ದೇವರು ಮತ್ತು ಟಿ.. ಪೈ ಇವರಿಬ್ಬರೂ ಬಂದು ನನ್ನ ಮನೆಯ ಕದ ತಟ್ಟಿದರೆ, ನಾನು ಮೊದಲು ಟಿ.. ಪೈಯವರನ್ನು ಒಳಗೆ ಕರೆಯುತ್ತೇನೆ. ದೇವರನ್ನು ಅನಂತರ ಕರೆಯುತ್ತೇನೆ.

ಟಿ.ಎ. ಪೈ ಅವರ ಬಗ್ಗೆ ಇಷ್ಟೊಂದು ಅತ್ಯಾದರದ, ಅಭಿಮಾನದ, ಗೌರವದ, ಹಾರ್ದಿಕವಾದ ಮಾತುಗಳನ್ನು ಆಡಿದವರು ಪೈಗಳ ದ.ಕ./ಉಡುಪಿ ಜಿಲ್ಲೆಯವರೇ? ಜಾತಿಯವರೇ? ಏನು, ಬಂಧುಗಳೇ?

ಯಾರೂ ಅಲ್ಲ. ಇವರಲ್ಲಿ ಯಾರಾದರೂ ಒಬ್ಬರಾಗಿದ್ದರೆ ಅದರಲ್ಲಿ ಆಶ್ಚರ್ಯ ಪಡುವಂಥದ್ದೇನೂ ಇರಲಿಲ್ಲ. ಆದರೆ ಹಾಗೆಂದು ಉದ್ಗರಿಸಿದವರು, ಸಮರ್ಪಿಸಿಕೊಂಡವರು ನಾಡಿನ ಆಚಾರ್ಯ ಪುರುಷರಲ್ಲೊಬ್ಬರಾದ ಪಾ.ಪು. – ಪಾಟೀಲ ಪುಟ್ಟಪ್ಪ ಅವರು!

ಧಾರವಾಡದ ಪಾಟೀಲ ಪುಟ್ಟಪ್ಪ ಅವರು ಬಹಳ ಹಿಂದೆಯೇ ವಿದೇಶದಲ್ಲಿ ಪತ್ರಿಕೋದ್ಯಮವನ್ನು ಪಾಸು ಮಾಡಿಕೊಂಡು ಬಂದವರು. ಕರ್ನಾಟಕದಲ್ಲಿ  ನಿರ್ಭೀತಿಯ,  ನಿರ್ಭಿಡೆಯ,  ವೈಚಾರಿಕತೆಯ  ಹಾಗೂ ನಿಷ್ಪಕ್ಷಪಾತತೆಯ ಪತ್ರಿಕೋದ್ಯಮಕ್ಕೆ ಮಹಾನ್ ರೂಪಕ ಆದವರು. ಸಂಸತ್ ಸದಸ್ಯರೂ ಆಗಿ, ಕರ್ನಾಟಕದ ಕಾವಲು ಸಮಿತಿಯ ಅಧ್ಯಕ್ಷರೂ ಆಗಿ, ರಾಜ್ಯ, ಸಮಸ್ಯೆಗೆ ಸಿಕ್ಕಾಗ ಹೋರಾಟಗಾರರೂ ಆಗಿ – ಹೀಗೆ ಬಹುಮುಖಗಳಲ್ಲಿ ಒಡ್ಡಿಕೊಂಡು ‘ದೊಡ್ಡಪ್ಪ’ ಆಗಿರುವವರು. ಇಂಥ ಪಾ.ಪು. ಅವರೇ ಟಿ.ಎ. ಪೈ ಅವರನ್ನು ‘ದೇವರಿಗಿಂತಲೂ ಮಿಗಿಲು’ ಎಂದು ಕೊಂಡಾಡುವುದು ಎಂದರೆ ಏನರ್ಥ? ಅದು ಟಿ.ಎ. ಪೈ ಹಿರಿಮೆ, ಗರಿಮೆ, ಸಾಮರ್ಥ್ಯ, ಸಾತ್ವಿಕತೆಗೆ ಸಂದ ಮರ್ಯಾದೆಯೇ; ಪೂಜೆಯೇ!

ಟಿ.ಎ. ಪೈ ಅವರು ಏನೆಲ್ಲಾ? ದೊಡ್ಡ ಅರ್ಥಶಾಸ್ತ್ರಜ್ಞರು; ರಾಜಕಾರಣದಲ್ಲಿ ಸಂತರು; ಆಡಳಿತ ನಿರ್ವಹಣೆಯಲ್ಲಿ ಧರ್ಮಿಷ್ಠರು; ಯೋಜನೆ ಅನುಷ್ಠಾನಗಳಲ್ಲಿ ದೂರದರ್ಶಿಗಳು; ಸಮದರ್ಶಿಗಳು. ಎಲ್ಲಕ್ಕಿಂತ ಮೇಲಾಗಿ ಮಹಾ ಮಾನವತಾವಾದಿಗಳು.

ಪೈಗಳು ಸಿಂಡಿಕೇಟ್ ಬ್ಯಾಂಕಿಗೆ ತ್ರಾಣವಾದರು. ಕೃಷಿಕ ಬಂಧುಗಳಿಗೆ ಬದುಕಾದರು. ಭಾರತೀಯ ಆಹಾರ ನಿಗಮಕ್ಕೆ ಶಕ್ತಿಯಾದರು. ಜೀವ ವಿಮಾ ನಿಗಮಕ್ಕೆ ಜೀವವಾದರು. ಸಚಿವರಾಗಿ ಭಾರತ ಸರಕಾರಕ್ಕೆ ಚೈತನ್ಯವಾದರು!

ಅಂಥವರ ಚರಿತ್ರೆ ನಾಳೆಗಳಿಗೆ ಅತ್ಯುಪಕಾರವೇ. ಸ್ಫೂರ್ತಿಯೇ, ಮಾದರಿಯೇ.

ಮನೆತನ

ಟಿ.ಎ. ಪೈ ಅವರ ತಂದೆ ತೋನ್ಸೆ ಉಪೇಂದ್ರ ಪೈಗಳು. ಉಪೇಂದ್ರ ಪೈಗಳು ಬಹುದೊಡ್ಡ ವ್ಯಕ್ತಿತ್ವವನ್ನು ಹೊಂದಿದವರಾಗಿದ್ದರು. ಸಮಾಜಮುಖಿ ಆಗಿದ್ದರು. ಅವರ ಪ್ರೀತಿ, ಔದಾರ್ಯ, ಸಾತ್ವಿಕತೆ, ಚಿಂತನೆ ಉನ್ನತ ಮಟ್ಟದ್ದಾಗಿತ್ತು. ಆದರೆ ಅವರು ಮಿತಭಾಷಿ ಆಗಿದ್ದರು.

ಗಾಂಧೀಜಿಯವರ ತತ್ತ್ವ, ಸತ್ತ್ವ, ಅಹಿಂಸೆ, ಸತ್ಯಾಗ್ರಹ ಇತ್ಯಾದಿ ಒಲವು, ನಿಲುವು ಉಪೇಂದ್ರ ಪೈಗಳ ಮೇಲೆ ಅಪಾರ ಪರಿಣಾಮ ಉಂಟು ಮಾಡಿತ್ತು. ಅವರು ಸ್ವತಃ ಖಾದಿದಾರಿಗಳಾಗಿದ್ದರು. ಸ್ವಂತ ಖಾದಿ ಭಂಡಾರವನ್ನೂ ಹೊಂದಿದ್ದರು. ಗಾಂಧೀಜಿ ಯವರಂತೆ ಅವರು ದೇಶದ ಬೆನ್ನೆಲುಬುಗಳಾದ ಕಮ್ಮಾರರು, ಕುಂಬಾರರು, ನೇಕಾರರು, ಬಡಿಗರು ಮೊದಲಾದ ಗ್ರಾಮೀಣ ಶಕ್ತಿಗಳ ಮೇಲೆ ಆದರ ಭಾವ ಉಳ್ಳವರಾಗಿದ್ದರು. ತಮಗೆ ಉಪಯೋಗಕ್ಕೂ ಆಯಿತು, ಅವರಿಗೆ ಉಪಕಾರವೂ ಆಯಿತು ಎಂದುಕೊಂಡು ಅಂಥವರಿಂದ ಇವರ ಕೆಲಸ ಮಾಡಿಸಿಕೊಂಡು ಅವರ ದುಡಿಮೆಗೆ ತಕ್ಕಂತೆ ಗೌರವ ಧನ ನೀಡುತ್ತಿದ್ದರು.

ಸಾಹಿತ್ಯ, ಸಂಗೀತ, ಚಿತ್ರಕಲೆ, ಚಲನಚಿತ್ರಗಳು ಕೂಡ ಅವರಿಗೆ ಅಚ್ಚುಮೆಚ್ಚಿನ ಹವ್ಯಾಸ ಗಳಾಗಿದ್ದವು. ಅವರು ಒಳ್ಳೆಯ ಕೃತಿಗಳನ್ನು ಓದುವ ಅಭ್ಯಾಸ ಇರಿಸಿಕೊಂಡಿದ್ದರು. ಸಂಗೀತ ಕಚೇರಿ ಗಳನ್ನು ಆಸ್ಥೆಯಿಂದ ಆಲಿಸುತ್ತಿದ್ದರು. ಅತ್ಯುತ್ತಮ ಚಿತ್ರಕಲೆಗಳನ್ನು ಬಹಳವಾಗಿ ಇಷ್ಟಪಡುತ್ತಿದ್ದರು.

ಚಲನಚಿತ್ರಗಳ ಪ್ರಯೋಜನಗಳ ಬಗ್ಗೆ ಅವರು ವಿಶ್ವಾಸ ಹೊಂದಿದ್ದರು. ಹಾಗಾಗಿ ಉಡುಪಿಯಲ್ಲಿ ಒಂದು ಚಲನಚಿತ್ರ ಮಂದಿರಕ್ಕೂ ಕಾರಣರಾದರು. ಅದು ಉಡುಪಿಯಲ್ಲಿ ಪ್ರಪ್ರಥಮ ‘ಟಾಕೀಸು’ ಆಗಿತ್ತು. ಜನಗಳಿಗೆ ಆಗ ಇದರ ಬಗ್ಗೆ ಅರಿವು ಅಷ್ಟಕ್ಕಷ್ಟೇ. ಅದರ ಕುರಿತು ಜ್ಞಾನ ಕೊಡಲೆಂದೇ ಅವರು ‘ಚಿತ್ರಕಲಾ’ ಎಂಬ ಪತ್ರಿಕೆಯನ್ನೂ ಪ್ರಾರಂಭಿಸಿದ್ದರು.

ಉಪೇಂದ್ರ ಪೈಗಳಿಗೆ ಕಟ್ಟಡ ನಿರ್ಮಾಣದಲ್ಲಿ ಒಂದಿಷ್ಟು ಹೆಚ್ಚೇ ಶ್ರದ್ಧೆ. ಹತ್ತಿರದಲ್ಲೇ ಲಭ್ಯವಾಗುವ ಸಾಮಾನುಗಳನ್ನು ಉಪಯೋಗಿಸಿದರೆ ಖರ್ಚು ಕಡಿಮೆ ಆಗುತ್ತದೆ, ವಿಶ್ವಾಸಾರ್ಹತೆ ಬಗ್ಗೆ ಅನುಮಾನವೂ ಇರುವುದಿಲ್ಲ ಎಂಬುದು ಅವರ ಧೋರಣೆಯಾಗಿತ್ತು. ಅವರು ಆ ರೀತಿಯ ತಂತ್ರಜ್ಞಾನವನ್ನು ಆಧರಿಸಿ ಬಹಳಷ್ಟು ಕಟ್ಟಡಗಳನ್ನು ನಿರ್ಮಿಸಿಕೊಟ್ಟಿದ್ದರು.

ಹಾಗೆಂದು ಉಪೇಂದ್ರ ಪೈಗಳು ಆಧ್ಯಾತ್ಮಿಕ ಲೋಕದಿಂದ ದೂರ ಇದ್ದವರೇನೂ ಅಲ್ಲ. ರಾಮಕೃಷ್ಣ ಪರಮಹಂಸರ ಬಗ್ಗೆ ಇನ್ನಿಲ್ಲದಷ್ಟು ಭಕ್ತಿ ಭಾವ ಅವರಿಗೆ. ಸ್ವಾಮಿ ವಿವೇಕಾನಂದರು ಪರಮಹಂಸರ ಹೆಸರಿನಲ್ಲಿ ಅನುಷ್ಠಾನಕ್ಕೆ ತಂದ ರಾಮಕೃಷ್ಣಾಶ್ರಮದ ಸಂನ್ಯಾಸಿಗಳು ಉಡುಪಿ ಕಡೆ ಬಂದರೆ ಉಪೇಂದ್ರ ಪೈಯವರ ಮನೆಗೆ ಬಾರದೇ, ಅಲ್ಲಿ ಅವರ ಉಪಚಾರ ಕೊಳ್ಳದೇ ಮುಂದುವರಿಯುತ್ತಿರಲಿಲ್ಲ.

ಭಗವದ್ಗೀತೆಯೆಂದರೆ ಅವರಿಗೆ ಪ್ರಾಣವಾಗಿತ್ತು. ಅದನ್ನು ಅವರು ಅಷ್ಟು ಗಾಢವಾಗಿ ಹಚ್ಚಿಕೊಂಡದ್ದಕ್ಕೆ ಅವರೇ ಕಟ್ಟಿ ನಿಲ್ಲಿಸಿದ ‘ಗೀತಾ ಮಂದಿರ’ವೇ ಪುರಾವೆಯಾಗಿದೆ. ‘ಗೀತಾ ಮಂದಿರ’ ಉಡುಪಿಯ ಮಣಿಪಾಲದಲ್ಲಿದೆ. ಈಗಲೂ ಅಲ್ಲಿ ಭಜನೆ, ಉಪನ್ಯಾಸ ಮೊದಲಾದ ಕಾರ್ಯಕ್ರಮಗಳು ಜರುಗುತ್ತಿವೆ. ಮಣಿಪಾಲದಲ್ಲಿ ಉಪೇಂದ್ರ ಪೈ ಅವರಿಂದ ಕಟ್ಟಲ್ಪಟ್ಟ ಮೊದಲ ಕಟ್ಟಡಗಳಲ್ಲಿ ಇದೂ ಒಂದಾಗಿದೆ.

ಟಿ.ಎ. ಪೈ ಅವರ ತಾಯಿ ಪಾರ್ವತಿ ಅಮ್ಮ. ಗಂಡ ಉಪೇಂದ್ರ ಪೈ ಅವರಿಗೆ ಹೇಳಿ ಮಾಡಿಸಿದ ಹೆಂಡತಿ. ಮಮತೆ, ತಾಳ್ಮೆ, ಅತಿಥಿ ಸತ್ಕಾರ, ದಾನಧರ್ಮ ಎಲ್ಲದರಲ್ಲೂ ಎತ್ತಿದ ಕೈ. ಅಂಥ ಅಪ್ಪ, ಅಮ್ಮನ ಮಗನೇ ನಮ್ಮ ಟಿ.ಎ. ಪೈ ಅವರು.

ಟಿ.ಎ. ಪೈ ಅವರು 17-01-1922ರಂದು ಜನಿಸಿದರು. ಟಿ.ಎ. ಪೈ ಎಂದರೆ ತೋನ್ಸೆ ಅನಂತ ಪೈ ಎಂದೇ. ಈ ಅನಂತ ಎಂಬುದು ಉಪೇಂದ್ರ ಪೈ ಅವರ ತಂದೆಯ ಹೆಸರು. ಎಂದರೆ ಅನಂತ ಪೈ ಅವರಿಗೆ ಅಜ್ಜನ ಹೆಸರು. ಆದರೆ ಮನೆಯಲ್ಲಿ ಅನಂತ, ‘ಬಾಲಕೃಷ್ಣ’ ಎಂದೇ ಮುದ್ದಿನಿಂದ ಕರೆಯಿಸಿಕೊಳ್ಳುತ್ತಿದ್ದರು. ಉಡುಪಿಯ ‘ಮುಕುಂದ ನಿವಾಸ’ದಲ್ಲಿ ಬಾಲಕೃಷ್ಣ ಯಾನೆ ಅನಂತ ಅವರ ಆಟ, ಊಟ, ಓಟ, ಪಾಠ ಮೊದಲಾಯಿತು.

ಅನಂತ ಇಲ್ಲಿ ವಿವಿಧ ರಂಗಗಳಲ್ಲಿ ಕಾಣಿಸಿಕೊಂಡರು. ನಾಟಕಗಳಲ್ಲಿ ಒಂದಲ್ಲ ಒಂದು ಪಾತ್ರ ನಿರ್ವಹಿಸುತ್ತಿದ್ದರು. ಶಾಲಾ ವರ್ಧಂತ್ಯುತ್ಸವ ನಿಮಿತ್ತ ಆಡಿದ ನಾಟಕದಲ್ಲಿ ಇವರು ಕೃಷ್ಣ ದೇವರಾಯನ ಪಾತ್ರ ನಿಭಾಯಿಸಿದರೆ ಕಿರಿಯ ಸೋದರ ರಮೇಶ ಪೈ ತೆನಾಲಿ ರಾಮಕೃಷ್ಣ ಆಗಿ ಅಭಿನಯಿಸುತ್ತಿದ್ದರು. ಕ್ರಿಕೆಟ್ ಆಟದಲ್ಲೂ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದರು. ಓದಿನಲ್ಲೂ ಮುಂದಿದ್ದರು. ಜಾಣರ ಪಟ್ಟಿಯಲ್ಲಿದ್ದರು.

ಆ ಮುಂದೆ ಅನಂತ ಓದಿದ್ದು ಉಡುಪಿಯ ಬೋರ್ಡ್ ಹೈಸ್ಕೂಲಿನಲ್ಲಿ. ರಾಕಿ ಫೆರ್ನಾಂಡಿಸ್ ಎನ್ನುವವರು ಅಲ್ಲಿ ಮುಖ್ಯೋಪಾಧ್ಯಾಯರು. ಅತ್ಯುತ್ತಮ ಶಿಕ್ಷಕರು; ಮಾದರಿ ಶಿಕ್ಷಕರು ಎಂದು ಕೀರ್ತಿ ಸಂಪಾದಿಸಿದವರು. ಇಂಗ್ಲಿಷಿನಲ್ಲಿ ಅಸಾಧಾರಣ ಪ್ರಭುತ್ವ ಇತ್ತು ಅವರಿಗೆ. ಇಂಥವರು ಗುರುಗಳಾಗಿ ಸಿಕ್ಕಿದ್ದು ಅನಂತನ ಅದೃಷ್ಟ. ಅನಂತ ಇಲ್ಲಿ ಪಾಠದ ಕಡೆಗೇ ಪೂರ್ತಿ ಗಮನ ನೀಡಿದರು. ಜ್ಞಾನ ಸಂಪಾದನೆಗೆ ಹೆಚ್ಚು ಹೊತ್ತು ಕೊಟ್ಟು ಕೊಂಡರು. ಅವರು ಪರಿಣಾಮಕಾರಿ ಭಾಷಣಕಾರನಾಗಿ ರೂಪುಗೊಂಡದ್ದು ಇಲ್ಲಿಯೇ. ಲೇಖಕನಾಗಿ ತಯಾರಾದದ್ದೂ ಇಲ್ಲಿಯೇ.

ಅದು 1935ನೆಯ ಇಸವಿ. ಸರಕಾರದ ವತಿಯಿಂದ ‘‘ಕ್ಷಯ ರೋಗ ನಿರ್ಮೂಲನ’’ ಎಂಬ ವಿಷಯದ ಮೇಲೆ ಪ್ರಬಂಧ ಸ್ಪರ್ಧೆ ಏರ್ಪಾಟು. ಅನಂತ ಕೂಡ ಪ್ರಬಂಧ ಬರೆದರು. ಇದಕ್ಕೆ ಮೊದಲ ಬಹುಮಾನ ಬಂತು. ಇದು ಮುದ್ರಣ ಕಂಡದ್ದೂ ಯೋಗಾಯೋಗ. ರಾಕಿ ಮಾಸ್ಟ್ರಿಗೆ ಹೆಮ್ಮೆಯೋ ಹೆಮ್ಮೆ. ಇಷ್ಟೊಂದು ಪ್ರತಿಭಾವಂತ, ಎಷ್ಟೊಂದು ಗುಣವಂತ – ಎಂದು ಅವರು ಅತ್ಯಭಿಮಾನದಿಂದ ಹೇಳಿಕೊಳ್ಳುತ್ತಿದ್ದರು.

ಅನಂತ ಪೈ 1938ರಲ್ಲಿ S.S.L.C. ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದರು. ಅವರು ಅತಿ ಹೆಚ್ಚು ಅಂಕಗಳನ್ನು ಪಡೆದಿದ್ದರು. ಉನ್ನತ ವಿದ್ಯಾಭ್ಯಾಸಕ್ಕಾಗಿ ಮುಂಬಯಿಗೆ ಹೋಗುವುದೇ ಉಚಿತವೆಂದು ಮನೆಯವರು ನಿರ್ಧರಿಸಿದರು. ಅನಂತ ಹೊರಟು ನಿಂತರು. ಮುಂಬಯಿಯ ಪ್ರಖ್ಯಾತ ಸಿಡೆನ್ ಹ್ಯಾರಿ ಕಾಲೇಜು ಪ್ರವೇಶಿಸಿದರು. ಅಲ್ಲಿ ವಾಣಿಜ್ಯ ತರಗತಿಗೆ ಸೇರಿಕೊಂಡು ನಾಲ್ಕು ವರ್ಷ ಓದಿದರು. ಬಿ.ಕಾಂ. ಪದವೀಧರರಾಗಿ ಹೊರಬಂದರು. ಅದು 1943ನೇ ಇಸವಿ!

ಅನಂತ ಬಿ.ಕಾಂ. ಅನ್ನೇ ಏಕೆ ಆಯ್ಕೆ ಮಾಡಿಕೊಂಡರು? ಅದು ಏನಾದರೊಂದು ಪದವಿ ಇರಲಿ ಎಂದು ಆಗಿರಲೇ ಇಲ್ಲ. ತಂದೆ ಉಪೇಂದ್ರ ಪೈಗಳು ಸ್ಥಾಪಿಸಿ ಟಿ.ಎಂ.ಎ. ಪೈಗಳು ಮುನ್ನಡೆಸುತ್ತಿದ್ದ ಸಿಂಡಿಕೇಟ್ ಬ್ಯಾಂಕು ಅವರ ಹೃನ್ಮನಗಳಲ್ಲಿ ಇತ್ತು. ಅಲ್ಲಿಯೇ ತನ್ನ ಸೇವೆ ಸಂದಾಯವಾಗಬೇಕು ಎಂಬುದು ಅವರ ಮನದಾಳದ ಹಂಬಲವಾಗಿತ್ತು. ಅದೇ ತೀವ್ರವಾದ ಇಚ್ಛೆಯಿಟ್ಟುಕೊಂಡೇ ಅವರು ಅಲ್ಲಿ ಕ್ಷಣ ಕ್ಷಣವನ್ನೂ ಜವಾಬ್ದಾರಿಯಿಂದ ಬಳಸಿಕೊಂಡಿದ್ದರು.

ಪದವಿಗಾಗಿ ಸಿದ್ಧತೆಗೊಳ್ಳುತ್ತಿರುವಾಗ ಮುಂಬಯಿಯೆಂಬ ಪುಟ್ಟ ಜಗತ್ತಿನಿಂದ ಅನಂತ ಅವರು ಬಹಳಷ್ಟು ಅನುಭವ ಗಳಿಸಿಕೊಂಡರು. ಈಗ ಜಗದ್ವಿಖ್ಯಾತ ಉದ್ಯಮಿಗಳಾಗಿರುವ ಅರವಿಂದ ಮಫತ್ಲಾಲ್, ಡಾ. ಆರ್.ಸಿ. ಕೂಪರ್ ಅಂಥವರು ಕಾಲೇಜಿನಲ್ಲಿ ಒಳ್ಳೆಯ ಗೆಳೆಯರಾಗಿ ಒಡನಾಟದಲ್ಲಿದ್ದರು. ಎಚ್.ವಿ. ಕಾಮತ್, ಎಚ್.ಎನ್. ರಾವ್, ಕೆ.ಕೆ. ಪೈ ಊರಿನವರೇ. ಅತ್ಯಂತ ಆಪ್ತರಾಗಿದ್ದರು. ಇವರೆಲ್ಲರ ಅನಂತರದ ಸಾಧನೆ ನಮಗೆ ಗೊತ್ತಿರುವಂಥದ್ದೇ. ಅಂಥ ಎಲ್ಲ ಸನ್ಮಿತ್ರರ ಸಾಹಚರ್ಯದಿಂದಲೂ ಅನಂತ ಮತ್ತಷ್ಟು ಅರಳಿಕೊಂಡಿದ್ದರು. ಕಾಲೇಜಿನ ಪ್ರಾಧ್ಯಾಪಕರಂತೂ ಅಸಾಧಾರಣ ಪ್ರತಿಭಾಶಾಲಿಗಳೂ, ವಿದ್ವಾಂಸರೂ, ಮಮತಾಮಯಿಗಳೂ ಆಗಿದ್ದರು. ಅವರೆಲ್ಲ ಅನಂತ ಪೈ ಅವರ ಮೇಲೆ ಬಹಳಷ್ಟು ಪ್ರಭಾವ ಬೀರದೇ ಇರುತ್ತಾರೆಯೇ? ಹಾಗಾಗಿ ಅನಂತ ಪೈ ಊರಿಗೆ ಮರಳಿದಾಗ ಅಪಾರ ಆತ್ಮವಿಶ್ವಾಸದಿಂದ ಹೊಳೆಯುತ್ತಿದ್ದರು; ಅಖಂಡ ವಿದ್ವತ್ತೆಯಿಂದ ಮಿಂಚುತ್ತಿದ್ದರು. ಆದರೆ ಯಾರದೇ ಹಿರಿತನಕ್ಕೆ ವಿನಮ್ರತೆಯಿಂದ ಬಾಗುತ್ತಿದ್ದರು.

ಸಿಂಡಿಕೇಟ್ ಬ್ಯಾಂಕಿನ ಡಿ.ಜಿ.ಎಂ.

ಜುಲೈ ಒಂದು 1943. ಸಿಂಡಿಕೇಟ್ ಬ್ಯಾಂಕ್ ‘ಅನಂತ ಶಕ್ತಿ’ಯನ್ನು ಗೌರವಾದರಗಳಿಂದ ಬರಮಾಡಿಕೊಂಡಿತು. ‘ಡೆಪ್ಯೂಟಿ ಜನರಲ್ ಮ್ಯಾನೇಜರ್’ ಅಧಿಕಾರವನ್ನು ಹಾರ್ದಿಕವಾಗಿ ಒಪ್ಪಿಸಿಕೊಟ್ಟಿತು. ಅದು ಅರ್ಹ ವ್ಯಕ್ತಿಗೆ ಸಂದ ಸೂಕ್ತ ಸ್ಥಾನ ಮಾನ ಎಂಬುದು ನಿರ್ವಿವಾದ ಅಭಿಪ್ರಾಯವಾಗಿತ್ತು. ಸರ್ವಸಮ್ಮತವಾದ ಘೋಷಣೆ ಆಗಿತ್ತು. ಎಲ್ಲರ ನಂಬಿಕೆ, ನಿರೀಕ್ಷೆಗಳನ್ನು ಟಿ.ಎ. ಪೈ ತನ್ನ ಅಭೂತಪೂರ್ವ ನಿರ್ವಹಣೆಗಳ ಮೂಲಕ ನಿಜವಾಗಿಸಿ ಬಿಟ್ಟರು; ಭಾಗ್ಯದ ಬಾಗಿಲು ತೆರೆದುಕೊಟ್ಟರು.

ಟಿ.ಎ. ಪೈ ಅವರು ಬ್ಯಾಂಕಲ್ಲಿ ಅಧಿಕಾರ ಸ್ವೀಕರಿಸಿದ ಹಿಂದಿನ ವರ್ಷಾಂತ್ಯದಲ್ಲಿ (1942ರ ಕೊನೆಯಲ್ಲಿ) ಸಿಂಡಿಕೇಟ್ ಬ್ಯಾಂಕಿನಲ್ಲಿದ್ದ ಒಟ್ಟು ಠೇವಣಿಗಳ ಮೊತ್ತ ರೂ. 59 ಲಕ್ಷ. ಸಾಲ ಮೂವತ್ತೇಳು ಲಕ್ಷ. ಲಾಭ ಅರುವತ್ತೊಂದು ಸಾವಿರ. ಶಾಖೆಗಳು ಒಟ್ಟು 44. ಆದರೆ ಟಿ.ಎ. ಪೈ ಅವರು ಪೀಠವೇರಿದ ವರ್ಷ ಪವಾಡವೇ ನಡೆದು ಹೋಯಿತು. ಅದೇ 1943ರ ವರ್ಷಾಂತ್ಯದಲ್ಲಿ ಠೇವಣಿ ಮೊತ್ತ ಒಂದು ಕೋಟಿ ಮೀರಿತು. ಬ್ಯಾಂಕಿನ ಇನ್ನಿತರ ವಿಭಾಗಗಳೂ ಸಾಕಷ್ಟು ಮುನ್ನಡೆ ಸಾಧಿಸಿದ್ದವು!

ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾಂಕ್

ಟಿ.ಎ. ಪೈ ಸಿಂಡಿಕೇಟ್ ಬ್ಯಾಂಕ್ ಸಾಮಾನ್ಯರ ಪರವಾಗಿರಬೇಕು ಎಂದು ಆಶಿಸಿದವರು. ಅದರಲ್ಲೂ ರೈತರ ಅಗತ್ಯ ಮತ್ತು ತಾಕತ್ತುಗಳ ಮೇಲೆ ಅವರಿಗೆ ತುಂಬು ವಿಶ್ವಾಸ. ಅಂಥವರಿಗೆ ಬೆಂಬಲವಾಗದ ಬ್ಯಾಂಕ್ ಬೇಕೇ? ಎಂದು ಅಂದುಕೊಂಡವರು ಅವರು. ದೇಶ ಉಳಿದಿರುವುದೇ ಹಳ್ಳಿಗಳಿಂದ, ರೈತರಿಂದ ಎಂಬುದಾಗಿ ಅವರು ದೃಢವಾಗಿ ಪ್ರತಿಪಾದಿಸುತ್ತಿದ್ದರು. ರೈತರು, ಅವರ ಮಕ್ಕಳು ಶಹರಗಳಿಗೆ ವಲಸೆ ಹೋಗದಂತೆ ಮಾಡುವುದರಲ್ಲಿ ಬ್ಯಾಂಕ್ ಮಹತ್ತರ ಪಾತ್ರ ವಹಿಸಬೇಕು ಎಂಬುದು ಅವರ ಚಿಂತನೆಯಾಗಿತ್ತು. ತನ್ನ ಚಿಂತನೆಗಳನ್ನು ಕಾರ್ಯಗತಗೊಳಿಸುವಲ್ಲಿ ಟಿ.ಎ. ಪೈ ಅವರು ದಾಪುಗಾಲಿಡ ತೊಡಗಿದರು. ಆ ನಿಟ್ಟಿನಲ್ಲಿ ಅವರಿಟ್ಟ ಮೊದಲ ಹೆಜ್ಜೆ ಗ್ರಾಮೀಣ ನೆಲೆಗಳಲ್ಲಿ ಬ್ಯಾಂಕುಗಳನ್ನು ಸ್ಥಾಪಿಸುವುದು. ದಿನಾಂಕ 22-11-1946ರಂದು ಒಂದೇ ದಿನ ಒಟ್ಟೂ 29 ಗ್ರಾಮೀಣ ಪ್ರದೇಶಗಳಲ್ಲಿ 29 ಶಾಖೆಗಳನ್ನು ತೆರೆದುದು ಒಂದು ಐತಿಹಾಸಿಕ ಸಾಧನೆಯೇ, ದಾಖಲೆಯೇ. ಅದೂ ಅಲ್ಲದೇ ಶಾಖೆಗಳು ಹೆಚ್ಚಾದಾಗ ಶಾಖೆಗಳನ್ನು ನಿಭಾಯಿಸುವ ಸಂದರ್ಭ ಆಗುವ ವೆಚ್ಚದ ಪ್ರಮಾಣವೂ ದೊಡ್ಡದೇ. ಅದನ್ನು ಹೇಗೆ ಎದುರಿಸುವುದು? ನಷ್ಟವನ್ನು ಹೇಗೆ ನಿಯಂತ್ರಣಕ್ಕೆ ತರುವುದು? ಈ ಬಗ್ಗೆಯೂ ಪೈ ಅವರು ಪರಿಹಾರ ಹುಡುಕಿಕೊಳ್ಳುತ್ತಾರೆ. ಅದು ಅವರ ಬುದ್ಧಿ ತೀಕ್ಷ್ಣತೆಗೆ; ಅರ್ಥಶಾಸ್ತ್ರಜ್ಞನ ಸೂಕ್ಷ್ಮತೆಗೆ ಸಮರ್ಥ ನಿದರ್ಶನವಾಗಿದೆ. ಅದು ಹೇಗೆಂದರೆ ಅಂಥ ಶಾಖೆಗೆ ಮೆನೇಜರ್ ಇಲ್ಲ. ಅದರ ಬದಲು ಶಾಖೆಯ ಊರಿಗೆ ಸೇರಿದ ನಂಬಿಗಸ್ಥ ಮತ್ತು ಯೋಗ್ಯತಾವಂತ ನಾಗರಿಕನನ್ನು ಬ್ಯಾಂಕಿನ ಪ್ರತಿನಿಧಿಯಾಗಿ ನೇಮಕ ಮಾಡುವುದು. ಅಂಥವರಿಗೆ ಠೇವಣಿ ಸಂಗ್ರಹಿಸುವ ಹಾಗೂ ಸೂಚಿಸಿದ ಮಿತಿಯಲ್ಲಿ ಡಿಮಾಂಡ್ ಡ್ರಾಫ್ಟ್ ಮತ್ತು ಸಾಲ ಕೊಡುವ ಬಗ್ಗೆ ಅಧಿಕಾರ ಕೊಡುವುದು. ಇಂಥವರಿಗೆ ವೇತನವಿಲ್ಲ. ಕಮಿಷನ್ ಹಂಚುವುದು. ಆದ್ದರಿಂದ ದುಡಿಮೆ ಅನಿವಾರ್ಯ. ಬಂದ ಮೊತ್ತದಲ್ಲಿ ನಿರ್ದಿಷ್ಟ ಕಮಿಷನ್ ವಿತರಣೆ ಮಾಡುವುದರಿಂದ ನಷ್ಟದ ಸಂದರ್ಭವಿಲ್ಲ. ಯಾವಾತ ಬ್ಯಾಂಕಿನ ಪ್ರತಿನಿಧಿ? ಅಂಥವನ ಮನೆ ಇಲ್ಲವೇ ಕಚೇರಿಯಲ್ಲೇ ಬ್ಯಾಂಕಿನ ಶಾಖೆಗೆ ಅನುಮತಿ ಕೊಡುವುದು. ಇಲ್ಲಿಯೂ ದೊಡ್ಡ ಮೊತ್ತದ ಬಾಡಿಗೆ ಬೀಳುವುದಿಲ್ಲ. ಮೇಲಾಗಿ ಬ್ಯಾಂಕಿನ ಪ್ರತಿನಿಧಿ ತಮ್ಮ ಊರಿನ ಜನವೇ ಎಂಬ ವಿಶ್ವಾಸದಿಂದ ಊರಿನವರ ವಹಿವಾಟು ಹೆಚ್ಚಾಗುವುದಲ್ಲದೇ ಕಡಿಮೆ ಆಗುವುದಿಲ್ಲ. ಈ ರೀತಿ ಅವರು ತರ್ಕಿಸಿದರು ಮತ್ತು ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ಸಾಫಲ್ಯವನ್ನೂ ಕಂಡರು.

ಟಿ.ಎ. ಪೈ ಅವರು ಇದನ್ನೆಲ್ಲ ಪ್ರಧಾನ ಕಚೇರಿಯಲ್ಲಿ ಕೂತು ಸಾಧ್ಯಗೊಳಿಸಿದ್ದಲ್ಲ. ತಾವೇ ಸ್ವತಃ ನೂರಾರು ಗ್ರಾಮಗಳಿಗೆ ಭೇಟಿ ನೀಡಿದರು. ಅಲ್ಲಿನ ಸ್ಥಿತಿ, ಗತಿ ಅಭ್ಯಸಿಸಿದರು. ಯಾರು ಪ್ರತಿನಿಧಿಯಾಗಲು ಅರ್ಹರು ಎಂಬುದನ್ನು ತಾವೇ ಸ್ವತಃ ತಮ್ಮದೇ ಆದ ದೃಷ್ಟಿ ಕೋನದಿಂದ ಅಳೆದು ಅಂಥ ಸಮರ್ಥ ವ್ಯಕ್ತಿಯನ್ನು ಆಯ್ಕೆ ಮಾಡುತ್ತಿದ್ದರು. ಅವರ ಆಯ್ಕೆ ಯಾವೊತ್ತೂ ಭ್ರಮ ನಿರಸನಗೊಳಿಸಿದ್ದಿಲ್ಲ. ಬ್ಯಾಂಕಿಗೆ ತಕ್ಕುದಾದ, ಸುಭದ್ರವಾದ ಕಟ್ಟಡ ಮೊದಲಾದವುಗಳನ್ನು ಹುಡುಕಿಕೊಳ್ಳುವ ಜವಾಬ್ದಾರಿಯನ್ನೂ ಸ್ವತಃ ತಾವೇ ಹೊತ್ತು ಕೊಳ್ಳುತ್ತಿದ್ದರು. ಹೀಗೆ ಗ್ರಾಮ ಗ್ರಾಮಗಳಿಗೆ ಭೇಟಿ ಕೊಟ್ಟಾಗೆಲ್ಲ ಪೈ ಅವರು ತಾನು ಕೇವಲ ಬ್ಯಾಂಕಿಗೆ ಸಂಬಂಧಪಟ್ಟವನು ಎಂಬ ರೀತಿ ವರ್ತಿಸಲಿಲ್ಲ. ಜನಸಾಮಾನ್ಯರೊಂದಿಗೆ ತಾನೂ ಜನಸಾಮಾನ್ಯನೇ ಎಂದುಕೊಂಡು ಒಳಹೊಕ್ಕರು. ಅವರ ಬೇಕು ಬೇಡ, ಕಷ್ಟ ನಷ್ಟಗಳನ್ನು ಪ್ರೀತಿಯಿಂದ, ಸಮಾಧಾನದಿಂದ ಆಲಿಸಿದರು. ಸಹಾಯ ಮಾಡಿದರು. ಮಾರ್ಗದರ್ಶಿಸಿದರು. ಧೈರ್ಯ ತುಂಬಿದರು.

ಪೈ ಅವರ ಗ್ರಾಮೀಣ ಪ್ರದೇಶಗಳಲ್ಲಿನ ಬ್ಯಾಂಕುಗಳ ಕಾರ್ಯ ವಿಧಾನ ಯಾವ ರೀತಿ ಇತ್ತು? ಹೇಗೆ ಅದು ಶ್ರೇಯಸ್ಸು ಕಂಡಿತ್ತು?

ಬಹಳ ಹಿಂದೆ ಕಾರ್ಕಳ ತಾಲೂಕಿನ ನಿಟ್ಟೆ ಅತ್ಯಂತ ಹಿಂದುಳಿದ ಪ್ರದೇಶ. ಕಾಡೇ ಕಾಡಾಗಿತ್ತು ಅದು. ಅಂಥಲ್ಲೂ ಟಿ.ಎ. ಪೈ ಅವರ ಬ್ಯಾಂಕ್ ಶಾಖೆ ಇತ್ತು! ಶಾಖೆ, ಅಲ್ಲಿನ ಒಂದು ಅಂಗಡಿಯ ಮಹಡಿ ಮೇಲಿತ್ತು. ನೋಡಲು ಅಷ್ಟೇನೂ ಆಕರ್ಷಕವಾಗಿರಲಿಲ್ಲ. ಆದರೆ ಅದು ಎಂಟೂವರೆ ಲಕ್ಷ ರೂಪಾಯಿ ಮೊತ್ತದ ಒಂದು ಸಾವಿರದ ಆರುನೂರು ಠೇವಣಿಗಳನ್ನು ಹೊಂದಿತ್ತು! ಆ ಜಾಗಕ್ಕಾದರೂ ಬ್ಯಾಂಕ್ ಕೊಡುತ್ತಿದ್ದ ಬಾಡಿಗೆಯಾದರೂ ಎಷ್ಟು? ತಿಂಗಳಿಗೆ ಕೇವಲ ರೂ. 15 ಆಗಿತ್ತು. ಇದೇ ಉಡುಪಿ ಬಳಿಯ ಬೈಲೂರಿನ ಶಾಖೆಯಲ್ಲಿ ಹತ್ತು ಲಕ್ಷ ರೂಪಾಯಿ ಠೇವಣಿ ಇದ್ದರೆ ಇನ್ನೊಂದು ಕಾಡೇ ಎಂಬಂತಿದ್ದ ಶಿರ್ವದ ಶಾಖೆಯಲ್ಲಿ ಇದ್ದುದು ರೂ. ಇಪ್ಪತ್ತು ಲಕ್ಷದ ಠೇವಣಿ ಆಗಿತ್ತು. ಈ ಮೂರೂ ಗ್ರಾಮಗಳು ಆಗ ತೀರ ಅಪರಿಚಿತವೇ ಆಗಿದ್ದ, ಅವಗಣನೆಗೊಳಗಾಗಿದ್ದ ಪ್ರದೇಶಗಳೇ ಆಗಿದ್ದವು. ಇಂಥಲ್ಲಿ, ಇಂಥ ಹಲವು ಗ್ರಾಮಗಳಲ್ಲಿ ಟಿ.ಎ. ಪೈ ಅವರು ಸೂರ್ಯೋದಯವಾದರು.

ಬ್ಯಾಂಕ್ ಮೂಲಕ ಉಳ್ಳವರಿಗೆ ಅವರ ಆಸ್ತಿ-ಪಾಸ್ತಿ, ಬೆಳ್ಳಿ-ಬಂಗಾರ ನೋಡಿ ಸಾಲ ಕೊಡುವ ಕ್ರಮ ಇದ್ದುದೇ. ಆದರೆ ಏನೇನೂ ಆರ್ಥಿಕ ಅನುಕೂಲತೆ ಹೊಂದಿಲ್ಲದ, ಆದರೂ ಮುನ್ನುಗ್ಗಬೇಕು ಎಂಬ ಛಲದ ಜನಗಳಿಗೆ ಬ್ಯಾಂಕ್ ಸಾಲ ಕೊಡುವುದು ಎಂದರೆ ಅದೊಂದು ವಿಸ್ಮಯದ ವಿಶೇಷವೇ. ಅಂಥ ವಿದ್ಯಮಾನಕ್ಕೆ ಕಾರಣರಾದವರು ಟಿ.ಎ. ಪೈ ಅವರೇ.

ಉಡುಪಿಯ ಮಟ್ಟು ಗ್ರಾಮದಲ್ಲಿ ಬದನೆ (ಗುಳ್ಳ) ಬೆಳೆಯುವವರಿಗೆ ಕಡು ಕಷ್ಟ. ಫಲ ಕೊಡುವವರೆಗೆ ಉಪಚಾರ ಇತ್ಯಾದಿಗೆ ತಗಲುವ ವೆಚ್ಚ ನಿಭಾಯಿಸುವುದು ದೊಡ್ಡ ಸಮಸ್ಯೆ. ಈ ಗೇಣಿದಾರರಿಗೂ ಸಾಲ ಸೌಲಭ್ಯ ಒದಗಿಸಿದವರು ಟಿ.ಎ. ಪೈಗಳು.

ಶಂಕರಪುರ ಎಂಬುದೂ ಪುಟ್ಟ ಗ್ರಾಮವೇ. ಅಲ್ಲಿ ಮಲ್ಲಿಗೆ ಹೂವಿನ ಬೆಳೆಗಾರರು ಹೆಚ್ಚು. ಅವರೂ ಬಡವರೇ. ಬೆಳೆ ತೆಗೆವ ಮುನ್ನ ಸಾಲ ಕೆಲವರಿಗಾದರೂ ಅಗತ್ಯವೇ. ಆದರೆ ಕೊಡುವವರು ಯಾರು? ಹೀಗಾಗಿ ಅಲ್ಲೂ ನೋವೇ. ಟಿ.ಎ. ಪೈಗಳು ಅವರಿಗೂ ಸಾಲ ಕೊಡಿಸುತ್ತಾರೆ. ರಾಶಿ ರಾಶಿ ಬೆಳೆ ತೆಗೆಯಿಸುತ್ತಾರೆ. ಅವೆರಲ್ಲರಲ್ಲೂ ನಗು ಮಲ್ಲಿಗೆ ಕಂಡು ಪುಳಕಿತರಾಗುತ್ತಾರೆ.

ದೂರದ ಬೆಳಗಾವಿ. ಆ ಕಡೆಗೆಲ್ಲ ಹೆಚ್ಚಾಗಿ ತರಕಾರಿ ವ್ಯಾಪಾರ ಮಾಡುವವರು ಮಹಿಳೆಯರೇ. ತರಕಾರಿ ಮಾರಿ ಒಂದಿಷ್ಟು ಹಣ ಸಂಪಾದಿಸುವುದೂ ಹೌದು. ಆದರೆ ಹಣ ಉಳಿಸಿಕೊಳ್ಳುವ ವಿಷಯದಲ್ಲಿ ಬಹುತೇಕ ಮಂದಿ ಹಿಂದೆಯೇ. ಟಿ.ಎ. ಪೈ ಇದನ್ನೆಲ್ಲಾ ಗಮನಿಸಿದರು. ನೊಂದುಕೊಂಡರು. ಅಂಥ ಎಲ್ಲ ಮಹಿಳೆಯರೂ ಬ್ಯಾಂಕಿನಲ್ಲಿ ಖಾತೆ ಹೊಂದಿ ಹಣ ಉಳಿಸಿಕೊಳ್ಳಲು ಪ್ರೇರಿಸಿದರು. ಹಾಗೆಯೇ ಅವಶ್ಯವಾದಾಗ ಸಾಲ ಕೊಡಿಸುವಲ್ಲೂ ಬ್ಯಾಂಕ್ ಹಿಂದೆ ಸರಿಯದಂತೆ ಆದೇಶ ನೀಡಿದರು.

ಇವು ಕೇವಲ ಕೆಲವೇ ಕೆಲವು ಉದಾಹರಣೆಗಳು ಅಷ್ಟೇ. ಇಂಥ ರೀತಿಯಲ್ಲಿ ಮುಂದುವರಿಯುವ ಸಂದರ್ಭ ಕಾನೂನು ತೊಡಕುಗಳು ಕಾಲ್ಕೆದರಿ ನಿಂತಿದ್ದೂ ಇವೆ. ಆದರೆ ಪೈ ಅವರು ಅದನ್ನು ಎದುರಿಸಿ ಉಪಕಾರ ಮಾಡಿಕೊಟ್ಟರು ಎನ್ನುವುದು ಟಿ.ಎ. ಪೈ ಅವರ ಮಾನವೀಯ ಅಂತಃಕರಣಕ್ಕೆ ಪ್ರಬಲ ಸಾಕ್ಷಿ ಆಗುವಂಥದ್ದೇ ಸರಿ.

ಬ್ಯಾಂಕ್ ನೌಕರರು ಕಂಡ ದೇವರು

ಹಲವರು ಹೊರಗೆ ಮಾತ್ರ ಉದಾರಿಗಳಾಗಿರುತ್ತಾರೆ. ಬಡಬಗ್ಗರ ಬಗ್ಗೆ ಅನುಕಂಪೆ ತೋರಿಸುತ್ತಾರೆ; ಸಹಾಯ ಹಸ್ತ ನೀಡುತ್ತಾರೆ. ಅವರ ಪಾಲಿಗೆ ಬಂಧು ಆಗುತ್ತಾರೆ. ಸಿಂಧು ಆಗುತ್ತಾರೆ. ದೇವರೇ ಎಂತಲೂ ಹೊಗಳಿಸಿಕೊಳ್ಳುತ್ತಾರೆ. ಆದರೆ ತಮ್ಮ ತಮ್ಮ ಮನೆಗಳಲ್ಲಿ, ಸಂಸ್ಥೆಗಳಲ್ಲಿ, ಕಂಪೆನಿಗಳಲ್ಲಿ ಬಹಳಷ್ಟು ಕೃಪಣರೇ ಆಗಿ ನಡೆದುಕೊಳ್ಳುತ್ತಾರೆ. ತಮ್ಮ ಸಿಬ್ಬಂದಿಗಳಿಗೆ ಮಾತ್ರ ಕಡಿಮೆ ಸಂಬಳ ಕೊಡುತ್ತಾರೆ. ಆದರೆ ಟಿ.ಎ. ಪೈ ಅವರು ತಮ್ಮ ನೌಕರರ ವಿಷಯದಲ್ಲೂ ಮಾನವೀಯತೆ ಮೆರೆದಿದ್ದಾರೆ. ಬ್ಯಾಂಕಿನ ಆರ್ಥಿಕ ಸ್ಥಿತಿ ಸದೃಢವಾಗಿದೆ ಎಂಬುದನ್ನು ಖಾತ್ರಿ ಮಾಡಿಕೊಂಡವರೇ ಸಿಬ್ಬಂದಿಗಳಿಗೆ ಸಂಬಳ, ಸವಲತ್ತುಗಳನ್ನು ಗಮನಾರ್ಹ ರೀತಿಯಲ್ಲಿ ಏರಿಸಿದರು. ವೈದ್ಯಕೀಯ ಸೌಲಭ್ಯಗಳಿಗೂ ಬಾಧ್ಯಸ್ಥರನ್ನಾಗಿ ಮಾಡಿದರು. ನೌಕರರ ಸೇವಾ ನಿಯಮಗಳಲ್ಲಿ ಇನ್ನಷ್ಟು ಬದಲಾವಣೆ ತಂದರು; ಸಾಕಷ್ಟು ಸುಧಾರಣೆಗಳಿಗೆ ಹರಿಕಾರರಾದರು. ಬ್ಯಾಂಕಿನ ಉದ್ಯೋಗಸ್ಥರ ಸಂಸಾರಗಳಲ್ಲಿ ಸಂತೋಷ ಉಕ್ಕಿ ಚೆಲ್ಲ ತೊಡಗಿತು. ಟಿ.ಎ. ಪೈ ಅವರು ಅಂಥ ಎಲ್ಲರ ಪಾಲಿಗೆ ದೇವರೇ ಆಗಿ ಕಂಡರು.

ಮಹಿಳೆಯರಿಗೆ ಉದ್ಯೋಗಾವಕಾಶ

ಮಹಿಳೆಯರು ಸಮಾನ ಅವಕಾಶ ಪಡೆಯಲೇಬೇಕು ಎಂಬುದು ಟಿ.ಎ. ಪೈ ಅವರ ಪ್ರಾಮಾಣಿಕ ಅಪೇಕ್ಷೆ ಆಗಿತ್ತು. ಅವರಿಗೆ ಉದ್ಯೋಗ ಬೇಕೇ ಬೇಕು. ಅದನ್ನು ನಮ್ಮಂಥವರ ಬ್ಯಾಂಕುಗಳು, ಸರಕಾರ, ಬೇರೆ ಬೇರೆ ಸಂಘ ಸಂಸ್ಥೆ, ಕಂಪೆನಿಗಳು ಕೊಡಲೇಬೇಕು ಎಂಬುದು ಅವರ ಹಕ್ಕೊತ್ತಾಯವಾಗಿತ್ತು. ಮಹಿಳೆಯರು ಪುರುಷರಿಗಿಂತ ಯಾವುದರಲ್ಲೂ ಕಡಿಮೆ ಅಲ್ಲ. ಆ ಬಗ್ಗೆ ಸಂದೇಹ ಬೇಡ ಎಂಬುದು ಅವರ ನಿಸ್ಸಂದಿಗ್ಧ ಧೋರಣೆ ಆಗಿತ್ತು. ಸಾಮಾನ್ಯವಾಗಿ ಹೆಚ್ಚಿನವರೂ ವೇದಿಕೆಗಳಲ್ಲಿ ಹೀಗೆ ವಾದಿಸುವುದುಂಟು. ಆಮೇಲೆ ಈ ವಿಚಾರ ಮರೆತು ಬಿಡುವುದೂ ಉಂಟು. ಅಕಸ್ಮಾತ್ತಾಗಿ ಅಂಥ ಹುದ್ದೆ ದೊರೆತು ಅವಕಾಶ ಕೊಡುವ ಅಧಿಕಾರ ತಮ್ಮಲ್ಲೇ ಇದ್ದರೂ ಆ ಬಗ್ಗೆ ವಿರೋಧವಾಗಿ ವರ್ತಿಸಿ ಬಿಡುವುದೂ ಉಂಟು! ಟಿ.ಎ. ಪೈಗಳು ಭಿನ್ನರಾಗಿ, ಮೇರು ವ್ಯಕ್ತಿತ್ವದವರಾಗಿ ಕಾಣುವುದು ಎಲ್ಲಿ ಎಂದರೆ ತಾನು ನುಡಿದಂತೆ ನಡೆದುಕೊಂಡಿರುವಲ್ಲಿ.

ಅವರು ತಮ್ಮ ಬ್ಯಾಂಕಿನಲ್ಲಿ ಮಹಿಳೆಯರಿಗೆ ಉದ್ಯೋಗ ಕೊಡಲೇಬೇಕೆಂದು ನಿರ್ಧರಿಸಿದರು. ಸಾವಿರಾರು ಮಹಿಳೆಯರಿಗೆ ಉದ್ಯೋಗ ಕೊಟ್ಟು ಬಿಟ್ಟರು. ಹೀಗೆ ಮಹಿಳೆಯರಿಗೆ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಉದ್ಯೋಗ ಕೊಟ್ಟ ಬ್ಯಾಂಕ್ ಸಿಂಡಿಕೇಟ್ ಬ್ಯಾಂಕ್ ಮತ್ತು ಕೊಟ್ಟ ವ್ಯಕ್ತಿ ಟಿ.ಎ. ಪೈ ಎಂಬುದು ಜಗಜ್ಜಾಹೀರಾಗಿ ಹೋಯಿತು.

ಮಹಿಳೆಯರೇ ನಡೆಸುವ ಶಾಖೆ

ಅದೂ ಅಲ್ಲದೇ ಅವರು ಮಹಿಳೆಯರು ಮಾತ್ರವೇ ಉಳ್ಳ ಶಾಖೆಯನ್ನು ಪ್ರಾರಂಭಿಸಿದರು. ಬೆಂಗಳೂರಿನ ಶೇಷಾದ್ರಿಪುರದಲ್ಲಿ-1962ರಲ್ಲಿ ಈ ಶಾಖೆ ತೊಡಗಿಸಿಕೊಂಡಿತು. ಇದು ಟಿ.ಎ. ಪೈ ಅವರು ಮಹಿಳಾ ಶಕ್ತಿಗೆ ನೀಡಿದ ಪುರಸ್ಕಾರವೇ ಆಗಿತ್ತು. ಶೇಷಾದ್ರಿಪುರ ಶಾಖೆ ಪುರುಷ ಪ್ರಾಧಾನ್ಯವುಳ್ಳ ಯಾವುದೇ ಒಂದು ಶಾಖೆಗೂ ಕಡಿಮೆ ಇರಲಿಲ್ಲ. ಕಡಿಮೆ ಎಂದೇನು? ಅಲ್ಲಿ ಮಹಿಳೆಯರ ತಾಳ್ಮೆ, ಸಹೃದಯತೆ ಪುರುಷ ಸಿಬ್ಬಂದಿಗಳಿಗಿಂತ ಒಂದು ಪಟ್ಟು ಹೆಚ್ಚಾಗಿಯೇ ದುಡಿದುಕೊಳ್ಳುತ್ತಿದ್ದುದು, ಕೆಲಸದಲ್ಲಿ ಹೆಚ್ಚು ಶಿಸ್ತು, ಶ್ರದ್ಧೆ ಇರುತ್ತಿದ್ದುದು ಸಕಲರಿಂದಲೂ ಕೊಂಡಾಡಿಸಿಕೊಂಡಿತು. ಟಿ.ಎ. ಪೈ ಅವರು ಗೆದ್ದು ಬಿಟ್ಟಿದ್ದರು! ಈ ಗೆಲುವು ಇನ್ನೂ ನಾಲ್ಕು ಮಹಿಳಾ ಶಾಖೆಗಳ ಹುಟ್ಟಿಗೆ ಸ್ಫೂರ್ತಿಯಾಯಿತು.

ಬ್ಯಾಂಕಿಗೂ ಕೃಷಿಗೂ ನಂಟು

ಪ್ರಸಿದ್ಧ ಅರ್ಥಶಾಸ್ತ್ರಜ್ಞ ಮತ್ತು ಬ್ಯಾಂಕರ್ ಆಗಿದ್ದ ಶ್ರೀ ಟಿ.ಎ. ಪೈಗಳು ಕೃಷಿ ರಂಗದತ್ತ ಗಮನ ಹರಿಸಿದುದು ಒಂದು ಸುಯೋಗ. ಇನ್ನಿತರ ಬ್ಯಾಂಕುಗಳು ಪಟ್ಟಣದಲ್ಲಿ ಹುಟ್ಟಿ ಅಲ್ಲೇ ಬೆಳೆದವುಗಳಾದರೆ ಸಿಂಡಿಕೇಟ್ ಬ್ಯಾಂಕು ಉಡುಪಿಯಲ್ಲಿ ಹುಟ್ಟಿ ಬೆಳೆದು ಮಣಿಪಾಲಕ್ಕೆ ತನ್ನ ಪ್ರಧಾನ ಕಚೇರಿಯನ್ನು ವರ್ಗಾಯಿಸಿಕೊಂಡಿತು. 1962ರಲ್ಲಿ ಚಿಕ್ಕಪ್ಪ ಡಾ. ಟಿ. ಮಾಧವ ಪೈಗಳಿಂದ ಆಡಳಿತದ ಜವಾಬ್ದಾರಿಯನ್ನು ವಹಿಸಿಕೊಂಡ ಶ್ರೀ ಟಿ.ಎ. ಪೈಗಳು ಹಳ್ಳಿಯಲ್ಲಿ ಹುಟ್ಟಿ ಬೆಳೆದು ಪಟ್ಟಣದಲ್ಲಿ ಓದಿ ಪುನಃ ಹಳ್ಳಿಗೇ ಬಂದವರು. ಗ್ರಾಮೀಣ ಆರ್ಥಿಕ ಸ್ಥಿತಿ ಹಾಗೂ ಜನರ ಸಮಸ್ಯೆಗಳ ಬಗ್ಗೆ ಅವರಿಗೆ ವಾಸ್ತವಿಕತೆಯ ಅರಿವಿತ್ತು. ಹಾಗಾಗಿ ತಳಮಟ್ಟ ದಿಂದ ಅಭಿವೃದ್ಧಿ ಕಾರಣಗಳ ಬಗ್ಗೆ ಚಿಂತಿಸಲು ಅವರ ಮನೋಭೂಮಿಕೆ ಸಿದ್ಧವಾಗಿತ್ತು.

ಅರವತ್ತು ಮತ್ತು ಎಪ್ಪತ್ತನೇ ದಶಕಗಳಲ್ಲಿ ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿಯ ಕುರಿತು ರಾಷ್ಟ್ರೀಯ ಪ್ರಜ್ಞೆ ಮೂಡಿಸುವಲ್ಲಿ ಶ್ರೀ ಟಿ.ಎ. ಪೈಗಳು ಮಾಡಿದ ಕೆಲಸ ಅನನ್ಯವಾದುದು. ತನ್ನ ಸ್ಥಾನಬಲದಿಂದ ಮತ್ತು ಸೈದ್ಧಾಂತಿಕ ನಿಲುವಿನಿಂದ ಉತ್ಪಾದನಾ ಹೆಚ್ಚಳವಾಗದೆ ಇನ್ನಿತರ ಅಭಿವೃದ್ಧಿಗಳು ಫಲ ನೀಡಲಾರವು ಎಂಬ ಸತ್ಯವನ್ನು ಭಾರತೀಯ ರಿಸರ್ವ್ ಬ್ಯಾಂಕಿನಿಂದ ಹಿಡಿದು ಭಾರತ ಸಕಾರ್ರದವರೆಗೆ ಎಲ್ಲರ ಗಮನಕ್ಕೆ ತಂದವರಲ್ಲಿ ಶ್ರೀ ಪೈಗಳು ಅಗ್ರಗಣ್ಯರು ಮತ್ತು ಹಸಿರು ಕ್ರಾಂತಿಯ ಹರಿಕಾರರಲ್ಲೊಬ್ಬರಾಗಿದ್ದರು.

ಅಮೇರಿಕದಲ್ಲಿ ಕೃಷಿ ಪರ ಬ್ಯಾಂಕಿನ ಅಧ್ಯಯನ

1963ರಲ್ಲಿ ಬ್ಯಾಂಕ್ ಆಫ್ ಅಮೇರಿಕದ ಕಾರ್ಯವಿಧಾನಗಳನ್ನು ಅಭ್ಯಸಿಸಲು ಶ್ರೀ ಟಿ.ಎ. ಪೈಗಳು ಅಮೇರಿಕೆಗೆ ಭೇಟಿಯಿತ್ತರು. ಆ ಕಾಲದಲ್ಲಿ ಬ್ಯಾಂಕ್ ಆಫ್ ಅಮೇರಿಕ ಪ್ರಪಂಚದ ಅತಿ ದೊಡ್ಡ ಬ್ಯಾಂಕಾಗಿತ್ತು. ಇದರ ವ್ಯವಹಾರಗಳ ಬಗ್ಗೆ ಅಧ್ಯಯನ ನಡೆಸುವಾಗ ಶ್ರೀ ಟಿ.ಎ. ಪೈಗಳು ಒಂದು ಸತ್ಯವನ್ನು ಮನಗಂಡರು. ಈ ಬ್ಯಾಂಕು ಕ್ಯಾಲಿಫೋರ್ನಿಯ ರಾಜ್ಯದಲ್ಲಿ ತನ್ನ ಬಂಡವಾಳ ಹೂಡಿಕೆಯ ಶೇಕಡಾ 30ರಷ್ಟನ್ನು ಕೃಷಿಕರಿಗೆ ನೀಡಿತ್ತು. ಅದರಿಂದ ಕ್ಯಾಲಿಫೋರ್ನಿಯಾ ರಾಜ್ಯ ಕೃಷಿ ಸಮೃದ್ಧವಾಗಿ ಅಮೇರಿಕದ 52 ರಾಜ್ಯಗಳಲ್ಲಿ ಅತ್ಯಂತ ಸಂಪದ್ಭರಿತ ರಾಜ್ಯವೆನಿಸಿತ್ತು. ಹಾಗಾಗಿ ಕೃಷಿಕರಿಗೆ ಬ್ಯಾಂಕುಗಳು ಬಂಡವಾಳ ನೀಡುವುದರಿಂದ ಉತ್ಪಾದನಾ ಹೆಚ್ಚಳ ಸಾಧ್ಯವೆಂಬುದನ್ನು ಮನಗಂಡು ದೇಶಕ್ಕೆ ಮರಳಿದೊಡನೆ ಸಿಂಡಿಕೇಟ್ ಬ್ಯಾಂಕಿನಲ್ಲಿ ಕೃಷಿ ಸಾಲ ನೀಡುವ ವಿಭಾಗವೊಂದನ್ನು ತೆರೆಯುವ ನಿರ್ಧಾರ ಮಾಡಿದರು.

ಶಾಸಕರಾಗಿ, ರಾಜಕೀಯ ಧುರೀಣರಾಗಿ, ಆರ್ಥಿಕ ಚಿಂತಕರಾಗಿ ಶ್ರೀ ಟಿ.ಎ. ಪೈಯವರು ಆಗಲೇ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಪ್ರಸ್ತುತವೆನಿಸಿದ್ದರು. ಅವರ ಮಾತುಗಳಿಗೆ, ವಿಚಾರಧಾರೆಗಳಿಗೆ ಬಲವಿತ್ತು. ಆದರೆ ಬ್ಯಾಂಕುಗಳು ಕೃಷಿಗೆ ನೀಡುವ ಸಾಲದ ಧೋರಣೆಗೆ ರಿಸರ್ವ್ ಬ್ಯಾಂಕ್ ಹಾಗೂ ಭಾರತ ಸರ್ಕಾರದ ಬೆಂಬಲವಿರಲಿಲ್ಲ. ಶೇಕಡಾ 70ರಷ್ಟು ಜನರಿಗೆ ಉದ್ಯೋಗ ನೀಡುವ ಮತ್ತು ದೇಶದ ಒಟ್ಟು ಸಾಂಪತ್ತಿಕ ವರಮಾನದಲ್ಲಿ 50ರಷ್ಟನ್ನು ನೀಡುತ್ತಿರುವ ಕೃಷಿ ರಂಗದ ಆರ್ಥಿಕ ಅವಶ್ಯಕತೆಗಳಿಗೆ ಸ್ಪಂದಿಸುವುದು ವಾಣಿಜ್ಯ ಬ್ಯಾಂಕುಗಳ ಕರ್ತವ್ಯವೆಂಬ ದೃಢ ನಂಬುಗೆಯನ್ನು ಹೊಂದಿದ್ದ ಅವರು ಇದಕ್ಕಾಗಿ ಕಾರ್ಯೋನ್ಮುಖರಾದರು. ಗ್ರಾಮೀಣ ಜನರ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಿ ಅವರು ಆರ್ಥಿಕವಾಗಿ ಬಲಿಷ್ಠರಾಗುವಂತೆ ಮಾಡುವುದು ಎಲ್ಲರ ಜವಾಬ್ದಾರಿ ಎಂಬುದನ್ನು ಪ್ರತಿಪಾದಿಸಲು ಆರಂಭಿಸಿದರು.

ಜಿಲ್ಲೆಯಲ್ಲಿ ಕೃಷಿ ಅಭಿವೃದ್ಧಿ ಸಂಘ

ಮಳೆಯನ್ನಾಧರಿಸಿ ಬೆಳೆ ಬೆಳೆಯುತ್ತಿರುವ ದ.ಕ. ಜಿಲ್ಲೆಯ ಕೃಷಿಕರಿಗೆ ನೀರಾವರಿ ಪಂಪುಸೆಟ್ಟುಗಳನ್ನು ನೀಡುವುದು ಅವರ ಒಂದು ದೊಡ್ಡ ಕಾರ್ಯಕ್ರಮವಾಗಿತ್ತು. ಆದರೆ ರೈತ ಪಂಪುಸೆಟ್ಟು ಹಾಕಲು ತಯಾರಾದರೆ ಅದನ್ನು ಸರಬರಾಜು ಮಾಡುವ ವ್ಯವಸ್ಥೆಯಿರಲಿಲ್ಲ. ಅದಕ್ಕಾಗಿ ಪಂಪುಗಳ ಹಾಗೂ ಕೃಷಿ ಯಂತ್ರಗಳ ವಿತರಣೆಗಾಗಿ ಒಂದು ಪ್ರತ್ಯೇಕ ಸಹಕಾರಿ ಸಂಘದ ಯೋಜನೆ ಮಾಡಿದರು. ಆದರೆ ಅಂದಿನ ಕಾನೂನಿನಂತೆ ಇಂತಹ ಸಹಕಾರಿ ಸಂಘಗಳನ್ನು ನೋಂದಾಯಿಸಲು ಅವಕಾಶವಿರಲಿಲ್ಲ. ಅಂದು ರಾಜ್ಯದ ಸಹಕಾರಿ ಮಂತ್ರಿಯಾಗಿದ್ದ ತನ್ನ ಮಿತ್ರ ಶ್ರೀ ರಾಮಕೃಷ್ಣ ಹೆಗ್ಗಡೆಯವರ ಮನವೊಲಿಸಿ, ಕಾನೂನಿನಲ್ಲಿ ಬದಲಾವಣೆ ಮಾಡಿಸಿ ದ.ಕ. ಜಿಲ್ಲಾ ಸಹಕಾರಿ ಕೃಷಿ ಅಭಿವೃದ್ಧಿ ಸಂಘ (SKADS) ಸ್ಥಾಪನೆ ಮಾಡಿದರು. ಅದರ ಸ್ಥಾಪಕ ಅಧ್ಯಕ್ಷರಾಗಿ ಅಗತ್ಯವಿರುವಲ್ಲೆಲ್ಲಾ ರೈತರಿಗೆ ಪಂಪುಸೆಟ್ಟು ಖರೀದಿಸಲು, ಅದನ್ನು ಜೋಡಿಸಲು, ಅಗತ್ಯ ಸೇವೆಗಳನ್ನು ಒದಗಿಸಲು ವ್ಯವಸ್ಥೆಯಾಯಿತು. ಮುಂದೆ ‘‘ಪಂಪುಸೆಟ್ಟು ಸೊಸೈಟಿ’’ ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದ ಈ ಸಂಘ ಕೃಷಿ ಯಾಂತ್ರೀಕರಣಕ್ಕೆ ನಾಂದಿ ಹಾಡಿತು. ರೈತರಲ್ಲಿ ಆಸಕ್ತಿ ಕುದುರಿತು, ಸಾವಿರಾರು ಪಂಪು ಸೆಟ್ಟುಗಳಿಂದ (ವಿದ್ಯುತ್ ಚಾಲಿತ ಹಾಗೂ ಡೀಸಲ್ ಚಾಲಿತ) ನೀರೆತ್ತಿ ಒಂದು ಬೆಳೆ ತೆಗೆಯುವಲ್ಲಿ ಎರಡು ತೆಗೆದು ತೋಟದ ಬೆಳೆಗಳಿಗೆ ನೀರುಣಿಸಿ ರೈತರ ಉತ್ಪಾದನೆ ಹೆಚ್ಚಿಸಿತು. ಅಂದಿನ ಕಾಲದಲ್ಲಿ ಇದೊಂದು ಕ್ರಾಂತಿಕಾರಿ ಚಿಂತನೆ ಎನಿಸಿತು. ಇದರ ಕಾರ್ಯದರ್ಶಿಯಾಗಿ ಶ್ರೀ ಪೈಗಳವರ ಯೋಚನೆಗಳನ್ನು ಕಾರ್ಯಗತಗೊಳಿಸಿದವರು ಶ್ರೀ ಕೆ.ಪಿ. ಬಿಳಿರಾಯರು ಮತ್ತು ಅದರ ಆಡಳಿತ ಮಂಡಲಿಯಲ್ಲಿದ್ದ ಪ್ರಮುಖರಲ್ಲಿ ಬಂಟ್ವಾಳ ನಾರಾಯಣ ನಾಯಕ್ ಮತ್ತು ಇತರ ಸಹಕಾರಿ ಧುರೀಣರು ಸೇರಿದ್ದರು. ಇಂದು ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಸಾವಿರಾರು ಪಂಪುಸೆಟ್ಟುಗಳು ಕೃಷಿಗೆ ನೀರುಣಿಸುತ್ತಿದ್ದರೆ ಅದರ ಕಲ್ಪನೆಯನ್ನು ಮಾಡಿಕೊಂಡು ರೈತ ಸಮುದಾಯದಲ್ಲಿ ನೀರಾವರಿ ಕೃಷಿಯ ಬಗ್ಗೆ ಆಸಕ್ತಿ ಹುಟ್ಟಿಸಿದ ಕೀರ್ತಿ ಶ್ರೀ ಟಿ.ಎ. ಪೈಯವರಿಗೆ ಸಲ್ಲಬೇಕು.

ಭಾರತೀಯ ಆಹಾರ ನಿಗಮ

1964ರಲ್ಲಿ ದೇಶವು ಎಂದೂ ಕಾಣದ ಆಹಾರದ ಅಭಾವವನ್ನು ಎದುರಿಸುತ್ತಿತ್ತು. ಅಮೇರಿಕದಿಂದ PL-480, ಗೋಧಿ ಬಾರದಿದ್ದರೆ ಇಲ್ಲಿ ಜನರಿಗೆ ಉಪವಾಸ. ಅಕ್ಕಿಯ ಅಭಾವ ಮತ್ತು ಆಹಾರ ಸಮಸ್ಯೆಯ ತೀವ್ರತೆ ಎಷ್ಟಿತ್ತೆಂದರೆ ಅಂದು ಪ್ರಧಾನ ಮಂತ್ರಿಗಳಾಗಿದ್ದ ಸನ್ಮಾನ್ಯ ಶ್ರೀ ಲಾಲಬಹದ್ದೂರ ಶಾಸ್ತ್ರಿಗಳವರು ಒಪ್ಪತ್ತಿನ ಊಟ ಬಿಡಲು ನಾಡಿನ ಜನರಿಗೆ ಕರೆ ನೀಡಿದ್ದರು, ಕೃಷಿ ಮತ್ತು ಆಹಾರ ಮಂತ್ರಿಗಳಾಗಿದ್ದ ಶ್ರೀ ಸುಬ್ರಹ್ಮಣ್ಯಂ ಅವರು, ಇರುವ ಆಹಾರ ಧಾನ್ಯಗಳ ಶೇಖರಣೆ ಮತ್ತು ವಿತರಣೆಯನ್ನು ಸಮರ್ಪಕವಾಗಿ ನಡೆಸಲು ಭಾರತೀಯ ಆಹಾರ ನಿಗಮ (Food Corporation of India) ಇದನ್ನು ಸ್ಥಾಪಿಸಲು ನಿರ್ಧರಿಸಿದರು. ಅದರ ಹಿರಿತನ ವಹಿಸಿ ಈ ನೂತನ ವ್ಯವಸ್ಥೆಗೆ ಚಾಲನೆ ನೀಡಲು ಶ್ರೀ ಟಿ.ಎ. ಪೈಯವರನ್ನು ಆಹ್ವಾನಿಸಿದರು. ಪ್ರಸಿದ್ಧ ಬ್ಯಾಂಕರ್ ಆಗಿದ್ದ ಪೈಯವರು ಏನು ಮಾಡಬಲ್ಲರು ಎಂಬ ಬಗ್ಗೆ ಜಿಜ್ಞಾಸೆಯಿತ್ತು. ಆದರೆ ಈ ಗುರುತರ ಹೊಣೆಗಾರಿಕೆಯ ಸವಾಲನ್ನು ಶ್ರೀ ಪೈಯವರು ವಹಿಸಿಕೊಂಡರು. 1965 ಜನವರಿ 1ನೇ ತಾರೀಖಿನಿಂದ ಅಸ್ತಿತ್ವಕ್ಕೆ ಬಂದ ಫುಡ್ ಕಾರ್ಪೊರೇಷನ್ನ ಪ್ರಥಮ ಅಧ್ಯಕ್ಷರಾದರು.

ಕೂಡಲೇ ಕಾರ್ಯೋನ್ಮುಖರಾದ ಶ್ರೀ ಪೈಯವರು ದೇಶದ ಉದ್ದಗಲದಲ್ಲಿ ಸಂಚರಿಸಿ ಆಹಾರ ಧಾನ್ಯಗಳ ಉತ್ಪಾದನೆ ಮತ್ತು ಶೇಖರಣೆಯ ಬಗ್ಗೆ ಜನಜಾಗೃತಿ ಮೂಡಿಸುವ ಕೆಲಸ ಮಾಡಿದರು. ಅಂಕಿ-ಅಂಶಗಳ ಮೂಲಕ ಪೋಲಾಗುವ ಆಹಾರ ಧಾನ್ಯಗಳನ್ನು ರಕ್ಷಿಸಲು ಕ್ರಮ ಕೈಗೊಂಡರು. ದಾಸ್ತಾನು ಮಳಿಗೆಯ ಅಭಾವದಿಂದ ಇಲಿಗಳು ತಿಂದು ಹಾಳು ಮಾಡುವ ಆಹಾರ ಧಾನ್ಯಗಳ ಲೆಕ್ಕಾಚಾರ ನೀಡಿದರು. ಇದಕ್ಕಾಗಿ ಹಳ್ಳಿಹಳ್ಳಿಗಳಲ್ಲಿ ಉಗ್ರಾಣಗಳನ್ನು ಕಟ್ಟುವ ಧೋರಣೆ ರೂಪಿಸಿದರು. ವಿಶೇಷ ಸಮಾರಂಭಗಳಲ್ಲಿ ತಿಂದು ಚೆಲ್ಲುವ ಆಹಾರ ವಸ್ತುಗಳ ಬಗೆಗೆ ಸಾರ್ವನಿಕರ ಗಮನ ಸೆಳೆದರು. ಜೊತೆಗೆ ಉತ್ಪಾದನೆಯನ್ನು ಹೆಚ್ಚು ಮಾಡಲು ಅಗತ್ಯವಿರುವ ವೈಜ್ಞಾನಿಕ ವಿಧಾನಗಳನ್ನು ಅಳವಡಿಸಿಕೊಳ್ಳಲು ಭಾರತ ಸರಕಾರದ ಮೂಲಕ ಕ್ರಮ ಕೈಗೊಂಡರು. ತನ್ನ ಆಡಳಿತ ಅನುಭವದ ಹಿನ್ನೆಲೆಯಲ್ಲಿ ಆಹಾರ ನಿಗಮವನ್ನು ಕಟ್ಟಿ ಅಲ್ಲಿನ ಸಿಬ್ಬಂದಿಗಳಿಗೆ ತರಬೇತಿ ನೀಡಿ ಅಭಾವ ಪರಿಸ್ಥಿತಿಯನ್ನು ನೀಗಿಸಲು ಅಗತ್ಯವಿರುವ ಕ್ರಮ ಕೈಗೊಂಡರು. ಇದು ನಾಡಿನ ಆಹಾರ ಸಂಬಂಧಿತ ಧೋರಣೆಗಳಿಗೆ ಹೊಸ ಚಾಲನೆ ನೀಡಿತು.

ಹಸಿರು ಕ್ರಾಂತಿಯ ಹರಿಕಾರ

ಇದೇ ಸಮಯದಲ್ಲಿ ಸಿಂಡಿಕೇಟ್ ಬ್ಯಾಂಕಿನ ಮೂಲಕ ಕೃಷಿಗೆ ಆರ್ಥಿಕ ನೆರವು ನೀಡಿ ಉತ್ಪಾದನೆ ಹೆಚ್ಚಿಸುವ ಕೆಲಸದತ್ತ ಗಮನ ಹರಿಸಿದರು. ಆಹಾರ ನಿಗಮದ ಮುಖ್ಯಸ್ಥರಾಗಲು ಬ್ಯಾಂಕಿನ ಆಡಳಿತ ನಿರ್ದೇಶಕ ಪದವಿಗೆ ರಾಜೀನಾಮೆ ನೀಡಿದ ಅವರು ಉಪಾಧ್ಯಕ್ಷರಾಗಿ ಮುಂದುವರಿದರು. ಅಂತರರಾಷ್ಟ್ರೀಯ ಕೃಷಿ ತಜ್ಞರಾದ ಡಾ. ಎನ್.ಸಿ. ಮೆಹತಾ ಅವರನ್ನು ತನ್ನ ಸಲಹೆಗಾರರನ್ನಾಗಿ ಮಾಡಿಕೊಂಡು ಹಸಿರು ಕ್ರಾಂತಿಯ ಕಲ್ಪನೆ ಸೃಷ್ಟಿಸಿದರೆ ಅಧಿಕ ಇಳುವರಿಯ ತಳಿಗಳಿಂದ ಮಾತ್ರ ತ್ವರಿತವಾಗಿ ಉತ್ಪಾದನಾ ಮಟ್ಟ ಹೆಚ್ಚಿಸಲು ಸಾಧ್ಯವೆಂಬುದನ್ನು ಮನಗಂಡು ಜಪಾನ್, ತೈವಾನ್, ಮನಿಲಾ ದೇಶಗಳಿಂದ ಅಧಿಕ ಇಳುವರಿ ನೀಡುವ ಭತ್ತದ ತಳಿಗಳನ್ನು ತರಿಸಿಕೊಳ್ಳುವ ನಿರ್ಧಾರ ಮಾಡಲಾಯಿತು. ಆದರೆ ವೈಜ್ಞಾನಿಕವಾಗಿ ಸರಕಾರದ ಮಟ್ಟದಲ್ಲಿ ಇದನ್ನು ಮಾಡಲು ಕೆಲವೊಂದು ತೊಂದರೆಗಳಿದ್ದವು. ಅದಕ್ಕಾಗಿ ಮಣಿಪಾಲ ಇಂಡಸ್ಟ್ರೀಸ್ಗೆ ಸೇರಿದ 60 ಎಕರೆ ಹೊಲದಲ್ಲಿ ಈ ಪ್ರಯೋಗ ನಡೆಸಲು ನಿರ್ಧರಿಸಲಾಯಿತು. ‘‘ಸುಪೀರಿಯರ್ ಸೀಡ್ಸ್ ಫಾರ್ಮ್’’ ಎನ್ನುವ ಹೆಸರಿನಲ್ಲಿ ಭತ್ತದ ತಳಿ ಪರೀಕ್ಷಿಸಲು ಒಂದು ಸಂಶೋಧನಾ ಕೇಂದ್ರವನ್ನು ಹುಟ್ಟು ಹಾಕಿದರು. ಉಡುಪಿ ತಾಲೂಕಿನ ಮಡಿಯಲ್ಲಿ 1965ರ ಆದಿ ಭಾಗದಲ್ಲಿ ಈ ಪ್ರಯತ್ನ ಆರಂಭವಾಗಿ ಇಡೀ ರಾಷ್ಟ್ರದ ಗಮನ ಸೆಳೆಯಿತು. ಆ ಸಮಯದಲ್ಲಿ ಕಂಕನಾಡಿಯ ಭತ್ತದ ಸಂಶೋಧನಾ ಕೇಂದ್ರದಲ್ಲಿ ತಳಿ ವಿಜ್ಞಾನಿಯಾಗಿದ್ದ ನನ್ನನ್ನು ಬ್ಯಾಂಕಿಗೆ ಸೇರಿಸಿಕೊಂಡು ಈ ಜವಾಬ್ದಾರಿಯನ್ನು ನನಗೆ ವಹಿಸಿಕೊಡಲಾಯಿತು. ಅಂದು ಬ್ಯಾಂಕಿನ ಅಧ್ಯಕ್ಷರಾಗಿದ್ದ ಡಾ. ಟಿ.ಎಂ.ಎ. ಪೈ ಮತ್ತು ಮುಖ್ಯ ಅಧಿಕಾರಿಯಾಗಿದ್ದ ಶ್ರೀ ಕೆ.ಕೆ. ಪೈ ಅವರು ಸಂಪೂರ್ಣ ಸಹಕಾರ ನೀಡಿದರು.

ಮುಂದಿನ ಒಂದು ವರ್ಷದಲ್ಲಿ ಇಲ್ಲಿ ಅದ್ಭುತ ಸಾಧನೆ ನಡೆಯಿತು. ವಿದೇಶಗಳಿಂದ ತರಿಸಿದ ಒಟ್ಟು 12 ತಳಿಗಳಲ್ಲಿ ತಾಚುಂಗ್-65, ತಾಚುಂಗ್ ನೇಟಿವ್-1, ಐಆರ್-8 ತಳಿಗಳು ಉತ್ತಮ ಇಳುವರಿ ನೀಡುವುದೆಂದು ಕಂಡುಕೊಳ್ಳಲಾಯಿತು. ರೈತನ ಮನವೊಲಿಸಿ ಇವುಗಳನ್ನು ಸುಮಾರು 250 ಎಕ್ರೆ ಪ್ರದೇಶದಲ್ಲಿ ಬೆಳೆಯುವ ಪ್ರಯತ್ನ ಯಶಸ್ವಿಯಾಯಿತು. ಈ ಮಧ್ಯೆ ಆಹಾರ ನಿಗಮದ ಅಧ್ಯಕ್ಷರಾಗಿದ್ದ ಶ್ರೀ ಟಿ.ಎ. ಪೈಗಳವರು ಆಗಾಗ ಮಡಿ ಫಾರ್ಮಿಗೆ ಸಂದರ್ಶನ ನೀಡಿ ಪ್ರಗತಿಯನ್ನು ಸ್ವತಃ ಪರೀಕ್ಷಿಸುತ್ತಿದ್ದರು. 1966ರ ಎಪ್ರಿಲ್ ತಿಂಗಳ ಹಸಿರು ಕ್ರಾಂತಿಯ ಚರಿತ್ರೆಯಲ್ಲಿ ಒಂದು ಮರೆಯಲಾಗದ ದಿನ. ಅಂದು ಕೇಂದ್ರ ಮಂತ್ರಿಗಳಾಗಿದ್ದ ಶ್ರೀ ಸಿ. ಸುಬ್ರಹ್ಮಣ್ಯಂ ಅವರು ದೂರದ ಮಡಿಗೆ ಹೆಲಿಕಾಪ್ಟರ್ನಲ್ಲಿ ಬಂದು ಸಾವಿರಾರು ರೈತರ ಸಮಕ್ಷಮದಲ್ಲಿ ಈ ಅಧಿಕ ಇಳುವರಿಯ ತಳಿಯ ಪರಿಷ್ಕೃತ ಬೀಜಗಳನ್ನು ನಾಡಿನ ರೈತರ ಉಪಯೋಗಕ್ಕೆ ಬಿಡುಗಡೆ ಮಾಡಿದರು. ಪ್ರಾಯಶಃ ಶ್ರೀ ಟಿ.ಎ. ಪೈಗಳವರ ಜೀವನದಲ್ಲಿ ಇದೊಂದು ಮರೆಯಲಾಗದ ಘಟನೆ ಮತ್ತು ಸಾಧನೆಯ ಸಂತೃಪ್ತಿ. ಹೀಗೆ ಭತ್ತದಲ್ಲಿ ಹಸಿರು ಕ್ರಾಂತಿಯ ಪ್ರಥಮ ಪ್ರಯತ್ನ ನಡೆಯಿತು.

ವಿಶಿಷ್ಟ ಸಾಧಕ

ಭಾರತ ಆಹಾರ ನಿಗಮದ ಸ್ಥಾಪಕ ಅಧ್ಯಕ್ಷರಾಗಿ ಶ್ರೀ ಟಿ.ಎ. ಪೈಯವರು ನೀಡಿದ ಮಾರ್ಗದರ್ಶನ ದೇಶದ ಕೃಷಿರಂಗಕ್ಕೆ ಒಂದು ಹೊಸ ಚೈತನ್ಯ ನೀಡಿತು. ಅಲ್ಲಿನ ಅವರ ಸಾಧನೆ ನಿಬ್ಬೆರಗುಗೊಳಿಸಿತು. ರಾಷ್ಟ್ರಮಟ್ಟದಲ್ಲಿ ತಮ್ಮ ವಿಚಾರಧಾರೆಗಳಿಗೆ ಬಲ ಒದಗಿಸಲು ಇದು ಸಹಕಾರಿಯಾಯಿತು. ಎಲ್ಲದಕ್ಕಿಂತ ಮುಖ್ಯವಾಗಿ ಯಾರೂ ಹೆಚ್ಚಾಗಿ ಗಮನ ಹರಿಸದ ಜನರ ಜೀವನಾಡಿಯಾದ ವ್ಯವಸಾಯ ರಂಗಕ್ಕೆ ಪ್ರಾಮುಖ್ಯ ಮತ್ತು ರಾಷ್ಟ್ರೀಯ ಸ್ಥಾನಮಾನ ದೊರಕಿಸಿ ಕೊಡುವಲ್ಲಿ ಅವರು ಯಶಸ್ವಿಯಾದರು. ಇದನ್ನು ಮನಸಾರೆ ಮೆಚ್ಚಿದ ಭಾರತ ಸರಕಾರ ಶ್ರೀ ಪೈಯವರು ಅಧಿಕಾರ ಬಿಡುವ ಸಮಯದಲ್ಲಿ ವಿಶೇಷ ಗೆಜೆಟ್ ಹೊರಡಿಸಿ ಅವರ ಕೊಡುಗೆಯನ್ನು ದಾಖಲಿಸಿ ಪ್ರಶಂಸಿಸಿತು. ಭಾರತ ಸರಕಾರದಿಂದ ಈ ಗೌರವಕ್ಕೆ ಪಾತ್ರರಾದುದು ಅದರ ಕಾರ್ಯಕ್ಷಮತೆ ಮತ್ತು ದಕ್ಷತೆಗೆ ಸಂದ ವಿಶಿಷ್ಟ ಪುರಸ್ಕಾರ.

ಆಹಾರ ನಿಗಮದ ಅಧ್ಯಕ್ಷರಾಗಿ ಶ್ರೀ ಪೈಗಳವರು ಮಾಡಿದ ಇನ್ನೊಂದು ಸಾಧನೆ ಆಹಾರ ಧಾನ್ಯಗಳಿಗೆ ಬೆಂಬಲ ಬೆಲೆ ಘೋಷಣೆ. ಕಾರ್ಖಾನೆಗಳು ಉತ್ಪಾದಿಸುವ ಯಾವುದೇ ಸಾಮಗ್ರಿಗಳಿಗೆ ಅವರೇ ಬೆಲೆ ನಿಶ್ಚಯಿಸುತ್ತಾರೆ. ಆದರೆ ವರ್ಷವಿಡೀ ಬೆವರು ಸುರಿಸಿ ದುಡಿದ ಜನರ ಬದುಕಿಗೆ ಅಗತ್ಯವಾದ ಆಹಾರ ಧಾನ್ಯಗಳನ್ನು ಉತ್ಪಾದಿಸುವ ರೈತನಿಗೆ ಮಾರುಕಟ್ಟೆಯಲ್ಲಿ ಸಿಗಬಹುದಾದ ಬೆಲೆ ಅನಿಶ್ಚಿತ. ಈ ಪರಿಸ್ಥಿತಿಯನ್ನು ತಪ್ಪಿಸಲು ಅವರು ಭಾರತ ಸರಕಾರ ಮತ್ತು ಇತರ ಸಂಸ್ಥೆಗಳ ಮೇಲೆ ಪ್ರಭಾವ ಬೀರಿ ರೈತರು ತಾವು ಬೆಳೆದ ಆಹಾರ ಧಾನ್ಯಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಘೋಷಿಸಲು ಸರಕಾರದ ಮೇಲೆ ಒತ್ತಡ ತಂದು ಯಶಸ್ವಿಯಾದರು. ಆ ಕಾಲದಲ್ಲಿ ಇದೊಂದು ಮಹತ್ಸಾಧನೆಯಾಗಿತ್ತು.

ಬ್ಯಾಂಕುಗಳ ಮೂಲಕ ಕೃಷಿಗೆ ನೆರವು

1964ರಲ್ಲಿ ಸಿಂಡಿಕೇಟ್ ಬ್ಯಾಂಕಿನಲ್ಲಿ ಕೃಷಿ ಆರ್ಥಿಕ ನೆರವಿನ ವಿಭಾಗವನ್ನು ಸ್ಥಾಪಿಸಿದುದು ಒಂದು ಕ್ರಾಂತಿಕಾರಿ ಹೆಜ್ಜೆಯಾಗಿತ್ತು. 1966ರಲ್ಲಿ ಬ್ಯಾಂಕಿಗೆ ಮರಳಿದ ಶ್ರೀ ಪೈಯವರು ಇದನ್ನು ಬಲಗೊಳಿಸಲು ಇನ್ನಷ್ಟು ಕ್ರಮಗಳನ್ನು ಕೈಗೊಂಡರು. ಕೃಷಿ ಪದವೀಧರರನ್ನು ಕೆಲಸಕ್ಕೆ ನೇಮಿಸಿಕೊಂಡು ರೈತರಿಗೆ ತಾಂತ್ರಿಕ ಸಲಹೆ ಸೂಚನೆ ನೀಡುವ ವ್ಯವಸ್ಥೆ ಮಾಡಿದರು. ಅಧಿಕ ಇಳುವರಿಯ ತಳಿಗಳು, ವಿವಿಧ ಗೊಬ್ಬರಗಳ ಬಳಕೆ, ಸಸ್ಯ ಸಂರಕ್ಷಣೆ, ಕೃಷಿ ಯಾಂತ್ರೀಕರಣಕ್ಕೆ ಉಳುಮೆ ಯಂತ್ರ, ಮದ್ದು ಸಿಂಪಡಿಸುವ ಯಂತ್ರಗಳು ಇತ್ಯಾದಿಗಳನ್ನು ಪ್ರಾತ್ಯಕ್ಷಿಕೆಗಳ ಮೂಲಕ ರೈತನ ಹೊಲದಲ್ಲಿಯೇ ಮಾಡಿ ತೋರಿಸುವ ಕೆಲಸವನ್ನು ಬ್ಯಾಂಕು ನಿರ್ವಹಿಸಿತು. ಪರಿಣಾಮವಾಗಿ ಜಿಲ್ಲೆಯಾದ್ಯಂತ ಪರೀಕ್ಷಣಾ ಹೊಲಗಳು ಅಸ್ತಿತ್ವಕ್ಕೆ ಬಂದವು. ಕ್ಷೇತ್ರ ಸಂದರ್ಶನ, ಮಾಹಿತಿ ಶಿಬಿರಗಳು, ಕೃಷಿ ಉತ್ಸವ ಮುಂತಾದ ಕಾರ್ಯಕ್ರಮಗಳ ಮೂಲಕ ಸಾಮಾನ್ಯ ರೈತರಲ್ಲಿ ನಂಬುಗೆ ಹುಟ್ಟುವ ಪ್ರಯತ್ನ ಮಾಡಲಾಯಿತು. ಜಿಲ್ಲಾ ಮಟ್ಟದಲ್ಲಿ ಬೆಳೆ ಸ್ಪರ್ಧೆಗಳನ್ನು ಏರ್ಪಡಿಸಿ ಹೆಚ್ಚು ಬೆಳೆದವರಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. ಒಟ್ಟಿನಲ್ಲಿ ಬ್ಯಾಂಕೊಂದು ಪ್ರಪ್ರಥಮವಾಗಿ ಕೃಷಿ ಸಂಶೋಧನೆ ವಿಸ್ತರಣಾ ಕಾರ್ಯಕ್ರಮಗಳ ಮೂಲಕ ವೈಜ್ಞಾನಿಕ ಕೃಷಿ ಮಾಡಲು ರೈತರಿಗೆ ಪ್ರೇರೇಪಣೆ ನೀಡಿ ಅವರ ಆತ್ಮವಿಶ್ವಾಸ ಹೆಚ್ಚಿಸಲು ಕೈಗೊಂಡ ಈ ಕೆಲಸವನ್ನು ರಾಷ್ಟ್ರಮಟ್ಟದಲ್ಲಿ ಎಲ್ಲರೂ ಕುತೂಹಲದಿಂದ ನೋಡುತ್ತಿದ್ದರು.

ರೈತರಿಗೆ ಬ್ಯಾಂಕ್ ಸಾಲದ ಸೌಲಭ್ಯ

ಭಾರತೀಯ ರಿಸರ್ವ್ ಬ್ಯಾಂಕಿನ ಮುಂಜಾಗರೂಕತೆಯ ಎಚ್ಚರಿಕೆಯ ಹೊರತಾಗಿಯೂ ಆಹಾರ ಉತ್ಪಾದನೆ ಮಾಡಲು ಅಗತ್ಯವಿರುವ ಭೂ-ಅಭಿವೃದ್ಧಿ, ಬಾವಿ ಮತ್ತು ಪಂಪ್ಸೆಟ್ ಬೆಳೆ ಬೆಳೆಯಲು ತಗಲುವ ಖರ್ಚು ಇವುಗಳಿಗೆ ಅಗತ್ಯವಿರುವ ಅಲ್ಪಾವಧಿ ಮತ್ತು ಮಧ್ಯಮಾವಧಿ ಸಾಲಗಳನ್ನು ಒದಗಿಸಲು ದ.ಕ. ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಸಾಲ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಯಿತು. ಉ. ಕರ್ನಾಟಕದ ತುಂಗಭದ್ರಾ ಅಣೆಕಟ್ಟಿನ ಅಚ್ಚುಕಟ್ಟು ಪ್ರದೇಶದಲ್ಲಿ ಮುಸುಕಿನ ಜೋಳ, ಜವಾರ್ ಮುಂತಾದ ಬೆಳೆಗಳಲ್ಲಿ ಸಂಕರಣ ಬೀಜೋತ್ಪಾದನೆಗೆ ಪ್ರಯತ್ನ ಮಾಡಿದರು.

1966ರಿಂದ 69ರ ವರೆಗೆ ಮಣಿಪಾಲ ಬ್ಯಾಂಕರುಗಳ ಯಾತ್ರಾ ಸ್ಥಳವಾಯಿತು. ಸಿಂಡಿಕೇಟ್ ಬ್ಯಾಂಕ್ ಮಾಡುತ್ತಿರುವ ಕೃಷಿ ಸಾಲ ವಿಧಾನಗಳನ್ನು ಅಭ್ಯಸಿಸಲು ಬ್ಯಾಂಕರುಗಳ ಮತ್ತು ಆಡಳಿತ ತಜ್ಞರ ದಂಡು ಮಣಿಪಾಲಕ್ಕೆ ಬರತೊಡಗಿತು. ಎಲ್ಲಾ ವಿರೋಧಗಳನ್ನು ಎದುರಿಸಿ ಸಿಂಡಿಕೇಟ್ ಬ್ಯಾಂಕು ಕೃಷಿಗೆ ಸಾಲ ನೀಡುವ ತನ್ನ ಧೋರಣೆಯನ್ನು ವಿಸ್ತರಿಸಿ ಕೊಯಂಬುತ್ತೂರ್ ಉತ್ತರ ಕನ್ನಡ, ಉತ್ತರ ಕರ್ನಾಟಕ, ತಮಿಳುನಾಡು, ಉತ್ತರ ಪ್ರದೇಶ, ಆಂಧ್ರಪ್ರದೇಶ ಹೀಗೆ ತನ್ನ ಗ್ರಾಮೀಣ ಶಾಖೆಗಳ ಜಾಲವಿರುವಲ್ಲೆಲ್ಲಾ ಕೃಷಿ ಸಾಲ ಯೋಜನೆಗಳು ಆರಂಭಗೊಂಡವು. ವಸೂಲಾತಿ ಕಾರ್ಯವೂ ಉತ್ತಮವಾಗಿತ್ತು. ವಿವಿಧ ವೇದಿಕೆಗಳಲ್ಲಿ ಶ್ರೀ ಟಿ.ಎ. ಪೈಯವರು ಬ್ಯಾಂಕಿನ ಸಾಧನೆಗಳನ್ನು ಅಭಿಮಾನ ಮತ್ತು ಆತ್ಮವಿಶ್ವಾಸದಿಂದ ಹೇಳತೊಡಗಿದರು.

ವ್ಯವಸಾಯ ಉತ್ಪಾದನೆ ಕುಂಠಿತವಾಗಲು ಬಂಡವಾಳ ಹೂಡಿಕೆ ಕಡಿಮೆಯಾದುದೇ ಕಾರಣವೆಂಬ ಸತ್ಯವನ್ನು ಅಂದಿನ ಸರಕಾರ ತಡವಾಗಿಯಾದರೂ ಮನಗಂಡಿತು. ಗ್ರಾಮೀಣ ಮತ್ತು ಕೃಷಿ ಅಭಿವೃದ್ಧಿಗೆ ಪೂರಕವಾಗಿ ಬ್ಯಾಂಕುಗಳು ಹೇಗೆ ಕೆಲಸ ಮಾಡಬಹುದು ಎನ್ನುವುದನ್ನು ಅಧ್ಯಯನ ಮಾಡಿ ಶಿಫಾರಸು ಮಾಡಲು ಖ್ಯಾತ ಅರ್ಥಶಾಸ್ತ್ರಜ್ಞ ಡಾ. ಪೈ ಪಣಂದೀಕರ್ರವರ ಏಕ ಸದಸ್ಯ ಆಯೋಗ ರಚಿಸಲಾಯಿತು. ಆಗ ಮಾನ್ಯ ಮುರಾರ್ಜಿ ದೇಸಾಯಿಯವರು ಉಪ ಪ್ರಧಾನಿ ಹಾಗೂ ಅರ್ಥ ಮಂತ್ರಿಗಳಾಗಿದ್ದರು.

ದೇಶದ ಪ್ರಮುಖ ಬ್ಯಾಂಕುಗಳ ಸಾಲ ನೀಡಿಕೆಯ ಧೋರಣೆಗಳನ್ನು ಪರಿಶೀಲಿಸಿದ ಡಾ. ಪೈ ಪಣಂದೀಕರ್ರವರು ಬ್ಯಾಂಕುಗಳು ಆದ್ಯತಾ ರಂಗಕ್ಕೆ ಮುಖ್ಯವಾಗಿ ಕೃಷಿ ರಂಗಕ್ಕೆ ಹೆಚ್ಚಿನ ಬಂಡವಾಳ ಒದಗಿಸಬೇಕೆನ್ನುವ ಶಿಫಾರಸು ಮಾಡಿದರು. ಅವರ ವರದಿಯಲ್ಲಿ ಈ ರೀತಿ ಬ್ಯಾಂಕುಗಳ ಸಾಮಾಜಿಕ ನಿಯಂತ್ರಣದ ಬಗ್ಗೆ ಪ್ರಸ್ತಾಪಿಸುತ್ತಾ, ‘‘ಎಲ್ಲಾ ಬ್ಯಾಂಕುಗಳೂ, ಸಿಂಡಿಕೇಟ್ ಬ್ಯಾಂಕಿನಂತೆ ತಮ್ಮ ಸಾಲ ಧೋರಣೆಯನ್ನು ರೂಪಿಸಿ ಕಾರ್ಯಗತಗೊಳಿಸಿದರೆ ಸಾಮಾಜಿಕ ನಿಯಂತ್ರಣ ಯಶಸ್ವಿಯಾಗುತ್ತದೆ’’ ಎಂದರು. ಇದು ಸಿಂಡಿಕೇಟ್ ಬ್ಯಾಂಕಿನಲ್ಲಿ ಶ್ರೀ ಟಿ.ಎ. ಪೈಯವರು ರೂಪಿಸಿದ ಧೋರಣೆಗಳ ಯಶಸ್ಸಿಗೆ ಸಿಕ್ಕಿದ ಅಪೂರ್ವ ಮಾನ್ಯತೆಯಾಗಿತ್ತು.

ಅನಂತರದ ದಿನಗಳಲ್ಲಿ ಬ್ಯಾಂಕುಗಳಿಗೆ ಸಾಮಾಜಿಕ ನಿಯಂತ್ರಣದ ಆದೇಶಗಳಿಗನುಗುಣವಾಗಿ ಕಾರ್ಯವೆಸಗಲು, ನಿರ್ದೇಶನ ನೀಡಲು ರಾಷ್ಟ್ರಮಟ್ಟದಲ್ಲಿ ‘‘ನ್ಯಾಶನಲ್ ಕ್ರೆಡಿಟ್ ಕೌನ್ಸಿಲ್’’ ರಚಿಸಲಾಯಿತು. 20 ಸದಸ್ಯರುಗಳಿದ್ದ ಈ ಪ್ರಭಾವೀ ಸಮಿತಿಯ ಸದಸ್ಯರಾಗಿ ಶ್ರೀ ಟಿ.ಎ. ಪೈಯವರನ್ನು ಆರಿಸಲಾಯಿತು. 1969 ಜುಲೈ 19ರಂದು ಬ್ಯಾಂಕುಗಳ ರಾಷ್ಟ್ರೀಕರಣವಾಯಿತು. ಅಲ್ಲಿಯವರೆಗೆ ಈ ಸಮಿತಿ ಆದ್ಯತಾ ರಂಗಕ್ಕೆ ಮತ್ತೂ ಕೃಷಿಗೆ ಬ್ಯಾಂಕುಗಳ ಬಂಡವಾಳ ಹರಿಯಲು ಉಪಯುಕ್ತ ಮತ್ತು ವ್ಯಾವಹಾರಿಕ ಸಲಹೆಗಳನ್ನು ನೀಡಿತು.

ರಾಷ್ಟ್ರೀಯ ಕೃಷಿ ಆಯೋಗದ ಸದಸ್ಯ

ಹಸಿರು ಕ್ರಾಂತಿಯಿಂದ ಆದ ಉತ್ಪಾದನಾ ಹೆಚ್ಚಳವನ್ನು ಮುಂದುವರಿಸಿಕೊಂಡು ಹೋಗಲು ಕೃಷಿ ಧೋರಣೆಗಳಲ್ಲಿ ಯಾವ ಬದಲಾವಣೆ ಅಗತ್ಯವೆನ್ನುವ ಕುರಿತು ವಿವರವಾದ ವರದಿ ನೀಡಲು 1970ರಲ್ಲಿ ‘‘ರಾಷ್ಟ್ರೀಯ ಕೃಷಿ ಆಯೋಗ’’ವನ್ನು ರಚಿಸಲಾಯಿತು. ನಿರೀಕ್ಷೆಯಂತೆ ಶ್ರೀ ಟಿ.ಎ. ಪೈಯವರನ್ನು ಸದಸ್ಯರನ್ನಾಗಿ ಮಾಡಲಾಯಿತು. ರಾಷ್ಟ್ರೀಯ ಕೃಷಿ ಆಯೋಗ ಉತ್ಪಾದನಾ ಹೆಚ್ಚಳವನ್ನು ಎಲ್ಲಾ ರಂಗಗಳಲ್ಲಿ ಸಾಧಿಸಲು ಅಗತ್ಯವಿರುವ ಬಂಡವಾಳ ಒದಗಿಸಲು ‘‘ಸಾಲ ನಿರೂಪಣಾ ನೀತಿಯನ್ನು’’ ಶಿಫಾರಸು ಮಾಡಲು ಒಂದು ಉಪಸಮಿತಿಯನ್ನು ಶ್ರೀ ಪೈಯವರ ಅಧ್ಯಕ್ಷತೆಯಲ್ಲಿ ರಚಿಸಿತು. 1970ರ ಆದಿಭಾಗದಲ್ಲಿ ಅವರು ಭಾರತೀಯ ಜೀವವಿಮಾ ನಿಗಮದ ಅಧ್ಯಕ್ಷರಾದ ಮೇಲೂ ಈ ಜವಾಬ್ದಾರಿಯನ್ನು ನಿರ್ವಹಿಸಿದರು ಮತ್ತು ಗ್ರಾಮೀಣ ಹಾಗೂ ಕೃಷಿ ಅಭಿವೃದ್ಧಿಗೆ ಬಂಡವಾಳ ನಿರಂತರ ಹರಿದು ಬರಲು ಒಂದು ಪ್ರತ್ಯೇಕ ವ್ಯವಸ್ಥೆ ಮಾಡಬೇಕೆಂದರು. ಅಲ್ಲದೆ ಸಾಲ ಮತ್ತು ಉತ್ಪಾದನೆಗೆ ಅಗತ್ಯವಿರುವ ವಿವಿಧ ಘಟಕ (Inputs)ಗಳನ್ನು ಹೊಂದಿಸಿಕೊಳ್ಳಲು ರೈತರು ಕಚೇರಿಯಿಂದ ಕಚೇರಿಗೆ ಅಲೆಯುವ ಬದಲು ಒಂದೇ ಕಡೆಯಿಂದ ಅವರ ಎಲ್ಲಾ ಅವಶ್ಯಕತೆಗಳೂ ಪೂರೈಸಲ್ಪಡಬೇಕೆನ್ನುವ ಹೊಸ ಕಲ್ಪನೆಯನ್ನು ತಂದರು. ಸಮಗ್ರ ಕೃಷಿ ಅಭಿವೃದ್ಧಿ ನೀತಿಯನ್ನು ಪ್ರತಿಪಾದಿಸಿ, ಸಾಲ ನೀಡುವ ಸಂಸ್ಥೆಗಳು ರೈತರಿಗೆ ಅವಶ್ಯವಿರುವ ಗೊಬ್ಬರ, ನೀರು ಯಾಂತ್ರೀಕರಣ ಪರಿಷ್ಕರಣೆ ಮತ್ತು ಮಾರುಕಟ್ಟೆಗಳ ಸೌಲಭ್ಯಗಳನ್ನು ಕಲ್ಪಿಸಲು ಮುಂದೆ ಬರಬೇಕು. ಇದಕ್ಕೆ ಅನುಗುಣವಾಗುವಂತೆ ರಾಷ್ಟ್ರಮಟ್ಟದಲ್ಲಿ ರಾಷ್ಟ್ರೀಯ ಕೃಷಿ ಅಭಿವೃದ್ಧಿ ಬ್ಯಾಂಕನ್ನು (Agriculture Development Bank of India) ಸ್ಥಾಪಿಸಬೇಕೆಂದರು. ಇದರ ಪರಿಣಾಮವಾಗಿ ಬ್ಯಾಂಕುಗಳಿಂದ ನಿಯಂತ್ರಿಸಲ್ಪಡಲು ‘‘ರೈತರ ಸೇವಾ ಸಹಕಾರಿ ಸಂಘ’’ (Farmers Service Co-operative Society)ಗಳನ್ನು ಆರಂಭಿಸಲು ಭಾರತ ಸರಕಾರ ಮತ್ತು ರಿಸರ್ವ್ ಬ್ಯಾಂಕು ಅನುಮತಿ ನೀಡಿದವು.

ಈ ಧೋರಣೆಯಂತೆ ದೇಶದಲ್ಲಿ ಪ್ರಥಮ ಬಾರಿಗೆ ಬ್ಯಾಂಕುಗಳಿಂದ ಪ್ರವರ್ತಿಸಿದ ರೈತ ಸೇವಾ ಸಹಕಾರಿ ಸಂಘ, ಮಣಿಪಾಲದ ಸಮೀಪ ಹಿಯಡ್ಕದಲ್ಲಿ ಅಸ್ತಿತ್ವಕ್ಕೆ ಬಂದಿತು. ಆಗ ಶ್ರೀ ಟಿ.ಎ. ಪೈಯವರು ಜೀವವಿಮಾ ನಿಗಮದ ಅಧ್ಯಕ್ಷರಾಗಿ ಅದ್ಭುತ ಸಾಧನೆ ಮಾಡಿ ಸೈ ಎನಿಸಿಕೊಂಡು ಭಾರತ ಸರಕಾರದಲ್ಲಿ ಒಬ್ಬ ಪ್ರಭಾವೀ ಮಂತ್ರಿಯಾಗಿದ್ದರು.

ಶ್ರೀ ಕೆ.ಕೆ. ಪೈ ಅವರು ಆಗ ಸಿಂಡಿಕೇಟ್ ಬ್ಯಾಂಕಿನ ಅಧ್ಯಕ್ಷರಾಗಿದ್ದರು. ಇವರ ಹಿರಿತನದಲ್ಲಿ ಪ್ರಥಮ ‘‘ಸಮಗ್ರ ಸಾಲ ನೀತಿಯ’’ ಪ್ರಯೋಗವನ್ನು ಅಕ್ಟೋಬರ್ 2 ಗಾಂಧಿ ಜಯಂತಿಯ ದಿನದಂದು ಕೇಂದ್ರ ಮಂತ್ರಿಗಳಾದ ಶ್ರೀ ವೈ.ಬಿ. ಚವ್ಹಾಣರು ಹಿರಿಯಡಕದ ಶ್ರೀ ವೀರಭದ್ರ ಸ್ವಾಮಿಯ ಸನ್ನಿಧಿಯಲ್ಲಿ ಉದ್ಘಾಟಿಸಿದರು. ನಾಡಿನ ಕೃಷಿ ಅಭ್ಯುದಯಕ್ಕೆ ಇದೊಂದು ಸ್ಮರಣೀಯ ಕೊಡುಗೆಯಾಗಿತ್ತು.

ಗೋಬರ್ ಗ್ಯಾಸ್ಗೆ ಸಹಕಾರ

1973ರಲ್ಲಿ ಗ್ರಾಮೀಣ ಜೀವನಕ್ಕೆ ಬಹು ಉಪಯುಕ್ತವಾದ ಗೋಬರ್ ಗ್ಯಾಸ್ ಸ್ಥಾವರಗಳನ್ನು ಕಟ್ಟಲು ಶ್ರೀ ಕೆ.ಕೆ. ಪೈಗಳ ಅಧ್ಯಕ್ಷತೆಯಲ್ಲಿ ಸಿಂಡಿಕೇಟ್ ಬ್ಯಾಂಕು ಒಂದು ಸಾಲ ಯೋಜನೆ ರೂಪಿಸಿತು. ಆದರೆ ಇದಕ್ಕೆ ರಿಸರ್ವ್ ಬ್ಯಾಂಕು ಮನ್ನಣೆ ನೀಡಲಿಲ್ಲ. ಸಗಣಿಯಿಂದ ಉತ್ಪಾದಿಸಲ್ಪಡುವ ಮಿಥೇನ್ ಗ್ಯಾಸ್ ಉರುವಲಾಗಿ ಉಪಯೋಗವಾದರೆ ಉಪವಸ್ತುವಾಗಿ ಹೊರಬರುವ ಗಂಜಳ ಉತ್ತಮ ಗೊಬ್ಬರವಾಗುವುದನ್ನು ಪ್ರತಿಪಾದಿಸಲಾಗಿತ್ತು. ಆದರೆ ಇಲ್ಲಿ ನೇರವಾಗಿ ಹೆಚ್ಚಿನ ಆದಾಯ ಬರುವುದಿಲ್ಲ. ಹಾಗಾಗಿ ಸಾಲ ತೀರಿಸಲು ತೊಂದರೆಯಾಗಬಹುದೆಂಬುದು ರಿಸರ್ವ್ ಬ್ಯಾಂಕಿನ ಅಭಿಮತ. ಈ ವಿಷಯವನ್ನು ಶ್ರೀ ಟಿ.ಎ. ಪೈಗಳ ಗಮನಕ್ಕೆ ತಂದಾಗ ಅವರು ಒಂದು ಪರಿಹಾರ ಸೂಚಿಸಿದರು. ಅಕ್ಟೋಬರ್ನಲ್ಲಿ ಮಣಿಪಾಲಕ್ಕೆ ಬರಲಿರುವ ಅರ್ಥಮಂತ್ರಿ ಚವ್ಹಾಣರಿಂದ ಈ ಯೋಜನೆಯ ಉದ್ಘಾಟನೆ ಮಾಡಿಸುವಂತೆ ಸಲಹೆ ನೀಡಿದರು. ಗೋಬರ್ ಗ್ಯಾಸ್ ಸ್ಥಾವರನ್ನು ಸ್ಥಾಪಿಸುವುದರಿಂದ ಗ್ರಾಮೀಣ ಜನತೆಯ ಇಂಧನ ಸಮಸ್ಯೆಯನ್ನು ನೀಗಿಸಬಹುದು ಮತ್ತು ಅದರಿಂದ ಉತ್ಪತ್ತಿಯಾಗುವ ಗೊಬ್ಬರದಿಂದ ಹೆಚ್ಚು ಬೆಳೆ ಬೆಳೆಯುವುದೆಂಬ ವಾಸ್ತವಿಕ ಸತ್ಯವನ್ನು ಶ್ರೀ ಪೈಗಳು ಶೀಘ್ರದಲ್ಲಿ ಗ್ರಹಿಸಿದರು. ಅವರ ಸಲಹೆಯಂತೆ 1973 ಅಕ್ಟೋಬರ್ 3ನೇ ತಾರೀಕು ಸನ್ಮಾನ್ಯ ಅರ್ಥಮಂತ್ರಿ ಶ್ರೀ ವೈ.ಬಿ. ಚವ್ಹಾಣ್ ಅವರು ಸಿಂಡಿಕೇಟ್ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ಗೋಬರ್ ಗ್ಯಾಸ್ ಕಟ್ಟಲು ಆರ್ಥಿಕ ನೆರವು ನೀಡುವ ಸಿಂಡಿಕೇಟ್ ಬ್ಯಾಂಕಿನ ಸ್ಕೀಮನ್ನು ಸಾಂಕೇತಿಕವಾಗಿ ಉದ್ಘಾಟಿಸಿದರು. ನಂತರ ಇದಕ್ಕೆ ಸರಕಾರದ ಮನ್ನಣೆ ದೊರೆತು ಬದಲಿ ಇಂಧನ ವ್ಯವಸ್ಥೆಗೆ ದೊಡ್ಡ ಕೊಡುಗೆಯಾಯಿತು.

ಜಿಲ್ಲೆಯಲ್ಲಿ ಕ್ಷೀರ ಕ್ರಾಂತಿ

ಸಣ್ಣ ಹಿಡುವಳಿದಾರರೇ ಹೆಚ್ಚಾಗಿರುವ ದ.ಕ. ಜಿಲ್ಲೆಯಲ್ಲಿ ಹಾಲಿನ ಉತ್ಪಾದನೆಯಿಂದ ಗ್ರಾಮೀಣ ಜನತೆಗೆ ಆರ್ಥಿಕ ಶಕ್ತಿ ತುಂಬಬಹುದು ಎಂಬುದನ್ನು ಶ್ರೀ ಪೈಯವರು ಪ್ರತಿಪಾದಿಸಿದರು. ಆನಂದದಲ್ಲಿರುವ ‘‘ಅಮುಲ್ ಮಾದರಿ’’ಯ ಸಹಕಾರಿ ಸಂಘಗಳನ್ನು ಸ್ಥಾಪಿಸಿ ತನ್ಮೂಲಕ ಹಾಲಿನ ಉತ್ಪಾದನೆ, ಸಂಗ್ರಹಣೆ ಮತ್ತು ವಿತರಣೆಗೆ ‘‘ಕೆನರಾ ಮಿಲ್ಕ್ ಯೂನಿಯನ್’’ ಸಂಘಟಿಸಲು ಪ್ರೇರಣೆ ನೀಡಿದರು. ಮಣಿಪಾಲದಲ್ಲಿ ಆರಂಭಗೊಂಡ ಈ ಸಂಸ್ಥೆಗೆ ಎಲ್ಲಾ ರೀತಿಯ ಪ್ರೋತ್ಸಾಹ ಮತ್ತು ಮಾರ್ಗದರ್ಶನ ನೀಡಿದರು. ತನ್ನ ಮಿತ್ರ ಅಮುಲ್ ಸ್ಥಾಪಕ ಕ್ಷೀರ ಕ್ರಾಂತಿಯ ರೂವಾರಿ ಡಾ. ಕುರಿಯನ್ರ ಸಹಕಾರದಿಂದ ಹಳ್ಳಿಗಳಲ್ಲಿ ಹಾಲು ಉತ್ಪಾದಕರ ಸಹಕಾರೀ ಸಂಘಗಳನ್ನು ಸ್ಥಾಪಿಸಿದರು. ಇದರ ಕೇಂದ್ರ ಬಿಂದುವಾಗಿ ಮಣಿಪಾಲದಲ್ಲಿ ಹಾಲು ಸಂಸ್ಕರಣಾ ಘಟಕ ಅಸ್ತಿತ್ವಕ್ಕೆ ಬಂದಿತು. 1975ರ ಮಧ್ಯಭಾಗದಲ್ಲಿ ಆರಂಭಗೊಂಡ ಈ ಪ್ರಯತ್ನ ಕರ್ನಾಟಕದಲ್ಲಿಯೇ ಒಂದು ಆದರ್ಶ ಸಂಸ್ಥೆಯಾಗಿ ಬೆಳೆಯುತ್ತಿತ್ತು. ಆಗ ಶ್ರೀ ಪೈಯವರು ಕೇಂದ್ರ ಸರಕಾರದಲ್ಲಿ ಉದ್ದಿಮೆಯ ಮಂತ್ರಿಯಾಗಿದ್ದರು. ಯೂನಿಯನ್ನ ಕಾರ್ಯಾಚರಣೆ ಸ್ವಲ್ಪ ಹಿನ್ನಡೆ ಪಡೆದಾಗ ತಾನೇ ಅದರ ಅಧ್ಯಕ್ಷರಾಗಿದ್ದರು. ಈ ಅರ್ಹತೆ ಪಡೆಯಲು ಮನೆಯಲ್ಲಿ ಮಿಶ್ರ ತಳಿಯ ಜಾನುವಾರು ಸಾಕಣೆ ಆರಂಭಿಸಿದರು. ಹಳ್ಳಿಗಲ್ಲಿ ಸಂಚರಿಸಿ ಸಹಕಾರಿ ಸಂಘಗಳನ್ನು ಸಂಘಟಿಸಿದರು. ಮುಖ್ಯವಾಗಿ ಮಹಿಳೆಯರನ್ನು ಇದರಲ್ಲಿ ತೊಡಗಿಸಲಾಯಿತು.

ಜಾನುವಾರು ತಳಿ ಅಭಿವೃದ್ಧಿಗಾಗಿ ಕೃತಕ ಗರ್ಭಧಾರಣೆಯ ತಂತ್ರವನ್ನು ಬಳಸುವ ಯೋಜನೆ ಹಾಕಿದರು. Liquid Nitrogen Containerಗಳ ಮೂಲಕ ಅಲ್ಲಲ್ಲಿ ಕೃತಕ ಗರ್ಭಧಾರಣೆಯ ವ್ಯವಸ್ಥೆ ಮಾಡಲಾಯಿತು. ಹಾಲು ಉತ್ಪಾದಕರ ಸಹಕಾರಿ ಸಂಘಗಳ ಕಾರ್ಯದರ್ಶಿಗಳಿಗೆ ತರಬೇತಿ ನೀಡಿ ಅವರಿಂದ ಈ ಕೆಲಸ ಮಾಡುವ ಜವಾಬ್ದಾರಿ ವಹಿಸಿದರು. 1980ರಲ್ಲಿ ರಾಜ್ಯದಲ್ಲೇ ಪ್ರಥಮ ಎನ್ನಬಹುದಾದ ಮಿಶ್ರತಳಿಯ ದನಗಳನ್ನು ಸೃಷ್ಟಿಸಲು ಪ್ರಥಮವಾಗಿ ಕೃತಕ ಗರ್ಭಧಾರಣಾ ಕೇಂದ್ರವನ್ನು ಶಂಕರನಾರಾಯಣದಲ್ಲಿ ತಾವೇ ಉದ್ಘಾಟಿಸಿದರು. ಡಾ. ರಾಘವೇಂದ್ರ ಉರಾಳ ಹಾಗೂ ಸಿಂಡಿಕೇಟ್ ಬ್ಯಾಂಕಿನ ಡಾ. ಮಂಜುನಾಥ್ ಮತ್ತು ಡಾ. ದೀಕ್ಷಿತರು ಇದರ ಮೇಲ್ವಿಚಾರಣೆ ನೋಡಿಕೊಂಡರು. ಇದರ ಪರಿಣಾಮ ಅದ್ಭುತವಾಗಿತ್ತು. ಮಣಿಪಾಲದ ಡೈರಿ ಸ್ಥಾವರದಲ್ಲಿ ಒಂದು “Liquid Nitrogen Plant” ಸ್ಥಾಪನೆಯಾಯಿತು. 1981ರಲ್ಲಿ ಶ್ರೀ ಪೈಯವರು ತೀರಿಕೊಂಡ ನಂತರ ಶ್ರೀ ಕೆ.ಕೆ. ಪೈಯವರ ಅಧ್ಯಕ್ಷತೆಯಲ್ಲಿ ಮುನ್ನಡೆದ ಕೆನರಾ ಮಿಲ್ಕ್ ಯೂನಿಯನ್ 1985ರಲ್ಲಿ ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟದೊಂದಿಗೆ ವಿಲೀನಗೊಂಡು ದ.ಕ. ಜಿಲ್ಲಾ ಹಾಲು ಉತ್ಪಾದಕರ ಯೂನಿಯನ್ ಆಯಿತು. ಇಂದು ಇದು ರಾಜ್ಯದಲ್ಲೇ ಅತ್ಯುತ್ತಮ ಯೂನಿಯನ್ ಎಂದೇ ಪರಿಗಣಿಸಲ್ಪಟ್ಟಿದೆ. ಪ್ರತಿ ದಿನ ಒಂದು ಲಕ್ಷ ಲೀಟರ್ಗೂ ಮಿಕ್ಕಿ ಹಾಲು ಸಂಗ್ರಹಣೆ ಮಾಡಿ ಸುಮಾರು 10 ಲಕ್ಷ ರೂಪಾಯಿ ಗ್ರಾಮೀಣ ಪ್ರದೇಶಕ್ಕೆ ಹಾಲಿನ  ವೌಲ್ಯವಾಗಿ ಪಾವತಿಯಾಗುತ್ತಿದೆ. ಈ ಕೆಲಸದಲ್ಲಿ ಸಿಂಡಿಕೇಟ್ ಬ್ಯಾಂಕು ಹಾಗೂ ಡಾ. ನೈನಾನ್ ಥಾಮಸ್ ಅವರು ಬಹುದೊಡ್ಡ ಸಹಕಾರ ನೀಡಿದ್ದರು. ಜನಸಾಮಾನ್ಯರ ಒಳಿತಿಗಾಗಿ ಗ್ರಾಮೀಣ ಆರ್ಥಿಕ ಪುನಶ್ಚೇತನ ಗುರಿ ಹೊತ್ತು ಶ್ರೀ ಟಿ.ಎ. ಪೈಗಳವರು ಮಾಡಿದ ಈ ಕೆಲಸ ರಾಷ್ಟ್ರಕ್ಕೇ ಒಂದು ಮಾದರಿ. ಡಾ. ದುಭಾಷಿಯವರ ಮಾತಿನಲ್ಲಿ ಹೇಳುವುದಾದರೆ ‘‘ಟಿ.ಎ. ಪೈಗಳಂತಹ ಒಬ್ಬ ವ್ಯಕ್ತಿ ದೇಶದ ಅನೇಕ ಜವಾಬ್ದಾರಿ ಹುದ್ದೆಗಳನ್ನು ನಿರ್ವಹಿಸಿದವರು. ಕೇಂದ್ರ ಸರಕಾರದಲ್ಲಿ ಒಬ್ಬ ಪ್ರಭಾವೀ ಮಂತ್ರಿಯಾಗಿದ್ದವರು, ಅವರು ಒಂದು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷತೆ ವಹಿಸಿ, ಅಗತ್ಯವಿರುವ ನಾಯಕತ್ವ ನೀಡಿ ಇಂತಹ ಸಂಘಟನೆಯನ್ನು ಕಟ್ಟಿದ ಉದಾಹರಣೆ ದೇಶದಲ್ಲಿ ಬೇರೆಲ್ಲೂ ಸಿಗಲಾರದು.’’

ಕುಟುಂಬ ಆಧರಿತ ಅಭಿವೃದ್ಧಿ

ಗ್ರಾಮೀಣ ಅಭಿವೃದ್ಧಿ ಎಂದರೆ ರಸ್ತೆಗಳ ನಿರ್ಮಾಣ, ಕುಡಿಯುವ ನೀರಿನ ವ್ಯವಸ್ಥೆ, ಆರೋಗ್ಯ ರಕ್ಷಣೆ ಹಾಗೂ ಶಾಲೆಗಳು ಎಂಬ ಅಪರಿಪೂರ್ಣ ಕಲ್ಪನೆ ಸಾಮಾನ್ಯವಾಗಿದ್ದ ಕಾಲದಲ್ಲಿ ‘‘ಕುಟುಂಬ ಆಧರಿತ ಆರ್ಥಿಕ ಅಭಿವೃದ್ಧಿ’’ ಯೋಜನೆಗಳನ್ನು ಕೈಗೊಳ್ಳ ಬೇಕೆಂಬುದನ್ನು ಮೊದಲು ಹೇಳಿದವರು ಶ್ರೀ ಟಿ.ಎ. ಪೈಗಳವರು. ಕುಟುಂಬ ಒಂದರ ಸಂಪಾದನೆ ಹೆಚ್ಚಾದಾಗ ತಮಗೆ ಬೇಕಾಗುವ ಎಲ್ಲಾ ಸೌಲಭ್ಯಗಳನ್ನು ಅವರೇ ಒದಗಿಸಿ ಕೊಳ್ಳುತ್ತಾರೆ. ಆದುದರಿಂದ ಕುಟುಂಬವನ್ನು ಒಂದು ಘಟಕವನ್ನಾಗಿ ಇಟ್ಟುಕೊಂಡು ಆರ್ಥಿಕ ಅಭಿವೃದ್ಧಿ ಯೋಜನೆಗಳನ್ನು ಅವರ ಸಂಪನ್ಮೂಲಗಳಿಗನುಗಣವಾಗಿ ರೂಪಿಸಬೇಕೆಂದು ‘‘ಫಾರ್ಮ್ ಕ್ಲಿನಿಕ್’’ ಎನ್ನುವ ಕುಟುಂಬ ಆಧರಿತ ಗ್ರಾಮೀಣ ಅಭಿವೃದ್ಧಿ ಯೋಜನೆಯ ಸಲಹೆ ಮಾಡಿದರು. ಬಾರಕೂರು ಪಂಚಾಯತ್ ಕ್ಷೇತ್ರದಲ್ಲಿರುವ ಹೊಸಾಳ ಗ್ರಾಮದಲ್ಲಿ ಕೂಸಮ್ಮ ಶೆಡ್ತಿ ಎನ್ನುವ ಕೃಷಿ ಕಾರ್ಮಿಕಳ ಒಂದು ಎಕ್ರೆ ಹೊಲದಲ್ಲಿ 1973ರಲ್ಲಿ ಆರಂಭವಾದ ಈ ಪ್ರಯೋಗ 5 ವರ್ಷಗಳಲ್ಲಿ ಇಡೀ ಪಂಚಾಯತ್ನ 1600 ಕುಟುಂಬಗಳಿಗೆ ವಿಸ್ತರಿಸಲ್ಪಟ್ಟು ಒಂದು ಮಾದರಿಯೆನಿಸಿತು. ಸರಕಾರ, ರಿಸರ್ವ್ ಬ್ಯಾಂಕ್, ಇನ್ನಿತರ ಪ್ರತಿಷ್ಠಿತ ಮ್ಯಾನೇಜ್ಮೆಂಟ್ ಸಂಸ್ಥೆಗಳು ಈ ಪ್ರಯತ್ನವನ್ನು ಮೆಚ್ಚಿದವು. ಅಂದು ಬ್ಯಾಂಕಿನ ಅಧ್ಯಕ್ಷರಾಗಿದ್ದ ಶ್ರೀ ಕೆ.ಕೆ. ಪೈಯವರು ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸಿದರು. ಕೇಂದ್ರ ಮಂತ್ರಿಯಾಗಿದ್ದ ಶ್ರೀ ಕೆ.ಕೆ. ಪೈಯವರು ಕೆಲವು ಬಾರಿ ಭೇಟಿ ನೀಡಿ ಬ್ಯಾಂಕ್ ಸಿಬ್ಬಂದಿಯನ್ನು ಹುರಿದುಂಬಿಸಿದರು. ಈ ಮಾದರಿ ಮುಂದೆ ‘‘ಸಮಗ್ರ ಗ್ರಾಮೀಣ ಅಭಿವೃದ್ಧಿ’’ (Integrated Rural Development Programme IRDP) ಎಂದು ರಾಷ್ಟ್ರಾದ್ಯಂತ ಅನುಷ್ಠಾನಕ್ಕೆ ಬಂತು.

ಸರ್ವಾಂಗೀಣ ಅಭಿವೃದ್ಧಿ ಯೋಜನೆ

1980ರಲ್ಲಿ ಶ್ರೀ ಪೈಯವರು ಉಡುಪಿ ತಾಲೂಕಿನ 51 ಹಿಂದುಳಿದ ಗ್ರಾಮಗಳನ್ನು ಆರಿಸಿಕೊಂಡು ತಮ್ಮ ನೇರ ಮಾರ್ಗದರ್ಶನದಲ್ಲಿ ‘‘ಕುಟುಂಬ ಆಧಾರಿತ ಆರ್ಥಿಕ ಯೋಜನೆ’’ಗಳನ್ನು ಅಳವಡಿಸುವ ಒಂದು ಮಾದರಿ ಕಾರ್ಯಕ್ರಮವನ್ನು ರೂಪಿಸಿದರು. ಪ್ರತಿ ಎರಡು ಗ್ರಾಮಗಳಿಗೆ ಸುಮಾರು 500 ಕುಟುಂಬಗಳ ಮೇಲ್ವಿಚಾರಣೆ ನೋಡಿಕೊಳ್ಳಲು ಒಬ್ಬ ಕ್ಷೇತ್ರ ಸಹಾಯಕನನ್ನು ನೇಮಿಸಿಕೊಳ್ಳಲಾಯಿತು. ಸಿಂಡಿಕೇಟ್ ಬ್ಯಾಂಕ್ ಮತ್ತು ಮಣಿಪಾಲ ಇಂಡಸ್ಟ್ರಿಯಲ್ ಟ್ರಸ್ಟ್ನ ಸಹಕಾರದೊಂದಿಗೆ ಕಾರ್ಯಗತಗೊಳಿಸಲ್ಪಟ್ಟ ಈ ಯೋಜನೆಯಡಿಯಲ್ಲಿ ಸುಮಾರು 10 ಸಾವಿರ ಕುಟುಂಬಗಳನ್ನು ಅಳವಡಿಸಿಕೊಂಡು ಅವರವರ ಸಂಪನ್ಮೂಲಗಳಿಗನುಗುಣವಾಗಿ ವೈಯಕ್ತಿಕ ಹಿಡುವಳಿ (Farm Plan)ಗಳನ್ನು ತಯಾರಿಸಲಾಯಿತು. ಸಣ್ಣ ಹಿಡುವಳಿಗಳ ಸಮರ್ಪಕ ನಿರ್ವಹಣೆ (Efficient Management Techniques for small Holdings)ಯ ತತ್ವದ ಆಧಾರದಲ್ಲಿ ಪ್ರತಿಯೊಂದು ಹಿಡುವಳಿ, ಮಾನವ ಶಕ್ತಿಯನ್ನು ಉಪಯೋಗಿಸಿಕೊಂಡು ಹೆಚ್ಚು ಉತ್ಪಾದನೆ ತೆಗೆಯುವ ತಂತ್ರಗಳನ್ನು ರೂಪಿಸಲಾಯಿತು. ಇದರ ಅನುಷ್ಠಾನಕ್ಕೆ ಅಗತ್ಯವಿರುವ ಸಾಲ ಸೌಲಭ್ಯ, ತರಬೇತಿ ಮಾಹಿತಿಗಳನ್ನು ಒದಗಿಸಿ ಸಾಧ್ಯತೆಯ ಪರಿಮಿತಿಯಲ್ಲಿ ಸಂಪಾದನೆಯನ್ನು ಹೆಚ್ಚಿಸುವ ಪ್ರಯತ್ನ ನಡೆಯಿತು. ಆರ್ಥಿಕ ಯೋಜನೆಗಳಲ್ಲದೆ ಅವರ ಆರೋಗ್ಯ, ನೈರ್ಮಲ್ಯ, ವಸತಿ, ಮಕ್ಕಳ ವಿದ್ಯಾಭ್ಯಾಸ, ವಯಸ್ಕರ ಶಿಕ್ಷಣ ಹೀಗೆ ಒಂದು ಕುಟುಂಬದ ಸರ್ವಾಂಗೀಣ ಅಭಿವೃದ್ಧಿಗೆ ಈ ಕಾರ್ಯಕ್ರಮ ನೆರವಾಯಿತು. 1981ರಲ್ಲಿ ಶ್ರೀ ಟಿ.ಎ. ಪೈಗಳು ದೈವಾಧೀನರಾದ ನಂತರ ಸಿಂಡಿಕೇಟ್ ಬ್ಯಾಂಕಿನ ಹಿರಿತನದಲ್ಲಿ 1985ರ ವರೆಗೆ ನಡೆದ ಈ ಯೋಜನೆ ಈ ಕುಟುಂಬಗಳ ಆರ್ಥಿಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಮಹತ್ತರ ಕೊಡುಗೆ ನೀಡಿತು. ಹೀಗೆ ಸಮಗ್ರ ಗ್ರಾಮೀಣ ಅಭಿವೃದ್ಧಿಯ ಕಲ್ಪನೆಗೆ ಒಂದು ಮಾದರಿಯು ಶ್ರೀ ಟಿ.ಎ. ಪೈಗಳ ನೇತೃತ್ವದಲ್ಲಿ ತಯಾರಾಯಿತು.

ಸ್ವಂತ ಉದ್ಯೋಗಕ್ಕೆ ಪ್ರೇರಣೆ

ಯುವಕ ಯುವತಿಯರಿಗೆ ಸ್ವಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಶ್ರೀ ಟಿ.ಎ. ಪೈಗಳವರ ಕೊಡುಗೆ ಬಹಳ ದೂರದೃಷ್ಟಿಯಿಂದ ಕೂಡಿತ್ತು. 1969ರಲ್ಲಿ ಸಿಂಡಿಕೇಟ್ ಬ್ಯಾಂಕಿನಲ್ಲಿ ದೇಶದಾದ್ಯಂತ 300 ಕ್ಲಾರ್ಕ್ ಕೆಲಸಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದಂದು ಸುಮಾರು ಒಂದು ಲಕ್ಷದ ಐವತ್ತು ಸಾವಿರ ಅರ್ಜಿಗಳು ಉದ್ಯೋಗಾಕಾಂಕ್ಷಿಗಳಿಂದ ಬಂದಿದ್ದವು. ನಿರುದ್ಯೋಗ ಸಮಸ್ಯೆಯ ಆಳದ ಅರಿವು ಇದರಿಂದ ಶ್ರೀ ಪೈಯವರಿಗೆ ತಿಳಿದು ತುಂಬಾ ಸಂಕಟಪಟ್ಟರು. ಬ್ಯಾಂಕು 300 ಜನರಿಗೆ ಮಾತ್ರ ಕೆಲಸ ಕೊಡಲು ಸಾಧ್ಯ. ಆದುದರಿಂದ 1,49,700 ಮಂದಿಯನ್ನು ನಿರಾಶೆಗೊಳಿಸ ಬೇಕಾಗುವುದೆಂದು ಮರುಗಿದರು. ವಿದ್ಯಾವಂತರಿಗೆ ತಿಂಗಳ ಸಂಬಳ ತರುವ ಉದ್ಯೋಗದ ಬದಲು ಸ್ವಂತ ಉದ್ಯೋಗ ಮಾಡಲು ಮನವೊಲಿಸುವ ಯೋಜನೆಯೊಂದನ್ನು ಬ್ಯಾಂಕಿನ ಮೂಲಕ ರೂಪಿಸಿದರು. ಪರಿಣಾಮ ‘‘ಸಿಂಡಿಕೇಟ್ ಸ್ವಉದ್ಯೋಗ ಯೋಜನೆ’’ (Self Employment Clinics) ಇದರಂತೆ ದ.ಕ. ಜಿಲ್ಲೆಯಲ್ಲಿ ಬ್ಯಾಂಕಿನ ಶಾಖೆಗಳ ಮೂಲಕ ನಿರುದ್ಯೋಗಿ ಯುವಕ-ಯುವತಿಯರನ್ನು ಗುರುತಿಸಿ ಅವರನ್ನು ಶಾಖೆಗೆ ಕರೆಸಿ ಮಾತುಕತೆ ನಡೆಸುವ ಒಂದು ನಿರಂತರ ಕಾರ್ಯಕ್ರಮ ತಯಾರಿಸಲಾಯಿತು. ಶಾಖಾ ಅಧಿಕಾರಿಗಳಿಗೆ ಸಹಾಯ ಮಾಡಲು ಪ್ರಧಾನ ಕಚೇರಿಯ ಹಿರಿಯ ಅಧಿಕಾರಿಗಳು ಹಾಜರಿದ್ದು ಸ್ಥಳದಲ್ಲಿ ನಿರ್ಧಾರ ಕೈಗೊಳ್ಳುವಂತೆ ಮಾಡಲಾಯಿತು. ಈ ಪ್ರಯತ್ನದಡಿಯಲ್ಲಿ ಮೊದಲ ವರ್ಷ ಸುಮಾರು 1000 ಅಭ್ಯರ್ಥಿಗಳನ್ನು ಅಳವಡಿಸಲಾಯಿತು. ಸ್ವಂತ ಉದ್ಯೋಗಕ್ಕೆ ಮನಸ್ಸು ಮಾಡಿದವರೆಲ್ಲರಿಗೆ ಮಾರ್ಗದರ್ಶನ, ತರಬೇತಿ ಮತ್ತು ಸಾಲ ಸೌಲಭ್ಯಗಳನ್ನು ಒದಗಿಸಲಾಯಿತು. ಹೀಗೆ ಬ್ಯಾಂಕೊಂದು ನಿರುದ್ಯೋಗ ಸಮಸ್ಯೆಯ ಪರಿಹಾರಕ್ಕೆ ಮಾಡಿದ ಪ್ರಥಮ ಪ್ರಯತ್ನ ಇದಾಗಿತ್ತು. ಮುಂದೆ ಸಿಂಡಿಕೇಟ್ ಬಾಂಕು ಈ ಪ್ರಯತ್ನವನ್ನು ಪ್ರತಿ ವರ್ಷ ಮುಂದುವರಿಸಿಕೊಂಡು ಹೋಗಿ ಇದಕ್ಕೊಂದು ಸಾಂಸ್ಥಿಕ ರೂಪು ಕೊಡುವಲ್ಲಿ ಯಶಸ್ವಿಯಾಯಿತು. ಎಳೆಯರ ಭವಿಷ್ಯವನ್ನು ಉತ್ತಮ ತಳಹದಿಯ ಮೇಲೆ ಕಟ್ಟಲು ಮಾಡಿದ ಈ ಕೆಲಸ ಶ್ರೀ ಟಿ.ಎ. ಪೈಗಳವರ ಕರ್ತೃತ್ವ ಶಕ್ತಿ, ದೂರಾಲೋಚನೆಗೆ ಹಿಡಿದ ಕೈಗನ್ನಡಿಯಾಗಿತ್ತು. ಮುಂದೆ ಅವರು LICಯ ಅಧ್ಯಕ್ಷರಾಗಿ, ಕೇಂದ್ರ ಸರಕಾರದ ಮಂತ್ರಿಯಾಗಿರುವಾಗಲೂ ಇದರ ಬಗ್ಗೆ ಕಾಳಜಿ ವಹಿಸಿ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದರು.

ಜಿಲ್ಲೆಗೆ ಸಕ್ಕರೆ ಕಾರ್ಖಾನೆ

1973ರಲ್ಲಿ ಅವರು ಕೇಂದ್ರ ಉದ್ದಿಮೆ ಮಂತ್ರಿಗಳಾಗಿದ್ದರು. ಜಿಲ್ಲೆಯ ನಾಯಕರುಗಳು ಸಹಕಾರಿ ರಂಗದಲ್ಲಿ ಸಕ್ಕರೆ ಕಾರ್ಖಾನೆಯೊಂದನ್ನು ಸ್ಥಾಪಿಸಲು ಬೇಡಿಕೆ ಮಂಡಿಸಿದರು. ರೈತರಿಗೆ ವರದಾನವಾಗಬಲ್ಲ ಇಂತಹ ಯೋಜನೆಯ ಬಗ್ಗೆ ಅವರಿಗೆ ಆಸಕ್ತಿಯಿದ್ದರೂ ನಿರಂತರವಾಗಿ ಅದನ್ನು ನಡೆಸಿಕೊಂಡು ಹೋಗುವ ಸಾಧ್ಯತೆಯ ಬಗ್ಗೆ ವಿವಾದವಿತ್ತು. ಆದರೂ ಜಿಲ್ಲೆಯ ಜನರಿಗೆ ಅನುಕೂಲವಾಗಲೆಂದು ಕೂಡಲೇ ದ.ಕ. ಜಿಲ್ಲಾ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಸ್ಥಾಪಿಸಲು ಅನುಮತಿ ಕೊಡಿಸಿದರು.

ಗ್ರಾಮೀಣ ಜೀವನದ ಬಗ್ಗೆ ಆಸಕ್ತಿ

ವಿದ್ಯಾವಂತ ಯುವಕರು ಉದ್ಯೋಗಕ್ಕೆ ಸೇರಿದವರು ತಮ್ಮ ಹಳ್ಳಿಯ ಅಭಿವೃದ್ಧಿಗಾಗಿ ಸ್ವಲ್ಪವಾದರೂ ಕೊಡುಗೆ ನೀಡಬೇಕೆಂಬುದು ಅವರ ಧೋರಣೆಯಾಗಿತ್ತು. ಕೃಷಿ ರಂಗದ ವಿಪುಲ ಸಾಧ್ಯತೆಗಳನ್ನು ಅವರು ಮನಗಂಡಿದ್ದರು. ಮಕ್ಕಳಿಗೆ ಕೃಷಿ, ಹೈನುಗಾರಿಕೆ, ಕೋಳಿ ಸಾಕಾಣಿಕೆ, ಗ್ರಾಮಗಳಲ್ಲಿ ವಿವಿಧ ಸೇವೆಗಳನ್ನು ಒದಗಿಸಿ ಸ್ವಉದ್ಯೋಗ ಮಾಡುವುದು ಇವುಗಳ ಬಗೆಗೆ, ಬ್ಯಾಂಕಿನ ಮೂಲಕ ಆರ್ಥಿಕ ಸಹಾಯ ಮಾಡಿ ಪ್ರೇರೇಪಿಸಿದರೆ ಹಳ್ಳಿಗಳಲ್ಲಿ ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸಬಹುದೆಂದು ಅವರು ಬಲವಾಗಿ ನಂಬಿದ್ದರು. ಇದರಿಂದಾಗಿ ಸಿಂಡಿಕೇಟ್ ಬ್ಯಾಂಕು ಗ್ರಾಮೀಣ ಪ್ರದೇಶದಲ್ಲಿ ಎಲ್ಲಾ ರೀತಿಯ ಚಟುವಟಿಕೆಗಳಿಗೆ ಸಾಲ ನೀಡುವ ಧೋರಣೆಯನ್ನು ಪೈಗಳ ಮಾರ್ಗದರ್ಶನದಲ್ಲಿ ಮಾಡಿತ್ತು.

ಒಟ್ಟಿನಲ್ಲಿ 1960 ಮತ್ತು 70ರ ದಶಕದಲ್ಲಿ ಬ್ಯಾಂಕಿನ ಮೂಲಕ ಗ್ರಾಮಗಳಲ್ಲಿ ಸಮಗ್ರ ಆರ್ಥಿಕ ಪ್ರಗತಿ ಸಾಧಿಸುವ ಅನ್ವೇಷಕ ಯೋಜನೆಗಳನ್ನು ಶ್ರೀ ಪೈಗಳವರು ರೂಪಿಸಿದರು. ಪ್ರಾಯಶಃ ಇದೊಂದು ಅದ್ವಿತೀಯ ಸಾಧನೆಯಾಗಿತ್ತು. ಇಂದು ದ.ಕ. ಜಿಲ್ಲೆ ರಾಜ್ಯದಲ್ಲೇ ಒಂದು ಮಾದರಿ ಜಿಲ್ಲೆಯಾಗಿ ಅಭಿವೃದ್ಧಿ ಹೊಂದಿದ್ದರೆ ಈ ಯಶಸ್ಸಿನ ಸಿಂಹಪಾಲು ಶ್ರೀ ಟಿ.ಎ. ಪೈಗಳಿಗೆ ಸಲ್ಲಬೇಕು. ಅಂದು ಅವರು ಹೇಳಿದ ಮಾತುಗಳು, ಹಾಕಿದ ಯೋಜನೆಗಳು ಇಂದಿಗೂ ಪ್ರಸ್ತುತ. ಜನಜೀವನವನ್ನು ಹಸನುಗೊಳಿಸಲು ಸದಾ ಚಿಂತಿಸಿ ತನಗಿರುವ ಅಧಿಕಾರ ಬಲದಿಂದ ಅಗತ್ಯ ಯೋಜನೆಗಳನ್ನು ರೂಪಿಸುವ ಅವರ ಪರಿಶ್ರಮ ಅಗಾಧ. ಆ ಶಕ್ತಿ ವೈಶಿಷ್ಟ್ಯಪೂರ್ಣವಾದದು. ಪ್ರತಿಯೊಂದು ಕೆಲಸವನ್ನು ಪ್ರಾಮಾಣಿಕ ಕಳಕಳಿಯಿಂದ ಜನಸಮುದಾಯದ ಒಳಿತಿಗಾಗಿ ಮಾಡುವುದನ್ನು ಅವರಂತೆ ಅಳವಡಿಸಿಕೊಂಡು ಕಾರ್ಯೋನ್ಮುಖ ರಾದವರು ವಿರಳ. ಹಾಗೆಂದೇ 1975ರಲ್ಲಿ ಸಿಂಡಿಕೇಟ್ ಬ್ಯಾಂಕಿನ ಸ್ವರ್ಣ ಮಹೋತ್ಸವದಲ್ಲಿ ಭಾಗವಹಿಸಿದ ಅಂದಿನ ಕರ್ನಾಟಕದ ಮುಖ್ಯಮಂತ್ರಿ ಹಿರಿಯ ನಾಯಕ ಶ್ರೀ ರಾಮಕೃಷ್ಣ ಹೆಗಡೆಯವರು ‘‘ಶ್ರೀ ಟಿ.ಎ. ಪೈಗಳಂತಹ ದೂರದೃಷ್ಟಿಯ, ಸಾಮಾಜಿಕ ಕಳಕಳಿಯ ಪ್ರಜ್ಞಾವಂತ ನಾಯಕರು ಶತಮಾನಕ್ಕೊಮ್ಮೆ ಹುಟ್ಟುತ್ತಾರೆ’’ ಎಂದರು. ಇದು ನಿಜವಾಗಿಯೂ ಉತ್ಪ್ರೇಕ್ಷೆಯಾಗಿರಲಿಲ್ಲ.

ಜೀವ ವಿಮಾ ನಿಗಮ

ಟಿ.ಎ. ಪೈ ಅವರು 1970ರಲ್ಲಿ ಜೀವ ವಿಮಾ ನಿಗಮದ ಅಧ್ಯಕ್ಷರಾಗಿಯೂ ಅದಕ್ಕೆ ಹೊಸ ಜೀವ ಕೊಟ್ಟವರು. ಪೈಗಳ ಯೋಗ್ಯತೆ ಕಾರಣಕ್ಕೇ ಸರಕಾರದಿಂದ ತಾನಾಗಿಯೇ ಬಂದ ಹಿರಿ ಹುದ್ದೆ ಅದು. ಗುಟ್ಟಿನ ವಿಷಯ ಏನೆಂದರೆ ಆಗ ನಿಗಮದ ಸ್ಥಿತಿ ಶೋಚನೀಯವಾಗಿತ್ತು. ಇದನ್ನು ಜಾಣ್ಮೆಯಿಂದ, ತಾಳ್ಮೆಯಿಂದ ನಿಭಾಯಿಸಲಬಲ್ಲವರು ಟಿ.ಎ. ಪೈ ಒಬ್ಬರೇ ಎಂದು ನಿರ್ಧರಿಸಿ ಅರಸಿಕೊಂಡು ಬಂದ ಪೀಠ ಅದು. ಪೈಗಳು ಅಧೀರರಾಗಲಿಲ್ಲ. ಸಂಸ್ಥೆಯ ಒಳಗಿಳಿದು ನೋಡಿದರು. ಒಳ ಹೊಕ್ಕ ಮೂರೇ ತಿಂಗಳಲ್ಲಿ ಅಲ್ಲಿನ ಒಟ್ಟು ಸಮಸ್ಯೆಗಳಿಗೆ ಪರಿಹಾರ ಮಾರ್ಗ ತೋರಿಸಿ ಸಂಘರ್ಷದ ವಾತಾವರಣಕ್ಕೆ ಮಂಗಳ ಹಾಡಿದರು. ಹಳೆ ಹಂತದವರಿಗೆ ಹೊರೆ ಆಗುವ ಹೆಚ್ಚುವರಿ ಪ್ರೀಮಿಯಮ್ಗಳನ್ನು ನಿಲ್ಲಿಸಿದರು. ಬಹು ವಿಧದ ಸುಧಾರಣೆಗಳಿಂದ ನಿಗಮ ಚೇತರಿಸಿಕೊಂಡಿತು. ನಿಗಮದ ಸ್ವೀಕೃತಿ ಪಾವತಿಯ ದಾಖಲೆ ಹೊರ ರಾಷ್ಟ್ರಗಳನ್ನೂ ನಿಬ್ಬೆರಗಾಗಿಸಿತು. ದೇಶದಲ್ಲಿ ಸ್ವಂತ ಮನೆಯುಳ್ಳವರು ಕಡಿಮೆ ಸಂಖ್ಯೆಯಲ್ಲಿರುವುದು ಮನಗಂಡು ಮನೆಗಳಿಗಾಗಿ ನಿಮಗದಿಂದ ಹಣದ ವ್ಯವಸ್ಥೆಯಾಗುವಂತೆ ನೋಡಿಕೊಂಡರು. ಇದರಿಂದಾಗಿ ಮನೆ ಕಂಡವರ ಸಂಖ್ಯೆಯೇನು ಸಣ್ಣದೇ? ಜೀವ ವಿಮಾ ನಿಗಮ ಜೀವಕಳೆಯಿಂದ ತುಂಬಿಕೊಂಡು ಈಗ ಅದು ದೇಶದ ದೊಡ್ಡ ನಿಧಿಯೇ ಆಗಿದೆ.

ಸಹಕಾರಿ ರಂಗ

ಸಹಕಾರವಿಲ್ಲದೇ ಹೋದರೆ ಸಾರವಿಲ್ಲ, ಏಳ್ಗೆಯಿಲ್ಲ ಎಂಬ ಬಗ್ಗೆ ಅಚಲರಾಗಿದ್ದ ಪೈ ಸಹಕಾರಿ ಆಂದೋಲನ ಹಾಗೂ ಸಹಕಾರಿ ಸಂಸ್ಥೆಗಳ ಬಗ್ಗೆ ಅಪಾರವಾದ ಉತ್ಸಾಹ ತೋರಿದ್ದರು. ಮೀನುಗಾರರ ಬವಣೆ ಕಂಡು ನೊಂದಿದ್ದ ಅವರು ಸಹಕಾರಿ ಸಂಘದಿಂದಲೇ ಅವರ ಅಭಿವೃದ್ಧಿ ಸಾಧ್ಯ ಎಂಬುದನ್ನು ಮನವರಿಕೆ ಮಾಡಿಕೊಟ್ಟರು. 1959ರಲ್ಲಿ ಉದ್ಯಾವರದಲ್ಲಿ ಕಟ್ಟಿದ ಮೀನುಗಾರರ ಸಹಕಾರಿ ಸಂಘಕ್ಕೆ ಮೀನುಗಾರರ ಮೊದಲ ಸಂಘವೆಂಬ ಪ್ರಚಾರ; ಪ್ರಾಶಸ್ತ್ಯ. 1962ರಲ್ಲಿ ಪೈಗಳೇ ಮುಂದಾಗಿ ಕಟ್ಟಿದ್ದು ದ.ಕ. ಜಿಲ್ಲಾ ಕೃಷಿ ಅಭಿವೃದ್ಧಿ ಸೊಸೈಟಿ. ಮಲ್ಪೆಯ ತೆಂಗಿನ ನಾರಿನ ಉತ್ಪನ್ನಗಳ ಸಹಕಾರಿ ಸಂಘ, ಕೆನರಾ ಹಾಲು ಉತ್ಪಾದಕರ ಯೂನಿಯನ್ ಕೂಡಾ ಪೈಗಳ ಶ್ರಮ, ಶ್ರದ್ಧೆಯ ಫಲವೇ.

ಸಚಿವ ಗಿರಿ

ಟಿ.ಎ. ಪೈ ಅವರು ಶಾಲಾ ಕಾಲೇಜು ದಿನಗಳಲ್ಲಿ ಬ್ಯಾಂಕ್ ಹುದ್ದೆ ಕನಸು ಕಾಣುತ್ತಿದ್ದಿರಬಹುದು. ಅದರ ಮೂಲಕ ಅಸಹಾಯಕರಿಗೆ ಹೇಗೆಲ್ಲಾ ಸಹಾಯ ಮಾಡಬಹುದು ಎಂಬ ಬಗ್ಗೆ ಚಿಂತಿಸುತ್ತಿದ್ದಿರಬಹುದು. ಆದರೆ ಅವರೆಂದೂ ನಿಗಮ, ಸಂಸತ್ತು, ಸಚಿವ ಗಿರಿ ಇತ್ಯಾದಿಯನ್ನು ಯೋಚಿಸುವುದೇನು ಊಹಿಸಿಯೂ ಇರಲಾರರು. ಆದರೂ ಅವರಿಗೆ ರಾಜಕೀಯ, ನಿಗಮ ಎಲ್ಲವೂ ಬೇಡವೆಂದರೂ ಒದಗಿ ಬಂದ ಬಾಂಧವ್ಯವೇ ಆದವು.

1952ರಲ್ಲಿ ತಮ್ಮ ಇಪ್ಪತ್ತೊಂಬತ್ತನೆಯ ವಯಸ್ಸಿನಲ್ಲಿಯೇ ಮದ್ರಾಸ್ ವಿಧಾನ ಸಭೆಯಲ್ಲಿ ಸದಸ್ಯರಾಗಿದ್ದವರು ಪೈಗಳು. ಕ್ಷೇತ್ರದ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ, ಅನವರತವಾಗಿ ದುಡಿದಿದ್ದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿಯೂ ತಮ್ಮ ಕಟ್ಟುವ ಶಕ್ತಿಯನ್ನು ಪ್ರದರ್ಶಿಸಿದ್ದರು. ಶಿಕ್ಷಕರ ಬಗ್ಗೆಯಂತೂ ಅಸಾಧಾರಣ ಗೌರವ ಹೊಂದಿದ್ದರು. ಅವರ ಸಮಸ್ಯೆ ಪರಿಹರಿಸುವುದಕ್ಕೆ ಸತತ ಹೆಣಗಾಡಿದ್ದರು. ಇದೆಲ್ಲ ಅಲ್ಲಿಂದ ಸುಮಾರು ಹತ್ತಾರು ವರುಷ ಇರಬಹುದು. ಅಷ್ಟೇ.

ಆಶ್ಚರ್ಯದ ಸಂಗತಿ ಎಂದರೆ 1972ರಲ್ಲಿ ಮತ್ತೆ ಟಿ.ಎ. ಪೈ ರಾಜಕೀಯ ರಂಗ ಪ್ರವೇಶಿಸಬೇಕಾಗಿ ಬಂದುದು! ಸ್ವತಃ ಇಂದಿರಾ ಗಾಂಧಿ ಅವರೇ ಆಹ್ವಾನಿಸಿದ್ದು, ರಾಜ್ಯ ಸಭೆಗೆ ಬರಮಾಡಿಕೊಂಡದ್ದು, ರೈಲ್ವೇ ಮಂತ್ರಿ ಸ್ಥಾನ ಕೊಟ್ಟು ಭರವಸೆ ವ್ಯಕ್ತಪಡಿಸಿದ್ದು – ಇವೆಲ್ಲವೂ ವಿಶೇಷಗಳೇ. ರಾಜಕೀಯ ರಂಗವೆಂದರೆ ಹಲವರಿಗೆ ಮೋಜು, ತೀಟೆ, ಏನೇನೆಲ್ಲ ಕಾರಸ್ಥಾನ ಮಾಡಿ ಅಲ್ಲಿ ಕಾಣಿಸಿಕೊಳ್ಳುವವರದೇ ಒಂದು ಕಪ್ಪು ಇತಿಹಾಸ. ಆದರೆ ‘ಒಲ್ಲೆ, ಒಲ್ಲೆ’ ಎನ್ನುವ ಟಿ.ಎ. ಪೈ ಅವರು ಇಲ್ಲೊಂದು ವಿಸ್ಮಯ! ಆದರೂ ಸರಕಾರಕ್ಕೆ ಇವರು ಬೇಕು. ಅದು ಮೂರು, ನಾಲ್ಕು ದಶಕಗಳ ಹಿಂದಿನ ಘಟನೆ. ಯೋಗ್ಯತೆಗೆ ಅಷ್ಟೊಂದು ಪುರಸ್ಕಾರ!

ರೈಲ್ವೇ ಖಾತೆಗೆ ಅನಂತ ಪೈ ಹೊಸ ಬೆಳಕಾದರು; ಹೊಸ ನೀರಾದರು. ಮಂಗಳೂರಿನಿಂದ ದೆಹಲಿಗೆ ನೇರ ರೈಲು ಮಾರ್ಗಕ್ಕೆ ಕಾರಣರಾದರು. ಕೊಂಕಣ ರೈಲ್ವೆಗೆ ತಾತ್ತ್ವಿಕವಾಗಿ ಸಮ್ಮತಿ ದೊರಕುವಂತೆ ಮಾಡಿದರು. ಇನ್ನೆಷ್ಟೋ ಹೊಸ ರೈಲ್ವೆ ಮಾರ್ಗಗಳ ರಚನೆಗೆ ಒಪ್ಪಿಗೆ ನೀಡಿದರು. ಸರಕು ಸಾಗಾಣಿಕೆಗೆ  ಸಂಬಂಧಿಸಿ ಹೆಚ್ಚು ಗಮನ ಹರಿಸಿದರು. ಇಷ್ಟೆಲ್ಲ ಮಾಡಿದ್ದು ಕೇವಲ ಏಳೇ ತಿಂಗಳುಗಳಲ್ಲಿ! ಏಕೆಂದರೆ ಸರಕಾರ ಅವರನ್ನು ಅದಾಗಲೇ ಉದ್ಯಮಗಳ ಸಚಿವರನ್ನಾಗಿ ವರ್ಗಾಯಿಸಿತ್ತು.

ಉದ್ಯಮ ಖಾತೆ ಇನ್ನೂ ಹೆಚ್ಚು ಜವಾಬ್ದಾರಿಯದ್ದು! ಆದ್ದರಿಂದಲೇ ಸರಕಾರ ಅಷ್ಟು ದಿಢೀರನೆ ಇಷ್ಟೊಂದು ಪ್ರಾಮುಖ್ಯವಾದ ಇಲಾಖೆಗೆ ಅವರನ್ನು ತಂದು ಕೂಡಿಸಿತ್ತು. ಆದರೆ ಟಿ.ಎ. ಪೈ ಎಲ್ಲಿ ಕೂಡಿರುತ್ತಾರೆ? ‘ಇಲ್ಲಿಯ ನಷ್ಟವನ್ನು ನಿಲ್ಲಿಸಬೇಕು. ಲಾಭಕ್ಕೆ ಪರ್ಯಾಯವಾಗಿಸಬೇಕು. ಅದಾಗದಿದ್ದರೆ ಅವಧಿಗೂ ಮೊದಲೇ ಹೊರಬರಬೇಕು. ಆದರೆ ಓಡಿ ಹೋಗುವುದಲ್ಲ. ಭಾರಿ ಇಂಜಿನಿಯರಿಂಗ್ ನಿಗಮದ ಅಧ್ಯಕ್ಷನಾಗಿಯಾದರೂ ಲಾಭಕ್ಕೆ ಸಿದ್ಧಗೊಳಿಸಬೇಕು. ಲಾಭ ತೋರಿಸಿಯೇ ತೋರಿಸಬೇಕು’ ಇದು ಅಲ್ಲಿ ಅವರು ತೊಟ್ಟ ಪ್ರತಿಜ್ಞೆ ಆಗಿತ್ತು. ಅವರು ಸಚಿವರಾಗಿದ್ದುಕೊಂಡೇ ಆಡಿದ್ದನ್ನು ಮಾಡಿ ತೋರಿಸಿದರು! ಪವಾಡವನ್ನೇ ಮಾಡಿ ಬಿಟ್ಟರು; ದೇಶದ ಕಣ್ಮಣಿ ಆದರು.

ಉದ್ಯಮ ರಂಗದ ತಲಸ್ಪರ್ಶಿ ಅಧ್ಯಯನದಿಂದ ಅವರು ಕಂಡುಕೊಂಡದ್ದು ಅಲ್ಲಿನ ಜಿಗುಟು ಕಟ್ಟಳೆಗಳು; ಅನಗತ್ಯ ಸಿಕ್ಕುಗಳು. ಅವುಗಳನ್ನು ರದ್ದುಗೊಳಿಸಿದರು. ಸುಲಭದಲ್ಲಿ ಯೋಜನೆಗಳು ಅನುಷ್ಠಾನಗೊಳ್ಳು ವಂತೆ ಕಾಳಜಿ ವಹಿಸಿದರು; ಕಾರ್ಯಪ್ರವೃತ್ತರಾದರು. ಅನಿವಾಸಿ ಭಾರತೀಯರೂ ಭಾರತದ ಉದ್ಯಮದಲ್ಲಿ ಹಣ ಹೂಡುವ ಸಿಟ್ಟಿನಲ್ಲಿ ಮನಸ್ಸು ಮಾಡುವಲ್ಲಿ ಸಫಲರಾದರು. ಇಲ್ಲಿಯೂ ನಷ್ಟದ ಮಾತು ದೂರವೇ ಹೋಯಿತು! 1974ರಲ್ಲಿ ಭಾರತ ಸರಕಾರದ ಕೈಗಾರಿಕಾ ಮತ್ತು ನಾಗರಿಕ ಸರಬರಾಜು ಸಚಿವರೂ ಆಗಿ ಆ ಖಾತೆಯನ್ನು ಸದೃಢಗೊಳಿಸುತ್ತಾರೆ; ದೇಶವನ್ನು ಬಲಿಷ್ಠವಾಗಿ ಕಟ್ಟಿಕೊಡುತ್ತಾರೆ.

1972ರಿಂದ 1977ರ ವರೆಗೂ ಭಾತ ಸರಕಾರದಲ್ಲಿ ಟಿ.ಎ. ಪೈಗಳು ಕಾರ್ಯಗತಗೊಳಿಸಿದ್ದು ವಿವರವಾಗಿ ದಾಖಲಾದರೆ ಅದೊಂದು ಬೃಹತ್ ಸಂಘವೇ ಆದೀತು! 1977ರಲ್ಲಿ ಪೈ ಅವರು ಉಡುಪಿ ಕ್ಷೇತ್ರದಿಂದ ಲೋಕಸಭೆಗೆ ಚುನಾಯಿತರಾದರು. ಆಗ ಕಾಂಗ್ರೆಸ್ಸಿಗೆ ವಿರೋಧಿ ಪಟ್ಟ. ಪೈಯವರು ಆ ಸ್ಥಾನದಿಂದಲೂ ದೇಶ ಹಿತ ಚಿಂತನೆಯನ್ನೇ ಮುಂದಿಟ್ಟುಕೊಂಡು ವಿಷಯ ಮಂಡಿಸುತ್ತಿದ್ದ ರೀತಿ ಇತರರಿಗೆ ಉಮೇದು ಆಗುತ್ತಿತ್ತು. ಅವರ ಸಂಯಮ, ಪ್ರತಿಪಾದಿಸುವಲ್ಲಿ ಕರಾರುವಾಕ್ಕುತನ, ಪ್ರಖರತೆ ಆದರ್ಶ ಆಗಿರುತ್ತಿತ್ತು. ಪೈ ಅವರು ಅತ್ಯುತ್ತಮ ವಾಗ್ಮಿ ಆಗಿದ್ದರು. ಇಂಗ್ಲೀಷ್, ಕನ್ನಡ ಎರಡು ಭಾಷೆಗಳಲ್ಲೂ ಅವರು ಆಕರ್ಷವಾಗಿ ಮಾತನಾಡುತ್ತಿದ್ದರು.

ತುರ್ತು ಪರಿಸ್ಥಿತಿಗೆ ಪ್ರತಿಭಟನೆ

ಪೈ ಅವರು ಕಾಂಗ್ರೆಸ್ಸನ್ನು, ಇಂದಿರಾ ಗಾಂಧಿ ಅವರನ್ನು ಬದ್ಧತೆಗೋಸ್ಕರವೇ ಹಚ್ಚಿಕೊಂಡಿದ್ದರು. ಅಲ್ಲಿಂದ ಬಂದ ಎಲ್ಲ ಗುರುತರ ಜವಾಬ್ದಾರಿಗಳನ್ನೂ ಅದೇ ಕಾರಣಕ್ಕೆ ಮನ್ನಿಸಿ ಅಲ್ಲೆಲ್ಲ ಕ್ರಾಂತಿ ಮಾಡಿದ್ದರು. ಶಾಂತಿ ತಂದಿದ್ದರು. ಹಾಗಂತ ಯಾವತ್ತೂ ಸ್ವಾಭಿಮಾನ, ಆತ್ಮಾಭಿಮಾನ ಬಿಟ್ಟು ಇರಲಿಲ್ಲ. ಆತ್ಮಸಾಕ್ಷಿಗೆ ವಿರೋಧವಾಗಿ ಅವರು ನಡೆದುಕೊಂಡೇ ಇರಲಿಲ್ಲ. ಇಂದಿರಾ ಗಾಂಧಿ ಹೇರಿದ ತುರ್ತು ಪರಿಸ್ಥಿತಿಯಿಂದ ನಡೆದ ಕ್ರೌರ್ಯಗಳು ಅವರಿಗೆ ಆಘಾತ ನೀಡಿದವು. ತತ್ಕ್ಷಣವೇ ಪಕ್ಷ ಬಿಟ್ಟುಕೊಟ್ಟು ಬಂದು ನೆಮ್ಮದಿಯಿಂದ ಉಸಿರಾಡಿದವರು.

ಜನತಾ ಪಕ್ಷದಲ್ಲಿ ಮತ್ತೆ ಸಚಿವ!

ಅದೇ ಸಂದರ್ಭದಲ್ಲಿ ಅಸ್ತಿತ್ವಕ್ಕೆ ಬಂದ ಚರಣ ಸಿಂಗರ ನಾಯಕತ್ವದ ಸಮ್ಮಿಶ್ರ ಸರಕಾರ ಟಿ.ಎ. ಪೈ ಅವರನ್ನು ಬಿಟ್ಟು ಕೊಡುತ್ತದೆಯೇ? ಅವರು ಪುನಃ ರೈಲ್ವೆ ಸಚಿವರಾಗಿ ಸರಕಾರ ಸೇರಿಕೊಳ್ಳುವಂತಾದುದು ಸಮ್ಮಿಶ್ರ ಸರಕಾರದ ವಿಶ್ವಾಸದ ಒತ್ತಾಸೆಯ ಪರಿಣಾಮವೇ! ಹಿಂದಿನ ಸರಕಾರದಲ್ಲಿ ಅವರು ತೋರಿಸಿದ ಮುತ್ಸದ್ದಿತನ, ದಕ್ಷತೆ, ಪ್ರಾಮಾಣಿಕತೆ ಇಲ್ಲಿಯೂ ಅವರಿಗೆ ಮನ್ನಣೆಯನ್ನೇ ಪ್ರದಾನಿಸಿತ್ತು! ದೇಶದ ದುರ್ದೈವ. ಸರಕಾರ ಬಲು ಬೇಗ ಅಧಿಕಾರ ಕಳೆದುಕೊಂಡು ಬಿಟ್ಟಿತ್ತು.

ರಾಜಕೀಯ ಕ್ಷೇತ್ರಕ್ಕೆ ವಿದಾಯ

1980ರಲ್ಲಿ ಮಹಾ ಚುನಾವಣೆ ಎದುರಾದಾಗ ಪೈ ಅವರಿಗೆ ಸ್ಪರ್ಧಿಸಲು ಪೂರ್ತಿ ನಿರಾಸಕ್ತಿ. ಆದರೆ ಹಿತೈಷಿಗಳ ಹಠಕ್ಕೆ ಮಣಿದು ನಿಂತರು. ಫಲಿತಾಂಶ ಹೇಳಿದ್ದು ಏನು? ‘ನಿನಗಿನ್ನು ರಾಜಕೀಯ ಬೇಡ’. ಪೈಗಳು ಅದರಿಂದ ಬುದ್ಧಿ, ಮನಸ್ಸು ಕೆಡಿಸಿಕೊಳ್ಳಲಿಲ್ಲ! ತನಗೆ ಮಾಡಲು ಬೇರೆ ಕೆಲಸ ಬಹಳಷ್ಟಿದೆ ಅಂದುಕೊಂಡು ಆಚೆಗೆ ಹೊರಳಿಕೊಂಡರು. ಅಲ್ಲಿ ತನ್ಮಯರಾದರು. ಮಹತ್ಕಾರ್ಯಗಳನ್ನು ಸಾಧಿಸಿದರು. ರಾಜಕೀಯವನ್ನು ಅಂಟಿಕೊಂಡೇ ಇರುವವರಿಗೆ ಎಷ್ಟೊಂದು ಘನವಾದ ಪಾಠ!

ಲೇಖಕ

ಟಿ.ಎ. ಪೈ ಅವರು ಬರೆವಣಿಗೆ ಬಗ್ಗೆ ಆಸಕ್ತಿ ಹೊಂದಿದ್ದರು. ಅವರು ಬಹಳವಾಗಿ ಓದಿಕೊಂಡಿದ್ದರು. ಆದರೆ ಓದಿಕೊಂಡಷ್ಟೇ ವೇಗದಲ್ಲಿ ಬರೆದು ಹಾಕಲು ಸಮಯ ಸಿಗುತ್ತಿರಲಿಲ್ಲ. ಆದರೂ ಅವರು ಬರೆದು ಪ್ರಕಟಿಸಿದ “ನಮ್ಮ ಮಕ್ಕಳಿಗೆ ಈ ದುರ್ಗತಿಯೇ?” ಎಂಬ ಹೊತ್ತಗೆ ವಿಚಾರ ಪ್ರಚೋದಕವಾಗಿದೆ. ಜನಸಂಖ್ಯಾ ಸಮಸ್ಯೆಯನ್ನು ಅದರಲ್ಲಿ ವಿಶ್ಲೇಷಿಸಲಾಗಿದೆ.

ದಾನಿ

ಬ್ಯಾಂಕ್, ಸಂಘ, ಸಂಸ್ಥೆಗಳಿಂದ ಮಾತ್ರವಲ್ಲ ಸ್ವಂತ ಸಂಪಾದನೆಯಿಂದಲೂ ಬಡಬಗ್ಗರಿಗೆ ಕೈಯೆತ್ತಿ ಕೊಟ್ಟವರು ಪೈ ಅವರು. ತನಗೆ ಕಲಿಸಿದ ಗುರುಗಳು ಕಷ್ಟದಲ್ಲಿರುವುದು ಕೇಳಿ ಅವರಿಗೆ ಗೊತ್ತಾಗದಂತೆ ಧನ ಸಹಾಯವನ್ನು ಮಾಡುತ್ತ ಬಂದವರು. ಜಾತಿ, ಮತ ನೋಡದೇ ನೆರವಾಗಿರುವ ಪೈ ಅವರು ಸಿಂಡಿಕೇಟ್ ಬ್ಯಾಂಕಿನ ಅಧ್ಯಕ್ಷ ಪದಾಧಿಕಾರದಿಂದ ನಿವೃತ್ತರಾಗುತ್ತಿದ್ದಾಗ ಬ್ಯಾಂಕ್ ನೌಕರರು ಸಮರ್ಪಿಸಿದ ಗೌರವ ನಿಧಿ ನಾಲ್ಕುವರೆ ಲಕ್ಷ ರೂಪಾಯಿಗಳನ್ನು ತನಗಾಗಿ ಇಟ್ಟುಕೊಳ್ಳುವುದೇ ‘ಟ್ರಸ್ಟ್’ ಮಾಡಿದವರು. ಬ್ಯಾಂಕ್ ಉದ್ಯೋಗಿಗಳ ಕುಟುಂಬಕ್ಕೆ ಸಹಾಯವಾಗಬೇಕು ಎಂದೇ ನಿಬಂಧನೆ ಬರೆದವರು.

ದೈವ ಭಕ್ತ

ಪೈ ಅವರು ಆಸ್ತಿಕರಾಗಿದ್ದರು. ಅವರು ದೇಶ-ವಿದೇಶಗಳಿಂದ ತಂದ ಗಣೇಶ ಪ್ರತಿಮೆಗಳ ಸಂಖ್ಯೆ ಐನೂರಕ್ಕೂ ಹೆಚ್ಚು. ಅವರಿಗೆ ಈ ಗಣೇಶ ಆರಾಧ್ಯ ದೈವನಾಗಿದ್ದ. ಅವರು ನಿತ್ಯವೂ ಗಣೇಶ ಸಹಸ್ರನಾಮ, ಲಲಿತಸಹಸ್ರನಾಮ ಓದಿಯೇ ಮುಂದಿನ ಕಾರ್ಯಕ್ರಮಗಳಿಗೆ ಸಿದ್ಧರಾಗುತ್ತಿದ್ದರು. ಸ್ವಾಮಿ ವಿವೇಕಾನಂದರು ಅವರಿಗೆ ಗುರು ಆಗಿದ್ದರು. ಇಬ್ಬರ ಉದಾರ ತತ್ತ್ವಾದರ್ಶಗಳನ್ನೂ ಪೈ ಅವರು ಪಾಲಿಸಿಕೊಂಡು ಬರುವಲ್ಲಿ ಸದಾ ಮುಂದಿರುತ್ತಿದ್ದರು. ಅವರ ಬೃಹತ್, ಮಹತ್ ಚಿಂತನೆಗಳನ್ನು ನಾವು ಈ ಹಿನ್ನೆಲೆಯಲ್ಲೂ ಅಭ್ಯಸಿಸಬಹುದಾಗಿದೆ.

ಪದ್ಮಭೂಷಣ

‘ಪ್ರಶಸ್ತಿಗಳು ಕುಲಗೆಟ್ಟು ಹೋಗಿವೆ. ಲಾಬಿ ಮಾಡಿದಿರೋ ಉಂಟು. ಇಲ್ಲವಾದರೆ ಇಲ್ಲ’ ಎಂಬ ಆಪಾದನೆ ಯಾವತ್ತೂ ಇದ್ದುದೇ. ಆದರೆ ಅದು ಹತಾಶರಾದವರ ಸ್ವರ. ಸತ್ಯಾಂಶ ಕಡಿಮೆ. ಯೋಗ್ಯತೆಯನ್ನರಸಿಕೊಂಡು ಆಗಲೂ ಅದು ಬಂದಿದೆ. ಈಗಲೂ ಬರುತ್ತಿವೆ. 1972ರಷ್ಟು ಹಿಂದೆಯೇ ಟಿ.ಎ. ಪೈಗಳಿಗೆ ಭಾರತ ಸರಕಾರ ‘ಪದ್ಮಭೂಷಣ’ ಪ್ರಶಸ್ತಿ ಕೊಟ್ಟು ಪುರಸ್ಕರಿಸಿದ್ದು ಅದು ಸರಕಾರದ ಗುಣ ಪಕ್ಷಪಾತಕ್ಕೂ ಸಂದ ಪ್ರಶಸ್ತಿ ಕೂಡ ಆಗಿ ವಿಶೇಷ ಪ್ರಶಂಸೆಗೆ ಪಾತ್ರವಾಯಿತು.

ಸಮರ್ಥ ಗುರು

ವೈಯಕ್ತಿಕವಾಗಿ ನಾನು ಟಿ.ಎ. ಪೈ, ಟಿ.ಎಂ.ಎ. ಪೈ ಹಾಗೂ ಕೆ.ಕೆ. ಪೈ ಅವರ ವಿಶ್ವಾಸಕ್ಕೆ ಪಾತ್ರನಾದವನು. ಅದರಲ್ಲೂ ಟಿ.ಎ. ಪೈ ಅವರ ಪ್ರಭಾವ, ಪ್ರೀತಿ, ಪ್ರೋತ್ಸಾಹ ಇನ್ನೂ ಹೆಚ್ಚಿನದು. ದಿಟದಲ್ಲಿ ನಿವೃತ್ತಿಯ ಅನಂತರ ಎಷ್ಟೆಷ್ಟೋ ದೊಡ್ಡ ದೊಡ್ಡ ಹುದ್ದೆಗಳು ನನ್ನನ್ನು ಕಾದಿದ್ದವು. ಅದರಲ್ಲಿ ಮುಖ್ಯವಾದದ್ದು ಮಣಿಪಾಲದಲ್ಲಿ ರಿಸರ್ವ್ ಬ್ಯಾಂಕಿನ ಅನುಮತಿ ಪಡೆದು ಸ್ಥಾಪನೆಗೆ ತಯಾರಿ ನಡೆಸಿದ್ದ ‘ಲೋಕಲ್ ಏರಿಯಾ ಬ್ಯಾಂಕ್’. ನಾನು ಯಾವುದನ್ನೂ ಒಪ್ಪಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ನನಗೆ ನನ್ನ ಮುಂದೆ ಟಿ.ಎ. ಪೈ ಅವರು ಇದ್ದರು. ಅವರ ಕೆಲಸಗಳು ಇದ್ದವು. ಹಾಗಾಗಿ ಅಂತಹ ಕೋರಿಕೆಗಳನ್ನೆಲ್ಲ ನಾನು ವಿನಯಪೂರ್ವಕ ನಿರಾಕರಿಸಿದೆ.

ನಾನು ನನ್ನ ಹುಟ್ಟೂರು ಮಂದರ್ತಿಯಲ್ಲಿ ನಿಂತಿರುವವನು. ಇದಕ್ಕೆ ಪ್ರೇರಣೆಯಾದವರಲ್ಲಿ ಟಿ.ಎ. ಪೈ ಅವರೇ ಮೊದಲಿಗರು. ಟಿ.ಎ. ಪೈಗಳು ದೆಹಲಿಯಲ್ಲೇ ನಿಲ್ಲಬಹುದಾಗಿದ್ದರೂ ಹಾಗೆ ಮಾಡದೇ ಮಣಿಪಾಲಕ್ಕೇ ವಾಪಸಾದರು. ಅದಕ್ಕೆ ಕಾರಣ ಹುಟ್ಟಿದ ಊರಿನ ಮೇಲಿನ ಪ್ರೀತಿಯೇ, ಅಭಿಮಾನವೇ. ಅವರು ಆಗಾಗ ಹಳ್ಳಿಯಲ್ಲಿ ಜನಿಸಿದವರು ತಮ್ಮ ‘‘ಹಳ್ಳಿಯನ್ನು ಮರೆಯಕೂಡದು. ಅಲ್ಲಿಯ ಅಭಿವೃದ್ಧಿಗೆ ಪ್ರಯತ್ನಿಸಲೇಬೇಕು’’ ಎಂದು ಹೇಳುತ್ತಿದ್ದುದಿತ್ತು. ಅದು ನನ್ನ ಮೇಲೆ ಗಾಢವಾದ ಪರಿಣಾಮ ಬೀರಿತ್ತು.

ಟಿ.ಎ. ಪೈಗಳ ‘ಭಾರತೀಯ ವಿಕಾಸ ಟ್ರಸ್ಟ್’ನೊಂದಿಗೆ ನನ್ನ ಸಂಬಂಧ ಉಳಿದು ಕೊಂಡಿರುವುದಕ್ಕೆ ಪ್ರಬಲವಾದ ಕಾರಣ ಅದು ಟಿ.ಎ. ಪೈ ಅವರ ಸಂಸ್ಥೆ ಎಂಬುದೇ. 1981ರಲ್ಲೇ ಟಿ.ಎ. ಪೈ ಅವರು ನನ್ನನ್ನು ಟ್ರಸ್ಟಿಯನ್ನಾಗಿ ಸೇರಿಸಿಕೊಂಡು ಬಿಟ್ಟಿದ್ದರು! ಧೀರು ಭಾ ಅಂಬಾನಿ, ನರಸಿಂಹನ್ ಮೊದಲಾದ ಖ್ಯಾತ ಆರ್ಥಿಕ ತಜ್ಞರ ಸಾಲಿನಲ್ಲಿ ಟಿ.ಎ. ಪೈ ಅವರು ನನ್ನನ್ನು ಹಾಕಿಕೊಂಡದ್ದು ಅದು ಅವರ ಹೃದಯ ಶ್ರೀಮಂತಿಕೆಗೆ ದೊಡ್ಡ ನಿದರ್ಶನ.

ಅಂಥ ಟಿ.ಎ. ಪೈ ಅವರು ಹಠಾತ್ತಾಗಿ ಇಹ ಯಾತ್ರೆ ಮುಗಿಸಿದಾಗ ಎಲ್ಲರೂ ದಿಗ್ಭ್ರಾಂತರಾದರು. ಅವರ ನೆನಪಿಗೆ ಅವರದೇ ಮಹತ್ಕಾರ್ಯಗಳು ಎಲ್ಲರ ಕಣ್ಮುಂದಿದ್ದರೂ ಅವರ ಸ್ಮರಣಾರ್ಥ ಇನ್ನೂ ಏನಾದರೂ ಕಾರ್ಯಕ್ರಮ ಹಾಕಿಕೊಳ್ಳಬೇಕು ಎಂದು ಅನ್ನಿಸಿತು. ಅದರ ಫಲವೇ ‘ಟಿ.ಎ. ಪೈ ಸ್ಮಾರಕ ಉಪನ್ಯಾಸ ಮಾಲೆ’ ಎಂಬುದಾಗಿದೆ. ಅವರ ಜನ್ಮ ದಿನ ಬಂದಾಗೆಲ್ಲ ಉಪನ್ಯಾಸಗಳನ್ನು ಕೊಡಿಸಲಾಯಿತು ಮತ್ತು ಅವುಗಳನ್ನು ಮುದ್ರಿಸಿ ವಿತರಿಸುವ ವ್ಯವಸ್ಥೆ ಕೂಡ ಮಾಡಲಾಯಿತು. ಇಲ್ಲಿ ಅರ್ಥಶಾಸ್ತ್ರಜ್ಞರಾದ ನೀಲಕಂಠದತ್, ತ್ರಿಲೋಕ್ ಸಿಂಗ್, ನರಸಿಂಹನ್ ಮೊದಲಾದವರು ಪಾಲ್ಗೊಂಡು ಉಪನ್ಯಾಸಗಳ ಮೂಲಕ ಗೌರವ ಸಲ್ಲಿಸುತ್ತ ಬಂದಿದ್ದಾರೆ. 1989ರಿಂದ ಈ ಮಾಲಿಕೆಯ ನೇತೃತ್ವವನ್ನು TAPMI ವಹಿಸಿ ಕೊಂಡಿರುತ್ತದೆ.

ಟಿ.ಎ. ಪೈ ಅವರು ದಿವಂಗತರಾದ ಮೇ 29ರಂದು ‘‘ಸ್ಮೃತಿ ದಿನ’’ವನ್ನು ಏರ್ಪಡಿಸಲಾಗುತ್ತಿದೆ. ಜೊತೆಗೆ ‘‘ಗ್ರಾಮೀಣ ಅಭಿವೃದ್ಧಿಗಾಗಿ ಟಿ.ಎ. ಪೈ ಸಂಸ್ಥೆ’’ (T.A. Pai Institute for Rural Development) ಎಂಬುದನ್ನು ಅದೇ ವರ್ಷದಿಂದಲೇ ಹುಟ್ಟು ಹಾಕಲಾಗಿದೆ. ಈ ಎರಡೂ ಕಾರ್ಯಕ್ರಮಗಳನ್ನು ನಡೆಯಿಸಿಕೊಂಡು ಬರುವಲ್ಲಿ ಟಿ.ಎ. ಪೈ ಅಭಿಮಾನಿಗಳ ಸಹಕಾರ ಇದ್ದೇ ಇದೆ. ಡಾ. ವಿ.ಕೆ.ಆರ್. ರಾವ್ ಅವರಂಥ ಸುಪ್ರಸಿದ್ಧರೂ ಟಿ.ಎ. ಪೈಗಳ ಮೇಲಿನ ಗೌರವಾದರಗಳಿಂದ ಇಲ್ಲಿಗೆ ಬಂದು ಉಪನ್ಯಾಸ ಇತ್ತಿದ್ದಾರೆ.

‘ಭಾರತೀಯ ವಿಕಾಸ ಟ್ರಸ್ಟ್’ ಎಂದು ಆಗ ಪ್ರಸ್ತಾವಿಸಿದೆನಲ್ಲ? ಇದಿರುವುದು ಮಣಿಪಾಲದ ಪೆರಂಪಳ್ಳಿಯಲ್ಲಿ. ಇಲ್ಲಿರುವುದು ಒಟ್ಟು ಐದು ಎಕರೆ ಭೂಮಿ. ಟಿ.ಎ. ಪೈಗಳವರೇ ಇದಕ್ಕಾಗಿ ಮೀಸಲಿಟ್ಟ ಭೂಮಿ ಇದು. ‘‘ಭಾರತೀಯ ವಿಕಾಸ ಟ್ರಸ್ಟ್’’ ಅವರದೇ ಯೋಚನೆ, ಯೋಜನೆ. ಇಲ್ಲಿ ನಾನೇನಾದರೂ ಮಾಡಿದ್ದೇನಾದರೆ ಅವಕ್ಕೆ ಟಿ.ಎ. ಪೈ ಅವರೇ ಶಕ್ತಿ, ಸ್ಫೂರ್ತಿ ಎಲ್ಲವೂ. ಇಲ್ಲಿ ಟಿ.ಎ. ಪೈ ಅವರ ಹೆಸರಿನಲ್ಲಿ ವಿದ್ಯಾರ್ಥಿ ವೇತನ ಕೊಡುವ ಬಗ್ಗೆಯೂ ಅವರ ಕಾಲಾನಂತರದಲ್ಲಿ ಚಿಂತಿಸಲಾಯಿತು. ಟಿ.ಎ. ಪೈ ಎಜುಕೇಶನ್ ಸ್ಕಾಲರ್ಶಿಪ್ ಹೆಸರಿನಲ್ಲಿ ಈಗಾಗಲೇ ಅಸಂಖ್ಯ ವಿದ್ಯಾರ್ಥಿಗಳಿಗೆ ವೇತನ ವಿತರಿಸಲಾಗಿದೆ.

ಇದೇ ಭಾರತೀಯ ವಿಕಾಸ ಟ್ರಸ್ಟ್ (ಬಿಪಿಟಿ)ಯ ಉಪಾಂಗವಾಗಿ ‘‘ಟಿ.ಎ. ಪೈ ಗ್ರಾಮೀಣ ನಿರ್ವಹಣ ಸಂಸ್ಥೆ’’ (TAPIRM)ಯನ್ನೂ ಕಟ್ಟಲಾಯಿತು. ಇದರ ಮೂಲಕವಾಗಿ ಟಿ.ಎ. ಪೈ ಅವರಿಗೆ ಇಷ್ಟವಾಗುವ ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತಿರುವ ಬಗ್ಗೆ ತೃಪ್ತಿಯಿದೆ.

ಡಿ.ಲಿಟ್ ಗೌರವ

ವಿದ್ವತ್ತೆ, ಸೂಕ್ಷ್ಮತೆ, ವೈಚಾರಿಕತೆ, ಪ್ರಗತಿಪರತೆ ಹಾಗೂ ಜನಪರತೆ ಇಂತಹ ಅಸಾಧಾರಣ ಗುಣಗಳ ಗಣಿ ಆಗಿದ್ದ ಪೈ ಅವರಿಗೆ ಡಿ.ಲಿಟ್ ಗೌರವ ಕೊಡುವಲ್ಲಿ ವಿ.ವಿ.ಗಳೂ ಪೈಪೋಟಿಯಲ್ಲಿದ್ದವು. ಕರ್ನಾಟಕ ವಿ.ವಿ. 1973ರಲ್ಲಿ; ಆಂಧ್ರ ವಿ.ವಿ. 1975ರಲ್ಲಿ ಡಿ.ಲಿಟ್ ಗೌರವ ಪ್ರದಾನಿಸಿ ತಮ್ಮ ಯೋಗ್ಯತೆಯನ್ನು ಗೌರವಿಸಿಕೊಂಡವೆಂದೇ ಹೇಳಿದರೆ ಸೂಕ್ತವಾದೀತು.

ಸ್ವಾನುಭವ

ಇಸವಿ 1965. ಟಿ.ಎ. ಪೈ ಅವರು ಆಗ ಸಿಂಡಿಕೇಟ್ ಬ್ಯಾಂಕಿನ ಕಾರ್ಯಾಧ್ಯಕ್ಷರು. ಆ ಸಂದರ್ಭ ಟಿ.ಎ. ಪೈ ಅವರಿಗೆ ಅತ್ಯಂತ ಆಪ್ತರಾಗಿದ್ದ ಡಾ. ಎನ್.ಸಿ. ಮೆಹ್ತಾರವರು ಆಗ ನಾನು ಕೆಲಸ ಮಾಡುತ್ತಿದ್ದ ಕಂಕನಾಡಿಯ ಸಂಶೋಧನಕ್ಕೆ ಬರುತ್ತಿದ್ದುದರಿಂದ ನನ್ನ ಬಗ್ಗೆ ತಿಳಿದುಕೊಂಡಿದ್ದರು. ಹಾಗಾಗಿ ನನ್ನನ್ನು ಅವರು ಪೈಗಳ ಗಮನಕ್ಕೆ ತಂದಿದ್ದಾರೆ. ಪೈಗಳು 1965 ಮಾರ್ಚ್ನಲ್ಲಿ ಸಿಂಡಿಕೇಟ್ ಬ್ಯಾಂಕಿಗೆ ನನ್ನನ್ನು ಬರಲು ತಿಳಿಸಿದ್ದಾರೆ. ಆ ಪ್ರಕಾರ ನಾನು ಟಿ.ಎ. ಪೈ ಅವರನ್ನು ಭೇಟಿ ಮಾಡಿದ್ದೂ ಆಯಿತು. ಆಗ ಅವರು ಇನ್ನೇನೂ ಇಲ್ಲ. ಸ್ಪಷ್ಟವಾಗಿ ಕೇಳಿದ್ದು ಒಂದೇ : ಬ್ಯಾಂಕಿಗೆ ಯಾವೊತ್ತು ಹಾಜರಾಗುವಿ? ನನಗೆ ಎಲ್ಲವೂ ಅನಿರೀಕ್ಷಿತ. ‘ನನಗೆ ಬ್ಯಾಂಕು ಹೊಸತು. ಏನಿದ್ದರೂ ಭತ್ತದ ತಳಿಗಳ ಕುರಿತು ನನ್ನ ಜ್ಞಾನ, ಸಂಶೋಧನೆ’ ಎಂದು ಅನುಮಾನಿಸಿದೆ. ಟಿ.ಎ. ಪೈ ಅವರಿಗೆ ನನ್ನ ಆತಂಕ ಅರ್ಥವಾಯಿತು. ಅವರು ನನ್ನ ಅಳುಕು ಓಡಿಸಿಬಿಟ್ಟರು. ‘‘ನೀವು ನಮ್ಮಲ್ಲೂ ಮಾಡಬೇಕಾದ್ದು ಅದೇ ಕಾರ್ಯವೇ. ಜಗತ್ತಿನ ಶ್ರೇಷ್ಠ 15 ತಳಿಗಳನ್ನು ಭಾರತಕ್ಕೆ ತರಬೇಕು; ತಂದು ಭಾರತದ ಪರಿಸರಕ್ಕೆ ಹದಗೊಳಿಸಿ ಉಪಯುಕ್ತವಾಗುವಂತೆ ಮಾಡಬೇಕು.’’ ಟಿ.ಎ. ಪೈಗಳು ನನ್ನ ಆಸಕ್ತಿ ಕ್ಷೇತ್ರಕ್ಕೇ ನನ್ನನ್ನು ಆಹ್ವಾನಿಸಿದ್ದರೂ ತತ್ಕ್ಷಣವೇ ಉತ್ತರಿಸದೇ ಹಿಂದಿರುಗಿದೆ.

ನನ್ನ ತಂದೆ ಮರಿ ಉಡುಪರಿಗೆ ಮಗನ ಭವಿಷ್ಯದ ಪ್ರಶ್ನೆ. ‘‘ಮಗ ಈಗ ಇರುವುದು ಸರಕಾರಿ ಉದ್ಯೋಗದಲ್ಲಿ. ಟಿ.ಎ. ಪೈ ಅವರದು ಖಾಸಗಿ ಬ್ಯಾಂಕ್. ಹೆಚ್ಚು ಸಂಬಳ ಕೊಡುವುದಾಗಿ ಸಿಬಾ ಅವರು. ಯಾವುದನ್ನು ಆರಿಸಿಕೊಳ್ಳಬೇಕು?’’ ಗೊಂದಲಕ್ಕೆ ಬಿದ್ದರಾದರೂ ಆಗ ಅವರಿಗೆ ನೆನಪಾದವರು ಪರಮ ಮಿತ್ರರೂ, ಹಿರಿಯ ನಾಯಕರೂ ಆದ ಬಂಟ್ವಾಳ ನಾರಾಯಣ ನಾಯಕರು! ಅವರು ಅನುಮಾನಿಸದೇ ಹೇಳಿದ್ದು ಹೀಗೆ : ‘‘ನಿಮಗೆ ಯಾವ ಸಂಶಯವೂ ಬೇಡ. ಕೇಳಿದವರು ಟಿ.ಎ. ಪೈ ಎಂದ ಮೇಲೆ ನಿರಾತಂಕವಾಗಿ ಮಗನನ್ನು ಅಲ್ಲಿಗೆ ಒಪ್ಪಿಸಬಹುದು.’’ ನಾನು ಟಿ.ಎ. ಪೈ ಅವರ ಗರಡಿ ಮನೆ ಪ್ರವೇಶಿಸಿದ್ದು ಹೀಗೆ.

ತನ್ನ ಬ್ಯಾಂಕ್ ಸೇರಿದ ಮೇಲೆ ಟಿ.ಎ. ಪೈ ಅವರು ನನಗೆ ಎಲ್ಲ ರೀತಿಯಲ್ಲೂ ಬೆಂಬಲ ನೀಡಿದರು. ಹೊಸ ತಳಿಗಳ ಬಗ್ಗೆ, ಅವುಗಳೊಟ್ಟಿಗೆ ಎದುರಾಗಬಹುದಾದ ಜೈವಿಕ ಸವಾಲುಗಳ ಬಗ್ಗೆ ಹಲವರು ನಿರುತ್ಸಾಹದ ಮಾತುಗಳನ್ನಾಡಿದರೂ ಪೈ ಅವರು ಜಗ್ಗಲಿಲ್ಲ. ಅವರು ಬೀಜಗಳನ್ನು ಚೀಲಗಳಲ್ಲಿ ತುಂಬಿಸಿ ಬ್ರಾಂಡಿಂಗ್ ಮಾಡಲು ಅತ್ಯಗತ್ಯವಾದ ಯಂತ್ರೋಪಕರಣವನ್ನು ನನಗೆ ತತ್ಕ್ಷಣದಲ್ಲೇ ಒದಗಿಸಿ ಬಿಟ್ಟಿದ್ದೂ ಉಲ್ಲೇಖನೀಯ. ಹಾಗೆಯೇ ಪವರ್ ಟಿಲ್ಲರ್, ಪವರ್ ಸ್ಪ್ರೇಯರ್ ಮೊದಲಾದ ಚಿಕ್ಕ ಕೃಷಿ ಸಾಮಗ್ರಿಗಳು ರೈತರಿಗೆ ದುಬಾರಿಯಾಗದ ಬೆಲೆಯಲ್ಲಿ ತಲಪಿಸುವಲ್ಲೂ ಸಹಕರಿಸಿದವರೂ ಟಿ.ಎ. ಪೈ ಅವರೇ. ಕೃಷಿ ವಿನಿಮಯ ಕೇಂದ್ರಗಳು ಅಲ್ಲಲ್ಲಿ ಹುಟ್ಟಿಕೊಂಡವು. ಅವುಗಳಿಗೆ ಮಾರ್ಗದರ್ಶಕರು ಟಿ.ಎ. ಪೈ ಅವರೇ ಆಗಿದ್ದರು. ನಾನು ಅವರ ಮಾರ್ಗದರ್ಶನವನ್ನು ಅಪಾರ ಗೌರವದಿಂದ, ತುಂಬು ಆಶೆಯಿಂದ ಸ್ವೀಕರಿಸುತ್ತಿದ್ದೆ. ಹಾಗಿದ್ದರೂ ಅವರು ನನ್ನಲ್ಲಿ ‘ಏನು ಹೊಸ ಚಿಂತನೆ ಇದೆ ನಿಮ್ಮಲ್ಲಿ?’ ಎಂದು ಯಾವತ್ತೂ ವಿಚಾರಿಸುತ್ತಿದ್ದರು. ನಾನು ನನ್ನ ವಿಚಾರಗಳನ್ನು ಮುಂದಿಟ್ಟರೆ ಅವುಗಳನ್ನು ಒಪ್ಪಿಕೊಂಡು ಬಿಡುತ್ತಿದ್ದರು. ಕೆಲವೇ ದಿನಗಳಲ್ಲಿ ಅವು ಅನುಷ್ಠಾನಗೊಳ್ಳುತ್ತಿದ್ದವು ಕೂಡ.

ಬ್ಯಾಂಕಿನ ಕೃಷಿ ವಿಭಾಗ ‘ಪ್ರಗತಿ ಹಾಗೂ ತಂತ್ರಜ್ಞಾನ’ ಎರಡನ್ನೂ ಅಳವಡಿಸಿಕೊಂಡು ಮುಂದುವರಿಯಬೇಕು ಎಂಬುದು ಅವರ ಸಲಹೆಯಾಗಿತ್ತು. ‘ಅತಿಸಾಮಾನ್ಯ ಸಣ್ಣ ಹಿಡುವಳಿದಾರನಿಗೆ ತಂತ್ರಜ್ಞಾನ ಮುಟ್ಟಬೇಕು. ಅದನ್ನು ಹೇಗೆಲ್ಲ ಸಾಧ್ಯವಾಗಿಸಬಹುದು? ಕಂಡು ಹಿಡಿಯಿರಿ’ ಎನ್ನುವುದೂ ಅವರ ಒತ್ತಾಸೆ ಆಗಿತ್ತು.

ಶ್ರೀ ಸಾಮಾನ್ಯನಿಗೆ ಸಾಲ ಕೊಡುವ ಬಗ್ಗೆ ಪೈ ಅವರು ಉದಾರವಾದಿ ಆಗಿದ್ದರು ಎಂಬುದು ಎಲ್ಲರಿಗೂ ಗೊತ್ತು. ಒಟ್ಟಿಗೆ, ‘‘ಸಾಲದೊಂದಿಗೆ ಮಾಹಿತಿ’’ ಇದೂ ಅವರದೇ ಹೊಸ ನೋಟ ಆಗಿತ್ತು. ಸಾಲ ಕೊಡುವಾಗ ಸಾಲದ ಬಗ್ಗೆ ಮಾಹಿತಿ ಕೊಡದೇ ಹೋದರೆ ಕೊಡುವುದರ ಉದ್ದೇಶ ಮಹತ್ತ್ವ ಕಳಕೊಳ್ಳುತ್ತದೆ, ಅದು ನಿಷ್ಪ್ರಯೋಜಕವಾಗುತ್ತದೆ ಎಂಬುದೂ ಅವರ ಖಚಿತ ನಿಲುವು ಆಗಿತ್ತು. ‘ಸಾಲದೊಂದಿಗೆ ಮಾಹಿತಿ’ ಯೋಜನೆಯ ನಿರ್ವಹಣೆಯ ಜವಾಬ್ದಾರಿ ನನ್ನ ಪಾಲಿಗಿತ್ತು. ಇದು ಅಧಿಕಾರದ ಕಾರಣ ಬಂದ ಅಧಿಕಾರ ಆಗಿರಲಿಲ್ಲ. ಟಿ.ಎ.ಪೈ ಅವರೇ ತುಂಬು ವಿಶ್ವಾಸದಿಂದ ವಹಿಸಿಕೊಟ್ಟದ್ದಾಗಿತ್ತು. ಕೃಷಿ ತಜ್ಞರು ಬ್ಯಾಂಕ್ ಅಧಿಕಾರಿಗಳಾಗುವ ಪರಂಪರೆ ಮೊದಲಾದುದು ಇಲ್ಲಿಂದಲೇ ಆಗಿದೆ.

ಕೃಷಿಕರಿಗೆ ಸಾಲ ಕೊಡುವುದು; ಸಾಲ ಕೊಡುವಾಗ ಮಾಹಿತಿ ನೀಡುವುದು ಬ್ಯಾಂಕ್ನ ಕರ್ತವ್ಯವೇ ಆದದ್ದು ಟಿ.ಎ. ಪೈ ಅವರ ಸಂದೇಶ, ಆದೇಶದ ಮೇರೆಗೇ ಆಗಿತ್ತಷ್ಟೇ. ಜೊತೆಗೆ ಸಾಲ ತೆಗೆದುಕೊಳ್ಳುವಾತನಲ್ಲಿ ಆತ್ಮವಿಶ್ವಾಸವನ್ನು, ಚೈತನ್ಯವನ್ನು ಉದ್ದೀಪನಗೊಳಿಸಬೇಕು ಎಂಬುದೂ ಅವರ ಸಲಹೆಯಾಗಿತ್ತು. ತನ್ನ ಶಕ್ತಿ, ಸಾಧ್ಯತೆಗಳೇನು ಎಂದು ಆತ ಮನಗಾಣುವಂತೆ ಮಾಡುವ ಕೆಲಸವನ್ನು ಅಧಿಕಾರಿ ನಿರ್ವಹಿಸದಿದ್ದರೆ ಅದು ಅಧಿಕಾರಕ್ಕೇ ಅವಮಾನ ಎಂಬುದೂ ಅವರ ಒಳಮಾತಾಗಿತ್ತು. ಸಾಲ ಏಕೆಂದರೆ ‘ಮನುಷ್ಯನ ಅಭಿವೃದ್ಧಿಗೆ‘ ಎಂಬುದೇ ಅವರ ದರ್ಶನವಾಗಿತ್ತು. ಕೃಷಿಗೆ, ಅದಕ್ಕೆ, ಇದಕ್ಕೆ ಅಲ್ಲ ಒಟ್ಟು ಮನುಷ್ಯನ ಅಭಿವೃದ್ಧಿಗೆ ಸಾಲದ ಸದ್ಬಳಕೆಯಾಗಬೇಕು ಎಂದು ಅವರು ಒತ್ತಿ, ಒತ್ತಿ ಹೇಳುತ್ತಿದ್ದರು. ಮನುಷ್ಯನ  ನೆಮ್ಮದಿಯ ಬದುಕಿಗೆ ಬೇಕಾದ ಸೌಕರ್ಯಗಳನ್ನು ಒದಗಿಸುವುದು ಬ್ಯಾಂಕ್ಗಳ ಧರ್ಮವಾಗಬೇಕು ಎಂದು ಯಾವತ್ತೂ ಕರೆ  ಕೊಡುತ್ತಿದ್ದರು. ಪೈ ಅವರ ನಿತ್ಯ ಚಿಂತನೆ, ಶೋಧನೆಗಳಿಂದ ಸ್ಫೂರ್ತಿಗೊಂಡು ನಿರ್ಮಾಣಗೊಂಡದ್ದೇ ‘ಕೃಷಿ ಚಿಕಿತ್ಸಾಲಯ’ (ಫಾರ್ಮ್ ಕ್ಲಿನಿಕ್) ಎಂಬ ವಿನೂತನ ವ್ಯವಸ್ಥೆ. ನಮ್ಮ ತಂಡದ ಈ ಶಿಶುವನ್ನು ಟಿ.ಎ. ಪೈ ಅವರು ಮಮತೆಯಿಂದ ಹರಸಿದರು.

ರೈತನಿಗೆ ಸಾಲ ಕೊಡುವಾಗ ಅವನಿಗೆ ಯಾವುದಕ್ಕಾಗಿ ಸಾಲ ಕೊಡಬೇಕು? ಎಂದು ಅಧಿಕಾರಿಗಳು ಸವಿಸ್ತಾರವಾಗಿ ಪ್ರಶ್ನಿಸಿಯೇ, ಪರೀಕ್ಷಿಸಿಯೇ ಸಾಲ ಕೊಡಬೇಕು ಎಂಬುದು ಟಿ.ಎ. ಪೈ ಅವರ ಕಿವಿ ಮಾತಾಗಿತ್ತು. ಆತನಿಗೆ ಒಂದು ಬಾವಿ, ಅದಕ್ಕೊಂದು ಪಂಪ್ಸೆಟ್, ಎರಡು ದನ ಅತ್ಯಗತ್ಯವಾಗಿದ್ದರೆ ಅವುಗಳನ್ನೇ ಕೊಡಿ ಎಂಬುದು ಪೈ ಅವರ ಮಾರ್ಗದರ್ಶನವಾಗಿತ್ತು. ಒಂದು ಬೆಳೆ ತೆಗೆಯುವಷ್ಟು ನೀರಿದ್ದರೂ ಎರಡು ಬೆಳೆ ತೆಗೆಯುವ ಧೈರ್ಯ, ಅನುಕೂಲ ರೈತನದ್ದಾಗಿರಬೇಕು ಎಂಬುದು ಅವರ ಕಳಕಳಿಯಾಗಿತ್ತು. ಈ ಹಂತದಲ್ಲಿ ‘ಪೊಟ್ಟು ಬಾವಿ’ (Dry well)ಗಳಿಗೂ ಸಾಲ ಕೊಟ್ಟು ಅಲ್ಲಿ ನೀರು ತುಂಬಿಸಿ ಕೃಷಿಗೆ ಉಪಕಾರವಾಗಿಸುವ ಪ್ರಯತ್ನವೂ ನಡೆಯಿತು. ಇವೆಲ್ಲ ಸಾಧನೆಗಳು ಟಿ.ಎ. ಪೈ ಅವರ ಹಂಬಲ, ಬೆಂಬಲಗಳೇ ಆಗಿದ್ದವು.

ನನ್ನೊಂದಿಗೆ ಸುದೀರ್ಘಕಾಲ ಗುರುತಿಸಿಕೊಂಡು ಬಿಟ್ಟಿದ್ದು ‘ಸಿಂಡಿಕೇಟ್ ಕೃಷಿ ಪ್ರತಿಷ್ಠಾನ’ (ಸಿಂಡಿಕೇಟ್ ಎಗ್ರಿಕಲ್ಚರಲ್ ಫೌಂಡೇಶನ್). ಅದು ಕೂಡ ಟಿ.ಎ. ಪೈ ಅವರದೇ ಕಲ್ಪನೆ! ತನ್ನ ಕನಸುಗಳನ್ನೆಲ್ಲ ನನಸಾಗಿಸಲು ಅವರು ನನಗೆ ಕಾಲಕಾಲಕ್ಕೆ ಮಾರ್ಗದರ್ಶಿಸಿದರು. ನನ್ನನ್ನು ಪಳಗಿಸಿದರು ಅನ್ನುವುದೇ ಸೂಕ್ತ. ಇದು ಗ್ರಾಮೀಣ ಅಭಿವೃದ್ಧಿಗೆ ಸಂಬಂಧಿಸಿ ಪೂರ್ಣವಾಗಿ ಒಪ್ಪಿಸಿಕೊಂಡಂಥದ್ದು. ಇದರ ಮುಖವಾಣಿಯಾಗಿ ‘ಕೃಷಿ ಲೋಕ’ ಮಾಸ ಪತ್ರಿಕೆ ತಪ್ಪದೇ ಪ್ರಕಟವಾಗುತ್ತಿತ್ತು. ಇದಕ್ಕೆ ಒತ್ತಾಸೆ ಆದವರೂ ಟಿ.ಎ. ಪೈ ಅವರೇ ಆಗಿದ್ದರು.

ಈ ಪ್ರತಿಷ್ಠಾನ ಪ್ರತಿ ವರ್ಷ ಸುಮಾರು ಹತ್ತು ಸಾವಿರ ರೂಪಾಯಿ ವೆಚ್ಚದಲ್ಲಿ 25ರಿಂದ 35 ಸಾವಿರ ತರಕಾರಿ ಬೀಜಗಳ ಪಾಕೇಟುಗಳನ್ನು ಸಾರ್ವಜನಿಕರಿಗೆ ವಿತರಿಸಿತು. ನಮ್ಮ ಈ ಕಾರ್ಯಕ್ರಮವನ್ನು ಮೆಚ್ಚಿದವರ ಸಂಖ್ಯೆ ದೊಡ್ಡದು. ಹಾಗೆಯೇ ದೂರುವವರೂ ಇದ್ದರು. ಬ್ಯಾಂಕಿಗೆ ಇದರಿಂದ ನಷ್ಟವಾಗುವುದಿಲ್ಲವೇ ಎಂಬುದು ಅಂಥವರ ಆಕ್ಷೇಪವಾಗಿತ್ತು. ಅವರೆಲ್ಲ ಟಿ.ಎ. ಪೈ ಅವರನ್ನೇ ಕಂಡು ವಿರೋಧ ವ್ಯಕ್ತಪಡಿಸಿದ್ದರು. ಆಗ ಟಿ.ಎ. ಪೈ ಅವರು ಈ ಯೋಜನೆಯನ್ನು ಸಂಪೂರ್ಣವಾಗಿ ಸಮರ್ಥಿಸಿದ್ದು ಹೀಗಂತೆ : ‘‘ಅದು ಆಗಬೇಕಾದ ಕೆಲಸ. ಬ್ಯಾಂಕಿನ ಆತ್ಮಸಾಕ್ಷಿ ವೃದ್ಧಿಸುವ ವಿಧಾನ, ಕಾರ್ಯ. ಜಾಹೀರಾತಿಗೆ ಪರ್ಯಾಯವಾದದ್ದು. ಬಹಳ ಮುಖ್ಯವಾಗಿ ಈ ಬೀಜ ಪಡೆದವರಲ್ಲಿ 25% ಮಂದಿ ತರಕಾರಿ ಬೆಳೆದರೂ ಐದು ಲಕ್ಷ ರೂಪಾಯಿಗಳಷ್ಟು ಸಂಪಾದನೆ ಆಗುತ್ತದೆ. ಇದೇನು ಸಣ್ಣ ಆದಾಯವೇ? ದೇಶದ ಪ್ರಗತಿಗೆ ಸಂಬಂಧಿಸಿ ಇದಕ್ಕಿಂತ ದೊಡ್ಡ ಕಾಣಿಕೆ ಇಲ್ಲ.’’ ಇಂಥ ಪ್ರಶಸ್ತಿಗಳು ಟಿ.ಎ. ಪೈ ಅವರಿಂದ ಎಷ್ಟೆಷ್ಟೋ!

1980ರಲ್ಲಿ ದೆಹಲಿಯಿಂದ ಮಣಿಪಾಲಕ್ಕೆ ವಾಪಸ್ಸಾದ ಟಿ.ಎ. ಪೈಗಳು ಮಣಿಪಾಲದಲ್ಲಿ ಇನ್ನಷ್ಟು ಸಾಧನೆಗಳಿಗೆ ತನ್ನನ್ನು ಸಮರ್ಪಿಸಿಕೊಂಡರು. ಅದೇ ಸಮಯದಲ್ಲಿ ಮಣಿಪಾಲ ಇಂಡಸ್ಟ್ರಿಯಲ್ ಟ್ರಸ್ಟಿಗೆ ಫೋರ್ಡ್ ಫೌಂಡೇಶನ್ ದೊಡ್ಡ ಪ್ರಮಾಣದಲ್ಲಿ ಅನುದಾನ ನೀಡಿತ್ತಷ್ಟೇ. ಪೈಗಳು ‘ಈ ಮೊತ್ತವನ್ನು ಜನೋಪಯೋಗವಾಗುವಂತೆ ಹೊಸ ಯೋಜನೆ ರೂಪಿಸುವ ಹೊಣೆ ನಿನ್ನ ಮೇಲಿದೆ’ ಎಂದು ಆಜ್ಞಾಪಿಸಿದರು. ಆಗ ತಲೆಯೆತ್ತಿದ್ದೇ – ‘ಗ್ರಾಮ ವಿಕಾಸ ಕೇಂದ್ರ’. (RDC)

ಈ ಯೋಜನೆಯ ಬಗ್ಗೆ ಪೈ ಅವರ ರೂಪರೇಷೆ ಸುಸ್ಪಷ್ಟವಾಗಿತ್ತು. ಇಂಥಲ್ಲೆಲ್ಲ ಅವರಲ್ಲಿ ಹಿರಿತನವನ್ನು, ಋಷಿತನವನ್ನು ಧಾರಾಳವಾಗಿ ಅನುಭವಿಸಬಹುದಾಗಿತ್ತು. ಅವರು ಆಗಲೇ ಎಷ್ಟೊಂದು ನಿಸ್ಸಂದಿಗ್ಧವಾಗಿದ್ದರು! ಅವರು ಹೀಗೆ ಮುಖಾಮುಖಿಯಾಗುತ್ತಾರೆ : ‘‘ಅರುವತ್ತೆಂಟು ಕೋಟಿ ಭಾರತೀಯರು ತಮ್ಮ ಸಮಸ್ಯೆಗಳನ್ನು ತಾವೇ ಪರಿಹರಿಸಿಕೊಳ್ಳಲು ಅಸಮರ್ಥರಾದರೆ ಬೇರೆ ಯಾರಿಂದಲೂ ಅವರ ಸಮಸ್ಯೆಗಳನ್ನು ನಿವಾರಿಸಲು ಸಾಧ್ಯವಿಲ್ಲ. ಕುಂದಿದ ಆತ್ಮ ವಿಶ್ವಾಸವನ್ನು, ರಾಷ್ಟ್ರೀಯ ಪ್ರಜ್ಞೆ ಮತ್ತು ಸಾಧ್ಯತೆಗಳ ತಳಗಟ್ಟಿನ ಮೇಲೆ ಪುನರುತ್ಥಾನಗೊಳಿಸಿ, ಇಡೀ ಜನ ಸಮುದಾಯವನ್ನು ಗ್ರಾಮಾಭಿವೃದ್ಧಿ ಕಾರ್ಯಕ್ರಮಗಳಿಗೆ ಸಜ್ಜುಗೊಳಿಸಬೇಕಾಗಿದೆ. ನಮ್ಮ ಮಾನಸಿಕ ದೌರ್ಬಲ್ಯಗಳನ್ನು ಮೆಟ್ಟಿ ನಿಂತು ಭವ್ಯ ಭವಿಷ್ಯತ್ತಿನ ಕಲ್ಪನೆಯೊಂದಿಗೆ ಗುರಿ ಸಾಧಿಸಬೇಕು. ಮನಸ್ಸು ಮಾಡಿದರೆ ನಮಗಿದು ಅಸಾಧ್ಯವಲ್ಲ.’’ ಟಿ.ಎ. ಪೈ ಅವರ ಈ ಘೋಷಣೆ, ನಿರ್ಧಾರ ನಮಗೆ ಎಚ್ಚರಿಕೆ ಆಗಿ, ಉತ್ತೇಜನ ಆಗಿ, ಬಡಿಗೆ ಆಗಿ ಬಡಿದೆಬ್ಬಿಸುತ್ತಿತ್ತು.

IIM ಹೈದರಾಬಾದ್ ಈ ಸಂಸ್ಥೆಯಲ್ಲೂ ಅದರ ಉಳಿವಿಗಾಗಿ ಅಧಿಕಾರ ನಿಭಾಯಿಸಬೇಕಾದ ಅನಿವಾರ್ಯತೆಯೂ ನನ್ನ ಕಡೆಗೆ ಬಂತು. ಖಂಡಿತವಾಗಿ ಕೆಲವೇ ದಿನಗಳಲ್ಲಿ ಇದು ಮುಳುಗಿ ಹೋಗುತ್ತದೆ ಎಂದು ಎಲ್ಲ ಭೀತರಾಗಿದ್ದ ಕಾಲಘಟ್ಟದಲ್ಲಿ ಅದರ ಚುಕ್ಕಾಣಿ ಹಿಡಿದು ಎಚ್ಚರಿಕೆಯಿಂದ ಅದನ್ನು ತಹಬದಿಗೆ ತಂದೆ. ನಾನಾಗ ಟಿ.ಎ. ಪೈ ಅವರ ಮಾದರಿಯನ್ನೇ ಮುಂದಿಟ್ಟುಕೊಂಡೆ. ‘‘ನಾವು ಬ್ಯಾಂಕಿನಲ್ಲಷ್ಟೇ ಅಧ್ಯಕ್ಷರು. ಹೊರಗಡೆ ಕೇವಲ ಮನುಷ್ಯರು ಅಷ್ಟೇ. ನಮ್ಮ ಗೌರವವನ್ನು ನಾವು ಸಂಪಾದಿಸಿಕೊಳ್ಳಬೇಕು. ಎಲ್ಲರ ಸಹಕಾರ ಪಡೆದುಕೊಳ್ಳಬೇಕು. ಹೊಸ ಪದ್ಧತಿಗಳನ್ನೂ, ಕ್ರಮಗಳನ್ನೂ, ವಿಕಲ್ಪಗಳನ್ನೂ ನೈಸರ್ಗಿಕವಾಗಿ ವಿಸ್ತರಿಸಿಕೊಳ್ಳಬೇಕು’’ ಎಂಬುದೇ ಅವರ ಮಾನವಾಗಿತ್ತು, ದಂಡವಾಗಿತ್ತು. ನನಗೆ ನನ್ನ ಓದು ಬಹಳಷ್ಟು ಹೇಳಿ ಕೊಟ್ಟಿದೆ. ಜೀವನಕ್ಕೆ ಪಾಠ ಆಗಿದೆ. ಎಲ್ಲದಕ್ಕಿಂತಲೂ ತೀವ್ರವಾಗಿ ನನ್ನನ್ನು ತಟ್ಟಿದ್ದು ಟಿ.ಎ. ಪೈ ಅವರ ಸಂದೇಶವೇ; ಜೀವನವೇ; ಜೀವ ಪ್ರೀತಿಯೇ ಆಗಿದೆ. ಅವರ ನುಡಿಮುತ್ತು ಹೀಗಿದೆ :

“ಬದಲಾವಣೆಯನ್ನು ಯಾರೋ ಎಲ್ಲಿಂದಲೋ ಬಂದು ಮಾಡುತ್ತಾರೆ ಎಂದು ಕಾಯುವುದೆಷ್ಟು ಅರ್ಥಹೀನ. ಆ ಬದಲಾವಣೆಯನ್ನು ನಾವೇ ತರಬೇಕು. ನಮ್ಮ ಬದುಕಲ್ಲಿ ಮೊದಲಿಗೆ ಬದಲಾಗಬೇಕು.”

ನಾನು ಅವರ ಇನ್ನೊಂದು ನುಡಿ ತುತ್ತನ್ನೂ ನೆನಪಿನಲ್ಲಿಟ್ಟುಕೊಂಡು ಅವರ ಹಿಂದೆ ಹಿಂದೆ ಹೆಜ್ಜೆ ಹಾಕಿದವನು. ಅದೇನೆಂದರೆ – ‘‘ಒಳ್ಳೆಯ ಕೆಲಸ ಮಾಡುವ ಸಂದರ್ಭ ಬಂದಾಗ ಮೊದಲು ‘ಆಯಿತು. ಮಾಡಿಯೇ ಮಾಡುತ್ತೇನೆ’ ಎಂದು ಹೇಳಿ ಬಿಡಬೇಕು. ಅನಂತರ ಹೇಗೆ ಮಾಡಬೇಕು? ಮುಂದುವರಿಯಬೇಕು ಎಂಬ ಬಗ್ಗೆ ಚಿಂತಿಸಬೇಕು. ಅಳುಕಿದರೆ ವಿಜಯ ದೂರ, ದೂರ ಓಡಿ ಬಿಡುತ್ತದೆ’’ ಎಂಬ ಅವರ ಹಿತೋಕ್ತಿ. ಅದರ ತಾಕತ್ತು ಬೆಲೆ ಕಟ್ಟಲಾಗದ್ದು.

ಅಲ್ಲಾ, ಎಲ್ಲಿಯ ಟಿ.ಎ. ಪೈ! ಎಲ್ಲಿಯ ಉಡುಪ! ಎತ್ತಣ ಕೋಗಿಲೆ? ಎತ್ತಣ ಮಾಮರ? ಆದರೂ ತನ್ನ ಬಳಿ ತಂದುಕೊಂಡದ್ದು ಕೋಗಿಲೆಯ ಕೈವಾಡ, ಪವಾಡ! ಯಾವತ್ತೂ ಅನ್ಯನೆಂದೆಣಿಸದೇ ತನ್ನ ಒಳಗೂಡಿನಲ್ಲಿ ತನ್ನ ಜೀವ, ಭಾವವೇ ಎಂಬಂತೆ ನೆಲೆಗೊಳಿಸಿದವರು ಟಿ.ಎ. ಪೈ ಅವರು. ಬಂಧುವೇ? ಜಾತಿಯೇ? ಸ್ನೇಹವೇ? ಯಾವುದೂ ಅಲ್ಲ. ಆದರೂ ವಿಶ್ವಾಸ! ಇದು ಪುಣ್ಯ. ಬದುಕು ಧನ್ಯ.

ಖ್ಯಾತನಾಮರ ಕೊಂಡಾಟ

ಡಾ. ಎಂ.ವಿ. ಕಾಮತ್ ಅವರು ನಮ್ಮ ರಾಷ್ಟ್ರದ ಅಗ್ರಗಣ್ಯ ಪತ್ರಕರ್ತರೆಂದು ಪ್ರಖ್ಯಾತರಾದವರು. ಅವರು ಟಿ.ಎ. ಪೈ ಅವರ ಸಹಪಾಠಿಗಳು. ಮುಂಬೈ ಕಾಲೇಜಿನಲ್ಲಿ ಒಟ್ಟಿಗೇ ಓದಿದವರು. ಯಾವತ್ತೂ ಒಡನಾಟ ಇದ್ದವರು. ಸನ್ಮಿತ್ರರು, ಬಂಧುಗಳು. ಅವರು ಟಿ.ಎ. ಪೈ ಅವರನ್ನು ಹೀಗೆ ಹಾರ್ದಿಕವಾಗಿ ನೆನಪಿಸಿಕೊಳ್ಳುತ್ತಾರೆ; ಬಣ್ಣಿಸುತ್ತಾರೆ.

ನಾನು ಟಿ.ಎ. ಪೈಯವರನ್ನು ಬಲು ಹತ್ತಿರದಿಂದ ಕಂಡವನು. ನಾವು ಒಂದೇ ಪೇಟೆಯಲ್ಲಿ ಹುಟ್ಟಿ ಬೆಳೆದದ್ದು. ಒಂದೇ ಶಾಲೆಗೂ ಹೋದದ್ದು. ಅವರು ನನಗಿಂತ ನಾಲ್ಕೇ ತಿಂಗಳು ಚಿಕ್ಕವರು. ನಾನೇನೋ ಶಾಲೆಯಲ್ಲಿ ಒಂದು ತರಗತಿ ಮುಂದಿದ್ದೆ. ಅವರ ಮೊದಲ ಹೆಂಡತಿ ಪ್ರೇಮಾ ನನಗೆ ಅತ್ತಿಗೆಯಾಗಬೇಕು. ನಾವು ಎಲ್ಲ ಗೆಳೆಯರಾಗಿದ್ದೆವು.

ನಾವು ಅವರನ್ನು ಕರೆಯುವುದು ಬಾಲಕೃಷ್ಣ ಎಂದು. ಕೊನೆಗೆ ಅವರು ತಮಗೆ ಔಪಚಾರಿಕವಾಗಿ ಇಟ್ಟ ಅನಂತ ಎಂಬ ಹೆಸರನ್ನೇ ಗಟ್ಟಿ ಮಾಡಿಕೊಂಡರು. ಟಿ.ಎ. ಪೈ ಅದೇ ಅವರ ಕಾಯಂ ಹೆಸರಾಯಿತು. ಮನೆ ಮಂದಿಯೂ ಅವರನ್ನು ಟಿ.ಎ. ಪೈ ಎಂದೇ ಕರೆದರು.

ಇಂಗ್ಲಿಷಿನಲ್ಲಿ ಅವರ ಹೆಸರು ಬರೆಯುವಾಗ ವಿವಿಧ ರೀತಿಯ ಸ್ಪೆಲ್ಲಿಂಗ್ ಬಳಸುತ್ತಾರೆ. Anant, Annanta, Ananth, Anantha ಇತ್ಯಾದಿ. ನಾನು ಅವರ ಹೆಸರನ್ನು Anant ಎಂದೇ ಬರೆಯುತ್ತೇನೆ. ಅವರ ಅಜ್ಜನ ಹೆಸರನ್ನು Ananth ಎಂದು ಬರೆಯುತ್ತೇನೆ. ಇಬ್ಬರನ್ನು ಪ್ರತ್ಯೇಕಿಸಲಿಕ್ಕಾಗಿ ಈ ಕ್ರಮ.

ಅನಂತ ಯಾವಾಗಲೂ ಏನನ್ನಾದರೂ ಸಾಧಿಸಬೇಕೆಂದು ಛಲವಿದ್ದವರು. ಕನಸುಗಾರರಾಗಿದ್ದರೂ ಕಾರ್ಯ ಸಾಧಿಸುವ ಹಟವಿದ್ದವರು. ನಾನು ಅವರನ್ನು ಅಷ್ಟು ಹತ್ತಿರ ಬಲ್ಲವನಾದರೂ ಅವರ ಸಾಧನೆಗಳ ಸಂಖ್ಯೆ ಮತ್ತು ಆ ಸಾಧನೆಗಳ ಹಿರಿಮೆಯನ್ನು ಗಮನಿಸಿದಾಗ ನನಗೆ ಮಹದಾಶ್ವರ್ಯವಾಗುತ್ತದೆ. ಅವರು ದೊಡ್ಡ ಮಾತುಗಾರ. ಅವರ ಜೊತೆ ಮಾತುಕತೆ ಎಂದರೆ ಒಮ್ಮುಖದ ಮಾರ್ಗ. ಅವರು ಮಾತನಾಡುವುದು, ನಾವು ಕೇಳುವುದು. ಆದರೆ ಅವರದ್ದು ಬರೇ ಕಾಡು ಹರಟೆಯಲ್ಲ. ಬರೇ ಲೋಕಾಭಿರಾಮವೂ ಅಲ್ಲ. ಹೊಸ ಯೋಚನೆಗಳ, ಹೊಸ ಚಿಂತನೆಗಳ, ಹೊಸ ನಂಬುಕೆಗಳ ಬಗ್ಗೆ ಅವರು. ಅಪರೂಪಕ್ಕೊಮ್ಮೆ ಹಾಸ್ಯ ಚಟಾಕಿ. ಆದರೆ ಎಂದೂ ತಮ್ಮನ್ನು ಹೊಗಳಿ ಅಟ್ಟಕ್ಕೇರಿಸಿಕೊಂಡವರಲ್ಲ.

ಅವರು ಸ್ನೇಹ ಜೀವಿ, ಭಾವುಕ, ವಿಚಾರಶೀಲ ಹಾಗೂ ಪರೋಪಕಾರಿ. ತಮ್ಮ ಹಳೇ ಉಪಾಧ್ಯಾಯರಿಗೆ ಅವರು ನೀಡುತ್ತಿದ್ದ ಸಹಾಯ ಹಸ್ತದ ಉದಾಹರಣೆಗಳು ಅನೇಕ. ಒಮ್ಮೆ ಬಹಳ ಹಿಂದೆ ನಿವೃತ್ತರಾದ ಅವರ ಹಿಂದಿನ ಉಪಾಧ್ಯಾಯರೊಬ್ಬರು ಆರ್ಥಿಕ ಮುಗ್ಗಟ್ಟಿನಲ್ಲಿರುವ ವಿಚಾರ ಅವರಿಗೆ ತಿಳಿಯಿತು. ಪ್ರತೀ ತಿಂಗಳೂ ಅವರಿಗೆ ಸ್ವಲ್ಪ ಹಣ ಸಂದಾಯವಾಗುವಂತೆ ಟಿ.ಎ. ಪೈಯವರು ವ್ಯವಸ್ಥೆ ಮಾಡಿದರು. ಈ ವ್ಯವಸ್ಥೆ ಆ ಉಪಾಧ್ಯಾಯರ ಮರಣಾನಂತರವೂ ಮುಂದುವರಿದು ಅವರ ಪತ್ನಿಗೆ ಪಾವತಿಯಾಗುತ್ತಿತ್ತು. ಆದರೆ ತನ್ನ ಹೆಸರನ್ನು ಗೌಪ್ಯವಾಗಿಟ್ಟಿದ್ದರು. ಮಾಜಿ ಸಂಪಾದಕರೊಬ್ಬರು ಆರ್ಥಿಕ ಸಂಕಷ್ಟದಲ್ಲಿದ್ದಾಗ ತಮ್ಮ ವೈಯುಕ್ತಿಕ ಖಾತೆಯಿಂದ ಅವರಿಗೆ ನೆರವು ನೀಡಿದರು. ಕರ್ನಾಟಕ – ಆಂಧ್ರ ಪ್ರದೇಶಗಳಲ್ಲಿ ನೆರೆ ಬಂದಾಗ ಸಂಸತ್ ಸದಸ್ಯರಾಗಿ ತಾವು ಪಡೆಯುತ್ತಿದ್ದ ಒಂದು ವರ್ಷದ ಸಂಬಳವನ್ನು ನೆರೆ ಸಂತ್ರಸ್ತರ ನಿಧಿಗೆ ದೇಣಿಗೆ ಕೊಟ್ಟರು.

ಟಿ.ಎ. ಪೈ ತನ್ನವರ ಬಗ್ಗೆ ತುಂಬ ಕಾಳಜಿ ವಹಿಸುತ್ತಿದ್ದರು. ಅವರ ಸಹಾಯಕರಾಗಿದ್ದ ಸಂಪತ್ ಒಂದು ಘಟನೆಯನ್ನು ನೆನಪಿಸಿಕೊಳ್ಳುತ್ತಾರೆ: ಒಮ್ಮೆ ಯುರೋಪು ಪ್ರವಾಸದಲ್ಲಿದ್ದಾಗ ದಿನವಿಡೀ ಕೆಲಸದ ಒತ್ತಡದಿಂದಾಗಿ ಸಂಪತ್ ಕುರ್ಚಿಯಲ್ಲಿ ಕುಳಿತಲ್ಲೇ ಕುಸಿದುಬಿದ್ದರು. ಟಿ.ಎ. ಪೈ ತಮ್ಮ ಆಪ್ತರು ಏನು ಮಾಡುತ್ತಿದ್ದಾರೆಂದು ಇಣುಕಿ ನೋಡುತ್ತಾರೆ, ಸಂಪತ್ ಕುಳಿತಲ್ಲೇ ಕುಸಿದು ಬಿಟ್ಟಿದ್ದಾರೆ. ಟಿ.ಎ. ಪೈ ಮೆಲ್ಲನೇ ತಮ್ಮ ಸಹಾಯಕರ ಬೂಟುಗಳನ್ನು ಕಳಚಿ, ಟೈಗಳನ್ನು ಸಡಿಲಿಸಿ, ಹೊರಕೋಟನ್ನು ಕಳಚಿ ಅವರನ್ನೆತ್ತಿ ಹಾಸಿಗೆಯಲ್ಲಿ ಮಲಗಿಸಿದರು. ಎಚ್ಚರವಾದಾಗ ಅವರಿಗೆ ಬೇಕಿದ್ದ ನೀರು, ಔಷಧಿಗಳು ಕೂಡಲೇ ದೊರಕುವಂತೆ ಬದಿಯಲ್ಲಿ ಇರಿಸಿದ್ದರು. ‘‘ಯಾವ್ ಬಾಸ್ ತಾನೇ ತನ್ನ ಯಃಕಶ್ಚಿತ್ ಸಹಾಯಕನಿಗೆ ಹೀಗೆ ಮಾಡಲು ಸಾಧ್ಯ?’’ ಎಂದು ಸಂಪತ್ ಕೇಳುತ್ತಾರೆ.

ಒಂದು ಕಾಲದಲ್ಲಿ ಅಧಿಕಾರದಲ್ಲಿದ್ದು ಅದನ್ನು ಕಳಕೊಂಡವರ ಬಗೆಗೂ ಅನಂತ್ಗೆ ಸ್ವಲ್ಪಮಟ್ಟದ ಸಹಾನೂಭೂತಿ ಇತ್ತು. ಜನತಾ ಪಾರ್ಟಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗ ಮಾಜಿ ರಾಷ್ಟ್ರಪತಿ ಶ್ರೀ ವಿ.ವಿ. ಗಿರಿ ಅವರಿಗೆ ಒದಗಿಸಲಾಗಿದ್ದ ಎ.ಸಿ. ರೇಲ್ವೇ ಪಾಸನ್ನು ಹಿಂತೆಗೆದು ಕೊಂಡಿತು. ಅನಂತ ಪೈ ರೇಲ್ವೆ ಮಂತ್ರಿಯಾದೊಡನೇ ಈ ಸವಲತ್ತನ್ನು ಮರಳಿ ಒದಗಿಸಿದ್ದಲ್ಲದೇ ಗಿರಿಯವರ ಸಹಾಯಕನಿಗೂ ರೇಲ್ವೆ ಪಾಸ್ ಒದಗಿಸಿ ಅದರ ಕುರಿತು ಮಾಜಿ ಅಧ್ಯಕ್ಷರಿಗೆ ಸ್ವತಃ ಟೆಲಿಫೋನ್ ಮುಖಾಂತರ ವಿಷಯವನ್ನು ತಿಳಿಸಿದರು. ಗಿರಿಯವರಿಗೆ ಇದೊಂದು ವಿಶೇಷ ಹೃದಯಸ್ಪರ್ಶಿ ನಡವಳಿಕೆ ಆಯಿತು. ರೇಲ್ವೇ ಉದ್ಯೋಗಿಗಳಿಗೆ ಬೋನಸ್ ನೀಡುವ ನಿರ್ಧಾರವಾಗಿ ಅದರ ಕುರಿತು ಮೊದಲು ಮಾಹಿತಿಯನ್ನು ಗಿರಿಯವರಿಗೆ ತಿಳಿಸುವ ಸೌಜನ್ಯವನ್ನು ಟಿ.ಎ. ಪೈ ತೋರಿಸಿದರು. ಗಿರಿಯವರು ಹಿಂದೆ ರೇಲ್ವೇ ಯೂನಿಯನ್ ಗಳೊಂದಿಗೆ ಸಂಬಂಧ ಉಳ್ಳವರಾದ್ದರಿಂದ ಅವರಿಗೆ ಈ ಮಾಹಿತಿ ನೀಡಿದರು. ಗಿರಿ ಅವರಿಗೆ ಇದು ತುಂಬ ತೃಪ್ತಿಯನ್ನುಂಟುಮಾಡಿತು.

ಟಿ.ಎ. ಪೈ ಅವರಿಗೆ ಸಾವಿರಾರು ಜನರ ಪರಿಚಯ. ಎಲ್ಲರ ಹೆಸರಲ್ಲದಿದ್ದರೂ ಮುಖ ಪರಿಚಯದಿಂದ ಮಾತನಾಡಿಸುತ್ತಿದ್ದರು. ಅನೇಕ ವೇಳೆ ಅವರ ಪತ್ನಿ, ಮಕ್ಕಳ ಹೆಸರೂ ಅವರ ನೆನಪಿನಲ್ಲುಳಿಯುತ್ತಿತ್ತು.

ಅವರು ಕೋಪಿಸಿಕೊಂಡದ್ದನ್ನಾಗಲೀ, ದನಿ ಎತ್ತಿ ಮಾತಾಡಿದ್ದನ್ನಾಗಲೀ ನಾನಿದುವರೆಗೆ ಕಂಡಿದ್ದಿಲ್ಲ. ಆದರೆ ಅನೇಕ ವೇಳೆ ಅವರು ಉದ್ವಿಗ್ನಗೊಳ್ಳುತ್ತಿದ್ದರು. ಅವರದು ಎಲ್ಲರ ಮನಸ್ಸನ್ನು ಗೆಲ್ಲುವ ನಿಷ್ಕಪಟ ಸ್ವಭಾವ. ಇಷ್ಟು ಲೋಕಾನುಭವವುಳ್ಳವರಾದರೂ ಅವರಲ್ಲಿ ಕೆಲವೊಮ್ಮೆ ಮಗುವಿನ ಮೊದ್ದುತನದ ಎಳೆಯೂ ಇತ್ತು. ಅವರ ಸ್ವಭಾವವನ್ನು ಮನ್ನಿಸದವರೂ ಅವರನ್ನು ದ್ವೇಷಿಸುವಂತಿರಲಿಲ್ಲ.

ಅವರ ಸ್ನೇಹ ಎಂದರೆ ಅದೇ ಒಂದು ಆಧಾರ. ಅದು ನಮ್ಮಿಂದ ಆಧಾರ ಪಡೆಯುವಂಥದ್ದಲ್ಲ. ಅವರೆಂದೂ ಯಾರೊಡನೆಯೂ ಯಾಚಿಸಿದ್ದಿಲ್ಲ. ಸ್ನೇಹ ತೋರಿದವರನ್ನು ಹಾರ್ದಿಕವಾಗಿ ತಮ್ಮ ಆಪ್ತರಾಗಿ ಗಣಿಸುತ್ತಿದ್ದರು. ನನಗೆ ಅಷ್ಟು ಆಪ್ತರಾಗಿದ್ದ ಬೇರೆ ಗೆಳೆಯರಿರಲಿಲ್ಲ.

ಅವರಲ್ಲಿ ಕೃತಕತೆಯ ಲವಲೇಶವೂ ಇರಲಿಲ್ಲ. ಯಾವ ಸಂಕುಚಿತ ಮನೋಭಾವನೆಯೂ ಇರಲಿಲ್ಲ. ಕ್ಷುಲ್ಲಕ ವಿಚಾರಗಳಲ್ಲಿ ಅವರ ಮನ ಹೋಗದು. ಮನಸ್ಸು ಎಂದಿಗೂ ಕಠಿಣವಾಗದು. ಆದರೂ ಅಷ್ಟು ಅನುಭವ ಸಂಪಾದಿಸಿದರೂ, ಅದೆಷ್ಟೋ ಜನರನ್ನು ಸನಿಹದಿಂದ ಬಲ್ಲವರಾದರೂ, ಅವರು ಪೂರ್ಣಗ್ರಾಹಿ (sophisticated) ಆಗಿರಲಿಲ್ಲ. ಯಾಕೆಂದು ನನಗೇ ತಿಳಿಯದು.

ಅವರಲ್ಲಿ ಕೆಲವೊಂದು ನ್ಯೂನತೆಗಳಿದ್ದುದು ನಿಜ. ನಾನದನ್ನು ಬೇರೆ ಕಡೆ ಹೇಳಿದ್ದೇನೆ. ಆದರೆ ಅದರ ಬಗ್ಗೆ ಅವರು ನಾಚಿಕೆ ಪಡುವಂತಿರಲಿಲ್ಲ. ಅನಂತ ಮನುಷ್ಯರೇ ಆಗಿದ್ದರು. ಅವರ ಕುರಿತು ಯೋಚಿಸುವಾಗ ಶೇಕ್ಸ್ಪಿಯರ್ನ ಮಾತುಗಳು ನೆನಪಾಗುತ್ತವೆ :

ಅವನು ಮಾನವರಲ್ಲೊಬ್ಬ

ಅವನ ಜೀವನ ಮೃದು ಅವನ

ಗುಣಗಳ ಮಿಳನ ಹೇಗಿತ್ತೆಂದರೆ ಪ್ರಕೃತಿ ಎದ್ದು

ನಿಂತು ಸಾರುವಂತಿತ್ತು. ಈತನೊಬ್ಬ ಮಾನವ!

ಅವರ ಜೀವನ ಮೃದು. ಅವರು ಮೃದು. ಅವರ ಗೆಳೆತನ ನನಗೀಗ ಇಲ್ಲ. ನನ್ನ ಜೊತೆ ಈ ಜೀವಕ್ಕೆ ನಮನ ಸಲ್ಲಿಸುವವರು ನೂರಾರು ಜನ ಇದ್ದಾರೆಂಬುದು ಸತ್ಯ.

ನಾಡೋಜ ಪಾ.ಪು. (ಪಾಟೀಲ ಪುಟ್ಟಪ್ಪ) ಅವರಿಗೆ ಟಿ.ಎ. ಪೈಗಳ ಬಗ್ಗೆ ಎಷ್ಟು ಬರೆದರೂ ಕಡಿಮೆಯೇ. ಅಷ್ಟೊಂದು ಆವರಿಸಿಕೊಂಡು ಬಿಟ್ಟವರು ಟಿ.ಎ. ಪೈ ಅವರು. ಟಿ.ಎ. ಪೈ ಕುರಿತ ಪಾಪು ಅವರ ಇನ್ನೊಂದು ನುಡಿಚಿತ್ರ ಸುದೀರ್ಘವಾಗಿದೆ :

ನಾನು ಮನುಷ್ಯ ಸ್ವಭಾವದಲ್ಲಿ ನಂಬಿಕೆ ಇರಿಸಿಕೊಂಡವನು. ಆದರೆ ಆ ನಂಬಿಕೆ ಪೂರ್ಣತ್ವಕ್ಕೆ ಬರಲಿಲ್ಲ. ಬೆಂಕಿಯಿಂದ ಸುಟ್ಟುಕೊಂಡ ಹುಡುಗ ಬೆಂಕಿಗೆ ಹೆದರಿಕೊಳ್ಳುವವನಂತೆ ನನ್ನ ಪರಿಸ್ಥಿತಿಯಾಗಿತ್ತು.

ಸಿಂಡಿಕೇಟ್ ಬ್ಯಾಂಕಿನ ಸಾಲದ ಬಡ್ಡಿ ದಿನದಿನಕ್ಕೆ ಏರುತ್ತಿತ್ತು. ಬೆಂಗಳೂರು- ಹುಬ್ಬಳ್ಳಿಯ ಕಾರ್ಯಾಲಯದ ಖರ್ಚು, ಕಾಗದ, ಮುದ್ರಣದ ಖರ್ಚು ಒಂದೇ ಸಮನೆ ಬೆಳೆಯುತ್ತಿತ್ತು. ನಾಲ್ಕು ವರ್ಷಗಳಾದರೂ ಸಾಲ ತೀರಿಸದಿದ್ದರಿಂದ ಬ್ಯಾಂಕು ಒತ್ತಾಯ ಮಾಡುತ್ತಿತ್ತು. ನನ್ನ ಮನದ ಹೊಯ್ದಟವನ್ನು ನೋಡಿದ ನನ್ನ ಹೆಂಡತಿ ಒಂದು ದಿನ ‘‘ಈ ನಿಜಲಿಂಗಪ್ಪ, ವೀರೇಂದ್ರ ಪಾಟೀಲ ನಿಮಗೇನೂ ಸಹಾಯ ಮಾಡುವವರಲ್ಲ. ಕನಿಷ್ಟ ಪಕ್ಷ ಅವರು ನಿಮ್ಮ ಪತ್ರಿಕೆಯ ಚಂದಾದಾರರಾದರೂ ಇದ್ದಾರೆಯೇ?’’ ಎಂದು ಕೇಳಿದಳು. ಆಕೆ ಹಾಗೆ ಕೇಳಿದ್ದರಲ್ಲಿ ಯಾವ ತಪ್ಪೂ ಇರಲಿಲ್ಲ.

ಕೆಲಸಗಾರರ ಪ್ರಾವಿಡೆಂಟ್ ಫಂಡಿನ ಹಣ 79,000 ರೂಪಾಯಿ ತುಂಬಲು ಭಾರತ ಸರ್ಕಾರ ಕೇಸ್ ಹಾಕಿತ್ತು. ಸ್ಮಾಲ್ ಸ್ಕೇಲ್ ಇಂಡಸ್ಟ್ರೀಸ್ನವರು ಯಂತ್ರದ ಹಣ ತೀರಿಸಿಲ್ಲವೆಂದು ಒಂದು ಲಕ್ಷ ಹತ್ತು ಸಾವಿರ ರೂಪಾಯಿಗಳಿಗೆ ಡಿಕ್ರಿ ಹಾಕಿದ್ದರು. ಸಿಂಡಿಕೇಟ್ ಬ್ಯಾಂಕಿನ ಸಾಲದ ಬಡ್ಡಿ ಒಂದು ಲಕ್ಷ ಇಪ್ಪತ್ತು ಸಾವಿರ ರೂಪಾಯಿಯಾಗಿತ್ತು. ಪ್ರಾವಿಡೆಂಟ್ ಫಂಡಿನ ಕೇಸಿನಲ್ಲಿ ಜೈಲಿಗೆ ಹೋಗುವ ಪರಿಸ್ಥಿತಿ ಇತ್ತು. ಮನೆಯಲ್ಲಿ ನಾಲ್ಕು ಮಕ್ಕಳು ಕಾಲೇಜು ಓದುತ್ತಿದ್ದರು. ಒಮ್ಮಿಂದೊಮ್ಮೆಲೇ ಕಷ್ಟದ ಹಿಮಾಲಯವೇ ತಲೆಯ ಮೇಲೆ ಕುಸಿದಂತಾಯಿತು. ಸಾಲ ತೀರಿಸಲು ಕಾರ್ ಮಾರಿದೆ. ಕಷ್ಟಗಳ ಭಾರ ಹೆಚ್ಚಾದಂತೆಲ್ಲ ಮುರುಘಾ ಮಠದ ತಪಸ್ವಿ ಮೃತ್ಯುಂಜಯ ಸ್ವಾಮಿಗಳ ನೆನಪಾಗುತ್ತಿತ್ತು. ಒಂದು ದಿನ ಧಾರವಾಡಿಗೆ ಹೋಗಿ ಸ್ವಾಮಿಗಳನ್ನು ಕಂಡು ಅವರೆದುರು ಎಲ್ಲವನ್ನೂ ತೋಡಿಕೊಂಡೆ. ಸ್ವಾಮಿಗಳು ‘‘ಎಷ್ಟೇ ಕಷ್ಟ ಬರಲಿ, ನಿಮ್ಮ ಗಾಡಿ ಎಲ್ಲಿಯೂ ನಿಲ್ಲುವುದಿಲ್ಲ; ಗಾಬರಿಯಾಗಬೇಡಿ; ದೇವರು ಎಲ್ಲ ಸರಿ ಮಾಡ್ತಾನೆ’’ ಎಂದು ಆಶೀರ್ವದಿಸಿದರು.

ಎಲ್ಲೆಡೆಗೆ ಕತ್ತಲೆಯಾವರಿಸಿದಾಗ, ಈ ಜಗತ್ತಿನಲ್ಲಿ ನನ್ನವರೆನ್ನುವವರು ಯಾರೂ ಇಲ್ಲವೆಂಬ ಅನಾಥ ಭಾವ ಮೂಡಿ ನಿಂತಾಗ ಸ್ವಾಮಿಗಳ ಆಶೀರ್ವಚನ ಗಾಳಿಯಲ್ಲಿ ತರಗೆಲೆಯಂತೆ ಹೊಯ್ದಡುವ ಮನಸ್ಸಿಗೆ ನೆಮ್ಮದಿ ದೊರಕಿಸಿಕೊಟ್ಟಿತು. ಎಷ್ಟೋ ದಿನಗಳಿಂದ ಸ್ಥಿಮಿತ ಕಳೆದುಕೊಂಡಿದ್ದ ಮನಃಶಾಂತಿ ಮತ್ತೆ ತಿರುಗಿ ಕಾಣಿಸಿತು.

ಎರಡನೆಯ ದಿನ ಮಧ್ಯಾಹ್ನ ಮನೆಯಲ್ಲಿ ನಾನೊಬ್ಬನೇ ಇದ್ದೆ. ಯಾರೋ ಕರೆಗಂಟೆ ಬಾರಿಸಿದರೆಂದು ಬಾಗಿಲು ತೆರೆದರೆ, ಯಾರೋ ಅಪರಿಚಿತ ವ್ಯಕ್ತಿ ನಿಂತಿದ್ದ. ‘‘ಯಾರು?’’ ಎಂದೆ. ‘‘ನಾನು ಒಳಗೆ ಬರಬಹುದೇ?’’ ಆ ಆಗಂತುಕ ಕೇಳಿದ. ‘‘ಬನ್ನಿ’’ ಎಂದು ಹೇಳಿ ಆತನಿಗೆ ಕೂಡಿಸಿದೆ. ಆತ ಯಾರು, ಯಾಕೆ ಬಂದಿದ್ದಾನೆಂಬುದು ನನಗೆ ಗೊತ್ತಿರಲಿಲ್ಲ. ನನ್ನ ತುಮುಲವನ್ನು ಅರ್ಥ ಮಾಡಿಕೊಂಡ ಆತ ‘‘ನಾನು ತುಂಬ ವರ್ಷದಿಂದ ನಿಮ್ಮ ‘ಪ್ರಪಂಚ’ ಮತ್ತು ‘ವಿಶ್ವವಾಣಿ’ ಓದುತ್ತಿರುವೆ. ನಾನು ನಿಮ್ಮ ಅಭಿಮಾನಿ. ನನಗೆ ನಿಮ್ಮ ಬರವಣಿಗೆ ಅಚ್ಚುಮೆಚ್ಚಿನದು. ನಿಮ್ಮನ್ನು ಭೇಟಿಯಾಗಬೇಕೆಂದು ಬಹಳ ದಿನಗಳಿಂದ ಬಯಸುತ್ತಿದ್ದೆ. ನೀವೀಗ ಆರ್ಥಿಕ ತೊಂದರೆಯಲ್ಲಿದ್ದೀರಿ ಎಂದು ಕೇಳಿದ್ದೇನೆ. ನನ್ನಿಂದಾದ ಸಹಾಯವನ್ನು ಮಾಡಬೇಕೆಂದು ಬಂದಿದ್ದೇನೆ. ದಯವಿಟ್ಟು ತಪ್ಪು ತಿಳಿಯಬೇಡಿ’’ ಎಂದು ಒಂದೇ ರಾಗದಲ್ಲಿ ಮಾತಾಡುತ್ತ ತಾನು ಕಾಗದದಲ್ಲಿ ಸುತ್ತಿ ತಂದ ನೋಟಿನ ಕಂತೆಯನ್ನು ನನ್ನ ಕೈಯಲ್ಲಿಟ್ಟು ನಮಸ್ಕರಿಸಿದ. ನಾನು ದಿಗ್ಭ್ರಮೆಗೊಂಡು ‘‘ನೀವು ಯಾರು? ಎಲ್ಲಿಂದ ಬಂದಿರಿ? ಇದೆಲ್ಲ ಯಾಕೆ?’’ ಎಂದು ಕೇಳಿದೆ. ಆತ ‘‘ನನ್ನ ಊರು, ಹೆಸರು, ವಿಳಾಸ, ಜಾತಿ, ವೃತ್ತಿ ಏನನ್ನೂ ಕೇಳಬೇಡಿ. ಇದು ನಿಮಗಾಗಿ ನನ್ನ ಸೇವೆ! ಇದನ್ನು ಯಾರಿಗೂ ಹೇಳಬೇಕಾಗಿಲ್ಲ. ನಿಮ್ಮ ಆಶೀರ್ವಾದ ನನ್ನ ಮೇಲೆ ಮತ್ತು ನನ್ನ ಕುಟುಂಬದ ಮೇಲೆ ಇರಲಿ’’ ಎಂದು ಹೇಳಿದವನೇ ಅಲ್ಲಿಂದ ಎದ್ದು ಹೊರಟು ಹೋದ. ಆತ ಕೊಟ್ಟ ನೋಟನ್ನು ಎಣಿಸಿದರೆ ಇಪ್ಪತ್ತೈದು ಸಾವಿರ ರೂಪಾಯಿಗಳಿದ್ದವು. ಇಂದಿಗೂ ಈ ವ್ಯಕ್ತಿ ಯಾರೆಂದು ನನಗೆ ಗೊತ್ತಿಲ್ಲ. ಆತ ನನ್ನಿಂದ ಏನು ಬಯಸಿ ಬಂದಿದ್ದನೆಂಬುದೂ ನನಗೆ ಗೊತ್ತಿಲ್ಲ. ಈ ಘಟನೆ ನೆನಪಾದಾಗ ನನ್ನ ಕಣ್ಣುಗಳು ತೇವಗೊಳ್ಳುತ್ತವೆ.

ಈ ಘಟನೆ ಕನಸಿನಲ್ಲಿ ನಡೆದಂತೆ ನಡೆದು ಹೋಗಿತ್ತು. ದೇವರೇ ಮನುಷ್ಯನ ರೂಪದಲ್ಲಿ ಹೀಗೆ ನನ್ನ ಸಹಾಯಕ್ಕೆ ಧಾವಿಸಿ ಬಂದಿರಬಹುದೆಂದು ಮನಸ್ಸು ಹೇಳುತ್ತದೆ. ಮಹಾತಪಸ್ವಿ ಮೃತ್ಯುಂಜಯ ಸ್ವಾಮಿಗಳ ಅಮೃತವಾಣಿ ಕಿವಿಯಲ್ಲಿ ಮೊಳಗುತ್ತದೆ.

25,000 ರೂಪಾಯಿಗಳು ನನ್ನ ಜೀವನದಲ್ಲಿ ಹೊಸ ಚೈತನ್ಯವನ್ನು ತುಂಬಿದವು. ಚಂದಾದಾರರಿಂದ, ಏಜೆಂಟರಿಂದ ಬರಬೇಕಾದ ಹಣವನ್ನು ಕೂಡಿಸುವ ಕ್ರಮ ಕೈಕೊಂಡೆ, ಜಾಹೀರಾತಿನ ಹಣದಲ್ಲಿ ಬಹಳಷ್ಟನ್ನು ವಸೂಲಿ ಮಾಡಿದೆ. ಒಟ್ಟು 75,000 ರೂಪಾಯಿ ಕೂಡಿದವು. ಪ್ರಾವಿಡೆಂಟ್ ಫಂಡನ್ನು ಕಟ್ಟಲು ಇನ್ನೂ 4,000 ರೂಪಾಯಿ ಬಾಕಿ ಉಳಿದಿತ್ತು. ಡಾ. ನಾಗಪ್ಪ ಅಳ್ವಾರು 2,000 ರೂಪಾಯಿ ಕೊಟ್ಟರು. ನನ್ನ ಪರಿಚಯದ ಮನುಷ್ಯರೊಬ್ಬರು ಸಚಿವರಾಗಿದ್ದರು. ಅವರು ಸಚಿವರಾಗಲು ನನ್ನ ಸಹಾಯವನ್ನು ಪಡೆದಿದ್ದರು. ಅವರಲ್ಲಿ ಒಂದು ಸಾವಿರ ರೂಪಾಯಿ ಸಾಲ ಕೇಳಿದೆ. ಅವರು ‘‘ಏನು ಮಾಡುವುದು ಹೇಳಿ? ನನ್ನಲ್ಲಿ ದುಡ್ಡೇ ಇಲ್ಲ; ಐದು ನೂರು ರೂಪಾಯಿ ಇದೆ ಕೊಡಲೇ?’’ ಎಂದು ಕೇಳಿದರು. ನಾನು ‘‘ಬೇಡ; ನಿಮಗೆ ಸುಮ್ಮನೆ ತೊಂದರೆ ಕೊಟ್ಟೆ’’ ಎಂದು ಹೇಳಿ ಅವರ ಐದುನೂರು ರೂಪಾಯಿಗಳನ್ನು ನಯವಾಗಿ ತಿರಸ್ಕರಿಸಿದೆ. ಹಾಗೂ ಹೀಗೂ ಮಾಡಿ ಕೊನೆಗೊಮ್ಮೆ 79,000 ರೂಪಾಯಿಗಳನ್ನು ಕೂಡಿಸಿ ಪ್ರಾವಿಡೆಂಟ್ ಫಂಡಿನ ಹಣ ಕಟ್ಟಿದೆ. ಫಂಡಿನ ಹಣ ಕಟ್ಟದಿದ್ದಿದ್ದರೆ ಯಾವ ಕಾಲಕ್ಕೂ ಬಂಧಿಸಲ್ಪಡುತ್ತಿದ್ದೆ.

ಒಂದು ಸಂಕಟದಿಂದ ಪಾರಾಗುತ್ತಿದ್ದಂತೆಯೇ ಇನ್ನೊಂದು ಸಂಕಟ ಎದುರು ಬಂದು ನಿಂತಿತು. ಸ್ಮಾಲ್ ಸ್ಕೇಲ್ ಇಂಡಸ್ಟ್ರೀಸ್ನಲ್ಲಿ ಮಾಡಿದ ಸಾಲದ ಡಿಕ್ರಿಯಂತೆ ಒಂದು ಲಕ್ಷ ಹತ್ತು ಸಾವಿರ ರೂಪಾಯಿಗಳನ್ನು ತುಂಬಬೇಕಿತ್ತು. ನಾನು ಮತ್ತೆ ಟಿ.ಎ. ಪೈಯವರನ್ನು ಭೇಟಿಯಾದೆ. ಆಗ ಸುಬ್ರಹ್ಮಣ್ಯಂ ಕೈಗಾರಿಕಾ ಸಚಿವರಾಗಿದ್ದರು. ಅವರಿಗೆ ಹೇಳಿ ತಾವು ಸಾಲವನ್ನು ಮನ್ನಾ ಮಾಡಿಸುವುದಾಗಿ ಪೈ ಹೇಳಿದರು. ಆದರೆ ಎರಡು ವರ್ಷವಾದರೂ ಸಾಲ ಮನ್ನಾ ಆಗದೇ ಅದರ ಬಡ್ಡಿ ಬೆಳೆಯುತ್ತಲೇ ಇತ್ತು. ಇದೇ ಕಾಲಕ್ಕೆ ಸುಬ್ರಹ್ಮಣ್ಯಂರಿಂದ ಕೈಗಾರಿಕೆ ಖಾತೆ ಟಿ.ಎ. ಪೈಯವರ ಕೈಗೆ ಬಂದಿದ್ದಿತು. ನಾನು ಪೈಯವರನ್ನು ಭೇಟಿಯಾದೆ. ಅವರು ‘‘ಪುಟ್ಟಪ್ಪ ನಿಮ್ಮ ಸಾಲ ಮನ್ನಾ ಆಯಿತೇ?’’ ಎಂದು ಕೇಳಿದರು. ನಾನು ‘‘ನನ್ನ ಎಲ್ಲಾ ಕೆಲಸಗಳು ನಿಮ್ಮಿಂದಲೇ ಆಗಬೇಕೆಂದು ದೇವರ ಇಚ್ಛೆ ಇರಬೇಕು. ಈಗಂತೂ ನಿಮ್ಮ ಬಳಿಯೇ ಖಾತೆ ಇದೆ. ನೀವು ಮನಸ್ಸು ಮಾಡಿದರೆ ಆಗುತ್ತದೆ’’ ಎಂದೆ. ಪೈಯವರು ‘‘ಆಗಲಿ ಮಾಡೋಣ, ನೀವೊಮ್ಮೆ ಮದ್ರಾಸಿನ ನಮ್ಮ ಕಚೇರಿಗೆ ಹೋಗಿ ಬನ್ನಿ’’ ಎಂದು ಹೇಳಿದರು. ನಾನು ಮದ್ರಾಸಿಗೆ ಹೋಗಿ ಅಧಿಕಾರಿಗಳನ್ನು ಕಂಡೆ. ಪೈಯವರು ಮೊದಲೇ ಅಧಿಕಾರಿಗಳಿಗೆ ನನ್ನ ಬಗ್ಗೆ ಹೇಳಿದ್ದರು. ಅಧಿಕಾರಿಗಳು ನನಗೆ ರಾಜಮರ್ಯಾದೆಯನ್ನು ಮಾಡಿ ನನ್ನ ಸಮಸ್ಯೆಯನ್ನೆಲ್ಲ ಕೇಳಿ ಅಸಲನ್ನು ಮಾತ್ರ ತುಂಬಿಸಿಕೊಂಡು ಋಣಮುಕ್ತರನ್ನಾಗಿಸಿದರು.

ಇನ್ನು ಸಿಂಡಿಕೇಟ್ ಬ್ಯಾಂಕಿನ ಸಾಲ ಬಾಕಿ ಇತ್ತು. ಅದೂ ಹನುಮಂತನ ಬಾಲದಂತೆ ದಿನದಿಂದ ದಿನಕ್ಕೆ ಬೆಳೆಯುತ್ತಿತ್ತು. ಟಿ.ಎ. ಪೈಯವರು ಮಣಿಪಾಲಿಗೆ ಬಂದಿದ್ದರು. ನಾನು, ಹೆಂಡತಿ ಅವರನ್ನು ಭೇಟಿಯಾಗಿ ಬರಲು ಹೊರಟೆವು. ನಾವು ಬರುವ ಸುದ್ದಿ ಮೊದಲೇ ತಿಳಿಸಿರಲಿಲ್ಲ. ಅವರ ಮನೆಗೆ ಹೋದರೆ ಪೈಯವರು ಒಂದು ಮೀಟಿಂಗ್ಗೆ ಹೋಗುವ ಅವಸರದಲ್ಲಿದ್ದರು. ನನ್ನನ್ನು ನೋಡಿ ‘‘ಏನು ಪುಟ್ಟಪ್ಪ ಏಕೆ ಬಂದಿದ್ದೀರಿ?’’ ಎಂದು ಕೇಳಿದರು. ನಾನು ‘‘ನಿಮ್ಮ ಬಳಿ ಒಂದು ಕೆಲಸವಿತ್ತು’’ ಎಂದು ಹೇಳಿದೆ. ‘‘ನಾನೊಂದು ಮೀಟಿಂಗಿಗೆ ಹೊರಟಿದ್ದೇನೆ. ಈಗಾಗಲೇ ಹತ್ತು ನಿಮಿಷ ತಡವಾಗಿದೆ. ನೀವು ಮಧ್ಯಾಹ್ನ ಮೂರು ಗಂಟೆಗೆ ಬರಲು ಸಾಧ್ಯವೇ?’’ ಎಂದು ಕೇಳಿದರು. ನಾನು ‘‘ಹುಂ’’ ಅಂದೆ. ಪೈಯವರು ಮಧ್ಯಾಹ್ನವಲ್ಲ ರಾತ್ರಿ ಕರೆದರೂ ನಾನು ಹೋಗಲು ಸಿದ್ಧನಾಗಿಯೇ ಬಂದಿದ್ದೆ!

ನಾನು , ಹೆಂಡತಿ ಉಡುಪಿಯ ಶ್ರೀಕೃಷ್ಣ ದೇವಾಲಯಕ್ಕೆ ಹೋದೆವು. ದೇವಾಲಯದ ಬಾಗಿಲ ಬಳಿಯಲ್ಲಿಯೇ ‘ಪ್ರಪಂಚ’ದ ಹಾಳೆಗಳು ಬಿದ್ದಿದ್ದವು. ಡಾ. ಡಿ.ಸಿ. ಪಾವಟೆಯವರು ರಶಿಯಾಕ್ಕೆ ಹೋದ ಸಂದರ್ಶನ ಪ್ರಕಟವಾಗಿದ್ದ ಹಾಳೆಗಳವು. ನಾನು ಇಂದುಮತಿಗೆ ‘ನೋಡು, ನಮಗಿಂತ ಮುಂಚೆ ನಮ್ಮ ಅರ್ಜಿ ಕೃಷ್ಣನ ಸನ್ನಿಧಿಗೆ ಬಂದಿದೆ. ಈಗ ಆತನೇ ಅದನ್ನು ವಿಲೇವಾರಿ ಮಾಡಬೇಕು’ ಎಂದೆ. ಆಕೆ ನಗುತ್ತ ಆ ಎರಡೂ ಕಾಗದಗಳನ್ನು ಎತ್ತಿಕೊಂಡು ತನ್ನ ಪರ್ಸಿನಲ್ಲಿ ಇಟ್ಟುಕೊಂಡಳು.

ದೇವರ ದರ್ಶನ ಮುಗಿಸಿ, ದೇವಾಲಯವನ್ನು ನೋಡಿಕೊಂಡು ಹೊರಡುತ್ತಿರುವಂತೆಯೇ ಒಬ್ಬರು ಓಡುತ್ತ ನಮ್ಮೆಡೆಗೆ ಬಂದರು. ‘‘ನೀವು ಪಾಟೀಲ ಪುಟ್ಟಪ್ಪನವರಲ್ಲವೇ?’’ ಎಂದು ಕೇಳಿದರು. ನಾನು ‘‘ಹೌದೆಂದೆ’’. ‘‘ನೀವು ಬಂದಿರುವುದು ಗುರುಗಳಿಗೆ ಗೊತ್ತಾಗಿದೆ’’ ಎಂದರು. ‘‘ಯಾವ ಗುರುಗಳು?’’ ಎಂದೆ. ‘‘ಪೇಜಾವರ ಶ್ರೀಗಳಿಗೆ’’ ಆ ವ್ಯಕ್ತಿ ಹೇಳಿದರು. ‘‘ಅವರು ಮಠದಲ್ಲಿದ್ದಾರೆ. ತಾವು ಪ್ರಸಾದ ಸ್ವೀಕರಿಸಿ ಹೋಗಬೇಕಂತೆ’’ ಎಂದು ಹೇಳಿದರು. ನಾನು, ನನ್ನ ಹೆಂಡತಿ ಪೇಜಾವರ ಶ್ರೀಗಳ ದರ್ಶನ ಪಡೆದು ಸ್ವಲ್ಪ ಹೊತ್ತು ಮಾತನಾಡಿ, ಊಟ ಮುಗಿಸಿ, ಉಡುಪಿ ಸುತ್ತಾಡಿ ಮಧಾಹ್ನ ಮೂರು ಗಂಟೆಗೆ ಟಿ.ಎ. ಪೈಯವರ ಮನೆಗೆ ಹೋದೆವು. ಅವರ ಹೆಂಡತಿ ವಾಸಂತಿಯವರೂ ಇದ್ದರು. ಅವರು ನಮಗಾಗಿ ಭರ್ಜರಿ ಉಪಾಹಾರದ ವ್ಯವಸ್ಥೆಯನ್ನು ಮಾಡಿದ್ದರು. ‘‘ಏಕೆ ಬಂದಿದ್ದು?’’ ಪೈ ಕೇಳಿದರು. ನಾನು ಪ್ರಕರಣವನ್ನು ವಿವರಿಸಿ ‘‘ಸಿಂಡಿಕೇಟ್ ಬ್ಯಾಂಕಿನ ಸಾಲ ಮತ್ತು ಬಡ್ಡಿ ಬೆಳೆದು ನಿಂತಿವೆ. ಇದಕ್ಕೆ ಏನು ಪರಿಹಾರ ಸೂಚಿಸುತ್ತೀರಿ?’’ ಎಂದು ಕೇಳಿದೆ. ಅದಕ್ಕೆ ಪೈಯವರು ‘‘ಮೊದಲು ಕಾಫಿ ತಿಂಡಿ ಮುಗಿಸಿರಿ. ಅನಂತರ ಕೆ.ಕೆ. ಪೈಯವರನ್ನು ಕಂಡು ಬನ್ನಿ’’ ಎಂದರು. ಆಗ ಕೆ.ಕೆ. ಪೈ ಸಿಂಡಿಕೇಟ್ ಬ್ಯಾಂಕಿನ ಚೇರಮನ್ರಾಗಿದ್ದರು. ನಾನು ಅವರಲ್ಲಿ ಹೋದಾಗ ಟಿ.ಎ. ಪೈಯವರು ಕೆ.ಕೆ. ಪೈಯವರಿಗೆ ಫೋನ್ ಮಾಡಿ ನನ್ನ ಬಗ್ಗೆ ಹೇಳುವುದನ್ನೆಲ್ಲ ಹೇಳಿದ್ದರು.

ಕೆ.ಕೆ. ಪೈಯವರು ಬಡ್ಡಿಯನ್ನು ಬಿಟ್ಟು ಅಸಲನ್ನು ತುಂಬಲು ಹೇಳಿದರು. ನಾನು ತೆಗೆದುಕೊಂಡ ಸಾಲಕ್ಕೆ ಬಡ್ಡಿಯೇ ಎರಡೂವರೆ ಲಕ್ಷ ರೂಪಾಯಿಗಳಷ್ಟಾಗುತ್ತಿತ್ತು. ಬಡ್ಡಿಯಿಂದ ಮುಕ್ತನಾಗಿ ಅಸಲು ತುಂಬಲು ತಯಾರಾದೆ. ಅಲ್ಲಿಂದ ನೇರವಾಗಿ ಟಿ.ಎ. ಪೈಯವರ ಮನೆಗೆ ಬಂದೆವು.

ಪೈ ದಂಪತಿ ನಮಗೆ ಆತ್ಮೀಯ ಆತಿಥ್ಯ ನೀಡಿದರು. ಟಿ.ಎ. ಪೈಯವರು ‘‘ಪುಟ್ಟಪ್ಪ ನೀವು ಹೊಗಳಿದ ಜನ ನಿಮಗೇನು ಮಾಡಿದ್ದಾರೆ? ನೀವು ಸುಮ್ಮನೇ ಅವರನ್ನು ಹೊಗಳಿ ಅಟ್ಟಕ್ಕೇರಿಸುತ್ತೀರಿ. ಅವರ ಯೋಗ್ಯತೆ ಜನರಿಗೆ ತಿಳಿದಿರುತ್ತದೆ. ಇಂಥ ಅಯೋಗ್ಯರಿಂದ ನೀವು ಏನನ್ನು ನಿರೀಕ್ಷಿಸಲು ಸಾಧ್ಯ? ನೀವು ಹೊಗಳುವ ನಿಜಲಿಂಗಪ್ಪ, ವೀರೇಂದ್ರ ಪಾಟೀಲ, ಜತ್ತಿ ಮುಂತಾದವರಿಗೆ ನಾಲ್ಕು ಲಕ್ಷ ರೂಪಾಯಿ ಯಾವ ಲೆಕ್ಕ? ಇವರೆಲ್ಲ ಮನಸ್ಸು ಮಾಡಿದ್ದರೆ ನೀವು ಇಷ್ಟೆಲ್ಲ ಒದ್ದಾಡಬೇಕಾಗಿತ್ತೇ’’ ಎಂದು ಹೇಳಿದರು.

ಅವರ ಮನೆಯಿಂದ ಹೊರಡುವಾಗ ಪೈಯವರು ‘‘ಪುಟ್ಟಪ್ಪ ಇನ್ನೊಂದು ಬಾರಿ ನಿಮಗೆ ಸಿಂಡಿಕೇಟ್ ಬ್ಯಾಂಕಿನಿಂದ ಸಾಲ ಸಿಗುವುದಿಲ್ಲ. ನೀವು ಡಿಫಾಲ್ಟರ್ ಆಗಿದ್ದೀರಿ. ಬೇರೆ ಬ್ಯಾಂಕಿನಿಂದ ನಿಮಗೆ ನಾನು ಸಾಲ ಕೊಡಿಸಲು ವ್ಯವಸ್ಥೆ ಮಾಡುತ್ತೇನೆ’’ ಎಂದು ಹೇಳಿ ‘‘ಪುಟ್ಟಪ್ಪ ನಿಮ್ಮಲ್ಲಿ ಅದ್ಭುತ ಶಕ್ತಿ ಇದೆ; ಪ್ರತಿಭೆ ಇದೆ; ಭಾಷೆ ಇದೆ. But dont waste Your time on these useless people. ಅನೇಕರ ಇಮೇಜನ್ನು ನೀವು ಕಟ್ಟಿದ್ದೀರಿ. ಈಗ ನಿಮ್ಮ ಇಮೇಜಿಗೆ ಧಕ್ಕೆ ಬರುತ್ತಿರುವಾಗ ಈ ಜನ ಏನು ಮಾಡಿದರು? ನಿಮ್ಮ ಪತ್ರಿಕೆಯನ್ನು ನೋಡಿಯೇ ನಾವು ಈ ಜನರ ಹೆಸರುಗಳನ್ನು ತಿಳಿದುಕೊಂಡಿದ್ದು. ನಿಮ್ಮ ಬರವಣಿಗೆಯಿಂದ ಜನ ನಿಮ್ಮನ್ನು ತಪ್ಪು ತಿಳಿದುಕೊಳ್ಳುವಂತಾಗಿದೆ’’ ಎಂದರು. ಅವರು ಹೇಳಿದ ಮಾತು ಅಕ್ಷರಶಃ ಸತ್ಯ. ಟಿ.ಎ. ಪೈಯವರು ನನ್ನ ಸಂಕಟ ಕಾಲದಲ್ಲಿ ಸಹಾಯ ಮಾಡದಿದ್ದಿದ್ದರೆ ಈ ಪುಟ್ಟಪ್ಪ ಇಂದು ಜೀವಂತ ಇರುತ್ತಿರಲಿಲ್ಲ. ಉರುಳು ಹಾಕಿಕೊಳ್ಳುತ್ತಿದ್ದ. ನನ್ನನ್ನು ಬದುಕಿಸಿದ ಪುಣ್ಯಾತ್ಮ ಟಿ.ಎ. ಪೈಯವರು ಮಾತ್ರ.

ಪಾಟೀಲ ಪುಟ್ಟಪ್ಪನನ್ನು ರಾಜಕಾರಣಿಗಳು ಸಾಕಿದ್ದಾರೆಂದು ಜನರು ಭಾವಿಸುತ್ತಾರೆ. ಆದರೆ ನನ್ನ ಕಷ್ಟ ಕಾಲದಲ್ಲಿ ನನ್ನ ಭಾಗದ ದೇವರಾಗಿ ನಿಂತವರು ಟಿ.ಎ. ಪೈಯವರು ಮಾತ್ರ.

ಸುಪ್ರೀಂಕೋರ್ಟಿನ ನಿವೃತ್ತ ನ್ಯಾಯಾಧೀಶರಾದ ಕೃಷ್ಣ ಅಯ್ಯರ್ ಶ್ರೇಷ್ಠ ಚಿಂತಕರೆಂದು, ಉನ್ನತ ವ್ಯಕ್ತಿತ್ವದವರೆಂದು ಹೊಗಳಿಸಿಕೊಂಡವರು. ಟಿ.ಎ. ಪೈ ಅವರನ್ನು ಹತ್ತಿರದಿಂದ ಕಂಡವರು ಅವರು. ಅಂಥವರ ಪ್ರಕಾರ ಟಿ.ಎ.ಪೈ ಹೀಗೆ :

“ನಾನು ನನ್ನ ಜೀವಮಾನದಲ್ಲಿಯೇ ಟಿ.ಎ. ಪೈಯವರಂಥ, ಭ್ರಷ್ಟಾಚಾರದ ಸೋಂಕು ತಗಲದ ನಿರ್ಮಲ ಚಾರಿತ್ರ್ಯದ ರಾಜಕಾರಣಿಯನ್ನು ಬೇರೆ ಕಂಡಿಲ್ಲ.”

ಹೆಸರಾಂತ ಅರ್ಥಶಾಸ್ತ್ರಜ್ಞರೂ, ನಿಪುಣ ಆಡಳಿತಗಾರರೂ ಆಗಿದ್ದ ಕೆ.ಕೆ. ಪೈ ಅವರ ದೃಷ್ಟಿಯಲ್ಲಿ ಟಿ.ಎ. ಪೈ ಹೇಗೆ?

“ಈ ಶತಮಾನದಲ್ಲಿ ದೇಶ ಕಂಡ ಶ್ರೇಷ್ಠ ಅರ್ಥಶಾಸ್ತ್ರಜ್ಞ, ಆಡಳಿತಗಾರ ಶ್ರೀ ಟಿ.ಎ. ಪೈ. ಭವ್ಯ ವ್ಯಕ್ತಿತ್ವ, ಧೀಮಂತ ವಿಚಾರಧಾರೆ, ಮಾನವೀಯ ಅನುಕಂಪ – ಇವುಗಳು ಒಬ್ಬನೇ ವ್ಯಕ್ತಿಯಲ್ಲಿ ಮೇಳೈಸುವುದು ಅಪರೂಪ. ಮಣಿಪಾಲದ ಮಹಾಚೇತನ ಡಾ. ಟಿ.ಎಂ.ಎ. ಪೈ ಅವರ ಜತೆಯಲ್ಲಿ ಈ ಅದ್ಭುತ ಯಶಸ್ಸಿನ ಕಾರಣಕರ್ತರಲ್ಲೊಬ್ಬರು ಶ್ರೀ ಟಿ.ಎ. ಪೈ. ಅವರು ಯಾವುದೇ ಜವಾಬ್ದಾರಿಯಾಗಲಿ ಅದನ್ನು ಅತ್ಯಂತ ಸಮರ್ಪಕವಾಗಿ ನಿರ್ವಹಿಸಿದರು. ಸಿಂಡಿಕೇಟ್ ಬ್ಯಾಂಕ್, ಭಾರತೀಯ ಆಹಾರ ನಿಗಮ, ಜೀವ ವಿಮಾ ನಿಗಮ, ಕೇಂದ್ರ ಸರಕಾರದಲ್ಲಿ ವಿವಿಧ ಖಾತೆಗಳ ಮಂತ್ರಿ ಪದವಿ ಹೀಗೆ ಯಾವುದೇ ಕೆಲಸವನ್ನು ಇನ್ನಿಲ್ಲ ಎನ್ನುವ ರೀತಿಯಲ್ಲಿ ನಿರ್ವಹಿಸಿ, ಇಂದಿಗೂ ಅವರ ಸಂಪರ್ಕಕ್ಕೆ ಬಂದ ಮಂದಿ ಮೆಲುಕು ಹಾಕುವಂತಹ ಸಾಧನೆಗಳನ್ನು ಮಾಡಿದರು.”

 

“ದಿವಂಗತ ಟಿ.ಎ. ಪೈ ಅವರು ಬಹಳ ದೂರ ದೃಷ್ಟಿ ಹೊಂದಿದವರಾಗಿದ್ದರು. 1944ನೇ ಇಸವಿಯಲ್ಲಿ ನನ್ನ ಕಾಲೇಜ್ ಸಹಪಾಠಿಯಾಗಿದ್ದ ಅವರೊಡನೆ ಸಿಂಡಿಕೇಟ್ ಬ್ಯಾಂಕಿನಲ್ಲಿಯೇ ಸಹೋದ್ಯೋಗಿಯಾಗಿ ದುಡಿಯುವ ಅವಕಾಶ ನನಗಿತ್ತು. ಆರಂಭದ ದಿನಗಳಿಂದಲೂ ತನ್ನ ಸುತ್ತಮುತ್ತ ಇರುವ ಜನರನ್ನು ಹುರಿದುಂಬಿಸಿ ಅವರಿಂದ ಅದ್ಭುತ ಕಾರ್ಯಗಳನ್ನು ಮಾಡಿಸುವ ಆಡಳಿತ ನಿಪುಣತೆಯನ್ನು ಅವರು ಹೊಂದಿದ್ದರು.”

“ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕರ್ನಾಟಕ ರಾಜ್ಯಕ್ಕೆ ಸೀಮಿತವಾದ ಸಿಂಡಿಕೇಟ್ ಬ್ಯಾಂಕನ್ನು ರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದುದು ಅವರ ಹಿರಿಯ ಸಾಧನೆ. ಮಾತ್ರವಲ್ಲ ಬ್ಯಾಂಕುಗಳು ಹೇಗೆ ಕೆಲಸ ಮಾಡಬೇಕು, ಜನಜೀವನಕ್ಕೆ ಹೇಗೆ ಸ್ಪಂದಿಸಬೇಕು ಎಂಬುದನ್ನು ಸಿಂಡಿಕೇಟ್ ಬ್ಯಾಂಕ್ನ ಮೂಲಕ ಇಡೀ ರಾಷ್ಟ್ರದ ಬ್ಯಾಂಕಿಂಗ್ ವ್ಯವಸ್ಥೆಗೆ ತೋರಿಸಿಕೊಟ್ಟರು.”

ಪೈ ಅವರನ್ನು ಹೀಗೆ ಹಾಡಿ ತಣಿದವರ, ತಣಿಯುವವರ ಸಂಖ್ಯೆ ದೊಡ್ಡದೇ ಇದೆ. ಈಗ ಇಲ್ಲಿ ಇಷ್ಟು ಸಾಕು.

ಅಳಿಯುವುದು ಕಾಯ ಉಳಿಯುವುದು ಕೀರ್ತಿ

ಟಿ.ಎ. ಪೈಗಳು ಅವಿಶ್ರಾಂತವಾಗಿ ದುಡಿದರು. ಅವಿರಾಮವಾಗಿ ಚಿಂತಿಸಿದರು. ಬಹುಶಃ ಮೈ, ಮನ ಎರಡೂ ಪೂರ್ತಿ ಸೋತೇ ಹೋದವೇ? ದಿನಾಂಕ 29-05-1981ರಂದು ಅವರು ಹೃದಯಾಘಾತಕ್ಕೊಳ ಗಾದರು. ಎಲ್ಲ ಬಗೆಯ ಚಿಕಿತ್ಸೆಗಳಿಗೂ ನಿರುತ್ತರವೇ ಆದರು.

ಪ್ರಿಯ ಪತ್ನಿ ವಾಸಂತಿ ಪೈ ಅವರಿಗೆ, ಆಪ್ತ ಕುಟುಂಬ ವರ್ಗಕ್ಕೆ, ಆತ್ಮೀಯ ಅಭಿಮಾನಿ ಬಳಗಕ್ಕೆ ಇಷ್ಟೇ ಏನು? ಇಡೀ ರಾಷ್ಟ್ರಕ್ಕೇ ಕತ್ತಲಲ್ಲಿ ಮುಳುಗಿ ಹೋದ ಅನುಭವ. ಆದರೂ ಇದ್ದುದರಲ್ಲೇ ಸಮಾಧಾನ. ಅನಂತ ಪೈ ಇನ್ನಿಲ್ಲವೆಂಬುದೇ ಸುಳ್ಳು. ಏಕೆಂದರೆ ಅನಂತ ಪೈ ಸಾಧನೆ, ಕೊಡುಗೆ ಅದ್ಭುತ, ಶಾಶ್ವತ, ಅನಂತ. ನಿಜ. ಈಗ ಅಳಿದಿರುವುದು ಅವರ ಕಾಯ, ಅಷ್ಟೇ. ಉಳಿದಿರುವುದು ಕೀರ್ತಿ! ಕೀರ್ತಿಗೆಲ್ಲಿ ಅಳಿವು??

ಗ್ರಂಥಋಣ

1.       ಧೀಮಂತ ನಾಯಕ ಟಿ.ಎ. ಪೈ : ಲೇ. ಬಿ.ವಿ ಕೆದಿಲಾಯ

2.       ಟಿ.ಎ. ಪೈ : ಚಿಂತನೆ ಮತ್ತು ಸಾಧನೆ : ಪ್ರ.ಸಂ. ಡಾ. ಕೆ.ಕೆ. ಅಮ್ಮಣ್ಣಾಯ

 

ಅನುಬಂಧ – 1

ಟಿ.. ಪೈಗೆ ನಮನ

ವ್ಯಕ್ತಿತ್ವದಲಿ ಭವ್ಯ ಚಿಂತನೆಯು ನವ್ಯ

ಮಾತಿನಲಿ ಗಾಂಭೀರ್ಯ, ನಡತೆಯಲಿ ದಿವ್ಯ

ಕಾರ್ಯದಲಿ ಕೌಶಲ್ಯ, ಬಿಡದ ಕರ್ತವ್ಯ

ಅನಂತ ಪೈ ಬದುಕೆ ಆಯಿತು ಮಹಾಕಾವ್ಯ

 

ಸಿಂಡಿಕೇಟ್ ಬ್ಯಾಂಕ್ ಪ್ರಗತಿ ಅವರ ಕೈವಾಡ

ಆಹಾರ ನಿಗಮದಲಿ ಗೈದರು ಪವಾಡ

ಜೀವವಿಮೆ ನಿಗಮಕ್ಕೆ ನೀಡಿದರು ಜೀವ

ದೀನದಲಿತರಿಗವರು ಪ್ರತ್ಯಕ್ಷ ದೇವ

 

ಆಡಳಿತ ಪಟುವಾಗಿ ಮುಂದಾಳುವಾಗಿ

ಸಾಂಸದಿಕರಾಗಿ, ಕೇಂದ್ರದ ಸಚಿವರಾಗಿ

ನೀಡಿದರು ಸಮಸ್ಯೆಗಳಿಗೆಲ್ಲ ಪರಿಹಾರ

ಮಾಡಿದರು ರಾಷ್ಟ್ರಕ್ಕೆ ಮರೆಯದುಪಕಾರ

 

ನಷ್ಟದುದ್ಯಮಗಳಲಿ ತೋರಿದರು ಲಾಭ

ಕಷ್ಟದಲ್ಲಿಹ ಜನಕ್ಕೆ ಗೈದರು ಸಹಾಯ

ಶಿಷ್ಟತೆಗೆ ದಕ್ಷತೆಗೆ ದಯೆಗೆ ಪ್ರತಿಮೂರ್ತಿ

ಭ್ರಷ್ಟತೆಯ ಸೋಂಕು ತಗಲಿದ ಅಮಲ ಕೀರ್ತಿ

 

ಆದರ್ಶದುಪದೇಶ ನೀಡುವರು ಹಲರು

ಆಚರಿಸಿ ತೋರುವ ಮಹಾತ್ಮರೇ ಕೆಲರು

ಅಂಥ ಮೇರು ವ್ಯಕ್ತಿಗಳಲಿ ಒಂದಾಗಿ

ನಿಂತ ಟಿ.ಎ. ಪೈಗೆ ನಮಿಸೋಣ ಬಾಗಿ

ಬಿ.ವಿ. ಕೆದಿಲಾಯ

 

ಅನುಬಂಧ – 2

ಟಿ.. ಪೈ ದಾರಿ; ಹೆದ್ದಾರಿ

17-01-1922               :        ಜನನ

(ತಂದೆ : ಉಪೇಂದ್ರ ಪೈ; ತಾಯಿ : ಪಾರ್ವತಿ ಅಮ್ಮ)

1938                      :   ಎಸ್.ಎಸ್.ಎಲ್.ಸಿ.

1943                      :   ಬಿ.ಕಾಂ.

1943                      :   ಡೆಪ್ಯುಟಿ ಮೆನೇಜರ್, ಸಿಂಡಿಕೇಟ್ ಬ್ಯಾಂಕ್

1944                      :   ಜನರಲ್ ಮೆನೇಜರ್, ಸಿಂಡಿಕೇಟ್ ಬ್ಯಾಂಕ್

1952                      :   ಶಾಸಕರಾಗಿ ಆಯ್ಕೆ

1955                      :   ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆ

1957                      :   ಉಡುಪಿಯ ಎಂ.ಜಿ.ಎಂ. ಕಾಲೇಜಿನ ವ್ಯವಸ್ಥಾಪಕ

1962                      :   ದ.ಕ. ಜಿಲ್ಲಾ ಕೃಷಿ ಅಭಿವೃದ್ಧಿ ಸಂಘದ ಸ್ಥಾಪನೆ

1962                      :   ಆಡಳಿತ ನಿರ್ದೇಶಕರು, ಸಿಂಡಿಕೇಟ್ ಬ್ಯಾಂಕ್

01-01-0965               :                                                                                                          ಸ್ಥಾಪಕಾಧ್ಯಕ್ಷರು, ಭಾರತೀಯ ಆಹಾರ ನಿಗಮ

1966                      :   ಸಿಂಡಿಕೇಟ್ ಬ್ಯಾಂಕಿಗೆ ವಾಪಸ್ಸು

1968                      :   ಅಧ್ಯಕ್ಷರು, ಸಿಂಡಿಕೇಟ್ ಬ್ಯಾಂಕ್

19-07-1969               :                                                                                                          ಕಸ್ಟೋಡಿಯನ್, ಸಿಂಡಿಕೇಟ್ ಬ್ಯಾಂಕ್

1970                      :   ಅಧ್ಯಕ್ಷರು, ಭಾರತೀಯ ಜೀವ ವಿಮಾ ನಿಗಮ

1972                      :   ಜೀವ ವಿಮಾ ನಿಗಮದ ಅಧ್ಯಕ್ಷತೆಗೆ ವಿದಾಯ

22-07-1972               :                                                                                                          ರೈಲ್ವೆ ಸಚಿವರು, ಭಾರತ ಸರಕಾರ

08-09-1972               :                                                                                                          ವಸಂತಿ ಪೈ ಅವರೊಂದಿಗೆ ವಿವಾಹ

1972                      :   ಪದ್ಮಭೂಷಣ ಪ್ರಶಸ್ತಿ

03-02-1973               :                                                                                                          ಘನ ಉದ್ದಿಮೆ ಸಚಿವರು, ಭಾರತ ಸರಕಾರ

1973                      :   ಡಿ.ಲಿಟ್ ಗೌರವ, ಕರ್ನಾಟಕ ವಿಶ್ವವಿದ್ಯಾನಿಲಯ

1974                      :   ಕೈಗಾರಿಕಾ ಮತ್ತು ನಾಗರಿಕ ಸರಬರಾಜು ಸಚಿವರು,

ಭಾರತ ಸರಕಾರ

1975                      :   ಡಿ.ಲಿಟ್ ಗೌರವ, ಆಂಧ್ರ ವಿಶ್ವ ವಿದ್ಯಾನಿಲಯ

1977                      :   ಲೋಕಸಭೆಗೆ ಪುನರಾಯ್ಕೆ, ವಿರೋಧ ಪಕ್ಷದಲ್ಲಿ ನಿರ್ವಹಣೆ

1979                      :   ರೈಲ್ವೆ ಸಚಿವರು, ಚರಣ್ ನೇತೃತ್ವದ ಭಾರತ ಸರಕಾರ

1980                      :   ರಾಜಕೀಯ ಕ್ಷೇತ್ರದಿಂದ ಹೊರಗೆ. ಪೂರ್ತಿಯಾಗಿ
ಗ್ರಾಮೀಣ ಅಭಿವೃದ್ಧಿ, ಸಾರ್ವಜನಿಕ ರಂಗ-ಕಡೆಗೆ

29-05-1981               :                                                                                                          ಅನಂತದಲ್ಲಿ ಲೀನ

 

***

ಅನಂತ ಮುಖದ ಚೈತನ್ಯ

ಟಿ.. ಪೈ

 

ದೇವರು ಮತ್ತು ಟಿ.. ಪೈ ಇವರಿಬ್ಬರೂ ಬಂದು ನನ್ನ ಮನೆಯ ಕದ ತಟ್ಟಿದರೆ, ನಾನು ಮೊದಲು ಟಿ.. ಪೈಯವರನ್ನು ಒಳಗೆ ಕರೆಯುತ್ತೇನೆ. ದೇವರನ್ನು ಅನಂತರ ಕರೆಯುತ್ತೇನೆ.

ಟಿ.ಎ. ಪೈ ಅವರ ಬಗ್ಗೆ ಇಷ್ಟೊಂದು ಅತ್ಯಾದರದ, ಅಭಿಮಾನದ, ಗೌರವದ, ಹಾರ್ದಿಕವಾದ ಮಾತುಗಳನ್ನು ಆಡಿದವರು ಪೈಗಳ ದ.ಕ./ಉಡುಪಿ ಜಿಲ್ಲೆಯವರೇ? ಜಾತಿಯವರೇ? ಏನು, ಬಂಧುಗಳೇ?

ಯಾರೂ ಅಲ್ಲ. ಇವರಲ್ಲಿ ಯಾರಾದರೂ ಒಬ್ಬರಾಗಿದ್ದರೆ ಅದರಲ್ಲಿ ಆಶ್ಚರ್ಯ ಪಡುವಂಥದ್ದೇನೂ ಇರಲಿಲ್ಲ. ಆದರೆ ಹಾಗೆಂದು ಉದ್ಗರಿಸಿದವರು, ಸಮರ್ಪಿಸಿಕೊಂಡವರು ನಾಡಿನ ಆಚಾರ್ಯ ಪುರುಷರಲ್ಲೊಬ್ಬರಾದ ಪಾ.ಪು. – ಪಾಟೀಲ ಪುಟ್ಟಪ್ಪ ಅವರು!

ಧಾರವಾಡದ ಪಾಟೀಲ ಪುಟ್ಟಪ್ಪ ಅವರು ಬಹಳ ಹಿಂದೆಯೇ ವಿದೇಶದಲ್ಲಿ ಪತ್ರಿಕೋದ್ಯಮವನ್ನು ಪಾಸು ಮಾಡಿಕೊಂಡು ಬಂದವರು. ಕರ್ನಾಟಕದಲ್ಲಿ  ನಿರ್ಭೀತಿಯ,  ನಿರ್ಭಿಡೆಯ,  ವೈಚಾರಿಕತೆಯ  ಹಾಗೂ ನಿಷ್ಪಕ್ಷಪಾತತೆಯ ಪತ್ರಿಕೋದ್ಯಮಕ್ಕೆ ಮಹಾನ್ ರೂಪಕ ಆದವರು. ಸಂಸತ್ ಸದಸ್ಯರೂ ಆಗಿ, ಕರ್ನಾಟಕದ ಕಾವಲು ಸಮಿತಿಯ ಅಧ್ಯಕ್ಷರೂ ಆಗಿ, ರಾಜ್ಯ, ಸಮಸ್ಯೆಗೆ ಸಿಕ್ಕಾಗ ಹೋರಾಟಗಾರರೂ ಆಗಿ – ಹೀಗೆ ಬಹುಮುಖಗಳಲ್ಲಿ ಒಡ್ಡಿಕೊಂಡು ‘ದೊಡ್ಡಪ್ಪ’ ಆಗಿರುವವರು. ಇಂಥ ಪಾ.ಪು. ಅವರೇ ಟಿ.ಎ. ಪೈ ಅವರನ್ನು ‘ದೇವರಿಗಿಂತಲೂ ಮಿಗಿಲು’ ಎಂದು ಕೊಂಡಾಡುವುದು ಎಂದರೆ ಏನರ್ಥ? ಅದು ಟಿ.ಎ. ಪೈ ಹಿರಿಮೆ, ಗರಿಮೆ, ಸಾಮರ್ಥ್ಯ, ಸಾತ್ವಿಕತೆಗೆ ಸಂದ ಮರ್ಯಾದೆಯೇ; ಪೂಜೆಯೇ!

ಟಿ.ಎ. ಪೈ ಅವರು ಏನೆಲ್ಲಾ? ದೊಡ್ಡ ಅರ್ಥಶಾಸ್ತ್ರಜ್ಞರು; ರಾಜಕಾರಣದಲ್ಲಿ ಸಂತರು; ಆಡಳಿತ ನಿರ್ವಹಣೆಯಲ್ಲಿ ಧರ್ಮಿಷ್ಠರು; ಯೋಜನೆ ಅನುಷ್ಠಾನಗಳಲ್ಲಿ ದೂರದರ್ಶಿಗಳು; ಸಮದರ್ಶಿಗಳು. ಎಲ್ಲಕ್ಕಿಂತ ಮೇಲಾಗಿ ಮಹಾ ಮಾನವತಾವಾದಿಗಳು.

ಪೈಗಳು ಸಿಂಡಿಕೇಟ್ ಬ್ಯಾಂಕಿಗೆ ತ್ರಾಣವಾದರು. ಕೃಷಿಕ ಬಂಧುಗಳಿಗೆ ಬದುಕಾದರು. ಭಾರತೀಯ ಆಹಾರ ನಿಗಮಕ್ಕೆ ಶಕ್ತಿಯಾದರು. ಜೀವ ವಿಮಾ ನಿಗಮಕ್ಕೆ ಜೀವವಾದರು. ಸಚಿವರಾಗಿ ಭಾರತ ಸರಕಾರಕ್ಕೆ ಚೈತನ್ಯವಾದರು!

ಅಂಥವರ ಚರಿತ್ರೆ ನಾಳೆಗಳಿಗೆ ಅತ್ಯುಪಕಾರವೇ. ಸ್ಫೂರ್ತಿಯೇ, ಮಾದರಿಯೇ.

ಮನೆತನ

ಟಿ.ಎ. ಪೈ ಅವರ ತಂದೆ ತೋನ್ಸೆ ಉಪೇಂದ್ರ ಪೈಗಳು. ಉಪೇಂದ್ರ ಪೈಗಳು ಬಹುದೊಡ್ಡ ವ್ಯಕ್ತಿತ್ವವನ್ನು ಹೊಂದಿದವರಾಗಿದ್ದರು. ಸಮಾಜಮುಖಿ ಆಗಿದ್ದರು. ಅವರ ಪ್ರೀತಿ, ಔದಾರ್ಯ, ಸಾತ್ವಿಕತೆ, ಚಿಂತನೆ ಉನ್ನತ ಮಟ್ಟದ್ದಾಗಿತ್ತು. ಆದರೆ ಅವರು ಮಿತಭಾಷಿ ಆಗಿದ್ದರು.

ಗಾಂಧೀಜಿಯವರ ತತ್ತ್ವ, ಸತ್ತ್ವ, ಅಹಿಂಸೆ, ಸತ್ಯಾಗ್ರಹ ಇತ್ಯಾದಿ ಒಲವು, ನಿಲುವು ಉಪೇಂದ್ರ ಪೈಗಳ ಮೇಲೆ ಅಪಾರ ಪರಿಣಾಮ ಉಂಟು ಮಾಡಿತ್ತು. ಅವರು ಸ್ವತಃ ಖಾದಿದಾರಿಗಳಾಗಿದ್ದರು. ಸ್ವಂತ ಖಾದಿ ಭಂಡಾರವನ್ನೂ ಹೊಂದಿದ್ದರು. ಗಾಂಧೀಜಿ ಯವರಂತೆ ಅವರು ದೇಶದ ಬೆನ್ನೆಲುಬುಗಳಾದ ಕಮ್ಮಾರರು, ಕುಂಬಾರರು, ನೇಕಾರರು, ಬಡಿಗರು ಮೊದಲಾದ ಗ್ರಾಮೀಣ ಶಕ್ತಿಗಳ ಮೇಲೆ ಆದರ ಭಾವ ಉಳ್ಳವರಾಗಿದ್ದರು. ತಮಗೆ ಉಪಯೋಗಕ್ಕೂ ಆಯಿತು, ಅವರಿಗೆ ಉಪಕಾರವೂ ಆಯಿತು ಎಂದುಕೊಂಡು ಅಂಥವರಿಂದ ಇವರ ಕೆಲಸ ಮಾಡಿಸಿಕೊಂಡು ಅವರ ದುಡಿಮೆಗೆ ತಕ್ಕಂತೆ ಗೌರವ ಧನ ನೀಡುತ್ತಿದ್ದರು.

ಸಾಹಿತ್ಯ, ಸಂಗೀತ, ಚಿತ್ರಕಲೆ, ಚಲನಚಿತ್ರಗಳು ಕೂಡ ಅವರಿಗೆ ಅಚ್ಚುಮೆಚ್ಚಿನ ಹವ್ಯಾಸ ಗಳಾಗಿದ್ದವು. ಅವರು ಒಳ್ಳೆಯ ಕೃತಿಗಳನ್ನು ಓದುವ ಅಭ್ಯಾಸ ಇರಿಸಿಕೊಂಡಿದ್ದರು. ಸಂಗೀತ ಕಚೇರಿ ಗಳನ್ನು ಆಸ್ಥೆಯಿಂದ ಆಲಿಸುತ್ತಿದ್ದರು. ಅತ್ಯುತ್ತಮ ಚಿತ್ರಕಲೆಗಳನ್ನು ಬಹಳವಾಗಿ ಇಷ್ಟಪಡುತ್ತಿದ್ದರು.

ಚಲನಚಿತ್ರಗಳ ಪ್ರಯೋಜನಗಳ ಬಗ್ಗೆ ಅವರು ವಿಶ್ವಾಸ ಹೊಂದಿದ್ದರು. ಹಾಗಾಗಿ ಉಡುಪಿಯಲ್ಲಿ ಒಂದು ಚಲನಚಿತ್ರ ಮಂದಿರಕ್ಕೂ ಕಾರಣರಾದರು. ಅದು ಉಡುಪಿಯಲ್ಲಿ ಪ್ರಪ್ರಥಮ ‘ಟಾಕೀಸು’ ಆಗಿತ್ತು. ಜನಗಳಿಗೆ ಆಗ ಇದರ ಬಗ್ಗೆ ಅರಿವು ಅಷ್ಟಕ್ಕಷ್ಟೇ. ಅದರ ಕುರಿತು ಜ್ಞಾನ ಕೊಡಲೆಂದೇ ಅವರು ‘ಚಿತ್ರಕಲಾ’ ಎಂಬ ಪತ್ರಿಕೆಯನ್ನೂ ಪ್ರಾರಂಭಿಸಿದ್ದರು.

ಉಪೇಂದ್ರ ಪೈಗಳಿಗೆ ಕಟ್ಟಡ ನಿರ್ಮಾಣದಲ್ಲಿ ಒಂದಿಷ್ಟು ಹೆಚ್ಚೇ ಶ್ರದ್ಧೆ. ಹತ್ತಿರದಲ್ಲೇ ಲಭ್ಯವಾಗುವ ಸಾಮಾನುಗಳನ್ನು ಉಪಯೋಗಿಸಿದರೆ ಖರ್ಚು ಕಡಿಮೆ ಆಗುತ್ತದೆ, ವಿಶ್ವಾಸಾರ್ಹತೆ ಬಗ್ಗೆ ಅನುಮಾನವೂ ಇರುವುದಿಲ್ಲ ಎಂಬುದು ಅವರ ಧೋರಣೆಯಾಗಿತ್ತು. ಅವರು ಆ ರೀತಿಯ ತಂತ್ರಜ್ಞಾನವನ್ನು ಆಧರಿಸಿ ಬಹಳಷ್ಟು ಕಟ್ಟಡಗಳನ್ನು ನಿರ್ಮಿಸಿಕೊಟ್ಟಿದ್ದರು.

ಹಾಗೆಂದು ಉಪೇಂದ್ರ ಪೈಗಳು ಆಧ್ಯಾತ್ಮಿಕ ಲೋಕದಿಂದ ದೂರ ಇದ್ದವರೇನೂ ಅಲ್ಲ. ರಾಮಕೃಷ್ಣ ಪರಮಹಂಸರ ಬಗ್ಗೆ ಇನ್ನಿಲ್ಲದಷ್ಟು ಭಕ್ತಿ ಭಾವ ಅವರಿಗೆ. ಸ್ವಾಮಿ ವಿವೇಕಾನಂದರು ಪರಮಹಂಸರ ಹೆಸರಿನಲ್ಲಿ ಅನುಷ್ಠಾನಕ್ಕೆ ತಂದ ರಾಮಕೃಷ್ಣಾಶ್ರಮದ ಸಂನ್ಯಾಸಿಗಳು ಉಡುಪಿ ಕಡೆ ಬಂದರೆ ಉಪೇಂದ್ರ ಪೈಯವರ ಮನೆಗೆ ಬಾರದೇ, ಅಲ್ಲಿ ಅವರ ಉಪಚಾರ ಕೊಳ್ಳದೇ ಮುಂದುವರಿಯುತ್ತಿರಲಿಲ್ಲ.

ಭಗವದ್ಗೀತೆಯೆಂದರೆ ಅವರಿಗೆ ಪ್ರಾಣವಾಗಿತ್ತು. ಅದನ್ನು ಅವರು ಅಷ್ಟು ಗಾಢವಾಗಿ ಹಚ್ಚಿಕೊಂಡದ್ದಕ್ಕೆ ಅವರೇ ಕಟ್ಟಿ ನಿಲ್ಲಿಸಿದ ‘ಗೀತಾ ಮಂದಿರ’ವೇ ಪುರಾವೆಯಾಗಿದೆ. ‘ಗೀತಾ ಮಂದಿರ’ ಉಡುಪಿಯ ಮಣಿಪಾಲದಲ್ಲಿದೆ. ಈಗಲೂ ಅಲ್ಲಿ ಭಜನೆ, ಉಪನ್ಯಾಸ ಮೊದಲಾದ ಕಾರ್ಯಕ್ರಮಗಳು ಜರುಗುತ್ತಿವೆ. ಮಣಿಪಾಲದಲ್ಲಿ ಉಪೇಂದ್ರ ಪೈ ಅವರಿಂದ ಕಟ್ಟಲ್ಪಟ್ಟ ಮೊದಲ ಕಟ್ಟಡಗಳಲ್ಲಿ ಇದೂ ಒಂದಾಗಿದೆ.

ಟಿ.ಎ. ಪೈ ಅವರ ತಾಯಿ ಪಾರ್ವತಿ ಅಮ್ಮ. ಗಂಡ ಉಪೇಂದ್ರ ಪೈ ಅವರಿಗೆ ಹೇಳಿ ಮಾಡಿಸಿದ ಹೆಂಡತಿ. ಮಮತೆ, ತಾಳ್ಮೆ, ಅತಿಥಿ ಸತ್ಕಾರ, ದಾನಧರ್ಮ ಎಲ್ಲದರಲ್ಲೂ ಎತ್ತಿದ ಕೈ. ಅಂಥ ಅಪ್ಪ, ಅಮ್ಮನ ಮಗನೇ ನಮ್ಮ ಟಿ.ಎ. ಪೈ ಅವರು.

ಟಿ.ಎ. ಪೈ ಅವರು 17-01-1922ರಂದು ಜನಿಸಿದರು. ಟಿ.ಎ. ಪೈ ಎಂದರೆ ತೋನ್ಸೆ ಅನಂತ ಪೈ ಎಂದೇ. ಈ ಅನಂತ ಎಂಬುದು ಉಪೇಂದ್ರ ಪೈ ಅವರ ತಂದೆಯ ಹೆಸರು. ಎಂದರೆ ಅನಂತ ಪೈ ಅವರಿಗೆ ಅಜ್ಜನ ಹೆಸರು. ಆದರೆ ಮನೆಯಲ್ಲಿ ಅನಂತ, ‘ಬಾಲಕೃಷ್ಣ’ ಎಂದೇ ಮುದ್ದಿನಿಂದ ಕರೆಯಿಸಿಕೊಳ್ಳುತ್ತಿದ್ದರು. ಉಡುಪಿಯ ‘ಮುಕುಂದ ನಿವಾಸ’ದಲ್ಲಿ ಬಾಲಕೃಷ್ಣ ಯಾನೆ ಅನಂತ ಅವರ ಆಟ, ಊಟ, ಓಟ, ಪಾಠ ಮೊದಲಾಯಿತು.

ಅನಂತ ಇಲ್ಲಿ ವಿವಿಧ ರಂಗಗಳಲ್ಲಿ ಕಾಣಿಸಿಕೊಂಡರು. ನಾಟಕಗಳಲ್ಲಿ ಒಂದಲ್ಲ ಒಂದು ಪಾತ್ರ ನಿರ್ವಹಿಸುತ್ತಿದ್ದರು. ಶಾಲಾ ವರ್ಧಂತ್ಯುತ್ಸವ ನಿಮಿತ್ತ ಆಡಿದ ನಾಟಕದಲ್ಲಿ ಇವರು ಕೃಷ್ಣ ದೇವರಾಯನ ಪಾತ್ರ ನಿಭಾಯಿಸಿದರೆ ಕಿರಿಯ ಸೋದರ ರಮೇಶ ಪೈ ತೆನಾಲಿ ರಾಮಕೃಷ್ಣ ಆಗಿ ಅಭಿನಯಿಸುತ್ತಿದ್ದರು. ಕ್ರಿಕೆಟ್ ಆಟದಲ್ಲೂ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದರು. ಓದಿನಲ್ಲೂ ಮುಂದಿದ್ದರು. ಜಾಣರ ಪಟ್ಟಿಯಲ್ಲಿದ್ದರು.

ಆ ಮುಂದೆ ಅನಂತ ಓದಿದ್ದು ಉಡುಪಿಯ ಬೋರ್ಡ್ ಹೈಸ್ಕೂಲಿನಲ್ಲಿ. ರಾಕಿ ಫೆರ್ನಾಂಡಿಸ್ ಎನ್ನುವವರು ಅಲ್ಲಿ ಮುಖ್ಯೋಪಾಧ್ಯಾಯರು. ಅತ್ಯುತ್ತಮ ಶಿಕ್ಷಕರು; ಮಾದರಿ ಶಿಕ್ಷಕರು ಎಂದು ಕೀರ್ತಿ ಸಂಪಾದಿಸಿದವರು. ಇಂಗ್ಲಿಷಿನಲ್ಲಿ ಅಸಾಧಾರಣ ಪ್ರಭುತ್ವ ಇತ್ತು ಅವರಿಗೆ. ಇಂಥವರು ಗುರುಗಳಾಗಿ ಸಿಕ್ಕಿದ್ದು ಅನಂತನ ಅದೃಷ್ಟ. ಅನಂತ ಇಲ್ಲಿ ಪಾಠದ ಕಡೆಗೇ ಪೂರ್ತಿ ಗಮನ ನೀಡಿದರು. ಜ್ಞಾನ ಸಂಪಾದನೆಗೆ ಹೆಚ್ಚು ಹೊತ್ತು ಕೊಟ್ಟು ಕೊಂಡರು. ಅವರು ಪರಿಣಾಮಕಾರಿ ಭಾಷಣಕಾರನಾಗಿ ರೂಪುಗೊಂಡದ್ದು ಇಲ್ಲಿಯೇ. ಲೇಖಕನಾಗಿ ತಯಾರಾದದ್ದೂ ಇಲ್ಲಿಯೇ.

ಅದು 1935ನೆಯ ಇಸವಿ. ಸರಕಾರದ ವತಿಯಿಂದ ‘‘ಕ್ಷಯ ರೋಗ ನಿರ್ಮೂಲನ’’ ಎಂಬ ವಿಷಯದ ಮೇಲೆ ಪ್ರಬಂಧ ಸ್ಪರ್ಧೆ ಏರ್ಪಾಟು. ಅನಂತ ಕೂಡ ಪ್ರಬಂಧ ಬರೆದರು. ಇದಕ್ಕೆ ಮೊದಲ ಬಹುಮಾನ ಬಂತು. ಇದು ಮುದ್ರಣ ಕಂಡದ್ದೂ ಯೋಗಾಯೋಗ. ರಾಕಿ ಮಾಸ್ಟ್ರಿಗೆ ಹೆಮ್ಮೆಯೋ ಹೆಮ್ಮೆ. ಇಷ್ಟೊಂದು ಪ್ರತಿಭಾವಂತ, ಎಷ್ಟೊಂದು ಗುಣವಂತ – ಎಂದು ಅವರು ಅತ್ಯಭಿಮಾನದಿಂದ ಹೇಳಿಕೊಳ್ಳುತ್ತಿದ್ದರು.

ಅನಂತ ಪೈ 1938ರಲ್ಲಿ S.S.L.C. ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದರು. ಅವರು ಅತಿ ಹೆಚ್ಚು ಅಂಕಗಳನ್ನು ಪಡೆದಿದ್ದರು. ಉನ್ನತ ವಿದ್ಯಾಭ್ಯಾಸಕ್ಕಾಗಿ ಮುಂಬಯಿಗೆ ಹೋಗುವುದೇ ಉಚಿತವೆಂದು ಮನೆಯವರು ನಿರ್ಧರಿಸಿದರು. ಅನಂತ ಹೊರಟು ನಿಂತರು. ಮುಂಬಯಿಯ ಪ್ರಖ್ಯಾತ ಸಿಡೆನ್ ಹ್ಯಾರಿ ಕಾಲೇಜು ಪ್ರವೇಶಿಸಿದರು. ಅಲ್ಲಿ ವಾಣಿಜ್ಯ ತರಗತಿಗೆ ಸೇರಿಕೊಂಡು ನಾಲ್ಕು ವರ್ಷ ಓದಿದರು. ಬಿ.ಕಾಂ. ಪದವೀಧರರಾಗಿ ಹೊರಬಂದರು. ಅದು 1943ನೇ ಇಸವಿ!

ಅನಂತ ಬಿ.ಕಾಂ. ಅನ್ನೇ ಏಕೆ ಆಯ್ಕೆ ಮಾಡಿಕೊಂಡರು? ಅದು ಏನಾದರೊಂದು ಪದವಿ ಇರಲಿ ಎಂದು ಆಗಿರಲೇ ಇಲ್ಲ. ತಂದೆ ಉಪೇಂದ್ರ ಪೈಗಳು ಸ್ಥಾಪಿಸಿ ಟಿ.ಎಂ.ಎ. ಪೈಗಳು ಮುನ್ನಡೆಸುತ್ತಿದ್ದ ಸಿಂಡಿಕೇಟ್ ಬ್ಯಾಂಕು ಅವರ ಹೃನ್ಮನಗಳಲ್ಲಿ ಇತ್ತು. ಅಲ್ಲಿಯೇ ತನ್ನ ಸೇವೆ ಸಂದಾಯವಾಗಬೇಕು ಎಂಬುದು ಅವರ ಮನದಾಳದ ಹಂಬಲವಾಗಿತ್ತು. ಅದೇ ತೀವ್ರವಾದ ಇಚ್ಛೆಯಿಟ್ಟುಕೊಂಡೇ ಅವರು ಅಲ್ಲಿ ಕ್ಷಣ ಕ್ಷಣವನ್ನೂ ಜವಾಬ್ದಾರಿಯಿಂದ ಬಳಸಿಕೊಂಡಿದ್ದರು.

ಪದವಿಗಾಗಿ ಸಿದ್ಧತೆಗೊಳ್ಳುತ್ತಿರುವಾಗ ಮುಂಬಯಿಯೆಂಬ ಪುಟ್ಟ ಜಗತ್ತಿನಿಂದ ಅನಂತ ಅವರು ಬಹಳಷ್ಟು ಅನುಭವ ಗಳಿಸಿಕೊಂಡರು. ಈಗ ಜಗದ್ವಿಖ್ಯಾತ ಉದ್ಯಮಿಗಳಾಗಿರುವ ಅರವಿಂದ ಮಫತ್ಲಾಲ್, ಡಾ. ಆರ್.ಸಿ. ಕೂಪರ್ ಅಂಥವರು ಕಾಲೇಜಿನಲ್ಲಿ ಒಳ್ಳೆಯ ಗೆಳೆಯರಾಗಿ ಒಡನಾಟದಲ್ಲಿದ್ದರು. ಎಚ್.ವಿ. ಕಾಮತ್, ಎಚ್.ಎನ್. ರಾವ್, ಕೆ.ಕೆ. ಪೈ ಊರಿನವರೇ. ಅತ್ಯಂತ ಆಪ್ತರಾಗಿದ್ದರು. ಇವರೆಲ್ಲರ ಅನಂತರದ ಸಾಧನೆ ನಮಗೆ ಗೊತ್ತಿರುವಂಥದ್ದೇ. ಅಂಥ ಎಲ್ಲ ಸನ್ಮಿತ್ರರ ಸಾಹಚರ್ಯದಿಂದಲೂ ಅನಂತ ಮತ್ತಷ್ಟು ಅರಳಿಕೊಂಡಿದ್ದರು. ಕಾಲೇಜಿನ ಪ್ರಾಧ್ಯಾಪಕರಂತೂ ಅಸಾಧಾರಣ ಪ್ರತಿಭಾಶಾಲಿಗಳೂ, ವಿದ್ವಾಂಸರೂ, ಮಮತಾಮಯಿಗಳೂ ಆಗಿದ್ದರು. ಅವರೆಲ್ಲ ಅನಂತ ಪೈ ಅವರ ಮೇಲೆ ಬಹಳಷ್ಟು ಪ್ರಭಾವ ಬೀರದೇ ಇರುತ್ತಾರೆಯೇ? ಹಾಗಾಗಿ ಅನಂತ ಪೈ ಊರಿಗೆ ಮರಳಿದಾಗ ಅಪಾರ ಆತ್ಮವಿಶ್ವಾಸದಿಂದ ಹೊಳೆಯುತ್ತಿದ್ದರು; ಅಖಂಡ ವಿದ್ವತ್ತೆಯಿಂದ ಮಿಂಚುತ್ತಿದ್ದರು. ಆದರೆ ಯಾರದೇ ಹಿರಿತನಕ್ಕೆ ವಿನಮ್ರತೆಯಿಂದ ಬಾಗುತ್ತಿದ್ದರು.

 

ಸಿಂಡಿಕೇಟ್ ಬ್ಯಾಂಕಿನ ಡಿ.ಜಿ.ಎಂ.

ಜುಲೈ ಒಂದು 1943. ಸಿಂಡಿಕೇಟ್ ಬ್ಯಾಂಕ್ ‘ಅನಂತ ಶಕ್ತಿ’ಯನ್ನು ಗೌರವಾದರಗಳಿಂದ ಬರಮಾಡಿಕೊಂಡಿತು. ‘ಡೆಪ್ಯೂಟಿ ಜನರಲ್ ಮ್ಯಾನೇಜರ್’ ಅಧಿಕಾರವನ್ನು ಹಾರ್ದಿಕವಾಗಿ ಒಪ್ಪಿಸಿಕೊಟ್ಟಿತು. ಅದು ಅರ್ಹ ವ್ಯಕ್ತಿಗೆ ಸಂದ ಸೂಕ್ತ ಸ್ಥಾನ ಮಾನ ಎಂಬುದು ನಿರ್ವಿವಾದ ಅಭಿಪ್ರಾಯವಾಗಿತ್ತು. ಸರ್ವಸಮ್ಮತವಾದ ಘೋಷಣೆ ಆಗಿತ್ತು. ಎಲ್ಲರ ನಂಬಿಕೆ, ನಿರೀಕ್ಷೆಗಳನ್ನು ಟಿ.ಎ. ಪೈ ತನ್ನ ಅಭೂತಪೂರ್ವ ನಿರ್ವಹಣೆಗಳ ಮೂಲಕ ನಿಜವಾಗಿಸಿ ಬಿಟ್ಟರು; ಭಾಗ್ಯದ ಬಾಗಿಲು ತೆರೆದುಕೊಟ್ಟರು.

ಟಿ.ಎ. ಪೈ ಅವರು ಬ್ಯಾಂಕಲ್ಲಿ ಅಧಿಕಾರ ಸ್ವೀಕರಿಸಿದ ಹಿಂದಿನ ವರ್ಷಾಂತ್ಯದಲ್ಲಿ (1942ರ ಕೊನೆಯಲ್ಲಿ) ಸಿಂಡಿಕೇಟ್ ಬ್ಯಾಂಕಿನಲ್ಲಿದ್ದ ಒಟ್ಟು ಠೇವಣಿಗಳ ಮೊತ್ತ ರೂ. 59 ಲಕ್ಷ. ಸಾಲ ಮೂವತ್ತೇಳು ಲಕ್ಷ. ಲಾಭ ಅರುವತ್ತೊಂದು ಸಾವಿರ. ಶಾಖೆಗಳು ಒಟ್ಟು 44. ಆದರೆ ಟಿ.ಎ. ಪೈ ಅವರು ಪೀಠವೇರಿದ ವರ್ಷ ಪವಾಡವೇ ನಡೆದು ಹೋಯಿತು. ಅದೇ 1943ರ ವರ್ಷಾಂತ್ಯದಲ್ಲಿ ಠೇವಣಿ ಮೊತ್ತ ಒಂದು ಕೋಟಿ ಮೀರಿತು. ಬ್ಯಾಂಕಿನ ಇನ್ನಿತರ ವಿಭಾಗಗಳೂ ಸಾಕಷ್ಟು ಮುನ್ನಡೆ ಸಾಧಿಸಿದ್ದವು!

 

ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾಂಕ್

ಟಿ.ಎ. ಪೈ ಸಿಂಡಿಕೇಟ್ ಬ್ಯಾಂಕ್ ಸಾಮಾನ್ಯರ ಪರವಾಗಿರಬೇಕು ಎಂದು ಆಶಿಸಿದವರು. ಅದರಲ್ಲೂ ರೈತರ ಅಗತ್ಯ ಮತ್ತು ತಾಕತ್ತುಗಳ ಮೇಲೆ ಅವರಿಗೆ ತುಂಬು ವಿಶ್ವಾಸ. ಅಂಥವರಿಗೆ ಬೆಂಬಲವಾಗದ ಬ್ಯಾಂಕ್ ಬೇಕೇ? ಎಂದು ಅಂದುಕೊಂಡವರು ಅವರು. ದೇಶ ಉಳಿದಿರುವುದೇ ಹಳ್ಳಿಗಳಿಂದ, ರೈತರಿಂದ ಎಂಬುದಾಗಿ ಅವರು ದೃಢವಾಗಿ ಪ್ರತಿಪಾದಿಸುತ್ತಿದ್ದರು. ರೈತರು, ಅವರ ಮಕ್ಕಳು ಶಹರಗಳಿಗೆ ವಲಸೆ ಹೋಗದಂತೆ ಮಾಡುವುದರಲ್ಲಿ ಬ್ಯಾಂಕ್ ಮಹತ್ತರ ಪಾತ್ರ ವಹಿಸಬೇಕು ಎಂಬುದು ಅವರ ಚಿಂತನೆಯಾಗಿತ್ತು. ತನ್ನ ಚಿಂತನೆಗಳನ್ನು ಕಾರ್ಯಗತಗೊಳಿಸುವಲ್ಲಿ ಟಿ.ಎ. ಪೈ ಅವರು ದಾಪುಗಾಲಿಡ ತೊಡಗಿದರು. ಆ ನಿಟ್ಟಿನಲ್ಲಿ ಅವರಿಟ್ಟ ಮೊದಲ ಹೆಜ್ಜೆ ಗ್ರಾಮೀಣ ನೆಲೆಗಳಲ್ಲಿ ಬ್ಯಾಂಕುಗಳನ್ನು ಸ್ಥಾಪಿಸುವುದು. ದಿನಾಂಕ 22-11-1946ರಂದು ಒಂದೇ ದಿನ ಒಟ್ಟೂ 29 ಗ್ರಾಮೀಣ ಪ್ರದೇಶಗಳಲ್ಲಿ 29 ಶಾಖೆಗಳನ್ನು ತೆರೆದುದು ಒಂದು ಐತಿಹಾಸಿಕ ಸಾಧನೆಯೇ, ದಾಖಲೆಯೇ. ಅದೂ ಅಲ್ಲದೇ ಶಾಖೆಗಳು ಹೆಚ್ಚಾದಾಗ ಶಾಖೆಗಳನ್ನು ನಿಭಾಯಿಸುವ ಸಂದರ್ಭ ಆಗುವ ವೆಚ್ಚದ ಪ್ರಮಾಣವೂ ದೊಡ್ಡದೇ. ಅದನ್ನು ಹೇಗೆ ಎದುರಿಸುವುದು? ನಷ್ಟವನ್ನು ಹೇಗೆ ನಿಯಂತ್ರಣಕ್ಕೆ ತರುವುದು? ಈ ಬಗ್ಗೆಯೂ ಪೈ ಅವರು ಪರಿಹಾರ ಹುಡುಕಿಕೊಳ್ಳುತ್ತಾರೆ. ಅದು ಅವರ ಬುದ್ಧಿ ತೀಕ್ಷ್ಣತೆಗೆ; ಅರ್ಥಶಾಸ್ತ್ರಜ್ಞನ ಸೂಕ್ಷ್ಮತೆಗೆ ಸಮರ್ಥ ನಿದರ್ಶನವಾಗಿದೆ. ಅದು ಹೇಗೆಂದರೆ ಅಂಥ ಶಾಖೆಗೆ ಮೆನೇಜರ್ ಇಲ್ಲ. ಅದರ ಬದಲು ಶಾಖೆಯ ಊರಿಗೆ ಸೇರಿದ ನಂಬಿಗಸ್ಥ ಮತ್ತು ಯೋಗ್ಯತಾವಂತ ನಾಗರಿಕನನ್ನು ಬ್ಯಾಂಕಿನ ಪ್ರತಿನಿಧಿಯಾಗಿ ನೇಮಕ ಮಾಡುವುದು. ಅಂಥವರಿಗೆ ಠೇವಣಿ ಸಂಗ್ರಹಿಸುವ ಹಾಗೂ ಸೂಚಿಸಿದ ಮಿತಿಯಲ್ಲಿ ಡಿಮಾಂಡ್ ಡ್ರಾಫ್ಟ್ ಮತ್ತು ಸಾಲ ಕೊಡುವ ಬಗ್ಗೆ ಅಧಿಕಾರ ಕೊಡುವುದು. ಇಂಥವರಿಗೆ ವೇತನವಿಲ್ಲ. ಕಮಿಷನ್ ಹಂಚುವುದು. ಆದ್ದರಿಂದ ದುಡಿಮೆ ಅನಿವಾರ್ಯ. ಬಂದ ಮೊತ್ತದಲ್ಲಿ ನಿರ್ದಿಷ್ಟ ಕಮಿಷನ್ ವಿತರಣೆ ಮಾಡುವುದರಿಂದ ನಷ್ಟದ ಸಂದರ್ಭವಿಲ್ಲ. ಯಾವಾತ ಬ್ಯಾಂಕಿನ ಪ್ರತಿನಿಧಿ? ಅಂಥವನ ಮನೆ ಇಲ್ಲವೇ ಕಚೇರಿಯಲ್ಲೇ ಬ್ಯಾಂಕಿನ ಶಾಖೆಗೆ ಅನುಮತಿ ಕೊಡುವುದು. ಇಲ್ಲಿಯೂ ದೊಡ್ಡ ಮೊತ್ತದ ಬಾಡಿಗೆ ಬೀಳುವುದಿಲ್ಲ. ಮೇಲಾಗಿ ಬ್ಯಾಂಕಿನ ಪ್ರತಿನಿಧಿ ತಮ್ಮ ಊರಿನ ಜನವೇ ಎಂಬ ವಿಶ್ವಾಸದಿಂದ ಊರಿನವರ ವಹಿವಾಟು ಹೆಚ್ಚಾಗುವುದಲ್ಲದೇ ಕಡಿಮೆ ಆಗುವುದಿಲ್ಲ. ಈ ರೀತಿ ಅವರು ತರ್ಕಿಸಿದರು ಮತ್ತು ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ಸಾಫಲ್ಯವನ್ನೂ ಕಂಡರು.

ಟಿ.ಎ. ಪೈ ಅವರು ಇದನ್ನೆಲ್ಲ ಪ್ರಧಾನ ಕಚೇರಿಯಲ್ಲಿ ಕೂತು ಸಾಧ್ಯಗೊಳಿಸಿದ್ದಲ್ಲ. ತಾವೇ ಸ್ವತಃ ನೂರಾರು ಗ್ರಾಮಗಳಿಗೆ ಭೇಟಿ ನೀಡಿದರು. ಅಲ್ಲಿನ ಸ್ಥಿತಿ, ಗತಿ ಅಭ್ಯಸಿಸಿದರು. ಯಾರು ಪ್ರತಿನಿಧಿಯಾಗಲು ಅರ್ಹರು ಎಂಬುದನ್ನು ತಾವೇ ಸ್ವತಃ ತಮ್ಮದೇ ಆದ ದೃಷ್ಟಿ ಕೋನದಿಂದ ಅಳೆದು ಅಂಥ ಸಮರ್ಥ ವ್ಯಕ್ತಿಯನ್ನು ಆಯ್ಕೆ ಮಾಡುತ್ತಿದ್ದರು. ಅವರ ಆಯ್ಕೆ ಯಾವೊತ್ತೂ ಭ್ರಮ ನಿರಸನಗೊಳಿಸಿದ್ದಿಲ್ಲ. ಬ್ಯಾಂಕಿಗೆ ತಕ್ಕುದಾದ, ಸುಭದ್ರವಾದ ಕಟ್ಟಡ ಮೊದಲಾದವುಗಳನ್ನು ಹುಡುಕಿಕೊಳ್ಳುವ ಜವಾಬ್ದಾರಿಯನ್ನೂ ಸ್ವತಃ ತಾವೇ ಹೊತ್ತು ಕೊಳ್ಳುತ್ತಿದ್ದರು. ಹೀಗೆ ಗ್ರಾಮ ಗ್ರಾಮಗಳಿಗೆ ಭೇಟಿ ಕೊಟ್ಟಾಗೆಲ್ಲ ಪೈ ಅವರು ತಾನು ಕೇವಲ ಬ್ಯಾಂಕಿಗೆ ಸಂಬಂಧಪಟ್ಟವನು ಎಂಬ ರೀತಿ ವರ್ತಿಸಲಿಲ್ಲ. ಜನಸಾಮಾನ್ಯರೊಂದಿಗೆ ತಾನೂ ಜನಸಾಮಾನ್ಯನೇ ಎಂದುಕೊಂಡು ಒಳಹೊಕ್ಕರು. ಅವರ ಬೇಕು ಬೇಡ, ಕಷ್ಟ ನಷ್ಟಗಳನ್ನು ಪ್ರೀತಿಯಿಂದ, ಸಮಾಧಾನದಿಂದ ಆಲಿಸಿದರು. ಸಹಾಯ ಮಾಡಿದರು. ಮಾರ್ಗದರ್ಶಿಸಿದರು. ಧೈರ್ಯ ತುಂಬಿದರು.

ಪೈ ಅವರ ಗ್ರಾಮೀಣ ಪ್ರದೇಶಗಳಲ್ಲಿನ ಬ್ಯಾಂಕುಗಳ ಕಾರ್ಯ ವಿಧಾನ ಯಾವ ರೀತಿ ಇತ್ತು? ಹೇಗೆ ಅದು ಶ್ರೇಯಸ್ಸು ಕಂಡಿತ್ತು?

ಬಹಳ ಹಿಂದೆ ಕಾರ್ಕಳ ತಾಲೂಕಿನ ನಿಟ್ಟೆ ಅತ್ಯಂತ ಹಿಂದುಳಿದ ಪ್ರದೇಶ. ಕಾಡೇ ಕಾಡಾಗಿತ್ತು ಅದು. ಅಂಥಲ್ಲೂ ಟಿ.ಎ. ಪೈ ಅವರ ಬ್ಯಾಂಕ್ ಶಾಖೆ ಇತ್ತು! ಶಾಖೆ, ಅಲ್ಲಿನ ಒಂದು ಅಂಗಡಿಯ ಮಹಡಿ ಮೇಲಿತ್ತು. ನೋಡಲು ಅಷ್ಟೇನೂ ಆಕರ್ಷಕವಾಗಿರಲಿಲ್ಲ. ಆದರೆ ಅದು ಎಂಟೂವರೆ ಲಕ್ಷ ರೂಪಾಯಿ ಮೊತ್ತದ ಒಂದು ಸಾವಿರದ ಆರುನೂರು ಠೇವಣಿಗಳನ್ನು ಹೊಂದಿತ್ತು! ಆ ಜಾಗಕ್ಕಾದರೂ ಬ್ಯಾಂಕ್ ಕೊಡುತ್ತಿದ್ದ ಬಾಡಿಗೆಯಾದರೂ ಎಷ್ಟು? ತಿಂಗಳಿಗೆ ಕೇವಲ ರೂ. 15 ಆಗಿತ್ತು. ಇದೇ ಉಡುಪಿ ಬಳಿಯ ಬೈಲೂರಿನ ಶಾಖೆಯಲ್ಲಿ ಹತ್ತು ಲಕ್ಷ ರೂಪಾಯಿ ಠೇವಣಿ ಇದ್ದರೆ ಇನ್ನೊಂದು ಕಾಡೇ ಎಂಬಂತಿದ್ದ ಶಿರ್ವದ ಶಾಖೆಯಲ್ಲಿ ಇದ್ದುದು ರೂ. ಇಪ್ಪತ್ತು ಲಕ್ಷದ ಠೇವಣಿ ಆಗಿತ್ತು. ಈ ಮೂರೂ ಗ್ರಾಮಗಳು ಆಗ ತೀರ ಅಪರಿಚಿತವೇ ಆಗಿದ್ದ, ಅವಗಣನೆಗೊಳಗಾಗಿದ್ದ ಪ್ರದೇಶಗಳೇ ಆಗಿದ್ದವು. ಇಂಥಲ್ಲಿ, ಇಂಥ ಹಲವು ಗ್ರಾಮಗಳಲ್ಲಿ ಟಿ.ಎ. ಪೈ ಅವರು ಸೂರ್ಯೋದಯವಾದರು.

ಬ್ಯಾಂಕ್ ಮೂಲಕ ಉಳ್ಳವರಿಗೆ ಅವರ ಆಸ್ತಿ-ಪಾಸ್ತಿ, ಬೆಳ್ಳಿ-ಬಂಗಾರ ನೋಡಿ ಸಾಲ ಕೊಡುವ ಕ್ರಮ ಇದ್ದುದೇ. ಆದರೆ ಏನೇನೂ ಆರ್ಥಿಕ ಅನುಕೂಲತೆ ಹೊಂದಿಲ್ಲದ, ಆದರೂ ಮುನ್ನುಗ್ಗಬೇಕು ಎಂಬ ಛಲದ ಜನಗಳಿಗೆ ಬ್ಯಾಂಕ್ ಸಾಲ ಕೊಡುವುದು ಎಂದರೆ ಅದೊಂದು ವಿಸ್ಮಯದ ವಿಶೇಷವೇ. ಅಂಥ ವಿದ್ಯಮಾನಕ್ಕೆ ಕಾರಣರಾದವರು ಟಿ.ಎ. ಪೈ ಅವರೇ.

ಉಡುಪಿಯ ಮಟ್ಟು ಗ್ರಾಮದಲ್ಲಿ ಬದನೆ (ಗುಳ್ಳ) ಬೆಳೆಯುವವರಿಗೆ ಕಡು ಕಷ್ಟ. ಫಲ ಕೊಡುವವರೆಗೆ ಉಪಚಾರ ಇತ್ಯಾದಿಗೆ ತಗಲುವ ವೆಚ್ಚ ನಿಭಾಯಿಸುವುದು ದೊಡ್ಡ ಸಮಸ್ಯೆ. ಈ ಗೇಣಿದಾರರಿಗೂ ಸಾಲ ಸೌಲಭ್ಯ ಒದಗಿಸಿದವರು ಟಿ.ಎ. ಪೈಗಳು.

ಶಂಕರಪುರ ಎಂಬುದೂ ಪುಟ್ಟ ಗ್ರಾಮವೇ. ಅಲ್ಲಿ ಮಲ್ಲಿಗೆ ಹೂವಿನ ಬೆಳೆಗಾರರು ಹೆಚ್ಚು. ಅವರೂ ಬಡವರೇ. ಬೆಳೆ ತೆಗೆವ ಮುನ್ನ ಸಾಲ ಕೆಲವರಿಗಾದರೂ ಅಗತ್ಯವೇ. ಆದರೆ ಕೊ