ಸಂದರ್ಶನ ಬೇರೆ, ವಾಗ್ವಾದ ಬೇರೆ. ಸಂದರ್ಶನದಲ್ಲಿ ಮಾತನಾಡಿಸುವ ನಾನು ಮಾತಾಡುವ ಅವರಿಗೆ ಒಂದು ಕನ್ನಡಿಯಾಗಬೇಕು. ತನ್ನನ್ನೇ ತಾನು ತಿಳಿಯುವುದಕ್ಕೆ ಅವಕಾಶವಿರುವ ಕನ್ನಡಿಯಾಗುವ ನಾನು ಸಂದರ್ಶಿತರ ಬಗ್ಗೆ ಕುತೂಹಲಿಯಾಗಿರಬೇಕು. ಅವರಿಗೆ ತಮ್ಮೊಳಗನ್ನು ತೆರೆದುಕೊಳ್ಳುವಂತೆ, ತೆರೆದುಕೊಂಡು ತೋರುವುದರಲ್ಲಿ ಯಾವ ಆತಂಕವೂ ಇಲ್ಲದಂತೆ ನಾನು ಮುಕ್ತ ಮನಸ್ಸಿನವನಾಗಿರಬೇಕು. ಇದು ಅಪರೂಪಕ್ಕೆ ಸಾಧ್ಯವಾಗುವ ವಿಷಯ. ಎದುರುಬದುರು ಕೂತಿರುವ ನಮ್ಮಿಬ್ಬರಲ್ಲೂ ನಮ್ಮನ್ನು ಕಾಪಾಡಿಕೊಳ್ಳುವಂಥ ಅಥವ ಹೆಚ್ಚಿಸಿಕೊಳ್ಳುವಂತಹ ಅಹಂಕಾರ ಸಂಪೂರ್ಣ ನಾಶವಾಗುವುದು ಕಷ್ಟವೇ. ಆದರೆ ನಮ್ಮಿಬ್ಬರಿಗೂ ಹೊರತಾದ ಆದರೆ ನಮ್ಮನ್ನು ದುಡಿಸಿಕೊಳ್ಳುವ ಘನವಾದ ಸತ್ಯವೊಂದಿದೆ ಎಂಬ ಮಾನವೀಯ ನಂಬಿಕೆಯಲ್ಲಿ ಅಷ್ಟಿಷ್ಟು ಅಹಂನಿವೃತ್ತಿ ಇಬ್ಬರಿಗೂ ಸಾಧ್ಯವಾಗುವುದುಂಟು. ನಮಗೇ ಉತ್ತರ ಗೊತ್ತಿರುವ ಪ್ರಶ್ನೆಯನ್ನು ನಾವು ಕೇಳುವುದಾದರೆ ಅದು ಬೇರೆ ಓದುಗರಿಗಾಗಿ ಎಂಬ ಎಚ್ಚರ ನಮಗಿರಲೇಬೇಕು. ಆದ್ದರಿಂದ ಒಂದು ಒಳ್ಳೆಯ ಸಂದರ್ಶನದಲ್ಲಿ ಪರಿಚಯ ಮಾಡಿಕೊಡುವ ಜವಾಬ್ದಾರಿಯ ಜೊತೆ ಇಬ್ಬರಿಗೂ ಗೊತ್ತಿಲ್ಲದ್ದನ್ನು ತತ್‌ಕ್ಷಣದಲ್ಲಿ ಎದುರಾಗುವ ಮುಹೂರ್ತಗಳು ಇರುತ್ತವೆ.

ಸಂದರ್ಶನದಲ್ಲಿ ಕೆಲವೊಮ್ಮೆ ಬಿಕ್ಕಟ್ಟುಗಳೂ ಒದಗುತ್ತವೆ. ಈ ಬಿಕ್ಕಟ್ಟುಗಳು ಹುಟ್ಟುವುದು ಎಲ್ಲರಿಗೂ ಏನನ್ನೋ ಮುಚ್ಚಿಟ್ಟುಕೊಳ್ಳುವ ಅಗತ್ಯವೂ ಇರುವುದರಿಂದ. ಇಂಥ ಅಗತ್ಯ ಎದುರಾದರೆ ಸಂದರ್ಶಕ ಅದನ್ನು ಗೌರವಿಸಬೇಕು. ಸಾರ್ವತ್ರಿಕ ಹಿತದ ದೃಷ್ಟಿಯಿಂದ ಮಾತ್ರ ಅದನ್ನು ಬಿಚ್ಚಿಸುವ ಸಾಹಸಕ್ಕೆ ಕೈ ಹಾಕಬೇಕು. ಅಂದರೆ ಪ್ರಶ್ನೆಗಳು ಯಾರದೋ ಖಾಸಗೀ ಜೀವನದಲ್ಲಿ ಅನವಶ್ಯಕವಾಗಿ ಮೂಗುತೂರಿದಂತೆ ಇರಬಾರದು. ಕೆಲವು ವಿಚಾರಗಳು ಸಂದರ್ಶನದಲ್ಲಿ ಎದುರಾದಾಗ ಸಂದರ್ಶಕ ತನ್ನ ವಿರೋಧವನ್ನು ಎದುರಾಳಿಯ ಬಾಯಿ ಮುಚ್ಚಿಸದಂತೆ ಹೇಳುವ ಔದಾರ್ಯದವನಾಗಿರಬೇಕು. ಭಯದ ವಾತಾವರಣದಲ್ಲಿ ಸಂದರ್ಶನ ಸಾಧ್ಯವೇ ಇಲ್ಲ. ಮಮತೆಯಾಗದ ವಿಶ್ವಾದಲ್ಲಿ ಮಾತ್ರ ಸಂದರ್ಶನ ಸಾಧ್ಯ.

ಈ ಶಕ್ತಿಯನ್ನು ನನ್ನಲ್ಲಿ ಕಂಡು ಅದನ್ನು ಬೆಳೆಸಿದವರು ಆಕಾಶವಾಣಿಯ ಡೈರೆಕ್ಟರ್‌ಆಗಿದ್ದ ಶ್ರೀ ಶಂಕರ್‌ರವರು. ಆದರೆ ನಾನು ಮಾಡಿದ ಸಂದರ್ಶನಕ್ಕಿಂತ ನಾನು ಮಾಡಿಸಿಕೊಂಡ ಸಂದರ್ಶನಗಳೇ ಹೆಚ್ಚು. ನಾನು ಬರೆದ ಯಾವುದನ್ನೂ ಓದದೇ ತಮ್ಮ ಪ್ರತಿಕಾ ವೃತ್ತಿಯ ಅಗತ್ಯಕ್ಕಾಗಿ ನನ್ನನ್ನು ಸಂದರ್ಶಿಸುವವರೇ ಹೆಚ್ಚು. ಇಂಥವರೆಲ್ಲ ನನಗಿರುವ ಕೀರ್ತಿಗೆ ಇನ್ನೊಂದು ಕಿರೀಟವನ್ನು ತಮ್ಮ ಲಾಭಕ್ಕಾಗಿಯೇ ತೊಡಿಸಲು ಬರುವರು.

ಇದಕ್ಕೆ ಬದಲಾಗಿ ನನಗೇ ಖಚಿತವಾಗಿ ಗೊತ್ತಿಲ್ಲದ್ದನ್ನು ಗೊತ್ತುಪಡಿಸುವಂತೆ ನನ್ನನ್ನು ಮಾತಾಡಿಸಬಲ್ಲ ಮನು ಚಕ್ರವರ್ತಿ, ಇಸ್ಮಾಯಿಲ್ ಅಥವಾ ಜಿ. ರಾಜಶೇಕರ್ ಅಂಥವರೂ ಇದ್ದಾರೆ. ಇವರೆಲ್ಲರೂ ನನಗಿಂತ ಇನ್ನೂ ಹೆಚ್ಚಿದನ್ನು ಸಾಧಿಸಿ ನಾನು ಹೊರಹೊಮ್ಮುವಂತೆ ಮಾಡಿದ್ದಾರೆ. ನನ್ನ ಕೆಲವು ಸಂದರ್ಶನಗಳಲ್ಲಾದರೂ ಈ ಕೆಲಸವನ್ನು ನಾನೂ ಮಾಡಿರಬಹುದು ಎಂಬುದು ಬಹಳ ವರ್ಷಗಳ ನಂತರ ನನಗೆ ಪ್ರತ್ಯಕ್ಷವಾದ್ದು ಅಕ್ಷತಾಳ ಸಾಹಸದಿಂದ.

ನನಗೆ ತುಂಬ ಆಪ್ತನಾದ ಪಟ್ಟಾಭಿ ಸೋಮಯಾಜಿ ಶ್ರೀಮತಿ ಮಂಜುಳಾರನ್ನ ಮದುವೆಯಾದ ಮಾರನೇ ದಿನವೇ ಈ ನನ್ನ ಪುಸ್ತಕ ನನ್ನ ಹುಟ್ಟುಹಬ್ಬದ ನಿಮಿತ್ತವಾಗಿ ಪ್ರಕಟವಾಗುತ್ತಿದೆ ಎಂಬುದು ನನ್ನ ಜೀವನದಲ್ಲೇ ಮರೆಯಲಾರದ ಘಟನೆ. ಸಂಪಾದಕನಾಗಿ ಈ ನನ್ನ ಪುಸ್ತಕವನ್ನು ಪಟ್ಟಾಭಿ ತನ್ನದನ್ನಾಗಿ ಮಾಡಿಕೊಂಡನೆಂಬುದೂ ನನಗೆ ನನಗೆ ವಿಶೇಷವಾದ್ದು. ನನ್ನ ತರುಣ ಮಿತ್ರರಲ್ಲೆಲ್ಲ ಪಟ್ಟಾಭಿಗಿಂತ ಹೆಚ್ಚು ಪ್ರಾಜ್ಞನೂ ಹೆಚ್ಚುಪ್ರಾಮಾಣಿಕನೂ ಇನ್ನೊಬ್ಬನಿಲ್ಲ. ಅವನು ಹಲವು ಘನವಾದ ಕೃತಿಗಳನ್ನು ಬರೆಯಬಹುದಿತ್ತು. ಆದರೆ ತನ್ನನ್ನು ತಾನು ಮುಂದೊಡ್ಡಿಕೊಳ್ಳದ ಪಟ್ಟಾಭಿ ಬರೆಯಬೇಕಾದ್ದನ್ನು ಬರೆದಿಲ್ಲ ಎನ್ನುವುದಕ್ಕಿಂತ ನಮ್ಮ ಕಾಲದ ಪ್ರಜ್ಞಾವಂತನಾಗಿ ಎಲ್ಲರಿಗಿಂತ ನನ್ನ ಪಾಲಿಗೆ ನನ್ನ ಆತ್ಮ ಸಾಕ್ಷಿಯಾಗಿಯೇ ಉಳಿದಿದ್ದಾನೆ ಎಂದು ನನಗೇ ನಾನು ಹೇಳಿಕೊಳ್ಳುವುದು ಮುಖ್ಯ.

ಪಟ್ಟಾಭಿಯಿಂದ ಈ ಕೆಲಸವನ್ನು ಮಾಡಿಸಿದ ಧೀರೆ, ಅಕ್ಷತಾ. ನಮ್ಮ ಅಕ್ಷರಲೋಕದ ಧೀರೆಯೆಂದೇ ನನಗೆ ಕಾಣಿಸುವ ಅಕ್ಷತಾ ಪುಸ್ತಕ ಪ್ರಕಟಣೆಯಲ್ಲೂ ಪ್ರಯೋಗಶೀಲೆ, ಸ್ವತಃ ಕವಿ, ಸ್ನೇಹಜೀವ. ನಾನು ಮರೆತಿದ್ದ ಈ ಸಂದರ್ಶನಗಳನ್ನು ಎಲ್ಲೆಲ್ಲಿಂದಲೋ ಹುಡುಕಿ ಹಲವರನ್ನು ಕಾಡಿ ಪಡೆದು ಬರಹಕ್ಕೆ ಇಳಿಸಿದ್ದಾಳೆ; ಹಲವರನ್ನು ಈ ಕೆಲಸದಲ್ಲಿ ದುಡಿಸಿದ್ದಾಳೆ. ಇವೆಲ್ಲ ಅಕ್ಷತಾಗೆ ಸಾಧ್ಯವೆಂಬುದೇ ನನಗೆ ಸೋಜಿಗ. ನಮ್ಮ ಪ್ರಾಜ್ಞಚಿಂತಕರೂ ವಿಮರ್ಶಕರೂ ಆದ ಡಾಕ್ಟರ್ ಆಶಾದೇವಿಯವರಿಂದಲೂ ನನ್ನ ಮಾತಿನ ದೋಷಗಳು ಎದ್ದು ಕಾಣದಂತೆ ನನ್ನ ಬರಹವನ್ನೂ ತಿದ್ದಿಸಿದ್ದಾಲೆ. ಪಟ್ಟಾಭಿಯಿಂದ ರಾಜಶೇಖರರಿಂದ ನನ್ನ ಈ ಕೃತಿಯ ಬಗ್ಗೆ ಬರೆಸಿದ್ದಾಳೆ.

ಯಾರು ಯಾರಿಂದ ಈ ಸಂದರ್ಶನಗಳನ್ನು ತಾನು ಪಡೆದೆ ಎನ್ನುವ ಅಕ್ಷತಾ ಮಾತುಗಳ ಹಿಂದೆಯೂ ನನ್ನ ಥ್ಯಾಂಕ್ಸ್ ಇದೆಯೆಂದು ಭಾವಿಸಬೇಕು. ಇಲ್ಲಿನ ಬಹು ಹಿಂದಿನ ಸಂದರ್ಶನಗಳನ್ನು ಮಾಡುವಂತೆ ನನಗೆ ಪ್ರೇರಣೆ ಕೊಟ್ಟವರು ಆಕಾಶವಾಣಿಯ ಮೋಹಕ ಮಾತುಗಾರ ಡೈರೆಕ್ಟರ್ ಆಗಿದ್ದ ಶಂಕರ್ ಅವರು. ಅಡಿಗರ ಅಚ್ಚುಮೆಚ್ಚಿನ ಸ್ನೇಹಿತರಾದ ಇವರು ತಾವೇ ಬರೆಯಬಹುದಿತ್ತು; ಬರೆಯಲೇ ಇಲ್ಲ. ಆದರೆ ಹಲವರಿಂದ, ಅಡಿಗರಿಂದಲೂ ಬರೆಸಿದ ಪ್ರಾಜ್ಞರು ಇವರು.

ಇವರನ್ನೂ ನೆನೆಯುವೆ. ಮನಬಿಚ್ಚಿ ನನ್ನ ಜೊತೆ ಮಾತಾಡಿದ ಎಲ್ಲರನ್ನೂ ನೆನೆಯುವೆ.

ಯು.ಆರ್.ಅನಂತಮೂರ್ತಿ