ಕಾಡಿನ ಮೇಲೆ  ಸಮರಸಾರಿ  ಇಷ್ಟು ಕಾಲ ಕೃಷಿ ಗೆಲ್ಲಿಸುವ ಸಾಹಸ ಮಾಡಿದ್ದೇವೆ. ಹಸುರು ಸೊಪ್ಪು, ಉರುವಲು, ನಾಟಾ ಎಂದು ಕೃಷಿ ವಲಯದ ಸುತ್ತಲಿನ  ಕಾಡು  ಯಥೇಚ್ಚ ಬಳಸಿ ಬೋಳಿಸಿದ್ದೇವೆ.  ಈಗ ಪರಿಸರ ಪರಿಸ್ಥಿತಿ ಬಿಗಡಾಯಿಸಿದೆ. ಕಾಡೂ ಉಳಿಯಬೇಕು, ಕೃಷಿಯೂ ಗೆಲ್ಲಬೇಕು ಎಂಬ “ನಿಸರ್ಗ ಸಂಧಾನಅಗತ್ಯವಿದೆ. ಗೊಬ್ಬರ, ಕೀಟನಾಶಕ ಸಿಂಪರಣೆಯಿಲ್ಲದೇ ನಿರ್ವಹಣೆ ನೈಪುಣ್ಯದಲ್ಲಿ ಕೃಷಿ ಪರಿಸರದ ಆರೋಗ್ಯ ಸುಧಾರಿಸುವ ದಾರಿ ಬೇಕು. ಶ್ರೀಲಂಕಾದ ಅನಲಾಗ್ ಫಾರೆಸ್ಟ್ (Analog Forest) ಎಂಬ ಕಾಡು ತೋಟ ಮಾದರಿಯನ್ನು  ಕರ್ನಾಟಕದ ತೋಟಗಾರಿಕೆಯಲ್ಲಿ  ಅಳವಡಿಸಬಹುದಾಗಿದೆ.

ಮಲೆನಾಡಿನ ಕಣಿವೆ  ಕಾಡು ಕರಗಿದೆ. ಬಾಳೆ, ತೆಂಗು, ಅಡಿಕೆ, ಕಾಫಿ, ರಬ್ಬರ್ ಕೃಷಿ ಸಮವಸ್ತ್ರ  ಧರಿಸಿದೆ. ಕಾಡು ಬೆಳೆಸುವ ಕೆಲಸವಂತೂ ಸಸಿ ನೆಟ್ಟು ಹತ್ತಾರು ವರ್ಷಕ್ಕೆ ಕಡಿಯುವ ಅಕೇಸಿಯಾ, ಫೈನಸ್, ತೇಗದ  ಆಡುಂಬೊಲ. ಒಂದೆಡೆ ಸರಕಾರಿ ನೆಡುತೋಪು, ಇನ್ನೊಂದೆಡೆ  ನಮ್ಮ ಕೃಷಿ ಮಧ್ಯೆ  ಸಸ್ಯ ವೈವಿಧ್ಯದ ಪಶ್ಚಿಮ ಘಟ್ಟ ಚಹರೆ ಕಳಕೊಂಡಿದೆ. ಇಲ್ಲಿನ  ಕೃ ಸ್ವರೂಪ ಬದಲಿಸಿ ತೋಟಗಾರಿಕಾ ಬೆಳೆ ವೈವಿಧ್ಯದ ಜತೆಗೆ ಸ್ಥಳೀಯ ಕಾಡಿನ ಬೆಲೆಬಾಳುವ ಸಸ್ಯ ಪೋಷಣೆ   ಇದ್ದರೆ ಹೇಗೆ?  ” ಅರೆರೆ  ಆಗ ತೋಟ ಕಾಡಾಗುತ್ತದೆ !” ತಟ್ಟನೆ ಉತ್ತರಿಸಬಹುದು. ನಿಸರ್ಗ ಸಂಪನ್ಮೂಲಗಳ ಸಂಯಮದ ಬಳಕೆಯ ಪರಿಸರ ಸ್ನೇಹಿ ತೋಟಗಾರಿಕೆ ಇಂತಹ ಪುಟ್ಟ  ಮಾದರಿಯನ್ನು  ನೆರೆಯ ಶ್ರೀಲಂಕಾ  ತೋರಿಸಿದೆ.

ಅನ್‌ಲಾಗ್ ಫಾರೆಸ್ಟ್ (Analog Forest) ಸರಳಾರ್ಥದಲ್ಲಿ   ಕಾಡು ತೋಟ!. ಶ್ರೀಲಂಕಾದ ತೋಟಗಾರಿಕೆಯಲ್ಲಿ ಎರಡು ದಶಕದೀಚೆಗೆ  ರೂಪುಗೊಂಡ ಕಣಿವೆ ಕೃಷಿ ಭೂ ಬಳಕೆ ವಿನ್ಯಾಸ. ಎಕಜಾತಿ ಬೆಳೆ  ಮಾದರಿ  ಮರೆತು ನೆಲದ ಮಾತು ಕೇಳುವ ಸ್ವರೂಪ ಅದು. ಆರ್ಥಿಕ ಲಾಭ, ಕೃ ನಿರ್ವಹಣೆ ಪಾಠದ ಉರುವು ಹೊಡೆದುಕೊಂಡು ಸಾಲಿನಲ್ಲಿ ಸಸಿ ಬೆಳೆಸುವ ಯೂನಿಫಾರ್ಮ್‌  ತೋಟ  ಲಾಗಾಯಿತಿನಿಂದ ಮಾರುಕಟ್ಟೆಯತ್ತ ನೋಡಲು ಕಲಿಸಿದೆ. ನೆರೆಯ ಕಾಡು, ಸುರಿವ ಮಳೆ, ಹಾರಾಡುವ ಪಕ್ಷಿ, ಹಿಡಿಮಣ್ಣಿನ ಲಕ್ಷಾಂತರ ಸೂಕ್ಷ್ಮಾಣು ವಿಚಾರದಲ್ಲಿ ಅಪ್ಪಟ ಕುರುಡುತನವಿದೆ. ಹೊಸ ಹೊಸ ಬೆಳೆಯ ಸ್ನೇಹದಲ್ಲಿ ತಂತ್ರಜ್ಞಾನ, ರಾಸಾಯನಿಕದ ಮುಖೇನ ಗೆಲ್ಲುವ ದಾರಿ ಹುಡುಕಿದ್ದೇವೆ.  ಇದು  ಹಲವು  ದುರಂತಗಳ ಅನಾವರಣ ಮಾಡಿದೆ. ಈಗ ನೆರೆಯ ಕಾಡು ನೋಡಿ, ಕೃಷಿ ಮಾಡುವ ಕಾಲ.  ಬೆಳೆ ವೈವಿಧ್ಯ, ಮಣ್ಣು-ನೀರು ಸಂರಕ್ಷಣೆ, ಸ್ಥಳೀಯ ಸಸ್ಯ ಪೋಷಣೆ, ಅಡವಿ ಸಸ್ಯಗಳ ಪುನರುಜ್ಜೀವನ.  ಹಣ್ಣು, ಹೂವು, ಎಲೆ, ಬಣ್ಣ, ಅಂಟು, ನಾಟಾ ಮುಂತಾದ ಉತ್ಪನ್ನ  ನೀಡುವ  ಈ ಕಾಡು ತೋಟದಲ್ಲಿ ನೈಸರ್ಗಿಕ ಸಂಪನ್ಮೂಲ ಸುಸ್ಥಿರ ನಿರ್ವಹಣೆಯಿದೆ. ಕೃಷಿ ತಂತ್ರದ ಮುಖೇನ ನೈಸರ್ಗಿಕ ಕಾಡಿನ ಪುನರುಜ್ಜೀವನ ಸಾಧ್ಯತೆಯಿದೆ.

ಕೃಷಿ ನೆಲದ ಜೀವಸರಪಳಿ

ನಮ್ಮ ಜಮೀನಿನ ಹಳೆ ಹಳೆಯ ಭೂ ದಾಖಲೆ ತೆಗೆದರೆ ಕಳೆದ ನೂರಾರು ವರ್ಷಗಳಿಂದ ಕೃಷಿ ಮಾಡಿದವರ ಪಟ್ಟಿ ದೊರಕಬಹುದು. ಈ ಭೂಮಿಯ ಜತೆ ಮನುಷ್ಯ ಸಂಬಂಧಗಳನ್ನು ಯಜಮಾನರ ರೀತ್ಯಾ ನೋಡುವ ಪರಿಪಾಟ ಕೊಂಚ ಮರೆಯೋಣ. ಈಗ ನೆಲದ ಜತೆ ಒಡನಾಡಿದ ಜೀವಸಂಕುಲಗಳ ಪಟ್ಟಿ ಮಾಡಬೇಕು. ಆಗ ಮಾವಿನ ಮರಕ್ಕೆ ಬರುವ ಕೋತಿ, ಬೇವಿನ ಹಣ್ಣು ತಿನ್ನುವ ಕಾಗೆ, ಬೇಲಿ ಸಂಧಿಯಲ್ಲಿ ಹಿಕ್ಕೆಹಾಕಿ  ಶ್ರೀಗಂಧ ಬಿತ್ತಿದ ಪಾರಿವಾಳ, ಪರಾಗಸ್ಪರ್ಶಕ್ಕೆ ನೆರವಾದ ಜೇನು, ಇರುವೆ, ಅಡಿಕೆ ತೋಟದ  ಗಿಡಹೇನು ನಿಯಂತ್ರಿಸಿದ ಗುಲಗುಂಜಿ ಹುಳ, ಬೆಳೆ ಹೆಚ್ಚಿಸುವ ಕೆಂಪಿರುವೆ, ಗೆದ್ದಲು ತಿನ್ನುವ ಕಾಡುಕೋಳಿ, ಕೀಟ ನಿಯಂತ್ರಿಸುವ ಪಕ್ಷಿಗಳು  ಹೀಗೆ ಜೀವ ಸರಪಳಿ ಕಾಣುತ್ತವೆ !. ಭೂಗತದಲ್ಲಿರುವ ಲಕ್ಷಾಂತರ  ಸೂಕ್ಷ್ಮ ಜೀವಿಗಳು ಎಲೆ ಮರೆಯಲ್ಲಿ ಬದುಕಿ  ನಮ್ಮ ಏಳ್ಗೆಗೆ ದುಡಿಯುತ್ತಿವೆ,

ಕೃಷಿ-ಕಾಡಿನ ಸಂಬಂಧಗಳು ಹಸುರು ಕ್ರಾಂತಿಯ ತರುವಾಯ ತೀರ ಹದಗೆಟ್ಟಿದ್ದು ಹಳೆಯ ಕತೆ. ಬೆಳೆ ಲಾಭ ನೋಡುತ್ತ ಇಷ್ಟು ಕಾಲ ಕಾಡಿನ ಮೇಲೆ ಸವಾರಿ ಮಾಡಿದ್ದೇವೆ. ಚಕ್ಕಡಿ, ಟ್ರ್ಯಾಕ್ಟರ್‌ಗಳಲ್ಲಿ ಕಾಡಿನ ಹಸುರು ಸೊಪ್ಪು, ತೆರಕು, ಉರುವಲು ಎಂದು ಕೃಷಿವಲಯದ ಸುತ್ತಲಿನ ಕಾಡು ಸೋಲಿಸಿದ್ದೇವೆ.ಮಣ್ಣಿನಲ್ಲಿ ಸತ್ವವಿಲ್ಲ, ತೋಟಕ್ಕೆ ನೀರಿಲ್ಲ ಎಂದು ರೋಗಬಾದೆಗೆ ಬಳಲಿ ಬೆಂಡಾಗಿದ್ದೇವೆ. ಕಟ್ಟಕಡೆಯ ಸತ್ಯದರ್ಶನದಂತೆ ಕಾಡೂ ಉಳಿಯಬೇಕು, ಕೃಷಿಯೂ ಗೆಲ್ಲಬೇಕು ಎಂಬ “ನಿಸರ್ಗ ಸಂಧಾನ’ ತತ್ವ ಅನುಸರಿಸಬೇಕಾಗಿದೆ. ಬೋಳು ಬಯಲಿನಲ್ಲಿ ಹುಲ್ಲು ಮೂಲದಿಂದ ಸಂರಕ್ಷಣೆ ನೀಡಿ ಹೊಸ ತೋಟ ನಿರ್ಮಿುಸಬಹುದು.  ವಿವಿಧ ಸಸ್ಯ ವರ್ಗಗಳಿಗೆ ರಕ್ಷಣೆಕೊಟ್ಟು ನಿಧಾನಕ್ಕೆ ಒಂದೊಂದಾಗಿ ತೋಟಗಾರಿಕಾ ಸಸ್ಯ ಸಂಸಾರ ಸೇರಿಸಿ ಹೊಸ ತೋಟಕ್ಕೆ ಶ್ರೀಗಣ ಹಾಕಬಹುದು. ಬಳ್ಳಿ ಹಬ್ಬಿಸಿ, ಗಡ್ಡೆನಾಟಿ ಮಾಡುತ್ತ ವಿವಿಧ ಬೆಳೆ ಸಾಧ್ಯತೆ ಹುಡುಕಬಹುದು. ಇದಲ್ಲದೇ ಈಗಾಗಲೇ ಬೆಳೆಸಿದ  ಹಳೆಯ ತೋಟಗಳನ್ನು ಪರಿವರ್ತಿಸುವ ಪ್ರಯತ್ನ ಮಾಡಬಹುದು.  ಭೂಮಿಯ ಮಣ್ಣಿನ ಸ್ವರೂಪ ಗಮನಿಸಬೇಕು. ನೆರಳು, ಬಿಸಿಲು, ನೀರಿನ ಲಭ್ಯತೆ ಆಧರಿಸಿ ಸ್ಥಳೀಯ ಜ್ಞಾನ  ಬಳಸಿ ಸಸ್ಯ ಬೆಳೆಸುವದು ಮುಖ್ಯ ಕೆಲಸ. ಪೈಪೋಟಿಯಲ್ಲಿ ಸೊರಗುವ ಸಸ್ಯಗಳನ್ನು ಹಿಂದಕ್ಕಿಟ್ಟು ಗೆಲ್ಲುವ ಜಾತಿ ಕೂಡಿಸುವುದು ಅನುಭವ ಕಲಿಸುವ ಪಾಠ. ಮರ ಬೆಳೆಯಬಹುದಾದ ಎತ್ತರ, ಬೇರು ಬೆಳೆಸುವ ಸ್ವರೂಪ, ಟೊಂಗೆಗಳ ವೈಖರಿ, ಬೆಳೆ ಕಾಲಗಳನ್ನು ಗಣನೆಗೆ ತೆಗೆದುಕೊಂಡು ತೋಟ ರೂಪುಗೊಳ್ಳಬೇಕು. ಉದಾಹರಣೆಗೆ ಶಮೆ ಬಿದಿರು ಎತ್ತರಕ್ಕೆ ಬೆಳೆಯಲು ಮರದ ಸಹಾಯ ಬೇಕು, ಇವನ್ನು ಬಯಲಲ್ಲಿ ಬೆಳೆಸುವದಕ್ಕಿಂತ  ಹೆಮ್ಮರದ  ಪಕ್ಕ ಬೆಳೆಸಬಹುದು.

ಕಾಡಿನ ಜತೆ ಬೆಸುಗೆ

ತೋಟಗಾರಿಕೆಯಲ್ಲಿ  ನೂರಾರು ಅಡಿ ಎತ್ತರ ಬೆಳೆವ ಮರ ಬೆಳೆಸುವದು ಮಾತ್ರ ಮುಖ್ಯವಲ್ಲ,  ನೆಲ ಹಂತದಲ್ಲಿ ಹಬ್ಬುವ ಬಳ್ಳಿ, ಗಡ್ಡೆ ತರಕಾರಿ ಬೇಕು. ಗೂಟ ಊರಿದರೆ ಮರವಾಗಿ ಬೆಳೆಯಬಲ್ಲ ೬0ಕ್ಕೂ ಹೆಚ್ಚು ಸಸ್ಯಗಳನ್ನು ಮಲೆನಾಡಿನ ಕಾಡಿನಲ್ಲಿ ಪಟ್ಟಿಮಾಡಬಹುದು! ವಿಶೇಷ ಆರೈಕೆಯಿಲ್ಲದೇ ನೆಲದ ಸತ್ವ ಹೆಚ್ಚಿಸುವ ತಂತ್ರವನ್ನು ಗೂಟ ನಾಟಿಯಲ್ಲಿ  ಅನುಸರಿಸಬಹುದು. ವಾರ್ಷಿಕ, ಬಹುವಾರ್ಷಿಕ ಸಸ್ಯಗಳ ಸೇರ್ಪಡೆ ಕೂಡಾ ಮಹತ್ವದ್ದು. ಅಡಕೆಯಲ್ಲಿ ವಿವಿಧ ಅಂತಸ್ಸಿನ ಗಿಡ ಬೆಳೆಯುವ ಮಾದರಿಯನ್ನು ಅಡಿಕೆ ತೋಟದಲ್ಲಿ  ಈಗಾಗಲೇ ಅನುಸರಿಸಲಾಗಿದೆ. ತೋಟದಲ್ಲಿ ತೆಂಗು,ಬಾಳೆ, ಏಲಕ್ಕಿ,ಕಾಳು ಮೆಣಸು ಮುಂತಾದ ಬೆಳೆ ಪೋಷಣೆಯಿದೆ.  ಇದರ ಜತೆಗೆ  ಸ್ಥಳೀಯ ಕಾಡಿನ ಆಯ್ದ ಸಸ್ಯ ಬೆಳೆಸುವದು ಮಾದರಿಯ ಹೆಚ್ಚುಗಾರಿಕೆ. ಜೌಷಧ ಸಸ್ಯ, ಸುಗಂಧ ಸಸ್ಯ, ಆರ್ಕಿಡ್, ಬೆಲೆಬಾಳುವ ಶ್ರೀಗಂಧ, ತೇಗ, ಬೀಟೆ ಮುಂತಾದವನ್ನು ಮುಖ್ಯ ಬೆಳೆಯ ಜತೆಗೆ ಒಗ್ಗೂಡಿಸಬಹುದು.

ಕಾನಕಲ್ಲಟೆ, ಮಾಡಹಾಗಲು ಮೂಲತಃ ಕಾಡು ಬಳ್ಳಿಗಳು. ತೋಟದಲ್ಲಿ ಇವುಗಳ ಗಡ್ಡೆ ನೆಟ್ಟರೆ ಫಲ ದೊರೆಯುತ್ತದೆ. ನಾರೆ ಗೆಣಸು, ಹಕ್ಕಿ ಗೆಣಸು, ಎರೆ ಗೆಣಸು ಮುಂತಾಗಿ ಹೆಗ್ಗಡದೇವನಕೋಟೆ ಜೇನುಕುರುಬರು ಗುರುತಿಸುವ ಕಾಡು ಗೆಣಸನ್ನು ಸುಲಭದಲ್ಲಿ ಕೃಷಿಗೆ ಒಳಪಡಿಸಲು ಸಾಧ್ಯವಿದೆ. ಬೆಟ್ಟದ ನೆಲ್ಲಿ ನೈಸರ್ಗಿಕವಾಗಿ ಬೆಳೆದಿದ್ದರೆ ಒಂದಿಷ್ಟು ಗಿಡಕ್ಕೆ ಸುಧಾರಿತ ತಳಿಗಳ ಕಸಿ ಮಾಡಬಹುದು. ಗುಳಮಾವು ಎಂಬ ಕಾಡು ಗಿಡವಿದ್ದರೆ ಅದಕ್ಕೆ ಬಟರ್ ಪ್ರುಟ್ ಕಸಿ ಮಾಡಬಹುದು. ಹಳ್ಳದಂಚಿನ ಕಾಡು ಬದನೆಯಿಯಿಂದ ಕಸಿ ಮುಖೇನ ವರ್ಷವಿಡೀ ಫಲ ಪಡೆಯಬಹುದು. ಹಲಸು, ಗೇರು, ಮಾವಿನ ಸಸಿಗಳನ್ನು ನೈಸರ್ಗಿಕ ಪುನರುತ್ಪತ್ತಿಯ ನೆಲೆಯಲ್ಲೇ ಯಾವ ನೀರಾವರಿಯಿಲ್ಲದೇ  ಪುನಃಶ್ಚೇತನ ಮಾಡಬಹುದು. ಕಸಿ ಗಿಡಗಳ ಜತೆಗೆ ಆ ಜಾತಿಯ ಒಂದಿಷ್ಟು ನೈಸರ್ಗಿಕ ಸಸಿಗಳು ಉಳಿಸಬೇಕು. ಶಿರಸಿಯ ಮತ್ತಿಘಟ್ಟ-ಯಾಣ  ಪ್ರದೇಶದಲ್ಲಿ ನೆಡುತೋಪಿನಂತೆ ನೂರಾರು ಎಕರೆ ಕ್ಷೇತ್ರದಲ್ಲಿ ಕಾಡುಕಂಚಿ ಮರಗಳಿವೆ, ಇವು ಇಲ್ಲಿನ  ರೈತರ ಭೂಮಿಯಲ್ಲಿಯೂ  ಅನಾಯಾಸವಾಗಿ ಹುಟ್ಟಿ ಬೆಳೆಯುತ್ತವೆ. ಇದಕ್ಕೆ ಮೂಸುಂಬಿ, ಲಿಂಬು ಮುಂತಾದ ಕಸಿ ನೆಲದ ಜನರ  ಆದಾಯ ಮಾರ್ಗವಾಗಬಹುದು. ಸ್ಥಳೀಯ ಸಸ್ಯಗಳಿಗೆ ಆದ್ಯತೆ ನೀಡಿ  ತೋಟಗಾರಿಕೆ ಸ್ವರೂಪವನ್ನು ಕಾಡಿನ ಸಂಬಂಧದ ಜತೆಗೆ ಬೆಸೆಯುವದರಿಂದ ಜೀವವೈವಿಧ್ಯ ಸಂರಕ್ಷಣೆಯ ಮಹತ್ವದ ಕೆಲಸ ಸಾಧ್ಯವಾಗುತ್ತದೆ.

ಬೆತ್ತ, ಬೈನೆ, ಸೀಗೆ, ಕಾಡು ಕಾಳು ಮೆಣಸಿನಂತಹ ಅಪುರೂಪದ ಸಸ್ಯಗಳನ್ನು ಕಣಿವೆ ತೋಟ, ತೋಟದಂಚಿನಲ್ಲಿ ಪೋಷಿಸಿದರೆ ಆರ್ಥಿಕ ಲಾಭದ ಜತೆಗೆ ಕಾಡು ತಳಿ ಉಳಿಸುವದು ಸಾಧ್ಯ.  ಜಾಗತಿಕ ಮಹತ್ವ ಪಡೆದ ನೋನಿ ಹಣ್ಣು, ಹೇತಾರೆ ಮರಗಳು ಮಲೆನಾಡಿನ ಕೆಲವು ಪ್ರದೇಶದಲ್ಲಿ  ನೈಸರ್ಗಿಕವಾಗಿವೆ. ರಾಮಪತ್ರೆ ಮರಗಳು ಯಾವ ಶ್ರಮವಿಲ್ಲದೇ ಬೆಳೆಯುತ್ತಿವೆ. ಇವನ್ನು ಕಡಿದು ಅಡಿಕೆ, ಬಾಳೆ, ತೆಂಗು ನೆಡುವಲ್ಲಿ ನಮಗೆ ಆಸಕ್ತಿಯಿದೆ. ಅಮೂಲ್ಯ ಸಸ್ಯ  ನಮ್ಮ ನೆಲೆಯಲ್ಲಿದ್ದರೂ ಬಹುತೇಕ ಜನರ ಪಾಲಿಗೆ ಅವು  ಇಂದಿಗೂ ಕಾಡು ಸಸ್ಯಗಳು ! ಸಸ್ಯ ಸಂಶೋಧನೆ ಮಾಹಿತಿ ಹಂಚಿಕೆ ಮುಖೇನ ಕಾಡು ತೋಟಕ್ಕೆ ಇವನ್ನು  ತರಬಹುದು. ಮಿಡಿ ಮಾವಿನ ಉಪ್ಪಿನಕಾಯಿಗೆ ವಿಪರೀತ ಬೇಡಿಕೆಯಿದೆ. ಮಲೆನಾಡಿನ ನದಿಯಂಚಿನ ಮರಗಳು ಕಡಿದು ನಾಶವಾಗುತ್ತಿವೆ. ಶಿರಸಿಯ ಮಾಳಂಜಿ,  ಶಿವಮೊಗ್ಗ ರಪ್ಪನ್‌ಪೇಟೆಗಳಲ್ಲಿ ಒಂದು ಮಾವಿನ ಮರ ವರ್ಷಕ್ಕೆ ೪೫ ಸಾವಿರ ರೂಪಾಯಿ ಮಿಡಿಮಾವಿನಕಾಯಿು ನೀಡಿದ ಉದಾಹರಣೆಯಿದೆ !

ಸಸ್ಯ ಬಳಸಿ ಬಲ್ಲ ಜ್ಞಾನಕ್ಕೆ ಆದ್ಯತೆ

ಕೃಷಿ ಯೋಗ್ಯ ಕಾಡು ಸಂಕುಲ  ಹೇರಳವಾಗಿವೆ. ಮಲೆನಾಡಿನ ಅಡುಗೆಗಳಲ್ಲಿ ಮಹತ್ವ ಪಡೆದ ಮುರುಗಲು, ಉಪ್ಪಾಗೆ, ಕರಡಿಸೊಪ್ಪು, ಕನ್ನೇಕುಡಿ, ಭೂತನ ಹಕ್ಲಕುಡಿ ಮುಂತಾದ ಕಾಡು ಸಸಿ ಬೆಳೆಸಬಹುದು.ಮಸೆ ಸಸ್ಯ ಬೆಳೆಸಿ ಮಸೆಸೊಪ್ಪಿನ ಸ್ವಾದಿಷ್ಟ ತಂಪು ಪಾನೀಯ ಮಾಡಬಹುದು!  ಇಂದು ದೇಸೀ ಆಹಾರಗಳು ಪ್ರವಾಸಿ ಆಕರ್ಷಣೆಯ ಮೂಲವಾಗಿದೆ. ಕಾಡು ತೋಟದ ಸಸ್ಯಗಳು ಪರಿಸರ ಪ್ರವಾಸೋದ್ಯಮದ ಬಂಡವಾಳವಾಗಬಹುದು. ಇಲ್ಲಿ ಬೆಳೆದ ಹಣ್ಣು ಹಂಪಲು, ಗಡ್ಡೆ ಗೆಣಸು, ಎಲೆ ಚಿಗುರು, ಸಾಂಬಾರ ವಸ್ತುಗಳೆಲ್ಲ ನಿಸರ್ಗ ಸಹಜ, ಅಪ್ಪಟ ಸಾವಯವ! ಮಾರುಕಟ್ಟೆ, ಪ್ರವಾಸಿ ಸ್ಥಳಗಳಲ್ಲಿ “ಅನಲಾಗ್ ಫಾರೆಸ್ಟ್” ಉತ್ಪನ್ನವನ್ನು ಬ್ರ್ಯಾಂಡ್ ಮಾಡಬಹುದು. ಇದೇ ಸಸ್ಯ  ಬಳಸಿ  “ಅಡವಿ ಊಟ, ಅಡುಗೆ ಪಾಠ’  ಎಂದು ಆಹಾರ ಆರೋಗ್ಯ ಸಂಸ್ಕೃತಿ  ಪಾಠ ಹೇಳಿದರೆ ಸಾವಿರಾರು ಕಿಲೋ ಮೀಟರ್ ದೂರದ ಜನರನ್ನು  ಮಲೆನಾಡಿಗೆ ಸೆಳೆಯಬಹುದು, ಶರಾವತಿ ಕಣಿವೆಯಲ್ಲಿ ಶ್ರೀತಾಳೆ(ಹನೆ)ಮರಗಳಿವೆ. ನೈಸರ್ಗಿಕವಾಗಿ ಬೆಳೆದವನ್ನು ಪೋಷಿಸಿದರೂ ಬೆಳೆದ ಮರದಲ್ಲಿ ತಾಳೆ ಹಿಟ್ಟು ಪಡೆಯಬಹುದು. ಸಾಂಪ್ರದಾುಕ ರೀತಿಯಲ್ಲಿ ಅದನ್ನು ಸಂಸ್ಕರಿಸಿ ಹಿಟ್ಟು ತಯಾರಿಸಿ ಗಂಜಿ ಮಾಡಿದರೆ  ಅದು ಈ ನೆಲದ ಅತ್ಯಂತ ದುಬಾರಿ  ಆಹಾರ, ಮಾನ್ಸೂನ್ ಟೂರಿಸಮ್ ಕಾಲಕ್ಕೆ ಇಲ್ಲಿನ ಥಂಡಿ ಹವೆಯಲ್ಲಿ  ತಾಳೆ ಗಂಜಿ ಕುಡಿದರೆ ಚೈತನ್ಯ, ಆರೋಗ್ಯ ಸಾಧ್ಯವಿದೆ! ಬಿಳಿಗಿರಿ ರಂಗನ ಬೆಟ್ಟದ ಕಾಫಿ ತೋಟಕ್ಕೆ ರಾತ್ರಿ ಪುನುಗಿನ ಬೆಕ್ಕುಗಳು  ಬರುತ್ತದೆ. ಅಲ್ಲಿನ ಕಾಫಿ ಹಣ್ಣು ತಿಂದು ಬೀಜಗಳು ಅದರ ಮಲದಲ್ಲಿ ವಿಸರ್ಜನೆಯಾಗುತ್ತದೆ. ಆ ಕಾಫಿ ಬೀಜ ಸಂಗ್ರಹಿಸಿ ಪುಡಿ ಮಾಡಿದರೆ ವಿಶೇಷ ಸುಗಂಧ ಕಾಫಿಗೆ ಬರುತ್ತದೆ. ಈ “ಸಿಲ್ವೆಟ್ ಕಾಫೀ’ (civet coffe) “ದೇಶಗಳಲ್ಲೂ ಬೇಡಿಕೆ ಪಡೆದಿದೆ. ಕಾಡು ಸಸಿ ಹಿಡಿದು  ಹಲವು ಉದ್ಯೋಗ  ಸೃಷ್ಟಿಸಬಹುದು. ಕೃಷಿಕರಿಗೆ ಅಗತ್ಯ ಸಸಿ ಪೂರೈಸುವ  ಅನಲಾಗ್ ಫಾರೆಸ್ಟ್‌ ನರ್ಸರಿಗಳನ್ನು ಬೆಳೆಸಬಹುದು. ಕಾಡು ತೋಟ ನಗರ ವಲಸೆ ತಡೆಯ ಬೇಲಿಯೂ ಆಗಬಹುದು !

ಹೊಲದ ಬದುವಿಗೆ ಹೊಂಗೆ, ಬೇವು, ಕರಿಜಾಲಿ, ನೀಲಗಿರಿ, ತೇಗದ ಸಸ್ಯಗಳನ್ನು ಪೋಷಿಸುವ ಕೃಷಿ ಅರಣ್ಯವನ್ನು ಬಯಲುಸೀಮೆಯ ಹೊಲಗಳಲ್ಲಿ ಗಮನಿಸುತ್ತೇವೆ. ಅಲ್ಲಿ  ಮೇವು, ಉರುವಲು, ನಾಟಾ, ನೆರಳು, ಹಸಿರೆಲೆ ಗೊಬ್ಬರ ಮುಂತಾದ ಕಾರಣಗಳಿಗಾಗಿ ಈ ಮಾದರಿ ಮಹತ್ವ ಗಳಿಸಿದೆ. ತೋಟಗಾರಿಕೆಯಲ್ಲಿ ಬೇಲಿ, ಬಿಸಿಲು, ಬಿರುಗಾಳಿ ತಡೆಗೆ ಮರ ಬೆಳೆಸುವ ಪರಿಪಾಠವಿದೆ. ಸೊಪ್ಪಿನ  ಬೆಟ್ಟ, ಹಾಡಿ, ಖಾತೆಕಾನು, ಕಾನ್‌ಬಾಗೆ, ಒಳಕಂಟ, ದೇವರ ಕಾಡು ಮುಂತಾದ ರೀತಿಯಲ್ಲಿ ಕೃಷಿ ಮತ್ತಿತರ ಕಾರಣಕ್ಕೆ ಕಾಡು ಬೆಳಸಿ ಬಳಸುವ ಪರಿಜ್ಞಾನವಿದೆ. ಒಂದು    ವರ್ಷಕ್ಕೆ ಎಕರೆ ಅಡಿಕೆ ತೋಟಕ್ಕೆ ನೂರಾರು ಹೊರೆ ಹಸುರು ಸೊಪ್ಪು ಬೇಕು, ದೊಡ್ಡಿ ಗೊಬ್ಬರಕ್ಕೆ ಪಶುಪಾಲನೆಗೆ ಪೂರಕವಾಗಿ ಮೇವಿನ ಅಗತ್ಯವಿದೆ. ತೆಂಗಿನ ಮರಕ್ಕೆ ಕಾಸರಕನ ಸೊಪ್ಪು ಹಾಕಬೇಕು. ಅಡಿಕೆ ಸಸಿ ಮಡಿಗೆ ನೆಲ್ಲಿ ಗಿಡದ ಸೊಪ್ಪು ಬೇಕು, ಭತ್ತದ  ಕೃಷಿಯ ಬಿಳಿಕೊಳೆ ರೋಗಕ್ಕೆ ಮುಕ್ಕಡಕನ ಸೊಪ್ಪು,  ಹೀಗೆ ಕಾಡಿನ  ಅಗತ್ಯ ಸಾಕಷ್ಟಿದೆ. ಅಗತ್ಯ ನಿಸರ್ಗ ಸಂಪನ್ಮೂಲಗಳನ್ನು ತೋಟದಲ್ಲೇ ಸೃಷ್ಟಿಸುವದು ಇಂದಿನ ಮುಖ್ಯ ಕೆಲಸ. ಅಡಿಕೆಯ ನಡುವೆ  ಕೊಕ್ಕೊ ಬೆಳೆದವರು  ಗಿಡದ ಸೊಪ್ಪನ್ನು  ತೋಟದ ಮುಚ್ಚಿಗೆಗೆ ಬಳಸುವಂತಹ ಸರಳ ಕ್ರಮಗಳೇ  ಇಲ್ಲಿ ಅಡಕವಾಗುತ್ತವೆ. ನಮ್ಮ ತೋಟ ಪಕ್ಕದ ಕಾಡಿಗೆ ಭಾರವಾಗದೇ ಮಣ್ಣಿನ ಜೀವಂತಿಕೆ ಪೋಷಿಸುವ ಕೆಲಸ ಇದು. ಕೀಟನಾಶಕ, ರಾಸಾಯನಿಕಗಳ  ಅಧಿಕ ಬಳಕೆ ಪ್ರಹಾರಕ್ಕೆ ಮಣ್ಣು ಮಾಲಿನ್ಯಗೊಂಡಿದೆ. ಈಗ  ಸಾವಯವ ವಸ್ತುಗಳನ್ನು ಭೂಮಿಗೆ  ಒದಗಿಸಿ  ಮತ್ತೆ ಮರುಜೀವ ನೀಡುವ  ಕೆಲಸಕ್ಕೆ ಕಾಡುತೋಟ ನೆರವಾಗುತ್ತದೆ.

ಏನಿದು ಅನಲಾಗ್ ಫಾರೆಸ್ಟ್ ?

ಅನಲಾಗ್ ಫಾರೆಸ್ಟಗೆ ಕನ್ನಡದಲ್ಲಿ ಸಮಾನಾರ್ಥಕ ಪದ ಚಾಲ್ತಿಯಲ್ಲಿಲ್ಲ. ಸಾದೃಶ್ಯ ಅರಣ್ಯ, ಕಾನ್‌ತೋಟ, ಕಾಡು ತೋಟ, ತದ್ರೂಪಿ ಕಾಡು  ಎಂದು ಕರೆಯಬಹುದು.

೧೯೮೦ರ ದಶಕದಲ್ಲಿ ಶ್ರೀಲಂಕಾದಲ್ಲಿ ನೈಸರ್ಗಿಕ ಕಾಡು ಕಡಿಯುವದು, ಏಕಜಾತೀಯ ನೆಡುತೋಪು ಬೆಳೆಸುವ ಕೆಲಸ ನಡೆಯುತ್ತಿತ್ತು. ಸರಕಾರದ ಇಂತಹ ಕ್ರಮದ ವಿರುದ್ಧ  ಪರಿಸರ ತಜ್ಞ ಡಾ.ರೇನಿಯಲ್ ಸೇನಾನಾಯಕೆ ಧ್ವನಿ ಎತ್ತಿದರು. ಅರಣ್ಯ ಇಲಾಖೆಯ ಮಾರ್ಗದರ್ಶಕರಾಗಿದ್ದ ಅವರನ್ನು ಸರಕಾರೀ ಸೇವೆಯಿಂದ ಹೊರದಬ್ಬಲಾಯಿುತು. ಮೊನೋಕಲ್ಚರ್ ನೆಡುತೋಪಿಗೆ ಪರ್ಯಾಯ ಏನಿದೆ ? ನ್ಯಾಯಾಲಯ ವಿಚಾರಣೆ ಸಂದರ್ಭದಲ್ಲಿ ರೇನಿಯಲ್‌ರನ್ನು ಪ್ರಶ್ನಿಸಿತು.  ಉತ್ತರ ಹುಡುಕಲು ಅಧ್ಯಯನ ಆರಂಭ,  ಮಿರಾವತ್ ದಾರಿ ಹಿಡಿದರು. ಅಲ್ಲಿನ ಬೆಟ್ಟಗುಡ್ಡಗಳ ನಡುವಿನ  “ಬಂದರ್ ವಿಲಾ” ಎಂಬ ಪ್ರದೇಶದ ಹಾಳು ಬಿದ್ದ ಚಹದ ತೋಟ ಖರೀದಿಸಿದರು. ನಿಯೋ ಸಿಂಥಸಿಸ್ ರಿಸರ್ಚ್‌ ಸೆಂಟರ್ ಎಂಬ ಸಂಸ್ಥೆ ಆರಂಭಿಸಿ ತೋಟದಲ್ಲಿ ನೈಸರ್ಗಿಕ ಕಾಡು ಬೆಳೆಸುವ ವಿಧಾನ ಆರಂಭಿಸಿದರು.  ಚಹದ ಗಿಡಗಳನ್ನು ತೆಗೆದು ಆರಂಭದಲ್ಲಿ ನೆರಳು ನೀಡುವ, ಶೀಘ್ರ ಬೆಳೆಯುವ, ಸಾರಜನಕ ಸ್ಥಿರೀಕರಿಸುವ ಸಸ್ಯಗಳನ್ನು ಬೆಳೆಸಿದರು. ನಂತರದ ವರ್ಷಗಳಲ್ಲಿ ಹಣ್ಣಿನ ಗಿಡ, ಬಳ್ಳಿ, ಬೆಲೆ ಬಾಳುವ ಮರ, ಗಡ್ಡೆ ಗೆಣಸನ್ನು  ಬೆಳೆದರು.

೧೦ ವರ್ಷಗಳಲ್ಲಿ ನೆಲ ಫಲವತ್ತಾಯಿುತು, ತೋಟದ ಆದಾಯ ಹೆಚ್ಚಿತು. ವಿವಿಧ ಪಕ್ಷಿ ಸಂಕುಲಗಳಿಗೆ  ತೋಟ ಆಶ್ರಯ ನೀಡಿತು.

೧೯೯೪ರಲ್ಲಿ ಮೆಕ್ಸಿಕೋದಲ್ಲಿ ಸಭೆ ಸೇರಿದ ಪರಿಸರ ತಜ್ಞರು ಅನಲಾಗ್ ಫಾರೆಸ್ಟ್ ಅರಣ್ಯೀಕರಣದ ಉತ್ತಮ ಮಾದರಿ ಎಂದರು. ಮುಂದೆ ಈ ವಿಧಾನ ಶ್ರೀಲಂಕಾ, ಕೆನಡಾ, ಕೀನ್ಯಾ,ಕೋಸ್ಟರಿಕಾ ಮುಂತಾದ ದೇಶಗಳಲ್ಲಿ ಜನಪ್ರಿಯವಾಯಿತು. ಇಂದು ಶ್ರೀಲಂಕಾದ ೨೨ ಹಳ್ಳಿಗಳ ೬೦೦ ರೈತರು ವಿಧಾನ ಅನುಸರಿಸಿದ್ದಾರೆ.

ಮಾಹಿತಿ : ಜಿ.ಕೃಷ್ಣಪ್ರಸಾದ್