ಅನಂತಮೂರ್ತಿ ಮಾತುಕತೆ: ಹತ್ತು ಸಮಸ್ತರ ಜೊತೆ ಎಂಬ ಈ ಪುಸ್ತಕದಲ್ಲಿ ಹದಿಮೂರು ಮಹನೀಯರ ಜೊತೆ–ಕೆ.ಎಂ. ಕಾರಿಯಪ್ಪ, ಆರ್.ಕೆ. ನಾರಾಯಣ್, ಆರ್.ಕೆ.ಲಕ್ಷ್ಮಣ್, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಕೋಟ ಶಿವರಾಮ ಕಾರಂತ, ಎಂ. ಗೋಪಾಲಕೃಷ್ಣ ಅಡಿಗ, ಚಿನುವಾ ಅಚಿಬೆ, ಕೆ.ವಿ. ಸುಬ್ಬಣ್ಣ, ಜೆ.ಹೆಚ್. ಪಟೇಲ್, ಎಸ್. ಎಂ.ಕೃಷ್ಣ, ರಾಜೀವ ತಾರಾನಾಥ, ಗಿರೀಶ ಕಾರ್ನಾಡ್ ಮತ್ತು ಜಿ.ಎಸ್. ಶಿವರುದ್ರಪ್ಪ — ಯು.ಆರ್. ಅನಂತಮೂರ್ತಿಯವರು ಬೇರೆ ಬೇರೆ ಸಂದರ್ಭಗಳಲ್ಲಿ / ಸಂದರ್ಭಗಳಿಗಾಗಿ ನಡೆಸಿದ ಸಂವಾದಗಳಿವೆ. ಇವುಗಳಲ್ಲಿ ಕೆಲವು ಸಂವಾದಗಳು ಬೇರೆಡೆಗಳಲ್ಲಿ ಈಗಾಗಲೇ ಪ್ರಕಟವಾಗಿವೆಯಾದರೂ ಇನ್ನು ಕೆಲವು ಸಂವಾದಗಳು ಇದೇ ಮೊದಲ ಬಾರಿಗೆ ಅಕ್ಷರ ರೂಪದಲ್ಲಿ ಬಂದಿವೆ. ಈ ಸಂವಾದಗಳಲ್ಲಿರುವ ವೈವಿದ್ಯ ಮತ್ತು ಸಾತತ್ಯಗಳಿಗಾಗಿ ಇವುಗಳನ್ನು ಆಯಲಾಗಿದೆ. ಎಂದಿನಂತೆ, ಈ ಸಮಸ್ತರ ನಡುವೆ ಗೈರಾಗಿದ್ದರೂ ಈ ಪುಸ್ತಕಕ್ಕಾಗಿ ದುಡಿದ ಹಲವು ಮಹಿಳೆಯರೂ ಇಲ್ಲಿ ಹಾಜರಿದ್ದಾರೆ. ಈ ಹತ್ತು ಸಮಸ್ತರ ಜೊತೆ. ನನ್ನ ಹೆಸರೂ ಇದೆಯಾದರೂ ಬಸಿರು ಮಾತ್ರ ನನ್ನದಲ್ಲ ಎಂದರೆ ಅದೇನೂ ಹುಸಿ ವಿನಯದ ಮಾತಲ್ಲ. ಆದರೆ ಇದು ನನ್ನ ಹೆಸರಲ್ಲಿ ಬರುತ್ತಿರುವ ಚೊಚ್ಚಲ ಪುಸ್ತಕ, ಅದೂ, ನನ್ನ ಗುರುಗಳೂ, ತೀರ್ಥರೂಪ ಸಮಾನರೂ ಆದ ಅನಂತಮೂರ್ತಿಯವರ ಸಾಂದ್ರ ಹಾಜರಿಯಲ್ಲಿ ಎಂಬ ನನ್ನ ಸಂಭ್ರಮವನ್ನು ಹೇಳಿಕೊಳ್ಳಲು ನನಗೆ ಮುಜುಗರವೇನೂ ಇಲ್ಲ.

ನನ್ನ ಈ ಸ್ವಗತ / ಮನೋಗತವನ್ನು ಇಲ್ಲಿಗೇ ತಡೆದು ಹೇಳುವುದಾದರೆ ಇದೊಂದು ನಿಜಕ್ಕೂ ಅಪರೂಪದ ಅಸಲು ಕಸಬಿನ ಪುಸ್ತಕ, ಸಾಹಿತ್ಯ, ಸಂಗೀತ, ರಂಗಕಲೆ, ಸಾಂಸ್ಕೃತಿಕ / ಸಾಮಾಜಿಕ ಕ್ರಿಯಾಶೀಲತೆ, ಹಿಂಸೆ-ಅಹಿಂಸೆ, ನಾಸ್ತಿಕತೆ-ದೇವರು-ಧರ್ಮ-ಆಧ್ಯಾತ್ಮ-ಲೈಂಗಿಕತೆ, ವ್ಯಂಗ್ಯಚಿತ್ರಕಲೆ, ರಾಜಕಾರಣ ಮುಂತಾಗಿ ಹಲವು ಕ್ಷೇತ್ರಗಳು / ವಾಙ್ಮಯಗಳು ಇಲ್ಲಿ ಕೂಡಿ ದುಡಿದು ಸಾಮಾಜಿಕ / ಸಾಮುದಾಯಿಕ / ಆಧ್ಯಾತ್ಮಿಕ ಆರೋಗ್ಯವನ್ನು (ಎರಡೂ ಅರ್ಥಗಳಲ್ಲಿ) ’ಹಿಗ್ಗಿಸುವ’, ಕಪಟ-ಅಹಂಕಗಳಲ್ಲಿ ಮೂರಾಬಟ್ಟೆಯಾಗದ, ಹೃದಯಪೂರ್ವಕ ಸಂವಾದ ಇಲ್ಲಿ ನಡೆದಿದೆ. ಇಲ್ಲಿ ಪ್ರತ್ಯಕ್ಷರಾಗುವ ಹದಿಮೂರು ಜನರಲ್ಲಿ ರಾಜಕಾರಣಿಗಳಾದ ಎಸ್.ಎಂ. ಕೃಷ್ಣ ಹಾಗೂ ಜೆ.ಹೆಚ್. ಪಟೇಲರು ತಮ್ಮ ಪಾಂಡಿತ್ಯ, ತಿಳುವಳಿಕೆ, ಆಕರ್ಷಕ ವ್ಯಕ್ತಿತ್ವ / ಅನುಭವಗಳ ಹೊರತಾಗಿಯೂ ನುಡಿದಂತೆ ನಡೆದ(ವ)ರೇ, ತಮ್ಮನ್ನು ಆವರಿಸಿರುವ ಸುತ್ತಲ ಸಮಾಜದ ಮೌಢ್ಯ ಮತ್ತು ಮೊಂಡುತನಗಳಿಗೆ, ಗೊತ್ತಿದ್ದೂ, ತಮ್ಮನ್ನು ಸಮರ್ಪಿಸಿಕೊಂಡರಲ್ಲವೇ ಎಂಬ ಪ್ರಶ್ನೆ ಮೂಡಬಹುದಾದರೂ, ಆ ಸಂವಾದಗಳೂ ಅರ್ಥ ಪೂರ್ಣವೇ, ಏಕೆಂದರೆ. ಅನಂತಮೂರ್ತಿ ಗಾಂಧಿ / ಲೋಹಿಯಾ ಪ್ರಣೀತ, ಎದುರಾಳಿಯ ಒಳ್ಳೆಯತನಗಳನ್ನು ಎತ್ತಿ ಆಡುವ ಮೂಲಕ ತಮ್ಮ ದಾರಿ / ಗುರಿ ಹೇಗಿದೆ / ಹೇಗಾಗಿದೆ ಎಂಬ ವಿವೇಕ ಅವರಲ್ಲಿ ಉದಯವಾಗಲಿ ಎಂಬ ಪರೋಕ್ಷ ಒತ್ತಾಸೆಯೊಂದನ್ನು ಅಲ್ಲಿ ದುಡಿಸಿಕೊಳ್ಳುತ್ತಾರೆ. ಒಬ್ಬರನ್ನೊಬ್ಬರು ಮೂದಲಿಸುವ, ನಾಚಿಕೆಗಟ್ಟು ಹಂಗಿಸುವ, ಕಳ್ಳನನ್ನು ಕಳ್ಳ ಎಂದರೆ ಆತ ಇನ್ನೊಬ್ಬ ಕಳ್ಳನನ್ನು ತೋರಿಸಿ ಅವನೇನು ಕಮ್ಮಿ ಎಂಬ ಹುಂಬ ನುಡಿ / ನಡೆ ರೂಢಿಗೊಳ್ಳುತ್ತಿರುವ ಹಾಗೂ ಭ್ರಷ್ಟಾಚಾರ / ಹಿಂಸಾಚಾರಗಳ ಈ ರುದ್ರತಾಂಡವವನ್ನು ಪ್ರಹಸನವೆಂಬಂತೆ ನೋಡಿ / ಕೇಲಿ ಅನಂದಿಸುವ ಜನವರ್ಗ ವೃದ್ಧಿಸುತ್ತಿರುವ ಈ ಕಾಲದೇಶದಲ್ಲಿ–ಅನಂತಮೂರ್ತಿ ಇಲ್ಲಿ ದುಡಿಸಿಕೊಂಡಿರುವ ಮಾತಿನ ಈ ಪಟ್ಟು ಕೂಡಾ (’ಉಪಾಯ’ ಎಂಬ ನುಡಿ ಅವರಿಗೆ ಇಷ್ಟವಾದುದು) ವಿಶೇಷವಾದುದು. ಒಳ್ಳೆಯದನ್ನು ಶತಾಯಗತಾಯ ಒಳಗಿಂದಲೇ ಹಾರೈಸದೇ ಒಳ್ಳೆಯ ಬೆಳೆಯನ್ನು ಬೇಡಲಾಗದು ಎಂಬುದು ನಮ್ಮ ಶಕ್ತಿಯೂ ಹೌದು ಮಿತಿಯೂ ಹೌದು. ಆದರೆ ಆ ಮಿತಿ ಮೀರುವುದು ಹೇಗೆಂಬುದಕ್ಕೆ ಇಂಥ ಉಪಾಯಗಳಲ್ಲದೇ ಬದಲೀ ಮಾರ್ಗಗಳೂ ಕಾಣವು.

ಉಳಿದಂತೆ, ಕಾರಿಯಪ್ಪನವರು, ಕಾರಂತರು, ಕಾರ್ನಾಡರು,ಮಾಸ್ತಿಯವರು, ಅಡಿಗರು, ಚಿನುವಾ ಅಚಿಬೆಯವರು ಹಾಗೂ ತಾರಾನಾಥರ ಜೊತೆ ಮಾತಾಡುವಾಗ ಅಲ್ಲಲ್ಲಿ ಅನಂತಮೂರ್ತಿಯವರ ಮಾತು ತಡೆದಂತೆ ಕಂಡರೂ ಇಬ್ಬರೂ ಸಾವರಿಸಿಕೊಂಡು ಮಾತು ಹರಟೆಯಾಗದಂತೆ, ಹಠವಾಗದಂತೆ, ಮಾತಿಗೆ ಮಾತು ಬೆಳೆಯದೇ ಮಾತು ಬೆಳಕಾಗುವಂತೆ ನಡೆಯುವ ಈ ಘರ್ಷಣಾತ್ಮಕ ಸಂವಾದ ನಿಜಕ್ಕೂ ಚೇತೋಹಾರಿಯಾಗಿದೆ. ಉದಾಹರಣೆಗಾಗಿ, ಚಿನುವಾ ಅಚಿಬೆ ಜೊತೆ ನಡೆದ ಸಂವಾದವನ್ನೇ ನೋಡಬಹುದು. ವಸಾಹತುಶಾಹ್ಯುತ್ತರ ಸಮಾಜಗಳ ತೊಳಲಾಟ, ಸಾಮರ್ಥ್ಯಗಳ ಒಂದು ಸರಿಯಾದ ಅಳತೆ ಆ ಸಂವಾದದಲ್ಲಿ ಅಚಿಬೆಯಿಂದಾಗಿ ಅನಂತಮೂರ್ತಿಯವರಿಗೂ ನಮಗೂ ಏಕಕಾಲದಲ್ಲಿ (ಆಫ್ರಿಕನ್) ಬುಡಕಟ್ಟು ಸಮುದಾಯಗಳ ಜೊತೆ ಗಾಢವಾದ ನಂಟನ್ನು ಕುದುರಿಸುವ ಸ್ವರೂಪದಲ್ಲಿ ಲಭ್ಯವಾಗುತ್ತದೆ. ಇಲ್ಲಿ ಕೇವಲ ಅಚಿಬೆ ಅನಂತಮೂರ್ತಿ ಮತ್ತು ಓದುಗರಾಗಿ ನಾವು ಮಾತ್ರ ಹಾಜರಿರುವುದಿಲ್ಲ: ಹಲವು ರೀತಿಗಳಲ್ಲಿ ಮೂಲೆಗೆ ತಳ್ಳಲ್ಪಟ್ಟವರು, ಈಗ ಜೊತೆಗೆ ನಿಂತು ಹಂಚಿಕೊಂಡ ಸಂಸ್ಕೃತಿಗಳ ನಡುವಿನ ಗುಟ್ಟಿನಂತೆಯೇ ಅದು ಇದೆ. ಅಥವಾ, ತಾರಾನಾಥರ ಕಷಾಯಗುಣವಿರುವ ಮಾತುಗಳು, ಅವರ ಸಂಗೀತದಂತೆ, ಒದಗಿಸುವ ಕೆಲವು ಸ್ಪಷ್ಟನೆಗಳು ಅನಂತಮೂರ್ತಿಯವರನ್ನೂ ನಮ್ಮನ್ನೂ ನಮ್ಮ ಪೂರ್ವಾಗ್ರಹಗಳಿಂದ ಹೊರದೂಡುತ್ತವೆ. ಸಂಗೀತಕ್ಕೆ ಸದ್ಯತನದಲ್ಲಿ ಕೇಳುವ ಶ್ರೋತೃಗಳ ಎದುರೇ ಫಲಿಸಬೇಕಾದ ಅಗತ್ಯವಿದೆ, ಸಾಹಿತ್ಯ ಮತ್ತಿತರ ಕಲೆಗಳು ಕಾಯಬಲ್ಲವು ಎಂಬ ನಾನು ನೀವು ಒಂದು (ಅ) ಜ್ಞಾನದಲ್ಲಿ ಹೇಳಬಹುದಾದ ಮಾತಿಗೆ ತಾರಾನಾಥರ ಉತ್ತರ ಉಜ್ಜ್ವಲವಾಗಿದೆ: ಯಾವ ಸಾಧನೆ ಸಿದ್ಧಿ ಶಿಖರಗಳೂ ಪ್ರೇಕ್ಷಕ / ಶ್ರೋತೃ / ಅನುಯಾಯಿಗಳನ್ನು ಓಲೈಸುವಂಥದ್ದಾದರೆ ಊನವೆಂಬುದು ಅದಕ್ಕಂಟಿದ ಶಾಪ ಎಂಬ ತಾರಾನಾಥರ ಮಾತು ನಮ್ಮನ್ನು ಇರುಸುಮುರಿಸಿಗೆ ಒಳಮಾಡುವಷ್ಟು ಪ್ರಖರವಾಗಿದೆ. ವಾಲ್ಟರ್ ಬೆಂಜಮಿನ್ ಹೇಳಿದಂತೆ ಯಾವ ಉತ್ಕೃಷ್ಟ ಕಲೆಯೂ ಸಹೃದಯರ ಕಡೆಗೆ ಒಂದು ಕಣ್ಣಿಟ್ಟು ಹೊಡೆಯುವ ಪೂಸಿಯ ಪೈಕಿಯದ್ದು ಎಂದೂ ಅಲ್ಲ. ಅಲ್ಲದೇ ಸಾಹಿತ್ಯ ಮತ್ತಿತರ ಕಲೆಗಳು ಮಾತ್ರ ಪರಂಪರೆಯನ್ನೂ ವ್ಯಕ್ತಿ ಪ್ರತಿಭೆಯ ಪಕ್ವತೆಯನ್ನೂ ದುಡಿಸಿಕೊಳ್ಳುತ್ತಲೇ ಹೋಗುತ್ತವೆಯಾದರೂ ಇದು ಸಂಗೀತದ ವಿಷಯದಲ್ಲಿ ನಿಜವೋ ಹೇಗೆ / ಹೇಗೆ ನಿಜ ಎಂಬ ಹಲವರ ಪೂರ್ವಾಗ್ರಹಗಳಿಗೆ ತಾರಾನಾಥರು ಒದಗಿಸುವ ವಿವರಣೆ, ಥಟ್ಟನೆ ಹತ್ತು ಸಮಸ್ತರ ಜೊತೆ ಪುಸ್ತಕದಾದ್ಯಂತ ಹಾಜರಾಗುವ ಹಲವು ತಿಳುವಳಿಕೆಗಳ ಅಂತರ್‌ಸಂಬಂಧಗಳ ಶೋಧದ ಒಂದು ವಿಧಾನವೂ ಹೌದು. ಅಲ್ಲದೇ ಹಿಂಸೆ ಅಹಿಂಸೆಗಳ ಕುರಿತು, ಸೇನಾ ಕಾರ್ಯಾಚರಣೆಗಳ ಹಿಂದಿರುವ ಶಿಸ್ತು ಮತ್ತು ಅಸಂಗತತೆಗಳ ಮಿಲನದ ಕುರಿತು ಅಭಿಮಾನ ಆತಂಕಗಳೊಡನೆ ಕಾರಿಯಪ್ಪನವರು ಆಡಿರುವ ಮಾತುಗಳಂತೂ ಹೊಸದೇ ಲೋಕವೊಂದನ್ನು ನಮ್ಮೆದುರು ತೆರೆಯುತ್ತವೆ. ವ್ಯಕ್ತಿ / ಸಾಮುದಾಯಿಕ ಚಾರಿತ್ಯ್ರದ ಕುರಿತು ಕಾರಿಯಪ್ಪನವರು ಆಡುವ ಉಜ್ಜ್ವಲ ಮಾತುಗಳಿಗೆ ಇದೇ ಪುಸ್ತಕದಲ್ಲಿ ಎದುರಾಗುವ ಅಡಿಗರೂ ಮಾಸ್ತಿಯವರೂ ನಾರಾಯಣರೂ ತಮ್ಮದೇ ವಿಧಾನಗಳಲ್ಲಿ ಜೋಡಿ ನೀಡುವವರು. ಅಥವಾ, ಊರೊಂದು ಊರಾಗಿ, ನಮಗೆ ಅಪರಿಚಿತವೆನ್ನಿಸದಂಥ ಮನೆಯಾಗಿ ಉಳಿಯುವುದು ಹೇಗೆ ಎಂಬ ವ್ಯಾವಹಾರಿಕವೂ ಆದ ವ್ಯಾಕುಲದಲ್ಲಿ ಮಾಸ್ತಿಯವರೂ ನಾರಾಯಣರೂ ಕಾರಂತರೂ ಮಾತನಾಡುತ್ತಾರೆ: ಊರು ಉಳಿದರೆ ನಾವೂ ಉಳಿದೇವು ಎಂಬ ಹಳಹಳಿಕೆಯೂ, ಎಗ್ಗಿಲ್ಲದೇ ಬದಲಾಗುತ್ತಿರುವ ಲ್ಯಾಮಡ್‌ಸ್ಕೇಪೇ ನಮ್ಮನ್ನು ಹೊಸರುಚಿಗಳಿಗೆ ಒ / ಬಗ್ಗಿಸುತ್ತಿರುವ ದುರಂತದ ಎಚ್ಚರವೂ ಹದಗೊಂಡು ಹೊಸ ಸೃಜನಶೀಲತೆಗಳಿಗೆ ನಾವು ತಯಾರಾಗಬೇಕಾದ ತಿಳುವಳಿಕೆಗಳಾಗಿ ಮಾರ್ಪಡುವ, ಹಠವಿಲ್ಲದ ಆದರೆ ಹಳಹಳಿಕೆಯಿರುವ, ಮನೋಗತವೊಂದು ಇಲ್ಲಿ ಮಾರ್ಗದರ್ಶಕ ದಿಕ್ಸೂಚಿಯಂತೆ ಸಿಗುತ್ತದೆ.

ಇಂಥದ್ದೊಂದು ಅಂತರ್‌ ಪಠ್ಯ ಈ ಪುಸ್ತಕದಲ್ಲಿ ಸಿದ್ಧಗೊಳ್ಳುವುದಕ್ಕೆ ಇವರೆಲ್ಲರನ್ನೂ ಮಾತನಾಡಿಸುತ್ತಿರುವವರು ಅನಂತಮೂರ್ತಿ ಒಬ್ಬರೇ ಎಂಬುದು ಒಂದೇ ಖಂಡಿತ ಕಾರಣವಲ್ಲ. ಒಳಿತಿನ, ಸೃಜನಾತ್ಮಕತೆಯ ಹಂಬಲವೆಂಬುದೇ ಒಂದು ಸಾಮುದಾಯಿಕ ಅಂತರ್‌ಪಠ್ಯ / ಒಳಪಠ್ಯ. ಹೊರಮೈಯ ಹೊಲಸು ಏನಿದ್ದರೂ ಒಳಗೆ ಹರಿಯುವ ಅಂತರಗಂಗೆ–ಒಳಿತನ್ನು ಹಾರೈಸುವ ಇಂಥವರಲ್ಲೂ, ರಾಮರಾಜ್ಯ ಬಂದರೂ ರಾಗಿ ಬೀಸುವುದು ತಪ್ಪದು ಎಂಬ ವಿವೇಕದಲ್ಲಿ ಸಂಭಾವಿತ ಜೀವನವನ್ನು ಕಾಪಿಟ್ಟ ಅನಾಮಧೇಯ ಜನರಲ್ಲೂ–ಸದಾ ಒಂದು ಅಂತರ್‌ಪಠ್ಯವೇ. ಈ ಅಂತರಗಂಗೆ ಕ್ಷೀಣವಾಗಿ ಸೊರಗಬಹುದಾದರೂ ಆ ಕಿರು ತೊರೆಯೊಂದು ಎಂದೂ ಬತ್ತದು ಎಂಬುದನ್ನು ಈ ಪುಸ್ತಕದಲ್ಲಿ ಸಾಕ್ಷಿಗಳಾಗಿ ನಿಂತು ಈ ಸಮಸ್ತರೂ ಪ್ರಮಾಣ ಮಾಡಿದ್ದಾರೆ: ಆನಂದದಲ್ಲಲ್ಲ, ಆತಂಕದಲ್ಲಿ.

ಕಬ್ಬಿಣದ ಅದಿರಿನ (ರಸಾ)ತಳಕ್ಕೆ ಲಂಗರು ಇಳಿಸಿ ನಿಂತೂ ನಮ್ಮ ಕರ್ನಾಟಕದ ಸರಕಾರ ಗತಿಗೆಟ್ಟ ತರಗೆಲೆಯಂತೆ ಅದುರುತ್ತಿದೆ. ಮಹಾಭ್ರಷ್ಟರೂ ನಾಚುವ ಭ್ರಷ್ಟತೆಯೇ ಈ ಪಕ್ಷದ ಜೀವಾಳ ಎಂಬ ಮಂಕೇ ನಮಗೆ ಕವಿಯುವಷ್ಟು ಅದು ಭ್ರಷ್ಟವಾಗಿದೆ. ದೇಶ, ಸಮುದಾಯ, ಸಹಬಾಳ್ವೆ, ಅಹಿಂಸೆ, ಸತ್ಯಗಳೆಂಬ, ಸರ್ವಸಾಮಾನ್ಯ ಅಳತೆಯ, ನಮ್ಮ ದೈನಂದಿನ ಜೀವನದ ಮೌಲ್ಯಗಳಿಗೆ ಈ ಪಕ್ಷದಿಂದಲೂ ಅದರ ಸಿದ್ಧಾಂತದಿಂದಲೂ ನಮಗೆ ಒದಗಿರುವ ವಿಪತ್ತು ಅದಕ್ಕಿಂತಲೂ ಘೋರವಾದದ್ದು. ಕರ್ನಾಟಕವನ್ನೆಲ್ಲ ಇವರು ಬರಿಗುಡಿ ಮಾಡಿದರೂ, ಜೀವ ಉಳಿದರೆ ಸಾಕು ಭಿಕ್ಷೆ ಬೇಡಿಯಾದರೂ ತಿಂದೇವು ಎನ್ನುವುದು ಈ ಸಿದ್ಧಾಂತದ ಸ್ವರೂಪ ಬಲ್ಲವರ ಆತಂಕವಾಗಿದೆ. ಇವತ್ತಿನ ಭ್ರಷ್ಟತೆ ಮತ್ತು ಹಿಂಸಾಚಾರಗಳಿಗೆ ಉತ್ತರವೋ ಎಂಬಂತಿದ್ದ ಕರ್ನಾಟಕದ ತನ್ನ ಕಾಲದ ಪ್ರಭುತ್ವವನ್ನು ರಸಋಷಿ ಕುವೆಂಪು ಅವಜ್ಞೆ ಮಾಡಿದ್ದರು: ಕುವೆಂಪು ಕಲ್ಪಿಸಿಕೊಂಡ ಕರ್ನಾಟಕದ ಮಂತ್ರಮಂಡಲ ಶಾಶ್ವತವಾದದ್ದು; ಅಲ್ಲಿ ನೃಪತುಂಗನೆ ಚಕ್ರವರ್ತಿ. ಆದುದರಿಂದ ಈ ಪುಸ್ತಕದಲ್ಲಿ ಇಬ್ಬರು ಮಾಜಿ, ಹಾಲಿ ಮಂತ್ರಿಗಳು ಇದ್ದಾರೆ ಎಂಬುದು, ಅವರಿಬ್ಬರೂ ಸಮಾಜವಾದಿಗಳು ಎಂಬುದರಷ್ಟೇ ಕಾಕತಾಳೀಯ. ಈ ಪುಸ್ತಕದಲ್ಲಿ ನಡೆದಿರುವ ಒಟ್ಟಾರೆ ಸಂವಾದ ವಿಶೇಷವಾದ ಔಷಧಗುಣವನ್ನು ಹೊಂದಿರುವಂಥದ್ದು. ಈ ಹಿನ್ನೆಲೆಯಲ್ಲಿ,ಇಲ್ಲಿ ಕಾರಿಯಪ್ಪ-ಅನಂತಮೂರ್ತಿ ನಡೆಸಿದ ಸಂವಾದಕ್ಕೆ, ಈ ಸಂವಾದದೊಳಗೆ ಅಳವಟ್ಟ ಕಾರಿಯಪ್ಪ-ಮಹಾತ್ಮಾಗಾಂಧಿ ಸಂವಾದಕ್ಕೆ, ಉಳಿದೆಲ್ಲ ಸಂವಾದಗಳಿಗಿಂತ ಹೆಚ್ಚಿನ ಮೌಲ್ಯ, ಮೆರುಗು ಇದೆ. ಕಲ್ಪನೆಯಲ್ಲಿ ಮಾತ್ರವೇ ಸಾಧ್ಯವೆನ್ನಲಾರದ, ಅಂದರೆ ವ್ಯವಹಾರದಲ್ಲೂ ಲಭ್ಯವಾಗುವ ವಿವೇಕ ಮತ್ತು ಮೌಲ್ಯಗಳನ್ನು ಕಾರಿಯಪ್ಪನವರು ಇಷ್ಟೊಂದು ವರ್ಷಗಳ ನಂತರವೂ ಇಲ್ಲಿ ಒತ್ತಾಯಿಸಬಲ್ಲವರಾಗಿದ್ದಾರೆ.

ಕಾರಿಯಪ್ಪನವರು ಭಾರತ ಕಂಡ ಘನವಂತ ಸೇನಾನಿ, ಲಿಟರಲಿ. ಅವರು ಆಡಿರುವ ಅಪರೂಪದ ಪ್ರಭೆಯ ಹಲವು ಮಾತುಗಳಲ್ಲಿ– ಹಿಂಸೆಯನ್ನು ದ್ವೇಷಿಸುವರಲ್ಲಿ, ಅಹಿಂಸೆಗಾಗಿ ಹಂಬಲಿಸುವವರಲ್ಲಿ ಸೈನಿಕರೇ ಮೊದಲಿಗರು ಎಂಬ ಇಂಗಿತವೇ ಧ್ವನಿಸುತ್ತದೆ. ಕಂಡು ಕೇಳಿ ಅರಿಯದ, ಹೆಸರು ಕುಲ ಗೋತ್ರ ಗೊತ್ತಿಲ್ಲದ, ಎದುರಾಳಿಗಳೆಂದು ಕರೆಯಲಾಗುವ ಯಾರನ್ನೋ ಮಾರಣಹೋಮ ಮಾಡಿ,ತಮ್ಮ ಹೃದಯ ಮತ್ತು ಮಾನವೀಯತೆಗಳನ್ನು, ವಿವೇಚನೆ ಹಾಗೂ ಅನುಕಂಪಗಳ ವಿರುದ್ಧ ಅಂಚಿನಲ್ಲಿ ನಿಲ್ಲಿಸಿ ಕಾರ್ಯಾಚರಿಸುವ ಸೈನಿಕರಿಗಲ್ಲದೇ ಹಿಂಸೆಯೆಂಬುದೊಂದು ಬೆನ್ನುಬಿಡದೇ ಕಾಡುವ ದುಃಸ್ವಪ್ನ ಎಂಬುದರ ಅರಿವಾಗುವುದು ಸುಲಭವಲ್ಲ. ಮತ್ತನಾಗದೇ ಕುರುಡನಾಗದೇ, ಅನುಕಂಪದ ಅಂತರ್ಜಲ ಬತ್ತಿದಲ್ಲದೇ ರಕ್ತದ ಓಕುಳಿ ಸಾಧ್ಯವಲ್ಲ. ಕಾರಿಯಪ್ಪನವರು ಅತ್ಯಂತ ಶಿಸ್ತಿನ ಸಿಪಾಯಿ. ಎಷ್ಟರವರೆಗೆಂದರೆ ಇಂಗ್ಲಿಷರೂ ನಾಚುವಷ್ಟು ಸುಭಗವಾದ ಇಂಗ್ಲಿಷನ್ನು ಮಾತಾಡುವವರು; ಉಡುಪುತೊಡುಪುಗಳವರೆಗೂ ಪ್ರತಿ ವಿವರಗಳಲ್ಲೂ ಅಚ್ಚುಕಟ್ಟು ಮತ್ತು ಶಿಸ್ತನ್ನು ಹೊಂದಿದ್ದವರು, ಮತ್ತು ನಿರೀಕ್ಷಿಸಿದ್ದವರು; ಸಾಯುವ ತನ್ನ ಕೊನೆ ಗಳಿಗೆಯವರೆಗೂ ಯುಜನತೆಯ ಚಾರಿತ್ರ್ಯ, ಅವರ ನೈತಿಕ ಹಾಗೂ ದೈಹಿಕ ಆರೋಗ್ಯವನ್ನು ಉದ್ದೀಪಿಸುತ್ತಿದೆಯೋ ಎಂದು ತಿಳಿಯಲು / ತಿಳಿಯದೇ ಚಡಪಡಿಸಿದವರು; ತಾನು ಅಪರಿಮಿತವಾಗಿ ಗೌರವಿಸಿದ ತನ್ನ ತಾಯಿ-ತಂದೆಯರಂತೆ ತನ್ನ ತಾಯ್ನಾಡನ್ನು ಪ್ರೀತಿಸಿದವರು. ಅವರೇ ಮಗುವಿನ ಸಂಭ್ರಮದಲ್ಲಿ ಹೇಳಿರುವಂತೆ ಅವರು ಮಹಾತ್ಮಗಾಂಧಿಯವರನ್ನು ಹಲವಾರು ಭಾರಿ ಭೇಟಿ ಮಾಡಿದ್ದರು. ಅದು ಭಾರತ ದೇಶ ಪ್ರಕ್ಷುಬ್ದವಾಗಿದ್ದ ಕಾಲದಲ್ಲಿ. ತನ್ನ ಶೂಗಳನ್ನು ಬಿರುದುಬಾವಲಿಗಳನ್ನೂ ಹೊರಗಡೆಯೇ ಕಳಚಿಟ್ಟು ಅವರು ಗಾಂಧಿಯನ್ನು ನೋಡಲು ಹೋದರು; ಆ ವಿನಯದಲ್ಲೂ ಅಷ್ಟು ಶಿಸ್ತು. ಗಾಂಧಿ ನೆಲದ ಮೇಲೆ ಕುಳಿತು ಒತ್ತಾಯಪೂರ್ವಕವಾಗಿ ಕಾರಿಯಪ್ಪನವರನ್ನು ಕುರ್ಚಿಯನ್ನು ಕುಳ್ಳಿರಿಸಿ ಸಂವಾದ ನಡೆಸುವಾಗ ಕುರ್ಚಿಯ ತುದಿಯಲ್ಲಿ ಸಂಕೋಚದಿಂದ ಕುಳಿತ ಕಾರಿಯಪ್ಪ. ಸೇನಾ ಕಾರ್ಯಾಚರಣೆಯೊಂದಕ್ಕೆ ಹೊರಟ ಕಾರಿಯಪ್ಪನವರು ಮಹಾತ್ಮಾಗಾಂಧಿಯವರ ಆಶೀರ್ವಾದ ಪಡೆಯಲು ಹೋದ ಮೊದಲ ಭೇಟಿಯ ದಿನ, ಗಾಂಧಿಯವರ ಮೌನವ್ರತದ ದಿನ; ಚೀಟಿಯಲ್ಲಿ ಬರೆದ ಸಂದೇಶಕ್ಕೆ ಚೀಟಿಯಲ್ಲಿ ಬರೆದ ಉತ್ತರ ಮಾತ್ರ ಪಡೆಯಬಹುದಾದ ಮೌನಸಂವಾದದ, ಅಂದರೆ ಯಾರು ಯಾರೊಡನೆ ಮಾತಾಡುತ್ತಿದ್ದಾರೆ ಎಂದು ಚೀಟಿಗಳು ಕೂಡಾ ಹೇಳಲಾರದ ದಿನ; ಗಾಂಧಿ, ಆ ದಿನದ ತನ್ನ ಚೀಟಿಯಲ್ಲಿ ಕಾರಿಯಪ್ಪನವರ ಸೇನಾ ಕಾರ್ಯಾಚರಣೆಯ ಯೋಜನೆಗೆ ಯಶಸ್ಸು ಹಾರೈಸಿದ ದಿನ.

ಅವರ ಇನ್ನೊಂದು ಭೇಟಿಯಲ್ಲಿ ಅವರಿಬ್ಬರ ನಡುವೆ ಹಿಂಸೆ-ಅಹಿಂಸೆ, ಆಕ್ರಮಣಶೀಲ-ಎಚ್ಚರಿಕೆನೀಡುವ ಸೇನಾಕಾರ್ಯಸಾಧ್ಯತೆ, ಗರಿಷ್ಟ ಸೈನ್ಯ-ಗರಿಷ್ಟ ಆತ್ಮಬಲದ ಕನಿಷ್ಟ ಸಂಖ್ಯೆಯ ಸೈನ್ಯ ಮುಂತಾದ ವಿಷಯಗಳ ವಿನಿಮಯ. ಕಾರಿಯಪ್ಪನವರು ವಿಧೇಯ ವಿದ್ಯಾರ್ಥಿಯಂತೆ ಆಲಿಸುತ್ತಲೂ, ವಿದ್ಯಾರ್ಥಿಯಾಗಿ ತನಗಿರುವ ತೊಡಕುಗಳನ್ನು ವಿವರಿಸುತ್ತಲೂ ಇರುವಂತೆಯೇ, ’ಈ ಸಂವಾದವನ್ನು ಮತ್ತೆ ಮುಂದುವರಿಸೋಣ, ನೀವು ಆಗಾಗ ಬಂದುನನ್ನನ್ನು ಕಾಣಿ’ ಎಂದು ಗಾಂಧಿಯವರ ಸಾಂತ್ವನ. ಕಾರಿಯಪ್ಪನವರ ಅತ್ಯಂತ ಸುಸಂಸ್ಕೃತ ಅಹವಾಲುಗಳಲ್ಲಿ ಅಡಗಿ ಕುಳಿತ ವಿಹ್ವಲತೆಗಳು ಎಗ್ಗಿಲ್ಲದೇ ಎಚ್ಚರಗೊಂಡು ಮಾತಾಗುವ ಈ ಪರಿಯಲ್ಲಿ, ಗಾಂಧಿ ಮತ್ತು ಕಾರಿಯಪ್ಪನವರಿಬ್ಬರೂ ಪರಸ್ಪರ ಮೆಚ್ಚುಗೆಯಲ್ಲಿ, ಮುಗಿಯದಷ್ಟು ಮಾತಾಡಲಿಕ್ಕಿದೆ ಎಂಬುದೇ ಕೇಂದ್ರ ಭಾವ. ಗಾಂಧಿಯ ಕೊಲೆಯಾಗುವ ಕೇವಲ ಎರಡು ವಾರ ಮೊದಲು ಅವರ ಕೊನೆಯ ಭೇಟಿ, ೧೯೪೮ರ ಜನವರಿ ೧೫ರ ಸುತ್ತಮುತ್ತ. ಮತ್ತೆ ಭೇಟಿಯಾಗಲು ಗಾಂಧಿ ಕೊಟ್ಟ ಆಹ್ವಾನವನ್ನು ನಡೆಯಿಸಿಕೊಟಲಾಗಲಿಲ್ಲ ಎಂಬ ಕೊರಗಿನಲ್ಲಿ / ವಿಷಾದದಲ್ಲಿ ಕಾರಿಯಪ್ಪ ಇದನ್ನು ನೆನಪಿಸಿಕೊಳ್ಳುತ್ತಾರೆ. ಅವರು ಹೊರಟಿದ್ದದು ಕಾಶ್ಮೀರ ಪ್ರದೇಶದಲ್ಲಿ ಭುಗಿಲೆದ್ದ ಹಿಂದೂ-ಮುಸ್ಲಿಂ ಹಿಂಸಾಚಾರವನ್ನು ನಿಭಾಯಿಸುವ ಸಾರಥ್ಯದೊಂದಿಗೆ, ಗಾಂಧಿಯ ಇಂಗಿತವನ್ನು ಮೊದಲೇ ಸರಿಯಾಗಿ ಗ್ರಹಿಸಿದ ಪೂರ್ವಭಾಷಿಯಂತೆ, ತಾನು ಹಿಂಸಾಚಾರದಲ್ಲಿ ತೊಡಗಿದವರ ಮನವೊಲಿಸುವೆ. ಅಗತ್ಯ ಬಿದ್ದಾಗ ಫೂತ್ಕರಿಸುವೆನೇ ಹೊರತು ಪ್ರಾಣ ಹಾನಿಯಲ್ಲಿ ತೊಡಗುವುದಿಲ್ಲ ಎಂದು ಗಾಂಧಿಯಿಂದ ಯಶಸ್ಸಿನ ಕೋರಿಕೆಯ ಶುಭಹಾರೈಕೆಯನ್ನು ಪಡೆಯುತ್ತಾರೆ. ಈ ಒಟ್ಟಾರೆ ಸಂವಾದಗಳಲ್ಲಿ ಗೆಲ್ಲುವುದು ಅಹಿಂಸೆಯೇ: ಯಾಕೆಂದರೆ ಉದ್ಯೋಗದಿಂದ ಕೂಡಾ ಸೇನಾನಿಯೇ ಆಗಿರುವ ಕಾರಿಯಪ್ಪನವರಿಗೆ ಹಿಂಸೆಗೆ ನಿವೃತ್ತಿ ಹುಡುಕುವ ಚಿಂತೆ, ಸ್ವಂತ ಆಯ್ಕೆಯಿಂದಲೇ ಅಹಿಂಸಾವಾದಿಯಾದ ಗಾಂಧಿಗೆ ಹಿಂಸೆಯನ್ನು ಹದ್ದುಬಸ್ತಿನಲ್ಲಿಡುವ ಚಿಂತೆ. ಅಯೂಬ್‌ಖಾನರೊಡನೆ ಪಾಕಿಸ್ಥಾನದಲ್ಲೂ, ನೆಹರೂರವರೊಡನೆ ಭಾರತದಲ್ಲೂ ಕಾರಿಯಪ್ಪನವರು ಭಾರತ ಮತ್ತು ಪಾಕಿಸ್ತಾನಗಳು ಜಂಟಿ ಸೇನೆಯನ್ನು ಹೊಂದಬಹುದಲ್ಲ ಎಂದು ಮುಂದಿಡುವ ಅವರ ಸಲಹೆ ಸಂಯುಕ್ತ / ಸ್ವತಂತ್ರ ಭಾರತದ ಹಿಂಸಾತ್ಮಕ ಚರಿತ್ರೆಯನ್ನು ನಮ್ಮ ಕಣ್ಣಿಗೆ ರಾಚುತ್ತದೆ.

ತಮ್ಮ ಹಲವು ಕತೆ, ಬರಹ, ಮಾತುಗಳಲ್ಲಿ ಮಾತ್ರವಲ್ಲದೆ ಸಂಸ್ಕಾರ, ಭಾರತೀಪುರ, ಅವಸ್ಥೆ ಮುಂತಾದ ಕಾದಂಬರಿಗಳಲ್ಲೂ ಅನಂತಮೂರ್ತಿ ತಮ್ಮಂತೆ ಹಾಗೂ ತಮ್ಮಂತಲ್ಲದೆ ಯೊಚಿಸುವ / ವ್ಯವಹರಿಸುವ ವ್ಯಕ್ತಿ ವಿಚಾರಗಳನ್ನೇ ಕೇಂದ್ರವಾಗಿಟ್ಟುಕೊಂಡವರು. ಮಿಖೈಲ್ ಭಾಕ್ತಿನ್‌ನ ಪ್ರಕಾರ ಭಾಷೆಯೆಂಬುದು ಬಿಡಿ ಪದಗಳಲ್ಲ, ಹೆಣೆಗೆಯಾದ ಒಕ್ಕಣೆಗಳು. ಹಾಗಾಗಿ, ಸಮುದಾಯಗಳು ಭಾಷೆಗಳ ಆಶಯಗಳೇ ಹೊರತು ಈಗಾಗಲೆ ಸಿದ್ಧಿಸಿರುವ ಸಾಧನೆಗಳಲ್ಲ. ಭಾಷೆಯನ್ನು ಸಂವಹನದ ಸಂರಚನೆಗಳಾದ ಯಾವುದೇ ವಾಙ್ಮಯ ಎಂದು ತಿಳಿದಾಗಲೂ ಇದು ನಿಜ. ಅನಂತಮೂರ್ತಿಯವರ ಬರವಣಿಗೆಯಲ್ಲಿ ಈ ಅರ್ಥದ ಭಾಷೆಯೊಂದು ರೂಢಿಗೊಂಡಿದೆ. ತಮ್ಮ ಸ್ವಂತ, ಖಚಿತ ಅಭಿಪ್ರಾಯಗಳನ್ನು ಕೂಡಾ ಅದರ ವಿರೋಧಿ ನೆಲೆಗೆ ಎದುರಾಗಿಸದೇ ಅವರು ಚಿಂತಿಸಿದ್ದು ಅಪರೂಪ. ಭಾಷೆಯು ಹಾರೈಸುವ ಸಾಮುದಾಯಿಕತೆ ಎಂಬುದು ಹುಟ್ಟಿನೊಂದಿಗೆ ನಮಗೆ ದತ್ತವಾಗುವ ಬಳುವಳಿ ಆಗಿರುವುದರಿಂದ, ಮಾತು ಮತ್ತು ಸಂವಾದಗಳ ನುಡಿಗಟ್ಟುಗಳನ್ನು ಹಿಗ್ಗಿಸಿ ಚಿಂತಿಸುವ ಅನಂತಮೂರ್ತಿಯವರ ಈ ಕ್ರಮ ಜನತಂತ್ರದ ಉಪಕ್ರಮವೂ ಹೌದು, ದತ್ತವಾಗಿ ಬಂದ ಸಾಮುದಾಯಿಕತೆಯನ್ನು ಇಡೀ ಸಮುದಾಯವೂ ಹಂಬಲದಲ್ಲಿ ಕಟ್ಟಿಕೊಳ್ಳಬೇಕಾದ ಹವಣೂ ಹೌದು.

ಎಚ್.ಪಟ್ಟಾಭಿರಾಮ ಸೋಮಯಾಜಿ
ಮಂಗಳೂರು
೨೦-೧೨-೨೦೧೦