• ನಮ್ಮ ಅದೃಷ್ಟ, ಇವತ್ತು ನೀವು ನಮ್ಮ ಜೊತೆ ಇದ್ದೀರಿ. ನೀವೊಬ್ಬ ಭಾರತ ಹೆಮ್ಮೆಯ ಪುತ್ರ. ಒಬ್ಬ ಸೈನಿಕನಾಗಿ, ವಿದೇಶಿ ರಾಯಭಾರಿಯಾಗಿ, ಸಾರ್ವಜನಿಕ ಸೇವೆಯಲ್ಲಿದ್ದು ನೀವು ಅಪಾರವಾದ ಶ್ರೀಮಂತ ಅನುಭವವನ್ನು ಹೊಂದಿದ್ದೀರಿ. ಯಾಕಂದ್ರೆ ನೀವು ಸೇವೆಯಿಂದ ನಿವೃತ್ತರಾದ ನಂತರವೂ ಯುವಜನತೆಗೆ ಸ್ಫೂರ್ತಿ ನೀಡುವಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸಿದ್ದೀರಿ. ನಿಮ್ಮ ಅನುಭವವನ್ನು ಹಂಚಿಕೊಳ್ಳೋದಕ್ಕೆ ನಾವು ಉತ್ಸುಕರಾಗಿದ್ದೇವೆ. ಮೊದಲನೆಯದಾಗಿ, ಒಬ್ಬ ಸೈನಿಕನಾಗಿ ನಿಮ್ಮ ಅನುಭವ, ನೀವು ಸೈನಿಕರಾಗೋದಕ್ಕೆ ಕಾರಣ?

ಸೈನಿಕನಾಗಿ ಸಮವಸ್ತ್ರ ಧರಿಸಬೇಕು ಅಂತ ನಾನು ಯಾವಾಗ್ಲೂ ಬಯಸಿದ್ದೆ. ಯಾಕಂದ್ರೆ ನಾನು ಚಿಕ್ಕವನಾಗಿದ್ದಾಗ. ಯಾಕಂದ್ರೆ ನಾನು ಚಿಕ್ಕವನಾಗಿದ್ದಾಗ. ಶಾಲೆಗೆ ಹೋಗ್ತಾ ಇದ್ದಾಗ ನಮ್ತಂದೆ ಸಮವಸ್ತ್ರ ಹಾಕ್ಕೋಳೋರು. ಅವರು ಸೇನೆಯಲ್ಲಿರಲಿಲ್ಲ. ವಾಲಂಟಿಯರ್ ಆಗಿದ್ರು. ನಾನಾಗ ಅಂದ್ಕೋತಿದ್ದೆ. ನಾನೂ ಒಂದಿನ ಸಮವಸ್ತ್ರ ಹಾಕ್ಕೋಬೇಕು ಅಂತ. ಬೇರೆಯವರೆಲ್ಲ ಸಮವಸ್ತ್ರದಲ್ಲಿರೋದನ್ನ ನೋಡ್ತಿದ್ದೆ. ಸೈನಿಕನಾಗೋದು ಇದಕ್ಕಿರುವ ಒಳ್ಳೆ ಪರಿಹಾರ ಅಂದ್ಕೊಂಡೆ. ಹಾಗೆ ನಾನು ಮಡಿಕೇರಿಯಲ್ಲಿ ಶಾಲೆ ಕಲಿತೆ. ನಂತರ ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿಗೆ ಸೇರಿದೆ.

 • ನೀವು ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಕಲಿತ್ರಾ?

ಹೌದು. ನಮ್ಮ ಹೆಡ್ ಮಾಸ್ಟರು ಬ್ರಿಟಿಷ್‌ರವನು. ನಾನು ಪ್ರೆಸಿಡೆನ್ಸಿ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದೆ. ೧೯೧೭ನೇ ಇಸವಿಯ ಕೊನೆಯಲ್ಲಿ ನನಗೆ ಆಂತರಿಕ ಸೇವಾ ವ್ಯವಸ್ಥೆಯ ಬಗ್ಗೆ ಸುದ್ದಿ ಸಿಕ್ತು. ಅವರು (ಬ್ರಿಟಿಷರು) ಯುವ ಭಾರತೀಯರನ್ನ ಸೇನೆಗೆ ಭರ್ತಿಗೊಳಿಸುವುದಾಗಿ ಆದೇಶ ನೀಡಿದ್ರು. ನಾನು ಅರ್ಜಿ ಹಾಕಿದೆ. ಆಯ್ಕೆಗಾಗಿ ಸಿಮ್ಲಾಕ್ಕೆ ಹೋದೆ. ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಅದು ನನ್ನ ಎರಡನೆಯ ವರ್ಷವಾಗಿತ್ತು. ಸೀನಿಯರ್ ಇಂಟರ್‌ ತರಗತಿಯಲ್ಲಿದ್ದೆ.

 • ನೀವು ಪ್ರೆಸಿಡೆನ್ಸಿ ಕಾಲೇಜಿನ ನಿಮ್ಮ ಓದನ್ನ ಪೂರ್ಣಗೊಳಿಸಿದ್ರಾ?

ಇಲ್ಲ. ಆಗಿನ ಕಾಲದಲ್ಲಿ ಎಫ್‌.ಎ; ಜೂನಿಯರ್ ಎಫ್‌.ಎ; ಮತ್ತು ಸೀನಿಯರ್‌ ಎಫ್‌.ಎ; ಜೂನಿಯರ್ ಬಿ.ಎಸ್.ಸಿ. ಮತ್ತು ಬಿ.ಎ. ಇತ್ತು. ನಾನು ಜೂನಿಯರ್‌ ಬಿ.ಎ; ಎಫ್‌.ಎ. ಮತ್ತು ಸೀನಿಯರ್‌ ಎಫ್‌.ಎ; ಇಂಟರ್‌ ಮೀಡಿಯೆಟ್‌ನ ಮುಗ್ಸಿದೆ. ಆಯ್ಕೆಗೆ ಅಂತ ಹೋಗುವಾಗ ನಾನಿನ್ನೂ ಕಾಲೇಜಿನಲ್ಲಿ ಓದ್ತಾ ಇದ್ದೆ. ಮನ್ರೋರವರು ಪ್ರಧಾನ ಅಧಿಕಾರಿಯಾಗಿದ್ರು. ೨೦೦೦ ಭಾರತೀಯ ಯುವಕರು ಅಲ್ಲಿ ಬಂದಿದ್ರು. ನಾನು ಆ‌ಯ್ಕೆಯಾದೆ. ನನಗೆ ಖುಷಿಯಾಯ್ತು. ನಾನು ಸಮವಸ್ತ್ರ ಹಾಕ್ಕೊಂಡೆ. ನನ್ನ ಸಮವಸ್ತ್ರ ಧರಿಸೊ ಅಸೆ ಕೊನೆಗೂ ನೆರವೇರಿತು.

 • ಸರ್‌ ನನಗೆ ಸೇನೆಯ ಜನ ಅದ್ಭುತವಾಗಿ ಕಾಣ್ತಾದೆ.

ಅವರು ಅದ್ಭುತ ಹೌದು. ನೀವು ಹೇಳಿದ್ರಿ ಸೇನೆಯ ಜನ ಅದ್ಭುತ ಅಂತ. ನಾನು ಹೀಗೆ ಹೇಳ್ತೇನೆ, ’ಯುದ್ಧ ನಡೆಯುವ ಹೊತ್ತಿನಲ್ಲಿ, ಆದ್ರೆ ಅದರ ಮುಂಚೆ ಇಲ್ಲ, ರಕ್ಷಿಸುವ ಸೈನಿಕರನ್ನ ಎಲ್ಲರೂ ಆರಾಧಿಸ್ತಾರೆ, ಯುದ್ಧ ಮುಗಿದ ನಂತರ ರಕ್ಷಿಸಿದ ಸೈನಿಕರನ್ನ ತಾತ್ಸಾರ ಮಾಡ್ತಾರೆ. ಯುದ್ಧ ನಡಿತಾ ಇರುವಾಗ ಎಲ್ಲರ ಬಾಯಲ್ಲೂ ಸೇನೆ, ಸೇನೆ. ಯುದ್ಧ ಮುಗಿದ್ಮೇಲೆ ಎಲ್ಲರೂ ಅವರನ್ನ ಮರ್ತು ಬಿಡ್ತಾರೆ. ಯುದ್ಧ ಆಗುವಾಗ ರಕ್ಷಿಸುವ ಯೋಧರನ್ನು ಎಲ್ಲರೂ ಆರಾಧಿಸ್ತಾರೆ. ಯುದ್ಧ ಮುಗಿದ ಮೇಲೆ ಕಿಡಿಯಾಗಿದ್ದ ರಕ್ಷಕ ಯೋಧರನ್ನ ಅನಾದರದಿಂದ ನೋಡ್ತಾರೆ. ನನಗೆ ಇಂಥ ಸಾಕಷ್ಟು ಅನುಭವಗಳು ಆಗಿವೆ. ನನಗೆ ಸಾಕಷ್ಟು ನಿರಾಶಾದಾಯಕ ಅನುಭವಗಳಾಗಿವೆ.

 • ನಿಮ್ಮ ಕಾಶ್ಮೀರದ ಅನುಭವ, ಅತಿ ಮುಖ್ಯವಾದ ಅನುಭವ ಅದು, ಅದರ ಬಗ್ಗೆ ಸ್ವಲ್ಪ ಹೇಳ್ತೀರಾ?

ನಾನು ಕಾಶ್ಮೀರ ಕಾರ್ಯಾಚರಣೆಗೆ ಹೋಗಬೇಕಾಯ್ತು. ಜನವರಿ ೧೯೪೮ ರಲ್ಲಿ ನಾನು ಈ ಕಾರ್ಯಾಚರಣೆಯನ್ನ ನಡೆಸಬೇಕಾಯ್ತು. ಅಲ್ಲಿ ಪಾಕಿಸ್ಥಾನದ ತುಕಡಿಗಳಿರಲಿಲ್ಲ. ಅಲ್ಲಿ ಮುಸ್ಲಿಮ್ಸ್ ಇದ್ರು. ಪೂಂಛ್‌ನಂಥ ಬೇರೆ ಬೇರೆ ಜಾಗಗಳಿಗೆ ನಾನು ಹೋಗಬೇಕಾಯ್ತು. ಅಲ್ಲೆಲ್ಲಾ ನಾನು ನನ್ನ ಸೈನ್ಯದೊಂದಿಗೆ ಹೋಗಿ ಕ್ಯಾಂಪ್‌ಗಳನ್ನ ಹಾಕ್ಕೊಂಡೆ. ಆಗ ನಾನು ಡೆಲ್ಲಿ, ಈಸ್ಟ್ ಪಂಜಾಬಿ ಕಮಾಂಡ್, ವೆಸ್ಟರ್ನ್‌ ಕಮಾಂಡ್‌ನ್ನ ಕಮಾಂಡ್‌ ಮಾಡ್ತಾ ಇದ್ದೆ. ನಾನು ಮನಸ್ಸಿನೊಳಗೆ ನನ್ನಷ್ಟಕ್ಕೆ ಅಂದ್ಕೊಂಡೆ, ಪಾಪದ, ಸರಳ ಕಾಶ್ಮೀರಿ ಜನಗಳು. ಕಾಶ್ಮೀರ ಅವರದಾಗಬೇಕು ಅನ್ನೋ ಆಸೆ ಅವರದು. ಮತ್ತೆ ಈಗ ನಾವಿಲ್ಲಿ ಬಂದಿದ್ದೇವೆ. ನಮಗೆ ಇದು ಸರಕಾರಿ ಆದೇಶ. ಆಗ ನಾನು ಬಾನುಲಿಯಲ್ಲಿ ಪ್ರಸಾರ ಮಾಡ್ತಾ ಇದ್ದೆ. ನನ್ನ ಪ್ರಿಯ ಕಾಶ್ಮೀರಿಗಳೇ, ನಾವು ನಿಮ್ಮನ್ನು ಕೊಲ್ಲುವುದಿಲ್ಲ. ಆದರೆ ನಿಮ್ಮ ವರ್ತನೆ ಸರಿಯಿಲ್ಲ. ನಿಮ್ಮೊಂದಿಗಿರಲು ನಮಗೆ ಸಾಧ್ಯವಿಲ್ಲ. ನಮ್ಮ ಕ್ಯಾಂಪ್‌ಗಳನ್ನ ಕೆಡವಬೇಡಿ. ಹೀಗೆ ಅವರನ್ನ ನಮ್ಮೆಡೆಗೆ ಸೆಳೆಯಲು, ಅವರ ಮನವೊಲಿಸಲು ನಾನು ಪ್ರಯತ್ನ ಪಟ್ಟೆ. ’ಹೆದರಬೇಡಿ ನಾವು ನಿಮ್ಮೊಡನೆ ಸ್ನೇಹಹಸ್ತ ಚಾಚಿ ಬಂದಿದ್ದೇವೆ. ನಾವು ನಿಮ್ಮನ್ನು ಕೊಲ್ಲೋಕೆ ಇಲ್ಲಿ ಬರ್ಲಿಲ್ಲ. ಸ್ನೇಹ ಬಯಸಿ ಬಂದಿದ್ದೇವೆ. ನಾವು ಏನೂ ಮಾಡೋಕ್ಕೆ ಆಗೋಲ್ಲ. ನಮ್ಮವರನ್ನ ನಾವು ಶೂಟ್ ಮಾಡಕ್ಕೆ ಆಗಲ್ಲ. ಆದರೆ ನೀವು ಅಸಹಕಾರ ತೋರಿಸಿದರೆ ನಾವು ಪ್ರತಿಯಾಗಿ ಶೂಟ್ ಮಾಡಲೇಬೇಕಾಗುತ್ತೆ. ನೀವು ಹಾಗೆ ಮಾಡ್ಬೇಡಿ’

 • ಅದೊಂದು ಅನನ್ಯವಾದ

ಹೌದು. ಎಲ್ಲವೂ ಚೆನ್ನಾಗಿಯೇ ನಡೀತಾ ಇತ್ತು. ನಾನು ಜನವರಿ ೧೯೪೮ ರಲ್ಲಿ ಅಲ್ಲಿಗೆ ಹೋದೆ. ನವೆಂಬರ್‌ವರೆಗೆ ಎಲ್ಲವೂ ಚೆನ್ನಾಗಿತ್ತು. ಇದ್ದಕ್ಕಿದ್ದಂತೆ “ಸೀಜ್ ಫಯರ್‌” ಅನ್ನೋ ಆದೇಶ ಬಂತು. ಡೆಲ್ಲಿಯಿಂದ ಬಂದ ಆದೇಶ ಅದು. ಹಾಗಾಗಿ ಪಾಲಿಸಲೇ ಬೇಕಾಯ್ತು.

 • ನಿಮ್ಮ ಜೀವನವನ್ನ ಅಭ್ಯಾಸ ಮಾಡುವಾಗ ನನಗೆ ಯಾವಾಗಲೂ ಅನ್ಸುತ್ತೆ, ಯಾರಾದ್ರು ಶಾಂತಿಯನ್ನು ಪ್ರೀತಿಸ್ತಾರೆ ಅಂತ ಆದ್ರೆ ಅದು ಸೈನಿಕರೇ ಅಂತ.

ಹೌದು. ಒಳ್ಳೆ ಜನ. ಅವರಿಗೆ ಗೊತ್ತು ಯುದ್ಧ ಅಂದ್ರೆ ಏನು ಅಂತ

 • ದ್ವೇಷವೇ ಇಲ್ಲದೆ ಯುದ್ಧ ಮಾಡೋದಕ್ಕೆ ಸಾಧ್ಯ ಇದ್ಯಾ ಸರ್?

ಸ್ವಲ್ಪ ಮಟ್ಟಿಗಾದ್ರೂ ದ್ವೇಷ ಇರಲೇಬೇಕಾಗುತ್ತೆ. ಇಲ್ಲಾಂದ್ರೆ ಸುಮ್ಮನೆ ಹೀಗೆ ಶೂಟ್ ಮಾಡೋಕೆ ಆಗೋಲ್ಲ. ಯಾಕಂದ್ರೆ ನೀನು ಕೆಟ್ಟ ಮನುಷ್ಯನನ್ನ ಸಾಯಿಸ್ತ ಇದ್ದೀಯ. ಆದರೆ ಇದರ ಜೊತೆ ಜೊತೆಗೇನೆ ನಿಮಗೆ ಸಹವರ್ತಿಗಳಿರ್ತಾರೆ. ಬೇರೆ ಜನರು ನಿಮ್ಮ ಜೊತೆ ಇರ್ತಾರೆ. ಆದರೆ ಅವರೆಲ್ಲ ಆದೇಶವನ್ನು ಪಾಲಿಸಲೇಬೇಕು.

 • ಆದರೆ ನಮ್ಮವರೊಂದಿಗೆ ಹೋರಾಡೋದು ತುಂಬಾ ಕಷ್ಟ ಇರಬೇಕಲ್ವ?

ಓ, ಅದು ತುಂಬಾ ಕಷ್ಟ. ಪಂಜಾಬ್ ವಿಷಯದ ಬಗ್ಗೆ ನಾನೇನು ಹೇಳೋಕ್ಕೆ ಇಷ್ಟಪಡೋದಿಲ್ಲ. ಅದೊಂದು ತುಂಬಾ ಸೂಕ್ಷ್ಮ ವಿಷಯ. ಸೇನೆಗೆ ಅದು ತುಂಬಾ ಕಷ್ಟದ ಕೆಲಸ ಆಗಿತ್ತು. ಅವರು ಅದನ್ನ ಚೆನ್ನಾಗಿ ನಿಭಾಯಿಸಿದ್ರು. ಆದರೆ ಅವರು ಭಾರತದ ಜನರಿಂದ ಸಂತೋಷ ಪಡೆದ್ರು.

 • ಆಸ್ಟ್ರೇಲಿಯಾದ ಬಗ್ಗೆ ನಮಗೆ ಸ್ವಲ್ಪ ಹೇಳ್ತೀರಾ ಸರ್?

ಓ, ಆಸ್ಟ್ರೇಲಿಯಾ ಮಹಾನ್ ದೇಶ. ತುಂಬಾ ಒಳ್ಳೆ ಜನರು. ಬಹಳ ವರ್ಷಗಳ ಹಿಂದೆ ನಾನು ಅಲ್ಲಿಗೆ ಹೋಗಿದ್ದೆ. ಆಗಷ್ಟೇ ಬೆಳಕಿಗೆ ಬರ್ತಾ ಇದ್ದ ದೇಶದಲ್ಲಿ ಸುತ್ತಾಡಿದೆ. ಕೆಲವೇ ಜನರು ಮತ್ತೆ ನಿಧಾನವಾಗಿ ದೇಶವನ್ನೆ ಕಟ್ಟಿದ್ರು. ಎಬ್‌ಓರಿಜಿನ್ಸ್‌ಗಳನ್ನ (ಮೂಲ ನಿವಾಸಿಗಳನ್ನ) ಬಳಸಿಕೊಂಡರು. ಅವರು ಅವರಿಗೆ ಕೆಲಸ ಮಾಡಿದ್ರು. ಮತ್ತೆ ತುಂಬಾ ಸಂಪತ್ತುಳ್ಳ ಜನ. ಮತ್ತೆ ಕಡಿಮೆ ಜನಸಂಖ್ಯೆ. ಗೋಧಿ ಬೆಳಿತಾರೆ. ದನ ಮತ್ತೆ ಕುರಿ ಮತ್ತೆ ಕೋಳಿ ಸಾಕಣೆ ಇತ್ಯಾದಿ. ಅವರು ಕಷ್ಟ ಪಟ್ಟು ದುಡೀತಾರೆ. ಸರಳ ಜನರು. ಕುತಂತ್ರ ಇಲ್ಲ. ನೇರ ನಡೆಯ ಕಷ್ಟ ಪಟ್ಟು ದುಡಿವ ಜನ.

 • ಮಡಿಕೇರಿ ಹಾಗೂ ಅಮೇರಿಕಾದ ಒಂದು ನಗರವನ್ನ ಅವಳೀ ನಗರವಾಗಿ ಮಾಡೋದಿಕ್ಕೆ ನೀವು ಕಾರಣೀಭೂತರು

ಓ ಡೇರಿಯನ್.

 • ಪ್ರಯೋಗ ಏನು ಅಂತ ಸ್ವಲ್ಪ ಹೇಳ್ಬಹುದಾ?

ಡೇರಿಯನ್ನರು ಮಡಿಕೇರಿಗೆ ಬರ್ತಾರೆ. ಮಡಿಕೇರಿ ಡೇರಿಯನ್ ವಿದ್ಯಾರ್ಥಿಗಳ ವಿನಿಮಯ ಕಾರ್ಯಕ್ರಮ ಅದು. ಇಲ್ಲಿಂದ ಕೆಲವು ವಿದ್ಯಾರ್ಥಿಗಳನ್ನ ಅಲ್ಲಿಗೆ ಕಳಿಸ್ತಾರೆ.

 • ಡೇರಿಯನ್‌ನಿಂದ ಮಡಿಕೇರಿಗಾ?

ಹೌದು. ಮಡಿಕೇರಿಯಿಂದ ನಮ್ಮ ಕಾಲೇಜಿನ ಒಬ್ಬ ಯುವ ಅಧ್ಯಾಪಕ ಡೇರಿಯನ್‌ಗೆಲ್ಲ ಹೋದರು. ಅಲ್ಲಿ ವ್ಯಾಸಂಗ ಮಾಡಿದ್ರು. ವಿದ್ಯಾರ್ಥಿಗಳ ವಿನಿಮಯ ಇದು. ಇದೊಂದು ಒಳ್ಳೆ ಐಡಿಯಾ.

 • ನೀವು ಸದಾ ಕ್ರಿಯಾಶೀಲರಾಗಿರುವ ವ್ಯಕ್ತಿ. ಈಗ ನಿಮ್ಮನ್ನ ನೀವು ಯಾವುದರಲ್ಲಿ ತೊಡಗಿಸಿಕೊಂಡಿದ್ದೀರಿ?

ಸರಿಸುಮಾರು ಕಳೆದ ಮೂರು ವರ್ಷಗಳಿಂದ ನನ್ನ ಆರೋಗ್ಯ ಚೆನ್ನಾಗಿಲ್ಲ. ನಾನು ನಡೆದಾಡ್ತೇನೆ. ಮತ್ತೆ ಗಾಲ್ಫ್‌ ಆಡೋಕೆ ಆಗಲ್ಲ. ನಾನು ಮನೆಯೊಳಗೆ ಇರ್ತೀನೆ. ನನ್ನ ಮನೆ ಕಾಡಿನ ಮಧ್ಯದಲ್ಲಿದೆ. ಮರಗಳು, ನನ್ನ ನೆರೆಕೆರೆಯವರು, ಹಕ್ಕಿಗಳು, ಸಂಗೀತ. ಜನರು ಆಗಾಗ ಬರ್ತಿರ್ತಾರೆ. ಎಲ್ಲಾ ತರದ ಜನರು ಬರ್ತಾರೆ. ಮಕ್ಕಳ ವರ್ಗಾವಣೆ, ತಂದೆಯ ಪ್ರಮೋಶನ್ ಹೀಗೆ.

 • ನೀವು ಅಲ್ಲಿ ಅಜ್ಜನಾಗಿ ಇದ್ದೀರಾ

ತಂದೆ. ಒಂದಿನ ಒಬ್ಬ ಕೊಳಕಾಗಿದ್ದ ಯುವಕ ಬಂದ. ’ಹಲೋ, ನೀವು ಸೇನೆಯಲ್ಲಿದ್ರಾ?’ ನಾನು ಹೇಳ್ತೇನೆ ’ಇಲ್ಲಾ’ ’ನೀನು ಎಲ್ಲಿಂದ ಬಂದೆ?’ ಅವನು ಮಲೆಯಾಳಿ, ಹೇಳ್ದ ’ಕೋಝಿಕೋಡ್‌’ ’ನೀನ್ಯಾವಾಗ ಇಲ್ಲಿಗೆ ಬಂದೆ?’ ’ಮಡಿಕೇರಿಗೆ ಇವತ್ತು ಬೆಳಿಗ್ಗೆ ಬಂದೆ’ ’ಈ ಮೊದಲು ಮಡಿಕೇರಿಗೆ ಬಂದಿದಿಯಾ?’ ’ಇಲ್ಲ’ ’ಯಾತಕ್ಕಾಗಿ ಇಲ್ಲಿಗೆ ಬಂದೆ?’ ಕೋಝಿಕೋಡ್‌ನಲ್ಲಿ ನನಗೊಂದು ಪುಟ್ಟ ಅಂಗಡಿಯಿತ್ತು. ಅದು ಬಿದ್ದು ಹೋಯಿತು. ಅದನ್ನ ಈಗ ಪುನಃ ಕಟ್ಟಬೇಕು. ಅದಕ್ಕೆ ನನಗೆ ರೂಪಾಯಿ ಬೇಕು. ನನ್ನ ಹತ್ರ ಹಣ ಇಲ್ಲ. ನನಗೊಬ್ರು ಹೇಳಿದ್ರು – ಮಡಿಕೇರಿಗೆ ಹೋಗು, ಜನರಲ್ ಕಾರಿಯಪ್ಪ ದಯಾಳು ಮನುಷ್ಯ. ಅವರು ಹಣ ಕೊಡ್ತಾರೆ’ ಅಂತ. ಅವನು ದೂರದ ಕ್ಯಾಲಿಕಟ್‌ನಿಂದ ಅದಕ್ಕಾಗಿ ಇಲ್ಲಿ ಬಂದಿದ್ದ.

 • ಸರ್‌, ವಿಷಯವನ್ನ ಪ್ರಸಾರ ಮಾಡೋದು ಅಪಾಯ. ಆಗ ಎಲ್ಲರೂ ಬರುತ್ತಾರೆ.

ಆಮೇಲೆ ನಾನು ಅವನಿಗೆ ಹೇಳಿದೆ. ನಿನಗೆ ಮರಗಳ ಮೇಲೆ ಏನು ಕಾಣಿಸುತ್ತೆ? ಬರೀ ಎಲೆಗಳು. ಬೇರೆ ಏನಾದ್ರೂ?ಹಣ ಬೆಳೆಯೋದಿಲ್ಲ ಅಲ್ಲಿ. ಎಲೆಗಳು ಬೆಳೆಯುತ್ತೆ. ಮರಗಳ ಸಾಮ್ರಾಜ್ಯವೇ ಇದೆ ಇಲ್ಲಿ. ನಂತರ ಅವನಿಗೆ ಬಿಸಿಯಾದ ಟೀ ಕೊಟ್ಟೆ. ಬಾಳೆಹಣ್ಣು ಕೊಟ್ಟೆ, ಹತ್ತು ರೂಪಾಯಿ ಕೊಟ್ಟೆ. ಅವನು ಹೊರಟು ಹೋದ. ಕೆಲವರು ನನಗೆ ಈಗಲೂ ಕಾಗದ ಬರೀತಿರ್ತಾರೆ ’ನನ್ನ ಪ್ರೀತಿಯ ತಂದೆ, ನಾನು ಬಾರ್ಬರ್‌. ನಾನು ನಿಮ್ಮ ಬಗ್ಗೆ ಓದಿದ್ದೇನೆ. ನಾನು ನಿಮ್ಮನ್ನ ತಂದೆ ಅನ್ನಬಹುದಾ. ನಿಮ್ಮ ಮಗ ಅಂತ ಅಂದ್ಕೊಂಡು, ನಾನು ಜೀವನದಲ್ಲಿ ಏನು ಮಾಡಬೇಕು ಅಂತ ಮಾರ್ಗದರ್ಶನ ಮಾಡಿ.’ ಹೀಗೆ. ನಾನು ಕೂಡಾ ಒಂದು ತಿಂಗಳಿಗೆ ಅರವತ್ತು ಕಾಗ್ದ ಬರೀತೇನೆ. ನಾನೇ ಅವುಗಳನ್ನ ಬರಯೋದಿಲ್ಲ. ನನಗೆ ಬರೆಯೋಕೆ ಆಗಲ್ಲ. ಒಬ್ಬರು ಟೈಪಿಸ್ಟ್ ಇದ್ದಾರೆ ನನ್ನ ಪತ್ರಗಳನ್ನ ಟೈಪ್ ಮಾಡೋದಿಕ್ಕೆ.

 • ಸರ್‌, ವರ್ಷಗಳು ಹಾಗೆ ತಾವು ಹೆಚ್ಚು ಹೆಚ್ಚು ಧಾರ್ಮಿಕರಾಗ್ತ ಇದ್ದೀರಾ?

ಇಲ್ಲ. ನನ್ನ ಜೀವನದ ಮೂಲ ತತ್ತ್ವಗಳಲ್ಲಿ ಪ್ರಾಮಾಣಿಕತೆ, ಸತ್ಯ, ಶಿಸ್ತು, ಅಷ್ಟೇ. ಧಾರ್ಮಿಕ ಖಂಡಿತ ಅಲ್ಲ.

 • ನೀವು ಸಸ್ಯಹಾರಿಯಾಗಿದ್ದೀರಿ ಅಂತ ಕೇಳ್ದೆ.

ಧಾರ್ಮಿಕ ಅಲ್ಲ. ಜೀವನ ಅಂದ್ರೆ ಧಾರ್ಮಿಕತೆ ಅಲ್ಲ. ಕೆಲವು ವರ್ಷಗಳ ಹಿಂದೆ, ನನ್ನದೊಂದು ಮನೆಯಿದೆ, ನನ್ನದೊಂದು ಸಣ್ಣ ಕೋಣೆಯಿದೆ. ನಾನದನ್ನ ’ಸಲ್ಕಿಂಗ್ ರೂಂ’ ಅಂತ ಕರೀತೀನಿ. ನಿಮಗ್ಗೊತ್ತಾ ’ಸಲ್ಕಿಂಗ್ ರೂಂ.’ ಊಟ ಆದ್ಮೇಲೆ ನಾನಲ್ಲಿ ಪೈಪ್ ಹಿಡ್ಕೊಂಡು ಕೂತ್ಕೋಳ್ತೀನಿ. ನನ್ನಷ್ಟಕ್ಕೆ ನಾನೊಬ್ಬನೇ ಇರ್ತೀನೆ. ಒಬ್ಬ ಕೂರ್ಗಿಯ ಹಾಗೆ, ಕೂರ್ಗಿಯಾಗಿ ನಾನು ಎಲ್ಲದ್ರಿಂದ ದೂರ ಉಳೀತೀನೆ. ನನಗನಿಸಿತು. ’ನಿನಗೆ ಚಿಕನ್ ಅಂದ್ರೆ ಪ್ರೀತಿ. ನಿನಗೆ ಇದನ್ನ ಖಂಡಿತಾ ಮಾಡೋಕೆ ಸಾಧ್ಯವಿಲ್ಲ’. ನನಗೆ ನಾನೇ ಹೇಳ್ತೇನೆ. ’ಕಾರಿಯಪ್ಪ. ನೀನು ಏನು ಹೇಳ್ತಿಯಾ? ಒಬ್ಬ ಕೂರ್ಗಿಯಾಗಿ ನಿನಗೆ ಮಾಂಸ, ಕೋಳಿ, ತಿನ್ನೋದನ್ನ ಬಿಡೋದಕ್ಕೆ ಸಾಧ್ಯನೇ ಇಲ್ಲ. ಇದು ಚ್ಯಾಲೆಂಜ್. ಸ್ವೀಕರಿಸು ನೋಡೋಣ?’ ’ನಾನು ತರಕಾರಿ, ಮೊಟ್ಟೆ ಮತ್ತು ಮೀನು ಅಷ್ಟೇ ತಿನ್ನ್ತೇನೆ’ ಅಂತ ನನಗೆ ನಾನೇ ಹೇಳಿದೆ. ಮಾರನೇ ದಿನ ನಿಲ್ಲಿಸಿದೆ. ಈಗ ವರ್ಷ ಆಯ್ತು. ಹಾಗೇ ಸುಮ್ಮನೆ. ನಾನು ಮೊಟ್ಟೆ ಮತ್ತು ಮೀನು ತಿಂತಿದ್ದೆ. ಈಗ್ಗೆ ಏಳು ವರ್ಷಗಳ ಹಿಂದೆ ನಾನು ಸ್ಟಡಿ ರೂಂನಲ್ಲಿ ಕೂತ್ಕೊಂಡಿದ್ದೆ. ಕುರಿ, ಕೋಳಿ, ಬಾತುಕೋಳಿ ಮರಿಗಳು, ಮರಿಗಳು. ಮತ್ತೆ ಕುರಿಗಳು. ಹಂದಿ ಮರಿಗಳು. ಕರುಗಳು. ಎಲ್ಲ ಬೆಳೆದು ದೊಡ್ಡ ಆಗ್ತಾವೆ. ಅದನ್ನ ಕತ್ತರಿಸಿ ತಿಂತಾರೆ ಕ್ರೂರಿ ಮನುಷ್ಯರು. ನಾನು ಕ್ರೂರಿಯಲ್ಲ.

 • ಇದು ನಿಮ್ಮೊಳಗೆ ನೀವು ನಡೆಸಿದ ಸಂಭಾಷಣೆ.

ಹೌದು. ನಾನು ಈಗ ಮೀನು ತಿನ್ನೊದಿಲ್ಲ. ನಾನದನ್ನ ಬಿಟ್‌ಬಿಟ್ಟೆ.

 • ನಿಮ್ಮ ಸಲ್ಕಿಂಗ್ ರೂಂನಲ್ಲಿ ನೀವು ಯಾವುದಾದ್ರೂ ಕವಿತೆಗಳನ್ನ ಓದ್ತೀರಾ?

ಇಲ್ಲ. ಇಲ್ಲ.

 • ನೀವು ಅಲ್ಲಿ ಕವಿತೆಗಳನ್ನ ಜೀವಿಸ್ತೀರಿ.

ನಾನು ಓದೋದೇ ಇಲ್ಲ. ನಾನು ತುಂಬಾ ಪುವರ್ ರೀಡರ್‌. ಧರ್ಮ ಅಥವಾ ಆರೋಗ್ಯ ಇಲ್ಲ. ಬರೀ ನನ್ನ ಜೀವನದ ಮೂಲ ತತ್ತ್ವಗಳು ಮತ್ತೆ ಅವು ನನಗೆ ತುಂಬಾ ಪ್ರಿಯವಾದವು. ನೀವಿದನ್ನ ಹೇಗೆ ಕಲ್ಪಿಸಿಕೊಳ್ತೀರಾ…. ನಾನು ಸಂಪೂರ್ಣ ಸಸ್ಯಹಾರಿಯಾಗಿ ಜೀವಿಸ್ತಿದ್ದೇನೆ. ಏಳು ವರ್ಷ. ನಾನು ಮೊಟ್ಟೆ, ಕೆನೆ, ಜೇನು, ಹಾಲು, ಜ್ಯಾಮ್, ಹಣ್ಣುಗಳು ಮತ್ತೆ ತರಕಾರಿ, ಮಾಂಸ ಇಲ್ಲವೇ ಇಲ್ಲ. ನಂಗೆ ಅದರ ಬಗ್ಗೆ ಒಲವಿಲ್ಲ. ನಾನು ಮಿತಾಹಾರಿ.

 • ದೇಶದ ಇಂದಿನ ಯುವ ಜನತೆಗೆ ನಿಮ್ಮ ಸಂದೇಶ ಏನು ಸರ್?

ನೀವು ನನ್ನ ಸಂದೇಶವನ್ನ ಅವರಿಗೆ ಹೇಳಿ. ದೇಶದ ಜೀವನದಲ್ಲಿ ಯುವಜನೆಗೆ ತುಂಬಾ ಮುಖ್ಯ ಪಾತ್ರ ಇದೆ. ಅದಕ್ಕೆ ಅವರು ತಮ್ಮನ್ನ ಸಿದ್ಧಗೊಳಿಸಿಕೊಳ್ಳಬೇಕು. ಈ ಮೂರು ವಿಶೇಷ ಗುಣಗಳನ್ನ ಹೊಂದಬೇಕು. ದೈಹಿಕ ಕ್ಷಮತೆ, ಮಾನಸಿಕವಾಗಿ ಚುರುಕು ಮತ್ತು ವಿದ್ಯಾಭ್ಯಾಸ, ನೈತಿಕ ಶುದ್ಧತೆ ಅಂದ್ರೆ ನಡತೆ ಸರಿ ಇರಬೇಕು. ದೈಹಿಕವಾಗಿ ಸದೃಢತೆ, ಮಾನಸಿಕವಾಗಿ ಚುರುಕು ಅಂದ್ರೆ ವಿದ್ಯೆ, ನೈತಿಕ ಶುದ್ಧತೆ ಅಂದ್ರೆ ಉತ್ತಮ ನಡತೆ ಅವಶ್ಯ.

 • ನಮ್ಮ ವಿದ್ಯಾಭ್ಯಾಸ ಅವರಿಗೆ ಇದನ್ನ ಕೊಡ್ತಾ ಇದ್ಯಾ?

ಬಹುಶಃ ನನಗ್ಗೊತ್ತಿಲ್ಲ. ನನಗ್ಗೊತ್ತಿಲ್ಲ ವಿದ್ಯಾಭ್ಯಾಸದ ಬಗ್ಗೆ. ಕೊನೇದಾಗಿ ನನಗೆ ಬೇಸರವಾಗುತ್ತೆ ಇದನ್ನ ಹೇಳಕ್ಕೆ ಈ ಭಾಷಾ ಗೋಜಲಿನ ವ್ಯವಹಾರ ಇದ್ಯಲ್ಲ ಈಗ. ನಾನು ಹೇಳ್ತೇನೆ. ಮಗುವಿನ ವಿದ್ಯಾಭ್ಯಾಸ ಮಾಧ್ಯಮ – ಪ್ರತಿಯೊಂದು ಮಗುವಿಗೂ ಇಡೀ ಭಾರತದಲ್ಲಿ ಮೂರು ಭಾಷೆಗಳು, ಪ್ರಾಂತೀಯ ಭಾಷೆ, ಹಿಂದಿ ಮತ್ತು ಇಂಗ್ಲಿಷ್. ಪ್ರಾಂತೀಯ ಭಾಷೆ ಕನ್ನಡ, ಹಿಂದಿ ರಾಷ್ಟ್ರಭಾಷೆ ಮತ್ತು ಇಂಗ್ಲಿಷ್ ಅಂತರರಾಷ್ಟ್ರೀಯ ಭಾಷೆ. ಈ ಮೂರು ಎಲ್ಲರಿಗೂ ಕಡ್ಡಾಯವಾಗಬೇಕು. ನೀನು ಕನ್ನಡಿಗ, ಕನ್ನಡ; ನೀನು ಪಂಜಾಬ್‌ನವರು, ಪಂಜಾಬಿ; ನೀನು ಬಂಗಾಳದಲ್ಲಿದ್ದೀ ಬಂಗಾಳಿ. ಆದರೆ ಈಗ ಒಂದು ಹುಚ್ಚು ಉಂಟಲ್ಲ ಅದು ಕನ್ನಡಿಗರಿಗೆ ಮಾತ್ರ. ಕನ್ನಡಿಗರು ಕುಂಠಿತ ಮನಸ್ಸಿನವರು ಅವರು ಮಾತಾಡ್ತಾರೆ ಮತ್ತೆ ಅವರ ಮಕ್ಕಳನ್ನ ಇಂಗ್ಲಿಷ್ ಸ್ಕೂಲ್‌ಗೆ ಕಳಿಸ್ತಾರೆ. ಹೌದು. ಇಂಗ್ಲಿಷ್ ಸ್ಕೂಲ್‌ನಲ್ಲಿ. ಇದು ಹೊಲಸು. ನಾನು ಕನ್ನಡಿಗ. ನಾನು ಮರಾಠಿಯನ್‌. ಭಾರತೀಯ. ಅಷ್ಟೆ.

 • ಸರ್‌, ನಮ್ಮದೇ ಆದ ವಿಭಿನ್ನ ಸ್ವಂತಿಕೆಯ ಸಂಸ್ಕೃತಿಯನ್ನ ಇಟ್ಟುಕೊಂಡೇ ಭಾರತೀಯನಾಗಿರುವುದು ಒಳ್ಳೇಯದಲ್ವ. ಇವು ವಿರೋಧಾತ್ಮಕವೇನಲ್ಲ. ಅವುಗಳೆರಡೂ ಒಟ್ಟಾಗಿ ಇರ್ಬಹುದು. ನಾನು ಕನ್ನಡಿಗನಾಗಿರುವಾಗಲೇ ಒಬ್ಬ ಭಾರತೀಯ ಕೂಡಾ. ನಾನೊಬ್ಬ ಭಾರತೀಯನಾಗುವುದಕ್ಕೆ ನನ್ನ ಕನ್ನಡಿಗತನವನ್ನ ಬಿಡಬೇಕಾಗಿಲ್ಲ.

ಹೌದು. ನಾವಿದೆಲ್ಲ ಓದ್ರೇನಲ್ಲ, ಪುಸ್ತಕಗಳನ್ನ. ರಾಮಾಯಣ, ಮಹಾಭಾರತ, ಮತ್ತೆಲ್ಲ.

 • ನೀವೊಬ್ಬ ಕೊಡವ ಅದರ ಜೊತೆಗೇನೇ ನೀವು ಜಗತ್ತಿನ ಪ್ರಜೆ ಕೂಡಾ ಹೀಗಿರೋದಿಕ್ಕೆ ಸಾಧ್ಯ ಆಗಬೇಕು.

ಹೌದು. ನಾನು ಹೇಳ್ತೇನೆ, ಇದೊಂದು ಮಹಾನ್ ದೇಶ. ನಾನು ಪ್ರಪಂಚ ಎಲ್ಲ ಸುತ್ತಿದೆ. ನಮ್ಮ ದೇಶವನ್ನ ಏನೂ ಮುಟ್ಟೋದಕ್ಕೆ ಸಾಧ್ಯ ಇಲ್ಲ. ಭಾರತ ಚರಿತ್ರೆ, ಕಲೆ, ಸಂಸ್ಕೃತಿ, ಸಂಗೀತದಲ್ಲಿ ಮಹಾನ್, ಅತ್ಯುತ್ತಮ. ನಿಜಕ್ಕೂ ಒಳ್ಳೇದು. ಆದರೆ ರಾಜಕೀಐ, ಭಾರತದ ಅತ್ಯಂತ ಕೆಟ್ಟ ಭಾಗ ರಾಜಕೀಯ.

 • ನಾನು ತಮ್ಮ ಬರವಣಿಗೆಗಳನ್ನ ಓದ್ತಾ ಒಂದು ತಾವು ಬರೆದಿದ್ದು ನನಗೆ ಬಾಳಾ ಮನಸ್ಸಿಗೆ ತುಂಬಾ ತಟ್ಟ್ತು ಸಾರ್. ನೀವು ನಿಮ್ಮ ತಂದೆ ಬಗ್ಗೆ ಬರೆದಿದ್ದು, ದಿ ಗ್ರೇಟೆಸ್ಟ್ ಮ್ಯಾನ್ ಹ್ಯಾವ್ ನೋನ್ ಇನ್ ಮೈ ಲೈಫ್ ಅಂತ.

ಹೌದೌದು.

 • ಅದು ನಿಮ್ಮ ತಂದೆ ಬಗ್ಗೆ ಬರೆದಿದ್ದೀರಿ. ಭವನ್ಸ್ ಜರ್ನಲ್‌ಗೆ ತಾವು ಬರೆದದ್ದು ಅಂತ ಕಾಣುತ್ತೆ.

ಹೌದೌದು.

 • ಅದರಲ್ಲಿ ನೀವು ಎರಡು ಕಾರಣ ಕೊಡ್ತೀರಿ. ನಿಮ್ಮ ತಂದೇನ ನೀವು ಯಾಕಷ್ಟು ಗೌರವಿಸ್ತೀರಿ ಅಂತ. ಒಂದು ಅವರು ಮ್ಯಾಜಿಸ್ಟ್ರೇಟ್ ಆಗಿದ್ದಾಗಿನ ಒಂದು ಘಟನೆ ಇದು ನಿಮ್ಮ ಬಾಯಿಂದ್ಲೆ ಕೇಳಕ್ಕೆ ನಮಗೆ ಇಷ್ಟ.

ನನಗ್ಗೊತ್ತಿಲ್ಲ, ನಾವು ಓದ್ತಿದಾಗ, ಅವರು ಸುಬೇದಾರ್ ಆಗಿದ್ರು ಮ್ಯಾಜಿಸ್ಟ್ರೇಟ್ ಆಗಿರುವಾಗ.

 • ಅದು ವಿಷಯ ಹೀಗಿದೆ.

ಆಗ್ಲೆ ಕಲ್ತಿದ್ದು, ಎಲ್ಲ ಜಾತಿ ಒಂದೇ ಅಂತ. ಇವರು ಸಿಖ್‌, ಇವನು ಮುಸ್ಲಿಂ, ಏನು ಇಲ್ಲ ಅವರು ಮಕ್ಕಳೇ, ನಾವೆಲ್ಲ್ರೂ ದೇವರ ಮಕ್ಕಳು, ನೀವು ಅವರ ಹಾಗೆ ಮಾಡ್ಬೇಕು ಅಂತ. ನನ್ನ ತಂದೆ ಕಲ್ಸಿದ್ದು ನಂಗೆ.

 • ನಿಮ್ಮ ತಂದೆ.

ನಮ್ ತಂದೆಗೆ ಇಸ್ಲಾಂ ಸ್ನೇಹಿತ್ರಿದ್ರು, ಸಿಖ್ ಸ್ನೇಹಿತ್ರಿದ್ರು, ಕ್ರಿಶ್ಚಿಯನ್ ಸ್ನೇಹಿತ್ರಿದ್ರು, ಬಾಳ ಸ್ನೇಹಿತಿದ್ರು. ಜಾತಿ ಬೇಧ ಏನಿಲ್ಲ ಅವರಿಗೆ.

 • ಅವರ ಒಂದು ಘಟನೆ ಸರ್. ಅವರು ಮ್ಯಾಜಿಸ್ಟ್ರೇಟ್‌ರಾಗಿದ್ದಾಗ ಅವರ ಸ್ನೇಹಿತ ಒಬ್ಬರನ್ನ ಅವರು ವಿಚಾರಣೆ ಮಾಡಬೇಕಾಗಿತ್ತಂತೆ. ಮನೆಗೆ ಕರೆದು, ಊಟ ಹಾಕಿ,

ಹಾಂ ಹಾಂ

 • ಅದನ್ನ ಹೇಳಿ ಸಾರ್‌‌.

ರಸಲ್ ಖಾನ್‌ ಅಂತ ಒಬ್ಬ ಮುಸ್ಲಿಂ ಇದ್ದ. ಆಂ, ಮುಸ್ಲಿಂ. ಶ್ರೀಮಂತ ಸ್ನೇಹಿತ ಅವನು ಕಾರ್ ತರೋನು., ಅವನ ಮೇಲೆ ಕೇಸ್ ಆಯ್ತಂತೆ. ಹೇಳಿದ್ರಂತೆ – ’ಮಾದಪ್ಪನವರೆ ನೀವು ಸುಬೇದಾರ್ ಆಗಿದ್ದೀರಿ. ಕೇಸು ನಿಮ್ಮ ಕೋರ್ಟ್‌‌ಗೆ ಆಗುತ್ತೆ ಅಂತ.’ ಎಷ್ಟು ಘಂಟೆಗೆ ಎಷ್ಟು ಹೊತ್ತಿಗೆ’ ’ಒಳ್ಳೇದು.’ ಅವನಿಗೆ ಬರೋ ಮುಂಚೆ ಅವನ್ನ ಕರೆದ್ರು, ರಸಲ್ ಖಾನ್, ನಮ್ಮ ಮನೆಗೆ ಇವತ್ತು ಬರಬೇಕು. ಹನ್ನೆರಡು ಘಂಟೆಗೆ ಫಲಾಹಾರ ಮಾಡ್ಬೇಕು. ಅಲ್ಲಿಂದ್ಲೇ ಹೋಗುವಾ ಅಂತ. ಅಲ್ಲೇ ಸೇರಿಕೊಳ್ಳುವ. ಅಲ್ಲಿ ಮರ್ತು ಬಿಡುವಾ, ಅದು ನಿಮ್ಮ ಕೆಲ್ಸ. ಅಲ್ಲಿ ಬನ್ನಿ ಅಂತ ಅವರನ್ನ ಕರೆಸಿ ಬಿಟ್ಟು ಊಟ ಕೊಡ್ಸಿ ಹೋದ್ರು. ಆಮೇಲೆ ಅವನ ವಿಚಾರಣೆ ನಡೆಸಿದ್ರು.

 • ಅವರಿಗೆ ಮೂರು ತಿಂಗಳೇನೋ ಸೆರೆಮನೆ ವಾಸ ವಿಧಿಸಿದ್ರಂತೆ. ಆಮೇಲೆ ಮುಗಿದ್‌ನಂತ್ರ ಮತ್ತೆ ಕರೆದು ಮನೇಲಿ ಊಟ ಹಾಕಿ ಕಳಿಸಿದ್ರಂತೆ. ದೊಡ್ಡ ಘಟನೆ ಅದು. ಇದು ತಮ್ಮ ಮೇಲೆ ಬಾಳಾ ಪರಿಣಾಮ ಮಾಡಿರಬಹುದು ಅಂತ ಅನ್ನಿಸುತ್ತೆ, ನಿಮ್ಮ ತಂದೆಯವರ ಆದರ್ಶ ಮತ್ತು ಜೀವನ.

ತಂದೆ, ತಾಯಿ ಹೇಳಿದ ಮಾರ್ಗ ಎಲ್ಲ ಬಾಳಷ್ಟು ಗ್ಯಾಪ್ಕ ಆಗುತ್ತೆ ಈಗ. ಅದೆಲ್ಲ ಬಾಳ ಸಹಾಯ ಆಯಿತು. ನನ್ನ ಜನ್ಮದಲ್ಲಿ. ನನ್ನ ಕೆಲಸ ದೇಶ ಸೇವೆಯಲ್ಲಿ. ಈಗ ನನ್ನ ಮನೆಯಲ್ಲಿ ಕೊನೆಗೆ ನಕ್ಷೆ ಇದೆ. ಯಾವಾಗ್ಲೂ ಪ್ರಾತಃಕಾಲ, ನಾನು ಬಟ್ಟೆಗಿಟ್ಟೆ ಹಾಕ್ಕೊಬಿಟ್ಟು, ಬರೋಕೆ ಮುಂಚೆ ಹೋಗಿ ತಂದೆ ಕಾಲು ಹಿಡಿತೀನಿ, ’ತಂದೆ, ತಾಯಿ ಅಜ್ಜಾ ಬಾಳ ವಂದನೆ ನಿಮಗೆ’ ನೀವು ನನಗೆ ಪಾಠ ಕಲಿಸಿದ್ದು. ಅದರಿಂದ ಬಾಳ ಸಹಾಯ ಆಯಿತು.

ಜವಾನ್‌ ತುಮ್ಹಾರಾ ಹಿಸ್ಸಾತೋ ಆಶ್ರಯ್ ದೇನೇಮೆ
ತೂ ತುಮ್ಹಾರಾ ಫಸಿಲ್ ಲಿಯ
ತೂ ತೋ ಆಪ್ ಕೊ ಕೋಲ್ ದಿಯಾ
ತುಮ್ಹೆ ಜಾನ್ ದಿ ಜಾನ್ ದಿಯಾ ಜವಾನ್
ಅಝಾದಿ ಲಿಯಾ ಅಝಾದಿಕೋ ಹಮೇಶಾ
ಐ ಸೆಲ್ಯೂಟ್ ಹಿಮ್. ನನ್ನ ತಂದೆಗೆ, ತಾಯಿಗೆ.

 • ನಮಗೆ ಆಶ್ಚರ್ಯದ ವಿಷಯ ಕಾರ್ಯಪ್ಪನವರೆ, ಬೇಕಾದಷ್ಟು ತಮಗೆ ಅನುಭವ ಆಗಿದೆ. ನಿಮ್ಮ ಮಾತಿನಲ್ಲಿ, ನಿಮ್ಮ ಇಂಗ್ಲೀಷಂತೂ, ಸಂಪೂರ್ಣ ಇಂಗ್ಲಿಷ್ ಜನರ ಆಕ್ಸೆಂಟ್‌ನಲ್ಲಿ ಮಾತಾಡ್ತೀರಿ. ಆದ್ರೂ ನೀವು ಒಬ್ಬ ಕೂರ್ಗಿಯಾಗಿಯೇ ಉಳಿದಿದ್ದೀರಿ. ಜಗತ್ತಿನ ಪ್ರಜೆಯಾಗಿಯೂ ಇದ್ದೀರಿ, ಕೂರ್ಗಿಯಾಗಿಯೂ ಇದ್ದೀರಿ, ನಿಮ್ಮ ನಾಡನ್ನ ನೀವು ಪ್ರೀತಿಸ್ತೀರಿ, ಇವೆರಡರ ಹೊಂದಾಣಿಕೆ ನಿಮಗೆ ಹೇಗೆ ಸಾಧ್ಯ ಆಯಿತು? ಇವತ್ತು ಬಹಳ ಜನ ಅದಷ್ಟ್ರಲ್ಲೇ ಇದಾಗಿ ಹೋಗಿ ಬಿಡ್ತಾರೆ. ತಮ್ಮ ಇದನ್ನ ಕಳಕೊಂಡು ಬಿಡ್ತಾರೆ. ನೀವು ಎರಡೂ ಉಳಿಸ್ಕೊಂಡ ಬಂದಿದೀರಿ. ಇದರ ಬಗ್ಗೆ ಏನಾದ್ರೂ ತಮಗೆ

ನಾನೇನಿಲ್ಲ. ತಂದೆ, ತಾಯಿ ಕಲಿಸಿದ್ದು. ನನ್ನ ಕೆಲಸ ಮೊದ್ಲು. ಮಾತು ಗೀತು ನೋಡುವಾ. ನನ್ನ ಕೆಲಸ ಸರಿಯಾಗಿ ಮಾಡುವ ಮುಂಚೆ ಅಂತ.

 • ತಾವು, ಸರ್, ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗ ಎರಡು ಸಮಸ್ಯೆ ಇತ್ತು ಅಂತ ಎಲ್ಲೋ ಓದಿದ್ದೆ. ಮೊದಲನೇದು ಏನು ಅಂದ್ರೆ ನಮ್ಮ ರಾಜಕಾರಣಿಗಳಿಗೆ, ಅಧಿಕಾರ ವರ್ಗದವರು ಗೊತ್ತಿದ್ರು ಆದರೆ ಮಿಲಿಟರಿ ಜನ ಗೊತ್ತಿರಲಿಲ್ಲ.

ಹೂಂ.

 • ಅವರ ಜೊತೆ ಯಾವ ವ್ಯವಹಾರವೂ ಅವರಿಗೆ ಇರ್ಲಿಲ್ಲ.

ಇಲ್ಲ.

 • ಆದ್ದರಿಂದ ಅಧಿಕಾರದ ಬದಲಾವಣೆ ಆದಾಗ ಮಿಲಿಟರಿಯಲ್ಲಿದ್ದ ಜನರಿಗೂ ರಾಜಕಾರಣಿಗಳು ಗೊತ್ತಿಲ್ಲ. ರಾಜಕಾರಣಿಗಳಿಗೆ ಇವರು ಗೊತ್ತಿಲ್ಲ. ಸಂದರ್ಭದಲ್ಲಿ ತಾವು ಬಹಳ ಒಂದು ದೊಡ್ಡ ಪಾತ್ರವನ್ನು ವಹಿಸಿದ್ರಿ. ರಾಜಕಾರಣಿಗಳ ಜೊತೆ ಒಂದು ಹೊಂದಾಣಿಕೆ ಮಾಡಿಕೊಳ್ಳೋದು ಇದೆಯಲ್ಲ, ಅದಕ್ಕೂ, ಸೈನ್ಯಕ್ಕೂ ನಡುವೆ, ಇದರಲ್ಲಿ ತಮ್ಮ ಪಾತ್ರ ಬಹಳ ಮುಖ್ಯವಾದದ್ದು ಅಂತ ನಾನು ಎಲ್ಲೋ ಓದಿದೆ. ಅದರ ಬಗ್ಗೆ ತಾವೇನಾದ್ರೂ ಹೇಳೋದಿದ್ಯಾ?

ಏನ್ ಹೇಳೋದು. ಯಾವಾಗ್ಲೂ ಮಾತಾಡೋ ಹಾಗೆ ನನ್ನ ಹೃದಯದಲ್ಲಿ, ನನ್ನ ದೃಷ್ಟಿಯಲ್ಲಿ, ನಮ್ಮ ಸಿಪಾಯಿಗಳು ಬಾಳಾ ವಜ್ರದಂತಹ ಮನುಷ್ಯರು. ಒಳ್ಳೆ ಮನುಷ್ಯರು ಅವರು ಯಾವಾಗ್ಲೂ ಪ್ರೇಯರ್, ಪನಿಶ್‌ಮೆಂಟ್ ಇಲ್ಲ. ಅವರಿಗೆ ಬುದ್ಧಿ ಹೇಳಿದ್ರೆ ಕೇಳ್ತಾರೆ. ನೋಡಿ ನಮ್ಮ ರೆಜಿಮೆಂಟಲ್ಲಿ ಹಿಂದೂ, ಮುಸ್ಲಿಂ ಸಿಪಾಯಿಗಳಿದ್ರು. ಅವರಿಗೆ ಮಸೀದಿ ಇತ್ತು ಮತ್ತೆ ಮಂದಿರ ಇತ್ತು. ನಾನು ರೀಜೆಂಟ್ ರೆಸಿಡೆಂಟ್ ಆಗಿದ್ದೆ ೧೯೩೦ ರಲ್ಲಿ. ಆಗ ಸುಬೇದಾರ್ ಮೇಜರ್ ರಾಜಪ್ಪನ್ ಬಲ್ಲಾ, ಜಯಪ್ಪನ್, ಜೊತೆಗೆ ಸುಬೇದಾರ್ ಬದ್ರುದ್ದೀನ್ ಅಂತ ಮುಸ್ಲಿಂ ಇದ್ರು. ಕರ್ದೆ ಅವನ್ನ ಹೇಳ್ದೆ, ’ಸುಬೇದಾರ್ ಸಾಬ್ ಹಮಾರೇ ಸ್ಕ್ವಾಡ್ರನ್ ಮೇ ಸಿಖ್ ಹೈ, ಮುಸ್ಲಿಂ ಹೈ, ಜಾಟ್ ರಜಪೂತ್‌ ಹೈ, ಮಸ್ಜಿದ್ ಬಿ ಹೈ ಮಂದಿರ್ ಬಿ ಹೈ, ಮಸ್ಜಿದ್ ಬೀ ಔರ್‌ ಮಂದಿರ್ ಮೆ ಬೈಠನಾ ಪಡ್ತಾ ಹೈ. ಇಸ್ ವಾಸ್ತೆ ಆಯಿಯೇ ಹಫ್ತೆ ಮೇ ಏಕ್ ಬಾರ್ ಸರದಾರ್ ರಜಪೂತ್‌ಕೆ ಸಾಥ್ ಬೈಠೊ. ಅಪನೆ ಖುಷಿ ಮಸ್ತ್ ಬಡ್ತಾ ಹೈ. ಇದೇ ಪ್ರಕಾರ ಆಯಿತ್‌ವಾರ ಮುಸ್ಲಿಂರೆಲ್ಲ ಮಂದಿರಕ್ಕೆ ಹೋದ್ರು. ನಾನು ಮೊದಲು ಹೋದೆ. ಮೊದಲ ಭಾನುವಾರ ಕೂತೆ ಅಲ್ಲೇ. ೫-೬ ಜನ ಬಂದ್ರು. ೮ ಜನ ಬಂದ್ರು. ಮತ್ತು ೧೦, ೨೦, ೩೦, ೪೦, ೫೦ ಅವರೇ ಬರ್ತಿದ್ರು. ೧೦೦ ಜನ ಮುಸ್ಲಿಂ ೧೦೦ ಜನ ರಜಪೂತ್ ಬಂದಿದ್ರು, ಖುಷಿಯಲ್ಲಿ.

 • ಬ್ರಿಟಿಷರು ಅಧಿಕಾರದಲ್ಲಿದ್ದಾಗ ಆರ್ಮಿಯಲ್ಲಿದ್ದಿರಿ ತಾವು. ನಮಗೆ ಸ್ವಾತಂತ್ರ್ಯ ಬಂದಿದ್ದೇ ಅಧಿಕಾರದಲ್ಲೊಂದು ದೊಡ್ಡ ಬದಲಾವಣೆಯಾಯ್ತಲ್ಲ ಸರ್, ಬದಲಾವಣೆಗೆ ಹೊಂದಿಕೊಳ್ಳುವ ಪ್ರಯತ್ನ ಇದೆಯಲ್ಲ, ಅದು ಸಮಸ್ಯೆ ರಾಜಕಾರಣಿಗಳಿಗೂ ಇತ್ತು ಮತ್ತು ಸೈನ್ಯದಲ್ಲಿದ್ದವರಿಗೂ ಇತ್ತು ಅಂತ ಅಂದ್ಕೋಡಿದ್ದೀನಿ. ಯಾಕಂದ್ರೆ ಇವರು ಹೊಸಜನ, ಹೊಸ ಮುಖಗಳು. ಹೊಸ ರೀತಿ ಬಟ್ಟೆ ಹಾಕಿದವರು, ಹೊಸ ರೀತಿ ಮಾತಾಡುವವರು. ಸಂದರ್ಭದಲ್ಲಿ ತಮ್ಮ ಅನುಭವ ಏನು ಅನ್ನೋದು ನಮಗೆ ನಮಗೆ ತಿಳಿಬೇಕು ಅಂತ. ಯಾಕಂದ್ರೆ ಹೊಂದಾಣಿಕೆ ತಂದವರು ತಾವು. ತಮ್ಮ ಪಾತ್ರ ಸಮಯದಲ್ಲಿ ಬಹಳ ಮಹತ್ವದ್ದಾಗಿತ್ತು. ಅದರ ಬಗ್ಗೆ ಏನು ಹೇಳ್ತೀರಿ?

ಯಾವಾಗ್ಲೂ ನಾನು ಅಪ್ಪಣೆ ಕೊಡೋ ಮೊದಲು ನಾನು ಮನಸ್ಸಿನಲ್ಲಿ ಅಂದ್ಕೊಳೋದು, ನಾನು ಮಾಡ್ತೀನೋ ಇಲ್ವೊ ಅಂತ. ನಾನು ಯಾವ ತರ ಮಾಡ್ತೀನಿ ಅವರಿಗೆ ಹೇಳ್ತೀನಿ ಮಾಡಿ ಅಂತ. ನಿಮಗೆ ಸುಮ್ಮನೆ ಮೆಸೇಜ್ ಕೊಡೋದಿಲ್ಲ. ಅಪ್ಪಣೆ ಅಲ್ಲ. ನಾನು ಮಾಡ್ತೀನಿ ಅದೇ ತರಾ ನೀವು ಮಾಡಬೇಕು ಅಂತ.

 • ಸಂದರ್ಭದಲ್ಲಿ ಸಾರ್‌‌ಮಹಾತ್ಮ ಗಾಂಧಿಯವರು ತಮ್ಮ ಬಗ್ಗೆ ಆಡಿದ ಒಂದು ಮಾತು, ನೀವು ಹೋಗಿ ಗಾಂಧಿಯವರನ್ನ ನೋಡಿರೋದು. ಅದು ಇವತ್ತು ನಮ್ಮ ಇತಿಹಾಸದ ಒಂದು ಸಂಗತಿಯಾಗಿದೆ. ನಾನದನ್ನ ಓದಿದೀನಿ. ತಾವು ಗಾಂಧೀಜಿಯವರನ್ನ ಹೋಗಿ ಭೇಟಿ ಮಾಡಿದ್ದು ಮತ್ತೆ ಅವರು ಹುತಾತ್ಮರಾಗಿ ಬಿಟ್ರಲ್ಲ. ಆಮೇಲೆ ತಮಗೆ ನೋಡೋಕ್ಕೆ ಆಗ್ಲಿಲ್ಲ. ಒಂದು ವೇಳೆ ನಿಮಗೂ ಅವರಿಗೂ ನಡುವೆ ಏನಾದ್ರು ಸರಿಯಾದ ಮಾತುಕತೆ ಆಗಿದ್ದಿದ್ರೆ ಅದು ಜಗತ್ತಿನ ಬಹಳ ಅತ್ಯುತ್ತಮವಾದ, ಯಾಕಂದ್ರೆ ಒಬ್ಬ ಶ್ರೇಷ್ಠ ಸೈನಿಕ ಮತ್ತು ಒಬ್ಬ ಶ್ರೇಷ್ಠ ಸ್ವಾತಂತ್ರ್ಯ ಸೇನಾನಿ.

೧೯೪೭ ರಲ್ಲಿ ನಮಗೆ ಸ್ವಾತಂತ್ರ್ಯ ಆದ್ಮೇಲೆ, ನಾನು ಆರ್ಮಿ ಹೆಡ್ ಕ್ವಾರ್ಟ್ರಸ್‌ನಲ್ಲಿದ್ದೆ. ಮೇಜರ್ ಆಗಿದ್ದೆ ಆಗ. ಅಲ್ಲಿಂದ ಕಮಾಂಡ್ ಚೀಫ್ ಪರ್ಸನ್ ಆಗಿ ಈಸ್ಟ್ ಕಮಾಂಡ್ ಲೆಫ್ಟಿನೆಂಟ್ ಜನರಲ್ ಆಗಿ ಕಲ್ಕತ್ತಾಗೆ ಹೋಗಿದ್ದೆ. ಆಗ ಹೋಗುವಾಗ ಕಲ್ಕತ್ತಾದಲ್ಲಿ ಕೇಳಿದೆ ’ಗಾಂಧಿಯವರು ಇದ್ದಾರಾ’ ಅಂತ. ಆಗ ನಾನು ಗಾಂಧಿಯವರನ್ನ ಕಂಡಿರಲಿಲ್ಲ. ಐ ಹ್ಯಾಡ್ ನೆವರ್ ಸೀನ್ ಹಿಮ್, ನಾನು ಹೋದೆ, ಅವತ್ತು ಹೋದೆ, ಮೇಜರ್ ಸಾಬ್ ಆಗಿ ಹೋದೆ. ಸೆಲ್ಯೂಟ್ ಮಾಡ್ದೆ. ರಿಸೀವ್ ಮಾಡಿದ್ರು. ಚೇರ್‌ ಕೊಟ್ರು. ’ಎಸ್’ ಅಂತ ನಾನು ಇಂಗ್ಲಿಷಲ್ಲಿ ಹೇಳಿದೆ. “ಗಾಂಧೀಜಿ ನಿಮ್ಮನ್ನ ನೋಡೋ ಅದೃಷ್ಟ ಕೂಡಿ ಬಂದಿರಲೇ ಇಲ್ಲ ಇಷ್ಟರ ತನಕ, ನಿಮ್ಮನ್ನ ಭೇಟಿಯಾಗಿರಲೇ ಇಲ್ಲ. ಇವತ್ತು ದೇವರು ಮನಸು ಮಾಡಿದ್ದು. ನಾನು ನನ್ನ ಕಮಾಂಡ್‌ಗೆ ಹೋಗ್ತಾ ಇದ್ದೀನಿ. ದಾರಿನಲ್ಲಿ ನಿಮ್ಮ ಆಶೀರ್ವಾದ ತಗೊಳೋಣ ಅಂತ ಬಂದೆ. ಮತ್ತೆ ನಾನ್ ಹೇಳ್ದೆ ’ಗಾಂಧೀಜಿ ನನಗೆ ನಿಮ್ ಬಗ್ಗೆ ಒಂದೇ ವಿಷ್ಯ ಗೊತ್ತಿರೋದು. ನೀವು ಬರ್ದಿರೋ ಅಹಿಂಸೆಯ ಬಗೆಗಿನ ಪುಸ್ತಕಗಳನ್ನ ಓದಿದೀನಿ. ಅಹಿಂಸೆ ಬಗ್ಗೆ, ಪ್ರತಿಯೊಂದು ದೇಶಾನೂ ಅಹಿಂಸೆಯನ್ನ ಪಾಲ್ಸೋದಾದ್ರೆ ನಾವು ಪಾಲಿಸೋಣ. ಕೆಲವರು ಹಿಂಸೆ, ಕೆಲವರು ಅಹಿಂಸೆ ಅದು ಸರಿಯಲ್ಲ. ನಾವು ಯುದ್ಧಕ್ಕೆ ಸಿದ್ಧರಾಗಬೇಕು. ಆದರೆ ನಾವು ಅಹಿಂಸೆಯನ್ನು ಪಾಲಿಸ್ತೀವಿ.

 • ಅದಕ್ಕೇನಂದ್ರು ಸಾರ್?

ನೋಡಿದ್ರು. ಮೌನ ಅವತ್ತು, ಸೈಲೆನ್ಸ್.

 • ನಿಮ್ಮನ್ನ ಹತ್ರ ಕರೆದ್ರಾ ಸಾರ್‌?

ಅಲ್ಲಿ ಮುಂದೆ ಕೂತಿದ್ದೆ. ನಾನು ಹೋಗುವಾಗ ನನ್ನ ಶೂ ತೆಗೆದುಬಿಟ್ಟಿದ್ದೆ. ನಾನೊಬ್ಬ ಮಹಾತ್ಮರನ್ನು ಭೇಟಿಯಾಗ್ತಿದ್ದೀನಿ. ನಾನು ಪಾದರಕ್ಷೆಗಳನ್ನ ಕಳಚಬೇಕು. ಯೂನಿಫಾರ್ಮ್‌ ಹಾಕಿದ್ದೆ. ಹತ್ರ ಕರೆದ್ರು. ಪುನಃ ಬಂದು ನನ್ನನ್ನ ಕಾಣು. ನಾನು ಇದರ ಬಗ್ಗೆ ಇನ್ನೂ ಸ್ವಲ್ಪ ಮಾತಾಡೋದಿದೆ ಅಂದ್ರು.

 • ಅಂತ ಬರೆದ್ರಾ ಸರ್‌?

ಅಂತ ಬರೆದ್ರು.

 • ನೀವು ಹಿಂದಿಯಲ್ಲಿ ಮಾತಾಡಲಿಲ್ವ ಸರ್, ಆವಾಗ, ಹೋದಾಗ

ಇಲ್ಲ. ಇಂಗ್ಲಿಷಲ್ಲಿ.