ತುಮಕೂರು ಜಿಲ್ಲೆಯ ಪಾವಗಡ, ಮಧುಗಿರಿ, ಕೊರಟಗೆರೆ ತಾಲ್ಲೂಕಿನ ಹಳ್ಳಿಗಳಲ್ಲಿ ಹಿರೀಕರು ತಲಪರಿಗೆ ಎಂಬ ಪದ ಕೇಳಿದರೆ ಸಾಕು! ಅದರ ನೀರಿನ ಸಿಹಿ, ಉಕ್ಕಿ ಹರಿಯುತ್ತಿದ್ದ ರೀತಿ, ಊರವರೆಲ್ಲಾ ಸೇರಿ ಕಾಲುವೆ ತೆಗೆಯುತ್ತಿದ್ದುದು, ಕೆಲಸಕ್ಕೆ ಬರದವರಿಗೆ ದಂಡ ಹಾಕುತ್ತಿದ್ದುದು, ತಲಪರಿಗೆ ನೀರಿನಿಂದ ನಿಶ್ಚಿಂತೆಯಾಗಿ ಬೇಸಿಗೆ ಬೆಳೆ ಆಗುತ್ತಿದ್ದುದ್ದು … ಹೀಗೆ ಹತ್ತು-ಹಲವಾರು ನೆನಪುಗಳ ಲಹರಿಯೇ ಬಿಚ್ಚಿಕೊಳ್ಳುತ್ತದೆ.

ತಲಪರಿಗೆಗಳೆಂಬ ಪಾರಂಪರಿಕ ಜಲಮೂಲಗಳು  ಶತಮಾನಗಳ ಕಾಲ ಆಪತ್ಕಾಲದಲ್ಲಿ ಜನರ ಬದುಕನ್ನು ಪೊರೆದದ್ದಕ್ಕೆ ಉದಾಹರಣೆ ಇದು.

೧೯೫೦-೫೫ರ ಇಸವಿ ೫ ಅಥವಾ ೬ನೇ ತರಗತಿಯ ಭೂಗೋಳ ಪಠ್ಯಪುಸ್ತಕದ ಪಾಠವೊಂದರಲ್ಲಿ ಒಂದು ವಾಕ್ಯ ಹೀಗಿತ್ತು, “ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನಲ್ಲಿ ತಲಪರಿಗೆಗಳ ನೀರನ್ನು ಬಳಸಿ ವ್ಯವಸಾಯ ಮಾಡಲಾಗುತ್ತದೆ” ಪಾವಗಡದ ಇತಿಹಾಸಕಾರರಾದ ಚಲುವರಾಜನ್‌ರನ್ನು ತಲಪರಿಗೆಗಳ ಬಗ್ಗೆ ಕೇಳಿದಾಗ ಅವರು ಥಟ್ಟನೆ ಇದನ್ನು ನೆನಪಿಸಿಕೊಂಡರು.

ಏನಿದು ತಲಪರಿಗೆ?

ನೋಡಿದ ತಕ್ಷಣ ಒಂದು ಸಾಧಾರಣ ನೀರಿನ ಗುಂಡಿ ಇಲ್ಲವೇ ಪುಟ್ಟ ಬಾವಿ ಎನಿಸುತ್ತದೆ. ಕಲ್ಯಾಣಿ, ಪುಷ್ಕರಣಿಗಳಂತೆ ಭವ್ಯ ಆಕಾರವಾಗಲೀ, ಕಲಾತ್ಮಕ ಕಲ್ಲು ಕಟ್ಟಣೆಯಾಗಲೀ ಇರುವುದಿಲ್ಲ, ತೆರೆದ ಬಾವಿಗಳಿಗಿರುವ ಉದ್ದ-ಅಗಲ, ಆಳವೂ ಇರುವುದಿಲ್ಲ. ಆದರೆ ಆ ಪುಟ್ಟ-ಪುಟ್ಟ ಜ ಸಂಗ್ರಹಾಗಾರಗಳು ನೂರಾರು ಎಕರೆಗೆ ನೀರುಣಿಸುವ ಸಾಮರ್ಥ್ಯವುಳ್ಳವು. ಬೇಸಿಗೆ ಬೆಳೆಗೆ ಮತ್ತು ಇತರ ಉಪಯೋಗಗಳಿಗೆ ಅವೇ ಆಧಾರ. ತುಮಕೂರು ಜಿಲ್ಲೆಯ ಪಾವಗಡ, ಮಧುಗಿರಿ, ಕೊರಟಗೆರೆ, ಶಿರಾ ಹಾಗೂ ಚಿತ್ರದುರ್ಗದ ಕೆಲವು ಭಾಗ, ಬಳ್ಳಾರಿಯ ಕೂಡ್ಲಿಗಿ ತಾಲ್ಲೂಕು, ಕೋಲಾರ ಜಿಲ್ಲೆಗಳ ಕೆಲವು ಭಾಗದ ಹಳೆ ತಲೆಮಾರಿನ ರೈತರಿಗೆ ತಲಪರಿಗೆ ಅತ್ಯಂತ ಪರಿಚಿತ ಪದ. ತಲಪರಿಗೆ ನೀರಾವರಿ, ತಲಪರಿಗೆ ಬೇಸಾಯ ಎಂಬ ಪದವೇ ಈ ಭಾಗದಲ್ಲಿ  ಚಾಲ್ತಿಯಲ್ಲಿದೆ.

ಆಂಧ್ರದ  ಅನಂತಪುರ, ಕಡಪ, ಕಲ್ಯಾಣ ದುರ್ಗಗಳಲ್ಲಿಯೂ ಸಹ ತಲಪರಿಗೆಗಳಿರುವ ಮಾಹಿತಿ ಇದೆ. ತಲಪರಿಗೆ ತೆಲುಗು ಭಾಷೆಯ ಶಬ್ಧ ಎಂದು ಹಲವರು ಹೇಳುತ್ತಾರೆ. ಕೆಲವರು ಅಚ್ಚ ದ್ರಾವಿಡ  ಪದ ಎಂತಲೂ ಹೇಳುತ್ತಾರೆ. ರೈತರು ಪ್ರದೇಶಕ್ಕನುಗುಣವಾಗಿ ತಲಪರಿಗೆ, ತಲಪುರಿಗೆ, ತಲಪರಿಕೆ ಮುಂತಾಗಿ ಉಚ್ಛರಿಸುವುದೂ ಉಂಟು.

ತಲಪರಿಗೆಗಳು ನೈಸರ್ಗಿಕವಾಗಿ ರೂಪುಗೊಂಡಿರುವಂತಹವು.  ಸಾಮಾನ್ಯವಾಗಿ ಬೆಟ್ಟ-ಗುಡ್ಡಗಳ  ಬುಡಗಳಲ್ಲಿ, ಅರಣ್ಯಪ್ರದೇಶಗಳ ಇಳಿಜಾರು ಭಾಗದಲ್ಲಿ,  ಕೆರೆಗಳಿಗೆ ನೀರು ಬರುವ ವಿಶಾಲವಾದ  ಜಲಾನಯನ ಪ್ರದೇಶಗಳ ತಗ್ಗು ಭಾಗದಲ್ಲಿ, ಕೆರೆ-ಕಟ್ಟೆಗಳ ಅಂಗಳ ಅಥವಾ ಹಿಂಭಾಗ, ಅಚ್ಚುಕಟ್ಟು ಪ್ರದೇಶಗಳಲ್ಲಿ, ನದಿ ಮತ್ತು ದೊಡ್ಡ-ದೊಡ್ಡ ಹಳ್ಳಗಳ ಇಕ್ಕೆಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಡುಬರುತ್ತವೆ. ತುಮಕೂರು ಜಿಲ್ಲೆಯ ಪಾವಗಡ, ಮಧುಗಿರಿ, ಕೊರಟಗೆರೆ ತಾಲ್ಲೂಕುಗಳಲ್ಲಿ ಬೆಟ್ಟ-ಗುಡ್ಡಗಳು, ಕುರುಚಲು ಕಾಡುಗಳು ಹೇರಳವಾಗಿರುವುದರಿಂದ ಈ ಭಾಗವು ತಲಪರಿಗೆಗಳ ಕೇಂದ್ರಸ್ಥಾನವಾಗಿದೆ.

ಭೌಗೋಳೀಕ ಕಾರಣ:

ತುಮಕೂರು ಜಿಲ್ಲೆಯ ಶಿಲಾಪದರಗಳ ಲಕ್ಷಣಗಳನ್ನು ನೋಡಿದರೆ ಇಲ್ಲಿ ಅಗ್ನಿಶಿಲೆಗಳ ಬೆಟ್ಟಗಳೇ ಜಾಸ್ತಿ. ಈ ಶಿಲೆಗಳು ಬಹಳಷ್ಟು ಡಾಲರೈಟಿಕ್ ಇಂಟ್ರೂಶನ್ಸ್‌ಗೆ ಒಳಪಟ್ಟಿವೆ. ಪಾವಗಡದಿಂದ ತಮಿಳುನಾಡಿನ ನೀಲಗಿರಿಯವರೆಗೆ ಈ ರೀತಿಯ ಇಂಟ್ರೂಶನ್ಸ್‌ಗಳು ಸುಮಾರು ೧೪೦೦ ಇರಬಹುದು. ಈ ಇಂಟ್ರೂಶನ್ಸ್‌ಗಳಿರುವ ಬೆಟ್ಟ ಸಾಲುಗಳಲ್ಲಿ ತಲಪರಿಗೆಗಳನ್ನು ನೋಡಬಹುದ ಇವುಗಳ ಸಂಖ್ಯೆಯ ಆಧಾರದ ಮೇಲೆ ಈ ಪ್ರದೇಶದಲ್ಲಿ ೧೫೦೦ ಕ್ಕೂ ಹೆಚ್ಚು ತಲಪರಿಗೆಗಳಿರಬಹುದೆಂದು ಅಂದಾಜಿಸಬಹುದು.

ಇವು ಈ ಪ್ರದೇಶದಲ್ಲಿರಲು ಪ್ರಮುಖ ಕಾರಣ, ಡಾಲರೈಟ್ ಶಿಲೆಗಳು ಭೂಮಿಯ ಆಳದಿಂದ ಉಧ್ಬವವಾಗಿ ಮೇಲ್ಮೈಯನ್ನು ತೂರಿಕೊಂಡು ಮೇಲೆ ಬಂದಿರುವುದು. ಇವು ದಕ್ಷಿಣೋತ್ತರವಾಗಿ ಸರಾಸರಿ ೪ ರಿಂದ ೫ ಕಿ.ಮೀ. ಅಂತರದಲ್ಲಿ ನುಗ್ಗಿರುತ್ತವೆ. ಇದರ ಆಜು-ಬಾಜಿನಲ್ಲಿ ಉದ್ಭವವಾದ ಬಿರುಕುಗಳಿಂದ ನೀರಿನ ಸಣ್ಣ  ಚಿಲುಮೆ  ಹುಟ್ಟುತ್ತದೆ. ಈ ಚಿಲುಮೆಯು ಮೊದಲು ಆ ಜಾಗದ ಮಣ್ಣಿನ ಪದರವನ್ನು ನೆನೆಸಿ ನಂತರ ಹೆಚ್ಚಾದ ನೀರು ತಲಪರಿಗೆಯಾಗಿ ಮೇಲೆ ಹರಿಯುತ್ತದೆ.

ಪ್ರಾಗೈತಿಹಾಸಿಕ ಕಾಲದಲ್ಲಿ ತಲಪರಿಗೆಗಳು

ಪ್ರಾಗೈತಿಹಾಸಿಕ ಕಾದಿಂದಲೂ ತಲಪರಿಗೆಗಳ ಬಳಕೆ ಇತ್ತು ಎಂಬುದಕ್ಕೆ ಪಾವಗಡದಲ್ಲಿ ಉದಾಹರಣೆಗಳು ಲಭ್ಯ. ಶಿಲಾಯುಗದ ಸಂಸ್ಕೃತಿಯ ಜನರು ಬೆಟ್ಟಗುಡ್ಡಗಳಿದ್ದ ಸ್ಥಳಗಳಲ್ಲಿ ವಾಸ ಮಾಡುತ್ತಿದ್ದರು. ಬಂಡೆಗಳ ಸಂದುಗಳಲ್ಲಿ, ಗುಹೆಗಳಲ್ಲಿ ಅವರು ರಾತ್ರಿ ಕಳೆಯುತ್ತಿದ್ದರು. ಅವರಿಗೆ ಅತ್ಯಾವಶ್ಯಕವಾಗಿದ್ದುದು ನೀರು. ಅವರ ಸಾಕು ಪ್ರಾಣಿಗಳಿಗೂ, ವ್ಯವಸಾಯಕ್ಕೂ ನೀರು ಲಭ್ಯವಾಗುತ್ತಿದ್ದ ಕಡೆಗಳಲ್ಲಿ ಅವರು ವಾಸ ಮಾಡುತ್ತಿದ್ದರು. ಇಂದಿಗೂ ಸದರಿ ಪ್ರದೇಶಗಳನ್ನು ಪರಿಶೀಲಿಸಿದಾಗ ಸಾವಿರಾರು ವರ್ಷಗಳಿಂದ ಬಂಡೆಗಳ ಮೇಲೆ ಮಳೆ ನೀರು ಹರಿದು ಕಲ್ಲುಗಳು ನೀರಿನ ಹರಿಯುವಿಕೆಯಿಂದ ಸವೆದು ತಗ್ಗುಗಳಾಗಿರುವುದನ್ನು ಸ್ಪಷ್ಟವಾಗಿ ನೋಡಬಹುದು. ಈ ಹಿನ್ನೆಲೆಯಲ್ಲಿ ಪಾವಗಡದಲ್ಲಿ ಚಿಲುಮೆಗಳು, ತಲಪರಿಗೆಗಳು ಸಾವಿರಾರು ವರ್ಷಗಳ ಹಿಂದೆಯೇ ಜೀವಂತವಾಗಿದ್ದು ಶಿಲಾಯುಗದ ಜನತೆಯ ಜೀವನಾಡಿಯಾಗಿತ್ತೆಂದು ಹೇಳಬಹುದು. ಕ್ರಮೇಣ ಅದು ಪಾವಗಡದಲ್ಲಿ ತಲಪರಿಗೆ ಬೇಸಾಯ ಎಂಬ ಸಂಸ್ಕೃತಿಯನ್ನೇ ಹುಟ್ಟುಹಾಕಿದೆ ಎನ್ನಲಡ್ಡಿಯಿಲ್ಲ.

ಪಾವಗಡ ಟೌನ್ ಬಾಬತ್ತು ಕಣಿಮಾಯಿ ಚಿಲುಮೆ ಅತಿ ಹೆಚ್ಚು ನೀರನ್ನು ಚಿಮ್ಮುತ್ತದೆ. ಈ ಚಿಲುಮೆಯ ಬಳಿ ಪ್ರಾಗೈತಿಹಾಸಿಕ ಕುರುಹುಗಳು ಸ್ಪಷ್ಟವಾಗಿವೆ. ಸೂಕ್ಷ್ಮ ಶಿಲಾಯುಗದ ಜನರು ಇಲ್ಲಿ ತಮ್ಮ ನೆಲೆಗಳನ್ನು   ಸ್ಥಾಪಿಸಿಕೊಂಡಿರುವುದು ಇತಿಹಾಸದ ಕ್ಷೇತ್ರಕಾರ್ಯದ ಸಮಯದಲ್ಲಿ ತಿಳಿದು ಬಂದಿದೆ. ಕ್ರಿ.ಪೂ.೫೦೦ ರಿಂದ ೧೨೦೦ರ ಸಮಯದಲ್ಲಿ ಕಂಡು ಬರುವ ಬೃಹತ್ ಶಿಲಾಯುಗದ ಮತ್ತು ಸೂಕ್ಷ್ಮ ಶಿಲಾಯುಗದ ಸಂಸ್ಕೃತಿಗೊಳಪಟ್ಟಿದ್ದ ಜನ ತಮ್ಮ ಜೀವಿತ ಕಾಲದಲ್ಲಿ ನಿಲ್ಲಿಸಿರುವ ಅನೇಕ ಬೃಹತ್ ಕಲ್ಲು ಚಪ್ಪಡಿ ಕಂಬಗಳು ಚಿಲುಮೆಗೆ ಹತ್ತಿರದಲ್ಲಿ ಇಂದಿಗೂ ಇವೆ. ಇವುಗಳನ್ನು ಸೂಕ್ಷ್ಮ ಶಿಲಾಯುಗದ ಸ್ಮಾರಕ ಶಿಲೆಗಳೆಂದು ಕರೆಯುತ್ತಾರೆ.

ತಲಪರಿಗೆಗಳ ಉಗಮ

ಅಂತರ್ಜಲ ರೂಪುಗೊಳ್ಳುವ ವಿಧಾನದ ಬಗ್ಗೆ ತಿಳಿದರೆ ತಲಪರಿಗೆಗಳ ನೀರಿನ ಮೂಲ ಮತ್ತು ಈ ಜಿಲ್ಲೆಗಳಲ್ಲಿಯೇ ನಿರ್ದಿಷ್ಟವಾಗಿ ತಲಪರಿಗೆಗಳಿರುವ ಬಗ್ಗೆ ಸ್ಪಷ್ಟವಾಗುತ್ತದೆ.

ಮಳೆ ಬಿದ್ದಾಗ, ಮಳೆಯ ಸ್ವಲ್ಪ ಪ್ರಮಾಣದ ನೀರು (ಸುಮಾರು ಶೇ.೮ ರಿಂದ ೧೨ ರಷ್ಟು) ಭೂಮಿಯ ಗುರುತ್ವಾಕರ್ಷಣೆಗೊಳಪಟ್ಟು, ಮಣ್ಣಿನ ಪದರಗಳ ಮೂಲಕ ಭೂಮಿಯ ಒಳಗೆ ಜಿನುಗುತ್ತದೆ. ಇದನ್ನು ಬಸಿಯುವಿಕೆ ಎನ್ನುತ್ತಾರೆ. ಮಣ್ಣಿನ ರಂಧ್ರಗಳ ಮೂಲಕ ನಿಧಾನವಾಗಿ ಕೆಳಗಿಳಿಯುವ ನೀರು ಅದನ್ನು ತಡೆದಿಡುವ ಶಿಲಾಪದರದವರೆಗೂ ಜಿನುಗಿ ಅಲ್ಲಿನ ಶಿಲಾರಂಧ್ರಗಳಲ್ಲಿ ಮತ್ತು ಬಿರುಕುಗಳಲ್ಲಿ ಸಂಗ್ರಹವಾಗುತ್ತದೆ. ಇದೇ ಅಂತರ್ಜಲ ಅಥವಾ ಭೂಜಲ. ಹೀಗೆ ಸಂಗ್ರಹವಾದ ಅಂತರ್ಜಲ ಒಂದೇ ಕಡೆ ನಿಶ್ಚಲವಾಗಿರದೆ ಹರಿಯುತ್ತಿರುತ್ತದೆ. ನೀರನ್ನು ಹಿಡಿದಿಟ್ಟಿರುವ ಭೂಗರ್ಭದ ಶಿಲಾರಚನೆಯ ಭಾಗಗಳನ್ನು ಜಲಸ್ಥರ ಅಥವಾ ಜಲಧರಗಳೆನ್ನುತ್ತಾರೆ. ಈ ಜಲಸ್ಥರಗಳು ಭೂಮಿಯ ಒಂದೇ ಆಳದಲ್ಲಿರುವುದಿಲ್ಲ. ಅವು ಒಮ್ಮೊಮ್ಮೆ ಭೂಮಟ್ಟದ ಸನಿಹದಲ್ಲೂ, ಒಮ್ಮೊಮ್ಮೆ ಅತ್ಯಂತ ಆಳದಲ್ಲೂ ಕಂಡುಬರುತ್ತವೆ.

ಈಗ ತುಮಕೂರು ಮತ್ತು ಅಕ್ಕ-ಪಕ್ಕದ ಜಿಲ್ಲೆಗಳ ಜಲಸ್ಥರಗಳ ಬಗ್ಗೆ ಗಮನಹರಿಸೋಣ. ಭೂಗರ್ಭಶಾಸ್ತ್ರದ ಪ್ರಕಾರ ಈ ಭಾಗದ ಭೂಗರ್ಭದಲ್ಲಿ ವಿಶಾಲವಾದ ಬಂಡೆಗಳಿವೆ. ಈ ಬಂಡೆಗಳಲ್ಲಿ ನೀರು ಜಿನುಗಿ ಆಳಕ್ಕಿಳಿಯಲು  ಅಗತ್ಯವಾದ ಬಿರುಕುಗಳು ಅತ್ಯಂತ ಕಡಿಮೆ, ಹಾಗಾಗಿ ಇಂಗಿದ ಮಳೆ ನೀರು ಹೆಚ್ಚು ಆಳಕ್ಕಿಳಿಯದೆ ಹತ್ತಿಪ್ಪತ್ತು ಅಡಿ ಆಳದಲ್ಲಿ ಹರಿಯುತ್ತಿದ್ದು ಎಲ್ಲಿ ಮರಳುಮಣ್ಣು ಅಥವಾ ಸಡಿಲಮಣ್ಣು ಸಿಗುತ್ತದೆಯೋ ಅಲ್ಲಿ ಉಕ್ಕುತ್ತದೆ.

ತಲಪರಿಗೆಗಳ ರಚನೆ

ಈ ಮೊದಲೇ ಹೇಳಿದಂತೆ ನಿರ್ದಿಷ್ಟ ಸ್ಥಳದಲ್ಲಿ ಸದಾ ನೀರು ಉಕ್ಕುವುದನ್ನು ಗಮನಿಸಿ, ಅಥವಾ ಇಂತಹ ಕಡೆ ಗುಂಡಿ ತೆಗೆದರೆ ನೀರು ಉಕ್ಕಬಹುದೆಂದು ಅಂದಾಜಿಸಿ ನಮ್ಮ ಪೂರ್ವಿಕರು  ಅಲ್ಲಿ ಗುಂಡಿ ತೋಡಿ ಅದಕ್ಕೊಂದು ಕಾಲುವೆ ತೆಗೆದು ತಲಪರಿಗೆ ನಿರ್ಮಿಸಿದ್ದಾರೆ. ಬಂಡೆ-ಕಲ್ಲುಗಳಿಂದ ಕೂಡಿದ ಬೆಟ್ಟದ ತಪ್ಪಲುಗಳಲ್ಲಿ ಮತ್ತು ಮಳೆಗಾಲದಲ್ಲಿ ಹರಿದು ಬೇಸಿಗೆಯಲ್ಲಿ ಒಣಗುವ ಅಥವಾ ನೀರು ಕಡಿಮೆಯಾಗುವ ನದಿ, ತೊರೆ, ಹಳ್ಳಗಳ ಇಕ್ಕೆಲಗಳಲ್ಲಿ ಹೆಚ್ಚಾಗಿ ತಲಪರಿಗೆಗಳನ್ನು ಕಾಣಬಹುದು. ಬೆಟ್ಟದ ತಪ್ಪಲುಗಳಲ್ಲಿ ತಲಪರಿಗೆಗಳಿರಲು ಕಾರಣವನ್ನು ಈ ರೀತಿ ನೀಡಬಹುದು. ಮಳೆ ಬಿದ್ದಾಗ ಬೆಟ್ಟದ ಬಂಡೆ-ಕಲ್ಲುಗಳ ಬಿರುಕುಗಳಲ್ಲಿ ಸೇರಿ ಇಂಗುವ ನೀರು ಭೂಗರ್ಭದಲ್ಲಿ ಅಂತರ್ಗತವಾಗಿ ಹರಿಯುತ್ತಿದ್ದು ಮರಳು ನೆಲ ಸಿಕ್ಕ ಕಡೆ ಉಕ್ಕಿ ಮೇಲೆ ಬರುತ್ತದೆ. ಈ ರೀತಿ ನೀರು ಊರುವ, ಜಿನುಗುವ, ಒಸರುವ ಸ್ಥಳವನ್ನು ಗುರುತಿಸಿ ಅಲ್ಲಿ ತಲಪರಿಗೆ ನಿರ್ಮಿಸಿ ಅದಕ್ಕೆ ತಕ್ಕ ಹಾಗೆ ಬೇಸಾಯ ಪ್ರದೇಶವನ್ನು ಅಭಿವೃದ್ಧಿಪಡಿಸಲಾಗಿದೆ. ಇದೇ ಅಭಿಪ್ರಾಯವನ್ನು ಹಲವಾರು ಭೂಗರ್ಭ ಶಾಸ್ತ್ರಜ್ಞರು ಹಾಗೂ ರೈತರು ಅನುಮೋದಿಸುತ್ತಾರೆ.

ಇನ್ನು ನದಿ, ತೊರೆ, ಹಳ್ಳಗಳ ಇಕ್ಕೆಲಗಳಲ್ಲಿ ತಲಪರಿಗೆಗಳು ಇರಲು ಕಾರಣವೆಂದರೆ, ಬೇಸಿಗೆಯಲ್ಲಿ ಇವು ಒಣಗಿದರೂ ಪದರ-ಪದರವಾಗಿ ಶೇಖರಣೆಗೊಂಡ ಮರಳಿನಲ್ಲಿ ಇಮುರಿದ ಮಳೆಗಾಲದ ನೀರು  ದಡದಲ್ಲಿ ಎಲ್ಲೋ ಒಂದು ಕಡೆ ಮರಳಿನ ಪಾಯಿಂಟ್ ಸಿಕ್ಕ ಕಡೆ ಉಕ್ಕಿ ಹೊರಬರುತ್ತದೆ. ಜನರು ಈ ಸ್ಥಳಗಳನ್ನು ಗುರುತಿಸಿ ಅಲ್ಲಿ ತಲಪರಿಗೆಗಳನ್ನು ನಿರ್ಮಿಸಿಕೊಂಡಿದ್ದಾರೆ.

ತಲಪರಿ ಗೆ ವಿಧಗಳು:

ತುಮಕೂರು ಜಿಲ್ಲೆಯಲ್ಲಿನ ತಲಪರಿಗೆಗಳನ್ನು ಅವು ಇರುವ ಸ್ಥಳವನ್ನಾಧರಿಸಿ  ಮುಖ್ಯವಾಗಿ ಎರಡು ಭಾಗ ಮಾಡಬಹುದು. ಅವುಗಳೆಂದರೆ,

೧. ಕೆರೆ ಅಂಗಳ ಮತ್ತು ಕೆರೆ ಹಿಂಬಾಗದಲ್ಲಿರುವ ತಲಪರಿಗೆಗಳು.

೨. ನದಿ ಮತ್ತು ದೊಡ್ಡ ಹಳ್ಳಗಳ ದಡದಲ್ಲಿರುವ ತಲಪರಿಗೆಗಳು.

ಕೆರೆಗೆ ಹೊಂದಿಕೊಂಡ ತಲಪರಿಗೆಗಳು:

ಪಾವಗಡ, ಮಧುಗಿರಿ ಮತ್ತು ಕೊರಟಗೆರೆ ತಾಲ್ಲೂಕುಗಳ ಬಹುತೇಕ ಎಲ್ಲಾ ಕೆರೆ ಮತ್ತು ಕೆರೆ ಅಚ್ಚುಕಟ್ಟುಗಳಲ್ಲಿ ತಲಪರಿಗೆಗಳನ್ನು ಕಾಣಬಹುದು. ಹೊಸದಾಗಿ ನಿರ್ಮಿಸಿದ ಕೆಲವು ಕೆರೆಗಳು ಇದಕ್ಕೆ ಅಪವಾದವಿರಬಹುದು. ಆದರೆ ಹಳೆಯ ಕೆರೆಗಳಲ್ಲೆಲ್ಲಾ ತಲಪರಿಗೆಗಳಿವೆ.  ಕೆರೆ ಒಳಗಿರುವವು ಸಾಮಾನ್ಯವಾಗಿ ಅಂಗಳದ (Water spread area) ಮಧ್ಯಭಾಗ ಅಥವಾ ಅದಕ್ಕಿಂತ ಮೇಲೆ ಇರುತ್ತವೆ. ಅಚ್ಚುಕಟ್ಟಿನಲ್ಲಿ ಇಂತಹುದೇ ನಿರ್ದಿಷ್ಟ ಪ್ರದೇಶವೆಂದಿಲ್ಲ, ಎಲ್ಲಿ ಬೇಕಾದರೂ ಇರಬಹುದು. ಮಧುಗಿರಿ ತಾಲ್ಲೂಕು ಹನುಮಂತಪುರದ ಕೆರೆ ಏರಿಯ ಹಿಂದೆ ಅದಕ್ಕೆ ಹೊಂದಿಕೊಂಡಂತೆಯೇ ಇದ್ದರೆ ಅದೇ ತಾಲ್ಲೂಕಿನ ಹೊಸಕೆರೆ ಕೆರೆಯ ಹಿಂದೆ ಏರಿಗೆ ಒಂದು ಕಿಲೋ ಮೀಟರ್ ದೂರದಲ್ಲಿ ಇದೆ.

ನದಿ ಮತ್ತು ಹಳ್ಳದ ಪಕ್ಕದ ತಲಪರಿಗೆಗಳು

ಕೆರೆಗಳನ್ನು ಹೊರತುಪಡಿಸಿದರೆ ಅತಿ ಹೆಚ್ಚು ತಲಪರಿಗೆಗಳಿರುವುದು ನದಿಗಳ ದಡದಲ್ಲಿ. ಚಿಕ್ಕಬಳ್ಳಾಪುರದ ಚಿತ್ರಾವತಿ, ತುಮಕೂರಿನ ಸುವರ್ಣಮುಖಿ ಮತ್ತು ಜಯಮಂಗಲಿ ನದಿಗಳು ಸಾವಿರಾರು ತಲಪರಿಗೆಗಳನ್ನು ಪೊರೆದಿವೆ. ಆಂಧ್ರದ ಅನಂತಪುರ ಜಿಲ್ಲೆಯಲ್ಲಿನ ನದಿ ಇಕ್ಕೆಲಗಳಲ್ಲೂ ತಲಪರಿಗೆಗಳಿರುವ ಬಗ್ಗೆ ಅನಂತಪುರದ ಕದಲಿಕ ಪತ್ರಿಕೆಯ ಸಂಪಾದಕ ಇಮಾಮ್ ಮತ್ತು ರಾಯಲಸೀಮಾ ಅಭಿವೃದ್ಧಿ ಸಂಸ್ಥೆಯವರು ದಾಖಲಿಸಿದ್ದಾರೆ.

ನದಿ ಮತ್ತು ದೊಡ್ಡಹಳ್ಳಗಳಲ್ಲಿ  ಮಳೆಗಾಲ ತುಂಬಿ ಹರಿಯುವ ನೀರು ಅಲ್ಲಿನ ಮರಳಿನಲ್ಲಿ ಇಂಗಿ ಅವುಗಳ ದಡದಲ್ಲಿನ  ತಲಪರಿಗೆಗಳಿಗೆ ನೀರೊದಗಿಸುತ್ತದೆ. ನದಿ ಹರಿಯುವಾಗ ಅದಕ್ಕಡ್ಡಲಾಗಿ ಕಟ್ಟು ಕಾಲುವೆ ಹಾಕಿ ನೀರನ್ನು ತಮ್ಮ-ತಮ್ಮ ಹೊಲಗಳಿಗೆ ತಿರುಗಿಸಿಕೊಂಡು ಬೇಸಾಯ ಮಾಡುವ ರೈತರು, ನದಿ ಒಣಗಿದಾಗ ಅಥವಾ ಸ್ವಲ್ಪವೇ ಹರಿಯುವಾಗ ದಡದಲ್ಲಿ ತಲಪರಿಗೆ ಕಾಲುವೆಗಳನ್ನು ತೆಗೆದು ನೀರು ಪಡೆಯುತ್ತಾರೆ.

ತಲಪರಿಗೆ ಬಳಕೆಗಳು:

ಗ್ರಾಮೀಣ ಬದುಕಿನ ಅತ್ಯಂತ ಮೂಲಭೂತ ಅವಶ್ಯಕತೆಗಳಾದ ಬೇಸಾಯ, ಜನರಿಗೆ ಮತ್ತು ದನ-ಕರುಗಳಿಗೆ ಕುಡಿಯುವ ನೀರಿಗಾಗಿ ತಲಪರಿಗೆಗಳು ಬಳಸಲ್ಪಡುತ್ತವೆ.  ೫ ಎಕರೆಯಿಂದ ಹಿಡಿದು ೩೦೦ ಎಕರೆವರೆಗೊ ನೀರುಣಿಸುವ ಸಾಮರ್ಥ್ಯವುಳ್ಳ ತಲಪರಿಗೆಗಳಿವೆ.

ಮಳೆಗಾಲದಲ್ಲಿ ಕೆರೆಗೆ ಸಾಕಷ್ಟು ನೀರು  ಬಂದರೆ ಎರಡನೇ ಬೆಳೆ- ಅಂದರೆ ಬೇಸಿಗೆ ಬೆಳೆ- ಇಡುವುದು ರೂಢಿ. ಡಿಸೆಂಬರ್ ಸುಮಾರಿಗೆ ಇಟ್ಟ ಬೆಳೆ ಮಾರ್ಚ್- ಏಪ್ರಿಲ್‌ಗೆ ತೆನೆ ಬಿಡುವ ಹಂತದಲ್ಲಿರುತ್ತದೆ. ಬಹುತೇಕ ಕೆರೆ ನೀರು ಈ ಹಂತದಲ್ಲಿ ಖಾಲಿಯಾಗುತ್ತದೆ. ಇಲ್ಲಿಂದ ಮುಂದಕ್ಕೆ ತಲಪರಿಗೆ ನೀರಿನಿಂದಲೇ ಬೆಳೆ ಉಳಿಸಲಾಗುತ್ತದೆ. ಮಳೆಗಾಲದಲ್ಲಿಯೂ ಸಹ ಅಗತ್ಯ ಬಿದ್ದರೆ ತಲಪರಿಗೆ ನೀರು ಬಳಸಲಾಗುತ್ತದೆ. ಕೆರೆ ಅಂಗಳದ ಹೊರತಾಗಿರುವ ತಲಪರಿಗೆಗಳನ್ನು ಯಾವಾಗ ನೀರಿನ ಅಗತ್ಯವಿರುತ್ತದೆಯೋ ಆವಾಗಲೆಲ್ಲಾ ಬಳಸುತ್ತಾರೆ.

ಎಳನೀರಿನಂತಹಾ ನೀರು

ತಲಪರಿಗೆ ನೀರು ತಾಯಿ ಹಾಲಿಗೆ ಸಮಾನ, ಎಳನೀರಿಗಿಂತಲೂ ಒಳ್ಳೇದು ಇದು ಮಧುಗಿರಿ ತಾಲ್ಲೂಕು ಬ್ಯಾಲ್ಯದ ಶಿವಕುಮಾರ್ ಹೇಳಿಕೆ. ತಲಪರಿಗೆ ನೀರು ಕುಡಿದ ಪ್ರತಿಯೊಬ್ಬ ಹಿರಿಯರ ಬಾಯಿಂದಲೂ ಬರುವ ಮಾತಿದು. ತಲಪರಿಗೆ ನೀರು ಸಾಮಾನ್ಯವಾಗಿ ಹಾಲು ಬಿಳುಪು ಬಣ್ಣ. ನೋಡಲು ಆಕರ್ಷಕ. ಮರಳಿನಿಂದ ಜಿನುಗಿ ಬರುವುದರಿಂದ ಸಿಹಿಯಾಗಿರುತ್ತದೆ ಮತ್ತು ತಣ್ಣಗಿರುತ್ತದೆ. ಅದಕ್ಕಾಗಿಯೇ ಎಷ್ಟೋ ತಲಪರಿಗೆಗಳಿಗೆ ಸೀನೀರು ಹೊಳೆ, ಸೀನೀರು ಗುಂಡಿ  ಎಂಬ ಹೆಸರೇ ಇದೆ. ಸದಾ ಹರಿಯುತ್ತಲೇ ಇರುವುದರಿಂದ ಶುದ್ಧವಾಗಿಯೂ ಇರುತ್ತದೆ. ಹರಿಯದೆ ನಿಂತ ನೀರನ್ನು ಕುಡಿಯಲು ಬಳಸುವುದಿಲ್ಲ.

ಈ ನೀರಿನಲ್ಲಿ ತುಂಬಾ ಚೆನ್ನಾಗಿ ಅಡುಗೆಯಾಗುತ್ತದೆ ಎನ್ನುತ್ತಾರೆ ಹಳ್ಳಿ ಹೆಣ್ಣುಮಕ್ಕಳು. ಬೇಳೆ ಬೇಗ ಬೇಯುತ್ತದೆ, ಚೆನ್ನಾಗಿ ಬೇಯುತ್ತದೆ, ಸಾರು ರುಚಿಯಾಗಿರುತ್ತದೆ ಇದು ಅವರ ಅನುಭವ. ಅಲ್ಲದೆ ಈ ನೀರಿಗೆ ಔಷಧಿಯ ಗುಣವೂ ಇದೆ. ಪಾವಗಡ, ಮಧುಗಿರಿಯ ಅಂತರ್ಜಲದಲ್ಲಿ ಫ್ಲೋರೈಡ್ ಅಂಶ ಹೆಚ್ಚಾಗಿದೆ, ಆದರೆ ತಲಪರಿಗೆ ನೀರಿನಲ್ಲಿ ಅದರ ಲವಲೇಶವೂ ಇರುವುದಿಲ್ಲ.

ತಲಪರಿಗೆ ಕಾಲುವೆ

ತಲಪರಿಗೆ ವ್ಯವಸ್ಥೆಯಲ್ಲಿ ಕಾಲುವೆ ಅತ್ಯಂತ ಪ್ರಮುಖವಾದುದು. ತಲಪರಿಗೆಯ ಮುಖ್ಯ ಲಕ್ಷಣವೇ ಅದಕ್ಕೆ ಹೊಂದಿಕೊಂಡ ಕಾಲುವೆ. ಮಧುಗಿರಿಯ ಭೂಗರ್ಭ ಶಾಸ್ತ್ರಜ್ಞರಾದ ಜಯರಾಮ್ ರವರ ಪ್ರಕಾರ ತಲಪರಿಗೆಗಳಲ್ಲಿ ನೀರು ಉಕ್ಕುವಂತೆ ಬೇರೆ ಎಷ್ಟೋ ಕಡೆ ನೀರು ಉಕ್ಕುತ್ತದೆ, ಚಿಮ್ಮುತ್ತದೆ, ಒಸರುತ್ತದೆ. ಆದರೆ ಅವುಗಳಿಗೆ ಚಿಲುಮೆ, ದೊಣೆ, ಜೌಗು ಮುಂತಾಗಿ ಕರೆಯುತ್ತೇವೆ. ಆದರೆ ಎಲ್ಲಿ ಹಾಗೆ ಉಕ್ಕುವ ನೀರಿಗೆ ಕಾಲುವೆ ತೋಡಿ, ಆ ನೀರನ್ನು ವ್ಯವಸಾಯಕ್ಕೆ ಬಳಸುತ್ತಾರೋ ಆ ಸ್ಥಳವನ್ನು ತಲಪರಿಗೆ ಎನ್ನಲಾಗುತ್ತದೆ.

ಈ ವಾದಕ್ಕೆ ಪುಷ್ಟಿ ನೀಡುವಂತೆ ರೈತರ ಅನಿಸಿಕೆಗಳೂ ಇವೆ. ಉದಾಹರಣೆಗೆ ಮಧುಗಿರಿ ತಾಲ್ಲೂಕು ಕಸಬಾ ಹೋಬಳಿಯ ಕಣಿಮೇನಹಳ್ಳಿಯಲ್ಲಿ ಒಂದು ಬಾವಿ ಇದೆ. ಅದೂ ಸಹ ಬೆಟ್ಟದಲ್ಲಿ ಬಿದ್ದ ಮಳೆ ನೀರಿನಿಂದಲೇ ಆಗಿದೆ, ಹಾಗೂ ಕಳೆದ ೪೦ ವರ್ಷಗಳಿಂದ ಒಂದು ಬಾರಿಯೂ ಬತ್ತಿದ ಉದಾಹರಣೆ ಇಲ್ಲ. ಬೇಸಾಯಕ್ಕೆ ಮತ್ತು ಕುಡಿಯಲು ನೀರು ಬಳಕೆಯಾಗುತ್ತದೆ.  ಆದರೆ ಅದನ್ನು ಯಾರೂ ತಲಪರಿಗೆ ಎನ್ನುವುದಿಲ್ಲ. ಏಕೆಂದರೆ ಅದಕ್ಕೆ ಸಾಮೂಹಿಕ ಒಡೆತನವಿಲ್ಲ ಮತ್ತು ಕಾಲುವೆಯಿಲ್ಲ. ಇದೇ ಗ್ರಾಮದಲ್ಲಿ ಈಗ ಹಾಳು ಬಿದ್ದಿರುವ ಕೆರೆ ಅಂಗಳದಲ್ಲಿ ಒಂದು ತಲಪರಿಗೆಯನ್ನು ರೈತರು ಗುರುತಿಸುತ್ತಾರೆ. ಅದಕ್ಕೆ ಕಾಲುವೆ ಇದೆ. ಅದರ ಪಕ್ಕದಲ್ಲಿಯೇ ಇತ್ತೀಚೆಗೆ- ಸುಮಾರು ೧೦ ವರ್ಷಗಳಿಂದೀಚೆ- ಮತ್ತೊಂದು ನೀರಿನ ಗುಂಡಿ ತೋಡಲಾಗಿದೆ. ಅದರಲ್ಲಿಯೂ ಸದಾ ನೀರಿರುತ್ತದೆ. ಆದರೆ ರೈತರು ಅದನ್ನು ತಲಪರಿಗೆ ಎನ್ನುವುದಿಲ್ಲ. ಏಕೆಂದರೆ ಅದಕ್ಕೆ ಕಾಲುವೆಯಿಲ್ಲ.

ಅಲ್ಲದೆ ರೈತರು ಮಾತನಾಡುವಾಗ ಕಾಲುವೆ ಬೇಸಾಯ, ಕಾಲುವೆ ನೀರಿನ ಹಕ್ಕು, ತಲ್ಪರ್ಗೆ ಕಾಲುವೆ ಎಂದೇ ಬಳಸುತ್ತಾರೆ, ಹಾಗಾಗಿ ತಲಪರಿಗೆಯ ಮುಖ್ಯ ಲಕ್ಷಣ ಕಾಲುವೆ. ತಲಪರಿಗೆ ನಿರ್ವಹಣೆಯಲ್ಲಿ ಕಾಲುವೆ ನಿರ್ವಹಣೆಯೇ ಮುಖ್ಯವಾದುದು.

ಈ ಕಾಲುವೆಗಳ ಅಗಾಧತೆ ನೋಡಿದರೆ ಅಚ್ಚರಿಯಾಗುತ್ತದೆ. ಕೆಲವಂತೂ ಬೃಹತ್ ನೀರಾವರಿ ಕಾಲುವೆಗಳನ್ನು ಹೋಲುತ್ತವೆ. ಕಾಲುವೆ ದಡಗಳು ೧೦-೧೫ ಅಡಿ ಎತ್ತರವಿದ್ದು ಮಧ್ಯದಲ್ಲೆಲ್ಲೂ ಇಳಿಯಲು ಸಾಧ್ಯವೇ ಆಗುವುದಿಲ್ಲ. ಏನಿದ್ದರೂ ಕಾಲುವೆ ಕೊನೆಯಿಂದ ಬರಬೇಕು. ಕಾಲುವೆ ಶುರುವಿನಲ್ಲಿ , ಅಂದರೆ ತಲಪರಿಗೆ ತಳದ ಬಳಿ ಕಾಲುವೆ ಅತಿ ಎತ್ತರವಾಗಿದ್ದು ಮುಂದೆ ಹೋದಂತೆಲ್ಲಾ ಆಳ ಕಡಿಮೆಯಾಗುತ್ತದೆ. ಈ ರೀತಿಯಿರುವುದರಿಂದಲೇ ಗುರುತ್ವಾಕರ್ಷಣೆ ಬಲದಿಂದಲೇ ನೀರು ಹರಿಯುತ್ತದೆ.

ತಲಪರಿಗೆ ಪದ್ಧತಿ ವಿನಾಶಕ್ಕೆ ಕಾರಣಗಳು:

ಇಷ್ಟೆಲ್ಲಾ ಜನೋಪಯೋಗಿಯಾದ ತಲಪರಿಗೆಗಳು ಇಂದು ನಾಶದ ಅಚಿಚಿನಲ್ಲಿವೆ, ಅದಕ್ಕೆ ಕಾರಣಗಳು ಹಲವಾರು.

. ತಲಪರಿಗೆ ಕೊಂದ ಕೊಳವೆಬಾವಿಗಳು

ಈ ಪ್ರದೇಶಕ್ಕೆ ಅನ್ವಯಿಸಿ ಹೇಳುವುದಾದರೆ, ರೈತ ಸಮುದಾಯ ಕೊಳವೆಬಾವಿಗಳಿಗೆ ಅತಿವೇಗದಲ್ಲಿ ಶರಣಾಗಿದ್ದು, ನೆಲದ ತಂಪನ್ನೆಲ್ಲಾ ಹೀರಿ ತೆಗೆದು ಇತರರೊಡನೆ ಸ್ಪರ್ದೆಯೆಂಬಂತೆ ಆಳಗೊಳಿಸಿ ಬೆರಳ ತುದಿಯಲ್ಲಿ ಗುಂಡಿ ಒತ್ತಿ ನೀರ ಕುಣಿಸುತ್ತಾ ಮೈಮರೆತಿದ್ದು ಬಹು ಮುಖ್ಯ ಕಾರಣ.

ಕೊಳವೆಬಾವಿಗಳು ತಲಪರಿಗೆಗಳನ್ನು ಆಪೋಶನ ತೆಗೆದುಕೊಂಡಿರುವುದರಲ್ಲಿ ಅನುಮಾನವಿಲ್ಲ.  ಭೂಮಿಯ ಒಡಲ ತನುವನ್ನೆಲ್ಲಾ ಹೀರಿಬಿಟ್ಟಿರುವ ಬೋರುಗೊಳವೆಗಳು ಇನ್ನಷ್ಟು ಆಳ ಆಳಕ್ಕೆ ನುಗ್ಗುತ್ತಾ, ಮಾನವ ಬಳಕೆಗೆ, ಜಾನುವಾರುಗಳಿಗೆ ನೀರಿಲ್ಲದಂತೆ ಮಾಡುತ್ತಾ, ಪರೋಕ್ಷವಾಗಿ ಬೆಳೆಗಳಿಗೆ ಮಾರಕವಾಗುವ ವಿವಿಧ ರಾಸಾಯನಿಕಗಳನ್ನು ಹೊತ್ತು ತಂದು ಸುರಿಯುತ್ತಿರುವ ಕಟು ಸತ್ಯ ನಮ್ಮೆದುರಿಗಿದೆ.

‘ಪರಸ್ಪರ ನೀಡುವುದು’ ತಲಪರಿಗೆ ಸಂಸ್ಕೃತಿಯಾದರೆ, ‘ಬೇರೊಬ್ಬರಿಂದ ಕಸಿಯುವುದು’ ಕೊಳವೆ ಬಾವಿ ಸಂಸ್ಕೃತಿ.

‘ನೀಡುವುದಕ್ಕೆ’ ಒಂದು ಉದಾಹರಣೆ ನೋಡಿ.

ಕೊರಟಗೆರೆ ತಾಲ್ಲೂಕು ಜಟ್ಟಿ ಅಗ್ರಹಾರದ ತಲಪರಿಗೆ ಜಂಪೇನಹಳ್ಳಿ ದೊಡ್ಡ ಅಡ್ಲುಗೆ ನೀರು ಕೊಡುತ್ತಿದ್ದರೆ, ಜಂಪೇನಹಳ್ಳಿ-ಕಲ್ಲುಗುಟ್ಟರಹಳ್ಳಿಯ ತಲಪರಿಗೆಗಳು ಮೂಡ್ಲಪಣ್ಣೆಯ ಚಿಕ್ಕ ಅಡ್ಲುಗೆ, ಮೂಡ್ಲಪಣ್ಣೆಯ ಬಸವನಕಾಲುವೆ ತಲಪರಿಗೆ ಗುಂಡನಪಾಳ್ಯ, ಹುಲಿಕುಂಟೆಗೆ, ಫಕೀರಪ್ಪನಪಾಳ್ಯದ ತಲಪರಿಗೆ ಕುರುಡುಗಾನಹಳ್ಳಿಗೆ, ಕುರುಡುಗಾನಹಳ್ಳಿ ತಲಪರಿಗೆ ಮಲಪನಹಳ್ಳಿಗೆ, ಮಲಪನಹಳ್ಳಿ ತಲಪರಿಗೆ ಚೀಲಗಾನಹಳ್ಳಿಗೆ, ಚೀಲಗಾನಹಳ್ಳಿ-ರಾಂಪುರದ ತಲಪರಿಗೆ ರಾಯವಾರ, ಆರ್.ವೆಂಕಟಾಪುರಕ್ಕೆ, ಆರ್.ವೆಂಕಟಾಪುರದ ತಲಪರಿಗೆ ಕ್ಯಾಶವಾರಕ್ಕೆ… ಹೀಗೆ ಒಂದು ಗ್ರಾಮದ ತಲಪರಿಗೆ ಇನ್ನೊಂದು ಗ್ರಾಮದ ಅಚ್ಚುಕಟ್ಟಿಗೆ ನೀರೊದಗಿಸುತ್ತಿತ್ತು.

‘ಕಸಿಯುವುದಕ್ಕೆ’ ಒಂದು ಉದಾಹರಣೆ ನೋಡಿ.

ಮಧುಗಿರಿ ತಾಲ್ಲೂಕಿನ ಬಿಜವಾರದ ಬೋರುಗಳು ಗಂಜಲಗುಂಟೆ, ಅಮರಾವತಿ, ಶಂಭೋನಹಳ್ಳಿ ನೀರನ್ನು ಕಸಿದವು. ಶಂಭೋನಹಳ್ಳಿಯ ಬೋರುಗಳು ನರಸಾಪುರ ಗೊಂದಿಹಳ್ಳಿ ನೀರನ್ನು ಕಸಿದವು. ನರಸಾಪುರದ ಬೋರುಗಳು ಪುರವರದ ನೀರನ್ನು, ಪುರವರದ ಬೋರುಗಳು ಗೋವಿಂದನಹಳ್ಳಿಯ ನೀರನ್ನು, ಗೋವಿಂದನಹಳ್ಳಿ ಬೋರುಗಳು ಇಮ್ಮಡಗಾನಹಳ್ಳಿಯ ನೀರನ್ನು ಕಸಿಯುತ್ತಾ ನಡೆಯುತ್ತಿವೆ.

ಇವು ಕೇವಲ ತಲಪರಿಗೆ ನೀರನ್ನು ಕಸಿಯುತ್ತಿಲ್ಲ, ರೈತರ ಉಸಿರನ್ನೇ ಕಸಿಯುತ್ತಿವೆ.

. ಗಣಿಗಾರಿಕೆ

ತಲಪರಿಗೆಗಳ ವಿನಾಶಕ್ಕೆ ನೇರ ಕಾರಣಗಳನ್ನು ಹುಡುಕುವಾಗ ಗಣಿಗಾರಿಕೆಯ ದುಷ್ಪರಿಣಾಮಗಳು ಸ್ಪಷ್ಟ ಗೋಚರಿಸುತ್ತವೆ. ಅಂತರ್ಜಲ ಕುಸಿತಕ್ಕೆ ಮರಳ ಗಣಿಗಾರಿಕೆ ಕಾರಣವಾಗಿದ್ದಲ್ಲದೆ ತಲಪರಿಗೆಗಳಿಗೆ ನೀರ ಆಸರೆಯಾಗಿದ್ದ ಕೆರೆ, ತೊರೆ, ಹಳ್ಳಗಳು ಎತ್ತರವನ್ನೂ ಕಳೆದುಕೊಂಡು, ಕಾಲುವೆಗಳಿಗಿಂತ ಕೆಳಕ್ಕೆ ಕುಸಿದಿದ್ದು ಈ ಮರಳ ಎತ್ತುವಿಕೆಯಿಂದಲೇ. ಇದರಿಂದ ಹಲವು ಕಡೆ ತೊರೆಗಳ ಮೇಲ್ಮೈ ಮರಳ ಮೇಲೆ ದಡ ದಾಟುತ್ತಿದ್ದ ತಲಪರಿಗೆ ಕಾಲುವೆಗಳು ಕುಸಿದ ತೊರೆಯ ಮೇಲ್ಮೈಗೆ ಬಂದು ಎದುರು ದಡಕ್ಕೆ ಏರಲಾಗದೆ ಮುಕ್ತಾಯಗೊಂಡಿವೆ.

ಇನ್ನು ತಲಪರಿಗೆಗಳಲ್ಲಿ ನೀರೂಡಲು ಮರಳು, ಮಣ್ಣು, ಕಲ್ಲುಗಳ ನಡುವೆ ನೀರು ಹಿಂಗಬೇಕಲ್ಲವೇ? ಆದರೆ ಕಲ್ಲು ಗಣಿಗಾರಿಕೆಯು ಈ ಮೂಲಗಳನ್ನು ವಿರೂಪಗೊಳಿಸಿವೆ. ನೀರು ಇಂಗುವ, ವಿವಿಧ ಪದರಗಳಲ್ಲಿ ಸಾಗುವ, ಭೂಮಿಯ  ಮೇಲೆ ಕಾಣಿಸಿಕೊಳ್ಳುವ ಎಲ್ಲ ಪ್ರಕ್ರಿಯೆಗಳೂ ಗಣಿಗಾರಿಕೆಯ ಹೊಡೆತಕ್ಕೆ ಸಿಕ್ಕು ನಶಿಸುತ್ತಿವೆ. ಕಾಂಕ್ರೀಟು ಕಾಡುಗಳ ಸೃಷ್ಟಿಗೆ ತಲಪರಿಗೆಗಳು ಬಲಿಯಾಗುತ್ತಿರುವುದು ದುರಂತ.

. ಒತ್ತುವರಿ

ಮತ್ತೊಂದು ಪ್ರಮುಖ ಕಾರಣ ತಲಪರಿಗೆಗಳ ಒತ್ತುವರಿ. ಕೆಲವೆಡೆ ತಲಪರಿಗೆಯ ಮೂಲ ಸ್ಥಳವೇ  ಒತ್ತುವರಿಯಾಗಿದ್ದರೆ, ಇನ್ನು ಕೆಲವೆಡೆ ಕಾಲುವೆಗಳು ಒತ್ತುವರಿಯಾಗಿ ಆಳ-ಅಗಲ, ಗಾತ್ರದಲ್ಲಿ ಕಿರಿದಾಗಿವೆ ಅಥವಾ ಪೂರ್ತಿ ಮುಚ್ಚಿಯೇ ಹೋಗಿವೆ. ಒತ್ತುವರಿಯನ್ನು ಸಾಮಾನ್ಯವಾಗಿ ತಲಪರಿಗೆ ಮತ್ತು ಕಾಲುವೆಯ ಆಸು-ಪಾಸಿನ ವ್ಯಕ್ತಿಗಳು ತನ್ನ ಕೃಷಿ ಚಟುವಟಿಕೆಗಾಗಿ ಒತ್ತುವರಿ ಮಾಡಿರುತ್ತಾರೆ. ಹಣ, ಜಾತಿ, ಅಧಿಕಾರದ ಪ್ರಭಾವದಿಂದ ಬಲಿಷ್ಠರಾದವರು, ಒಂದಿಡೀ ಸಮುದಾಯದ ಬಳಕೆಗೆ ಇರಬೇಕಾದ ತಲಪರಿಗೆಯನ್ನು ತನ್ನ ಸ್ವಾರ್ಥಕ್ಕೆ ಬಳಸಿಕೊಂಡ ಅನೇಕ ಉದಾಹರಣೆಗಳಿವೆ. ಈ ವಿಷಯದಲ್ಲಿ  ಹಲವು ಕಡೆ ಸಮಸ್ಯೆ ಇತ್ಯರ್ಥಕ್ಕಾಗಿ ಕೋರ್ಟು ಮೆಟ್ಟಿಲೇರಿರುವ ಉದಾಹರಣೆಗಳೂ ಉಂಟು. ಆದರೆ ತಲಪರಿಗೆಗಳ ಒಡೆತನ, ನೀರಿನ ಬಳಕೆಗೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ಸರ್ಕಾರೀ ದಾಖಲೆಗಳಿಲ್ಲದ್ದರಿಂದ ಕೋರ್ಟಿನಲ್ಲಿ ಇವು ತೀರ್ಮಾನವಾಗುವ ಸಂಭವ ಕಡಿಮೆ ಎನ್ನಬಹುದು.

. ಸರ್ಕಾರದ ನಿರ್ಲಕ್ಷ್ಯ

ತಲಪರಿಗೆ ನಾಶಕ್ಕೆ ಸರ್ಕಾರದ/ವ್ಯವಸ್ಥೆಯ ನಿಷ್ಕ್ರಿಯತೆಯೂ ಬಹುದೊಡ್ಡ ಕಾರಣ. ಮುಖ್ಯವಾಗಿ ತಲಪರಿಗೆಗಳಿಗೆ ಕಂಟಕವಾಗುವ ಕೊಳವೆಬಾವಿಗಳ ನಿಯಂತ್ರಣ ಸಾಧ್ಯವಾಗಿಲ್ಲ. ಅಲ್ಲದೆ ತಲಪರಿಗೆಗಳನ್ನು ಗುರುತಿಸುವಲ್ಲಿ ಸರ್ಕಾರ ಯಾವ ಕೆಲಸವನ್ನೂ ಮಾಡಿಲ್ಲ. ರಾಜ್ಯಾದ್ಯಂತ ಸಾಮಾನ್ಯವಾಗಿ ಕಂಡುಬರುವ ಇತರೆ ಜಲಮೂಲಗಳಿಗೆ ಲಭ್ಯವಿರುವ ಸ್ಥಾನ-ಮಾನಗಳನ್ನು ತಲಪರಿಗೆಗಳಿಗೆ ನೀಡುವಲ್ಲಿ ಕ್ರಮಗಳು ಜರುಗಿಲ್ಲ.

ತಲಪರಿಗೆಗಳನ್ನು ಪುನಃ ಬದುಕಿಸಬಹುದೇ?

ತಲಪರಿಗೆಗಳು ಪುನಃ ಜೀವಂತವಾಗಿ ಮೊದಲಿನಂತೆಯೆ ಮೈದುಂಬಿ ಜಲಬೂಯಿಷ್ಠವಾಗಿ ಹೊರಹೊಮ್ಮಬೇಕಾದರೆ ಪ್ರಕೃತಿ ನಮಗೆ ವರವಾಗಿ ಹೆಚ್ಚಿನ ಮಳೆಯನ್ನು ಸ್ಮರಿಸಬೇಕು. ಮಳೆ ಪ್ರತಿ ಸಾಲಿನಲ್ಲಿಯೂ ಸಮರ್ಪಕವಾಗಿ ಬಂದರೆ ಅಂತರ್ಜಲ ಮಟ್ಟ ಪರಿಣಾಮಕಾರಿಯಾಗಿ ಮೇಲೇರುತ್ತದೆ. ಆಗ ತಾನೇ ತಾನಾಗಿ ತಲಪರಿಗೆಗಳು ಮೊದಲಿನಂತೆಯೇ ನೀರುಣಿಸುವ ಶಕ್ತಿಪಡೆಯುತ್ತವೆ.

ಮಳೆ ಬಿದ್ದ ತಕ್ಷಣ ಅಂತರ್ಜಲ ಎಲ್ಲಾ ಕಡೆ ಸಮನಾಗಿ ಮೇಲಕ್ಕೇರುವುದಿಲ್ಲ. ಅದಕ್ಕಾಗಿ ಹೆಚ್ಚಿನ ಶ್ರಮಪಡಬೇಕು. ವೈಜ್ಞಾನಿಕವಾಗಿ ಪಾವಗಡ ತಾಲ್ಲೂಕಿಗೆ ಹೊಂದಿಕೊಳ್ಳುವ ಜಲ ಸಮೃದ್ಧಿ ಕ್ರಮಗಳನ್ನು ಕೈಗೊಳ್ಳಬೇಕು. ಇದು ಸಾಮಾನ್ಯ ಕೆಲಸವಲ್ಲ. ಕೋಟ್ಯಾಂತರ ಹಣ ಬೇಕಾಗುತ್ತದೆ. ಯಶಸ್ವಿಯಾಗಿ ಕಾರ್ಯಕ್ರಮ ಜಾರಿಗೊಳಿಸಬೇಕು. ಕೆಲವು ಕ್ರಮಗಳನ್ನು ಸೂಚಿಸುವುದಾದರೆ.

  • ಅಂತರ್ಜಲ ಮಟ್ಟ ವೇಗವಾಗಿ ಕುಸಿಯುತ್ತಿರುವ ಭಾಗಗಳಲ್ಲಿ ಕೆರೆಗಳನ್ನು ದುರಸ್ತಿ ಮಾಡಿ, ಕೆರೆಗೆ ನೀರು ಬರುವ ಹಳ್ಳಗಳನ್ನು ಶುದ್ಧಗೊಳಿಸಬೇಕು. ಮಳೆ ನೀರು ಸರಾಗವಾಗಿ ಕೆರೆಗೆ ಸೇರುವಂತಾಗಬೆಕು.
  • ಚಿಕ್ಕ-ಚಿಕ್ಕ ಕುಂಟೆಗಳನ್ನೂ, ಗೋಕಟ್ಟೆಗಳನ್ನೂ ನಿರ್ಮಾಣ ಮಾಡಿ ಕಾಡು ಪ್ರದೇಶಗಳಲ್ಲಿ ನೀರು ನಿಲ್ಲುವಂತೆ ಮಾಡಬೇಕು.
  • ತಲಪರಿಗೆಗಳ ಆಸು-ಪಾಸಿನಲ್ಲಿ ಕುರುಚಲು ಗಿಡಗಳಾದ ತಂಗಡಿ, ಕಕ್ಕೆ, ನೆಲಬಳ್ಳಿಗಳನ್ನು ಕಡಿಯಲು ಬಿಡಬಾರದು. ಮುಖ್ಯವಾಗಿ ಈಚಲು ಮರದ ಪೊದೆಗಳನ್ನು ತೆಗೆಯಲು ಆಸ್ಪದ ನೀಡಬಾರದು. ಜೊತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಕತ್ತಾಳೆ, ಕಳ್ಳಿ ಗಿಡಗಳನ್ನು ಜಮೀನುಗಳ ಬದುಗಳಲ್ಲಿ ಬೆಳೆಸಬೇಕು.
  • ತಲಪರಿಗೆಗಳ ಮೂಲಗಳನ್ನು ಪತ್ತೆಹಚ್ಚಿ ಅಲ್ಲಿ ಯಾವುದಾದರೂ ತೊಂದರೆಗಳಿದ್ದರೆ ನಿವಾರಣೆ ಮಾಡಿ ನೀರು ಸರಾಗವಾಗಿ ಇಂಗುವಂತೆ ಮಾಡಬೇಕು. ಬೆಟ್ಟಗುಡ್ಡಗಳಿಂದ ಹರಿದು ಬರುವ ನೀರು ಸರಾಗವಾಗಿ ಭೂಮಿಗೆ ಸೇರುವ ನಿಮಿತ್ತು ಜಮೀನುಗಳ ಆಸು-ಪಾಸಿನಲ್ಲಿರುವ ಬೆಟ್ಟಗುಡ್ಡಗಳಲ್ಲಿ ಕಲ್ಲು ತೆಗೆಯುವುದನ್ನು, ಕಲ್ಲು ಸಿಡಿಸುವುದನ್ನು ನಿಲ್ಲಿಸಬೇಕು.
  • ಒಣಗಿಹೋಗಿ ವ್ಯವಸಾಯಕ್ಕೆ ಯೋಗ್ಯವಲ್ಲದ ಬಾವಿಗಳಿಗೂ ಕೂಡ ಮಳೆಗಾಲದಲ್ಲಿ ಕಾಲುವೆಗಳನ್ನು ಮಾಡಿ ಮೇಲಿನ ನೀರು ಬಾವಿಯಲ್ಲಿ ತುಂಬಿಕೊಳ್ಳ್ಳುವಂತೆ ಮಾಡಬೇಕು. ಈ ಸಮಯದಲ್ಲಿ ಮಣ್ಣು, ಕಲ್ಲು, ಕಲ್ಮಶಗಳು ಬಾವಿಯಲ್ಲಿ ತುಂಬಿಕೊಳ್ಳದಂತೆ ಎಚ್ಚರಿಕೆ ವಹಿಸಬೇಕು.
  • ಬೆಟ್ಟಗುಡ್ಡಗಳಲ್ಲಿ  ಸೌದೆ ಕಡಿಯುವುದನ್ನು ಕಟ್ಟುನಿಟ್ಟಾಗಿ ನಿಲ್ಲಿಸಿ ಅಲ್ಲಿನ ಮರಗಿಡಗಳ ರಕ್ಷಣೆ ಮಾಡಬೇಕು. ಖಾಲಿ ಇರುವ ಬೆಟ್ಟಗಳ ಸಾಲಿನಲ್ಲಿ ಅರಣ್ಯ ಇಲಾಖೆ ಸಹಾಯದಿಂದ ಗಿಡ-ಮರಗಳನ್ನು ಬೆಳೆಸಬೇಕು.
  • ಯಾವಕಾರಣಕ್ಕೂ ಮೇಕೆಗಳನ್ನು ಬೆಟ್ಟಗುಡ್ಡಗಳಲ್ಲಿ ಮೇಯಲು ಬಿಡಬಾರದು. ಕಾರಣ ಮೇಕೆಗಳು ಸಸಿಗಳನ್ನೂ, ಎಲೆಭರಿತವಾದ ಪೊದೆಗಳನ್ನು ಹಾಳು ಮಾಡುತ್ತವೆ.
  • ಜೊತೆಗೆ ಕಾಡಿನ ಬೀಳು ನೆಲಗಳಲ್ಲಿ ದೊಡ್ದಹಳ್ಳಗಳನ್ನು ಮಾಡಿ ಬೆಣಚುಗಲ್ಲುಗಳನ್ನು ಅದರಲ್ಲಿ ತುಂಬಿ ನೆಲಮಟ್ಟಕ್ಕೆ ಸಮಮಾಡಿ ಮಳೆ ನೀರು ಅಲ್ಲಿ ಇಂಗುವಂತೆ ಮಾಡಬೇಕು.
  • ಮುಖ್ಯವಾಗಿ ತಲಪರಿಗೆಗಳು ಹರಿಯುವ ಸಮಯದಲ್ಲಿ ಹೆಚ್ಚು ನೀರು ಬೇಡುವ ಬೆಳೆಗಳನ್ನು ಇಡಬಾರದು. ಪಟ ನೆನೆಸುವ ಬೆಳೆಗಳನ್ನಿಡಬೇಕು. ನೀರೊದಗುವ ಭೂಮಿಯನ್ನು ಎರಡು ಮೂರು ಭಾಗ ಮಾಡಿ ವಾರದ ಅಂತರದಲ್ಲಿ ನಾಟಿ ಮಾಡಬೇಕು.

ಹೀಗೆ ಅನೇಕ ವಿಧಾನಗಳನ್ನು ಸರ್ಕಾರ ಮತ್ತು ರೈತರು ಶ್ರದ್ಧೆಯಿಂದ ಬಹಳ ವರ್ಷಗಳು ಅನುಸರಿಸಿ  ಅಂತರ್ಜಲ ಮಟ್ಟವನ್ನು ಹೆಚ್ಚು ಮಾಡಿಕೊಂಡಲ್ಲಿ, ಮುಂಚಿನಂತೆಯೇ ತಲಪರಿಗೆ ವ್ಯವಸಾಯ ತಲೆ ಎತ್ತುವ ಸಾಧ್ಯತೆ ಇದೆ. ಈಗಿನ ಪರಿಸ್ಥಿತಿಯೇ ಮುಂದುವರೆದಲ್ಲಿ ಪ್ರಸ್ತುತ ಅಳಿದುಳಿದಿರುವ ತಲಪರಿಗೆಗಳೂ ಸಹ ಕಾಲಗರ್ಭದಲ್ಲಿ ಅಡಗಿ ಹೋಗುವುದರಲ್ಲಿ ಸಂದೇಹವೇ ಇಲ್ಲ.

ಸಿಹಿಯಾದ, ಶುದ್ಧ ಜಲದ ಮೂಲಗಳಾಗಿದ್ದ, ಸರಳ ನಿರ್ವಹಣೆಯ,  ಹೆಸರಿನಲ್ಲಿಯೇ ತನ್ನೆಲ್ಲಾ ವಿಶಿಷ್ಟತೆಯನ್ನು ಅಡಗಿಸಿಟ್ಟುಕೊಂಡಿದ್ದ ತಲಪರಿಗೆಗಳ ದುರಸ್ತಿ ಮತ್ತು ಪುನಶ್ಚೇತನದ ಅವಶ್ಯಕತೆ ಇದೆ. ಈ ಕೆಲಸಕ್ಕೆ ಸಮುದಾಯ, ಸರ್ಕಾರ, ಸಂಸ್ಥೆಗಳು ಮತ್ತು ಆಸಕ್ತರೆಲ್ಲಾ ಮುಂದಾಗಬೇಕಿದೆ.