• ನಾವಿಬ್ಬರೂ ಇಲ್ಲಿ ಭೇಟಿಯಾದಾಗ ಕನ್ನಡದಲ್ಲಿ ಮಾತಾಡಿದ್ದು, ನೀವು ನನಗೆ ಅಂದು ನಿಮ್ಮ ನನ್ನ ದಿನಗಳುಪುಸ್ತಕದ ಹಸ್ತಪ್ರತಿಯನ್ನು ಕೊಟ್ಟದ್ದು ನೆನಪಿಗೆ ಬರುತ್ತದೆ.

ಹೌದು. ಹೌದು.

 • ಪುಸ್ತಕ ನನಗೆ ತುಂಬಾ ಇಷ್ಟ ಆಯಿತು. ಅದನ್ನು ಪುನಃ ಓದಿದಾಗ ನನಗದು ಬಹಳ ಒಳ್ಳೆಯ ಪುಸ್ತಕ ಅಂತ ಅನ್ನಿಸಿತು. ಯಾಕೆ ಹಾಗಾಯಿತು ಅಂದರೆ ಓರ್ವ ಲೇಖಕನಾಗಿ ನಾನು ಬಹಳಷ್ಟು ಬದಲಾಗಿದ್ದೇನೆ. ದಿನಗಳಲ್ಲಿ ನಾನು ಏನು ಮಾಡುತ್ತಿದ್ದೇನೆ ಎಂಬುದು ನನಗೇನೇ ಸ್ಪಷ್ಟವಾಗಿರಲಿಲ್ಲ. ಆಗ ಕೆಲವೊಮ್ಮೆ ನೈಪಾಲ್ ಜೊತೆ ನಾನು ತಮ್ಮ ಬಗ್ಗೆ ವಿಚಾರ ಮಾಡುವಾಗ ತಾವು ಅಂಥ ಗಂಭೀರ ಲೇಖಕರಲ್ಲ ಎಂದುದನ್ನು ನಾನು ಒಪ್ಪಿಕೊಂಡ ಸಂದರ್ಭಗಳಿವೆ ತಾವು ಯಾವತ್ತೂ ಭಾರತದ ಬಗ್ಗೆ ಗಂಭೀರವಾಗಿ ದೂರಿದ್ದು ಕಂಡಿಲ್ಲ. ಭಾರತದ ಸಮಸ್ಯೆಗಳ ಬಗ್ಗೆ ನಾರಾಯಣ್ ಅವರು ಯಾವತ್ತೂ ವಿಚಲಿತರಾಗಿದ್ದಿಲ್ಲ ಎಂಬ ಮಾತು ಬಂದಾಗ ಅಂಥ ಸಂದರ್ಭಗಳಲ್ಲಿ ನಾನು ನೈಪಾಲ್‌ರವರ ಅಭಿಪ್ರಾಯಗಳನ್ನು ಒಪ್ಪಿದ್ದಿದೆ. ಆದರೆ ಒಬ್ಬ ಲೇಖಕನಾಗಿ ಸಾಮಾಜಿಕ, ರಾಜಕೀಯ ಹಾಗೂ ಸಾಂಸ್ಕೃತಿಕ ವಿಷಯಗಳಲ್ಲಿ ಏನು ಮಾಡಬಹುದೆಂಬ ನನ್ನ ಅನಿಸಿಕೆಗಳನ್ನು ನಾನು ಈಗ ಬದಲಾಯಿಸಿಕೊಂಡಿದ್ದೇನೆ.

ಹೌದೇ? ಏನದು? ಅವರು ಏನು ಮಾಡಬಹುದು?

 • ಹಾ ನಾನು ನಿಮ್ಮನ್ನು ಒಪ್ಪುತ್ತೇನೆ. (ನಗು) ನನಗೆ ಅನಿಸಿದ ಹಾಗೆ ದಿನಗಳಂದು ನನ್ನಲ್ಲಿ ಸಹನಾಶಕ್ತಿ ಬಹಳ ಕಡಿಮೆಯಾಗಿತ್ತು. ಆದರೆ ನಿಮ್ಮ ನನ್ನ ದಿನಗಳುಪುಸ್ತಕ ಓದಿದ ನಂತರ ನನ್ನ ಮನ ಮುಟ್ಟಿದ ಕೆಲವು ವಿಷಯಗಳೆಂದರೆ ಮೊದಲನೆಯದಾಗಿ ನಿಮ್ಮ ಧ್ವನಿ. ನಿಮ್ಮ ಧ್ವನಿ ನಿಮ್ಮ ಅನಿಸಿಕೆಗಳನ್ನು ಚಿತ್ರಿಸುತ್ತದೆ ಅದು ನಿಜವಾಗಿ ಪ್ರಶಂಸನೀಯ. ಎರಡನೆಯದಾಗಿ ಅದಕ್ಕೆ ಕಾರಣವಾಗಿರುವ ನಮ್ಮ ಮೈಸೂರು ನಗರ.

ಹೌದು. ಅದು ತುಂಬಾ ಮುಖ್ಯವಾದುದು, ಎಲ್ಲದಕ್ಕಿಂತಲೂ.

 • ಹೌದು. ಅದೇ ಮತ್ತೆ ನೀವು ರೂಪುಗೊಂಡಂಥ ಮಹಾರಾಜಾ ಕಾಲೇಜು. ನೀವು ಮಹಾರಾಜಾ ಕಾಲೇಜ್‌ನ ಕಿಟಕಿಯಿಂದ ಏನನ್ನು ನೋಡಿದ್ದೀರಾ?

ಅದನ್ನು ಬಿಬಿಸಿಯವರು ಪ್ರಸಾರ ಮಾಡಿದ್ದರು. ಅದು ತುಂಬಾ ಚೆನ್ನಾಗಿ ಮೂಡಿಬಂತು. ಅದನ್ನು ನೀವು ನೋಡಿದ್ದೇ ಆದರೆ ಅಚ್ಚರಿ ಏನೂ ಇಲ್ಲ.

 • ಇಲ್ಲ ಸರ್.

ನಿಮ್ಮಲ್ಲೆಲ್ಲಾದರೂ ವೀಡಿಯೋ ಪ್ರದರ್ಶನಕ್ಕೆ ಅನುಕೂಲವಿದ್ದರೆ ನಾನು ನಿಮಗೆ ಆ ಕ್ಯಾಸೆಟ್ ಕೊಡಬಹುದು.

 • ಸರಿ. ನನಗೆ ಅದು ಬೇಕಿತ್ತು. ಅದು ತುಂಬಾ ಚೆನ್ನಾಗಿದೆ. ನಾನೂ ಕೂಡಾ ಅದೇ ಕಾಲೇಜಿನಲ್ಲಿ ಓದಿದ್ದೆ. ಆದರೆ ನಾನು ಮಹಾರಾಜಾ ಕಾಲೇಜ್‌ನ ನನ್ನ ಅನುಭವಗಳನ್ನು ನಿಮ್ಮ ಅನುಭವಗಳೊಂದಿಗೆ ಹೋಲಿಸಿದಾಗ ಅದು ತುಂಬಾ ವಿಭಿನ್ನವಾಗಿತ್ತು. ನಾನು ಕಾಲೇಜ್‌ನಲ್ಲಿ ೫೦ರ ದಶಕದಲ್ಲಿ ಓದಿದ್ದೆ. ಅದು ಸುಮಾರಾಗಿ ನೀವು ನನ್ನ ದಿನಗಳುಪುಸ್ತಕದಲ್ಲಿ ವರ್ಣಿಸಿದ ಹಾಗೆ ಇತ್ತು. ಆದರೆ ಈಗ ಕಾಲೇಜ್‌ನಲ್ಲಿ ತುಂಬಾ ಬದಲಾವಣೆಯಾಗಿದೆ.

ಕಟ್ಟಡದಲ್ಲಿ ಬದಲಾವಣೆಯೇ? ಅಥವಾ ಯಾವ ರೀತಿ?

 • ಕಟ್ಟಡದಲ್ಲಿ ಅಲ್ಲ. ಆದರೆ ಅಲ್ಲಲ್ಲಿ ಗೋಡೆಗಳ ಮೇಲೆ ಬರೆದಿರುವುದು ಕಾಣಿಸುತ್ತದೆ.

ಹೌದಾ?

 • ಆಗಿನ ಕಾಲದಲ್ಲಿ ಮೇಜಿನ ಮೇಲೆ ಬರೆಯುವುದು ಕಾಣಸಿಗುತ್ತಿತ್ತು.

ಹೌದು. ಹೌದು.

 • ಆದರೆ ಈಗ ಗೋಡೆಗಳಲ್ಲಿ ಎಲ್ಲೆಂದರಲ್ಲಿ ದೊಡ್ಡಕ್ಷರಗಳಲ್ಲಿ ಚುನಾವಣೆ, ಜಾಹೀರಾತು ಇತ್ಯಾದಿ ಕಾಣಸಿಗುತ್ತವೆ.

ಹೌದು. ಈಗಿನ ಭೀಕರವಾದ ಸನ್ನಿವೇಶ ಈ ಗೋಡೆಗಳನ್ನು ಮಾಧ್ಯಮವಾಗಿ ಉಪಯೋಗಿಸುವಂಥದ್ದು. ಕೆಲವೊಮ್ಮೆ ಹೀಗೆ ಬರೆದ ಮಾಹಿತಿಗಳು.

 • ಹೇಗನಿಸುತ್ತದೆ ನಿಮಗೆ ಅಂಥ ವಿಷಯಗಳು ಇಷ್ಟವಾಗಲಿಕ್ಕಿಲ್ಲ.

ಹೌದು. ನಾನು ಈ ಜಾಹೀರಾತುಗಳನ್ನು ಇಷ್ಟಪಡುವುದಿಲ್ಲ. ಅದೂ ಕೂಡ ಅಶ್ಲೀಲವಾಗಿರುವ…

 • ಹೌದು. ಹೌದು.

ನೀವು ಈಗ ಕಂಡಿರಬಹುದು. ಕೆಲವು ಜಾಹೀರಾತುಗಳು, ವಾರಪತ್ರಿಕೆಗಳಲ್ಲಿ ಇತ್ಯಾದಿ. ಅದು ಕೂಡಾ ಉಡುಪುಗಳ ಜಾಹೀರಾತುಗಳು. ಅಸಂಬದ್ಧ ರೂಪದರ್ಶಿಗಳು, ಯುವಕ ಯುವತಿಯರು ಒಬ್ಬರನೊಬ್ಬರು ಬಯಸುವ ದೃಶ್ಯಗಳು. ದೇಶದಲ್ಲಿ ಮೊದಲು ಸಿಗದಂಥ ಉಡುಪುಗಳು ಹಾಗೂ ದೃಶ್ಯಗಳು. ಇದನ್ನು ನೋಡುತ್ತಾ ಇದ್ದರೆ ಏನನ್ನಿಸುತ್ತೆ ಅಂದರೆ ನಮ್ಮ ದೇಶದಲ್ಲಿ ನೀರು ಕುದಿಸಲು ಅಥವಾ ಆಹಾರ ಬೇಯಿಸಲು ಏನು ಕಟ್ಟಿಗೆಗೆ ಬರಗಾಲ ಬಂದಿದೆ ಎಂಬುದು. ಇದರಿಂದ ಏನು ತೀಮಾನಕ್ಕೆ ಬರಬಹುದು ಎಂದರೆ ನಮ್ಮ ದೇಶ ಇರುವುದೇ ಈ ಜಾಹೀರಾತಿನಿಂದಾಗಿ. ಇದು ನಿಜವಾಗಿ ಆಶ್ಚರ್ಯಕರ.

 • ಹೌದುನೀವು ಇಂಥ ವಿಷಯಗಳನ್ನು ಧ್ವನಿಸುವುದು ಭಾರೀ ಅಪರೂಪ.

ಹೌದು. ಈಗಿನ ಕಾಲ ನೋಡಿ, ನಾವು ತುಂಬ ಜೋರಾಗಿ ನಮ್ಮ ಅಭಿಪ್ರಾಯಗಳನ್ನು ಧ್ವನಿಸಲಾಗುವುದಿಲ್ಲ. ಕೆಲವೊಮ್ಮೆ ಅದು ಭಿನ್ನಾಭಿಪ್ರಾಯಕ್ಕೆ ಕಾರಣವಾಗುತ್ತೆ. ಕೆಲವೊಮ್ಮೆ ಉಪಕಾರವಾಗುತ್ತೆ. ಅದು ಅಷ್ಟು ಸುಳ್ಳೂಂತ ಅಲ್ಲ, ಈ ವ್ಯಾವಹಾರಿಕ ಬದುಕು ನಮ್ಮ ಪರಿಸರವನ್ನು ಲಾಭಕ್ಕೋಸ್ಕರ ಬಳಸುತ್ತಿದೆ. ಈಗಿನ ಔಷಧ ವ್ಯಾಪಾರಿಗಳು ಇಲ್ಲ ಸಲ್ಲದ ರೋಗಗಳನ್ನು ಹುಡುಕಿ ಹಾಕಿ ಅದಕ್ಕೆ ಔಷಧ ಕೊಡುತ್ತಾರೆ. ನಮ್ಮ ಈ ವೈದ್ಯರನ್ನೇ ತಗೊಳ್ಳಿ. ಈಗ ಕೊಟ್ಟ ಔಷಧಿ ಸ್ವಲ್ಪ ತಿಂಗಳ ನಂತರ ಅವರೇ ನೀವು ಅದನ್ನು ತೆಗೆದು ಕೊಳ್ಳಬಾರದಿತ್ತು. ಇನ್ನೊಂದನ್ನು ತಗೊಳ್ಳಿ ಎಂದು ಹೊಸ ಔಷಧಿಯೊಂದನ್ನು ಬರೆದುಕೊಡುತ್ತಾರೆ. ಹಾಗೆಯೇ ಉಡುಪುಗಳಲ್ಲಿ, ಆಗಿಂದಾಗ್ಗೆ ಬದಲಾವಣೆಯಾಗುತ್ತೆ. ಇಂಥ ವ್ಯಾವಹಾರಿಕ ಜೀವನಶೈಲಿ ನಮ್ಮಲ್ಲಿ ಬೆಳೆಯುತ್ತಿರುವುದು ನಿಜವಾಗಿ ಗಾಬರಿ ಉಂಟು ಮಾಡುತ್ತೆ.

 • ನನಗೆ ಅರ್ಥವಾಗುತ್ತೆ. ನಿಮ್ಮ ಪುಸ್ತಕವನ್ನು ಓದಿರುವ ಕಾರಣ ನಿಮ್ಮ ಭಾವನೆಗಳು ನನಗೆ ಅರ್ಥವಾಗುತ್ತೆ. ನಿಮಗೆ ಮೈಸೂರಿನ ಮೇಲೆ ಇರುವ ವ್ಯಾಮೋಹ. ಅಂದರೆ ರಸ್ತೆ, ಮರಗಳು, ಪ್ರೀತಿ, ವ್ಯಕ್ತಿಗಳು. ಮೈಸೂರನ್ನು ನೀವು ಹಳೆಯ ಗ್ರೀಕ್ ದೇಶಕ್ಕೆ ಹೋಲಿಸುತ್ತೀರಿ.

ಹೌದು, ಅದು ಗ್ರೀಕ್ ದೇಶ.

 • ಹಾಗೇನೇ ನೀವು ಒಬ್ಬ ಉತ್ತಮ ನಡಿಗೆಗಾರ ಎಂಬುದೂ ನನಗೆ ಗೊತ್ತು.

ಹೌದೌದು

 • ನಿಮ್ಮ ಪುಸ್ತಕ ಓದಿದ ನನಗೆ ನೀವು ಬಹಳಷ್ಟು ಮೈಸೂರಿನ ರಸ್ತೆಗಳಲ್ಲಿ ನಡೆದಾಡಿದವರು ಸಂಚರಿಸಿದವರು ಎಂದು ಗೊತ್ತಾಗುತ್ತೆ. ಈಗ ನೀವು ನೋಡಿದರೆ ದಿನಗಳ ಪ್ರಶಾಂತ ವಾತಾವರಣ ಈಗ ಊಹಿಸಲೂ ಅಸಾಧ್ಯ.

ಹೌದು. ಅದು ವಾಸ್ತವಿಕವಾಗಿ ಸಾಧ್ಯವಿಲ್ಲ. ಯಾಕೆಂದರೆ ಎಲ್ಲ ಕಡೆಯಲ್ಲೂ ಬೆಳೆಯುತ್ತಿರುವ ಕಾರ್ಖಾನೆಗಳು. ನಿಮಗೆ ಗೊತ್ತಿರಬಹುದು, ನಮ್ಮ ಆಡಳಿತಗಾರರು ಆದಷ್ಟು ಜನರನ್ನು ನಗರ ಪ್ರದೇಶದಿಂದ ಓಡಿಸಲು ಪ್ರಯತ್ನಿಸುತ್ತಾರೆ.

 • ಸರ್, ಅಂದ ಹಾಗೆ ಇದಕ್ಕೆ ತುಂಬಾ ತಡೆ ಇದೆ. ನಿಮಗೆ ಗೊತ್ತಿದ್ದ ಹಾಗೆ ಅಮೇರಿಕದಲ್ಲಿ ಪರಿಸರ ಮಾಲಿನ್ಯದ ಬಗ್ಗೆ ತುಂಬಾ ತಕರಾರುಗಳಿವೆ. ನನಗೆ ನೆನಪಿರುವ ಹಾಗೆ ನಾನು ಅಯೋವಾ ಯೂನಿವರ್ಸಿಟಿಯಲ್ಲಿ ಕಲಿಸುತ್ತಿರುವಾಗ ಅವರು ಒಂದು ಮರ ಕಡಿಯಬೇಕಾಗಿ ಬಂತು. ವಿದ್ಯಾರ್ಥಿಗಳು ಮರವನ್ನೇರಿದವನನ್ನು ಕೆಳಗೆ ಇಳಿಯಲು ಬಿಡಲಿಲ್ಲ.

ಹೌದಾ?

 • ಮರ ಕಡಿಯಲಿಕ್ಕೆ ಬಿಡಲೇ ಇಲ್ಲ. ಇನ್ನೇನೋ ಕಟ್ಟಡ ನಿರ್ಮಾಣ ಮಾಡಬೇಕು ಎಂದಿತ್ತು. ಅದನ್ನೂ ಕೂಡಾ ಬಿಡಲಿಲ್ಲ. ಇದೇ ಪರಿಸ್ಥಿತಿ ಈಗ ಭಾರತದಲ್ಲಿ ಕೂಡ ನಿರ್ಮಾಣವಾಗಿದೆ. ಇತ್ತೀಚೆಗಿನ ದಿನಗಳಲ್ಲಿ ನಾವು ಮರಗಳನ್ನು ಹೋಗಿ ಅಪ್ಪಿ ಹಿಡಿಯುವ ಚಳುವಳಿಗಳನ್ನು ಹಾಗೂ ಮರಗಳನ್ನು ಕಡಿಯಬೇಡಿ ಎಂಬ ಫಲಕಗಳನ್ನು ನೋಡುತ್ತಿದ್ದೇವೆ.

ಹೌದು. ನಾವು ನಮ್ಮ ಯುವ ಪೀಳಿಗೆಯನ್ನು, ಪರಿಸರವನ್ನು ಮಾಲಿನ್ಯದಿಂದ ಕಾಪಾಡಲು ಉಪಯೋಗಿಸಿಕೊಳ್ಳಬಹುದು. ನಾವು ಈ ನಿಟ್ಟಿನಲ್ಲಿ ಸ್ವಲ್ಪ ಮಟ್ಟಿಗಾದರೂ ಸಾಧಿಸಬೇಕು.

 • ನಾನು ನಿಮ್ಮ ಪುಸ್ತಕವನ್ನು ಓದುವಾಗ ಜಾನ್ ಮತ್ತು ಡೈಕ್ ಎಂಬವರು ನಿಮ್ಮ ಬಗ್ಗೆ ಹೀಗೆ ಹೇಳಿದ್ದಾರೆ. ನಾರಾಯಣ್ ಭಾರತದ ಲೇಖಕ. ಅವರೊಂದು ಮಾಯಾಕುಡಿ. ಇದು ನನ್ನ ಪ್ರಕಾರ ಸರಿಯಾದ ಮಾತು. ನಾನು ನಿಮ್ಮ ಪುಸ್ತಕ ಓದಿದಾಗ ಅದು ನಿಜವಾಗಿಯೂ ನನ್ನ ಮನಸ್ಸನ್ನು ಬಹಳ ಆಳವಾಗಿ ಕಲಕಿತು. ನೀವು ಅದರಲ್ಲಿ ಹೇಳಿದ ಮಾತು ನಿಮ್ಮ ವೃದ್ಧಾಪ್ಯದಲ್ಲಿ ನೀವು ಏನನ್ನಾದರೂ ಚಿಂತಿಸುವುದಿದ್ದರೆ ಅದು ಹೊರಗಿನ ಇಂಥ ವಿಷಯಗಳ ಬಗ್ಗೆ.

ಸಾಮಾನ್ಯವಾಗಿ ನನಗೆ ಈ ಮುನ್ಸಿಪಾಲಿಟಿಯ ಆಗು ಹೋಗುಗಳ ಬಗ್ಗೆ ಹದರಿಕೆ. ರಸ್ತೆಗಳಲ್ಲಿ ಬೆಳಕಿಲ್ಲದಿದ್ದರೆ ನಾನು ಕೂಡಲೇ ಮೇಲಧಿಕಾರಿಗಳಿಗೆ ದೂರವಾಣಿಯ ಮೂಲಕ ಅಥವಾ ಕಾಗದದ ಮೂಲಕ ಪೀಡಿಸುತ್ತಾ ಇರುತ್ತೇನೆ. ನಾನು ಸ್ವತಃ ಮೈಸೂರಿನಲ್ಲಿರುವ ಸಾವಿರಾರು ಮರಗಳ ಸಂರಕ್ಷಣೆಗೋಸ್ಕರ ಒದ್ದಾಡಿದ್ದೇನೆ.

 • ನಿಮ್ಮ ಮನೆಯ ಮುಂದಿನ ಮರದ ವಿಷಯ ಬಿಡಿ. ಹೇಗೆ ಅದು ಉದ್ದ ಮತ್ತು ಅಗಲ ಬೆಳೆದಿದೆ. ಅದು ಬಹಳ ಕಾಲ ಉಳಿಯಬೇಕೆಂಬ ಕಾಳಜಿ ನಿಮಗಿದೆ. ಅದೇ ರೀತಿ ಕುಕ್ಕರಹಳ್ಳಿ ಕೆರೆ ಬಗ್ಗೆ ನೀವು ಕಾಳಜಿ ವಹಿಸಿ ಮಾತಾಡಿದ್ದು.

ಹೌದು, ಸ್ವಲ್ಪ ಮಟ್ಟಿಗೆ.

 • ನಾನು ವಿದ್ಯಾರ್ಥಿಯಾಗಿದ್ದಾಗ ಕುಕ್ಕರಹಳ್ಳಿ ಕೆರೆ ಬಗ್ಗೆ ನನಗೆ ಅಪಾರ ಪ್ರೀತಿ. ನನಗನ್ನಿಸುತ್ತೆ ನಮ್ಮಿಬ್ಬರಲ್ಲಿ ಬಹಳ ಆಳವಾಗಿ ಹಂಚಿಕೊಳ್ಳುವಂಥ ವಿಷಯಗಳು ತುಂಬಾ ಇವೆ.

ಕುಕ್ಕರಹಳ್ಳಿ ಕೆರೆ ಇರುವ ಜಾಗ ಬಹಳ ಆಹ್ಲಾದಕರ. ಈ ಸ್ಥಳಕ್ಕೆ ಅದರದ್ದೇ ಆದ ಒಂದು ಪಾವಿತ್ರ್ಯ ಇದೆ. ಅಲ್ಲಿ ಸೂರ್ಯ ಮುಳುಗುವ ವೇಳೆಯಂತೂ ತುಂಬಾ ಸುಂದರ. ನಾನು ಶಾಸ್ತ್ರೀಯ ವರ್ಣಚಿತ್ರಕಾರ ವೆಂಕಟಪ್ಪನವರನ್ನು ಕಂಡಿದ್ದೆ. ಪ್ರತಿ ಸಾಯಂಕಾಲ ೪ ಗಂಟೆ ಸುಮಾರಿಗೆ ಅವರು ಅಲ್ಲಿಯ ಕ್ಲಲು ಬೆಂಚ್‌ನಲ್ಲಿ ಕುಳಿತು ನಾಲ್ಕು ತಾಸು ಕಾಲ ಹಾಗೆಯೇ ಕಳೆದು ಮೌನಿಯಾಗಿ ಮನೆಗೆ ಹಿಂತಿರುಗುತ್ತಿದ್ದರು. ಅವರು ಅಷ್ಟೂ ಹೊತ್ತು ಸೂರ್ಯಾಸ್ತ ಮತ್ತು ನಿಸರ್ಗ ಸೌಂದರ್ಯದಿಂದ ಉಲ್ಲಸಿತರಾಗಿ ಒಂದು ಕಲಾತ್ಮಕ ಚಿತ್ರವನ್ನೇ ಬಿಡಿಸಿದ್ದರು. ಈಗಿನ ಆಧುನಿಕ ಚಿತ್ರಕಾರ ಈ ಚಿತ್ರದಲ್ಲಿರುವ ವಾಸ್ತವಿಕತೆಯನ್ನು ಅಷ್ಟು ಬೇಗ ಒಪ್ಪಲಾರ. ಆದರೆ ಅವರು ತುಂಬಾ ಒಳ್ಳೆಯ ಚಿತ್ರಗಳನ್ನು ಬಿಡಿಸಿ ಅದಕ್ಕೆ ಬಣ್ಣ ಹಾಕಿ ಅದ್ಭುತವಾದ ಕಲಾಕೃತಿಗಳನ್ನು ಕೊಟ್ಟರು. ಹಾಗೆಯೇ ಮೈಸೂರಿನಲ್ಲಿ ಪಾಲ್ ಬ್ರಂಟ್ ಎಂಬವರು ಇದ್ದರು.

 • ಹೌದು. ದೇವರಂಥ ಮನುಷ್ಯ.

ಅವರು ಮೈಸೂರಿನ ಚೆಲುವಿಗೆ ಮನಸೋತು ಇಲ್ಲೇ ನೆಲಸಲು ಬಯಸಿದ ವ್ಯಕ್ತಿ, ನಾನು ನನ್ನ ಪುಸ್ತಕದಲ್ಲಿ ಅವರ ಬಗ್ಗೆ ಬರೆದಿದ್ದೇನೆ.

 • ಹೌದು.

ಬೇರೆ ಯಾವುದೇ ಸ್ಥಳಗಳಿಗೆ ಹೋಲಿಸಿದರೆ ಮೈಸೂರಿನಂಥ ಒಂದು ಸ್ಥಳ ಲೇಖಕನ ಮನೋವಿಕಾಸಕ್ಕೆ ತೀರಾ ಉಪಯೋಗವಾಗುವಂಥ ಸ್ಥಳ, ಬಹಳವಾಗಿ ಧ್ಯಾನಸ್ಥವಾಗುವವನಿಗೆ.

 • ನಿಮಗೆ ಚಾಮುಂಡಿ ಬೆಟ್ಟ ಕೂಡ ತುಂಬಾ ಪ್ರೀತಿ ಅಲ್ಲವೆ?

ಯಾವಾಗಲೂ, ಕೆಲವೊಮ್ಮೆ ಬರೀ ಕಾಲುನಡಿಗೆಯಲ್ಲಿ ನಾನು ಚಾಮುಂಡಿ ಬೆಟ್ಟ ತಿರುಗಿದ್ದುಂಟು. ನಾನು ಯಾವತ್ತೂ ನನ್ನ ಉಡುಪು ಅಥವಾ ನನ್ನ ಚಪ್ಪಲಿಗಳ ಆಲೋಚನೆ ಮಾಡಿದ್ದಿಲ್ಲ. ಯಾವುದೇ ನದೀ ತೀರ, ಬೆಟ್ಟ, ಅಡ್ಡದಾರಿ, ಎಲ್ಲಿ ಹೋದರೂ ಕೂಡ ಮೈಸೂರು ಬಹಳ ಚೆಂದ.

 • ಅಂದು ದಸರಾ ಹಬ್ಬದ ದಿನಗಳಂದು ಚಾಮುಂಡಿ ಬೆಟ್ಟದಲ್ಲಿ ಸುಸ್ವಾಗತಂಎಂದು ಜಾಹೀರಾತಿನ ಬೋರ್ಡು ಕಂಡಾಗ ನಿಮಗೆ ಏನು ಅನಿಸುತ್ತಿತ್ತು? ನಿಮಗೆ ಅದು ಇಷ್ಟ ಆಗುತ್ತಿತ್ತಾ?

ಇಲ್ಲ, ನನಗೆ ಇಷ್ಟ ಆಗುತ್ತಿರಲಿಲ್ಲ. ಆದರೆ ಇಲ್ಲಿ ನಾನು ನನ್ನ ಅಭಿಪ್ರಾಯ ಹೇಳಿದರೆ ಅಧಿಕ ಪ್ರಸಂಗವಾಗುತ್ತದೆ.

 • ಹೌದು, ನೀವು ಜೋರಾಗಿ.

ನಮಗೆ ಅದು ಕಷ್ಟ ಆಗುತ್ತೆ. ಎಲ್ಲಾ ಕಾನೂನಿಗೂ ತಮ್ಮದೇ ಆದ ನೀತಿ ನಿಯಮಗಳಿವೆ. ನಮಗೆ ನಮ್ಮದೇ ಆದ ಕಟ್ಟುಪಾಡುಗಳಿವೆ.

 • ಅಂದರೆ ಮಿರ್ಜಾ ಇಸ್ಮಾಯಿಲ್ ಥರ. ಅವರು ನಿಮಗೆ ತುಂಬಾ ಇಷ್ಟ ಆದ ವ್ಯಕ್ತಿ.

ತುಂಬಾ ಅಪರೂಪ. ತುಂಬಾ ಅಪರೂಪ. ಅವರಂಥವರು ಬಹಳ ಅಪರೂಪ.

 • ಅವರು ತುಂಬಾ ಮರಗಳನ್ನು ನೆಡಿಸಿದ್ದರು.

ಅಷ್ಟು ಮಾತ್ರವಲ್ಲ, ಅವರು ಈ ನಗರದಲ್ಲಿ ಕಟ್ಟಡ ನಿರ್ಮಿಸುವ ಒಳ್ಳೆಯ ಇಂಜಿನಿಯರ್‌ಗಳನ್ನು ಕರೆತಂದಿದ್ದರು. ನಾವು ಈಗ ಕುಳಿತು ಚರ್ಚಿಸುತ್ತಿರುವ ಎದುರಿನ ಕಟ್ಟಡ ಇದೆಯಲ್ಲ, ಅದನ್ನು ನಿರ್ಮಿಸಿರುವವರು ಕೆನ್ನೆಸ್ ಬರ್ಗರ್.

 • ಹೌದಾ?

ಆಗಿನ ಕಾಲದ ಗೌರವಾನ್ವಿತ, ಪ್ರತಿಷ್ಠಿತ ಇಂಜಿನಿಯರ್‌ಗಳಲ್ಲಿ ಒಬ್ಬರು. ಬಹಳ ಯುನೀಕ್ ಆದ ಕಟ್ಟಡ. ಅವರಿಗೆ ಬೇರೆ ಎಷ್ಟೋ ಕೆಲಸ ಮಾಡುವ ಆಸಕ್ತಿ ಇದ್ದರೂ, ಅವರು ಅವಿರತವಾಗಿ ಗಿಡಗಳನ್ನು ನೆಟ್ಟರು. ಕೆಲವು ಗಿಡಗಳು ಸರಿಯಾಗಿ ಬೆಳೆಯದಿದ್ದರೆ, ಅವುಗಳನ್ನು ಕಿತ್ತು ಪುನಃ ಬೇರೆ ಗಿಡಗಳನ್ನು ನೆಡುತ್ತಿದ್ದರು. ಪ್ರತಿದಿನ ಅವರು ಮತ್ತು ಕೃಷ್ಣರಾಜ ಒಡೆಯರ್ ಕಾರಿನಲ್ಲಿ ಮೆಲ್ಲನೆ ನಗರವನ್ನು ಸುತ್ತಿ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕೋ ಅದರಂತೆ ಮುನ್ಸಿಪಲ್ ಅಧ್ಯಕ್ಷರಿಗೆ ಅಥವಾ ಡಿ.ಸಿ.ಗೆ ಕರೆಮಾಡಿ ಸಂಬಂಧಪಟ್ಟ ಕ್ರಮಗಳನ್ನು ಕೈಗೊಳ್ಳಲು ಹೇಳುತ್ತಿದ್ದರು. ಅದರ ನಂತರ ತಾನು ಹೇಳಿದ ಕೆಲಸ ಆಗಿದೆಯೋ ಇಲ್ಲವೋ ಎಂದು ಖಾತ್ರಿಯಾಗಲು ಮತ್ತೊಮ್ಮೆ ನಗರ ಸುತ್ತಿ ಪರಿಶೀಲಿಸುತ್ತಿದ್ದರು. ಅಂದಿನ ಕಾಲದಲ್ಲಿ ಅವರು ತಮ್ಮ ಕೆಲಸದಲ್ಲಿ ಅಷ್ಟು ಭಾಗಿಯಾಗುತ್ತಿದ್ದರು. ಈಗಿನವರಲ್ಲಿ ಅದು ಅಷ್ಟಾಗಿ ಕಾಣಸಿಗುವುದಿಲ್ಲ. ಈಗಿನ ಕಾಲದಲ್ಲಿ ಒಬ್ಬ ಕಮೀಷನರ್ ನೇಮಕ ಆಗಿ ಅವರು ಕೆಲಸಕ್ಕೆ ತೊಡಗುವಷ್ಟರಲ್ಲಿ ಅವರನ್ನು ವರ್ಗಾಯಿಸಲಾಗುತ್ತದೆ. ಇವತ್ತು ಕಮಿಷನರ್‌ ಆಗಿ ನೇಮಕ ಆದವರನ್ನು ಮುಂದಿನ ಜಂಟಿ ಕಾರ್ಯದರ್ಶಿ ಹುದ್ದೆಗೆ ನೇಮಿಸಲಾಗುತ್ತದೆ.

 • ಆದರೆ ನಿಮ್ಮಂಥ ಕಾಳಜಿ ವಹಿಸುವ ಜನರಿದ್ದ ಕಾರಣ ಕಾಲಕ್ಕೂ ಕಾಲಕ್ಕೂ ಬಹಳ ವ್ಯತ್ಯಾಸವಿದೆ. ನೀವು ಕುಕ್ಕರಹಳ್ಳಿ ಕೆರೆ ಉಳಿಸಿ ಕೊಟ್ಟವರು.

ನಾನು ಉಳಿಸಿದ್ದೀನಾ ? ಎಷ್ಟರ ಮಟ್ಟಿಗೆ ಅಂತ ಗೊತ್ತಿಲ್ಲ (ನಗು)

 • ಹೌದು, ನೀವೇ ಮಾಡಿದ್ದು.

ಎಷ್ಟರ ಮಟ್ಟಿಗೆ ಅಂತ ಗೊತ್ತಿಲ್ಲ

 • ಮತ್ತೆ ನೀವು ಅದನ್ನು ಹೇಳಿದಾಗ

ನನ್ನ ಅನಿಸಿಕೆ ಪ್ರಕಾರ ಅದಕ್ಕೆ ಕಾರಣರಾದ ಇನ್ನೊಬ್ಬ ವ್ಯಕ್ತಿ ಎಂದರೆ ಮೈಸೂರು ಮಿತ್ರ ಪತ್ರಿಕೆಯ ಗಣಪತಿಯವರು. ಬಹಳ ಕ್ರಿಯಾಶೀಲ ವ್ಯಕ್ತಿ.

 • ಹೌದು ಜನರು ನಿಮಗೆ ಸಹಕಾರ, ಬೆಂಬಲ ಕೊಟ್ಟಿದರು

ಹೌದು. ಹೌದು ಜನರೂ ಬೆಂಬಲ ಕೊಟ್ಟಿದ್ದರು. ಪತ್ರಿಕೆಯವರೂ ಬೆಂಬಲ ಕೊಟ್ಟಿದ್ದರು.

 • ಸರ್, ನಿಮಗೆ ಗೊತ್ತು. ಮೈಸೂರನ್ನು ನಾನು ಕಂಡಿದ್ದೀನಿ. ನಾನು ಕೂಡ ಮೈಸೂರಿನಲ್ಲಿ ನೆಲೆಸಿದ್ದೆ. ಆದರೆ ಅದು ಈಗ ತುಂಬಾ ಬದಲಾಗಿದೆ. ಈಗಿರುವ ವಾಯು ಮಾಲಿನ್ಯ ಆಗಿರಲಿಲ್ಲ. ಯಾಕೆಂದರೆ ನಮ್ಮ ಶೈಲಿಯೇ ಈಗ ಬದಲಾಗಿದೆ. ನಮ್ಮ ಉಡುಪಿನಲ್ಲಿ, ನಮ್ಮ ಧರ್ಮದಲ್ಲಿ, ಈಗ ನೋಡಿದರೆ ಭಜನೆ ಮಾಡುವಾಗ ಎಷ್ಟೊಂದು ಗಲಾಟೆ ಕೇಳಿಸುತ್ತದೆ. ನಮಗೆ ಮಲಗಲು ಕೂಡ ಆಗುತ್ತಿಲ್ಲ. ಈಗ ಎಲ್ಲ ರೀತಿಯಲ್ಲೂ ಬದಲಾವಣೆ ಆಗಿದೆ. ನಮ್ಮ ಉಡುಪು, ನಡತೆ ತುಂಬಾ ಅಸಹ್ಯವಾಗಿದೆ.

ಬೇರೆಯವರ ಬಗ್ಗೆ ಯೋಚನೇನೇ ಮಾಡಲ್ಲ ಇವರು

 • ಬಹಳ ಗಟ್ಟಿಯಾಗಿ ಗೌಜಿ

ಹೌದು ತುಂಬಾ ಗಲಾಟೆ

 • ಹೌದು. ಮೊದಲಿದ್ದ ಸೌಂದರ್ಯ ಪ್ರಜ್ಞೆನೂ ಕಳೆದುಕೊಂಡಿದ್ದೇವೆ. ನಾವು ಇದರ ಬಗ್ಗೆ ಏನೂ ಮಾಡಬಹುದು. ಇಲ್ಲಿ ನಮ್ಮಂಥ ಕೆಲವರಿಗೆ ನೀವು ದಾರಿ ತೋರಿಸಬೇಕಾಗಿದೆ. ಹೇಗೆ ಅಂತ?

ನನಗೆ ಅನಿಸುತ್ತದೆ. ಮೊದಲನೆಯದಾಗಿ ಈ ಧ್ವನಿವರ್ಧಕವನ್ನು ಬಹಿಷ್ಕರಿಸಬೇಕು. ಅದು ಜೋರಾಗಿ ಅಳವಡಿಸಲಿಕ್ಕೆ ಅವಕಾಶ ಕೊಡದೆ ತಮ್ಮದೇ ಆದ ವಠಾರಕ್ಕೆ ಸೀಮಿತಗೊಳಿಸಬೇಕು. ಆದರೆ ಯಾರೂ ಇದನ್ನು ಪಾಲಿಸುವುದಿಲ್ಲ. ಎಲ್ಲವನ್ನೂ ಉಲ್ಲಂಘಿಸಿ ಬಹಳ ಜೋರಾಗಿ ಮೈಲುಗಟ್ಟಲೆ ಕೇಳುವ ಹಾಗೆ ದಿನ ರಾತ್ರಿ ಅಳವಡಿಸುತ್ತಾರೆ. ಎರಡನೆಯದಾಗಿ ಕರ್ಕಶ ಹಾರ್ನ್, ಈಗಿನ ಕಾಲದ ಹೊಸ ಪ್ರಯೋಗ. ಇದನ್ನೂ ಬಹಿಷ್ಕರಿಸಬೇಕು. ನಗರದೊಳಗೆ ಮಾತ್ರವಲ್ಲದೆ, ಹೈವೇಯಲ್ಲೂ ಕೂಡ. ಅಕಸ್ಮಾತ್ ಲಾರಿ ಬರುವಾಗ ಎಲ್ಲಿಯಾದರೂ ಈ ಏರ್‌ಹಾರ್ನ್‌ ಬಳಸಿದರೆ ಅದು ಚಾಲಕನಿಗೆ ತೊಂದರೆಯಾಗಿ ಅಪಘಾತ ಸಂಭವಿಸುವ ಸಾಧ್ಯತೆ ಇದೆ. ಇಲ್ಲಿ ಸಿಟಿ ಬಸ್ಸು, ಲಾರಿಗಳಲ್ಲೂ ಕೂಡ ಈ ಏರ್ ಹಾರ್ನ್‌ ಅಳವಡಿಸುತ್ತಾರೆ. ಅದರ ಶಬ್ದದಿಂದ ನಮ್ಮ ಮೆದುಳಿಗೆ ಬಹಳ ಹಾನಿಯಿದೆ. ಪೊಲೀಸರಲ್ಲಿ ತಿಳಿಸಿದರೆ ನೀವು ಆ ವಾಹನದ ನಂಬರನ್ನು ನಮಗೆ ತಿಳಿಸಿ ಅನ್ನುತ್ತಾರೆ. ಅದು ನಾವು ಹೇಗೆ ಮಾಡಲು ಸಾಧ್ಯ? ಅದು ನಮಗೆ ಸಂಬಂಧಿಸಿದ್ದಲ್ಲ. ಟ್ರಾಫಿಕ್ ಶಬ್ದ ಮತ್ತು ಟ್ರಾಫಿಕ್ ನಿಯಂತ್ರಣ ಬಹಳ ಪರಿಣಾಮಕಾರಿಯಾಗಿ ಮಾಡಬೇಕಾಗುತ್ತದೆ. ಹಾಗೆಯೇ ಮರಗಳ ರಕ್ಷಣೆ ಕೂಡ ಬಹಳ ಮುಖ್ಯ. ಅದರ ನಡುವೆ ಆಡು ಸಾಕಣೆ, ಹೀಗೆಲ್ಲ ಆದರೆ ಹಳ್ಳಿಗರು ಮೊದಲಿನ ಹಾಗೆ ಹಳ್ಳಿ ಬಿಟ್ಟು ನಗರದ ಕಡೆ ಹೋಗಲಿಕ್ಕಿಲ್ಲ.

 • ಹೌದು

ಈಗ ನೋಡಿ ಈ ಆಡು-ಕುರಿ ಸಾಕುವವರಿಗೆ ರಸ್ತೆ ಬದಿಯ ಮರಗಳ ಸೊಪ್ಪು ಕಡಿಯುವುದು, ರೆಂಬೆ ಕೊಂಬೆ ಕಡಿಯುವುದು ಬಹಳ ಸುಲಭವಾಗಿ ಕಾಣುತ್ತಿದೆ. ನಾನು ಇದನ್ನು ನಮ್ಮ ಮನೆ ರಸ್ತೆ ಮುಂದೆ ಕಾಯುತ್ತೇನೆ. ಉಳಿದ ಕಡೆ ಇದನ್ನು ಯಾರೂ  ಕ್ಯಾರೇ ಮಾಡುತ್ತಿಲ್ಲ.

 • ಇನ್ನೇನು ಆಡಕ್ಕೆ ಸಾಧ್ಯ ಸರ್. ನೋಡಿ ಏರ್ ಹಾರ್ನ್‌ ಬಗ್ಗೆ ನೀವು ಹೇಳಿದ್ದು ಬಹಳ ಮುಖ್ಯ ಅಂಶ.

ನಾವು ಮರ ರಕ್ಷರನ್ನು ಹೊಂದಬೇಕಾಗಿದೆ.

 • ಏನು ಮರ ರಕ್ಷಕರೇ?

ಹಾ. ಮರ ರಕ್ಷಕರು. ಪ್ರತಿ ವಠಾರದಲ್ಲಿ. ಇದನ್ನು ಕಡಿಯಬೇಡಿ, ಅದನ್ನು ಕೀಳಬೇಡಿ ಅಂದರೆ ಅವರು ಮುಟ್ಟುವುದಿಲ್ಲ. ಅವರು ಜಗಳ ಮಾಡುವಂಥವರಲ್ಲ. ಭಾರೀ ಸೌಮ್ಯ ಸ್ವಭಾವದವರು. ಆದರೆ ಅವರಿಗೆ ನೆನಪಿಸುತ್ತಾ ಇರಬೇಕು ಅಷ್ಟೇ.

 • ಹೌದು ನೀವು ಬರೆದಿದ್ದೀರಿ ಅವರು ಹೂವನ್ನು ನಿಮ್ಮ ಮರದಿಂದ ತೆಗೆಯಲು ಬಂದಾಗ ನೀವು ಅವರಿಗೆ ಹೇಳಿದ್ದೀರಿ. ಮರವನ್ನು ಅಲ್ಲಾಡಿಸಿ, ಆದರೆ ಗೆಲ್ಲುಗಳನ್ನು ತುಂಡು ಮಾಡಬೇಡಿ. ಇಷ್ಟು ಹೇಳಿದ ಮಾತ್ರಕ್ಕೆ ನೀವು ಅವರ ಜೊತೆ ಒಂದು ಬಗೆಯ ಸಂವಾದ ಮಾಡಿದಂತಾಯ್ತು..

ಅಲ್ವಾ ಆ ಗುಲ್‌ಮೊಹರ್ ನಮ್ಮ ಮಾರ್ಗದ ತುದಿಯಲ್ಲಿರುವಂಥದ್ದು. ವಿವೇಕಾನಂದ ರಸ್ತೆಯ ಆ ತುದಿಯಿಂದ ಈ ತುದಿಯವರೆಗೆ ಕೆಲವು ಬಹಳ ಅಂದವಾದ ಮರಗಳಿವೆ. ಆದರೆ ಆ ಕುರಿ ಮೇಯಿಸುವವರು ಗುಂಪಿನಲ್ಲಿ ಬಂದು ಅದರ ಗೆಲ್ಲುಗಳನ್ನು ತುಂಡು ಮಾಡುವುದು  ನೋಡಿದರೆ, ನಾನು ಅವರನ್ನು ತಡೆದು ನಿಲ್ಲಿಸುತ್ತಿದ್ದೆ. ಆದರೆ ಬೇರೆಯವರೂ ಕೂಡ ಅಂದರೆ ನನ್ನ ಆಸು ಪಾಸಿನವರೂ ಕೂಡ ಅದನ್ನು ಮಾಡಬೇಕು. ಆಗ ಈ ಕುರಿ ಮೇಯಿಸುವ ಹುಡುಗರಿಗೂ ತಿಳುವಳಿಕೆ ಬರುತ್ತದೆ. ಈ ಎಚ್ಚರ ನಮ್ಮ ಹುಡುಗರಲ್ಲಿರಬೇಕು. ಮತ್ತು ಇನ್ನು ಮುಂದಿನ ದಿನಗಳಲ್ಲಿ ಇದನ್ನು ಅವರು ಬಹಳ ಸಂತೋಷದಿಂದ ಮಾಡಬೇಕು.

 • ಆದರೆ ಈಗಿನ ಯುವ ಜನರು ತುಂಬಾನೇ ಜಾಹೀರಾತುಗಳಿಗೆ ಹಾಗೂ ವೇಗಗತಿಯ ಜೀವನಶೈಲಿಗೆ ಮಾರುಹೋಗುತ್ತಾರೆ. ನಿಮಗೆ ಏನು ಅನಿಸುತ್ತದೆ. ಮಾಧ್ಯಮದಿಂದ ಅವರನ್ನು ದೂರ ಇರಿಸಲು ಸಾಧ್ಯವಿದೆಯೇ?

ಆಗುತ್ತೆ.

 • ಅವರು ಚಿಕ್ಕಂದಿನಲ್ಲಿ ನಿಮ್ಮ ಹಾಗೆ ಕೆಲವು ವಿಷಯಗಳಲ್ಲಿ ಗಮನ ಕೊಟ್ಟಿರದ್ದಿರಬಹುದು. ಆದರೆ ನೀವು ಚಿಕ್ಕಂದಿನಲ್ಲಿ ಬಹಳ ಗಾಢವಾಗಿ ಒಂದು ವಿಷಯದ ಮೇಲೆ ಆಸಕ್ತಿ ಬೆಳೆಸಿಕೊಂಡಿದ್ದೀರಿ. ಅದು ಬಹಳ ಮುಖ್ಯವಾದ ಸಂಗತಿ. ಅದು ನಿಮ್ಮ ಕಾದಂಬರಿಯಲ್ಲಿ ನಿಮ್ಮ ಒಂದು ರೇಖಾಚಿತ್ರವಾಗಿ ಬರುತ್ತದೆ. ಈಗ ಅಮೇರಿಕದವರು ನಿಮ್ಮ ಮಾಲ್ಗುಡಿ ರೇಖಾಚಿತ್ರದ ಮೇಲೆ ಕೆಲಸ ಮಾಡುತ್ತಿದ್ದಾರೆ. ಅವರು ಕುರಿತ ನಕ್ಷೆಯನ್ನೂ ಮಾಡಿಕೊಂಡಿದ್ದಾರೆ ಎಂಬುದನ್ನು ನಾನು ಕೇಳಿದ್ದೇನೆ. ನಕ್ಷೆಗೆ ಇನ್ನೂ ಹಲವು ಹಳ್ಳಿಗಳನ್ನು ಜೋಡಿಸುತ್ತಾ ಹೋಗಬಹುದು.

ಅದು ನನಗೆ ತುಂಬಾ ಸುಲಭವಾಗಿದೆ. ಅದಕ್ಕೆ ನನ್ನದೇ ಆದ ಹಿನ್ನೆಲೆ ಕೂಡ ಇದೆ.

 • ನಿಮ್ಮ ಮಾಲ್ಗುಡಿ ಹೆಚ್ಚೂ ಕಡಿಮೆ ಮೈಸೂರೇ ಅಲ್ವಾ?

ಹೌದು, ನನ್ನ ಪ್ರಕಾರ ಅದು ಬಹಳ ಸೂಕ್ಷ್ಮವಾದ ಪ್ರದೇಶ. ನನ್ನನ್ನು ತೆಗೆದುಕೊಂಡರೆ ನಾನು ತಮಿಳು ಹಾಗೂ ಕನ್ನಡ ಸಂಕರ ಆದವ. ಹಾಗೆಯೇ ಮಾಲ್ಗುಡಿ ಕೂಡ ನನ್ನ ಹಾಗೇನೇ ಒಂದು ಸಂಕರ ಪ್ರದೇಶ.

 • ಸರ್‌, ನಾನು ಏನು ಹೇಳಲಿಕ್ಕೆ ಹೊರಟಿದ್ದೆ ಅಂದರೆ ಮೊದಮೊದಲಿಗೆ ನಾನು ನೀವೊಬ್ಬರು ಲಘು ಧಾಟಿಯ ಬರಹಗಳನ್ನು ಬರೆಯುವ ಬರಹಗಾರರು ಅಂದುಕೊಂಡಿದ್ದೆ. ಮತ್ತೆ ತಾವು ಬಹಳ ಗಂಭೀರವಾಗಿ ಯೋಚನೆ ಮಾಡುವವರಲ್ಲ ಎಂದು. ಆದರೆ ನಿಮ್ಮ ಬರಹಗಳಲ್ಲಿರುವ ನಿಮ್ಮ ಧ್ವನಿಯನ್ನು, ತಮ್ಮ ಭಾವನೆಗಳನ್ನು ಓದಿದಾಗ ತಾವು ಒಬ್ಬ ಬಹಳ ಪ್ರೀತಿ ತುಂಬಿದ, ಪ್ರೀತಿ ತೋರಿಸುವ ವ್ಯಕ್ತಿ ಎಂದು ಅನ್ನಿಸುತ್ತದೆ. ಅಂದರೆ ತಾವು ಜೀವನಮೌಲ್ಯಗಳ ಬಗ್ಗೆ ಅಪಾರ ಪ್ರೀತಿ ಇರುವ ವ್ಯಕ್ತಿ ಎಂದು ಅನ್ನಿಸುತ್ತದೆ ಮತ್ತು ಅದು ನಿಮ್ಮ ಎಲ್ಲ ಬರಹಗಳಲ್ಲೂ ಇದೆ. ಹಳೆಯ ಕಾಲದ ನಮ್ಮ ಸಾಹಿತಿಗಳನ್ನು ಓದಿದಾಗ ಅಂದರೆ ಉದಾಹರಣೆಗೆ ಮಾಸ್ತಿಯವರನ್ನು ಓದಿದಾಗ ಅವರ ಜೀವನ ಮೌಲ್ಯ ಆಧರಿಸಿದ ಲೇಖನಗಳು ಮನುಷ್ಯ ನಾಗರಿಕತೆಯ ಬಗ್ಗೆ, ನಾಗರಿಕ ವರ್ತನೆಗಳ ಬಗ್ಗೆ ಅಪಾರ ಕಾಳಜಿಯಿಂದ ಹುಟ್ಟಿಕೊಂಡ ಹಾಗೆ ಕಾಣಿಸುತ್ತವೆ. ಮನುಷ್ಯನು ರೂಢಿಸಿಕೊಂಡ ಗುಣಗಳು ಆತ ಹೊಂದಿರುವ ಆತ್ಮಶಾಂತಿಯನ್ನು ಹೇಳುತ್ತವೆ. ಹಾಗಾಗಿ ನಾನು ನಿಮ್ಮೊಡನೆ ಮೈಸೂರು ನಗರದ ಬಗ್ಗೆ ಮಾತಾಡಿದೆ. ಅದರ ಸೌಂದರ್ಯವನ್ನು ಹಾಗೆಯೇ ಉಳಿಸಿಕೊಳ್ಳುವ ನಿಮ್ಮ ಕಾಳಜಿಯ ಬಗ್ಗೆ. ನಿಮ್ಮ ಕಾಳಜಿ ಹೀಗೆಯೇ ಮುಂದುವರಿಯಲಿ.

ನಾವೆಲ್ಲರೂ ಅದನ್ನು ಮಾಡಬೇಕು. ಇನ್ನೊಂದು ಅಭಿಪ್ರಾಯ ಏನೆಂದರೆ ಕುಕ್ಕರಹಳ್ಳಿ ಕೆರೆ ಮತ್ತು ಕಾರಂಜಿ ಕೆರೆ ಒಂದು ಟ್ರಸ್ಟ್ ಆಗಿ ಪರಿವರ್ತನೆಗೊಳ್ಳಬೇಕು. ಅದನ್ನು ಗಂಧದ ಎಣ್ಣೆ ಫ್ಯಾಕ್ಟರಿ ಅಥವಾ ಯೂನಿವರ್ಸಿಟಿಗೆ ಕೊಡಬಾರದು. ಯೂನಿವರ್ಸಿಟಿಗೆ ಬೇಕಾದಷ್ಟು ಬೇರೆ ಕೆಲಸಗಳಿವೆ.

 • ಹೌದು. ತುಂಬಾ ಒಳ್ಳೆಯ ಅಭಿಪ್ರಾಯ.

ಹಾ. ಈ ಯೂನಿವರ್ಸಿಟಿಯವರಿಗೆ ಬೇಕಾದಷ್ಟು ಕೆಲಸಗಳಿವೆ. ಅವರು ಬೇರೆಯಲ್ಲಾದರೂ ಜಾಗ ಇದ್ದಲ್ಲಿ ಅವರಿಗೆ ಬೇಕಾಗುವ ಕೆಲವು ಕ್ಲಾಸ್‌ರೂಮ್‌ಗಳನ್ನು ಕಟ್ಕೋಬಹುದು.

 • ನನಗೆ ತುಂಬಾ ಖುಷಿಯಾಯಿತು ನಿಮ್ಮ ಮಾತು ಕೇಳಿ. ಹೌದು ಅವರು ಕುಕ್ಕರಹಳ್ಳಿ ಕೆರೆ ಹತ್ತಿರ ಏನೋ ಕಟ್ಟಲಿಕ್ಕೆ ಹೊರಟಿದ್ದಾರೆ. ನನಗನ್ನಿಸಿದ ಹಾಗೆ ನಾವು ಅದನ್ನು ತಡೆಯಬೇಕು.

ಹೌದು. ನಾವು ಮೊನ್ನೆಯಷ್ಟೇ ಎಲ್ಲರೂ ಒಟ್ಟಾಗಿ ಅದಕ್ಕೆ ನಮ್ಮ ವಿರೋಧವನ್ನು ಸೂಚಿಸಿದ್ದೆವು.

 • ನೀವು ಕಾಗದ ಬರೆದರೆ ಅದು ನಿಜಕ್ಕೂ ಕೆಲಸ ಮಾಡುತ್ತೆ, ಏನಂತೀರಿ.

ಆದರೆ ಎಷ್ಟರ ಮಟ್ಟಿಗೆ ನಾವು ಅದನ್ನು ಸಾಧಿಸುತ್ತೇವೆ ಎನ್ನುವುದು ಗೊತ್ತಿಲ್ಲ. ಅಲ್ಲಿ ಲೋಕೋಪಯೋಗಿ ಇಲಾಖೆಯವರು ಮತ್ತು ಯೂನಿವರ್ಸಿಟಿಯವರು ಬಹಳ ಕ್ರಿಯಾಶೀಲರಾಗಿದ್ದಾರೆ.

 • ಅಂದರೆ ನಮ್ಮ ನಂಬಿಕೆ ಏನೆಂದರೆ ಲೋಕೋಪಯೋಗಿ ಇಲಾಖೆಯವರಿಗಿಂತ ನಮ್ಮ ಪೆನ್ನಿನ ಶಕ್ತಿಯೇ ಹೆಚ್ಚು.

ಆದರೆ ಅವರು ಇನ್ನೂ ಯಾಕೆ ಕೆರೆ ಹತ್ತಿರಾನೇ ಕಟ್ಟಡ ನಿರ್ಮಾಣ ಮಾಡಬೇಕು ಎಂಬುದು ತಿಳಿಯುವುದಿಲ್ಲ. ಆದುದರಿಂದ ಇದನ್ನು ಟ್ರಸ್ಟ್‌ಗೆ ಕೊಡುವುದು ಉತ್ತಮ. ನಮ್ಮ ನಗರಕ್ಕೆ ಒಬ್ಬ ಆರ್ಟ್‌ ಕೌನ್ಸೆಲರ್ (ಕಲಾ ಸಲಹೆಗಾರ) ಬೇಕು ಅಂತ ಅನ್ನಿಸುತ್ತೆ. ಇವನ್ನೆಲ್ಲ ನೋಡಿಕೊಳ್ಳುವುದಕ್ಕೆ. ಆ ಕಾರಂಜಿ ಟ್ಯಾಂಕ್ ನೋಡಿ, ಅದು ಬಹಳ ಸುಂದರವಾದದ್ದು. ಅದರ ಬಗ್ಗೆ ಇವರಿಗೇನಾದರೂ ಕಾಳಜಿ ಇದೆಯೋ ನನಗೆ ಗೊತ್ತಿಲ್ಲ. ಈಗ ಅದು ತುಂಬಾ ದೂರ ಆಗಿದೆ. ಈ ಹಿಂದೆ ನಾನು ಅಲ್ಲಿಗೆ ದಿನಾ ನಡೆದು ಹೋಗುತ್ತಿದ್ದೆ. ಅಲ್ಲಿ ಕೂತು ಒಂದೆರಡು ಸಿಗರೇಟ್ ಸೇದಿ ಗೆಳೆಯರೊಂದಿಗೆ ಹಿಂದೆ ಬರುತ್ತಿದ್ದೆ. (ನಗು).

 • ಈಗಲೂ ನೀವು ದೀರ್ಘ ನಡಿಗೆ ಮಾಡುತ್ತಿರಬಹುದು.

ಇಲ್ಲ ಇಲ್ಲ. ಈಗ ತುಂಬಾ ನಡೆಯಲು ಸಾಧ್ಯ ಆಗುತ್ತಿಲ್ಲ ಬಹಳ ಸುಸ್ತಾಗುತ್ತೆ. ಒಂದು ಕಿಲೋ ಮೀಟರ್‌ಗಿಂತ ಜಾಸ್ತಿ ನಡೆಯಕ್ಕಾಗಲ್ಲ.

 • ಆದರೆ ಇಲ್ಲಿ ಕೆಲವೇ ಮಾರ್ಗಗಳಲ್ಲಿ ಮಾತ್ರ ನಿರಾಳವಾಗಿ ನಡೆಯಬಹುದು.

ಹೌದು. ನಾನು ಈಗ ಯಾದವಗಿರಿಯ ವಲಯದಲ್ಲಿ ಮಾತ್ರ ನಡೆಯುತ್ತಿದ್ದೇನೆ. ಆದರೆ ಸಿಟಿಯಲ್ಲಿ ಸಾಧ್ಯವೇ ಇಲ್ಲ ಅಂತ ಆಗಿದೆ. ನಮ್ಮ ಈ ಮಾತುಗಳನ್ನು ಯಾವುದಾದರೂ ದೇವತೆಗಳು ಕೇಳಿ, ಈ ಕುಕ್ಕರಹಳ್ಳಿ ಕೆರೆ ಮತ್ತು ಕಾರಂಜಿ ಕೆರೆಗಳನ್ನು ಯಾವುದಾದರೂ ಆರ್ಟ್‌ ಕೌನ್ಸೆಲರ್‌ಗೆ ವಹಿಸಿ, ಅಲ್ಲಿ ಇತರ ಕಟ್ಟಡಗಳು ನಿರ್ಮಾಣವಾಗದ ಹಾಗೆ ಅವರು ನಿಗಾ ವಹಿಸಿ, ಸಮರ್ಪಕವಾದ ರೀತಿಯಲ್ಲಿ ಅದನ್ನು ಕಾಪಾಡಲಿ.

 • ಇದು ಒಳ್ಳೆಯ ಶುಭ ಆರಂಭವಾಗಲಿ. ಯಾಕೆಂದರೆ ಎಲ್ಲ ನಗರಗಳಲ್ಲಿ ಇಂಥ ಸ್ಥಳಗಳನ್ನು ಟ್ರಸ್ಟ್‌ಗೆ ವಹಿಸಬೇಕು.

ಮದ್ರಾಸ್‌ನ ಮರೀನಾ ಬಹಳ ಸುಂದರವಾದ ಒಂದು ತಾಣ, ಇಡೀ ನಮ್ಮ ಏಷ್ಯಾದಲ್ಲಿ. ಆದರೆ ಈಗ ಅದು ಹಲವಾರು ಮೂರ್ತಿಗಳಿಂದ ಆಕ್ರಮಿಸಲ್ಪಟ್ಟು ಕಾಣೆಯಾಗಿ ಹೋಗಿದೆ.

 • ನಾವು ಇಂಥ ಸಂಗತಿಗಳು ಆಗದ ಹಾಗೆ ನೋಡಿಕೊಳ್ಳಬೇಕು.

ಹೌದು ಹೌದು.

 • ಇಲ್ಲವಾದಲ್ಲಿ ಬಹಳಷ್ಟು ಮೂರ್ತಿಗೇ ಕಾಣಸಿಕ್ಕಿ ನಮಗೆ ನಡೆಯಲು ಸ್ವಲ್ಪವೂ ಜಾಗ ಇಲ್ಲದಂತಾಗಬಹುದು. (ನಗು) ವಂದನೆಗಳು ಮಿಸ್ಟರ್ ನಾರಾಯಣ್‌.

ನನಗೂ ಕೂಡ ಇದು ಬಹಳ ಸಂತೋಷದ ವಿಷಯ ಆಗಿತ್ತು. ವಂದನೆಗಳು.

 

—-
ಅಕ್ಷರ ರೂಪ ಮತ್ತು ಭಾಷಾಂತರ :
ಡಾ. ನಿತ್ಯಾನಂದ ಬಿ. ಶೆಟ್ಟಿ
೧೯೮೫ರ ಮಾರ್ಚ್ ೧೬ ರಂದು ಮೈಸೂರು ಆಕಾಶವಾಣಿಗಾಗಿ ನಡೆಸಿದ ಸಂವಾದ.

೧೯೦೬ ಅಕ್ಟೋಬರ್ ೧೦ ರಂದು ಮದ್ರಾಸಿನಲ್ಲಿ ಜನಿಸಿದ ರಾಶಿಪುರಂ ಕೃಷ್ಣಸ್ವಾಮಿ ನಾರಾಯಣ್ ತಮ್ಮ ಬಹುಪಾಲು ಜೀವನವನ್ನು ಮೈಸೂರಲ್ಲಿ ನಡೆಸಿದರು. ಇವರು ಭಾರತದ ಪ್ರಸಿದ್ಧ ಆಂಗ್ಲ ಕಾದಂಬರಿಕಾರರಲ್ಲಿ ಒಬ್ಬರು. ನಾರಾಯಣ್ ಅವರ ಕಾದಂಬರಿಗಳು ಪಾತ್ರಗಳ ನೈಜತೆ, ಸರಳತೆ ಮತ್ತು ಮೃದುಹಾಸ್ಯಕ್ಕೆ ಹೆಸರಾಗಿವೆ. ಅವರ ಬಹುಪಾಲು ಕಥೆಗಳು ’ಮಾಲ್ಗುಡಿ’ ಎಂಬ ಕಾಲ್ಪನಿಕ ದಕ್ಷಿಣ ಭಾರತದ ಸಂಧಿಕಾಲದ ಸಣ್ಣ ಪಟ್ಟಣದಲ್ಲಿ ನಡೆಯುತ್ತದೆ. ಇವರ ಮೊದಲ ಕಾದಂಬರಿ ಸ್ವಾಮಿ ಮತ್ತು ಗೆಳೆಯರು. ಇದನ್ನು ಬ್ರಿಟಿಷ್ ಲೇಖಕ ಗ್ರಹಾಂ ಗ್ರೀನ್ ಬಹಳ ಇಷ್ಟಪಟ್ಟು ಪ್ರಕಟಿಸಿದರು. ಇವರ ಕೃತಿಗಳಲ್ಲಿ ಹೆಚ್ಚಿನವು ದೈನಂದಿನ ಜೀವನದ ಜಂಜಾಟಗಳನ್ನು ಕುರಿತಾಗಿವೆ. ನಾರಾಯಣ್‌ ಅವರ ಮುಖ್ಯ ಕಾದಂಬರಿಗಳು ಸ್ವಾಮಿ ಮತ್ತು ಗೆಳೆಯರು, ದಿ ಗೈಡ್ (ಇದು ಹಿಂದಿ ಚಲನಚಿತ್ರವಾಗಿದೆ), ದಿ ಮ್ಯಾನ್ ಈಟರ್ ಆಫ್ ಮಾಲ್ಗುಡಿ, ದಿ ರಾಮಾಯಣ, ದಿ ಇಂಗ್ಲಿಷ್ ಟೀಚರ್, ಮಾಲ್ಗುಡಿ ಡೇಸ್ ಇತ್ಯಾದಿ. ಪದ್ಮಭೂಷಣ, ಪದ್ಮವಿಭೂಷಣ, ಎ.ಸಿ.ಬೆನ್‌ಸನ್ ಮೆಡ್‌ಲ್, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮುಂತಾದ ಪ್ರಶಸ್ತಿಗಳಿಂದ ಪುರಸ್ಕೃತರಾದ ಇವರು ಮೇ ೧೩, ೨೦೦೧ ರಂದು ಮದ್ರಾಸಿನಲ್ಲಿ ನಿಧನರಾದರು.

* * *