• ಅವರು ಇಂಗ್ಲಿಷಲ್ಲಿ ಬರೆದ್ರಾ?

ಇಂಗ್ಲಿಷ್‌ನಲ್ಲಿ ಹಾಂ ಇಂಗ್ಲಿಷನಲ್ಲಿ. ಸೋ ನಾನು ಹೋದೆ ಅವರ ಹತ್ತಿರ. ಆಮೇಲೆ ಇನ್ನೊಂದ್ಸಲ ಹೋದೆ. ನಾನಾಗ ಲೆಫ್ಟಿನೆಂಟ್ ಜನರಲ್ ಆಗಿದ್ದೆ. ಈಸ್ಟ್ ಕಮಾಂಡ್‌, ಆಗ ಯೂನಿಫಾರಂನಲ್ಲಿ ಇದ್ದೆ. ಶೂ ತೆಗೆದು ಇಟ್ಟೆ. ಕುರ್ಚಿನಲ್ಲಿ ಕೂತ್ಕೊಂಡೆ.

 • ನಿಮಗೆ ಕುರ್ಚಿಲಿ ಕೂತ್ಕೋಳಕ್ಕೆ ಹೇಳದ್ರಾ ಸರ್‌?

ಹೌದು. ಕುರ್ಚಿ ಕೊಟ್ರು ಕುತ್ಕೋಳಕ್ಕೆ. ಅವರು ಕೆಳಗೆ ಕೂತಿದ್ರು. ನಾನು ಇಲ್ಲಿ ಕುತ್ಕೋತೀನಿ ಅಂದ್ರು. ’ನೀವು ನಿಮ್ಮ ಪಾದರಕ್ಷೆಯನ್ನ ಪುನಃ ಬಿಚ್ಚಿಟ್ಟಿದ್ದೀರಿ’ ಅಂದ್ರು. “ಹೌದು ಮಾಸ್ಟರ್‌ಜೀ, ’ನಿಮ್ಮಂಥ ದೊಡ್ಡ ವ್ಯಕ್ತಿಗಳನ್ನ ನೋಡೋಕೆ ಬರುವಾಗ, ನಾನು ಗೌರವ ಕೊಡಬೇಕು. ಇದನ್ನ ನಾನು ಪಾಲಿಸಬೇಕು. ಪಾದರಕ್ಷೆ ಬಿಚ್ಚಿಡಬೇಕು’ ’ನೀವೀಗ ಕುತ್ಕೊಳ್ಳಿ. ನೀವು ಅಹಿಂಸೆ ಬಗ್ಗೆ ಮಾತಾಡಿದ್ರಿ. ಒಳ್ಳೇದು. ನನಗೆ ಸಂತೋಷ ಆಯ್ತು. ನಿಮ್ಮ ಅಭಿಪ್ರಾಯ ನಂಗೆ ಅರ್ಥ ಆಗುತ್ತೆ. ನೀವು ಹೇಳೋದನ್ನ ಒಪ್ಕೋತೀನಿ” ಅಂದ್ರು. ’ನಮಗೆ ಯುದ್ಧ ಬೇಡ. ನಾವೆಲ್ಲ ದೇವರ ಮಕ್ಕಳು. ನಮ್ಮ ನಡುವೆ ಬಿರುಸು ಬೆಳೀಬಾರದು. ಎಲ್ಲರೂ, ಜಾತಿ, ಮತ ಇತ್ಯಾದಿ, ಅರ್ಥ ಮಾಡ್ಕೋಬೇಕು. ನಾವೆಲ್ಲ ಒಂದೇ ಕುಟುಂಬದವರು. ಈ ದೇಶದಲ್ಲಿ ನಾವೆಲ್ಲ ಒಂದು ಕುಟುಂಬ, ಭಾರತೀಯರು. ಮತ್ತೆ ನಾವು ಎಲ್ಲ ಜನರನ್ನ, ಎಲ್ಲ ಸಮಯದಲ್ಲಿ ಒಟ್ಟಾಗಿ ಬೆಳೆಸಬೇಕು. ಸ್ವಲ್ಪ ದಿವಸ ಬಿಟ್ಟು ಮತ್ತೆ ಬಾ’ ಅಂದ್ರು. ಸ್ವಲ್ಪ ದಿನ ಆಯ್ತು. ನಾನು ಪುನಃ ಹೋದೆ. ಈಸ್ಟ್ ಕಮಾಂಡ್‌ನಿಂದ ನನ್ನನ್ನ ವೆಸ್ಟ್ ಕಮಾಂಡ್‌ಗೆ ಕಳಿಸಿದ್ರು, ೧೯೪೮ರ ಕಾಶ್ಮೀರಿ ಕಾರ್ಯಾಚರಣೆಯ ಅಧಿಪತ್ಯಕ್ಕೆ. ಅದು ಜನವರಿ ೪೮ರಲ್ಲಿ. ಸೋ, ನಾನು ಅವರನ್ನ ಪುನಃ ಭೇಟಿಯಾದೆ. ಜನವರಿ ೧೯೪೮ ರಲ್ಲಿ ಅವರು ಡೆಲ್ಲಿನಲ್ಲಿದ್ರು. ನಾನು ಡೆಲ್ಲಿಗೆ ಹೋದೆ. ಅವ್ರನ್ನ ನೋಡೋಕೆ. ’ನನ್ನನ್ನ ವೆಸ್ಟರ್ನ್‌ ಕಮಾಂಡ್‌ಗೆ ಕಳಿಸಿದ್ದಾರೆ. ಅಲ್ಲಿಯ ಟ್ರೂಪ್‌ಗಳನ್ನ ಕಮಾಂಡ್ ಮಾಡೋಕೆ, ಕಾಶ್ಮೀರಿ ಕಾರ್ಯಾಚರಣೆಗೆ, ದಯವಿಟ್ಟು ನಂಗೆ ಆಶೀರ್ವಾದ ಮಾಡಿ’ ಅಂತ ಕೇಳ್ಕೊಂಡೆ. ’ನಿಮಗೆ ಸಮಸ್ಯೆ ಆದಾಗ ಅದೃಷ್ಟ ನಿಮ್ಮ ಜೊತೆಗಿರಲಿ. ನಿಮಗೆ ಸಾಧ್ಯ ಆಗೋದಾದ್ರೆ ಎಲ್ಲ ಜಗಳಗಳನ್ನ ಮುಗಿಸಿಬಿಡಿ. ಇದು ನನ್ನ ಆಶೀರ್ವಾದ. ನೀವು ಗೆಲ್ತೀರಿ. ನನ್ನನ್ನ ಆಗಾಗ ಬಂದು ಕಾಣ್ತ ಇರಿ.’ ಅಂದ್ರು.

 • ಅವತ್ತು ಮಾತಾಡ್ತಾ ಇದ್ರಾ ಸರ್ ಅವರು?

ಇಂಗ್ಲಿಷಲ್ಲಿ

 • ಅವತ್ತು ಮೌನ ಇರ್ಲಿಲ್ವ?

ಹೌದು, ಅವತ್ತು ಮೌನ ಇರ್ಲಿಲ್ಲ. ಫುಲ್ ಮಾತಾಡಿದ್ರು. ಮತ್ತೆ ಜನವರಿ ೧೪ಕ್ಕೆ ಹೋದೆ. ನಾನು ಎಲ್ಲಿಂದ ಬಂದೆ ಆವಾಗ? ೧೯೪೮ರ ಜನವರಿ ೧೩ ರಂದು ಅವರೊಬ್ಬ ಮಹಾತ್ಮ. ನೋಡ್ವಾಗ ಮನಸ್ಸು, ಹೃದಯದಲ್ಲಿ ಒಂದು ಶಾಂತಿ ಆಗುತ್ತೆ. ಅವರೊಬ್ಬ ಮಹಾತ್ಮ.

 • ನಾನಿದನ್ನ ಒಬ್ಬ ಗ್ರೇಟ್ ಜನರಲ್ ಹಾಗೂ ಗ್ರೇಟ್ ಜನರಲ್‌ಆಫ್ ಇಂಡಿಯಾ ನಡುವಿನ ಅಭೂತಪೂರ್ವ ಭೇಟಿ ಅಂದ್ಕೋತೀನಿ.

ಗಾಂಧಿಯವರ ಸೆಕ್ರೆಟರಿ ಪ್ಯಾರೇಲಾಲ್ ಅಂತ. ಅವರ ಪುಸ್ತಕದಲ್ಲಿ ಇದನ್ನು ಬರೆದಿದ್ದಾರೆ.

 • ಅವರ ಇದ್ರಲ್ಲಿ ರೆಕಾರ್ಡ್‌ಮಾಡಿದಾರೆ ಸರ್.

ಲಾಸ್ಟ್ ಫೇಸ್ ಅಂತ.

 • ಹೌದು.

ನಿಮಗೆ ತೋರಿಸಿದ್ನಾ ನಾನು. ನೀವು ನನ್ನ ಮನೆಗೆ ಬಂದಾಗ ನಾನದನ್ನ ನಿಮಗೆ ತೋರಿಸಿದ್ನಾ?

 • ಅದನ್ನ ನಾನು ಓದಿದೀನಿ. ಸುಮಾರು ಹತ್ತು ವರ್ಷ ಕೆಳಗೆ ತಮ್ಮ ಮನೆಗೆ ಬಂದಿದ್ದೆ ಸರ್, ನಾನು ನೆನಪು ಮಾಡ್ಕೋಬೇಕು. ನನ್ನ ಇಬ್ಬರು ಚಿಕ್ಕ ಮಕ್ಕಳನ್ನ ಕರ್ಕೊಂಡ್ ಬರ್ತೀನಿ ಅಂತ ತಮಗೆ ಗೊತ್ತಿತ್ತು. ನೀವು ಮುಂಚೇನೆ ನನ್ನ ಮಕ್ಕಳಿಗೆ ಚಾಕಲೇಟನ್ನ ಪ್ಯಾಕೆಟ್ ಮಾಡಿ ಎಲ್ಲ ಕಾದಿರಿಸಿದ್ದಿರಿ. ನನ್ನ ಮಕ್ಕಳು ನಿಮ್ಮ ಮನೆ ನೋಡಿ ಅದೊಂದೊಳ್ಳೆ ಮ್ಯೂಸಿಯಂ ಇದ್ದಂಗಿದೆ ಎಂದಿದ್ದರು. ಇಡೀ ಇಂಡಿಯಾ ಚರಿತ್ರೆ ಅಲ್ಲಿಗೆ ನಿಮ್ಮ ಮನೆಯಲ್ಲಿ.

ಆಂ. ಹೌದು, ಹೌದು.

 • ಆಮೇಲೆ ನಿಮ್ಮ ಕಾರಿನ ಟಾಪನ್ನ ಹೇಗೆ ಎತ್ತೋದು ಅಂತ ನೀವು ಮಕ್ಕಳ ಜೊತೆ ಆಟ ಆಡಿ ಬಿಟ್ಟಿರಿ. ನಮ್ಮ ಜೊತೆ ನೀವು ಮಾತಾಡಲೇ ಇಲ್ಲ. ಇಲ್ಲಿ ಬಂದಿದ್ ಕೂಡಲೇನೂ ಇಲ್ಲಿ ಮಕ್ಕಳಿದ್ದಾರಾ ಅಂತ ಕೇಳಿದ್ರಿ. ನಿಮಗೆ ಬಹಳಾ ಅಭಿಮಾನ ಅಂತ ಕಾಣುತ್ತೆ ಮಕ್ಕಳು ಅಂದ್ರೆ.

ಮಕ್ಕಳು ಅಂದ್ರೆ ಮುಂದಿನ ಜನರು. ಇಂದಿನ ಯುವಕರು ಮುಂದಿನ ಜನರು ಅವರು. ಅವರಿಗೆ ನಮ್ಮ ಕರ್ತವ್ಯ, ಪವಿತ್ರ ಕರ್ತವ್ಯ ಏನು ಅಂದ್ರೆ ಒಳ್ಳೆ ದೇಶ ಉಳಿಸಿ ಹೋಗಬೇಕು. ಹಿಂದುಸ್ಥಾನ್‌ನಲ್ಲಿ ಹಿಂದೂ, ಮುಸ್ಲಿಂ ಜಾತಿಯವರಿದ್ದಾರೆ. ನಾವೆಲ್ಲ ಒಂದೆ ದೇಶದ ಮಕ್ಕಳು. ಒಂದೇ ಸಂಸಾರದವರು. ಅಣ್ಣ ತಮ್ಮಂದಿರು. ಅಕ್ಕ, ತಂಗಿಯಂದಿರು ಆಗಿರಬೇಕು. ಬೇರೆ ಜಾತಿ ಮಾಡಬೇಡಿ, ಮಕ್ಕಳೇ ಅಂತ ಯಾವಾಗ್ಲೂ ಹೇಳೋದು. ನಾನು ಆರ್ಮಿ ಬಿಡುವಾಗ ೧೯೫೩ ರಲ್ಲಿ, ಆಗ ಯಾರೋ ಕೇಳಿದ್ರು “ನೀನು ಏನ್ ಮಾಡ್ತಿ ಈಗ. ಇಲ್ಲಿ ಬಿಟ್ಟು ಹೋಗ್ತಿಯಲ್ಲ.

 • ನೀವು ಆರ್ಮಿಗೆ ಯಾಕೆ ಸೇರಿದ್ರಿ ಸಾರ್? ಅದಕ್ಕೇನಾದ್ರೂ ಕಾರಣ ಇತ್ತಾ?

ನನಗೆ ಜನರ ಸೇವೆ ಮಾಡಬೇಕಿತ್ತು. ನಾನು ವಿವಾಹವಾದೆ, ನಾನು ಮೂವರನ್ನ ವಿವಾಹ ಆದೆ; ಹೆಣ್ಣನ್ನಲ್ಲ ಆದರೆ ಜನರನ್ನೆ. ನನಗೆ ಎಕ್ಸ್‌ಸರ್ವಿಸ್‌ಮೆನ್, ಯುವಜನತೆ ಮತ್ತೆ ಜನರ ಜೊತೆ ವಿವಾಹ ಬಂಧನ ಇದೆ. ಅವರ ಸೇವೆ ಮಾಡಬೇಕು ನನಗೆ. ಕೆಲಸ ಏನು ಬೇಡಾ ಅಂತ. ನೆಹರೂ ನನ್ನ ಕರೆಸಿಬಿಟ್ಟು ಏಪ್ರಿಲ್‌ನಲ್ಲಿ ಕಳಿಸಿದ್ದು ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ಗೆ, ಅಲ್ಲಿದ್ದು ಬಂದೆ ೩ ವಾರ. ಬಂದ ಮೇಲೆ ಬೇರೆ ಏನು ಕೆಲಸ ಏನಿಲ್ಲ. ಸೇವೆ ಮಾಡ್ತೀನಿ. ಆರ್ಟಿಕಲ್ ಬರೆಯೋದು, ಮಕ್ಕಳಿಗೆ ಭಾಷಣ ಮಾಡೋದು, ಸ್ಕೂಲ್ ಕಾಲೇಜ್‌ಗಳಿಗೆ ರೋಟರಿ ಕ್ಲಬ್, ಲಯನ್ಸ್ ಕ್ಲಬ್‌ಗೆ ಹೋಗಿ ಭಾಷಣ ಮಾಡೋದು, ಮತ್ತೇನು ಮಾಡಲ್ಲ.

 • ಆದರೆ ಸರ್‌ನಿಮಗೆ ಒಂದ್ವಿಷಯ ತಿಳಿಬೇಕು. ತಾವು ಬ್ರಿಟಿಷ್ ಆರ್ಮಿಯಲ್ಲಿ ಅಷ್ಟು ವರ್ಷ ಇದ್ರಲ್ಲ.

ಇಂಡಿಯನ್ ಆರ್ಮಿ, ಬ್ರಿಟಿಷ್ ಆರ್ಮಿಯಲ್ಲ ಇಂಡಿಯನ್ ಆರ್ಮಿ.

 • ಸರಿ ಸಾರ್‌ತಪ್ಪಾಯಿತು, ಸ್ವಾತಂತ್ರ್ಯ ಪೂರ್ವ ಕಾಲದಲ್ಲಿ ಅವರ ನಡುವೆ, ಅವರನ್ನು ಯಾವ ಬೇಧವೂ ಇಲ್ಲದೆ ಇರ್ತಾ ಇತ್ತಾ ಸರ್‌ಆಗ?

ನನ್ನ ಒಬ್ಸರ್‌ವೇಶನ್ ಪ್ರಕಾರ ನನಗೆ ಏನೂ ಬೇಧ ಇರ್ಲಿಲ್ಲ. ನನಗೆ ಬಹಳಾ ಸಂತೋಷ. ಏನೂ ಬೇಧ ಮಾಡಿಲ್ಲ. ತೊಟ್ಟು ತೊಟ್ಟು ಇಲ್ಲ. ನನ್ ಮೇಲೆ ಪ್ರೀತಿ ಇತ್ತು ಅವರಿಗೆ. ನನ್ ಮಾತು ಕೇಳ್ತಿದ್ರು. ನನಗೆ ಯಾರೂ ಏನೂ ಮಾಡಿಲ್ಲ. ಯಾರೊಬ್ಬ ಹಾಗೆ ಮಾಡಿಲ್ಲ. ಒಬ್ಬ ಮಾತ್ರ ಒಂದ್ಸಾರಿ ಸ್ಟಾರ್ಕ್‌ ಕಾಲದಲ್ಲಿ, ೧೯೩೩ ರಲ್ಲಿ ಕ್ಯಾಪ್ಟನ್ ಆಗಿದ್ದೆ. ಆಗ ಲಂಚ್‌ಗೆ ಕರೆ ಮಾಡಿದ್ರು. ಯಾವಾಗ್ಲೂ ಕರೆ ಮಾಡ್ತಿದ್ರು, ಎಂಡ್ ವಂಡರ್‌ಫುಲ್‌ ಪೀಪಲ್, ಅವನು ಮಾತ್ರ ಸ್ವಲ್ಪ ಚೇಷ್ಟೆಯವನು. ನಾನೊಬ್ಬನೇ ಇಂಡಿಯನ್. ಮತ್ತೆಲ್ಲ ಇಂಗ್ಲಿಷ್‌ಮೆನ್. ಅವನು ಹೇಳ್ದ ’ನೀವೆಲ್ಲ ಎಷ್ಟೊಂದು ಭಾರತೀಯರಾಗಿಬಿಟ್ಟಿದ್ದೀರಾ. ನೀವೇನು ಹೇಳ್ತಾ ಇದ್ದೀರ? ನಾನು ಹೇಳ್ತೀನಿ ಈ ಸಾರು ಚೆನ್ನಾಗಿಲ್ಲ. ನೀವು ಇಷ್ಟೊಂದು ಭಾರತೀಯರಾಗೋಕೆ ಬಯಸ್ತೀರಾ?’ ನಾನಂದೆ, ನೀವೇನೇ ಹೇಳಿ ಅದು ಒಳ್ಳೆ ಸಾರು ನನಗೆ ಏನೂ ವ್ಯತ್ಯಾಸ ಇಲ್ಲ.

 • ಯಾರು ಅವನು ಇಂಗ್ಲಿಷ್‌ಮನ್ನಾ ಸರ್‌‌?

ಹಾಂ. ಇಂಗ್ಲಿಷ್‌ಮನ್. ನಾನೊಬ್ಬನೇ ಇಂಡಿಯನ್. ಬೇರೆ ಎಲ್ಲ ಇಂಗ್ಲಿಷ್‌ಮೆನ್.

 • ತಾವು ಹೈ ಕಮೀಷನರ್‌ಆಗಿದ್ದಾಗ ಆಸ್ಟ್ರೇಲಿಯಾದಲ್ಲಿ ಬಹಳಾ ಒಳ್ಳೆ ಹೆಸರು ಮಾಡಿದ್ರಿ. ನೀವು ಎಲ್ಲದ್ರಲ್ಲೂ ಸತ್ಯವಾಗಿ, ಪ್ರಾಮಾಣಿಕವಾಗಿ ನೇರವಾಗಿ ಮಾತಾಡಿಬಿಡ್ತ ಇದ್ರಿ. ನೀವು ಸುಮಾರು ರಾಯಭಾರಿಗಳು ಮಾಡಿದ ಹಾಗೆ ಒಳಗೊಂದು ಹೊರಗೊಂದು ಮಾಡ್ತಾ ಇರ್ಲಿಲ್ಲ.

ಇಲ್ಲ, ಇಲ್ಲ.

 • ನಿಮ್ಮ ಬಗ್ಗೆ ಬಹಳ ಅಭಿಮಾನ ಆಸ್ಟ್ರೇಲಿಯಾದಲ್ಲಿ. ಆದರೆ ಅದರ ಜೊತೆಗೆ ತಾವು ಹೀಗೆ ಹೇಳಿದ್ರಿ ಅಂತ ಎಲ್ಲೊ ಓದಿದ್ದೆ. ನೀವು ನಮ್ಮ ವೈರಿಗಳಾಗಿದ್ದವ್ರನ್ನ ನಿಮ್ಮ ದೇಶದೊಳಗೆ ತಗೋತೀರಿ. ನಿಮ್ಮ ಜೊತೆ ಹೋರಾಟ ಮಾಡಿದ ಇಂಡಿಯನ್ಸ್‌ನ ಯಾಕೆ ತಗೋಳಲ್ಲ ಆಸ್ಟ್ರೇಲಿಯಾಕ್ಕೆ ಅಂತ.

ನನ್ನ ಅಭಿಪ್ರಾಯದಲ್ಲಿ, ಒಟ್ಟು ಆಸ್ಟ್ರೇಲಿಯಾ ಪಾಲಿಸಿ ಅದು. ಫರ್ಸ್ಟ್ ಹೇಳ್ದೆ ನಿಮ್ಮ ಖುಷಿ. ಆದರೆ ಬಾಳ ಬೇಸರ ಇದೆ. ನಾವು ಎರಡು ಯುದ್ಧ ಮಾಡಿಬಿಟ್ಟು ಗ್ರೇಟ್ ವಾರ್‌ ಒಂದು ಮತ್ತು ಗ್ರೇಟ್ ವಾರ್‌ ಎರಡು, ಜನರ ರಕ್ತ ಹರಿಸಿಬಿಟ್ಟೆ. ನೋವು ಮಾಡಿಬಿಟ್ವಿ. ಅದಾದ್ಮೇಲೆ ನೀವು ಹೇಳ್ತೀರಿ, ನೀವು ನಮ್ಮ ದೇಶಕ್ಕೆ ಬರಕೂಡದು. ಆದ್ರೆ ಯುದ್ಧ ಮಾಡಿದ ಜಪಾನ್, ಜರ್ಮನಿ ಅವರು ಬರಬಹುದು. ಆದರೆ ನಿಮ್ಮ ಜೊತೆಗೆ ನಿಂತು ಹೋರಾಡಿದ ನಮ್ಮನ್ನು ಮಾತ್ರ ಬರಬಾರದು ಅಂತೀರಿ.

 • ಸರ್‌ಅಷ್ಟು ದಿವಸ ತಾವು ಆರ್ಮಿಯಲ್ಲಿದ್ದು ಅವರ ಜೊತೆಗೆ ಸರಿಸಮವಾಗಿದ್ದು ಅವರ ಜೊತೆಗೆ ಹೋರಾಡಿ ಅವರ ಮನಸ್ಸಿನ ಒಳಗೆ ಇದಿದೆ ಅಂತ ಗೊತ್ತಾದಾಗ ಬಾಳ ದುಃಖ ಆಗಿರಬೇಕಲ್ಲ.

ಬಾಳಾ ಬೇಸರ ಆಯಿತು. ಬಾಳಾ ಬೇಸರ ಆಯಿತು. ಅದು ಆಸ್ಟ್ರೇಲಿಯನಿಸಂ. ಇಂಗ್ಲೆಂಡ್‌ನಲ್ಲಿಲ್ಲ ನೋಡಿ, ಇಂಗ್ಲೆಂಡ್‌ನಲ್ಲಿಲ್ಲ. ಆಸ್ಟ್ರೇಲಿಯಾ ಮಾತ್ರ. ಅಮೇರಿಕಾದಲ್ಲಿಲ್ಲ. ನ್ಯೂಜಿಲ್ಯಾಂಡ್‌ನಲ್ಲಿಲ್ಲ. ಆಸ್ಟ್ರೇಲಿಯಾದಲ್ಲಿ ಮಾತ್ರ.

 • ನಾವು ಇವತ್ತಿಗೂ ಇಂಗ್ಲಿಷ್‌ರಿಂದ ಕಲಿಬೇಕಾದ ಪಾಠ ಯಾವುದು ಅಂತ ತಮಗನಿಸುತ್ತೆ. ಯಾಕಂದ್ರೆ ನೀವು ನಾನು ಮೊದಲು ಹೇಳಿದ ಹಾಗೆ ಒಂದು ಕಡೆ ಅಚ್ಚರ ಭಾರತೀಯ. ಇನ್ನೊಂದು ಕಡೆ ಬ್ರಿಟಿಷ್ ಮೌಲ್ಯಗಳ ಅತ್ಯುತ್ತಮ ಪ್ರತಿನಿಧಿ, ಎರಡೂ ನಿಮ್ಮಲ್ಲಿ ಬೆರೆತುಕೊಂಡಿದೆ. ಯಾಕಂದ್ರೆ ನೀವು ಒಂದು ಕಡೆ ಜೈನೀಸ್ ಎಟ್ಯಾಕ್ ಆದ ಟೈಮ್‌ನಲ್ಲಿ ನೀವು ಹೋಗಿ ಕ್ಯೂನಲ್ಲಿ ನಿಂತಿದ್ರಿ. ನಾನು ಮತ್ತೆ ಸೈನ್ಯ ಸೇರ್ತೀನಿ ಅಂತ. ಅಷ್ಟರ ಮಟ್ಟಿಗೆ ನೀವು ಭಾರತೀಯ ಪರಂಪರೆಗೆ ಸೇರ್ದವ್ರು. ನೀವು ಕೂರ್ಗ್‌ಸಂಸ್ಕೃತಿಯ ಅತ್ಯುತ್ತಮ ಫಲವೂ ಹೌದು. ಜೊತೆಗೆ ಬ್ರಿಟಿಷ್ ಮೌಲ್ಯಗಳನ್ನೆಲ್ಲ ನೀವು ಬಾಳ ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದೀರಿ. ಇವತ್ತಿಗೂ ಬ್ರಿಟಿಷ್ ಮೌಲ್ಯದಲ್ಲಿ ನಿಮ್ಮ ಅನುಭವದಲ್ಲಿ ಬಾಳಾ ಮುಖ್ಯವಾದದ್ದೇನು ಮತ್ತು ದೋಷ ಏನಿದೆ? ತಪ್ಪೇನಿದೆ ಅವರಲ್ಲಿ?

ನನ್ನ ಮಟ್ಟಿಗೆ ದೋಷ ಏನೂ ಕಾಣ್ಲಿಲ್ಲ. ನನಗೆಲ್ಲ ಸಮ. ನಮ್ಮ ಜನದಲ್ಲಿ ಕೆಟ್ಟವರೂ ಇದ್ದಾರೆ ಒಳ್ಳೆಯವರೂ ಇದ್ದಾರೆ.

 • ಅಲ್ಲ, ಇಂಗ್ಲೀಷ್‌ರಿಂದ ನಾವು ಕಲೀಬೇಕಾದ್ದು ಯಾವುದು ಅಂತ?

ಅವರದ್ದು ಸತ್ಯ, ಪ್ರಾಮಾಣಿಕತೆ, ಶಿಸ್ತು. ನಾನೀಗ ಹೇಳಿದೆ ಸತ್ಯ. ನಮ್ಮ ದೇಶದಲ್ಲಿ ಸ್ತ್ರೀಯಾಗಲಿ, ಪುರುಷರಾಗಲಿ, ಯುವಕನಾಗಲಿ, ಯುವತಿಯಾಗಲಿ, ಯಾರೇ ಆಗಲಿ, ಪ್ರೆಸಿಡೆಂಟ್ ಆಗಲಿ, ಪಾಪರ್‌ ಆಗಲಿ, ಪ್ರೈಮ್ ಮಿನಿಸ್ಟರ್ ಆಗಲಿ, ಪ್ಯೂನ್‌ ಆಗಲಿ ಯಾರೇ ಆಗಲಿ ಇವರಲ್ಲಿ ಮೂರು ಗುಣಗಳಿರಬೇಕು. ಆ ಗುಣಗಳೇನು, ಸತ್ಯ, ಪ್ರಾಮಾಣಿಕತೆ, ಶಿಸ್ತು. ಪ್ರತಿಯೊಬ್ಬನಲ್ಲೂ ಇರಬೇಕು. ಅದು ಇವರಲ್ಲಿ ಇತ್ತು – ಸತ್ಯ, ಪ್ರಾಮಾಣಿಕತೆ, ಶಿಸ್ತು. ಈಗ ಬಾಳ ದುಃಖದ ಮಾತು ಇದು. ಈಗ ಹಣ, ಹಣ, ಹಣ, ಹಣ, ಹಣ, ಎಲ್ಲ ಮೋಸ. ಮತ್ತೆ ಈಗ ಸತ್ಯ, ಪ್ರಾಮಾಣಿಕತೆ, ಶಿಸ್ತಿಲ್ಲ. ಅದು ಹೋಯಿತು. ಇದು ಇತ್ತು, ಅವರಿಗೆ, ಬ್ರಿಟಿಷರಿಗೆ ಇದು ಇತ್ತು.

 • ಅದಕ್ಕೆ ಅಂತ ಕಾಣುತ್ತೆ ತಾವು ಬಹಳ ಹಿಂದೆ ಎಲ್ಲರಿಗೂ ಮಿಲಿಟರಿ ಟ್ರೇನಿಂಗ್ ಇರಬೇಕು, ಮಿಲಿಟರಿ ಸರ್ವೀಸ್ ಬೇಡ ಟ್ರೇನಿಂಗ್ ಇರಬೇಕು ಅಂತ ಹೇಳ್ತಾ ಇದ್ರಿ.

ಆರ್ಟಿಕಲ್ ಬರ್ದಿದ್ದೆ. ಇದು ಇಂಗಿತದಲ್ಲಿ ಅನಿವಾರ್ಯವಾದದ್ದು. ಮಾಡಲೇ ಬೇಕಾದ್ದು. ನಮ್ಮ ಯುವಕರನ್ನ ಸದೃಢ ವ್ಯಕ್ತಿಗಳನ್ನಾಗಿ ಮಾಡ್ಬೇಕು. ನೀವೇನು ಮಾಡಬೇಕು ಇವತ್ತು, ದೈಹಿಕ ಕ್ಷಮತೆ, ಮಾನಸಿಕ ಸದೃಢತೆ ಮತ್ತೆ ನೈತಿಕ ಪಕ್ವತೆ, ಶಕ್ತಿ, ಬುದ್ಧಿಶಕ್ತಿ, ವಿದ್ಯೆ, ಬುದ್ಧಿ ಇರಬೇಕು. ಅದಕ್ಕಾಗಿ ಮಾಡಬೇಕು. ಇದು ಕಲಿಸಬೇಕು. ಆರ್ಮಿಗೆ ಮಾತ್ರ ಅಲ್ಲ. ಯಾಕಂದ್ರೆ ಈ ಮೂರು ಗುಣ ಇರುವವರು ಎಲ್ಲಕ್ಕು ಬೇಕು. ಆರ್ಮಿಗೆ ಬೇಕು, ರೇಲ್ವೇಸ್‌ಗೆ ಬೇಕು ಪೊಲೀಸ್‌ಗೆ ಬೇಕು. ಎಲ್ಲರಿಗೂ ಬೇಕು. ಅದಕ್ಕಾಗಿ ಮುಖ್ಯ. ಮಾಡಿದ್ರೆ ಅವರಿಗೆ ಶಿಸ್ತು ಬರ‍್ತದೆ. ಪ್ರಾಮಾಣಿಕತೆ, ಸಸ್ಯ, ಶಿಸ್ತು ಕಲಿಸ್ತಾರೆ ಅದರಲ್ಲಿ. ಏನ್ ಮಾಡೋದು. ಅವಶ್ಯ ಇದೆ. ನಮ್ಮ ದೇಶಕ್ಕೆ ಒಳ್ಳೇದಾಗುತ್ತೆ ಅಂತ. ಈ ಮನುಷ್ಯಂಗೆ ದೇಶವನ್ನ ಆರ್ಮಿ ಮೈಡೆಂಡ್ ಮಾಡ್ಬೇಕು ಅಂತ. ನಮ್ಮ ಪುವರ್ ದೇಶದಲ್ಲಿ ಎಲ್ಲರೂ, ಆರ್ಮಿ ಮೈಡೆಂಡ್ ಆದರೆ ಈ ಗುಣದಿಂದ ದೇಶ ಸೇವೆ ಆಗುತ್ತೆ. ಆರ್ಮಿ ಮಾಡಿದ್ರಲ್ಲ, ಯುದ್ಧಕ್ಕಲ್ಲ, ದೇಶಸೇವೆಗೆ.

 • ಸರ್, ಕೆಲವರು ಹೇಳ್ತಾರೆ, ನಮ್ಮ ದೇಶ ಬಾಳ ಬಡತನದ ದೇಶ. ನಾವು, ಸಿಕ್ಕಾಪಟ್ಟೆ ನಾವು, ಇವತ್ತು ಸೈನ್ಯಕ್ಕೆ ಅಂತ ಖರ್ಚು ಆಡ್ತ ಹೋದ್ರೆ. ನಮ್ಮ ಬಜೆಟ್‌ನಲ್ಲಿ ಬಹಳಾ ಖರ್ಚು ಮಾಡ್ತಾ ಹೋದ್ರೆ, ಉಳಿದದ್ದು ಮಾಡಕ್ಕಾಗಲ್ಲ. ಅದಲ್ಲದೇ ಜಗತ್ತಿನ ರಾಷ್ಟ್ರಗಳು ಎಷ್ಟು ಅಣುಶಕ್ತಿ ಬೆಳೆಸ್ಕೊಂಡು ಬೆಳೆದಿದಾವೆ ಅಂದ್ರೆ ನಾವು ಎಂದೂ ಅವರ ಜೊತೆ ಪೈಪೋಟಿ ಮಾಡೋಕಾಗೋಲ್ಲ. ಅದರಿಂದ ಏನು ಪ್ರಯೋಜನ, ನಾವು ಹೆಚ್ಚು ಹಣವನ್ನ ಉಳಿದಿದ್ದಕ್ಕೆ ಬಳಸಬೇಕು ಅಂತ ಅದಕ್ಕೆ.

ನಮ್ಮ ಮಿಲಿಟರಿ ಖರ್ಚು ಜಾಸ್ತಿ ಇಲ್ಲ. ಬೇರೆ ದೇಶಗಳು ಪಾಕಿಸ್ತಾನ್, ಇಂಗ್ಲೆಂಡ್‌ ಬಹಳ ಮಾಡ್ತಾರೆ. ನಮ್ದು ದೊಡ್ಡ ದೇಶ, ಬಹಳ ದೊಡ್ಡ ದೇಶ ಇದು. ಅದಕ್ಕೆ ಲಕ್ಷಾಂತರ ಸಿಪಾಯಿಗಳಿದ್ದಾರೆ. ಅವರಿಗೆ ಸವಲತ್ತು ಕೊಡ್ಬೇಕು. ಫುಡ್ ಕೊಡ್ಬೇಕು. ಅದಕ್ಕೆ ಹಣ ಖರ್ಚಾಗುತ್ತೆ. ಅದು ಮಾಡಬೇಕು.

 • ಆದ್ರೆ ಸರ್‌ ಮಾಡರ್ನ್ ವಾರ್‌ ಫೇರ್‌ ಇದ್ಯಲ್ಲಾ, ನ್ಯೂಕ್ಲಿಯರ್‌ ವಾರ್‌ಫೇರ್‌ ಎದ್ರು ಎಷ್ಟು ದೊಡ್ಡ ಆರ್ಮಿ ಮಾಡ್ತೀರಿ?

ನಿಮಗೆ ಕಳಿಸ್ತೀನಿ ನಾನು. ಒಂದು ಆರ್ಟಿಕಲ್ ಬರ್ದಿದೀನಿ. ’ಡಿಸ್ ಆರ್ಮಡ್ ಎಂಡ್ ಒನ್ ವರ್ಲ್ಡ್‌ ಗವರ್ನ್ಡ್’ (ನಿಶ್ಶಸ್ತ್ರಿಕೃತ ಏಕಾಡಳಿತದ ಜಗತ್ತು) ನನ್ನ ಆರ್ಟಿಕಲ್ ಅದು.

 • ಅದೇನು ಹೇಳಿ ಸರ್‌.

ದೊಡ್ಡ ಆರ್ಟಿಕಲ್ ಅದು.

 • ಸ್ವಲ್ಪ ಸಾರಾಂಶ ಹೇಳಿ ಸರ್‌, ನಿಮ್ಮನ್ನ ದಣಿಸ್ತಾ ಇದ್ದೀವಿ.

ನಮ್ಮ ಇಂದಿನ ಮಕ್ಕಳು ಮುಂದಿನ ಪ್ರಜೆಗಳು. ಅವರಿಗೆ ನಮ್ಮ ಒಳ್ಳೆ ದೇಶ ಉಳಿಸಿ ಹೋಗಬೇಕು. ಯುದ್ಧ ಗಿದ್ಧ ಇರಬಾರದು. ಆದರೆ ಒಂದೇ ಒಂದು ಗವರ್ನ್‌‌ಮೆಂಟ್ ಇರಬೇಕು. ಇಡೀ ಭೂಲೋಕದಲ್ಲಿ ಒಂದೇ ಒಂದು ಗವರ್ನ್‌‌ಮೆಂಟ್ ಇರಬೇಕು. ಎಲ್ರೂ ಒಂದೇ ಮತ್ತು ನೋ ವಾರ್, ಎಟಾಮಿಕ್ ವಾರ್ ಇರೋದಿಲ್ಲ. ನಿಮ್ಮ ಶಕ್ತಿಯನ್ನ ಆಹಾರ ಉತ್ಪಾದನೆ ಕಡೆ ಉಪಯೋಗಿಸಿ. ವಿನಾಶದ ಕಡೆಗಲ್ಲ. ಅಣುಶಕ್ತಿ ಇತ್ಯಾದಿ ಇದೆಯಲ್ಲ. ಅದೆಲ್ಲ ಪ್ರಯೋಜನಕ್ಕೆ ಬರೋಲ್ಲ. ಕೊಲ್ಲೋದಿಕಲ್ಲ ಮಾಡೋದು. ನಾನು ನನ್ನ ಲೇಖನದ ಪ್ರತಿಯನ್ನ ಕಳಿಸ್ತೀನಿ ಒಂದು ಜಾಗತಿಕ ಸರಕಾರ. ಯುದ್ಧ ಇರಬಾರದು.

 • ತಾವು ಅದನ್ನ ಬರೆದ ಹಿನ್ನೆಲೆಯಲ್ಲಿ ನಿಮ್ಮನ್ನ ಇನ್ನೊಂದು ವಿಷಯ ಕೇಳಬೇಕಂತ ಇದ್ದೆ. ಪಾಕಿಸ್ತಾನ ಮತ್ತು ಇಂಡಿಯಾ ಸ್ನೇಹಿತರಾಗಬೇಕು ಅಂತ ತಾವು ಬಹಳಾ ಪ್ರಯತ್ನ ಪಟ್ಟಿದ್ರಿ ಒನ್ ಮ್ಯಾನ್ ಮಿಷನ್ ಅಂತ ಎಲ್ಲೋ ಒಂದು ಕಡೆ ನೀವು ಹೇಳಿದ್ರಿ.

೧೯೬೪ ರಲ್ಲಿ ಹೋಗಿದ್ದೆ. ಅಯೂಬ್‌ನಲ್ಲಿ ಹೋಗಿದ್ದೆ. ಅವನಿಗೆ ಖಾಯಿಲೆ ಬಂದು ಮಲಕ್ಕೊಂಡಿದ್ದ ಮಂಚದಲ್ಲಿ. ಶುಗರ್ ಏನಿಲ್ಲ. ’ಅಯೂಬ್ ನಮ್ಮ ಸೇನೆ ಎದುರು ಬದುರಾಗಿ ನಿಂತಿರೋದು ತುಂಬಾ ಬೇಸರದ ವಿಷಯ. ನಾವು ಇದಕ್ಕೆ ತುಂಬಾ ಹಣ ಸುರಿದಿದ್ದೇವೆ. ಈ ಹಣದಿಂದಲೆ ನಾವು ಎದುರು ಬದುರು ನಿಂತಿದ್ದೀವಿ. ಒಂದು ಒಟ್ಟಾದ ಸೇನೆ. ಇಂಡಿಯಾ ಮತ್ತು ಪಾಕಿಸ್ತಾನ್, ವಿಭಿನ್ನ ದೇಶಗಳು. ಆದರೆ ಒಂದೇ ಸೇನೆ ಮಾಡ್ಕೋಬಹುದು.

 • ಆಗಿದ್ರೆ ಚೆನ್ನಾಗಿತ್ತು.

ಅವನು ಹಾಸಿಗೆಯಿಂದ ಎದ್ದ, ಇಷ್ಟರವರೆಗೆ ನಾನು ಕೇಳದಿದ್ದಂಥ ಅತ್ಯುತ್ತಮ ಮಾತು ಆಡಿದ.

 • ಹಾಗಂದ್ರೆ?

ನಾನು ಅದಕ್ಕೆ ಪರವಾಗಿದ್ದೇನೆ ಅಂದ್ರು. ಆಮೇಲೆ ಮಲ್ಕೊಂಡ್ರು. ನಿಮ್ಮ ಸರಕಾರ ಈ ಪ್ರಸ್ತಾಪ ಮಾಡಿದರೆ ನಾನು ಒಪ್ಕೋತೀನಿ.

 • ಕಾಮನ್ ಆರ್ಮಿ (ಸಂಯುಕ್ತ ಸೈನ್ಯ)

ಏ ಕಾಮನ್ ಆರ್ಮಿ. ಅವನು ಹೇಳ್ತಾನೆ, ನನಗೆ ಆರೋಗ್ಯ, ವಿದ್ಯೆ ಮತ್ತೆ ದೇಶದ ಅಭಿವೃದ್ಧಿ ಅಂತ ಕೋಟ್ಯಾಂತರ ರೂಪಾಯಿ ಬೇಕು. ನಿನಗೂ ಬೇಕು. ನಮಗೂ ಬೇಕು.

 • ಅದು ಯಾಕೆ ಸಾಧ್ಯ ಆಗ್ಲಿಲ್ಲ?

ನಿಲ್ಲಿ, ನಿಲ್ಲಿ, ಅವನು ಹೇಳ್ದ, ನಿಮ್ಮ ಸರ್ಕಾರ ಈ ಪ್ರಸ್ತಾಪ ಮಾಡಿದ್ರೆ ನಾನು ಸ್ವೀಕರಿಸ್ತೀನಿ. ನಾನು ಡೆಲ್ಲಿಗೆ ಹೋದೆ. ಅಲ್ಲಿ ಹೋಗುವಾಗ, ನನ್ನನ್ನ ಯಾರೂ ಕರೆಸಿರಲಿಲ್ಲ, ನನ್ನ ಖುಷೀಲಿ ಮಾತಾಡಿದ್ದು. ದೊಡ್ಡ ಮನುಷ್ಯ ನೆಹರೂ. ನೆಹರೂ ಕೇಳಿದ್ರು ’ನಿಮ್ಮ ಪ್ರವಾಸ ಹೋಗಾಯ್ತು?’ ’ತುಂಬಾ ಚೆನ್ನಾಗಾಯ್ತು ಸರ್. ನಾನು ಅಯೂಬ್‌ ಜತೆ ಉಳ್ಕೊಂಡಿದ್ದೆ. ತುಂಬಾ ಸಹೃದಯಿ ಮನುಷ್ಯ ಒಂಥರಾ ಹೀರೋ ಅವರು. ಅಂದ್ಹಾಗೆ ಸರ್, ನಾನೊಂದು ಸಲಹೆ ಕೊಟ್ಟೆ. ನಾವು ರಕ್ಷಣಾ ವ್ಯವಸ್ಥೆಗೆ ಅಂತ ತುಂಬಾ ಹಣ ಹಾಳು ಮಾಡ್ತ ಇದ್ದೀವಿ. ಎರಡೂ ದೇಶದವರು ನಾವ್ಯಾಕೆ ಒಂದು ಕಾಮನ್ ಆರ್ಮಿ ಮಾಡ್ಕೊಂಡು ಹಣ ಉಳಿಸಬಾರದು. ಅಯೂಬ್‌ ನನ್ನ ಕೈ ಕುಲುಕಿದ್ರು. ಮತ್ತೆ ಹೇಳಿದ್ರು ’ನಾನದಕ್ಕೆ ಪ್ರಯತ್ನ ಪಡ್ತೀನಿ. ನಿಮ್ಮ ಸರಕಾರ ಪ್ರಸ್ತಾಪ ಮಾಡಿದ್ರೆ ನಾಳೇನೇ ನಾನು ಒಪ್ಕೋತೀನಿ. ನಮಗೆ ಕೋಟಿಗಟ್ಟಲೆ ಹಣ ಬೇಕು. ನಿಮಗೂ ಕೋಟಿಗಟ್ಟಲೆ. ವಿದ್ಯಭ್ಯಾಸ ಆರೋಗ್ಯ ಅಂತ ಬೇಕು. ನಾನು ’ಒನ್‌ ಆರ್ಮಿಯ ಪರವಾಗಿದ್ದೀನಿ.’ ಅದಕ್ಕೆ ನೆಹರು ಅವರು ಹೇಳಿದ್ರು ’ಒಂದೇ ಆರ್ಮಿನಾ? ನಂದು ಇದಕ್ಕೆ ವಿರೋಧ. ನಿಮಗೆ ಕೇಳ್ತಲ್ಲ ’ವಿರೋಧ’, ನಮಗೆ ಈ ಬಗ್ಗೆ ಮಾತಾಡೋದು ಬೇಕಿಲ್ಲ’. ಅವರ ಮನಸ್ಸಲ್ಲಿ ಏನಿತ್ತು ಗೊತ್ತಿಲ್ಲ. ವರು ನಾನು ಮತ್ತು ಅಯೂಬ್‌ ದುರ್ಬಲರು ಹಾಗೇನೋ ಅಂತ ಅಂದ್ಕೊಂಡ್ರು ಬಹಳ ಬೇಜಾರಾಯ್ತು ನಂಗೆ.

 • ನೆಹರೂ ಜತೆ ನಿಮ್ಮ ಸಂಬಂಧ ಹೇಗಿತ್ತು? ನೆಹರೂರವರ ಜೊತೆ

ಅವರ ಸಂಬಂಧ.. ಅವರು ಪ್ರಧಾನ ಮಂತ್ರಿ, ನಾವು..

 • ತಾವು ಅನೇಕ ಸಾರಿ ಭೇಟಿ ಮಾಡಿದ್ದೀರಿ.

ಓಹ್‌.ಎಸ್, ಎಸ್.

 • ಅವರೇ ನಿಮ್ಮನ್ನ ಹೈ ಕಮೀಷನರ್ ಆಗಿ ಕಳಿಸಿದ್ದು ಆಸ್ಟ್ರೇಲಿಯಾಕ್ಕೆ

ಹೌದು. ಮತ್ತ್ಯಾರು ಕಳಿಸಿದ್ದು?

 • ಚೆನ್ನಾಗಿತ್ತಾ ಸರ್‌? ನೀವು ಒಬ್ಬ ಸೈನಿಕರಾಗಿ ಇದ್ದವರು, ಹೈ ಕಮೀಷನರ್‌ಆಗಿ ಅನುಭವ.

ಎಸ್.ಎಸ್.ಎಸ್. ವೆರಿ ಗುಡ್. ಒಳ್ಳೆದಾಯ್ತು. ನಾನು ಹೋದ ಮೇಲೆ ಆಸ್ಟ್ರೇಲಿಯಾಕ್ಕೆ, ಯಾವಾಗ್ಲೂ ಪಾರ್ಟಿ. ಪಾರ್ಟಿ. ಕಾಕ್‌ಟೇಲ್ ಪಾರ್ಟಿ ಅದೇ ಆಗ್ತಿತ್ತು. ಒಂದ್ವಿಷಯ ನಾನು ಏನು ಮಾಡಿದೆ, ನಾನಿಲ್ಲಿ ಬಂದಿದ್ದು ಪಾರ್ಟಿಗೆ ಅಲ್ಲ. ಆಸ್ಟ್ರೇಲಿಯಾ ನೋಡಬೇಕು. ಜನರ ಜೊತೆ ಇರಬೇಕು. ಅಲ್ಲೇ ಇನ್ನೊಂದು ಕಡೆ ಹೋದೆ. ’ನಾನು ಈ ದೇಶಕ್ಕೆ ಕಾಕ್‌ಟೇಲ್ ಪಾರ್ಟಿ ಮಾಡೋಕ್ಕೆ ಬರ್ಲಿಲ್ಲ. ನಾನು ಈ ದೇಶದ ಜನರನ್ನು ಭೇಟಿಯಾಗೋಕ್ಕೆ ಬಂದೆ. ನಾನು ದೇಶದ ಬಗ್ಗೆ ತಿಳ್ಕೊಳಕ್ಕೆ ಬಂದೆ ಮತ್ತೆ ನನ್ನ ದೇಶದ ಬಗ್ಗೆ ತಿಳ್ಸೋಣಂತ ಬಂದೆ. ನಾನು ಕಾಕ್‌ಟೇಲ್ ಪಾರ್ಟಿಗಳಲ್ಲಿ ಭಾಗವಹಿಸದೇ ಇದ್ದರೆ ನಿಮ್ಮ ಅಭ್ಯಂತರ ಇಲ್ಲ ತಾನೆ?’ ’ಓಹ್ ಕ್ಯಾರಿ, ನಿಮಗೆ ಹೇಗೆ ಬೇಕೋ ಹಾಗಿರಿ’ ಒಳ್ಳೆದನಿಸಿತು. ಒಳ್ಳೆ ಮನುಷ್ಯ. ನಾನಲ್ಲಿಂದ ಕಾರು ತಗೊಂಡು ಹೊರಟೆ. ರಸ್ತೆ ಬದಿಯಲ್ಲಿ ಪಬ್ಲಿಕ್ ಬಾರ್‌ಗಳಿತ್ತು. ಅಲ್ಲಿ ಕಾರ್ ನಿಲ್ಲಿಸಿ ಹೋಗ್ತಾ ಇದ್ದೆ. ನಾನು ಕಾರ್‌ಗೆ ಬಾವುಟ ಹಾಕ್ತಾ ಇರ್ಲಿಲ್ಲ. ಡ್ರೈವರ್ ಇರ್ಲಿಲ್ಲ. ನಾನೇ ಡ್ರೈವ್ ಮಾಡ್ತ ಇದ್ದೆ. ನಾನು ಇಂಡಿಯನ್. ನಾನು ಹೈ ಕಮೀಷನರ್‌ ಅಂತ ಹೇಳ್ಲಿಲ್ಲ ಹಾಗೆ ಮಾತಾಡ್ದೆ. ಸ್ಕೂಲ್‌ಗೆ ಹೋಗೋದು. ಯಾವಾಗ್ಲೂ ಕಾರ್‌ನಲ್ಲಿ ಸ್ಟ್ಯಾಂಪ್ಸ್ ಇರೋದು. ಇಂಡಿಯನ್ ಸ್ಟ್ಯಾಂಪ್ಸ್. ಮಕ್ಕಳು ಓಡೋಡಿ ನನ್ನ ಹತ್ರ ಬರ್ತಿದ್ರು. ಹೀಗೆ ಎಲ್ಲರಿಗೂ ಭೆಟ್ಟಿಯಾಗೋದು. ಇನ್ನೊಂದು ಕಡೆ ಹೋದೆ. ೫೦ ವರ್ಷದಲ್ಲಿ ಮೊದಲ ಸಾರಿ ನಾನಲ್ಲಿ ಹೋದೆ. ಎಲ್ಲ ಕಡೆ, ದೊಡ್ಡದು, ಸಣ್ಣದು ಏನಿಲ್ಲ. ಪಾರ್ಟಿ ಗೀರ್ಟಿ ಏನಿಲ್ಲ. ನಾನು ಸುಮ್ನೆ ಹೋಗೋದು, ಜನಗಳ ಹತ್ರ ಮಾತಾಡೋದು. ಅವರಿಗೆ ಅದು ಬಹಳಾ ಇಷ್ಟ ಆಗ್ತಿತ್ತು. ನಾನು ಇಲ್ಲಿಗೆ ವಾಪಾಸ್ ಬರೋ ಮುಂಚೆ, ಆಸ್ಟ್ರೇಲಿಯನ್ ಪೇಪರ್‌ನಲ್ಲಿ, ’ತುಂಬಾ ಬೇಸರದ ವಿಷಯ ನಮ್ಮ ಪಾರ್ಟನರ್‌, ಇಂಡಿಯಾದ ಹೈಕಮೀಷನರ್, ಇಂಡಿಯಾಕ್ಕೆ ವಾಪಸ್ ಹೋಗ್ತಿದಾರೆ’ ಅಷ್ಟೇ ಹೇಳಿದ್ರು. ಪಾಪ ಆಮೇಲೆ ನಾನು ಹಿಂದೆ ಬಂದ್ಬಿಟ್ಟೆ. ಏಪ್ರಿಲ್ ೧೯೫೬ ರಲ್ಲಿ ಹಿಂದೆ ಬಂದೆ. ಮಾರ್ಚ್ ೩, ೧೯೫೯ ಪ್ರಧಾನ ಮಂತ್ರಿ, ಬಾಬ್ ಮೆಂಡೀಜ್ ಪಾರ್ಲಿಮೆಂಟಲ್ಲಿ ಹೇಳಿದ್ರು ’ನಮಗೊಬ್ಬ ಆಸ್ಟ್ರೇಲಿಯನ್ನೇತರ ಗವರ್ನರ್ ಜನರಲ್ ಬೇಕು.’ ಎರಡು ಹೆಸರುಗಳು ಪ್ರಸ್ತಾಪ ಆಯ್ತು. ಒಂದು ಜನರಲ್ ಕಾರಿಯಪ್ಪ, ಇನ್ನೊಂದು ಲಾರ್ಡ್ ಸಿನ್ಹಾ. ಆಸ್ಟ್ರೇಲಿಯಾದ ಜನರಿಗೆ ಜನರಲ್ ಕಾರಿಯಪ್ಪ ಗವರ್ನರ್ ಜನರಲ್ ಆಗಿ ಬರಬೇಕು ಅಂತ. ಭಾರತದಲ್ಲಿದ್ದ ಆಸ್ಟ್ರೇಲಿಯನ್ನರಿಗೆ ಲಾರ್ಡ್ ಸಿನ್ಹಾ ಹೋಗ್ಬೇಕು ಅಂತ. ಕೊನೆಗೆ ಏನಾಯ್ತು, ನೆಹರೂ ಹೇಳಿದ್ರು ಹೈ ಕಮೀಷನ್‌ಗೆ ’ನಾವು ಸಿನ್ಹಾರವರನ್ನ ಕಳಿಸ್ತೇವೆ’. ಹೈ ಕಮೀಷನರ್‌ ಒಪ್ಪಿದ್ರು. ಸಿನ್ಹಾ ಅವರು ಹೋದ್ರು.

 • ನೀವು ಅಲ್ಲಿ ತುಂಬಾ ಜನಪ್ರಿಯರಾಗಿದ್ರಿ

ಹೌದು. ನಾನು ಅಲ್ಲಿಗೆ ೧೯೮೧ ರಲ್ಲಿ ಪುನಃ ಹೋದೆ. ಒಂದು ದೊಡ್ಡ ಪಾರ್ಟಿ ನಡೀತು. ಎಲ್ರೂ ಬಂದಿದ್ರು ಜನರಲ್ಸ್ ’ನಿಮ್ಮ ಸರಕಾರ ನಮಗೆ ನಿಮ್ಮನ್ನ ಗವರ್ನರ್ ಜನರಲ್ ಆಗಿ ಮಾಡ್ಕೊಳಕ್ಕೆ ಬೆಂಬಲ ಕೊಡ್ತಾ ಇಲ್ಲ. ಇಲ್ಲಾಂದ್ರೆ ನೀವು ನಮ್ಮ ಗವರ್ನರ್ ಜನರಲ್ ಆಗಿ ಮಾಡ್ಕೋತಿದ್ದಿವಿ.’ ನಾನು ತುಂಬಾ ಜನಪ್ರಿಯನಾಗಿದ್ದೆ. ಅಲ್ಲಿ ತುಂಬಾ ಚೆನ್ನಾಗಿತ್ತು. ನನಗವರು ತುಂಬಾ ಇಷ್ಟ. ಅವರು ತುಂಬಾ ಒಳ್ಳೆ ಜನ. ನಾನವರನ್ನ ಪ್ರೀತಿಸ್ತೀನಿ.

 • ನಾನು ಸ್ವಲ್ಪ ವಿಷಯಾಂತರ ಮಾಡ್ಲ ಸರ್‌, ಇದರ ಬಗ್ಗೆ ಸ್ವಲ್ಪ ನಿಮ್ಮ ಅಭಿಪ್ರಾಯ ತಿಳ್ಕೋಬೇಕು. ಇಂಡಿಯಾ, ಪಾಕಿಸ್ಥಾನ್ ಒಟ್ಟಿಗೆ ಫ್ರೀ ಆದವು. ಆದರೆ ನಾವು ಡೆಮಾಕ್ರಸಿ ಇಟ್ಕೊಂಡ್ವು. ಬಹಳಾ ತಪ್ಪುಗಳೆಲ್ಲ ಆಗಿದ್ದಾವೆ. ಒಂದು ರೀತಿ ನಾವು ಬೆಳವಣಿಗೆ ಮಾಡ್ಕೊಂಡು ಬಂದಿದೀವಿ. ನಾವು ಸ್ವಲ್ಪ ಮಾಡಕ್ಕೆ ನೋಡ್ತೀವಿ. ನೀವು ನಮ್ಮ ದೇಶವನ್ನ ಸ್ವಚ್ಛ ಮಾಡೋದಕ್ಕೆ ಬೇಕಾದಷ್ಟು ಕಡೆ ಓಡಾಡಿದೀರಿ, ಮಾತಾಡಿದೀರಿ, ಎಲ್ಲಾ ಮಾಡಿದೀರಿ. ಆದರೆ ಪಾಕಿಸ್ಥಾನ್‌ದಲ್ಲಿ ಆರ್ಮಿ ಪವರ್‌ಗೆ ಬಂತು. ಇವಾಗ್ಲೂ ಆರ್ಮಿಯೇ ಅವರಲ್ಲಿ ಇದೆ. ಆಧರೆ ಅವರು ಅನೇಕ ವಿಷಯದಲ್ಲಿ ನಮಗಿಂತ ಹಿಂದುಳಿದಿದಾರೆ ಅಂತ   ನನಗನಿಸುತ್ತೆ. ಯಾವುದರಲ್ಲಿಂತ ಅಂದ್ರೆ, ಸರಿಯಾದ ಒಂದು ಆಡಳಿತವನ್ನು ಕೊಡೋದ್ರಲ್ಲಿ ಅಥವಾ ಜನರಿಗೆ.

ಬೇಡ. ಅದರ ವಿಷಯ ಬೇಡ. ಮಾತಾಡಕ್ಕೆ ನಂಗಿಷ್ಟ ಇಲ್ಲ.

 • ಆರ್ಮಿಗೆ ರಾಜಕೀಯವನ್ನ ಡೀಲ್ ಮಾಡಕ್ಕೆ ಆಗಿಲ್ಲ ನೋಡಿ.

ಇಲ್ಲ, ಇಲ್ಲ.

 • ಅದರ ವಿಷಯ ಮಾತಾಡೋದು ಬೇಡ್ವ?

ಇಲ್ಲ. ಇಲ್ಲ. ನಂಗೆ ಅದಿಷ್ಟ ಇಲ್ಲ.

 • ಈಗಿನ ಯುವ ಜನಾಂಗ, ಸರ್‌ತಮ್ಮ ದೃಷ್ಟಿಯಲ್ಲಿ, ತಾವು ೮೫ ವರ್ಷ ನೋಡಿದ್ದೀರಿ, ಬಹಳ ಬದಲಾವಣೆ ಆಗ್ತಾ ಇದೆ. ಒಳ್ಳೆ ದಿಕ್ಕಿನಲ್ಲೋ ಕೆಟ್ಟ ದಿಕ್ಕಿನಲ್ಲೋ, ತಮಗೇನನಿಸುತ್ತೆ?

ನನ್ನ ದೃಷ್ಟಿಯಲ್ಲಿ ನಮ್ಮ ಜನರಲ್ಲಿ ಮತ್ತೆ ಯುವಕರಲ್ಲಿ ಏನೂ ತಪ್ಪಿಲ್ಲ. ಇದೆಲ್ಲ ಕೆಟ್ಟ ರಾಜಕಾರಣಿಗಳು. ಅವರೇ ಹಾಳು ಮಾಡ್ತಿರೋದು. ಲಂಚ ಕೊಡ್ತಾರೆ. ಹೇಳ್ತಾರೆ ಹೋಗ್ರೋ ಆಚೆ ಕಡೆ ಮುಸ್ಲಿಂರುಂಟು ಅಲ್ಲಿ, ಹೊಡಿ ಅವರಿಗೆ ಅಂತ. ನೋಡು ಬಸ್ಸುಂಟು ಅಲ್ಲಿ, ಹೊಡಿ ಅಂತ. ನೀನು ಹೋಗಿ ಇದು ಮಾಡು. ಏನ್ ಮಾಡ್ತಾರೆ, ಮಕ್ಕಳಿಗೆ, ಯುವಕರಿಗೆ, ಸಾಲ ಕೊಡ್ತಾರೆ. ಒಳ್ಳೆ ರಾಜಕಾರಣಿಗಳು ಬೇಕು ಒಳ್ಳೆ ಜನರಿಗೆ.

 • ವಯಸ್ಸಾದವರು, ಹಿರಿಯರು, ಯಾಕಂದ್ರೆ ನೀವು ಭಾರತ ದೇಶದ ಮಹಾನ್ ಪುತ್ರ ನೀವು ಮಾರ್ಗದರ್ಶನ ಮಾಡೋದ್ರಲ್ಲಿ ಸಹನೆ ಕಳ್ಕೋಬಾರ್ದು. ತಾವು ಕಳ್ಕೊಂಡಿಲ್ಲಂತ ನಮಗ್ಗೊತ್ತು. ಏನೋ ಸರಿ ಹೋಗ್ತದೆ ಅಂತ. ಆದರೆ ಮುಖ್ಯವಾಗಿ ನಮ್ಮ ಯುವಕರು ನಮ್ಮ ಭಾರತೀಯ ಪರಂಪರೆಯನ್ನ ಬಿಟ್ಟು ಹೆಚ್ಚೆಚ್ಚು ಬೇರೆ ಕಡೆಗೆ ಒಲಿತಾ ಇದಾರೆ ಅಂತ ಕೆಲವರು ಅಂತಾರೆ. ನಿಮಗೇನಾದರೂ ಹಾಗೆ ಅನಿಸುತ್ತಾ?

ಅದು ತಂದೆ, ತಾಯಿಯ ತಪ್ಪು. ನಾನು ಯಾವಾಗ್ಲೂ ಹೇಳೋದು ಮಕ್ಕಳು ಯಾವಾಗಲೂ ಶುದ್ಧ ಇರ್ತಾರೆ. ತಾಯ್ತಂದೆಯವ್ರು ವಿಶೇಷವಾಗಿ ತಾಯಂದಿರು ಮಕ್ಕಳನ್ನ ಬೆಳೆಸ್ತಾರೆ. ನನಗೆ ಎಲ್ಲ ಕಲಿಸಿದ್ದು ನನ್ನ ತಾಯ್ತಂದೆಯವರು. ನನಗೆ ತಾಯಿ ಹೇಳಿದ್ರು, ಮಗೂ  ನಿನಗೆ ಸಂತೋಷ ಬೇಕಾದ್ರೆ ಬೇರೆಯವರಿಗೆ ಸಂತೋಷ ಮಾಡ್ಬೇಕು. ವಾರಕ್ಕೆ ಎರಡು ಆಣೆ ಪಾವತಿ ಮಾಡಿ ಸಕ್ಕರೆ ಮಿಠಾಯಿ ನೀನು ತಿನ್ನುವಾಗ, ಅವನಿಗೆ ಹಣ ಇಲ್ಲ, ಅವನಿಗೆ ಸಕ್ಕರೆ ಇಲ್ಲ, ಅವನಿಗೆ ಕೊಡು. ನಿನಗೆ ಸಂತೋಷ ಬೇಕು. ಅದೇ ಪ್ರಕಾರ ಬೇರೆಯವರಿಗೆ ಸಂತೋಷ ಕೊಡು. ಅದರಲ್ಲಿ ನಿನ್ನ ಸಂತೋಷ ಕಾಣು ಅಂತ. ತಂದೆ ಕಲಿಸಿದ್ದು. ಅದು ನನ್ನಲ್ಲಿ ಸ್ಥಾಪನೆಯಾಯ್ತು. ನನ್ನ ಜೀವನದಲ್ಲಿ ಅದೇ ಕಲ್ತು ಹೋಯ್ತು. ಹಾಗೆ ತಂದೆ ತಾಯಿಯವರು ಕಲಿಸಿದ್ದು. ತಂದೆ ಕಲ್ಸಿದ್ದು ಬಟ್ಟೆ ಹಾಕೋ ವಿಷಯ. ಡ್ರೆಸ್‌ದು. ಆಗ ನಾನಿನ್ನು ಯುವಕ. ಯುವ ಆಫೀಸರ್‌. ಒಂದಿವಸ ಬರೀ ಬುಷ್ ಶರ್ಟಲ್ಲಿ ಹೋಗ್ತೇನೆ. ಏನಾಯ್ತೀಗ. ’ಓಹ್ ಅದು ತಪ್ಪು, ಅದು ತಪ್ಪು. ಹೀಗೇ ಬುಷ್‌ ಶರ್ಟಲ್ಲಿ ಹೋಗೋದಾದ್ರೆ.’ ತಂದೆ ಜೋರು ಮಾಡಿ ಬೇರೆ ಸೂಟ್ ಹಾಕಿ ಕಳ್ಸಿದ್ರು. ದೊಡ್ಡವ್ರನ್ನ ನೋಡೋಕೆ ಹೋಗುವಾಗ ಚೆನ್ನಾಗೆ ಡ್ರೆಸ್ ಮಾಡ್ಬೇಕು ಅಂತ ಅವರು ಕಲ್ಸಿದ್ದು.

 • ಸಾಮಾನ್ಯವಾಗಿ ಕೊಡವ ಜನಾಂಗದವರು ತಮ್ಮ ಸಂಸ್ಕೃತಿಯನ್ನು ಉಳಿಸಿಕೊಂಡಿದಾರೆ ಅಂತಾರೆ. ಈಗ್ಲೂ ಉಳಿಸಿಕೊಂಡು ಬಂದಿದಾರಾ ಸರ್‌?

ಓಹ್, ಎಲ್ಲ ಲಂಡನ್‌ನಲ್ಲಿ ಬಕ್ಕಿಂಗ್‌ಹ್ಯಾಂ ಪ್ಯಾಲೇಸ್‌ನಲ್ಲಿದ್ದಾರೆ. ಅವರ ಕೋಟು, ಕಿಂಗ್ಸ್‌ಕೋಟ್‌ನ, ಕ್ವೀನ್ಸ್‌ಕೋಟ್‌ನ, ಆಗೆಲ್ಲ ಲಾಂಗ್ ಡ್ರೆಸ್, ಈಗ ಬುಷ್‌ ಶರ್ಟ್‌, ಹೆಂಗಸರು ಸುರಾಲು ಹಾಕ್ಕೊಂಡು ಹೋಗ್ತಾರೆ.

 • ತಾವು ಸಾಂಪ್ರದಾಯಿಕ ಡ್ರೆಸ್ಸನ್ನ ಆಸ್ಟ್ರೇಲಿಯಾದಲ್ಲಿದ್ದಾಗ ಎಂದಾದ್ರೂ ಹಾಕಿದ್ರ ಸರ್‌?

ಹೂಂ. ಒಂದ್ಸಾರಿ ಹಾಕಿದ್ದೇನೆ.

 • ಹಾಕಿದ್ರಾ, ಯಾವ ಸಂದರ್ಭದಲ್ಲಿ ಸರ್‌? ಎಲ್ಲೋ ಚಿತ್ರ ನೋಡಿದ ನೆನಪು.

ಸ್ನೇಹಿತರಿಗೆ ತೋರ‍್ಸಕ್ಕೆ. ಒಂದು ಹೆಂಗಸು ಬಂದ್ಬಿಟ್ಟು, ಓಹ್ ಕ್ಯಾರಿ, ಈ ಹ್ಯಾಟು ಎಷ್ಟು ಸುಂದರವಾಗಿರುತ್ತೆ ಅಂತ ಖುಷೀಲಿ ಅಂದ್ಲು. ನಾನದನ್ನ ಅವಳಿಗೆ ಕೊಟ್ಟುಬಿಟ್ಟೆ. ಕೆಂಪು. ಬೇರೇದು ಇತ್ತು. ’ಇದನ್ನ ನೀನು ಹ್ಯಾಟ್‌ಗೆ ಉಪಯೋಗಿಸ್ಕೊ’ ನಾನದನ್ನ ಯಾವ ಸಮಾರಂಭಕ್ಕೂ ಉಪಯೋಗಿಸಲಿಲ್ಲ.

 • ನಮ್ಮ ನ್ಯಾಷನಲ್ ಡ್ರೆಸ್ ಯಾವುದಾಗಬೇಕು ಸರ್‌?ನಮ್ ಯುವಕರಿಗೊಂದು ನ್ಯಾಷನಲ್ ಡ್ರೆಸ್ ಇರ್ಬೇಕು ಅಂತಾದ್ರೆ.

ಕೋಟು, ಸುರಾಲು, ಸ್ಯಾಂಡಲ್ಸ್ ಅಥವಾ ಚಪ್ಪಲಿಗಳು, ಸಣ್ಣ ಶೂಗಳು

 • ಇದರ ಬಗ್ಗೆ ತಾವು ಆಲೋಚನೆ ಮಾಡಿರಬೇಕು ಅಂತ ನನಗೆ ಅನ್ಸುತ್ತೆ. ಯಾಕಂತಂದ್ರೆ ಶಿಸ್ತು ಅಂದ್ರೆ ನಿಮಗೆ ಬಹಳಾ ಮುಖ್ಯವಾದದ್ದು.

ಬ್ಲ್ಯಾಕ್ ಕೋಟ್, ಇದೊಂದು ಶರ್ಟ್ ಡಿಫರೆನ್ಸ್ ಇದೆ.

 • ತಾವು ಎಷ್ಟು ಭಾಷೆ ಮಾತಾಡ್ತೀರ ಸರ್? ಕೊಡವ

ಹಿಂದಿ, ಕನ್ನಡ, ತಮಿಳು, ತೆಲುಗು, ಮಲೆಯಾಳ,

 • ತಮಿಳು ಮಾತಾಡ್ತೀರಿ?

ಸ್ಲಲ್ಪ. ಉದಾಹರಣೆಗೆ ಕಮೀಷನರ್ ಆಗಿರುವಾಗ ಡೆಲ್ಲಿ ರೆಜಿಮೆಂಟಿತ್ತು. ಅಲ್ಲಿ ಹೋಗಿದ್ದೆ ನೋಡ್ಲಿಕ್ಕೆ. ಸೆಂಟ್ರಿ ಇದ್ರು ಅಲ್ಲಿ. ಅಲ್ಲಿ ಮಾತಾಡ್ದೆ. ಸೊಲ್ಲು ಉಂಗುಳುಕು ಸಾಪಾಟ್ ಸೆಲಿಕ್ರುದಾ? ಅವನ ಕಡೆ ನೋಡ್ದೆ, ಸೊಲ್ಲು ಉಂಗುಳುಕು ಸಾಪಾಟ್ ಸೆಲಿಕ್ರುದಾ? ಸಾಬ್ ಹಮ್ ಆಂಗ್ರೇಜಿ ಜಾನ್ತಾ. ಎನ್ನಡಾ ತಮಿಳ್ ಪೇಸ್‌ರಾದಾ? ಸಾಬ್, ಆಂಗ್ರೇಜಿ ಜಾನ್ತಾ ಹೂಂ. ಸರ್ ತಮಿಳ್‌ ಪೇಸ್‌ರಾದಾ! ನಾನು ಸ್ವಲ್ಪ ಮಟ್ಟಿಗೆ ತಮಿಳು ಮಾತಾಡಬಲ್ಲೆ.

 • ನಮ್ಮ ಪುಣ್ಯ ಸರ್, ನೀವು ಕರ್ನಾಟಕದ ಒಬ್ಬ ಮಗ. ನಿಮಗೆ ಹಲವು ಭಾಷೆಗಳು ಗೊತ್ತಿದೆ ಇಡೀ ಭಾರತದ ಒಬ್ಬ ದೊಡ್ಡ ದಂಡನಾಯಕ ಆಗಿದ್ರಿ ನೀವು. ನಮ್ಮ ಜೊತೆಗೆ ನೀವಿದಿರಿ ೮೫ ವರ್ಷದಲ್ಲೂ ನಿಮ್ಮ ಮನಸ್ಸು ಮಾತ್ರ ಅದೇ ತಾರುಣ್ಯದಲ್ಲೇನೇ ಇದೆ. ಹಾಗೇನೇ ನೀವು ನೂರು ವರ್ಷ ಕಾಣಬೇಕು ಅಂತ ನಮ್ಮ ಆಸೆ ಸರ್. ಕ್ಷೇಮ ಪಶೀಮಶದಶರದಂ ಅಂತಾರೆ ಉಪನಿಷತ್‌ನಲ್ಲಿ, ನೂರು ಶರದ್‌ಋತುವನ್ನು ನೋಡೋಣ ಅಂತ.

ನನ್ನ ಸ್ನೇಹಿತ್ರು ಹೇಳ್ತಾರೆ ನಂಗೆ. ಲಾಂಗ್ ಲೈಫ್‌, ಲಾಂಗ್ ಲೈಫ್ ಅಂತ. ದಯವಿಟ್ಟು ಆ ಪ್ರಾರ್ಥನೆ ಮಾಡಬೇಡಿ. ಆದರೆ ದೇವರಿಗೆ ಪ್ರಾರ್ಥನೆ ಮಾಡಿ, ಇವನ ಜೀವಮಾನ ಸಮಯದಲ್ಲಿ ಆರೋಗ್ಯ ಕೊಡಿ ಅಂತ.

 • ಚೆನ್ನಾಗಿ ಹೇಳಿದ್ರಿ

ನಮ್ಮ ಜೀವಿತ ಕಾಲದಲ್ಲಿ ದೇವರು ಒಳ್ಳೆ ಆರೋಗ್ಯಕೊಡಲಿ. ಸಾಯಿಬಾಬ, ಸಾಯಿಬಾಬ, ಅವರಿಗೆ ನಾನಂದ್ರೆ ಇಷ್ಟ. ಭಗವಾನ್ ನಾನು ನಿಮಗಾಗಲಿ ದೇವರಿಗಾಗಲಿ ಒಂದಿವಸ ಪ್ರಾರ್ಥನೆ ಮಾಡಿಲ್ಲ ದೇವರೆ ನಂಗೆ ಆಯಸ್ಸು ಬೇಕು, ಐಶ್ವರ್ಯ ಬೇಕು ಅಂತ. ದೇವರೇ ನನ್ನ ಜೀವಮಾನ ಸಮಯದಲ್ಲಿ ಆರೋಗ್ಯ ಕೊಡಿ. ಬುದ್ಧಿ ಕೊಡಿ ಮತ್ತೇನು ಬೇಡ. ಸೇವೆ ಮತ್ತು ಒಳ್ಳೆ ಆರೋಗ್ಯ. ನೀವು ೧೦೦ ವರ್ಷ ಅಂದ್ರಿ. ೧೦೦ ವರ್ಷ ಬೇಡ.

 • ೧೦೦ ವರ್ಷವೂ ಆರೋಗ್ಯವಾಗಿ ಇರಿ.

ಜೀವನ ಸಮಯದಲ್ಲಿ ಆರೋಗ್ಯ ಇರಬೇಕು.

 • ತುಂಬಾ ವಂದನೆಗಳು

ಆಯ್ತೇನೂ? ಮುಗೀತೂ?

 

—-
ಅಕ್ಷರ ರೂಪ ಮತ್ತು ಭಾಷಾಂತರ :
ಡಾ. ಎನ್.ಕೆ. ರಾಜಲಕ್ಷ್ಮಿ
ಮೈಸೂರು
ಆಕಾಶವಾಣಿಗಾಗಿ ೧೯೮೫ರ ಜುಲೈ ರಂದು ನಡೆಸಿದ ಸಂವಾದ.

ಕೊಡಂಡೇರ ಮಾದಪ್ಪ ಕಾರಿಯಪ್ಪ ೧೮೦೯, ಜನವರಿ ೧೫ ರಂದು ಮಡಿಕೇರಿಯ ಶನಿವಾರ ಸಂತೆಯಲ್ಲಿ ಜನಿಸಿದರು. ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಮಡಿಕೇರಿಯ ಕೇಂದ್ರೀಯ ಪ್ರೌಢಶಾಲೆಯಲ್ಲಿ ಮುಗಿಸಿ, ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ನಮ್ಮ ಕಾಲೇಜು ಶಿಕ್ಷಣವನ್ನು ಪೂರೈಸಿದರು. ಒಳ್ಳೆಯ ಕ್ರೀಡಾಪಟುವಾಗಿದ್ದ ಇವರು ಹಾಕಿ ಮತ್ತು ಟೆನ್ನಿಸ್ ಪ್ರಿಯರಾಗಿದ್ದರು. ೧೯೧೮ ರಲ್ಲಿ ಮೊದಲನೆಯ ವಿಶ್ವಯುದ್ಧ ಮುಗಿದಾಗ ಸೈನ್ಯಕ್ಕೆ ಸೇರಿಕೊಂಡ ಕಾರಿಯಪ್ಪನವರು ನಿಯುಕ್ತಿಯ ಮುಂಚಿನ ಕಠಿಣತರವಾದ ತರಬೇತಿಯನ್ನು ಪಡೆದರು. ಇಂದೂರಿನ ಡೆಲಿಕೆಡೆಟ್ ಕಾಲೇಜಿನಲ್ಲಿ ಸೈನ್ಯಕ್ಕೆ ನಿಯುಕ್ತರಾದ ಭಾರತೀಯ ಅಧಿಕಾರಿಗಳ ಮೊದಲ ವರ್ಗಕ್ಕೆ ಸೇರಿಕೊಂಡರು ಮತ್ತು ಮುಂಬಯಿಯಲ್ಲಿದ್ದ ಕರ್ನಾಟಕ ಪದಾತಿದಳಕ್ಕೆ ನಿಯುಕ್ತಿಗೊಂಡರು. ಸೈನ್ಯದಿಂದ ನಿವೃತ್ತಿ ಹೊಂದುವ ತನಕ ಇವರು ರಾಜಪುತ ಲಘು ಪದಾತಿದಳದಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದರು. ೧೯೩೩ ರಲ್ಲಿ ಕ್ವೆಟ್ಟಾದಲ್ಲಿದ್ದ ಸಿಬ್ಬಂದಿ ಮಹಾವಿದ್ಯಾಲಯಕ್ಕೆ ತರಬೇತಿ ಪಡೆಯಲು ಸೇರಿದ ಮೊದಲ ಭಾರತೀಯ ಅಧಿಕಾರಿಯಾಗಿದ್ದರು. ಇರಾಕ್, ಸಿರಿಯಾ, ಇರಾನ್, ಬರ್ಮಾ, ವಝೀರಿಸ್ತಾನ ಮುಂತಾದ ಕಡೆಗಳಲ್ಲೂ ಇವರು ಸೇವೆಯನ್ನು ಸಲ್ಲಿಸಿದ್ದಾರೆ. ಸ್ವಾತಂತ್ರ‍್ಯಾನಂತರ ಅವರು ಭಾರತದ ಸೇನೆಯ ಪ್ರಥಮ ದಂಡನಾಯಕರಾದರು ಮತ್ತು ಫೀಲ್ಡ್ ಮಾರ್ಷಲ್ ಪದವಿಯನ್ನು ಪಡೆದ ಮೊದಲಿಗರೆನ್ನಿಸಿಕೊಂಡರು. ಸೇನೆಯಲ್ಲಿನ ಸೇವೆಗಾಗಿ ಆರ್ಡರ್ ಆಫ್ ದಿ ಬ್ರಿಟಿಷ್ ಎಂಪೈರ್, ಲೆಜನ್ ಆಫ್ ಮೆರಿಟ್ ಮುಂತಾದ ಬಹುಪ್ರತಿಷ್ಠಿತ ಪ್ರಶಸ್ತಿಗಳಿಗೆ ಇವರು ಪಾತ್ರರಾದವರು. ಮೇ ೧೫, ೧೯೯೩ ರಲ್ಲಿ ಇವರು ಬೆಂಗಳೂರಿನಲ್ಲಿ ನಿಧನರಾದರು.

* * *