• ಇವತ್ತು ನಮ್ಮ ಮೈಸೂರು ಆಕಾಶವಾಣಿಗೆ ಒಂದು ಅಪೂರ್ವವಾದ ದಿನ. ಯಾಕೆಂದರೆ ಇಲ್ಲಿ ನಾರಾಯಣೂ ಇದ್ದಾರೆ ಲಕ್ಷ್ಮಣೂ ಇದ್ದಾರೆ. ನೀವಿಬ್ಬರೂ ರಾಮ ಲಕ್ಷ್ಮಣರು ಅಂತ ಇಲ್ಲಿ ಖ್ಯಾತಿ, ನಮ್ಮ ದೇಶದಲ್ಲಿ. ಯಾಕೆಂದರೆ ನೀವು ಇಬ್ಬರೂ ವಿಶ್ವಾದ್ಯಂತ ದೊಡ್ಡ ಹೆಸರು ಮಾಡಿದ್ದೀರಿ. ನೀವು ಮೈಸೂರಿನವರು ಕೂಡ. ಆದ್ದರಿಂದ ಕನ್ನಡದಲ್ಲಿ ನಿಮ್ಮನ್ನು ಮಾತಾಡಿಸಿ ಕಳುಹಿಸಬೇಕೂಂತ ಇಲ್ಲಿಗೆ ಕರೆದುಕೊಂಡು ಬಂದಿದ್ದೀನಿ. ಲಕ್ಷ್ಮಣ್‌, ನೀವು, ನಾನು ಮಹಾರಾಜಾ ಕಾಲೇಜಿಗೆ ಹೋದಾಗಲೇನೇ ಒಂದು ದೊಡ್ಡ ಲೆಜೆಂಡ್ ಆಗಿದ್ದಿರಿ. ಬೆಂಚ್‌ಗಳ ಮೇಲೆ ನಿಮ್ಮ ಹೆಸರಿದೆ ಅಂತ ಹೇಳಿ ನಾವು ಹುಡುಕಿ ನೀವು ಕೆತ್ತಿದ ಹೆಸರುಗಳನ್ನು ನೋಡಿದ್ದೀವಿ. ಹಾಗೆ ನಾರಾಯಣ್‌ ಕೂಡ ಮಹಾರಾಜ ಕಾಲೇಜ್‌ನ ವಿದ್ಯಾರ್ಥಿಯಾಗಿದ್ದವರು ಮೈಸೂರಿನ ಕುರಿತ ನಿಮ್ಮ ನೆನಪುಗಳನ್ನು ಕೇಳುವ ಇಚ್ಛೆಯಿಂದ ನಿಮ್ಮಿಬ್ಬರಿಗೂ ಪ್ರಶ್ನೆ ಕೇಳುತ್ತಿದ್ದೇನೆ.

ನೀವು ಬಾಳಾ ಸ್ವಚ್ಛ ಕನ್ನಡ ಮಾತಾಡ್ತಿದ್ದೀರಿ. ನನಗೆ ಅಷ್ಟು ಬರೋದಿಲ್ಲ. ನಾನು ಈ ಊರು ಬಿಟ್ಟು ಮೂವತ್ತೆಂಟು ವರ್ಷ ಆಯಿತು. ಅಲ್ಲಿ ಕನ್ನಡ ಮಾತಾಡೋರು ಬಾಳ ಕಮ್ಮಿ. ಇಂಗ್ಲಿಷಲ್ಲೇ ಮಾತಾಡೋದು. ಆದರೆ ನೀವು ಕನ್ನಡದಲ್ಲೇ ಮಾತಾಡಬೇಕು ಅಂದಿರೋದ್ರಿಂದ ನನ್ನ ಕೈಲಾದಷ್ಟು ಕನ್ನಡಾನೂ ಮಾತಾಡ್ತೀನಿ. ಹಾಗೆ ಕೆಲವು ಕಡೆ ಕನ್ನಡ ಬಾರದಿದ್ದರೆ ಇಂಗ್ಲಿಷೂ ಮಾತಾಡ್ತೀನಿ. ಏನೂ ನಿಮಗೆ ಇದರಲ್ಲಿ ಅಭ್ಯಂತರವಿಲ್ಲದಿದ್ದರೆ.

 • ನಾವೂ ಅದನ್ನೇ ಮಾಡೋದು ಇಲ್ಲಿ. ಕನ್ನಡಇಂಗ್ಲಿಷ್ ಬೆರೆಸಿಯೇ ಮಾತಾಡೋದು. ಆಗ ಆರ್‌.ಕೆ.ನಾರಾಯಣ್‌ ಹೇಳ್ತಿದ್ರು. ಇದೊಂಥರ ಮಣಿಪುರ ವಲಯ ಇದ್ದ ಹಾಗೆ ಅಂತ. ಅದರಲ್ಲೇ ಮಾತಾಡೋಣ.

ಏನು ನೀವು ನನಗೆ ಕಾಲೇಜ್‌ ನೆನಪು ಅಂತ ಹೇಳಿದ್ದೀರಿ, ಅದು ಬಹಳ ವೇಗ್ ಆಗಿದೆ. ಯಾಕೆಂದರೆ ಆವಾಗ ನನಗೆ ಇದ್ದ ತೀವ್ರ ಆಸೆಯೇ ಒಮ್ಮೆ ಇಲ್ಲಿಂದ  ಪಾಸ್ ಆಗಿ ಹೊರಹೋಗಬೇಕು ಎನ್ನುವುದು. ಯಾಕೆಂದರೆ ಆವಾಗ್ಲೇನೇ ನನಗೆ ನಾನೊಬ್ಬ ಕಾರ್ಟೂನಿಸ್ಟ್ ಆಗಬೇಕೆಂಬ ಆಸೆ ಬಹಳ ಬಲವಾಗಿ ಇತ್ತು ಮತ್ತು ಅದನ್ನೇ ನನಗೆ ಪ್ರೊಫೆಶನ್ ಆಗಿ ತಗೋಬೇಕೂಂತ ಇತ್ತು.

 • ಅಂದರೆ ನಿಮ್ಮ ಅಣ್ಣ ಆವಾಗ್ಲೆನೇ ಬರೆಯೋಕೆ ಶುರು ಮಾಡಿದ್ರು.

ಹೌದು. ಅವರು ಬಹಳ ದಿವಸದಿಂದ ಬರೆಯುತ್ತಿದ್ರು. ಅದಕ್ಕೆಲ್ಲಾ ನಾನೂ ಚಿತ್ರ ಬಿಡಿಸುತ್ತಿದ್ದೆ, ಬೇಕಾದಷ್ಟು. ಅವರ ಆರಂಭದ ಸಣ್ಣ ಕಥೆಗಳಿಗೆ ಹಾಗೂ ಅವರ ಪ್ರಬಂಧಗಳಿಗೆಲ್ಲ ನಾನೇ ಚಿತ್ರ ಬಿಡಿಸುತ್ತಿದ್ದೆ. ಅವರಿಗೆ ಅವರ ಬರಹಗಳಿಗಾಗಿ ಐವತ್ತು ರೂಪಾಯಿ ಸಿಗುತ್ತಿದ್ದರೆ ನನಗೆ ನನ್ನ ಚಿತ್ರಗಳಿಗಾಗಿ ಮೂರು ರೂಪಾಯಿ ಸಿಗುತ್ತಿತ್ತು.

 • ಆವಾಗ ನೀವು ವಿದ್ಯಾರ್ಥಿಯಾಗಿದ್ದಿರಿ.

ಹೌದು. ಆಗ ನಾನು ಚಿಕ್ಕವನು. ಎಸ್‌ಎಸ್‌ಎಲ್‌ಸಿಯಲ್ಲಿದ್ದೆ.

 • ನಿಮ್ಮ ಮನೆಯಲ್ಲಿ ಇನ್ಯಾರಾದ್ರೂ ಚಿತ್ರ ಬಿಡಿಸೋರು ಇದ್ರಾ?

ಅಷ್ಟೂ ಜನ್ರು. ಅಷ್ಟೂ ಬ್ರದರ್ಸ್‌ ಚೆನ್ನಾಗಿ ಬರೆಯೋದು. ಆದರೆ ಕಂಟಿನ್ಯೂ ಮಾಡಲಿಲ್ಲ. ಯಾಕೇಂತ ಗೊತ್ತಿಲ್ಲ. ಎಲ್ಲರೂ ಒಬ್ಬರಿಗಿಂತ ಒಬ್ಬರು ಪ್ರತಿಭಾವಂತರೇ. ಆದರೆ ಯಾಕೋ ಏನೋ ಅವರು ಮುಂದುವರಿಸಲಿಲ್ಲ.

 • ಸಂಗೀತ

ಅದೂನೂ. ಎಲ್ಲ ಐದು ಮಂದಿಯೂ. ಸಂಗೀತ, ಬರವಣಿಗೆ, ನಗೋದು, ಪೈಂಟಿಂಗ್ ಎಲ್ಲದರಲ್ಲೂ ಎಲ್ಲರೂ ಈಕ್ವಲೀ ಗುಡ್. ನಾವಿಬ್ರೇ ಅದನ್ನ ಬೆಳೆಸಿಕೊಂಡಿರೋದು.

 • ಲಕ್ಷ್ಮಣ್ ನಿಮಗೆ ಏನಾದರೂ ಬರಿಬೇಕೂಂತ ಇ‌ತ್ತಾ?

ಇತ್ತು. ನನ್ನ ಅಣ್ಣಂದಿರು ಮತ್ತು ಇತರೆ ಹತ್ತಿರದ ಸಂಬಂಧಿಕರು ನಾನು ಬರೆಯುವುದಕ್ಕೆ ಅಡ್ಡಿಯಾಗಿದ್ದರು. ಯಾಕೇಂತ ಗೊತ್ತಿಲ್ಲ. ಎಲ್ಲಾದರೂ ನಾನು ಬರವಣಿಗೇನೂ ನನ್ನ ಹವ್ಯಾಸವಾಗಿ ಮಾಡಿಕೊಂಡಿರುತ್ತಿದ್ದರೆ ನಾನು ಇನ್ನಷ್ಟು ಹೆಸರು ಪಡೆಯುತ್ತಿದೆನೋ ಏನೋ?

 • ಆದ್ದರಿಂದ ನೀವು ಚಿತ್ರ ಬರೆಯೋದು, ಅವರು ಕತೆ ಬರೆಯೋದು ಖಾಯಂ ಆಯಿತು.

ಹೌದು. ಆದ್ರೂ ನನಗೂ ಬರೆಯಬೇಕೂಂತ ಬಹಳ ಆಸೆ.

 • ಹೌದು, ನೀವು ಬರೆಯಬೇಕು.

ಬರೆಯುತ್ತೇನೆ. ನನ್ನ ಆಫೀಸಲ್ಲಂತೂ ನನಗೆ ಸ್ಟ್ಯಾಂಡಿಂಗ್‌ ಆರ್ಡರೇ ಇದೆ. ನನಗೆ ಯಾವಾಗ ಬಿಡುವಾಗುತ್ತೋ, ಯಾವಾಗ ಮೂಡು ಬರುತ್ತೋ ಆವಾಗ್ಲೇನೇ ಬರೆದುಬಿಡಬೇಕು ಅಂತ. ಆದರೆ ನನಗೆ ಟೈಮ್‌ ಇಲ್ಲ, ಸಾರ್. ನನ್ನ ವರ್ಕ್ ಶೆಡ್ಯೂಲ್ ಇರುವುದೇ ಹಾಗೆ. ಬೆಳಿಗ್ಗೆ ೮.೩೦ ರಿಂದ ಸಂಜೆ ೬ ರವರೆಗೆ. ಆಮೇಲೆ ಅರ್ಧ ಗಂಟೆ ರೆಸ್ಟ್. ಮತ್ತೆ ಪುನಃ ೬.೩೦ ರಿಂದ ಆರಂಭವಾಗಿ ರಾತ್ರಿ ೮.೩೦ ರವರೆಗೆ ಕೆಲಸ ಇರುತ್ತೆ. ಒಟ್ಟಿನಲ್ಲಿ ದಿನಕ್ಕೆ ೧೦ ಗಂಟೆ ಕೆಲಸ ಮಾಡ್ತೀನಿ.

 • ಲಕ್ಷ್ಮಣ್, ನಾನು ಯಾಕೆ ನಿಮ್ಮ ಹಳೆಯ ನೆನಪು ಕೇಳಿದೆ ಅಂದ್ರೆ. ಸಾಮಾನ್ಯವಾಗಿ ನಾವು ವಿದ್ಯಾರ್ಥಿಗಳಿದ್ದಾಗ ನಮಗೊಂದು ಕಾರ್ಟೂನ್ ಬರೀಬೇಕೂಂತ ಅನ್ನಿಸಿದ್ದು ನಮ್ಮ ಮೇಷ್ಟ್ರುಗಳನ್ನು ನೋಡಿದಾಗ. ಯಾಕೇಂದ್ರ, ಒಂದು ಸ್ವಲ್ಪ ಯಾರ ಬಗ್ಗೆ ನಮಗೊಂದು ಸ್ವಲ್ಪ ಪ್ರೀತಿನೂ ಇರುತ್ತೆ, ಭಯಾನೂ ಇರುತ್ತೆ, ಗೌರವಾನೂ ಇರುತ್ತೆ, ಅವರನ್ನು ಒಂದಿಷ್ಟು ತಮಾಷೆ ಮಾಡ್ಬೇಕೂಂತ ಅನ್ನಿಸುತ್ತೆ. ಕೊನೆಗೆ ಮಾತಲ್ಲಾದ್ರೂ ಅವರನ್ನು ಕಾರ್ಟೂನ್ ಮಾಡ್ತಿರುತ್ತೇವೆ. ಅವರಿಗೊಂದು ಅಡ್ಡ ಹೆಸರು ಇಟ್ಟಿರ್ತ್ತೇವೆ, ಹಾಗೇನಾದ್ರೂ ನಿಮ್ಗೆ ಶುರುವಾಯಿತೋ?

ಹಾ. ಹಾ. ಒಬ್ಬರಿದ್ದರು. ಅಯ್ಯಂಗಾರ್ ಅಂತ. ಲೆಕ್ಕ ಹೇಳಿಕೊಡ್ತಿದ್ದರು. ನಿಜಕ್ಕೂ ಒಂದು ಮಗು ಎಲ್ಲಿಯಾದರೂ ಮುಂದೆ ಓರ್ವ ವ್ಯಂಗ್ಯ ಚಿತ್ರಕಾರನಾಗುವುದಿದ್ದರೆ ಅದರ ಆರಂಭದ ತರಗತಿಯಿಂದಲೇ. ಅಯ್ಯಂಗಾರ್ ಮೇಷ್ಟ್ರು ತುಂಬ ಸಣ್ಣಗೆ ಇರೋರು. ನೋಡಲಿಕ್ಕೆ ತುಂಬ ಜೋರಾಗಿ, ಹುಲಿ ಥರಾ ಕಾಣೋರು. ನಾನು ಹೆಚ್ಚೂ ಕಮ್ಮಿ ೮ ರಿಂದ ೯ ರ ಹರೆಯದ ಹುಡುಗ ಆಗ. ನಾನು ಯಾವಾಗಲೂ ಅವರನ್ನು ಬಿಡಿಸುತ್ತಿದ್ದೆ. ಒಮ್ಮೆ ಅದನ್ನು ಅವರು ನೋಡಿ ಬಿಟ್ರು. ನನ್ನ ಕಿವಿ ಹಿಂಡಿದರು. ನಾನು ಈ ಥರ ತುಂಟತನ ಮಾಡಿದ್ರೆ ಮನೆಗೆ ಹೇಳ್ತೇನೆ ಅಂದ್ರು. ಅವರು ಆ ಚಿತ್ರದಲ್ಲಿ ತಮ್ಮನ್ನು ತಾವೇ ನೋಡಿಕೊಂಡು ನಕ್ಕುಬಿಟ್ಟರು. (ನಗು)

 • ಅವರು ಬಹಳ ಮೇಧಾವಿ.

ಹೌದು. ಅವರಿಗೆ ಗೊತ್ತಾಗೋಯ್ತು. ನಾನು ಏನು ಮಾಡ್ತಿದ್ದೇನೆ ಅಂತ. ಆವಾಗ್ಲಿಂದ ಇದು ಡೆವಲಪ್ ಆಯಿತು. ಹಾಗಾಗಿ ನಮ್ಮಲ್ಲಿ ಏನು ಪ್ರತಿಭೆ ಇದೆ, ಅದು ಸ್ಕೂಲ್‌ನಿಂದ ನಮ್ಮ ತರಗತಿಗಳಿಂದಲೇನೇ ಪ್ರಾರಂಭ ಆಗುತ್ತೆ. ಆಮೇಲೆ ಯಾವ ಅಧ್ಯಾಪಕರು ಸ್ಟೇಜ್ ಮೇಲೆ ಬರುತ್ತಿದ್ದರೋ ಅವರ ಚಿತ್ರ ಬಿಡಿಸುತ್ತಿದ್ದೆ. ಆಮೇಲೆ ಕಾಲೇಜಲ್ಲಿ ತುಂಬಾ ಮಂದಿ – ವಿ. ಸೀತಾರಾಮಯ್ಯ, ಈಗಲ್ಟನ್, ಕನ್ನಡ ಅಧ್ಯಾಪಕರಾದ ವೆಂಕಟ್ರಾಮ್ ಅವರು ದೆನ್ ನಮ್ಮ ಇಕನಾಮಿಕ್ಸ್ ಟೀಚರ್ ಡಾ. ಗೋಪಾಲಸ್ವಾಮಿ, ಚಕ್ರಪಾಣಿ ಅಂತ ನಮ್ಮ ಹಿಸ್ಟರಿ ಟೀಚರ್ ಅವರೆಲ್ಲ ನನಗೆ ಬಹಳ ಪ್ರಿಯರಾದ ಅಧ್ಯಾಪಕರು. ನಾನು ಅವರ ಚಿತ್ತ ಬಿಡಿಸಿದಾಗೆಲ್ಲ ಅವರಿಗೆ ತುಂಬಾ ಸಿಟ್ಟು ಬರುತ್ತಿತ್ತು.

 • ನಿಮ್ಮ ಕಾರ್ಟೂನ್‌ಗಳನ್ನು ನೋಡಿದಾಗ ನೀವು ಒಬ್ಬ ಮನುಷ್ಯನನ್ನು ಇಷ್ಟಪಟ್ಟಿದ್ದೀರೋ ಇಲ್ಲವೋ ಅನ್ನೋದು ನಿಮ್ಮ ಕಾರ್ಟೂನ್‌ನಲ್ಲಿ ವ್ಯಕ್ತವಾಗುವ ಹಾಗೆ ಮಾಡ್ತೀರಿ ಅಂತನ್ನಿಸುತ್ತೆ.

ಇಲ್ಲ, ಆ ಪ್ರಶ್ನೆಯೇ ಬರುವುದಿಲ್ಲ, ಮಿಸ್ಟರ್ ಅನಂತಮೂರ್ತಿ. ಯಾಕೆಂದರೆ ಒಬ್ಬ ಚಿತ್ರಕಾರನಾಗಿ ನನಗೆ ಯಾರ ಜೊತೆಗೂ ಪ್ರೀತಿಯಾಗಲೀ ದ್ವೇಷವಾಗಲೀ ಇಲ್ಲ. ಯಾಕೆಂದರೆ ನಾನು ತುಂಬ ಕುತೂಹಲದಿಂದ ವ್ಯಕ್ತಿತ್ವಗಳನ್ನು ಅವಲೋಕಿಸುತ್ತೇನೆ, ಹಾಗಾಗಿ ತುಂಬಾ ಭಾವನಾತ್ಮಕವಾಗಿಯೇ ನಾನು ನನ್ನ ಚಿತ್ರಗಳಲ್ಲಿ ತಲ್ಲೀನನಾಗುತ್ತೇನೆ.

 • ಇರಬಹುದು. ಆದರೆ ಒಬ್ಬ ಮನುಷ್ಯ.

ಇಲ್ಲ ಬಹಳ ಒರಟಾಗಿ ಹೇಳುತ್ತೇನೆ. ಒಂದು ವೇಳೆ ನನಗೆ ಪಾಕಿಸ್ತಾನದ ಅಧ್ಯಕ್ಷ ಜಿಯಾ-ಉಲ್-ಹಕ್‌ರವರ ಚಿತ್ರ ಬಿಡಿಸುವುದಿದ್ದರೆ, ಅವರು ನಮಗೆ ಮಾಡಿರಬಹುದಾದ ತಪ್ಪುಗಳನ್ನು ಇಲ್ಲಿಯ ಪತ್ರಿಕೆಗಳ ಮೂಲಕ ಓದಿಕೊಂಡಿರುವ ನಾನು ನನ್ನ ಮನಸ್ಸಲ್ಲಿ ಅವರು ಭಾರತ ದೇಶಕ್ಕೆ ಅನ್ಯಾಯ ಮಾಡುವುದನ್ನು ಊಹಿಸಿ ಆ ಕಲ್ಪನೆಯಲ್ಲಿ ಚಿತ್ರ ಬಿಡಿಸುತ್ತೇನೆ ಎನ್ನುವುದನ್ನು ನನಗೆ ಒಪ್ಪಕ್ಕಾಗಲ್ಲ. ಒಂದು ವೇಳೆ ಹಾಗೆ ಮಾಡಿದರೆ ಆಗ ನನಗೂ ಒಬ್ಬ ಪೋಸ್ಟರ್ ಬಿಡಿಸುವ ಕಲಾವಿದನಿಗೂ ವ್ಯತ್ಯಾಸ ಇಲ್ಲ ಅಂತ ಆಗಿಬಿಡುತ್ತೆ ಅಷ್ಟೇ. ಆದುದರಿಂದ ಕಾರ್ಟೂನ್ ಬಿಡಿಸುವಾಗ ನಿಮ್ಮ ಉದ್ದೇಶ ನಿಮಗೆ ಖಚಿತವಾಗಿರಬೇಕು.

 • ಹಾಗಾದರೆ ಒಂದು ಕಾರ್ಟೂನ್‌ ಒಬ್ಬ ಮನುಷ್ಯನಿಗೆ ನಿಮ್ಮ ಪ್ರೀತಿಯ ಕಾಣಿಕೆ ಆಗಿರುತ್ತೆ ಅಲ್ಲವೇ?

ಹೌದು. ಯಾವಾಗಲೂ

 • ಅಲ್ವೇ ಮತ್ತೆ?

ಆದರೆ ತುಂಬಾ ಕ್ರಿಟಿಕಲ್ ಕೂಡ ಆಗಿರುತ್ತೆ. ಹಾಗೇನೇ ಕಾರ್ಟೂನ್ ಎನ್ನುವುದು ಒಂದು ಬಗೆಯಲ್ಲಿ ವಿಧ್ವಂಸಕ ಕಲೆ (ಡಿಸ್ಟ್ರಕ್ಟಿವ್ ಆರ್ಟ್). ಅದೊಂದು ನೇರ ಮತ್ತು ಸ್ಪಷ್ಟವಾಗಿರುವ ಗೆರೆ ಅಲ್ಲ. ಅದೊಂದು ಬಗೆಯಲ್ಲಿ ವ್ಯಂಗ್ಯದ ಗೆರೆ. ಹಾಗಿದ್ದೇ ಕಾರ್ಟೂನ್ ಕ್ರಿಟಿಕಲ್ ಆಗಿರುತ್ತಲೇನೇ ರಚನಾತ್ಮಕವೂ (ಕನ್‌ಸ್ಟ್ರಕ್ಟಿವ್) ಆಗಿದೆ.

 • ಹಾ. ಈಗ ನಾರಾಯಣ್ ಅವರ ನಾವೆಲ್‌ನ ಪಾತ್ರಗಳಿರುತ್ತವೆಯಲ್ಲ ಅವು ಎಷ್ಟು ತಮಾಷೆಗೆ ಒಳಗಾದರೂ ಕೆಲವು ಸಾರಿ ಬಹಳ ಮಾನವೀಯವಾಗಿ ಕಾಣುತ್ತವೆ. ಈಗ ಗೈಡ್‌ನಲ್ಲಿ ಉದಾಹರಣೆಗೆ ರಾಜು ಬರ್ತಾನಲ್ಲ. ತುಂಬಾ ತಮಾಷೆಗೆ ಒಳಗಾಗ್ತಾನೆ ಅವನು. ಆದರೆ ಅವನು ಏನೋ ಒಂಥರಾ ಸಂತನೋ ಅನ್ನುವ ಹಾಗೆ ಇರ್ತಾನೆ. ಯಾಕೆಂದರೆ ಸೆಟಾಯರ್‌ ಅಂತೇವಲ್ಲ, ಐರನಿ ಅಂತೇವಲ್ಲ ಸಾಹಿತ್ಯದಲ್ಲಿ. ಥರ ಕೆಲಸ ಮಾಡುತ್ತೆ. ಕಾರ್ಟೂನಲ್ಲೂ ಹಂಗೆ ಕೆಲಸ ಮಾಡಬಹುದು ಅಂತ ನನಗನ್ನಿಸುತ್ತೆ. ಈಗ ಮಹಾತ್ಮಾ ಗಾಂಧಿಯ ಕಾರ್ಟೂನ್‌ ನೀವು ಬರೆಯುವುದಾದರೆ ಅವರು ನಿಮ್ಮ ಕಾರ್ಟೂನಲ್ಲಿ ಇನ್ನಷ್ಟು ಪ್ರಖರವಾಗಿ ನಿಮಗೆ ಕಾಣಬಹುದಲ್ಲ!

ಇಲ್ಲ ಸರ್, ಆಗಲ್ಲ. ನೀವು ಬಹಳ ನಿರೀಕ್ಷೆ ಮಾಡ್ತೀರಿ ಕಾರ್ಟೂನ್‌ನಿಂದ. ಇಟ್ ಕ್ಯಾನ್ ನೆವರ್ ಗ್ಲೋರಿಫೈ ಎ ಪರ್ಸನ್. ಅದನ್ನು ಮಾಡಿದರೆ ಅದು ಕಾರ್ಟೂನ್‌ ಅಲ್ಲ.

 • ಅಲ್ಲಲ್ಲ. ಗ್ಲೋರಿಫೈ ಅಂತ ಅಲ್ಲ.

ಕಾರ್ಟೂನ್ ಒಂದು ಲ್ಯಾಂಪ್‌ನ ಬೆಳಕಿನ ಥರ ಮತ್ತು ಅದು ಯಾವತ್ತೂ ಒಂದು ಆದರ್ಶ ಗಣರಾಜ್ಯದಲ್ಲಿ ಹುಟ್ಟಲು ಸಾಧ್ಯವಿಲ್ಲ. ಕಾರ್ಟೂನ್ ಹುಟ್ಟಬೇಕಿದ್ದರೆ ಈ ಸಮಾಜದಲ್ಲಿ ಎಲ್ಲಾದರೂ ಒಂದು ಕಡೆ ನಲ್ಲಿಯಲ್ಲಿ ನೀರು ಸೋರುತ್ತಿರಬೇಕು.

 • ಅಂದರೆ ನೀವು ಹೇಳೋದು ಕೇಳಿದರೆ ಕಾರ್ಟೂನ್ ರಾಮರಾಜ್ಯದಲ್ಲೂ ಸಾಧ್ಯವಿಲ್ಲ. ರಾವಣ ರಾಜ್ಯದಲ್ಲೂ ಸಾಧ್ಯವಿಲ್ಲ ಅಲ್ಲವೇ?

ಹೌದೌದು. ಒಂದರಲ್ಲಿ ಡೆಮೋಕ್ರಸಿಯೇ ಇಲ್ಲ. ಇನ್ನೊಂದರಲ್ಲಿ ಡೆಮೋಕ್ರಸಿ ಇದೆ. ಆದರೆ ಅದು ಟೂ ಪರ್‌ಫೆಕ್ಟ್. (ನಗು)

 • ಅಂದರೆ ಒಬ್ಬ ವ್ಯಂಗ್ಯ ಚಿತ್ರಕಾನಿಗೆ ಲೋಕದ ಅವಮರ್ಯಾದೆಗಳೇ ಬಹಳ ಮುಖ್ಯ ಸಂಗತಿಗಳು ಅಲ್ಲವೇ?

ಹೌದು ಎಲ್ಲ ರಚನಾತ್ಮಕ ಕೆಲಸಗಳಿಗೂ. ಇದು ಎಲ್ಲರಿಗೂ ಅಗತ್ಯ. ಆದರೆ ಲೆಕ್ಕಕ್ಕಿಂತ ಹೆಚ್ಚಲ್ಲ. ಹಾಗಾಗಿಯೇ ನನಗೆ ಈಗಿನ, ಯಾವುದಕ್ಕೂ ಹೆಚ್ಚು ತಲೆಕಡಿಸಿಕೊಳ್ಳದ ಯುವಕರು ಬಹಳ ಇಷ್ಟ.

 • ಅಂದ್ರೆ ನೀವಿಬ್ರೂ ಬ್ರದರ್ಸ್‌, ಯೂ ಕಾನ್ ಸರ್ವೈವ್ ಓನ್ಲೀ ಇನ್ ಡೆಮೋಕ್ರಸಿ ಅಂತ ಕಾಣುತ್ತೆ.

ಇಲ್ಲ. ಹಾಗನ್ನಬೇಡಿ. ನಾವು ಎಲ್ಲೂ ಬದುಕಬಲ್ಲೆವು.

 • ಈಗ ಇಂದಿರಾಗಾಂಧಿಯವರನ್ನು ನೀವು ಚಿತ್ರಿಸುತ್ತೀರಿ. ಅದು ನಿಮ್ಮ ಕಾರ್ಟೂನ್‌ ಅಂತ. ನೋಡಿದ ಕೂಡಲೇ ಗೊತ್ತಾಗುತ್ತೆ. ಅಲ್ಲಿ ನಿಮ್ಮ ಆಟಿಟ್ಯೂಡ್ ಎಲ್ಲ ಕಡೆ ಎಕ್ಸ್‌ಪ್ರೆಸ್ ಆಗುತ್ತೆ. ನೀವು ರೇಖಿಸುವ ವ್ಯಕ್ತಿಯ ನಿಜವಾದ ಚಿತ್ರವನ್ನು ನಾವು ನೋಡಿದ ಮಟ್ಟಿಗೆ ಮಾತ್ರ ನಿಮ್ಮ ಕಾರ್ಟೂನನ್ನು ಅವನು ಎಂಜಾಯ್ ಮಾಡಲು ಸಾಧ್ಯ. ಅಂದ್ರೆ ಜನರ ಮನಸ್ಸಲ್ಲಿ ನೀವು ರೇಖಿಸುವ ನಿಜವಾದ ಚಿತ್ರ ಮೊದಲು ಮೂಡಿರಬೇಕು ಅಲ್ಲವೇ?

ಹಾಗೇನೇ ಆಗಬೇಕಾಗಿಲ್ಲ. ನೋಡಿ, ಪ್ರತಿಯೊಬ್ಬ ವ್ಯಕ್ತಿಗೂ ಒಂದು ಸನ್ನಿವೇಶಕ್ಕೆ ಹೇಗೆ ರಿಯಾಕ್ಟ್ ಮಾಡಬೇಕು ಎಂಬುದು ಗೊತ್ತಿರುತ್ತೆ.  ಒಂದು ಬಜೆಟ್‌ಗೂ ಹಲವು ಬಗೆಯ ಪ್ರತಿಕ್ರಿಯೆಗಳಿರುತ್ತವೆ. ಹಾಗೇನೇ ಒಂದು ಪೊಲಿಟಿಕಲ್ ಸ್ಥಿತ್ಯಂತರಕ್ಕೂ ಹಲವು ಬಗೆಯ ದೃಷ್ಟಿಕೋನಗಳನ್ನು ಜನ ಹೊಂದಿರುತ್ತಾರೆ. ಇದೊಂದು ಸಾಮಾನ್ಯ ಜ್ಞಾನ (ಕಾಮನ್‌ಸೆನ್ಸ) ಅಷ್ಟೇ. ಐ ಯಾಮ್ ನಾಟ್ ಪೊಲಿಟಿಕಲ್. ಯಾವ ಪೊಲಿಟಿಕಲ್ ಐಡಿಯಾಲಜಿಯ ಜೊತೆಗೂ ನಾನು ಗುರುತಿಸಿಕೊಂಡವನಲ್ಲ. ಅದು ಸಾಮಾನ್ಯ ಜ್ಞಾನ, ಅದಷ್ಟೇ ನನ್ನ ಫಿಲಾಸಫಿ. ನಂದು ಕಾಮನ್‌ಮ್ಯಾನ್. ಶ್ರೀಸಾಮಾನ್ಯ. ಅವನಿಗೆ ಹೆಸರಿಲ್ಲ.

 • ಇಲ್ವ? ಅವನನ್ನು ಏನೂಂತ ಕರೀತೀರಿ ನೀವು?

ಏನೂ ಇಲ್ಲ. ಹೆಸ್ರೂ ಇಲ್ಲ. ಮತ್ತು ಆ ಶ್ರೀ ಸಾಮಾನ್ಯ ವ್ಯಕ್ತಿ. ಕಳೆದ ೩೮ ವರ್ಷಗಳಿಂದ ಏನನ್ನೂ ಮಾತಾಡಿಯೇ ಇಲ್ಲ. ಒಂದೇ ಒಂದು ಶಬ್ದವನ್ನೂ ಕೂಡ. ಅವನೊಬ್ಬ ಮೌನಸಾಧಕ. ಅವನು ಪ್ರತಿನಿಧಿಸುತ್ತಾನೆ ಮತ್ತು ಎಲ್ಲವನ್ನೂ ಸ್ವೀಕರಿಸುತ್ತಾನೆ, ಆದರೆ ಏನನ್ನೂ ಮಂಡಿಸಲಾರ.

 • ಲಕ್ಷ್ಮಣ್ ಅವರ ಫಿಲಾಸಫಿ ಅವನ ಮುಖಾಂತರ ಕಾಣಬಹುದು. ಅಂತ ಕಾಣುತ್ತೆ. ಅಥವಾ ಜೀವನ ಅಂದ್ರೆ ನೀವು ಹೇಗೆ ಕಾಣುತ್ತೀರಿ? ಬದುಕಿನ ಕಷ್ಟಗಳೇನು? ಸುಖಗಳೇನು?

ಅವನದ್ದೇ?

* ಅವನ ಮುಖಾಂತರ ನೀವು ಹೇಳ್ತೀರಲ್ಲ?

ಹೌದು ನಿಶ್ಚಯವಾಗಿಯೂ. ಅವನು ಬೆಳಿಗ್ಗೆ ಅವನ ಹಾಸಿಗೆಯಿಂದ ಎದ್ದು ರಾತ್ರಿ ಮಲಗುವವರೆಗೂ.

 • ಹಾಗೇನೇ?

ಅವವೇ ಮುಖಗಳು, ಒತ್ತಡಗಳು, ಸ್ವಲ್ಪ ಹೆಚ್ಚು – ಕಮ್ಮಿ, ಬಸ್ಸಿನ ಸರದಿ, ನಲ್ಲಿ ನೀರಿನ ಅಭಾವ, ಟ್ಯಾಕ್ಸಿಗಳು, ನೂರಾರು ಅಡ್ಡಿ-ಆತಂಕಗಳು. ಈ ಕೆಂಪು ಪಟ್ಟಿಯ ಧೂರ್ತತನಗಳು, ಇವೆಲ್ಲವುಗಳ ಬಲಿಪಶು ಅವನೇ, ನಾನು ಅವನನ್ನು ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸಲಿಕ್ಕಾಗದ, ಅವುಗಳಲ್ಲೇ ಬಿದ್ದು ಒದ್ದಾಡುವ ಮತ್ತು ಅದಕ್ಕೇ ಬಲಿಯಾಗುವ ವ್ಯಕ್ತಿಯಾಗಿ ಬಿಂಬಿಸಿದ್ದೇನೆ.

 • ಆದರೆ ಪ್ರತಿದಿನ ನಿಮಗೆ ನಿತ್ಯ ಜೀವನದ ಬಗ್ಗೆ ಟೀಕಿಸಿ ಬೇಜಾರಾಗುವುದಿಲ್ಲವೇ? ಇದರಿಂದ ನೀವು ಹೊರಬರಲು ಇಷ್ಟ ಪಡುತ್ತೀರಾ? ನಾನು ಯಾಕೆ ಇದನ್ನು ಕೇಳಿದೆ ಅಂದರೆ ನೀವು ಒಂದಷ್ಟು ಕಾಗೆಗಳ ಚಿತ್ರ ಬರೆದಿದ್ರಿ. ನನ್ಗೆ ಬಹಳ ಇಷ್ಟ ಆಗಿತ್ತು.

ಈಗ್ಲೂ ಬರೆಯುತ್ತಿದ್ದೇನೆ.

 • ಹುಂ. ಏನು ಮಾಡ್ತಿದ್ದೀರಿ, ಥರದಲ್ಲಿ?

ಬೇಕಾದಷ್ಟು, ಗಡಿಯಾರ ರಿಪೇರಿ ಮಾಡ್ತೇನೆ. ಪೈಂಟ್ ಮಾಡ್ತೀನಿ. ಮನೆಯಲ್ಲಿ ನಮ್ಮ ಇಲೆಕ್ಟ್ರಿಕ್ ಫಿಟ್ಟಿಂಗ್ಸ್ ಎಲ್ಲ ನಾನೇ ಸರಿ ಮಾಡೋದು.

 • ಅಲ್ಲಾ ನಾನು ಕೇಳಿದ್ದು, ಕಾರ್ಟೂನ್ ಜೊತೆ ಥರ ಚಿತ್ರಕಲೆಯಲ್ಲಿ ನೀವು ಕಾಗೆ ಚಿತ್ರ ಬಿಡಿಸಿದ್ದೀರಲ್ವ. ನಾನೂ ನೋಡಿದ್ದೆ. ಹಾಗೆ ಥರದಲ್ಲಿ ಏನಾದ್ರೂ ಮಾಡಿದ್ರಾ?

ಬೇಕಾದಷ್ಟು ಮಾಡಿದ್ದೆ ಸರ್.

 • ಮತ್ಯಾಕೆ ಅದನ್ನ.

ಒಂದು ಕಾಗೆ ಮಾಡಿಟ್ಟು ಮಲ್ಕೊಳ್ಳೋಕೆ ಆಗ್ತದಾ ಸರ್‌? ಪ್ರತಿಬಾರಿನೂ ನನಗೆ ಅದು ಹೊಸ ಆಯಾಮಗಳನ್ನು ಕೊಡುತ್ತದೆ. ಹಾಗಾಗಿ ನಾನು ಕಾಗೆಗಳನ್ನು ಬಿಡಿಸುತ್ತಾ ಹೋದೆ.

 • ಇನ್ಯಾವುದಾದರೂ ನಿಮ್ಮ ಗಮನ ಸೆಳೆದಿದೆಯಾ? ಯಾಕೆಂದ್ರೆ ಒಬ್ಬ ಕಲಾವಿದನಿಗೆ ಯಾವುದೋ ಒಂದು ಅವನ ಪೂರ್ವಗ್ರಹೀತವನ್ನು ಹೇಳಲು ಅದು ಒಂದು ಸಿಂಬಲ್ ಆಗಿ ಬಿಡುತ್ತೆ. ಕಾಗೆ ದೃಷ್ಟಿಯಿಂದ ನನಗೆ ಬಹಳ ಇಷ್ಟವಾಯಿತು. ಕಾಗೆಯಲ್ಲಿ ಏನು ಕಂಡ್ರಿ ನೀವು ಅಂಥದ್ದು.

(ನಗು), ನೋಡಿ ಕಾಗೆ ನಮ್ಮ ದೇಶದ ಅತ್ಯಂತ ಫೈನೆಸ್ಟ್ ಬರ್ಡ್‌. ದುರದೃಷ್ಟವಶಾತ್ ಜನ ಅದನ್ನು ನಿರ್ಲಕ್ಷ್ಯಿಸಿದ್ದಾರೆ. ಅದೊಂದು ತುಚ್ಛೀಕರಿಸಬಹುದಾದ ಹಕ್ಕಿ ಅಂತ ಜನ ತಿಳ್ಕೊಂಡಿದ್ದಾರೆ. ಅದು ಮನುಷ್ಯನಿಗೆ ತುಂಬಾ ಹತ್ತಿರವಾದ ಹಕ್ಕಿ. ಹಾಗೆಯೇ ಮನುಷ್ಯನನ್ನು ಚೆನ್ನಾಗಿ ತಿಳಿದುಕೊಂಡ ಹಕ್ಕಿಯೂ ಹೌದು. ಅದು ಬೇರೆ ಬೇರೆ ಥರದ ಧ್ವನಿಗಳನ್ನು ಬೇರೆ ಬೇರೆ ಕಾರಣಗಳಿಗಾಗಿ ಮಾಡುತ್ತದೆ. ಬಾಯಾರಿಕೆ ಆದಾಗ ಒಂದು ರೀತಿ, ಸತ್ತ ಇಲಿ ಕಂಡಾಗ ಒಂದು ಥರ, ಇತರ ಕಾಗೆಗಳನ್ನು ಕರೆಯುವಾಗ ಮತ್ತೊಂದು ಥರ, ಹೀಗೆ. ಅವುಗಳು ನವಿಲು ಇತ್ಯಾದಿ ಬೇರೆ ಹಕ್ಕಿಗಳಂತೆ ಸ್ವಾರ್ಥದಿಂದ ಒಂದೇ ತಿನ್ನಲ್ಲ. ಅದಕ್ಕೇ ಅದು ಬೇರೆ ಥರ ಕೂಗುತ್ತೆ. ಆದರೆ ಇತರ ಹಕ್ಕಿಗಳನ್ನು ಹೋಲಿಸಿದರೆ ಅದು ಒಂದು ಹಕ್ಕಿ ಮಾತ್ರವೇ ಸಾಯಂಕಾಲ ಆರರಿಂದ ಆರೂವರೆಯ ಒಳಗೆ, ಗೂಡು ಸೇರುವ ವೇಳೆಗೆ, ಮರದ ಗೆಲ್ಲುಗಳಲ್ಲಿ ಕುಳಿತು ಇಡೀ ದಿನದ ವಿಷಯಗಳನ್ನು ಚರ್ಚಿಸುತ್ತವೆ. ಗುಬ್ಬಚ್ಚಿ, ಗಿಣಿಗಳೆಲ್ಲ ಈ ಥರ ಕೂತ್ಕೊಳಲ್ಲ. ಇವು ಪಕ್ಕದಲ್ಲಿ ಕೂತ್ಕೊಂಡು ತುಂಬಾ ಮೆದುವಾದ ಧ್ವನಿಯಲ್ಲಿ ಮಾತಾಡುತ್ತಿರುತ್ತವೆ. ಅದು ಏನೂಂತ ನಮಗೆ ಗೊತ್ತಿಲ್ಲ. ಅವನ್ನು ನೋಡುತ್ತಿರಬೇಕಾದರೆ ತುಂಬಾನೇ ಖುಷಿಯಾಗುತ್ತೆ.

 • ಪಿತೃ ರೂಪಿಗಳು ಅಂತಾರಲ್ಲ ನಮ್ಮಲ್ಲಿ. ಶ್ರಾದ್ಧದಲ್ಲಿ ಬಂದು ಅವು ಆಹಾರ ತಗೊಂಡು ಹೋಗ್ತವೆ.

ಹೌದು. ಅದನ್ನು ಶನೀಶ್ವರನ ವಾಹನ ಅಂತ ನನ್ನ ಅಮ್ಮ ಹೇಳ್ತಿದ್ರು. ಅದನ್ನು ನಮ್ಮ ರಾಷ್ಟ್ರಪಕ್ಷಿ ಅಂತ ಘೋಷಿಸಬೇಕಾಗಿತ್ತು.

 • ಕಾಗೆಯಷ್ಟೇ ಶಕ್ತರಾಗಿ ನಿಮ್ಮನ್ನು ಆಕರ್ಷಿಸಿದ ವ್ಯಕ್ತಿ ಯಾರು?

ಆ ಥರಾ ಯಾರೂ ಇಲ್ಲ ಸಾರ್.

 • ಯಾರೂ ಇಲ್ವ? ಯಾವುದಾದರೂ ಒಂದು ಮುಖ. ರೇಖೆ ಎಳೆಯಲು ಒಳ್ಳೆಯ ಮುಖ ಅಂತ ಅನ್ನಿಸಿದ್ದು? ಥರದ್ದೂ ಯಾವುದೂ ಇಲ್ವಾ? ಅಥವಾ ಯಾವ ಮುಖ ಆದ್ರೂ ಆಗುತ್ತಾ?

ಇಲ್ಲ, ಕೆಲವು ತುಂಬಾನೇ ಡಿಫರೆಂಟ್ ಇರುತ್ವೆ ನೋಡಿ.

 • ಯಾಕೇಂದ್ರೆ, ರಾಜಕೀಯದಲ್ಲಿ ನೀವು ಒಬ್ಬ ಬಂದ ಕೂಡ್ಲೇನೇ ಇವ್ನು ನನ್ನ ಕ್ಯಾರಿಕೇಚರ್‌‌ಗೆ ಸರಿ ಹೊಂದಲ್ಲ ಅಂತ ಏನಾದ್ರೂ ತಿಳ್ಕೋತೀರಾ?

ಇದು ಉತ್ತರಿಸಲಿಕ್ಕೆ ತುಂಬಾ ಕಷ್ಟ. ಯಾಕೆಂದರೆ ಒಬ್ಬರ ವ್ಯಕ್ತಿತ್ವ ಬೆಳೆಯುವುದಕ್ಕೆ ಸ್ವಲ್ಪ ಸಮಯ ಬೇಕಾಗುತ್ತೆ. ಒಬ್ಬರ ವ್ಯಂಗ್ಯ ಚಿತ್ರ ಮಾಡುವಾಗ ನಾನು ಅವರನ್ನು ಒಬ್ಬ ಮನುಷ್ಯನ ಹಾಗೆ ಕಾಣದೆ ಅವರಲ್ಲಿರುವಂಥ ಆಳವಾದ ವಿಷಯದ ಕುರಿತು ಕುಳಿತು ಆಲೋಚಿಸಿ ಅದನ್ನು ಹಂಚಿಕೊಳ್ತೇನೆ. ಆದುದರಿಂದ ಒಬ್ಬ ಮನುಷ್ಯನನ್ನು ನಾವು ಊಹಿಸಿದಾಗ ಅವರನ್ನು ನಾವು ಹೇಗೆ ಉಪಯೋಗಿಸಿಕೊಳ್ಳಬೇಕು ಎಂಬುದು ಮುಖ್ಯ. ಅವರ ಎದುರುಗಡೆ ಕೂತ್ಕೊಂಡು ವ್ಯಂಗ್ಯ ಚಿತ್ರ ಮಾಡಿದ್ರೆ ಅದು ಸರಿಯಾಗಿ ಕಾಣಿಸೋಲ್ಲ. ಯಾಕೆಂದರೆ ಅದರಲ್ಲಿ ಒಬ್ಬರನ್ನು ಕಾಣುವ, ಗ್ರಹಿಸುವ ದೃಷ್ಟಿಯಲ್ಲಿ ಅಂತರವಿದೆ.

 • ವೆರಿ ಇಂಟರೆಸ್ಟಿಂಗ್

ಹೌದು. ನಾನು ಇದರ ಬಗ್ಗೆ ಬಹಳ ಆಳವಾಗಿ ಯೋಚಿಸಿದ್ದೇನೆ.

 • ಅಂದ್ರೆ ಅದ್ರಿಂದ ಅವನ ಎಸ್ಸೆನ್ಸ್ (ಸತ್ತ್ವ) ನಿಮಗೆ ಸಿಗುತ್ತೆ ಅಲ್ವ?

ಈಗ ಉದಾಹರಣೆಗೆ, ಓ ಏನಪ್ಪಾ ಒಳ್ಳೆ ಕಾಲೆಜ್ ಫ್ರೊಫೆಸರ್ ಥರಾ ಇದ್ದಾನೆ ನೋಡೋಕೆ. ಹಿ ಲುಕ್ಸ್ ಲೈಕ್ ಎ ಕಾರ್ಪೆಂಟರ್, ಅವನು ರೇಲ್ವೇ ಇಂಜಿನಿಯರ್ ಥರ ಇದ್ದಾನೆ ಅಥವಾ ಅವನು ನೋಡೋಕೆ ಮಿನಿಸ್ಟ್ರ ಹಾಗೆನೇ ಇದ್ದಾನೆ, ಅಂತ ಹೇಳೋದಿಲ್ವೆ? ಹಾಗೆ, ಅದು ವೃತ್ತಿ. ಅದು ನಿಮಗೆ ವ್ಯಕ್ತಿತ್ವಾನೂ ಕೊಡುತ್ತೆ, ಹಗೆನೇ ಅಸ್ತಿತ್ವಾನೂ ಒದಗಿಸುತ್ತೆ. ಆಮೇಲೆ ಗಾಂಧಿ, ಜಿನ್ನಾರಂಥವರ ವಿಷಯದಲ್ಲಿ ಅದು ಬೇರೆ ಥರಾನೇ ಇರ್ತದೆ.

 • ನಾನು ಮೊನ್ನೆ ಚರ್ಚಿಲ್‌ನ ಒಂದು ಕಾರ್ಟೂನ್ ನೋಡ್ದೆ. ಬರೀ ಬೆನ್ನು ಅಷ್ಟೇ. ಇನ್ನೊಂದು ನನ್ನದೇ. ಅದು ಬಹಳ ಇತ್ತೀಚಿಗಿನದು. ಅಲ್ಲೊಂದು ಮೇಜು. ಮತ್ತು ನನ್ನ ಕುರ್ಚಿ ಹಾಗೂ ನನ್ನ ಕಾಲು ಅಷ್ಟೇ. ಯಾವ ವ್ಯಕ್ತಿನೂ ಇಲ್ಲ. ಆದರೆ ಪ್ರತಿಯೊಬ್ಬರೂ ಅದು ನಂದೇ ಅಂತ ಹೇಳಿದ್ರು.

ಎಕ್ಸಾಕ್ಟ್‌ಲೀ. ಮೊಣಕಾಲು ಎಲ್ಲ. ಕೈ ಸ್ವಲ್ಪ ಲೂಸ್ ಆಗಿ.

 • ಹೌದು. ಆಮೇಲೆ ಟೇಬಲ್‌ನಲ್ಲಿ ಆರ್‌ ಯೂ ಸ್ಟಿಲ್ ರೈಟಿಂಗ್ ಅಂತ ಒಂದು ಸಾಲು ಬೇರೆ. ಅವರು ಸ್ಟಿಲ್ ಎನ್ನುವುದನ್ನು ಯಾಕೆ ಕೇಳಿದ್ರೋ ಗೊತ್ತಿಲ್ಲ.

(ನಗು) ನನ್ನನ್ನೂ ಕೇಳ್ತಾರೆ ಕೆಲವರು. ಆ ವ್ಯಂಗ್ಯಚಿತ್ರವನ್ನೆಲ್ಲಾ ನೀವೇ ಬರೆಯುತ್ತೀರಾ ಅಂತ. ಆಮೇಲೆ ಅದರಲ್ಲಿರುವ ಸಾಲುಗಳನ್ನು, ಕ್ಯಾಪ್ಷನ್‌ಗಳನ್ನೂ ನೀವೇ ಬರೆಯುತ್ತೀರಾ ಎರಡನ್ನೂ ನೀವೇ ಮಾಡ್ತೀರಾ ಅಂತಾನೂ ಕೇಳುವವರಿದ್ದಾರೆ. ಎರಡನ್ನೂ ಮಾಡದಿದ್ರೆ ಸ್ವಾಮಿ, ನಾನೇ ಒಂದು ಕಾರ್ಟೂನ್‌ ಅಷ್ಟೇ.

ಇಬ್ಬರೂ: (ಭಾರೀ ನಗು)

 • ಥ್ಯಾಂಕ್ಯೂ

 

—-
ಅಕ್ಷರ ರೂಪ ಮತ್ತು ಭಾಷಾಂತರ :
ಡಾ. ನಿತ್ಯಾನಂದ ಬಿ. ಶೆಟ್ಟಿ.
೧೯೮೪ರ
ಮಾರ್ಚ್‌ ೧೬ರಂದು ಮೈಸೂರು ಆಕಾಶವಾಣಿಗಾಗಿ ನಡೆದ ಸಂವಾದ.

ರಾಶಿಪುರಂ ಕೃಷ್ಣಸ್ವಾಮಿ ಅಯ್ಯರ್ ಲಕ್ಷ್ಮಣ್‌ ಮೈಸೂರಲ್ಲಿ ೧೯೨೪ ರಲ್ಲಿ ಜನಿಸಿದರು. ಆರ್.ಕೆ.ನಾರಾಯಣ್ ಇವರ ಹಿರಿಯ ಸಹೋದರ. ಮನೆಯ ನೆಲ, ಗೋಡೆ, ಬಾಗಿಲುಗಳ ಮೇಲೆಲ್ಲ ಚಿತ್ರ ಬರೆಯಲು ಕಲಿತ ಲಕ್ಷ್ಮಣ್ ಶಾಲಾ ಕಾಲೇಜುಗಳಲ್ಲಿ ಅಧ್ಯಾಪಕರ ವ್ಯಂಗ್ಯ ಚಿತ್ರಗಳನ್ನು ಬರೆದರು. ಪ್ರಸಿದ್ಧ ಬ್ರಿಟಿಷ್ ವ್ಯಂಗ್ಯ ಚಿತ್ರಕಾರ ಡೇವಿಡ್ ಲೋ ಲಕ್ಷ್ಮಣ್ ಮೇಲ ಅಪಾರ ಪ್ರಭಾವ ಬೀರಿದವರು. ತಮ್ಮ ಆತ್ಮಕತೆ ದಿ ಟನೆಲ್ ಆಫ್ ಟೈಮ್‌ನಲ್ಲಿ ಅವರೇ ಹೇಳಿಕೊಳ್ಳುವಂತೆ ಅವರು ತನ್ನ ಕೋಣೆಯ ಕಿಟಕಿಯ ಹೊರಗೆ ಕಂಡ ಒಣಕಡ್ಡಿಗಳು, ತರಗೆಲೆಗಳು, ಹರಿದಾಡುವ ಸಣ್ಣಪುಟ್ಟ ಹಾವುಹರಣೆಗಳು, ಸೌದೆ ಒಡೆಯುತ್ತಿರುವ ಕೆಲಸದವ ಮತ್ತು ಮುಖ್ಯವಾಗಿ ಎದುರಿನ ಕಟ್ಟಡಗಳ ಮೇಲೆ ವಿವಿಧ ಭಂಗಿಗಳಲ್ಲಿ ಪ್ರತ್ಯಕ್ಷವಾಗುತ್ತಿದ್ದ ಕಾಗೆಗಳು ಇಂಥ ಯಾವುದೇ ವಸ್ತುವನ್ನಾದರೂ ಎಡೆಬಿಡದೆ ಚಿತ್ರಿಸುತ್ತಾ ಬಂದರು. ಎಳವೆಯಲ್ಲಿ ’ರಫ್, ಟಫ್‌ ಆಂಡ್ ಜಾಲಿ’ ಎಂಬ ಸ್ಥಳೀಯ ಕ್ರಿಕೆಟ್ ತಂಡದ ನಾಯಕರಾಗಿದ್ದರು. ಲಕ್ಷ್ಮಣ್ ತಮ್ಮ ಹೈಸ್ಕೂಲು ವಿದ್ಯಾಭ್ಯಾಸದ ನಂತರ ಮುಂಬೈನ ಪ್ರತಿಷ್ಠಿತ ಜೆಜೆ ಸ್ಕೂಲ್ ಆಫ್‌ ಆರ್ಟ್ಸ್‌ ಸೇರಲು ಕನಸಿದರಾದರೂ ಪ್ರವೇಶ ಸಿಗದೇ ನಿರಾಶರಾದರು. ಹಾಗಾಗಿ ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ. ಪದವಿ ಪಡೆದರು. ಲಕ್ಷ್ಮಣ್‌ರವರ ಚಿತ್ರಗಳು ಮೊದಲಲ್ಲಿ ಪ್ರಕಟಗೊಂಡದ್ದು ಸ್ವರಾಜ್ಯ ಮತ್ತು ಬ್ಲಿಟ್ಜ್ ಮ್ಯಾಗಜೀನಗಳಲ್ಲಿ. ಅಣ್ಣ ಆರ್.ಕೆ. ನಾರಾಯಣರ ಕತೆಗಳಿಗೆ ದಿ ಹಿಂದೂ ಪತ್ರಿಕೆಗಾಗಿ ಚಿತ್ರಗಳನ್ನು ವಿದ್ಯಾರ್ಥಿ ದೆಸೆಯಲ್ಲೇ ಪ್ರಕಟಿಸಲಾರಂಭಿಸಿದರು. ಕನ್ನಡದ ಹಾಸ್ಯಪತ್ರಿಕೆ ಕೊರವಂಜಿಗಾಗಿಯೂ ಚಿತ್ರಗಳನ್ನು ಬರೆದರು. ಕೊರವಂಜಿಯ ಸ್ಥಾಪಕ ರಾ. ಶಿವರಾಂ, ಲಕ್ಷ್ಮಣ್‌ಗೆ ವಿಶೇಷ ಉತ್ತೇಜನ ನೀಡಿದರು. ಲಕ್ಷ್ಮಣ್‌‌‌ರವರ ಮೊದಲ ಪೂರ್ಣಾವಧಿ ಉದ್ಯೋಗ ಫ್ರೀ ಪ್ರೆಸ್ ಜರ್ನಲ್‌ನಲ್ಲಿ, ರಾಜಕೀಯ ವ್ಯಂಗ್ಯಚಿತ್ರಕಾರನಾಗಿ. ಅನಂತರ ಅವರು ದಿ ಟೈಮ್ಸ್‌ ಆಫ್ ಇಂಡಿಯಾಕ್ಕೆ ಸೇರಿ ಐದಕ್ಕೂ ಹೆಚ್ಚು ದಶಕಗಳ ಕಾಲದಿಂದ ವ್ಯಂಗ್ಯ ಚಿತ್ರಕಾರರು. ಆರ್.ಕೆ.ಲಕ್ಷ್ಮಣ್ ಪಡೆದ ಹಲವು ಪ್ರಶಸ್ತಿಗಳಲ್ಲಿ ಪದ್ಮಭೂಷಣ, ಪದ್ಮವಿಭೂಷಣ, ಪತ್ರಿಕೋದ್ಯಮಕ್ಕಾಗಿ ರಾಮೋನ್ ಮ್ಯಾಗ್ಸೆಸೆ ಪ್ರಶಸ್ತಿ ಪ್ರಮುಖವಾದವು.

* * *