Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀ ಅನಂತ ಕುಲಕರ್ಣಿ

ಹಿಂದೂಸ್ಥಾನಿ ಸಂಗೀತದಲ್ಲಿ ವಿಶೇಷ ಕೃಷಿಗೈದ ಸ್ವರಪ್ರತಿಭೆ ಅನಂತ ಕುಲಕರ್ಣಿ, ಆಕಾಶವಾಣಿಯ ಎ ಗ್ರೇಡ್ ಕಲಾವಿದರು, ದಾಸ ಸಾಹಿತ್ಯ ಪ್ರಚಾರಕರು, ಭಕ್ತಿಸಂಗೀತದಲ್ಲಿ ಅನನ್ಯ ಸೇವೆಗೈದ ಹರಿದಾಸ ಸಂಗೀತ ವಿದ್ವನ್ಮಣಿ, ನಾದಲೋಕಕ್ಕೆ ಬಾಗಲಕೋಟೆ ಜಿಲ್ಲೆಯ ಕೊಡುಗೆ ಅನಂತಕುಲಕರ್ಣಿ ಜನಿಸಿದ್ದು ೧೯೫೭ರಲ್ಲಿ. ಗ್ವಾಲಿಯರ್ ಘರಾಣದಲ್ಲಿ ಸ್ವರಾಭ್ಯಾಸ, ಸಂಗೀತದಲ್ಲಿ ಬಿಎ ಪದವಿ, ಪ್ರಯಾಗ ಸಂಗೀತ ಸಮಿತಿಯಿಂದ ಸಂಗೀತ ಮಾರ್ತಾಂಡ, ೧೯೮೬ರಿಂದ ಆಕಾಶವಾಣಿ ಎ ಗ್ರೇಡ್ ಕಲಾವಿದರಾಗಿ ನಿರಂತರ ಸ್ವರಸೇವೆ. ೧೯೯೦ರಿಂದ ದಾಸಸಾಹಿತ್ಯ ಸೇವಾನಿರತರು. ರಾಜ್ಯದ ಹಲವೆಡೆ ಮಾತ್ರವಲ್ಲದೆ, ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು, ಬರೋಡಾ, ಗುಜರಾತ್, ಹರಿದ್ವಾರಗಳಲ್ಲಿ ಭಕ್ತಿಸ್ವರಧಾರೆ, ಜಗನ್ನಾಥದಾಸರ ಹರಿಕಥಾಮೃತಸಾರವನ್ನು ಸುಶ್ರಾವ್ಯವಾಗಿ ಹಾಡಿ ಹರಿದಾಸ ಸಾಹಿತ್ಯ ಜನಸಾಮಾನ್ಯರ ನಾಲಿಗೆಯಲ್ಲಿ ಹರಿಯುವಂತೆ ಮಾಡಿದ ಹೆಗ್ಗಳಿಕೆ, ಈ-ಟಿವಿ, ಉದಯ-ಟಿವಿಯಲ್ಲಿ ಅನೇಕ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟ ಹಿರಿಮೆ. ಈ-ಟಿವಿಯ ಎದೆತುಂಬಿ ಹಾಡುವೆನು ಕಾರ್ಯಕ್ರಮದ ತೀರ್ಪುಗಾರರಾಗಿ ಕಾರ್ಯ. ಹತ್ತಾರು ಸಿ.ಡಿ ಹಾಗೂ ಧ್ವನಿಸುರುಳಿಗಳನ್ನು ಹೊರತಂದ ಕೀರ್ತಿ, ಹರಿಕಥಾಮೃತಸಾರ ಭೂಷಣ, ಹರಿದಾಸ ಸಂಗೀತಬ್ರಹ್ಮ ರಂಗವಿಠಲ ಪ್ರಶಸ್ತಿ, ಹರಿದಾಸನಿಧಿ, ಮೇಘಮಲ್ಹಾರ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ-ಬಿರುದು ಬಾವಲಿಗಳಿಂದ ಭೂಷಿತರಾದ ಅನಂತ ಕುಲಕರ್ಣಿ ಹಿಂದೂಸ್ತಾನಿ ಸಂಗೀತದ ಅನನ್ಯ ಸಾಧಕರು.