ಕರ್ನಾಟಕದ ಕಿರಾಣಾ ಘರಾಣೆಯ ಗಾಯಕರಲ್ಲೊಬ್ಬರಾಗಿರುವ ಶ್ರೀ ಅನಂತ ತೇರದಾಳ ಅವರು ಸಂಗೀತ ಪರಂಪರೆಯ ಕುಟುಂಬದಲ್ಲಿ ಜನಸಿದವರು. ಅವರಿಗೆ ಸಂಗೀತದಲ್ಲಿ ಆಸಕ್ತಿ ಹುಟ್ಟಿದ್ದು ಅವರ ತಾಯಿ ಹಾಡುತ್ತಿದ್ದ ದೇವರನಾಮಗಳನ್ನು ಕೇಳಿ. ಅನಂತರ ಶ್ರೀ ಬಾಬುರಾವ್‌ ಬೋರಕರ ಅವರಲ್ಲಿ ಗ್ವಾಲಿಯರ್ ಘರಾಣೆ ಹಾಗೂ ಜಿ.ಡಿ. ಜೋಷಿ ಅವರಲ್ಲಿ ಕಿರಾಣಾ ಘರಾಣೆಯಲ್ಲಿ ಪ್ರಾಥಮಿಕ ಶಿಕ್ಷಣ ಲಭಿಸಿತು. ಆರ್.ಎನ್‌. ಜೋಶಿ ಅವರಲ್ಲೂ ಅನಂತರಿಗೆ ಶಿಕ್ಷಣವಾಗಿದೆ. ೧೯೮೩ರಲ್ಲಿ ಪಂಡಿತ್‌ ಭೀಮಸೇನ್‌ ಜೋಷಿ ಅವರಲ್ಲೂ ಶಿಷ್ಯವೃತ್ತಿ ಮಾಡುವ ಭಾಗ್ಯ ತೆರದಾಳರಿಗೆ ಲಭಿಸಿತು.

ಅಖಿಲ ಭಾರತ ಗಂಧರ್ವ ಮಹಾ ವಿದ್ಯಾಲಯ ಮಂಡಲದ ‘ಸಂಗೀತ ವಿಶಾರದ’ ಪದವಿ ಗಳಿಸಿರುವ ಶ್ರೀಯುತರು ಅಹಮದಾಬಾದ್‌, ಮುಂಬೈ, ಅಂಡಮಾನ್‌ ನಿಕೋಬಾರ್ (ದ್ವೀಪಗಳು), ಬೆಂಗಳೂರು, ಮೈಸೂರು, ಕಲ್ಕತ್ತಾ ತಾನ್‌ ಸೇನ್‌ ಸಮಾರೋಹ, ಬೆಳಗಾವಿ, ಗೋವಾ ಮುಂತಾದ ಪ್ರತಿಷ್ಠಿತ ನಗರಗಳಲ್ಲಿ ಸಂಗೀತ ಕಛೇರಿ ನೀಡಿದ್ದಾರೆ. ೧೯೮೯ರಲ್ಲಿ ಮುಂಬೈ ದೂರದರ್ಶನ ಇವರ ಕಾರ್ಯಕ್ರಮಗಳನ್ನು ಬಿತ್ತರಿಸಿದೆ.

ಇವರ ಗಾಯನ ಶೈಲಿಯನ್ನು ಹಿರಿಯ ಸಂಗೀತ ಕಲಾವಿದರಾದ ಪಂ. ಜಿತೇಂದ್ರ ಅಭಿಷೇಕ್‌, ಪಂ. ಬಸವರಾಜ ರಾಜಗುರು, ಪಂ. ಸಿ.ಆರ್. ವ್ಯಾಸ್‌, ಪಂ. ವಿಜಯ ಕಚಲು, ಪಂ. ಅರವಿಂದ ಫಾರಿಕ್‌, ಉಸ್ತಾದ್‌ ಹಸೀಫ್‌ ಅಹ್ಮದ್‌ ಖಾನ್‌, ಪಂ. ರಾಜನ್‌ ಸಾಜನ್‌ ಮಿಶ್ರಾ ಮುಂತಾದವರು ಪ್ರಶಂಸಿಸಿದ್ದಾರೆ.

ಅನಂತ ತೇರದಾಳರು ಶಾಸ್ತ್ರೀಯ ಗಾಯನವಲ್ಲದೆ ಠುಮ್ರಿ, ನಾಟ್ಯಗೀತೆ, ಭಕ್ತಿಗೀತೆ, ದೇವರನಾಮಗಳನ್ನೂ ಹಾಡುತ್ತಾರೆ. ಮುಂಬೈಯ ಸುರಸಿಂಗಾರ್ ಸಂಸದ್‌ ‘ಸೂರಮಣಿ’ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ‘ಕರ್ನಾಟಕ ಕಲಾರ್ಶರೀ’ (೨೦೦೦-೨೦೦೧) ಮುಂತಾದ ಪ್ರಶಸ್ತಿ ಪಡೆದುಕೊಂಡಿದ್ದಾರೆ.