• ಅಂದ್ರೆ ಆವಾಗ ನಿಮಗೆ ಎಷ್ಟು ವಯಸ್ಸು ಸುಮಾರು?

ಇಪ್ಪತ್ತೆರಡನೇ ಇಸವಿ ಅಂದ್ರೆ ನನಗೆ ಇಪ್ಪತ್ತೊಂದು ವರ್ಷ, ಇಪ್ಪತ್ತು ವರ್ಷ. ಕಾಲೇಜಿ ಬಿಟ್ಟ ಮೇಲೆ ನಾನು ಒಂಟಿಯಾಗಿ ಕುಂದಾಪುರ ತಾಲ್ಲೂಕನ್ನು ತಿರುಗಾಡಲಿಕ್ಕೆ ತೊಡಗಿದೆ. ಬೇಕೆನ್ನುವಷ್ಟು ಗುಡ್ಡ ಹತ್ತಿದೆ, ಇಳಿದೆ. ಉತ್ತರ ಕರ್ನಾಟಕ ದಕ್ಷಿಣ ಕರ್ನಾಟಕದಲ್ಲೆಲ್ಲಾ ಕಾಂಗ್ರೆಸ್ಸಿನ ಪ್ರಾಪಗಾಂಡಾಕ್ಕೆ ಬೇರೆ ಬೇರೆ ಕೆಲಸದ ಮೇಲೆ ಸುತ್ತಾಡಿದೆ. ಆ ಕಾಲದಲ್ಲೇ ನಮ್ಮ ದೇಶದ ಶಿಲ್ಪ ಇಂಥಾದ್ದನ್ನ ಓದಿಕೊಂಡೆ. ನಾನಾಗಿಯೇ ಒಂಟಿಯಾಗಿ ನಿಸರ್ಗದಲಲಿ ಅಲ್ದಾಡತಕ್ಕಂಥಾದ್ದು ಬಂದ ಕಾಲದಲ್ಲಿ, ಮೊದಲು, ಅನಾದರಕ್ಕೆ ಗುರಿಯಾದಂಥ ಆ ಗುಡ್ಡ, ನದಿಗಳು ನನಗೆ ನನ್ನ ಮಾನಸಿಕ ಸಂತೋಷಕ್ಕೆ ಪುಟ ಕೊಡ್ತಾ ಹೋದವು. ಮುಂದೆ ಆ ಬಗ್ಗೆ ಹಸಿವು ಬೆಳೆದ ಹಾಗೆ, ಅದಕೆ ಪ್ರೇರಕವಾಗಿ ಓದ್ಕೊಂಡ ಹಾಗೆ, ನೋಡಿದ ಹಾಗೆ ಆಸಕ್ತಿಯೂ ಬೆಳೀತಾ ಹೋಯ್ತು. ಆದರೆ ಆರಂಭದಲ್ಲಿ ಎಲ್ಲಾ ಮಕ್ಕಳಿಗಿದ್ದ ಹಾಗೆನೇ, ಅಲ್ಲೊಂದು ಗುಡ್ಡ ಇದೆ, ಈಜಾಡಲಿಕ್ಕೆ ಕೆರೆಯಿದೆ ಅಥವಾ ಮುಳುಗಿ ಏಳಲಿಕ್ಕೆ ಸಮುದ್ರ ಇದೆ- ಅಂತ ಅಷ್ಟೇ ನಿತ್ಯವೂ, ಈಜಾಡಲಿಕ್ಕೆ ಕೆರೆಯಿದೆ ಅಥವಾ ಮುಳುಗಿ ಏಳಲಿಕ್ಕೆ ಸಮುದ್ರ ಇದೆ- ಅಂತ ಅಷ್ಟೇ ನಿತ್ಯವೂ ಹೋಗ್ತಿದ್ದೆ. ಆದರೆ ಸಮುದ್ರಕ್ಕೊಂದು ಮೂಡ್ ಇದೆ- ಎನ್ನುವ ಮಾನಸಿಕ ಬೆಳವಣಿಗೆ ಇರಲೇ ಇಲ್ಲ. ಏಸ್ತೆಟಿಕ್ ಬೆಳವಣಿಗೆ ಅನ್ನೋ ಅಂಶವೇ ಇಲ್ಲ. ಯಕ್ಷಗಾನ ಇತ್ತು. ನಮಗೇನೋ ಅದ್ಭುತವಾಗಿ ಕಾಣುತ್ತೆ. ಆ ಸಂತೋಷ ಯಾಕೆ ಆಯಿತು ಅಂತ ಅನಾಲಿಸಿಸ್ ಮಾಡಿಕೊಳ್ಳಲ್ಲ. ಸಂಗೀತ ಇದ್ದಿಲ್ಲ; ಇದ್ಯಾವ್ದೂ ಇದ್ದಿಲ್ಲ. ಅಲ್ಲಿ, ಇಲ್ಲಿ ಒಂದಿಷ್ಟು ಕುಣಿತ ಇರುತ್ತಿತ್ತು. ಆದರೆ ಇದು ಏನು ಪ್ರೇರಿಸಬಲ್ಲುದು ಎಂದು ಕೇಳಿಕೊಳ್ಳುವುದಕ್ಕೆ ಮತ್ತೂ ವೋರ್ ಇಂಟೆನ್ಸ್ ಥಿಂಕಿಂಗ್ ಭಾವನಾತ್ಮಕವಾದ ಹಿನ್ನೆಲೆ ಮೋಟಿವೇಶನ್, ಎಕ್ಸಾಂಪ್‌ಲ್- ಇವೆಲ್ಲ ಬೇಕಾಗುತ್ತೆ. ಇವನ್ನೆಲ್ಲಾ ಮುಂದೆ ನಿಸರ್ಗ, ತನ್ನ ತಿರುಗಾಟದಲ್ಲಿ ಪರ್ಯಾಯವಾಗಿ ತಂದೊದಗಿಸಿತ್ತು. ಮುಂದೆ ನಾನಾಗಿ ಅದನ್ನ ಆರಿಸಿಕೊಂಡು, ಅದು ಎಷ್ಟು ಸಾಧ್ಯವೋ ಅದನ್ನು ಹುಡುಕಿಕೊಂಡು ಅಲೆದಾಡಿದಿದ್ರಿಂದ ಅದು ಬೆಳೀಲಿಕ್ಕೆ ಕಾರಣ ಆಯ್ತು.

 • ಆಗಿನ ಕಾಲದಲ್ಲಾದ್ರೂ ವರದಾಚಾರ‍್ರು ಇಂಥವ್ರ ನಾಟಕವನ್ನು ನೋಡಿದ್ದು ಇದೆಯಾ ಸಾರ್, ನಿಮ್ಮ ಬಾಲ್ಯದಲ್ಲಿ?

ಬಾಲ್ಯದಲ್ಲಿ ಹನ್ನೆರಡು ಹದಿಮೂರನೇ ಇಸವಿಯಲ್ಲಿ ಆ ನಾಟಕ ಕಂಪನಿಗಳು ಬಂದಾಗ್ಲೇ ನಾನು ನೋಡಿದ್ದೆ. ಆ ನಾಟಕದ ಗೊಂಬೆಗಳನ್ನೆಲ್ಲಾ ಕತ್ತರಿಸಿಕೊಳ್ಳುತ್ತಿದ್ದೆ. ಲಂಕಾದಹನ, ಅಕ್ರೂರ ಏನು ಕಂಡದ್ದು, ಹನುಮಂತ ಸಮುದ್ರದ ಉಲ್ಲಂಘನೆ ಮಾಡ್ತಿದ್ದಾನೆ, ವಿಮಾನದಲ್ಲಿ ಯಾರು ಬರ್ತಿದ್ದಾರೆ, ಸರ್ಪನ್ನ ಗರುಡ ಹಿಡ್ಕೊಂಡು ಹೋಗ್ತದೆ- ಈ ಅದ್ಭುತ ಫ್ಯಾಂಟಸಿಗಳೇ ನನ್ನ ಮನಸ್ಸನ್ನು ಎಳೆದಿದೆಯೇ ಹೊರತು ನಾಟಕದ ಗಾಢವಾದ ಭಾವ ನನ್ನ ಹನ್ನೆರಡು ವರ್ಷದ ಹದಿಮೂರು ವರ್ಷದ ಹುಡುಗನಿಗೆ ಆಗಿತ್ತಾ ಅಂದ್ರೆ – ಇಲ್ಲ. ಅವರ ಹಾಡುಗಳನ್ನು ನಾನು ಬಾಯಿಪಾಠ, ಇಡೀ ಇಡೀ ಕಲೀತಾ ಇದ್ದೆ. ಅವರು ಬರೆದ ಪದ್ಯಗಳನ್ನ ಇವತ್ತೂ ಕೆಲವನ್ನ ನಾನು ಹಾಡಬಲ್ಲೆ. ಇದು ಹ್ಯಾಗೆ ಫೇರಿ ಟೇಲ್‌ನಲ್ಲಿ ಅಪೀಲ್ ಆಗ್ತದೋ ಹಾಗೆ ಆ ವಯಸ್ಸಿನಲ್ಲಿ, ಆ ಎಲಿಮೆಂಟಿಗೆ ಮುಂದೆ ಯಾವ ಯಾವ ಸ್ಥಾನ ಅನ್ನೋದನ್ನ ನಾನು ಡಿಟರ್‌ಮಿನ್ ಮಾಡಬೇಕಾಯ್ತು. ಅಂದರೆ – the natural process of child mind ಇದಕ್ಕೆ ಬೇಕಾದ ಎಲಿಮೆಂಟ್ಸ್ ನನ್ನನ್ನು ಅಪೀಲ್ ಮಾಡಿತು.

 • ಈಗಲೂ ನಿಮ್ಮಲ್ಲಿ ಚೈಲ್ಡ್ ಮೈಂಡ್ಒಳ್ಳೆ ಅರ್ಥದಲ್ಲಿ ಜಾಗೃತವಾಗಿಯೇ ಉಳಿದಿರಬೇಕು. ಇಲ್ಲದೇ ಇದ್ದರೆ ನಿಮಗೆ ಯಕ್ಷಗಾನ ಇಷ್ಟು ವಿಚಾರ ಪರವಾದ ನಿಮಗೆ ಅಷ್ಟು ಆಕರ್ಷಕವಾಗಿ ಉಳೀತಿರ್ಲಿಲ್ಲ ಅಲ್ಲವಾ ಸಾರ್?

ಆಕರ್ಷವಾಗಿ ಉಳೀತಿರ್ಲಿಲ್ಲ ಅಂದ್ರೆ ಏನಂತ?

 • You are considered to be a relationalist. ಆದರೆ ಯಕ್ಷಗಾನದ ಬಗ್ಗೆ ನಿಮಗೆ ಇರುವ ಆಸಕ್ತಿ ನೋಡಿದ್ರೆ ಚೈಲ್ಡ್ ಮೈಂಡ್ ಕಲಾವಿದನಿಗೆ ಕೊನೆಯವರೆಗೂ ಅಗತ್ಯ ಅನ್ನಿಸುತ್ತೆ, ಅಲ್ವಾ?

ಚೈಲ್ಡ್ ಮೈಂಡ್ ಅಲ್ಲ

 • ಇನ್ನೇನು ಹೇಳಬಹುದು ಸರ್. ಅದಕ್ಕೆ?

A Mind capable of forgetting itself in some other object.

 • ಅಥವಾ ವಿಸ್ಮಯ ಸಾಧ್ಯವಾಗಿರುವ ಮೈಂಡ್?

ಯಾವುದೋ ಒಪ್ಪಿಕೊಳ್ಳಿ. ನಾನೊಂದು ಕಲ್ಲು, ನಾನೊಂದು ದಿಬ್ಬ, ನಾನೊಂದು ಹಕ್ಕಿ. ಇದು ನಾಟಕದ ಒಂದು ಎಲಿಮೆಂಟ್ ಅದೇ ನಾನಾಗಬೇಕಂತ ಅನ್ನಿಸಿ ಒಮ್ಮೆಗೇ ಆಗಿ ಅದಕ್ಕೆ ಧುಮುಕಬಲ್ಲಂಥ ಒಂದು ಕೆಪಾಸಿಟಿ. Thisi is an unusual capacity.

 • ಮಕ್ಕಳಲ್ಲಿ ನಾವು ಅದನ್ನು ನೋಡಬಹುದು.

ಈಗ ನಾಟಕ ಬರೀತಿದ್ದೇನೆ ನಾನು. ಕಾದಂಬರಿ ಬರೀತಿದ್ದೇನೆ. ಆ ಗಳಿಗೆಗೆ ಅದಾಗಿ ನಾನು ಅವತಾರ ಮಾಡ್ತೇನೆ. ಕಲೆಯಲ್ಲಿ ಬರತಕ್ಕಂಥ ಪ್ಲೆಶರ್. ಆ ಪ್ಲೆಶರ್ ಒಂದು ಸಾರಿ ಅಂಬೆಯಾಗಬಹುದು. ಇನ್ನೊಂದು ಸಾರಿ ರಾಕ್ಷಸನಾಗಬಹುದು, ಅದು ನನ್ನ ಕಲ್ಪನೆಯ ಅಂಬೆ, ನನ್ನ ಕಲ್ಪನೆಯ ರಾಕ್ಷಸ. ಆದರೆ ಅದು ನಾನು ಅನ್ನುವ ಐಡೆಂಟಿಟಿ, ಕಂಪ್ಲೀಟ್ಲಿ ಮರೆತು ಮಾಡತಕ್ಕಂಥ ಒಂದು ಸ್ಥಿತಿ ನನಗೆ. ಕಾದಂಬರಿ ಬರೆಯುವಾಗಲೂ ಕೂಡ ನಾನು ಐಡೆಂಟಿಟಿ ಮರ್ತೀ ಬರ‍್ಯೋದು. ಆ ಗಳಿಗೆಯಲ್ಲಿ ನಾನು ನಾನಾಗಿರೋದೇ ಇಲ್ಲ. ಅದಕ್ಕೆ ಏನು ಡಿಸ್ಟರ್‌ಬೆನ್ಸ್ ಬಂದ್ರೂ ನಾನು ಅಲ್ಲಿ ಅದನ್ನ ಬಿಟ್ಟು, ಕೆಲಸದಿಂದ ಹೊರಗೆ ಬರಬೇಕಾಗುತ್ತೆ. ಇದರಿಂದ ಬೇರೆ ಬೇರೆ ಫಾರ್ಮ್ಸ್‌ನ ಪಾಸಿಬಿಲಿಟಿಗಳನ್ನು ನಾವು ರಿಯಲೈಸ್ ಮಾಡಲಿಕ್ಕೆ, ನಾವು ಅನುಭವಿಸಲಿಕ್ಕೆ ಸಹಾಯವಾಗುತ್ತೆ.

 • ಆದರೆ ಕಾದಂಬರಿಯನ್ನು ಬರೆಯುವಾಗ ತಾದಾತ್ಮ್ಯ ಎಲ್ಲಾ ಕಾಲದಲ್ಲೂ ಒಂದೇ ರೀತಿಯಲ್ಲಿ ಫಲಿಸುತ್ತೆ ಅಂತ ಹೇಳ್ಲಿಕ್ಕೆ ಆಗುತ್ತದೆಯಾ?

ಅದಿಲ್ಲದಿದ್ದರೆ ಇಲ್ಲ. ನನಗೆ ಬರೀಲಿಕ್ಕೆ ಆಗೋದೇ ಇಲ್ಲ.

 • ಆದರೆ ನಿಮ್ಮ ಅಳಿದ ಮೇಲೆ ಬಗ್ಗೆ ಕೆಲವು ವಿಮರ್ಶಕರು ಹೇಳುತ್ತಾರೆ. ಸಾರ್, ಯಶವಂತನ ಬಗ್ಗೆ ನಿಮಗೇನು ತಾದಾತ್ಮ್ಯ ಇದೆಯೋ ಅದು ಆತನ ಹೆಂಡತಿಯ ಬಗ್ಗೆ.

ಇಲ್ಲಿ – ಅವರಿಗೆ ಒಂದು ಸ್ಥಿತಿ ಗೊತ್ತಾಗುವುದಿಲ್ಲ. ಏನಂದ್ರೆ, ಯಶವಂತನನ್ನ ಯಾರಿಂದ ನಾನು ಪ್ರೇರಣೆಗೊಂಡೆ, ಅವನ ಹೆಂಡತಿ ನನ್ನ ಕಣ್ಣಿಗೆ ಯಾರಾಗಿ ನಿಲ್ತಿದ್ಲು, ನಾನು ಬರೆಯುವಾಗ – ಅನ್ನೋದು ಇವರೆಲ್ಲ ನೋನ್ ಓಬ್ಜೆಕ್ಟ್‌ಸ್ ಅವರ ಹೆಂಡತಿ ಯಾರಾಗಿದ್ರು ಅಂತ ಕೇಳಿದ್ರೆ – ಅದೊಂದು ಹೆಂಗಸು. ಒಬ್ಬ – ಇಬ್ಬರು ಅಣ್ಣ ತಮ್ಮಂದಿರಲ್ಲಿ ತಮ್ಮನ ಹೆಂಡತಿ ಅಣ್ಣನೊಟ್ಟಿಗೆ ಓಡಿ ಹೋದ ಯಾವ ಯಾವ ತರದ್ದೊ ವ್ಯಕ್ತಿ. ಅದನ್ನು ಜೀವನದಲ್ಲಿ ಕಂಡಿದ್ದೇನೆ. ಹಾಗೇ ಜೀವನದಲ್ಲಿ ಕಂಡಂಥ ವ್ಯಕ್ತಿ ನನ್ನ ಕಣ್ಣ ಮುಂದೆ ಬರ್ತಾಳೆ. ಅವಳಲ್ಲಿ ಒಂದೇ ಒಂದು – ದೇಹದ ಒಂದು ಲಸ್ಟ್ ಬಿಟ್ಟರೆ ಎರಡನೇ ಗುಣವನ್ನೇ ನಾನು ಕಾಣಲಾಗಲಿಲ್ಲ… ನೂರು ಜನ ಹೆಂಗಸರ ಮೇಲೆ ಅನುಕಂಪ ಬಂದು ಬರ್ದಿದ್ದೇನೆ. ಈ ವ್ಯಕ್ತಿ ಮೇಲೆ ಅನುಕಂಪ ಪಡಲಿಕ್ಕೆ ನನಗೆ ಸಾಧ್ಯವಾಗಲಿಲ್ಲ. ಯಾಕೆಂದ್ರೆ ಆ ವ್ಯಕ್ತಿ ನನಗೆ ಗೊತ್ತಿತ್ತು. ಅದನ್ನೇ ಬರ‍್ಯೋದಾದ್ರೆ ಒಂದು ಘೋರ ಶೂರ್ಪನಖಿಯನ್ನೇ ನಾನು ಬರೀಬಹುದು, ಇವರು ನಾನು ಕಲ್ಪಿಸಿದ ವ್ಯಕ್ತಿಗಳಲ್ಲ. ನಾನು ಸಂದರ್ಭಕ್ಕೆ ತಕ್ಕೊಂಡ ವ್ಯಕ್ತಿಗಳು. ಪೂರಾ ಒಂದೇ ವ್ಯಕ್ತಿಯದಲ್ಲ. ಆದರೆ ಇಂಥ ವ್ಯಕ್ತಿಗಳು ನನ್ನ ಬದುಕಿನ ನಿಕಟ ಸಂಬಂಧದಿಂದ ಹುಟ್ಟಿಕೊಂಡ, ಕಂಡುಕೊಂಡ ವ್ಯಕ್ತಿಗಳಾಗಿದ್ದರಿಂದ ಕೆಲವು ವ್ಯಕ್ತಿಗಳಲ್ಲಿ ಅನುಕಂಪವನ್ನ ನಾನು ಏನು ಮಾಡಿದ್ರೂ ಹಂಚಲಾರೆ.

 • ಆದರೆ ಅಳಿದ ಮೇಲೆ ಇಷ್ಟು ವಾಸ್ತವ ಜೀವನದಿಂದ ಪ್ರಭಾವಿತವಾಗಿದ್ರೂ ಕೂಡ ಕೃತಿಯ ಫಾರ್ಮ್‌‌ನ ಕಾರಣದಿಂದ ಅದು ಸಂಪೂರ್ಣ ಸೃಷ್ಟಿಯಾದದ್ದು ಅಂತಾನೇ ಅನ್ನಿಸುತ್ತೆ.

ಫಾರ್ಮ್ ಬಗ್ಗೆ ನಾನು ಯೋಚನೆ ಮಾಡ್ತಾನೇ ಇಲ್ಲ. ಆದರೆ ಅದು ತನ್ನಂತೆಯೇ ರೂಪಗೊಂಡಿದ್ದು ನನ್ನ ಪಾಲಿಗೆ.

 • ಇಲ್ಲಿಯೂ ಕೂಡ ನಾನೇ ಇದನ್ನು ಒಂದ್ಸಾರಿ ಬರೆದಿದ್ದೆ ಅಂತ ಕಾಣುತ್ತೆ. ’ಕಾರಂತರಿಗೆ ಚಿತ್ರಕಲೆ ಇತ್ಯಾದಿಗಳಲ್ಲಿ ಫಾರ್ಮ್‌ ಬಗ್ಗೆ ಎಷ್ಟು ಕಾಳಜಿ ಇದೆಯೋ ಅಷ್ಟನ್ನು ಅವರು ಕಾದಂಬರಿ ಪ್ರಕಾರದ ಬಗ್ಗೆ ತೋರ್ಸೋದಿಲ್ಲನೀವು ಇದನ್ನು ಒಪ್ಕೋಬೇಕು ಅಂತಲ್ಲ.

ನಾನು ಇಗ್ಗೊಳ್ಳಿ ನಾಟಕದ ಬಗ್ಗೆ – ಹತ್ತು ನಾಟಕವನ್ನು – ಪಿರಾಂಡೆಲೋ, ಇಬ್ಸೆನ್ – ಇವ್ರದೆಲ್ಲಾ ನೋಡ್ಕೊಂಡು, ಅವುಗಳ ಬಗ್ಗೆ ಎಲ್ಲಾ ಲಿಟರರಿ ಪ್ರಯೋಗ ಮಾಡಿದ್ದೇನೆ. ಆ ರೀತಿಯಲ್ಲೆಲ್ಲಾ ಬರೆದು ನೋಡಿದ್ದೇನೆ.

 • ಕಾದಂಬರಿಯಲ್ಲೂ ನೀವು ಮಾಡಿದ್ದೀರಿ.

ಕಾದಂಬರಿಯ ಬಗ್ಗೆ ನನಗನ್ನಿಸಿದ್ದೇನು ಅಂದರೆ ನಾನು ಇನ್ನೊಬ್ಬರ ಕಾದಂಬರಿಗಳನ್ನು ಓದಬಾರದು. ಅವರ ಟೆಕ್ನಿಕ್ ನನಗೆ ಬ್ಯಾಡ. ಅವರ ವಿಷಯ ನನಗೆ ಬ್ಯಾಡ. ನಾನು ಬೆಳೀಬೇಕಾದ್ರೆ, ಅದನ್ನ ಆಮೇಲೆ ನೋಡುವ ಅಂತ ಹೇಳಿಕೊಂಡದ್ದೂ ಉಂಟು. ಯಾಕಂದ್ರೆ ಈ ಇಮಿಟೇಶನ್ ಅನ್‌ಕಾನ್ಶಿಯಸ್ ಆಗಿ ಬರಬಾರದು ಅನ್ನೋದಕ್ಕೋಸ್ಕರವೇ ನಾನು ಅವಾಯ್ಡ್ ಮಾಡಿದ್ದು. ಅದು ತನ್ನಂತೆ ಬರೋದೇನಾದ್ರೂ ಬಂದುಕೊಳ್ಳಲಿ. ಬಾಕಿ ಉಳಿದ ಕಲೆಗಳಲ್ಲಿ ಫಾರ್ಮ್‌‌ನ್ನು ನೋಡ್ಕೊಂಡ ಸ್ಟಿ ಮಾಡ್ದೆ ನಾನು. ಕಾರನವನ್ನೂ ನಾನು ಹೇಳಬಲ್ಲೆ ಪೇಂಟಿಂಗ್ ವಿಚಾರಕ್ಕೆ ಬರುವಾಗ, ಆದರೆ ಕಾದಂಬರಿಯಲ್ಲಿ ಏನಾಗ್ತದೆ ಅಂದರೆ ನಾವು ಇಲ್ಲಿ ಇಂಣಥಾದ್ದು ಒಮದು ಇದೆ ಅಂತ ಮಾಡಿ ಬಂದಾಗ, ನನಗೆ ಆಗಿದ್ದು ಒಂದನ್ನ ಬರೀಬೇಕಂತ ಕಂಡಾಗ ಟೆಂಪ್ಟೇಶನ್ ಟು ಇಮಿಟೇಟ್ ಬಹಳ ಹೆಚ್ಚಾಗುತ್ತೆ. ಇದು ನನ್ನತನ ಕಳೆಯುತ್ತೆ. An imitator cannot be a creator.  ಈ ದೃಷ್ಟಿಯಿಂದ ನಾನು ಅವಾಯ್ಡ್‌ ಮಾಡಿದ್ದೇನೆ. ಅದು ತನ್ನಂತೆ ಹುಟ್ಟಿಕೊಂಡು ಬೇರೆ ರೂಪದಲ್ಲಿ ಬಂದರೆ ಆಗ ಅದಕ್ಕಾಗಿ ನನಗೆ ಕ್ರೆಡಿಟ್ ಕೂಡಬೇಕೋ ಯಾರಿಗೆ ಕ್ರೆಡಿಟ್ ಕೊಡಬೇಕೋ, ಗೊತ್ತಿಲ್ಲ.

 • ಆದರೆ ನಿಮ್ಮ ಕಾದಂಬರಿಗಳನ್ನು ಓದುವ ನನ್ನಂಥ ಓದುಗನಿಗೆ ನೀವು ಎಲ್ಲೆಲ್ಲಿ ಫಾರ್ಮ್‌ ಬಗ್ಗೆ ಕ್ವೆಸ್ಟ್ ಮಾಡಿದ್ದೀರೋ ಬೆಟ್ಟದ ಜೀವ, ಆಳಿದ ಮೇಲೆ ಆಮೇಲೆ ಮೂಕಜ್ಜಿಯ ಕನಸುಗಳು ಇನ್ನೂ ಕೆಲವು ಕಾದಂಬರಿಗಳಲ್ಲಿ ನೀವು ವಾಸ್ತವಿಕ ಶೈಲಿಯನ್ನು ಇಟ್ಟುಕೊಂಡೇನೇ ಸಾಂಕೇತಿಕವಾಗಿ ಕಟ್ಟುವಂಥ ಕೃತಿಗಳಿವು ಇವೇ ನಿಮ್ಮ ಬಹಳ ಮುಖ್ಯವಾದ ಕೃತಿಗಳು ಅಂತ ನಮ್ಮ ಕೆಲವರಿಗೆ ಅನ್ನಿಸುತ್ತೆ. ಫಾರ್ಮ್‌‌ನ ಬಗ್ಗೆ ಪ್ರಿಒಕ್ಯುಪೇಶನ್ ಇದೆ ನಿಮ್ಮಲ್ಲಿ ಬುದ್ದಿಪೂರ್ವಕವಾಗಿ ಅಂತಲ್ಲ. ಆದರೆ ಅನೇಕ ಸಾರಿ ಭಿನ್ನವಾಗಿ ಹೊಸ ರೀತಿಯಲ್ಲಿ ಬರೆದುಬಿಡ್ತೀರಿ, ಅಂತ ಅನ್ಸುತ್ತೆ.

ಅದು ನನ್ನಂತೆಯೇ ಬಂದದ್ದೇ ಹೊರತು ನಾನು ಪ್ರಯತ್ನಪಟ್ಟದಲ್ಲ, ಇಂತ ಫಾರ್ಮ್‌‌ನಲ್ಲಿ ಬರೆಯಬೇಕೆನ್ನುವ ಪ್ರಯತ್ನವೇ ಇಲ್ಲ. ನಾಟಕದಲ್ಲಿ ಪ್ರಯತ್ನ ಮಾಡಿದ್ದೆ ನಾನು. ಆದರೆ ಕಾದಂಬರಿಯಲ್ಲಿ ಇಲ್ಲ.

 • ಇನ್ನೊಂದು ಪ್ರಶ್ನೆ. ಸಿನಿಮಾ ಆಗಿರೋದ್ರಿಂದ ಈಚೆಗೆ ಬಹಳ ಪ್ರಸಿದ್ಧವಾದ ಚೋಮನ ದುಡಿಯ ಬಗ್ಗೆ ಎರಡು ವಾದ ಇದೆ. ನನ್ನ ಸ್ನೇಹಿತರು ಕೆಲವರು ಹೇಳ್ತಾ ಇರ್ತಾರೆ. ಅವರ ಪ್ರಕಾರ ನಿಮ್ಮ ಚೋಮ ಇದ್ದಾನಲ್ಲ ಅವ ಸಾಮಾನ್ಯ ಹೊಲೆಯ ಅಲ್ಲ, ಅವನು ದುಡಿ ಬಾರಿಸ್ತಾನೆ. ತುಂಬಾ ಭಾವಾವೇಶಿತನಾಗುವ ಶಕ್ತಿ ಇದೆ ಅವನಿಗೆ. ಅಸಾಮಾನ್ಯವಾದ ಭಾವನೆಯುಳ್ಳವನು. ಆದದ್ದರಿಂದ ಅವನ ಮುಖಾಂತರ ನೀವು ಹೇಳುವ ಕಥೆಯಲ್ಲ, ಒಬ್ಬ ವ್ಯಕ್ತಿಯಾಗಿ ಚೋಮನಮಗೆ ಮುಖ್ಯ ಆಗ್ತಾನೆಯೇ ಹೊರತು ಒಬ್ಬ ಹೊಲೆಯರ ಪ್ರತಿನಿಧಿ ಆಗಿ ಮುಖ್ಯ ಆಗೋದಿಲ್ಲ ಅಂತ ಅವರ ಅಭಿಪ್ರಾಯ. ಅವನು ಹಾಗೆ ಆಗಬೇಕು ಅಂತ ನಾನು ಹೇಳೋದಿಲ್ಲ. ನಿಮ್ಮ ಅಭಿಪ್ರಾಯಕ್ಕಾಗಿ ಕೇಳಿದ್ದಷ್ಟೇ. ಇನ್ನೊಂದು ವಾದ ಕೃತಿಯಲ್ಲಿ ನಿಮಗೆ ಅವರ ಬಗ್ಗೆ ಮಾತ್ರ ಸಹಾನುಭೂತಿ ಅಲ್ಲ, ಜಮೀನ್ದಾರನ ಬಗ್ಗೆಯೂ ಬಹಳ ಸಹಾನುಭೂತಿ ಇರೋದ್ರಿಂದ ಅದು ಒಟ್ಟು ಕ್ರಾಂತಿಕಾರಕವಾದ ಕೃತಿಯಾಗೋದಿಲ್ಲ, ಅಂತ.

ಅದು ಕ್ರಾಂತಿ ಆಗಬೇಕಂತಲ್ಲ, ಅವನ ಆಸೆ ಪೂರೈಸ್ದೆ ಇರಲಿಕ್ಕೆ ಕಾರಣನಾದ ಒಬ್ಬ ವ್ಯಕ್ತಿ ಇದ್ದಾನೆ. ಹಾಗಂದ ಮಾತ್ರಕ್ಕೆ ಅವ ರಾಕ್ಷಸ ಆಗೋದಿಲ್ಲ. ನಾವೆಲ್ಲರೂ ಸಂಪ್ರದಾಯದ ಮಕ್ಕಳು. ಚೋಮನ ಆಸೆ ಜಮೀನ್ದಾರನಾಗಬೇಕಾದ್ದು, ಸಂಪ್ರದಾಯ ಮೀರಿದ ಆಸೆ. ಅದೇ ಕ್ರಾಂತಿ. ಅನುಕಂಪ ಇದ್ದರೂ ಜಮೀನ್ದಾರಿಗೆ ಇನ್ನೊಬ್ರು ಮಾಡ್ಲಿಲ್ಲ, ನಾವು ಹ್ಯಾಗೆ ಮಾಡಲಿಕ್ಕೆ ಬರೋದು ಅನ್ನೋ ಭಾವನೆ ಬರೋದು ಸ್ವಾಭಾವಿಕವಾದದ್ದು. ಈ ನಡತೆಯಲ್ಲೇ ಬಂದಿದ್ರೆ ನಾವೂ ಅದೇ ರೀತಿ ಆಗ್ತಿದ್ವು. ಆ ಕ್ರಾಂತಿ ಪ್ರತ್ಯೇಕ ತಕ್ಕೊಂಡು ಊದೋದು ಬೇರೆ, ಒಂದು ಸಂಪ್ರದಾಯದಲ್ಲಿ ಕಟ್ಟು ಬಿದ್ದು ನಾವು ಹ್ಯಾಗೆ ಥಿಂಕ್ ಮಾಡ್ತೇವೆ ಅನ್ನೋದು ಬೇರೆ, ಇಲ್ಲಿ ಚೋಮನ ಬಗ್ಗೆ, ಅವನ ಆಸೆಯ ಬಗ್ಗೆಯೂ ನನಗೆ ಎಂಪಥಿ ಇದೆ. ಅವನಿಗೆ ಗದ್ದೆ ಕೊಡೊ ಮನಸ್ಸು ಬಂದ್ರೂ ಕೂಡ, ಜಮಿನ್ದಾರನಿಗೆ ಅಮ್ಮ ಬ್ಯಾಡ ಅಂತ ಹೇಳ್ತಾಳೆ, ಆ ಕೆಲಸ ಕೂಡ ಇನ್ಯಾರೂ ಈವರೆಗೆ ಮಾಡದೇ ಇದ್ದದ್ದು – ಅನ್ನೋದು ಮನಸ್ಸಿನಲ್ಲಿದೆ. ಇನ್ನು ಎರಡನೇದಾಗಿ, ಚೋಮನ ವೇದನೆಗೂ ದುಡಿಗೂ ಸಂಬಂಧ ಇದೆ. ನನಗೆ ಅಲ್ಲಿ ದುಡಿ ಒಂದು ಸರಳ ಇನ್‌ಸ್ಟ್ರುಮೆಂಟ್. ಆ ಸರಳ ಇನ್‌ಸ್ಟ್ರುಮೆಂಟ್‌ನಲ್ಲಿ ಒಂದು ಮನೋಯಾತೆನ ತೋರಿಸಬೇಕಾದಂಥ ಒಂದು ತೀಕ್ಷ್ಣತೆ ಸಾಧ್ಯ ಎನ್ನೋದನ್ನ ನಾನು ಕಂಡುಕೊಂಡಿದ್ದೇನೆ. ಅದು ಚಿತ್ರದಲ್ಲಿ ಬರ್ಲಿಲ್ಲ, ಆ ಮಾತು ಬೇರೆ. ಯಾಕಂದ್ರೆ ದುಃಖಿಯಾದ ವ್ಯಕ್ತಿಗೆ, ಬಡ ವ್ಯಕ್ತಿಗೆ – ಅವನ ಸಮಾಜದಲ್ಲಿ ನೋಡಿದಾಗ ಅವನ ಚಿಂತನೆಯನ್ನು ಮರೆಯಲಿಕ್ಕೆ ಒಂದು ಸರಳ ಕುಣಿತ, ಒಂದು ಸರಳ ವಾದ್ಯ ಸಹಾಯ ಮಾಡಿದೆ. ಇತರ ಜನಗಳಿಗೆ ಗಾಸಿಪ್ ಸಹಾಯ ಮಾಡಿದ ಹಾಗೆ. ಇವನ ಜೀವನದಲ್ಲಿ ಅದು ಹ್ಯಾಗೆ ಆಗುತ್ತೆ, ದುಃಖ ಅಷ್ಟಿದ್ದರು ಕೂಡ ಇವರು ಅದನ್ನ ಹ್ಯಾಗೆ ಮರೆಯಬಲ್ಲರು ಎನ್ನೋದಕ್ಕೆ – ಅಲ್ಲಿ ಇಲ್ಲಿ ಸ್ವಲ್ಪ ಕುಡಿಯೋದಿದ್ರೆ ಇರಬಹುದು, ಕೇಕೆ ಹಾಕಿ ಕೂಗೋದಿದ್ರೆ ಇರಬಹುದು – ಇಂಟೆನ್ಸ್‌ಲೀ ಪರ್ಸನಲ್ ಇಮೋಶನ್‌ನ್ನು ದುಡಿಯಿಂದ ತೋರಿಸಿಕೊಳ್ಳುವಂತೆ ಮಾಡಿದ್ದೇನೆ. ಯಾಕಂದ್ರೆ that is the only thing from which he can get relief, from all these things. ಇದನ್ನೇ ಚಿತ್ರವಾಗಿ ತೆಗೆದುಕೊಂಡಿದ್ದೇನೆ.

 • ಕಾದಂಬರಿಕಾರರಾಗಿ ನಿಮಗೆ ಇನ್ನೊಂದು ಪ್ರಶ್ನೆ, ಕೃತಿಯ ಬಗ್ಗೆ. ಚೋಮ ತನ್ನ ಧರ್ಮ ಬಿಟ್ಟು ಕೊಡ್ದೇ ಇರೋದು ಒಂದು ಮೌಲ್ಯ ಅಂತ ನಿಮಗೆ ಬರೆಯುವಾಗೇನಾದ್ರೂ ಅನ್ನಿಸಿತ್ತಾ ಸಾರ್‌‌?

ಈ ಬಗ್ಗೆ ಏನೂ ಆಲೋಚನೆ ಮಾಡೋದಿಲ್ಲ ನಾನು. ಆದರೆ ಸ್ವಾಭಾವಿಕವಾಗಿ ಅವನವನಿಗೆ ಅವನು ನಂಬಿದ ದೇವರು ದೊಡ್ಡದು. ಈ ನಿಷ್ಠೆ ನಮ್ಮ ದೇಶದಲ್ಲಿ ಎಲ್ಲರಿಗೂ ಬಂದಿದ್ದು, ಅದು ಕುರುಡು ನಂಬಿಕೆಯೇ ಆಗಲಿ. ಇನ್ನೊಂದು ಧರ್ಮಕ್ಕೆ ಹೋದ, ಇನ್ನೊಂದು ದೇವರನ್ನು ನಂಬಿದ ಅಂದ್ರೆ ಅವರ ಕಣ್ಣಿನಲ್ಲಿ ಒಂದು ನರಕದ ಯಾತನೆ ಅನುಭವಿಸಿದಂಥ ಕಷ್ಟ ಬರುತ್ತೆ, ಯಾವುದೋ ಒಂದು ಆಸೆಗೆ ಹೋದವ ಹಿಮದೆ ಬರಲಿಕ್ಕೆ ಕಾರಣ – ಅವನ ಕಾನ್ಶಿಯಸ್‌ನೆಸ್ ಮಾತಾಡ್ತದೆ. ನಿನ್ನ ನಂಬಿದ ಈ ದೇವರನ್ನ ಬಿಟ್ಟು ಹೋಗ್ತೀಯೋ ಅಂತ ಕೇಳಿದ ಹಾಗಾಗುತ್ತೆ. ಸಿನ್ಸೆರಿಟಿ ಇದ್ದ ಎಲ್ಲಾ ತರಹದ ಲೈಫ್‌ನಲ್ಲಿ ಇದು ಬರುವಂಥ ಪ್ರಶ್ನೆ. ಚೋಮನಿಗೆ ಬೊಬ್ಬರ್ಯ ಬಂದು ನಿಲ್ಲಬಹುದು, ಪಂಜುರ್ಲಿ ಬಂದು ನಿಲ್ಲಬಹುದು, ಸಿನ್ಸೆರಿಟಿ ಇದ್ದಲ್ಲೆಲ್ಲಾ ಲಾಯಲ್ಟಿ ಪ್ರಶ್ನೆಯೇ ಬಾಕಿ ಉಳಿದದ್ದಕ್ಕಿಂತ ಮೌಲ್ಯದ ದೃಷ್ಟಿಯಿಂದ ಪರಮ ಮೌಲ್ಯಕ್ಕೆ ಹೋಗುತ್ತೆ.

 • ಅಂದರೆ ಒಬ್ಬನಿಗೆ ಭೂಮಿಯ ಹಸಿವೆಗಿಂತ ನಂಬಿಕೆ  ಮುಖ್ಯ ಆಗಬಹುದು ಅನ್ನೋದನ್ನ ನೀವು ಗುರ್ತಿಸಿದ್ದೀರಿ, ಅಲ್ವಾ ಸಾರ್‌?

ಇದು ಸ್ಪಷ್ಟವಾಗಿ ಬರ‍್ತದೆ. ಲಾಯಲ್ಟಿ ಇದ್ದಲ್ಲೇ ತ್ಯಾಗ ಬರಬೇಕಾದ್ರೆ ಇದೂ ಒಂದು ಕಾರಣ. ಇಲ್ದಿದ್ರೆ, ಗಳಿಗೆ ಗಳಿಗೆಗೆ ಕುಪ್ಪಳಿಸ್ತಾ ಹೋಗಬಹುದು. ಆಗ ಆತ ಏನೂ ಕಲ್ಟಿವೇಟ್ ಮಾಡಲಾರ. ಕೇವಲ ಒಂದು ಸಂದರ್ಭ ಸಾಕು, ಇವತ್ತಿನ ಪಾಲಿಟಿಕ್ಸ್ ಆದೀತು.

 • ಸಾರ್ ಚೋಮನ ದುಡಿ ಬರೆಯುವ ಕಾಲದಲ್ಲಿ ನೀವು ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳ ಬಗ್ಗೆ ತೋರಿಸಿದಷ್ಟು ಕಾಳಜಿ ನಿಮ್ಮ ಇತ್ತೀಚಿನ ಕೃತಿಗಳಲ್ಲಿ ಕಾಣ್ತಾ ಇಲ್ಲ. ಈಗ ಹೆಚ್ಚು ಮಾನಸಿಕವಾದ, ತಾತ್ತ್ವಿಕವಾದ ಸಮಸ್ಯೆಗಳ ಕಡೆ ನಿಮ್ಮ ಗಮನ ಹೋಗಿದೆ. ಅಂದ್ರೆ ಇದು ನಾನು ಟೀಕೆ ಮಾಡ್ತಾ ಇರೋದಲ್ಲ.

ಅವಾಗಿನ ಕಾಲದಲ್ಲಿ ಬಡತನದ ಪ್ರಶ್ನೆ – ಇದು ಗಾಂಧಿಯವರಿಂದ ಬಂತು. ಇನ್‌ಟೆನ್‌ಷನಲೀ ನಾನು ಮೂವತ್ತು ಗ್ರಾಮಗಳನ್ನು ಸಂಚಾರಮಾಡಿ, ನೂರಾರು ಹರಿಜನರ ಮನೆಗಳಿಗೆ ಹೋಗಿ, ಅವರು ಯಾರು, ಎಷ್ಟು ದುಡೀತಾರೆ, ಏನು ಸಾಕ್ತಾರೆ, ಏನು ಕುಡಿಯುತ್ತಾರೆ. ಕುಡಿಯೋ ನೀರು – ಪ್ರತಿಯೊಂದು ತಕ್ಕೊಂಡು ಹೊಟ್ಟೆಗೇನಿದೆ, ಸಮಯ ಹ್ಯಾಗೆ ಕಳೀತಾರೆ ಅಂತ ಇನ್‌ಟೆನ್ಸ್ ಪ್ರಾಕ್ಟಿಕಲ್ ಸ್ಟಡಿ ಮಾಡಿದಂಥ ಕಾಲದಲ್ಲಿ ಚೋಮನದಡಿ ಬರೆದದ್ದು; ಪ್ರತಿಯೊಂದು ಚಿತ್ರವೂ ನನ್ನ ಕಣ್ಣೆದ್ರಿಗಿದೆ. ಇಕೊನೋಮಿಕ್ ಕಂಡಿಶನ್ ಚಿತ್ರವೂ ಇದೆ. ಅಭ್ಯಾಸ ಮಾಡಿದಂಥ ಹಿನ್ನೆಲೆಯೂ ಇದೆ. ಮೊದಲು ಊಹೆಯಿಂದ ಬರ್ದಿದ್ದ ನಾಟಕ – ’ಡೊಮಿಂಗೊ’ ಕಥೆ ಬರ್ದಿದ್ದೆ. ಹೊಲೇರಿದ್ದಾರೆ ಅಂತ ಗೊತ್ತು. ನಾವು ಮುಟ್ಟೋದಿಲ್ಲ ಅಂತ ಗೊತ್ತು. ಸಣ್ಣದಿದ್ದಾಗ ನಾನೂ ಮುಟ್ಟಿಲ. ಆದರೆ ಆ ನಾಟಕ ಇಡೀ ನಾನೇ ಅಸ್ಯೂಮ್ ಮಾಡಿದ ಸಿಚುಯೇಶನ್. ಇಲ್ಲಿ ಹಾಗಲ್ಲ. ಅದಕ್ಕೆ ಬೇಕಾದ ಪ್ರಾಕ್ಟಿಕಲ್ ಅನುಭವ ಇದನ್ನೆ ಸ್ಟಡಿ ಮಾಡಲಿಕ್ಕೆ ಹೋಗಿ ಅಲ್ಲಿ – ಪುತ್ತೂರು ತಾಲ್ಲೋಕ್ ಇಕೊನೋಮಿಕ್ ಕಂಡಿಶನ್ ಮತ್ತು ಕಲ್ಚರಲ್ ಕಂಡಿಶನ್ ಇದಕ್ಕೋಸ್ಕರ ಮೂರು ತಿಂಗಳ ಕಾಲ ಆರುನೂರು ಮನೆಗಳನ್ನು ಸಂಚರಿಸಿ ಎಲ್ಲ ರೆಕಾರ್ಡ್ ಮಾಡಿಕೊಂಡು ಅಭ್ಯಾಸ ಮಾಡಿದ್ದು. ಹಾಗೆ ಅಭ್ಯಾಸ ಮಾಡಿದ ಕಾಲದಲ್ಲಿ ಇವರ ಪಿಕ್ಚರ್ ಇಷ್ಟು ಡ್ರ‍್ಯಾಸ್ಟಿಕ್.

 • ಕಾಲದಲ್ಲಿ ಕೆಲವು ಹರಿಜನ ವರ್ಗಕ್ಕೆ ಭೂಮಿ ಸಿಗ್ತಿತ್ತಾ ಸಾರ್?

ಹರಿಜನ  ವರ್ಗಕ್ಕೆ ಇವತ್ತೂ ಕೊಟ್ಟವರಿಲ್ಲ. ಮನೆಗೆ ಜಾಗ ಬಿಟ್ಟು.

 • ಇವತ್ತಿಗೂ ಉಳಿದರೋ ಸಮಸ್ಯೆ ಇದು.

ಇವತ್ತಿಗೂ ಉಳಿದಿರೋ ಸಮಸ್ಯೆ ಮಾತ್ರವಲ್ಲ ಇದು ನನ್ನ ಲೇಟೆಸ್ಟ್ ಕಾದಂಬರಿಗಳಲ್ಲಿ ಅದನ್ನೇ ತಿರುಗಿ ಹೇಳಿದ್ದೇನೆ. ಮೊದಲನೇ ಕಾಲದಲ್ಲಿ ಎಂಜಲು ಕೊಡ್ತಿದ್ರು. ನಾನು ಹೊರಗೆ ಬಂದ ಕಾಲದಲ್ಲಿ ಮನೆ ಮನೆಗೆ ಹೋಗಿ ಎಂಜಲು ಕೊಡಬೇಡಿ, ಅನ್ನ ಕೊಡಿ ಅಂತ ಬೇಡಿದ್ದೇನೆ. ಹದಿನೈದು ದಿವಸದ ಹಿಂದೆ ಮಠದಿಂದ ಹೊರಗೆ ಬೀಳುವಾಗ ಎಂಜಲನ್ನು ಅವರು ತಿನ್ನೋದನ್ನ ನೋಡಿದ್ದೇನೆ. ಆದ್ದರಿಂದ ಇವರ ಸಮಸ್ಯೆ ಮುಗ್ದಿಲ್ಲ. ನನಗೆ ’ಚೋಮ’ನ್ನ ತಕ್ಕೊಂಡು, ಇದನ್ನ ಹೇಳಲಿಕ್ಕೆ ಸಾಧ್ಯ ಇಲ್ಲ. ಚೋಮನಂಥ ಹರಿಜನರಿಗೆ ನಾಲ್ಕು ಗದ್ದೆಯ ತುಂಡು, ನಾಲ್ಕು ಗಿಡ ನೆಡ್ತಕ್ಕಂಥ ಜಾಗವನ್ನು ಇವತ್ತಿಗೂ ಕೊಟ್ಟಿಲ್ಲ. ಇವರು ಇವತ್ತೇನಾದ್ರೂ ಕೊಟ್ಟಿದ್ದು ಇದ್ರೆ, ಮೊದಲೇ ದುಡೀತಿದ್ದಿದ್ದಕ್ಕಾಗಿ. ಹಾಗೆ ದುಡಿದಂಥ ವ್ಯಕ್ತಿಗೆ ಕೊಟ್ಟಿದ್ದಾರೇ ಹೊರತು ಹರಿಜನರು ಇವತ್ತೂ ಕೃಷಿಕರಾಗಿಲ್ಲ. ಆದ ನಿದರ್ಶನ ನನ್ನ ಕಣ್ಣಿಗಂತೂ ಕಂಡಿಲ್ಲ.

 • ಹಾಗಾದರೆ ನೀವು ಈಗಲೂ ಬಗ್ಗೆ ಯೋಚನೆ ಮಾಡ್ತೀರಿಮತ್ತು ಬರೀಬೇಕು ಅನ್ನಿಸುತ್ತೆ ನಿಮಗೆ?

ಬರೀಬೇಕಂತ ಬರ‍್ಯೋ ಕಾಲದಲ್ಲಿ ಏನಾಗುತ್ತೋ ಈಗ್ಹೇಳ್ಲಾರೆ. ಯಾಕೆಂದ್ರೆ ಬರಿಯೋ ಕಾಲದಲ್ಲಿ ಯಾವ ವಿಷಯ ತಕ್ಕೊಳ್ತೇನೆ ಅಮತ ನಾನು ಬರಿಯಲಿಕ್ಕೆ ತೊಡಗಿದ ಮೇಲೇ ನನಗೆ ಗೊತ್ತಾಗುತ್ತೇ ಹೊರತು ಅದರ ಮೊದಲೇ ಅಲ್ಲ. ಬರೀಬೇಕು ಅಂತ ಇವತ್ತಿಗೆ ಅನ್ನಿಸಬಹುದು ಅದು ನೂರು ಸಾರಿ ಮರ್ತು ಹೋಗುತ್ತೆ. ಬರಿಯೋ ದಿನ ಬಂದಾಗ ಏನು ಬರೀತೇನೋ ಅದು ನನಗೆ ಕಂಟ್ರೋಲ್ ಇಲ್ಲ.

 • ಕೊನೇದಾಗಿ ಒಂದು ಪ್ರಶ್ನೆ ಸಾರ್‌, ನೀವು ಮೊದಲು ಒಂದು ಮಾತು ಹೇಳಿದ್ರಿ; ನೀವು ಒಬ್ಬ ಮಿಸ್ಟಿಕ್‌ನ್ನ ಕಂಡಿದ್ದಿರಿ. ನಿಮಗೆ ಅವರ ಬಗ್ಗೆ ಒಂದು ರೀತಿಯ ಗೌರವವೂ ಉಂಟಾಗಿತ್ತು ಅಂತ. ಕೆಲವರ ಪ್ರಕಾರ ನೀವು ರ್ಯಾಶನಲಿಸ್ಟ್. ಅವರ ಅನುಮಾನ ಏನಂದ್ರೆ ಕಾರಂತರಿಗೆ ವಿಚಾರಕ್ಕೆ ನಿಲುಕದೇ ಇರುವ ಅಚಿಂತ್ಯವಾದದ್ದು ಮತ್ತು ಅದೃಷ್ಟವಾದ್ದು ಇದೆಯೋ ಇಲ್ವೋ? ಅವರು ಬರೀ ಮೆಟೀರಿಯಲ್ ಲೋಕಕ್ಕೆ ಬದ್ಧರಾದ ದೃಷ್ಟಿಯುಳ್ಳವರೋ ಅಂತ?

ಈ ಪ್ರಶ್ನೆ ಮಕ್ಕಳ ಪ್ರಶ್ನೆ ನನಗೆ ಕಾಣುತ್ತೆ. ನನ್ನೂರಿಗಿಂತ ದೊಡ್ಡೂರು ಇದೆಯೋ ಇಲ್ಲವೋ? ವಿಶ್ವ ಇದೆಯೋ ಇಲ್ಲವೋ? ಇಡೀ ವರ್ಲ್ಡ್ ಪೂರಾ ನನಗೆ ತಿಳಿಯಲಾರದ ಮಿಸ್ಟರಿಯಿಂದಲೇ ತುಂಬಿಕೊಂಡಿದೆ ಅಂತ ನನಗೆ ಚೆನ್ನಾಗಿ ಗೊತ್ತಿದೆ. ನೀವು ಅದಕ್ಕೆ ಯಾವ ಹೆಸರು ಬೇಕಾದ್ರೂ ಕೊಡಿ. ನನಗೆ ತಿಳಿಯದ್ದು ಈ ಲೋಕದಲ್ಲಿ ಎಷ್ಟಿದೆ ಅಂತ ಹೆಜ್ಜೆ ಹೆಜ್ಜೆಗೆ ನಾನು ಆಶ್ಚರ್ಯ ಪಡ್ತಾ ಇದ್ದೇನೆ. ನಾಮಕರಣ ನೀವು ಯಾವುದೇ ಮಾಡಿ ಅದು ಆಕಾಶ ಇರಬಹುದು. ಮೈನ್ಯೂಟ್ ಸೆಲ್ ಅಥವಾ ಪ್ಯಾರಾ ಸೈಕಾಲಜಿ ಇರಬಹುದು, ಇನ್ನೂ ಸಾವಿರ ವಿಷಯ ಇರಬಹುದು. ಆದ್ದರಿಂದ ಇಂಥಾದ್ದು ನಿನಗೇನು ದೊರೆತಿದೆಯೋ ಇಲ್ವೋ, ಅದರ ಬಗ್ಗೆ ನಿಷ್ಠೆ ಇದೆಯೋ ಇಲ್ಲವೋ – ದೊರೆತಿದ್ದೋ ಇಲ್ಲವೋ, ನೀನು ಕೇಳಬೇಕೊ ಮಾರಾಯ? ನಾನು ಇದ್ದದ್ದು ನೋಡ್ಕೊಂಡು ಆಕಾಶ ಎಷ್ಟು ದೂರ ಅಂತ ಕೇಳಿದ್ರೆ ನನ್ನನ್ನ ಆ ಪ್ರಶ್ನೆಗಳೇ ಬ್ಯಾಫ್‌ಲ್ ಮಾಡುತ್ತವೆ. ಈ ಉದ್ದ, ಆ ಅಳತೆ ದೂರ, ಅದರ ಶಕ್ತಿ ಯಾವುದನ್ನೂ ನಾನು ಕನ್ಸೀವ್ ಕೂಡ ಮಾಡಲಾರೆ. ನನ್ನ ಲಿಮಿಟೇಶನ್ ತುಂಬಾ ಚೆನ್ನಾಗಿ ನನಗೆ ಗೊತ್ತಿದೆ.

 • ಥ್ಯಾಂಕ್ಸ್ ಸರ್‌‌.

 

—-
ಅಕ್ಷರ ರೂಪ :
ಶ್ರೀಮತಿ ಮೀನಾಕ್ಷಿ ಮತ್ತು ಶ್ರೀಮತಿ ಸರ್ವಮಂಗಳ.
ಮೈಸೂರು
ಆಕಾಶವಾಣಿ ಬಿತ್ತರಿಸಿದ ಸಂವಾದ ೧೯೭೮ರ ಸಾಕ್ಷಿ ೩೮ ರಲ್ಲಿ ಪ್ರಕಟವಾಯಿತು.

ಶಿವರಾಮ ಕಾರಂತರು ಕನ್ನಡ ಸಾಹಿತ್ಯ ಸಂಸ್ಕೃತಿಯ ವಕ್ತಾರರು. ಕಾವ್ಯ, ಗೀತನಾಟಕ, ಜೀವನ ಚರಿತ್ರೆ, ಜ್ಞಾನಕೋಶಗಳು, ನಿಘಂಟು, ಮಕ್ಕಳಿಗಾಗಿ ಬರೆದ ಬರಹಗಳು. ಪಠ್ಯಪುಸ್ತಕಗಳು, ಯಕ್ಷಗಾನ ಕ್ಷೇತ್ರದ ಪ್ರಯೋಗಗಳು, ಸಿನಿಮಾ ಮುಂತಾದ ಬಹುಮುಖೀ ಕ್ಷೇತ್ರಗಳ ಮೂಲಕ ನಾಡಿನ ಮೇಲೆ ಪ್ರಭಾವ ಬೀರಿದವರು. ಕಾರಂತರು ೧೯೦೨ ಅಕ್ಟೋಬರ್ ೧೦ ರಂದು ಉಡುಪಿ ಜಿಲ್ಲೆಯ ಕೋಟದಲ್ಲಿ ಜನಿಸಿದರು.

ಮಕ್ಕಳಿಂದ ವಯೋವೃದ್ಧರವರೆಗೆ ಎಲ್ಲರ ಅಭಿರುಚಿಗಳಿಗೆ ಸ್ಪಂದಿಸಿ ಸಾಹಿತ್ಯ ಕೃಷಿ ಮಾಡಿದ. ಚಿಂತಿಸಿದ ಕಾರಂತರು ಕರ್ನಾಟಕದ ಮೂಲೆ ಮೂಲೆ, ಭಾರತದ ಬಹುತೇಕ ಸ್ಥಳಗಳು, ವಿದೇಶಗಳ ಸಾಂಸ್ಕೃತಿಕ ಕೇಂದ್ರಗಳಿಗೆ ಭೇಟಿಕೊಟ್ಟಿರುತ್ತಾರೆ. ಕಾದಂಬರಿ, ನಾಟಕ, ಸಣ್ಣಕಥೆ, ಹರಟೆ, ವಿಡಂಬನೆ, ಪ್ರವಾಸ ಕಥನ, ಆತ್ಮಕಥನ, ಜೀವನ ಚರಿತ್ರೆ, ಕಲಾ ಪ್ರಬಂಧ, ವೈಜ್ಞಾನಿಕ ವಿಶ್ವಕೋಶ, ನಿಘಂಟು, ಅನುವಾದ, ಮಕ್ಕಳ ಶಿಕ್ಷಣ, ವಯಸ್ಕರ ಶಿಕ್ಷಣ ಹೀಗೆ ಕನ್ನಡ ಸಾಹಿತ್ಯದ ಎಲ್ಲಾ ಕ್ಷೇತ್ರಗಳಲ್ಲಿ ದುಡಿದಿದ್ದಾರೆ.

ಅಳಿದ ಮೇಲೆ, ಉಕ್ಕಿದ ನೊರೆ, ಚೋಮನ ದುಡಿ, ಬೆಟ್ಟದ ಜೀವ, ಮರಳಿ ಮಣ್ಣಿಗೆ, ಮೂಕಜ್ಜಿಯ ಕನಸುಗಳು, ಸರಸಮ್ಮನ ಸಮಾಧಿ, ಮೈಮನಗಳ ಸುಳಿಯಲ್ಲಿ, ಹುಚ್ಚುಮನಸ್ಸಿನ ಹತ್ತು ಮುಖಗಳು ಮುಂತಾದವು ಇವರ ಕೃತಿಗಳು. ಜ್ಞಾನಪೀಠ, ಪದ್ಮಭೂಷಣ, ರಾವ್‌ಬಹದ್ದೂರ್ ಪ್ರಶಸ್ತಿ ಪುರಸ್ಕೃತರು. ವಿವಿಧ ವಿಶ್ವವಿದ್ಯಾನಿಲಯಗಳು ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಮಕ್ಕಳಿಗೆ ಇವರು ಪ್ರೀತಿಯ ಕಾರಂತಜ್ಜ ಆಗಿದ್ದರು. ೧೯೯೭ ಡಿಸೆಂಬರ್ ೯ ರಂದು ನಮ್ಮ ೯೬ನೇ ವಯಸ್ಸಿನಲ್ಲಿ ನಿಧನರಾದರು.

* * *