಗಿದ್ದರೂ ಇತರ ಜನರ ಉಚ್ಛಾರಗಳು, ಭಾಷೆಗಳು ನಮ್ಮ ಸುತ್ತಮುತ್ತಲೂ ಇದ್ದೇ ಇದ್ದಾವಲ್ಲ. ಅಂದರೆ ಬೇರೆ ಜನಾಂಗಗಳು, ಧರ್ಮಗಳು, ಭಾಷೆಗಳು ನಮ್ಮ ಸುತ್ತಮುತ್ತಲೂ ಇರುವುದರಿಂದಲೇ ಕನ್ನಡವು ಇವೆಲ್ಲವನ್ನೂ ಸಮಗ್ರವಾಗಿ ನೋಡಲು ಪ್ರಯತ್ನಿಸಿತು. ಆದ್ದರಿಂದಲೇ ನಾವು ಎಲ್ಲವನ್ನೂ ಇಟ್ಟುಕೊಳ್ಳಬೇಕು ಎಂಬ ಗುಣದಿಂದಾಗಿ ಕನ್ನಡವು ಹೆಚ್ಚು ಅಕ್ಷರಗಳನ್ನು ಉಳಿಸಿಕೊಂಡಿತು. ಕನ್ನಡದಲ್ಲಿ ನಾವು ಎಲ್ಲವನ್ನೂ ಇಟ್ಟುಕೊಳ್ಳಬೇಕು ಎಂಬ ಗುಣ ಇದೆ.

 • ನಾನು ಮೊದಲು ಎತ್ತಿದ ಪ್ರಶ್ನೆಗೆ ಪರೋಕ್ಷವಾಗಿ ಉತ್ತರಿಸುತ್ತಿದ್ದೀರಿ. ರೀತಿ ಕನ್ನಡದಲ್ಲಿ ೫೨ ಅಕ್ಷರ ಇಟ್ಟುಕೊಂಡಿದ್ದರಿಂದ ನಮಗೆ ಕೇವಲ ಉಚ್ಛಾರ ಮಾತ್ರವಲ್ಲದೇ ಸುತ್ತ ಮುತ್ತಲಿನ ಜಗತ್ತಿನ ಇತರರಿಂದ ಕಲಿಯುವ ಗುಣವನ್ನು ಕನ್ನಡ ಪಡೆದುಕೊಂಡಿದೆ. ಬೇರೆಯವರಿಂದ ಕಲಿಯುವ ಪ್ರಯತ್ನವನ್ನು ಕನ್ನಡ ಮೊದಲಿನಿಂದಲೂ ಮಾಡಿದೆ.

ಹೌದು. ಹೌದು. ಅದು ಒಂದು ಬಹಳ ದೊಡ್ಡ ಮಾರ್ಗ. ಯಾಕೆಂದರೆ ಮೊನ್ನೆ ಇಲ್ಲಿ ಯಾರೋ ತಮಿಳರು ಇಲ್ಲಿಗೆ ಬಂದಿದ್ದರು. ನಾನು ಅವರನ್ನು ಕೇಳಿದೆ. ನೀವು ಹೇಗೆ ಬಿಲ್ ಕ್ಲಿಂಟನ್ ಎಂದು ಬರೆಯುತ್ತೀರಿ ಎಂದು ಕೇಳಿದೆ. ಇವತ್ತು ನ್ಯೂಸ್‌ ಪೇಪರ್‌ಗಳಲ್ಲಿ ತಮಿಳಿನಲ್ಲಿ ಇಲ್ಲದ ನೂರಾರು ಉಚ್ಛಾರಗಳನ್ನು ಬರೆಯಬೇಕಾಗುತ್ತದೆ.

 • ಮಹಾತ್ಮಾ ಗಾಂಧಿ ಎಂದು ಬರೆಯಲೂ ಆಗುವುದಿಲ್ಲ, ಕಾಂತಿ ಎಂದು ಬರೆಯುತ್ತಾರೆ.

ಹೌದು ಕಾಂತಿ ಎಂದು ಬರೆಯಬೇಕು ಅಥವಾ ಪಾಂದಿ ಎಂದು ಬರೆಯಬೇಕು. ಈ ಸಮಸ್ಯೆಗಳನ್ನೆಲ್ಲ ಆವತ್ತೇ ಕನ್ನಡ ನೋಡಿತ್ತು ಎಂದು ಕಾಣುತ್ತದೆ. ಅದಕ್ಕೆ ಐತಿಹಾಸಿಕ ಕಾರಣಗಳೂ ಇವೆ. ನಿಜ ಅದು ಬೇರೆ. ಅಂತೂ ಕನ್ನಡ ಹೀಗೆ ಒಟ್ಟಾಗಿ ಬದುಕುವಂಥ ಸ್ಥಿತಿಯನ್ನು ಹೇಗೆ ಪಡೆಯುವುದು ಎಂದು ಆ ಕಾಲಕ್ಕೇ ಯೋಚಿಸಿತ್ತು. ಅದಕ್ಕೆ ಕವಿರಾಜ ಮಾರ್ಗದಲ್ಲಿ ಆತ ಒಬ್ಬ ದೊಡ್ಡ ಕವಿಯಲ್ಲ. ಕೇವಲ ಒಬ್ಬ ಕವಿ. ಅಥವಾ ಆತ ಕವಿಗಳ ಕವಿ. ಆತನೇನೂ ಶಾಸ್ತ್ರ ಬರೆಯಲಿಲ್ಲ. ಆದರೆ ಮುಂದಿನ ಕವಿಗಳಿಗೆಲ್ಲಾ ದಾರಿ ತೋರಿಸಿದ. ಅವನ ವಿವೇಕ ಮುಂದಿನವರಿಗೆ ಮುಖ್ಯ. ಕನ್ನಡದಲ್ಲಿ ಇವತ್ತು ಏನು ಹುಟ್ಟಿದ್ದರೂ ಅದು ಅವನಿಂದ ಹುಟ್ಟಿದ್ದು. ಹಾಗಾಗಿಯೇ ಅವನೊಬ್ಬ ದ್ರಷ್ಟಾರ. ಆತ ಕನ್ನಡ ಎಂದರೇನು ಎನ್ನುವುದನ್ನು ತೋರಿಸಿಕೊಟ್ಟ. ಕನ್ನಡ ಎಂದರೆ ಇದು ಭಾಷೆಯೂ ಹೌದು, ಜನಪದವೂ ಹೌದು, ಆಡಳಿತವೂ ಹೌದು. ಇಂಥ ಜಗತ್ತಿನ ಮಧ್ಯೆ ಕನ್ನಡ ಎಂದರೇನು? ಇದನ್ನು ಏಕೆ ನಿರ್ದಿಷ್ಟ ಭೌಗೋಳಿಕೆ ಸೀಮೆಯೊಳಗೆ ಇಟ್ಟುಕೊಳ್ಳಬೇಕು? ಅಥವಾ ಈ ಭಾಷೆಯನ್ನು ಯಾಕೆ ನೀನು ಈ ರಾಜತ್ವದ ಮೂಲವಾಗಿ ಇಟ್ಟುಕೊಳ್ಳಬೇಕು ಎಂದು ಕವಿ ತಿಳಿಸುತ್ತಾನೆ. ಅಲ್ಲಿ ಅವನು ಹೇಳುವ ಒಂದು ವಿವೇಕ ಎಂದರೆ ’ಕಾವೇರಿಯಿಂದ ಗೋದಾವರಿಯವರೆಗೆ ಕನ್ನಡದೊಳ್ ಭಾವಿಸಿದ ಜನಪದ’. ಅಂದರೆ ’ಇದು ಭಾವಿಸಿದ್ದು’. ಕನ್ನಡ ಎಂದರೆ ಭಾಷೆಯೂ ಹೌದು, ದೇಶವೂ ಹೌದು, ಜೀವನಕ್ರಮವೂ ಹೌದು. ಎಲ್ಲವೂ ಹೌದು. ಕನ್ನಡ ಎನ್ನುವ ತತ್ತ್ವ ಎನ್ನುವುದೊಂದಿದೆ. ಈ ತತ್ತ್ವದೊಳಗೆ ಇರುವುದು ಭಾಷೆ, ಸಾಹಿತ್ಯ ಹಾಗೂ ಇತರ ಅಂಗಗಳು. ಇಂಥ ತಾತ್ತ್ವಿಕ ಚಿಂತನೆಗಳನ್ನೆಲ್ಲ ಕವಿರಾಜಮಾರ್ಗಕಾರ ಕೊಟ್ಟ.

 • ಪಂಪನಿಂದ ಇವತ್ತಿನವರೆಗೂ ಲೇಖಕನಾದವನು ನಾನೊಂದು ಸಣ್ಣ ಪ್ರದೇಶದಲ್ಲಿ ಬರೆಯುವ ಲೇಖಕ ಆದರೆ ಭಾರತೀಯ ಲೇಖಕ ಎಂದು ತಿಳಿದು ಬರೆಯುತ್ತಾನೆ.

ಜಗತ್ತಿನ ಲೇಖಕ ಎಂದು ತಿಳಿದುಕೊಂಡು ಬರೆಯುತ್ತಾನೆ.

 • ಕುವೆಂಪು, ಬೇಂದ್ರೆ, ಮಾಸ್ತಿ ಇವರೂ ಹೀಗೆಯೇ ತಿಳಿದುಕೊಂಡು ಬರೆಯುತ್ತಾರೆ. ಬೇಂದ್ರೆ ಬಗ್ಗೆ ಜಗತ್ತಿನ ಒಳ್ಳೆಯ ಕವಿ ಎಂದು ಮಾಸ್ತಿ ಹಿಂದೆಯೇ ಮುನ್ನುಡಿ ಬರೆದಿದ್ದಾರೆ. ಅಂದರೆ ಇತ್ತೀಚಿನ ಆಲೋಚನಾ ಕ್ರಮ ಏನಿದೆ. ’ಇವೆಲ್ಲ ಸಣ್ಣ ಸಣ್ಣ ಭಾಷೆಗಳು ಇವುಗಳನ್ನು ನಾವು ರಕ್ಷಿಸಬೇಕುಎಂಬ ಯೋಚನಾಕ್ರಮ ಇದನ್ನು ನಾವು ಯೋಚನೆಯೇ ಮಾಡಿರಲಿಲ್ಲ. ಆದರೆ ಅದನ್ನು ಒಂದು ದೌರ್ಬಲ್ಯ ಎಂದು ಕೆಲವರು ಭಾವಿಸುತ್ತಾರೆ. ಇಂತಹ ಸಂದರ್ಭದಲ್ಲಿ ನಮ್ಮ ಶಕ್ತಿಯನ್ನು ಉಳಿಸಿಕೊಂಡು ನಾವು ಬೇರೆಯಾಗದೇನೆ ಮೂಲತತ್ತ್ವವನ್ನು ಉಳಿಸಿಕೊಂಡು ಚೆಲುವ ನಾಡಿನ ಕಲ್ಪನೆಯನ್ನು ಎಲ್ಲಾ ಕಡೆ ಮಾಡಬಹುದೇ? ನೀವು ಹೆಗ್ಗೋಡಿನಲ್ಲಿ ಕೆಲಸ ಮಾಡುತ್ತಿರುವಂತೆ ಇಡೀ ನಾಡಿನಲ್ಲಿ ಮಾಡಲು ಸಾಧ್ಯವೇ? ತರಹದ (ಹೆಗ್ಗೋಡಿನಲ್ಲಾಗುತ್ತಿರುವಂತೆ) ಚಳವಳಿಗಳು ಮುಂದುವರೆಯುತ್ತಿದೆಯೇ? ಅಥವಾ ಚಳವಳಿಗೆ ಒಂದು ಕಾಲದಲ್ಲಿ ಉಬ್ಬರವಿರುವಂತೆ ತಗ್ಗಿಬಿಡುವ ಸಾಧ್ಯತೆಯೂ ಇದೆಯೇ? ಸಾಧ್ಯತೆಯೂ ಇರುತ್ತದೆ ಅಲ್ಲವೇ? ಏಕೆಂದರೆ ಸಮೂಹ ಮಾಧ್ಯಮಗಳು ಮುಖ್ಯವಾಗಿ ಟಿವಿಯಲ್ಲಿ ಶಕ್ತಿಯುತವಾಗಿ ಬರುತ್ತಿರುವುದು ನ್ಯೂಸ್, ಅದರಲ್ಲೂ ಇಂಗ್ಲಿಷ್ ನ್ಯೂಸ್, ಹಿಂದಿಯನ್ನಾಡುವ ಪ್ರದೇಶಗಳು ಹಾಗೂ ಹಳ್ಳಿಗಾಡಿನಲ್ಲಿ ಇಂಥ ನ್ಯೂಸ್‌ಗೆ ಜನ ಸ್ವಿಚ್ ಆನ್ ಆಗಿರುತ್ತಾರೆ. ಕನ್ನಡ ಭಾಷೆಯ ಒಳಗೇ ನೀವು ಹೆಗ್ಗೋಡಿನಲ್ಲಿ ಬದುಕುತ್ತಿರುವಂತೆ ಬದುಕಲು ಸಾಧ್ಯವಿಲ್ಲವೇ? ಬೆಂಗಳೂರಿನಲ್ಲಿ ಇಂಥ ಅಪಾಯ ಹೆಚ್ಚು ಕಾಣುತ್ತಿದೆ.

ಇದು ಸ್ವಲ್ಪ ಕಷ್ಟದ ಮಾತೇ. ಹತ್ತನೇ ಶತಮಾನದ ವಿಷಯವನ್ನು ಇಪ್ಪತ್ತನೇ ಶತಮಾನದ ಇವತ್ತಿನ ಈ ಮೀಡಿಯಾ ಯುಗಕ್ಕೆ ಅನ್ವಯಿಸುವುದು ಸ್ವಲ್ಪ ಕಷ್ಟ.

 • ಹತ್ತನೇ ಶತಮಾನದಲ್ಲೂ ಇಂಥದ್ದೆ ಸಮಸ್ಯೆ ಇತ್ತು. ನಮ್ಮ ಪವಿತ್ರ ಗ್ರಂಥಗಳು ಸಂಸ್ಕೃತದಲ್ಲಿದ್ದವು. ಆದರೆ ಜೈನರು ತಮ್ಮ ಪವಿತ್ರಗ್ರಂಥಗಳನ್ನು ಕನ್ನಡದಲ್ಲಿ ಮಾಡಿಕೊಂಡಿದ್ದರು.

ಹೌದು. ನಂತರ ಅವರೇ ಅದನ್ನು ಸಂಸ್ಕೃತದಲ್ಲಿ ಬರೆಯಲು ಪ್ರಾರಂಭಿಸಿದರು.

 • ಹೌದು. ಲಿಂಗಾಯಿತರು ಕನ್ನಡದಲ್ಲಿ ಬರೆಯಲು ಪ್ರಾರಂಭಿಸಿದಂತೆ. ಕನ್ನಡ ಎನ್ನುವುದು ಎರಡೂ ಧರ್ಮಗಳಿಗೆ ಧರ್ಮದ ಭಾಷೆಯೂ ಆಯಿತು ಅಲ್ವೆ? ಕನ್ನಡ ಎನ್ನುವುದು ಕೇವಲ ವ್ಯಾಪಾರ, ಧರ್ಮ, ರಾಜಕೀಯ ಮಾಡುವ ಭಾಷೆ ಅಲ್ಲ. ಉದಾಹರಣೆಗೆ ಅರೇಬಿಕ್ ಭಾಷೆಯಲ್ಲಿ ಟೂತ್‌ಪೇಸ್ಟ್‌ ಜಾಹಿರಾತು ಇದ್ದರೆ ಅರೇಬಿಕ್ ಭಾಷೆಯಲ್ಲೂ ಇರುತ್ತದೆ. ಏಕೆಂದರೆ ಅರೇಬಿಕ್ ಜನ ಅರೇಬಿಕ್ ಅನ್ನು ಬಯಸುತ್ತಾರೆ. ಆದರೆ ಕನ್ನಡದಲ್ಲಿ ಪರಿಸ್ಥಿತಿ ಹೀಗಿಲ್ಲ. ನಮಗೆ ಏನು ಎಂದರೆ ಕವಿರಾಜಮಾರ್ಗದಲ್ಲಿ ಕನ್ನಡವು ಉಳಿದ ಎಲ್ಲವನ್ನು ತನ್ನೊಳಗೆ ವಿಲೀನಗೊಳಿಸುವ ಹಾಗೂ ತಾನು ಎಲ್ಲದರಲ್ಲೂ ವಿಲೀನವಾಗುವ ಧೈರ್ಯದಲ್ಲಿತ್ತು. ಧೈರ್ಯದಲ್ಲಿ ಒಂದು ಭಾಷೆಯ ಇರಬೇಕು. ಇಂತಹ ಧೈರ್ಯದಲ್ಲಿ ನಾವು ಕೂಡಾ ಇದ್ದೇವೆ. ನೀವು ಕುಡಾ ಧೈರ್ಯದಲ್ಲೆ ಕೆಲಸ ಮಾಡುತ್ತಿದ್ದೀರಿ. ಹೆಗ್ಗೋಡಿಗೆ ಜಗತ್ತಿನ ಯಾರೇ ಬೇಕಾದರೂ ಬಂದು ಕೆಲಸ ಮಾಡಬಹುದು. ಉದಾಃ ಜರ್ಮನಿಯ ಫ್ರಿಡ್ಜ್ ಬೆನವಿಟ್ಜ್ ಅಂತ ಕಾಣುತ್ತದೆ. ಕನ್ನಡದಲ್ಲಿ ಒಂದು ನಾಟಕ ಮಾಡಿಸಿದ್ದಾರೆ ಎಂದು ಕಾಣುತ್ತದೆ.

ಹಾಂ. ಫ್ರಿಡ್ಜ್ ಬೆನವಿಟ್ಜ್ ಮೂರ‍್ನಾಲ್ಕು ನಾಟಕ ಆಡಿಸಿದ್ದಾರೆ. ಅವರು ಕನ್ನಡದಲ್ಲಿ ನಾಟಕ ಆಡಿಸಿದ್ದಾರೆ.

 • ರೀತಿಯ ಒಂದು ಧೈರ್ಯದಲ್ಲಿ ಕೆಲಸ ನಡೆಯುತ್ತಿದೆ. ನಿಮಗೆ ಯಾವುದೇ ಭಯ. ಆತಂಕಗಳು ಇದ್ದಂತಿಲ್ಲ.

ಈಗ ಹೆಗ್ಗೋಡು ಎಂಬ ಮಾತು ಬಂತಲ್ಲ ಇದನ್ನು ಎರಡು ರೀತಿಯಿಂದ ನೋಡಬಹುದು. ಜಾಗತೀಕರಣವೋ ಅಥವಾ ಇನ್ನೊಂದೊ. ಇದಕ್ಕೆ ವಿರುದ್ಧವಾಗಿ ಒಂದು ಊರು, ಸಂಸ್ಥೆ, ವ್ಯಕ್ತಿ ಕೆಲಸ ಮಾಡುತ್ತಿದ್ದಾನೆ ಎಂದು ನೋಡಬಹುದು ಅಥವಾ ಒಂದು ಸಮುದಾಯದ ಕೆಲಸವನ್ನು ಇದು / ಇವನು ಮುಂದುವರೆಸುತ್ತಿದೆ ಎಂದೂ ನೋಡಬಹುದು. ನನಗಿರುವ ಧೈರ್ಯವೇ ಇದು. ನಾನೇನೋ ನಮ್ಮ ಊರು ಅಥವಾ ನೀನಾಸಂ ಈ ರೀತಿ ಕೆಲಸ ಮಾಡುತ್ತಿದೆ ಎನ್ನುವುದಕ್ಕಿಂತ ಬಂದಿದೆ ಎಂದು ತಿಳಿದಿದ್ದೇನೆ. ಅದರಲ್ಲಿ ನನ್ನ ಕೆಲಸವೂ ಒಂದು. ಹಾಗಿರುವುದರಿಂದಲೇ ತಾತ್ತ್ವಿಕವಾಗಿ ನಾಳೆ ನಾವು ಹೇಗೆ ರೆಸಿಸ್ಟ್ ಮಾಡುತ್ತೇವೆ ಎಂದು ನಾನು ಖಚಿತವಾಗಿ ಹೇಳಲಾರೆ. ಗೊತ್ತಿಲ್ಲ. ಆದರೆ ಇಂಥ ಕ್ರಿಯೆಗಳು ನಡೆಯುತ್ತಿರುವುದರಿಂದ ಭಾರತ ಚೀನಾದಂಥ ವಿಶಾಲವಾದ ದೇಶಗಳಲ್ಲೂ ಇಂಥ ಕ್ರಿಯೆಗಳು ನಡೆಯುತ್ತಿರುವುದರಿಂದ ನಮಗೊಂದು ಶಕ್ತಿ ಸಿಕ್ಕಿದೆ. ಇಂಥ ಶಕ್ತಿಯಿಂದ ಜಾಗತೀಕರಣದ ಅಪಾಯದಿಂದ ತಪ್ಪಿಸಿಕೊಳ್ಳಬಹುದೇನೋ ಎಂಬ ಆಸೆ ನನ್ನದು.

 • ಜಾಗತೀಕರಣವನ್ನು ಸುಮ್ಮಸುಮ್ಮನೆ ಎದುರಿಸಲು ಸಾಧ್ಯವಿಲ್ಲ. ಇದು ನಮ್ಮನ್ನು ಮೀರಿದ ಶಕ್ತಿಯಾಗಿ ವ್ಯಾಪಿಸುತ್ತಿದೆ.

ಹೌದು. ಹೌದು.

 • ಈಗ ನೋಡಿ ಹೊಸ ಸರ್ಕಾರ ಬಂದಿದೆ. ಹೊಸ ಸರ್ಕಾರ ಬಂದರೂ ಅವರು ಮುಂದುವರೆಸುತ್ತಿರುವುದು ಮನಮೋಹನ ಸಿಂಗರ ಉದಾರೀಕರಣವನ್ನೆ. ಇವರ ನಂತರದ ಯಾವುದೇ ಸರ್ಕಾರ, ಯಾವ ಪಕ್ಷ ಅಧಿಕಾರಕ್ಕೆ ಬಂದರೂ ಜಾಗತಿಕ ಒತ್ತಡಕ್ಕೆ ಸಿಲುಕಿ ಹಿಂದಿನ ಉದಾರೀಕರಣವನ್‌ಏ ಮುಂದುವರೆಸುತ್ತಾರೆ. ಹಾಗೆಯೇ ಮುಂದುವರೆಯುತ್ತದೆ. ಆದರೆ ನಾವು ಕನ್ನಡವನ್ನು ಅಪೇಕ್ಷಿಸುವುದರ ಜೊತೆಗೆ ನಮ್ಮ ಪರಿಸರದ ಮೇಲೆ ಧಾಳಿಯಾಗದೇ ಇರುವಂತೆಯೂ ನೋಡಿಕೊಳ್ಳಬೇಕಾಗುತ್ತದೆ. ದಲಿತರು ಸಮಾನತೆ ಕೇಳುವ ಚಳವಳಿ, ರೈತರು ತಮ್ಮ ಬೆಳೆಗೆ ಬೆಲೆ ಕೇಳುವ ಚಳವಳಿ ಮುಂತಾದವನ್ನು ನೆನಪಿಸಿಕೊಳ್ಳಬಹುದು.

ಸುಮಾರು ಐದು ಚಳವಳಿಗಳು ಕರ್ನಾಟಕದಲ್ಲಿತ್ತು.

 • ಹೌದು ಪರಿಸರ ಇತ್ಯಾದಿ. ಇವುಗಳ ಜೊತೆಯಲ್ಲೇ ಕನ್ನಡವನ್ನು ಕುರಿತು ಆಲೋಚಿಸಬೇಕು. ಇವೆಲ್ಲ ಉಳಿದರೆ ಕನ್ನಡ ಉಳಿಯುವುದು. ಕವಿರಾಜಮಾರ್ಗದಲ್ಲಿ ಹೇಳಿರುವಂತೆ ತಾನು ಜಗತ್ತಿನಲ್ಲಿ ವಿಲೀನವಾಗುವ ಹಾಗೂ ಜಗತ್ತು ತನ್ನಲ್ಲಿ ವಿಲೀನವಾಗುವ ವಿಶಿಷ್ಟತೆಯ ಗುಣವನ್ನು ನಾವು ಇವತ್ತು ರೂಢಿಸಿಕೊಳ್ಳಬೇಕಾಗಿದೆ. ನಮ್ಮ ವಿಶಿಷ್ಟತೆಯನ್ನು ಕಳೆದುಕೊಳ್ಳಬಾರದು. ಗಾಂಧೀಜಿ ಅದನ್ನು ಎಲ್ಲ ಕಿಟಕಿಗಳು ತೆರೆದಿರಲಿ. ಗಾಳಿಬೆಳಕು ಎಲ್ಲ ಕಡೆಗಳಿಂದ ಹರಿದು ಬರಲಿ. ಆದರೆ ಊರಿದ ನನ್ನ ಪಾದಗಳನ್ನು ಹರಿವಿನಲ್ಲಿ ತೂರಿ ಹೋಗಲು ಬಿಡಲಾರೆಎಂಬ ಮಾತನ್ನ ಆಡಿದ್ದರು. ನಾವೂ ಅದನ್ನು ಹೇಳುತ್ತಿದ್ದೇವೆ. ಭಾರತವೊಂದು ಒಕ್ಕೂಟವಾಗಬೇಕು. ಕನ್ನಡ ನಾಡು ಭಾರತದ ಒಳಗಿನ ವಿಕೇಂದ್ರಿಕರಣದ ಒಂದು ಭಾಗವಾಗಬೇಕು. ಹಾಗೆಯೇ ಕರ್ನಾಟಕದ ಒಳಗೂ ಮತ್ತೆ ವಿಕೇಂದ್ರೀಕರಣವಾಗಬೇಕಾಗುತ್ತದೆ. ಅದಕ್ಕೆ ನಿನ್ನ ಕಾಳಜಿಗಳಲ್ಲಿ ನಮ್ಮ ಪಂಚಾಯತ್ ರಾಜ್ಯದ ಕಾಳಜಿಯೂ ಇದೆ. ಯಾಕೆಂದರೆ ಹೆಗ್ಗೋಡಿನ ಚಳವಳಿ ಎಂದರೆ ಬರಿ ಇಟಾಲಿಯನ್ ಸಿನಿಮಾವನ್ನು ಕನ್ನಡದಲ್ಲಿ ಮಾಡಿ ತೋರಿಸುವುದು ಅಂತಲ್ಲ. ಹಾಗೆಯೇ ಇಟಾಲಿಯನ್ ಸಿನಿಮಾವನ್ನು ಸಂಪೂರ್ಣ ನಿರಾಕರಿಸುವುದೂ ಅಲ್ಲ. ಹೀಗಿದ್ದಾಗ ರೀತಿಯ ವಿವೇಕವನ್ನು ಉಳಿಸಿಕೊಂಡು ಹೋದಾಗ ಪ್ರಾಯಶಃ ಚೆಲುವ ಕನ್ನಡ ನಾಡಿನ ಕಲ್ಪನೆಯನ್ನು ಸರಿಯಾಗಿ ಮಾಡಬಹುದು. ನೀನು ಕೂಡಾ ಇದೇ ಅರ್ಥದಲ್ಲಿ ಹೇಳಿದ್ದೀಯಾ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಎಂದಾಗ.

ಹಾಂ. ಹಾಗಂತ ಬೇಂದ್ರೆ ಹೇಳಿದ್ದರು. ಕಾಳಿಂಗರಾಯರು ’ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಎಂಬುದನ್ನು ’ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು’ ಎಂದು ಹಾಡಿದಾಗ ಬೇಂದ್ರೆ, ಹಾಗೆ ಹಾಡಬಾರದು ಎಂದಿದ್ದರು.. ಕಾಳಿಂಗರಾಯರಿಗೆ ಇದು ಸರಿಯಾಗಿ ಅರ್ಥವಾಗಿರಲಿಲ್ಲ. ಯಾಕೆ ಬೇಂದ್ರೆ ಈ ರೀತಿ ಹೇಳಿದರು ಎನ್ನುವುದು ಅವರಿಗೆ ಗೊತ್ತಾಗಲಿಲ್ಲ. ಬೇಂದ್ರೆಯವರ ಪ್ರಕಾರ ಕನ್ನಡ ನಾಡು ಉದಯವಾಗುವುದು ಒಂದು ತಾತ್ತ್ವಿಕ ಕಲ್ಪನೆ. ಅವರ ಪ್ರಕಾರ ಕನ್ನಡ ನಾಡು ಉದಯವಾಗುವುದೇ ಇಲ್ಲ. ಇದು ಯಾವುದೋ ಒಂದು ಕಾಲದಲ್ಲಿ ಉದಯವಾಗಿ ಹಾಗೆಯೇ ಇರುವಂಥದಲ್ಲ. ಇದನ್ನು ದಿನದಿನ ಉದಯ ಮಾಡಬೇಕು. ಇದೊಂದು ವ್ರತ, ಸತ್ಯ ಅಲ್ಲ. ಕಾಲಕ್ಕೆ ಕಟ್ಟುಬಿದ್ದು ಇದು ಯಾವುದೋ ಒಂದು ಕಾಲದಲ್ಲಿ ಉದಯವಾಗಿರುವಂಥದ್ದಲ್ಲ. ಒಂದೊಂದು ಕ್ಷಣಕ್ಕೂ ಹೊಸ ಹೊಸ ಕನ್ನಡ ನಾಡನ್ನು ಉದಯಿಸಬೇಕು. ಉದಯ ಕನ್ನಡ ನಾಡಿಗೆ ಚಲನೆ ಇದೆ. ಇದು ನಮಗೆ ಚಾಲೆಂಜ್ ಆಗಿ ನಮ್ಮನ್ನು ಮುಂದಕ್ಕೆ ಕರೆದುಕೊಂಡು ಹೋಗುವ ಆದರ್ಶವಾಗಬೇಕು. ನನಗೆ, ನಮ್ಮ ಚಳಿಗಳಿಗಳಲ್ಲಿ ಇರುವ ತೊಂದರೆ ಏನೆಂದರೆ ಅವುಗಳಲ್ಲಿ ಹೊಸ ಹೊಸ ಕನ್ನಡ ದಿನಂಪ್ರತಿ ಬರುತ್ತದೆ ಎಂಬ ಕಲ್ಪನೆ ಇಲ್ಲದೆ ಇರುವುದು. ಈ ಕಲ್ಪನೆ ಇಲ್ಲದೇ ಹೋದರೆ ನಾವು ಮೂಲಭೂತವಾದಿಗಳಾಗುತ್ತೇವೆ. ಇಲ್ಲದೆ ಹೋದರೆ ಸುಮ್ಮನೇ ಕನ್ನಡವನ್ನು ಕುರಿತು ಹೆದರಿಕೆ / ಭಯ ಪಡುತ್ತೇವೆ. ಯಾರೋ ಬಂದು ನಮ್ಮ ಮೇಲೆ ದಾಳಿ ಮಾಡಿಬಿಡುತ್ತಾರೆ ಎಂಬ ಕಾಲ್ಪನಿಕ ಭಯ ಚಳುವಳಿಗಳಿಗೆ ಇರುವಂತೆ ತೋರುತ್ತದೆ. ಹಾಗಾಗಿಯೇ ಬೆಂಗಳೂರಿನಲ್ಲಿ ಯಾರ್ಯಾರ ಮೇಲೋ ಧಾಳಿ ಮಾಡುವುದು ಇದೇ ಕಾಲ್ಪನಿಕ ಭಯದಲ್ಲಿ. ಹಾಗೆ ಯಾರಿಗೋ ವಿರುದ್ಧವಾಗುವ ಹೊತ್ತಿನಲ್ಲಿ ನಾವು ಜಗತ್ತಾಗಬೇಕು ಮತ್ತು ಜಗತ್ತನ್ನು ನಮ್ಮಲ್ಲಿ ವಿಲೀನಗೊಳಿಸಬೇಕು ಎಂಬ ವಿವೇಕವನ್ನು ನಾವು ಮರೆತುಬಿಡುತ್ತೇವೆ. ನಮ್ಮಲ್ಲಿ ಅನೇಕ ಚಳವಳಿಗಳ ಹಣೆಬರಹ ಹೀಗೇ ಇದೆ. ಈ ಜಾಗತೀಕರಣವನ್ನು ವಿರೋಧಿಸುವ ಕಾಲದಲ್ಲಿ ಮನುಷ್ಯ ನಿಜವಾದ ಜಾಗತೀಕರಣ ಆಗದೇ ಬದುಕಲೇ ಸಾಧ್ಯವಿಲ್ಲ ಎಂಬ ವಿವೇಕವನ್ನು ಉಳಿಸಿಕೊಳ್ಳಬೇಕು. ಅಂದರೆ ಯಾವ ಹಂತದಲ್ಲಿ ಜಾಗತೀಕರಣ ಆಗಬೇಕು, ಯಾವ ಹಂತದಲ್ಲಿ ಆಗಬಾರದು ಎಂಬ ವಿವೇಕ ನಮಗೆ ಬೇಕು.

 • ಹೌದು ರೀತಿಯ ವಿವೇಕವನ್ನು ಮಾರ್ಗದೇಶಿ ಕಲ್ಪನೆಯಲ್ಲೂ ನೋಡಬಹುದು. ವಿವೇಕ ಮುಂದಿನ ನಮ್ಮ ಶತಮಾನದಲ್ಲಿ ಉಳಿಯುತ್ತದೆ ಎಂಬ ನಂಬಿಕೆ ನಿನಗಿರುವಂತೆ ಕಾಣುತ್ತದೆ.

ಹಾಂ. ಹೌದು. ಈ ನಂಬಿಕೆ ನನಗಿದೆ. ಇ‌ಲ್ಲದಿದ್ದರೆ ನಮ್ಮ ಸಂಸ್ಥೆ ಯಾಕೆ ಹೀಗೆ ಕೆಲಸ ಮಾಡುತ್ತಿತ್ತು? ಮತ್ತು ಇಡೀ ನಮ್ಮ ಸಮುದಾಯ ಈ ರೀತಿಯ ಶಕ್ತಿಯನ್ನು ಕೊಟ್ಟು ಯಾಕೆ ಕೆಲಸ ಮಾಡಿಸುತ್ತಿತ್ತು?

 

—-
ಅಕ್ಷರ ರೂಪ:
ಅವಿನಾಶ್ ಟಿ.
ಮಹದೇವ್
ಪ್ರಕಾಶ್ ನಿರ್ದೇಶನದಲ್ಲಿ ಕೃತಿ ಬ್ಯಾನರ್‌ನಡಿ ೨೦೦೧ ರಲ್ಲಿ
ದೂರದರ್ಶನದ ಚೆಲುವ ಕನ್ನಡ ನಾಡುಸರಣಿಗಾಗಿ ನಡೆಸಿದ ಸಂವಾದ

ಕರ್ನಾಟಕದ ಪ್ರಸಿದ್ಧ ರಂಗಕರ್ಮಿ, ಸಂಘಟಕ ಮತ್ತು ಸಾಹಿತಿ ಕುಂಟಗೋಡು ವಿಭೂತಿ ಸುಬ್ಬಣ್ಣ ಸಾಗರ ತಾಲ್ಲೂಕಿನ ಹೆಗ್ಗೋಡಿನಲ್ಲಿ ೧೯೩೭ ಫೆಬ್ರವರಿ ೨೦ ರಲ್ಲಿ ಜನಿಸಿದರು. ಹೆಗ್ಗೋಡಿನಂಥ ಚಿಕ್ಕ ಊರಿನಲ್ಲಿ ನೀಲಕಂಠೇಶ್ವರ ನಾಟ್ಯಸೇವ ಸಂಘ (ನೀನಾಸಂ) ಕಟ್ಟಿದ ಸುಬ್ಬಣ್ಣ ಅದರ ರಂಗ ಚಟುವಟಿಕೆಗಳ ಮೂಲಕ ಅಂತರಾಷ್ಟ್ರೀಯ ಗಮನ ಸೆಳೆದರು. ಆ ಮೂಲಕ ಗ್ರಾಮೀಣ ರಂಗಭೂಮಿಗೆ ತನ್ನದೇ ಆದ ಸ್ಥಾನ, ಪ್ರತಿಷ್ಠೆಗಳನ್ನು ತಂದುಕೊಟ್ಟರು. ಸುಬ್ಬಣ್ಣ ಅವರು ಮುಖ್ಯವಾಗಿ ಕವಿರಾಜ ಮಾರ್ಗ ಮತ್ತು ಕನ್ನಡ ಜಗತ್ತು, ಗಾರ್ಕಿಯ ಕಥೆಗಳು, ರಾಜಕೀಯದ ಮಧ್ಯೆ ಬಿಡುವು (ಅನುವಾದ), ಅಭಿಜ್ಞಾನ ಶಾಕುಂತಲ, ಸೂಳೆ ಸನ್ಯಾಸಿ ನಾಟಕಗಳನ್ನು ರಚಿಸಿದ್ದಾರೆ. ನಾಟಕಕಾರ ಮಾತ್ರವಲ್ಲದೆ, ಅನುವಾದಕ, ಉತ್ತಮ ವಿಮರ್ಶಕ ಹಾಗೂ ಪ್ರಕಾಶಕ ಕೂಡ ಆಗಿದ್ದರು. ಚಲನಚಿತ್ರಕ್ಕೆ ಸಂಬಂಧಿಸಿದಂತೆ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಹೆಗ್ಗೋಡಿನಲ್ಲಿ ಅಕ್ಷರ ಪ್ರಕಾಶನವನ್ನು ಸ್ಥಾಪಿಸಿ, ಆ ಮೂಲಕ ಅನೇಕ ಕೃತಿಗನ್ನು ಪ್ರಕಟಿಸಿದ್ದಾರೆ. ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿ, ಕಾಳಿದಾಸ ಸಮ್ಮಾನ್, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ ಪದ್ಮಶ್ರೀ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಪುರಸ್ಕತರು. ೨೦೦೫ ಜುಲೈ ೧೬ ರಂದು ನಿಧನರಾದರು.

* * *