ನಮ್ಮ ಕರ್ನಾಟಕಕ್ಕೆ ಬರೋಬ್ಬರಿ ಎರಡು ಶತಮಾನಗಳ ಅರಣ್ಯೀಕರಣದ ಅನುಭವವಿದೆ. ಆದರೆ ಈವರೆಗಿನ ಹೆಚ್ಚು ಸಮಯ ಬ್ರಿಟಿಷರಿಗೆ ತೇಗ, ಅರಣ್ಯಾಧಾರಿತ ಕೈಗಾರಿಕೆಗಳಿಗೆ ನೆಡುತೋಪು, ಉರುವಲು  ಬೆಳೆಸುವದಕ್ಕೆ ವಿನಿಯೋಗವಾಗಿದೆ. ಜೀವ ವೈವಿದ್ಯ ಸಂರಕ್ಷಣೆಯ ಕಾನೂನು ಬಿಗಿಮಾಡುತ್ತ ಬಂದ ಮಾತ್ರಕ್ಕೆ ಸಂರಕ್ಷಣೆ ಸಾಧ್ಯವಾಗುವದಿಲ್ಲ. ಸರಕಾರ ಸಾವಯವ ಕೃಷಿ, ಪಶ್ಚಿಮ ಘಟ್ಟ ಸಂರಕ್ಷಣೆ ವಿಚಾರದಲ್ಲಿ  ಈಗ ಮಹತ್ವದ ಕಾಳಜಿ ತೋರಿಸಿದೆ. ಸಾವಯವ ಕೃಷಿ ಮಿಷನ್, ಪಶ್ಚಿಮ ಘಟ್ಟ ಕಾರ್ಯಪಡೆ ರಚನೆಯಾಗಿದೆ. ತೋಟಗಾರಿಕಾ ವಲಯಕ್ಕೆ ಪರಿಸರಪರ ಪರಿಣಾಮಕಾರಿ ದೃಷ್ಟಿ ನೀಡಲು ದೇಶದಲ್ಲಿಯೇ ಮೊದಲ ಬಾರಿಗೆ ಅನಲಾಗ್ ನೀತಿಯನ್ನು  ಜನಪ್ರಿಯಗೊಳಿಸಬಹುದಾಗಿದೆ.

ಬ್ರಿಟಿಷ್ ಕಾಲದಲ್ಲಿ ಧಾರವಾಡ, ಹುಬ್ಬಳ್ಳಿ, ಕಲಘಟಗಿ ಪ್ರದೇಶಗಳಲ್ಲಿ ಕಸಿತಜ್ಞರು  ಓಡಾಡುತ್ತಿದ್ದರು, ಹೊಲಗಳಲ್ಲಿ ಬೆಳೆದಿದ್ದ  ಹುಳಿ ಮಾವಿನ ಗಿಡಗಳಿಗೆ  ಕಸಿಕಟ್ಟುವದು, ಕಸಿ ಮಹತ್ವ ಹೇಳುವದು, ಕಸಿಗಿಡ  ಹಂಚುವ ಹವ್ಯಾಸ ಅವರದು. ಆಗ ಕಸಿತಂತ್ರಜ್ಞಾನ ಹಳ್ಳಿಗರಿಗೆ  ತೀರ ಅಪರಿಚಿತ. ವಿಧಾನ ಜನಪ್ರಿಯಗೊಳಿಸಲು  ಶತಮಾನಗಳ ಹಿಂದೆ ಎಲೆಮರೆಯ ಪ್ರಯತ್ನ. ಆ ಕಾಲದಲ್ಲಿ ಗೋವಾಸೀಮೆಯಿಂದ ಕಸಿಗಿಡಗಳನ್ನು ಕಾಲ್ನಡಿಗೆಯಲ್ಲಿ ತಂದು ತೋಟ ಬೆಳೆಸಿದ ಉದಾಹರಣೆಗಳಿವೆ !

೭೦-೮೦ ವರ್ಷಗಳ ಹಳೆಯ ಕತೆಗೂ ಇಂದಿನ ಸ್ಥಿತಿಗೂ  ಸಾಕಷ್ಟು ಅಂತರವಿದೆ. ಕೃಷಿ ತಂತ್ರಜ್ಞಾನ ಹಳ್ಳಿ ತಲುಪಲು ಹಲವು ಮಾರ್ಗಗಳು ತೆರೆದಿವೆ. ಸರಕಾರದ ಕೃಷಿ, ತೋಟಗಾರಿಕೆ ಇಲಾಖೆಗಳು  ಮಾಹಿತಿ ಹಂಚಿಕೆಯ ಮಹತ್ವದ ಕಾರ್ಯದಲ್ಲಿ ಭಾಗಿಯಾಗಿವೆ.

ಅರೆಮಲೆನಾಡಿನ ಹಳಿಯಾಳ, ಕಲಘಟಗಿ, ಮುಂಡಗೋಡ, ಹಾನಗಲ್, ಹಾವೇರಿ ಪ್ರದೇಶದಲ್ಲಿ ೩೦ ವರ್ಷಗಳ ಈಚೆಗೆ  ಹೆಚ್ಚಿದ  ಮಾವಿನ ತೋಟದ ಪ್ರೀತಿ ಉಲ್ಲೇಖಲಾರ್ಹ. ಮಳೆ ಆಶ್ರಿತವಾಗಿ  ಹತ್ತಿ, ಭತ್ತ, ಗೋವಿನಜೋಳ, ಹುರಳಿ ಬೆಳೆಯುತ್ತಿದ್ದ ನೆಲದಲ್ಲಿ ಆಪೋಸು, ಫೈರಿ, ನೀಲಂ, ಮಲ್ಲಿಕಾ, ಬೈಗನಪಲ್ಲಿ, ಮಲಗೋವಾ ಹೀಗೆ ತಳಿ ವೈವಿಧ್ಯ ನಳನಳಿಸಿದೆ.ಮಾನ್ಸೂನ್ ಜತೆ ಜೂಜಾಡಿದಂತೆ ಹೊಲದ ಬೆಳೆ ನಂಬುವದಕ್ಕಿಂತ ಬಹುವಾರ್ಷಿಕ ತೋಟಗಾರಿಕೆ  ಎಲ್ಲರ ಗಮನ ಸೆಳೆದಿದೆ. ವಿಶೇಷ ಕೃಷಿ ಖರ್ಚಿಲ್ಲದೇ ಆದಾಯ ಗಳಿಸುವ ದಾರಿಯೆಂದು ಹೊಲದ ಬಯಲಲ್ಲಿ ಮರ ಬೆಳೆದಿದೆ. ಪರಸ್ಪರ ರೈತರಲ್ಲಿ ಸಂತೆ, ಜಾತ್ರೆಗಳಲ್ಲಿ ಮಾಹಿತಿ ಹಂಚಿಕೆ ನಡೆದು ಗಿಡ ಬೆಳೆಸುವ ವಿದ್ಯೆ  ಮಣ್ಣಿನಲ್ಲಿ ಗೆದ್ದಿದೆ. ಕೃಷಿ ಆರಂಭದ ೩-೪ ವರ್ಷ ಭತ್ತ, ಹತ್ತಿ, ಜೋಳದ ಬೆಳೆ ಮಾವಿನ  ಜತೆಜತೆಯಲ್ಲಿ ಸಾಧ್ಯ. ಈಗ  ನೆರಳು ಜಾಸ್ತಿ, ಮಾವಿನ ತೋಟದ ನಡುವೆ ಮತ್ತೆ ಯಾವ ಸಸಿ ನೆಡಬಹುದು? ಕೃಷಿಕರು  ಯೋಚಿಸಿದ್ದಾರೆ. ಕೆಲವರು ಗ್ಲಿರಿಸಿಡಿಯಾ, ತೇಗ, ನೀಲಗಿರಿ ಬೆಳೆಸಿದ್ದಾರೆ. ಮಳೆ  ಆಶ್ರಿತವಾಗಿ ತರಕಾರಿ, ಗಡ್ಡೆಗೆಣಸು ಸಾಧ್ಯವಾಗಬಹುದಾ?  ರೈತ ಮಟ್ಟದಲ್ಲಿ  ಸಣ್ಣ ಸಣ್ಣ ಪ್ರಯೋಗ ಕಾಣಿಸಿಕೊಂಡಿವೆ.

`ಇರುವದು ಒಂದು ಹಸುರಿನ ತುಂಡು! ಉಳಿಸೋದು ಹೇಗೆ? ಪಶ್ಚಿಮ ಘಟ್ಟ ಸಂರಕ್ಷಣೆಗೆ ಪ್ರಶ್ನೆ ಗಡುಚಾಗಿದೆ. ಅರಣ್ಯದಿಂದ ಹೊರಕ್ಕೆ ಮರ ಬೆಳೆಸುವ ಮುಖೇನ ಕಾಡಿನ ಮೇಲಿನ ಒತ್ತಡ ಕಡಿಮೆಗೊಳಿಸಲು ಸಾಧ್ಯವಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಹೊಲದಲ್ಲಿ ಮರ ಬೆಳೆಸಲು ಹೇಳುವ ಕೃಷಿ ಅರಣ್ಯ ಬಗೆಗೆ ಕೃಷಿ ವಿಶ್ವವಿದ್ಯಾಲಯಗಳು  ಹಲವು ಅಧ್ಯಯನ ವರದಿ ಸಿದ್ದಗೊಳಿಸಿವೆ. ಮರ ಬೆಳೆಸುವ ದಾರಿ ಹುಡುಕುವಾಗ ರೈತರಿಗೆ ನೇರ ಲಾಭದ ಆಕರ್ಷಣೆ ಪ್ರಮುಖವಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಸ್ವಯಂ ಸ್ಪೂರ್ತಿಯಿಂದ ಬಯಲು ಭೂಮಿಯಲ್ಲಿ ಮಾವಿನ ಮರ ಬೆಳೆಸಿದ ಯತ್ನಗಳು ಹೊಸ ಸಾಧ್ಯತೆ ಮೂಡಿಸಿವೆ. ಮಲೆನಾಡಿನ ತೋಟಗಾರಿಕೆಯ ಮುಖ್ಯ ಬೆಳೆಗಳ ಜತೆಗೆ ನೂರಾರು ಸಸ್ಯ ಜಾತಿಗಳನ್ನು ಪೋಷಿಸುವ ಪರಂಪರೆಯಂತೂ ಶ್ರೀಲಂಕಾದ ಕಾಡುತೋಟ (ಅನಲಾಗ್) ಮಾದರಿಯನ್ನು  ಸಾಕಾರಗೊಳಿಸುವ ಸುಲಭ  ಅವಕಾಶವಾಗಿದೆ. ಇನ್ನು  ಪಶ್ಚಿಮ ಘಟ್ಟದಲ್ಲಿ  ೧೯೭೮ರ ಈಚೆಗೆ ಲಕ್ಷಾಂತರ ಎಕರೆ ಅರಣ್ಯ ಅತಿಕ್ರಮಣವಾಗಿದೆ. ಅಂತಹ ತೋಟಗಳಲ್ಲಿ ಸ್ಥಳೀಯ ಅರಣ್ಯ ಮೂಲದ ಮಹತ್ವದ ಸಸ್ಯ ಪೋಷಿಸುವ ಎಕೈಕ ಅವಕಾಶ  ಕಾಡುತೋಟದ ಮಾದರಿಯಲ್ಲಿದೆ. ಆ ಮೂಲಕವಾಗಿ ಮೂಲ ನೆಲೆಯಲ್ಲಿ ಕಾಡು ಸಸ್ಯ ಉಳಿಸುವ ಕೆಲಸ ನಡೆಯುತ್ತದೆ. ಒಂದು ಹಂತದಲ್ಲಿ ಜೀವವೈವಿದ್ಯ ಸಂರಕ್ಷಣೆಯಾಗುತ್ತದೆ. ತೋಟದಲ್ಲಿದ್ದೂ ಇಷ್ಟು ಕಾಲ  ಮಾರುಕಟ್ಟೆಯ ದೃಷ್ಟಿಯಿಂದ ಅಷ್ಟೇನೂ ಮಹತ್ವ ಪಡೆಯದ ಸಸ್ಯ ಫಲಗಳಿಂದ ಮೌಲ್ಯವರ್ಧಿತ ಉತ್ಪನ್ನ ತಯಾರಿ, ಮಾರುಕಟ್ಟೆ ಯತ್ನ ನಡೆದರೆ ರೈತರು ಇನ್ನಷ್ಟು ಸಸಿ ಬೆಳೆಸಲು ಸಹಜವಾಗಿ ಮುಂದಾಗುತ್ತಾರೆ. ೧೦ ರಾಮಪತ್ರೆ ಸಸಿ ಬೆಳೆಸಿದವರು ೨೦ ನೆಡುತ್ತಾರೆ, ಊರಲ್ಲಿ ಒಬ್ಬ ಸುವರ್ಣ ಗಡ್ಡೆ ಕೃಷಿ ಮಾಡಿದರೆ ಮರುವರ್ಷ ಮತ್ತಿಷ್ಟು ಜನ ಕೃಷಿ ನಡೆಸುತ್ತಾರೆ. ಕೃಷಿಕರಿಗೆ ಪರಿಚಿತವಾಗಿರುವ ಬಳಸಿಬಲ್ಲ ಸಸ್ಯಗಳನ್ನು ಗಮನದಲ್ಲಿಟ್ಟುಕೊಂಡು  ಕಾಡುತೋಟದ ಕಾರ್ಯ ಆರಂಭವಾಗಬೇಕು. ಖಾಸಗಿ  ಭೂಮಿಯಲ್ಲಿ  ಕಾಡು ಸಸ್ಯ ಪೋಷಿಸುವ ಅವಕಾಶವನ್ನು ಸರಕಾರ ಒಂದು ಯೋಜನೆಯಾಗಿ ರೂಪಿಸಬಹುದು.

ಮಾರುಕಟ್ಟೆ ವಿಸ್ತರಣೆ, ಸಸಿ ಬೆಳೆಸುವ ಪ್ರೇರಣೆ

ಸಣ್ಣಪುಟ್ಟ  ಪೇಟೆಗಳಲ್ಲಿಯೂ ಇಂದು  ಪಾನಿಪುರಿ, ಗೋಬಿಮಂಚೂರಿಗಳು ದೊರೆಯುತ್ತವೆ. ಬಹುರಾಷ್ಟ್ರೀಯ ಕಂಪನಿಗಳ ತಂಪುಪಾನೀಯಗಳ ಆಕರ್ಷಕ ಜಾಹೀರಾತು  ಗಮನ ಸೆಳೆಯುತ್ತವೆ, ಇಂತಹ ವಸ್ತುಗಳ ಖರೀದಿ ಭರಾಟೆ ಕಾಣುತ್ತಿದೆ. ಮಾರುಕಟ್ಟೆಗೆ ಹಳ್ಳಿಯ ಸಾಂಪ್ರದಾಯಿಕ ಉತ್ಪನ್ನಗಳ ರುಚಿ ಪರಿಚಯಿಸಬೇಕು. ಕಾಡುತೋಟದ ಉತ್ಪನ್ನಗಳ  ಮಾಲ್ಯವರ್ಧನೆ ಸಣ್ಣಮಟ್ಟದಲ್ಲಾದರೂ ನಡೆದು ಅದು ಪ್ರವಾಸಿಗರಿಗೆ ಲಭ್ಯವಾಗಬೇಕು. ೬೦೦ ಕಿಲೋ ಮೀಟರ್ ಪ್ರಯಾಣ ಮಾಡಿ ಯಾಣದ ಶಿಖರ ನೋಡಲು ಬರುವ ಪ್ರವಾಸಿಗರಿಗೆ ತಟ್ಟನೆ ಪೆಪ್ಸಿ, ಕೊಕೋಕೋಲಾ ಸಿಗುವಷ್ಟು ಸುಲಭದಲ್ಲಿ  ಅಲ್ಲಿಯ ಕಾಡಿನ ಮುರುಗಲು ಹಣ್ಣು, ಮಸೆಸೊಪ್ಪಿನ ಪಾನಕ ದೊರೆಯಬೇಕು! ಹಾಸನದ ಬಟಾಟೆ ಕರಾವಳಿ ಸಾಂಬಾರಿನಲ್ಲಿ ಕಾಣಿಸಿಕೊಳ್ಳುವದಕ್ಕಿಂತ ಮುಖ್ಯವಾದುದು ಸ್ಥಳೀಯ ಸುವರ್ಣ ಗಡ್ಡೆ  ಬಳಕೆ. ಇಂತಹ ಫಲಗಳ ರುಚಿ  ಮಾರುಕಟ್ಟೆಯಲ್ಲಿ  ಉತ್ಪನ್ನಗಳ  ಬೇಡಿಕೆ ಹೆಚ್ಚಿಸುತ್ತದೆ, ತನ್ಮೂಲಕ ಕೃಷಿಗೆ ಚೇತನ ದೊರೆಯುತ್ತದೆ. ಮಲೆನಾಡಿನ ಪ್ರಮುಖ ಪ್ರವಾಸಿ ಸ್ಥಳಗಳನ್ನು ಗಮನದಲ್ಲಿಟ್ಟುಕೊಂಡು ಇಂತಹ ದೇಸೀ ಆಹಾರ ಸಂಸ್ಕೃತಿ ಬೆಳೆಸಬಹುದು. ‘ಟ್ರಾಫಿಕಲ್ ಪ್ರುಟ್ಸ್ ಪಾರ್ಕ್’  ‘ಸ್ಪೈಸ್ ಪಾರ್ಕ್’ ಮೂಲಕ ಸಣ್ಣಪುಟ್ಟ ಪೇಟೆಗಳ ಸಂತೆ, ಜಾತ್ರೆಗಳಲ್ಲಿ ಅನಲಾಗ್ ಉತ್ಪನ್ನಗಳನ್ನು  ಜನಪ್ರಿಯಗೊಳಿಸಬಹುದು. ಸಾವಯವ ಮಾರುಕಟ್ಟೆಗೆ ಮೆರಗು ನೀಡಬಹುದು.

ಕೃಷಿ ತತ್ವ ವಿವರಿಸಲು ಇನ್ನಷ್ಟು ಉದಾಹರಣೆ ನೀಡಬಹುದು. ಆದರೆ ಎಲ್ಲಕಿಂತ ಮುಖ್ಯವಾದುದು ಮಾದರಿ ವಿಸ್ತರಣೆಗೆ ಸರಕಾರೀ ಉತ್ತೇಜನ. ‘ಯಾರು ಏನೇ ಹೇಳುವುದಕ್ಕಿಂತ ಸ್ವತಃ ಅಧಿಕಾರಿಗಳು ಸಾವಯವ ಕೃಷಿ ಮಾಡಿ ಎಂದಾಗ ಅದರ ಸಾರ್ವತ್ರಿಕ ಮಹತ್ವ ಹೆಚ್ಚುತ್ತದೆ’ ಮಸನೊಬು ಪುಕವೊಕ ಸಹಜ ಕೃಷಿಯ ಮಹತ್ವ ವಿವರಿಸುವಾಗ ಹೇಳಿದ ಮಾತು ನೆನಪಿಸಿಕೊಳ್ಳಬೇಕು. ಕಾಡು, ಕೃಷಿ ವೈವಿಧ್ಯ ಸಂರಕ್ಷಣೆಗೆ ಅನಲಾಗ್ ಮಾದರಿ ತೋಟ ಪರಿಣಾಮಕಾರಿ ಎಂಬುದರಲ್ಲಿ ಸಂದೇಹವಿಲ್ಲ. ಈ ತತ್ವ ಅನುಸರಿಸಿದರೆ ಸಾವಯವ ಕೃಷಿ, ಅರಣ್ಯ ಸಂರಕ್ಷಣೆ, ತಳಿ ಉಳಿಸುವ ಕೆಲಸಗಳು ಸಾಧ್ಯವಾಗುತ್ತವೆ. ಇದನ್ನು ಸರಕಾರ ಗಂಭೀರವಾಗಿ ಯೋಚಿಸಬೇಕು.

ಅರಣ್ಯ ಇಲಾಖೆಯ ಮುಖೇನ ಹಸುರು ಸಂಪತ್ತು ಹಚ್ಚಿಸುವ ಕೆಲಸ ರಾಜ್ಯದಲ್ಲಿ ನಡೆಯುತ್ತಿದೆ. ಗ್ರಾಮ ಅರಣ್ಯ ಸಮಿತಿಯ ಮುಖೇನ ವಿಕೇಂದ್ರೀಕೃತ ಮಾದರಿಯಲ್ಲಿ  ಸಸಿ ಬೆಳೆಸುವ ಕೆಲಸ ನಡೆದಿದೆ. ಅರಣ್ಯ ಭೂಮಿಯಲ್ಲಿ ಸಸಿ ನೆಡುವುದರ ಜತೆಗೆ ಮಲೆನಾಡಿನ ತೋಟಗಳಲ್ಲಿ ಮಹತ್ವದ ಅರಣ್ಯ ಸಸಿಗಳನ್ನು ಬೆಳೆಸುವಂತಾಗಬೇಕು. ಮಹತ್ವದ ಸಸ್ಯಗಳನ್ನು ಗುರುತಿಸಿ ಅರಣ್ಯ ನರ್ಸರಿಗಳಲ್ಲಿ ಬೆಳೆಸಿ ತೋಟಿಗರಿಗೆ ಪೂರೈಸಬಹುದು. ಸಸಿ ನೆಡುವದು, ಸಂರಕ್ಷಣೆಯ ಕೆಲಸಗಳನ್ನು ರೈತರೇ ಮಾಡುವದರಿಂದ ಕಡಿಮೆ ವೆಚ್ಚದಲ್ಲಿ ಹೆಚ್ಚು ಸಸಿ ಬೆಳೆಸಲು ಸಾಧ್ಯವಾಗುತ್ತದೆ. ಅರಣ್ಯ ಸಸ್ಯಗಳ ಮಹತ್ವದ ಬಗೆಗೆ ರೈತರಿಗೆ ಮನವರಿಕೆ ಮಾಡಲು  ಸಂಶೋಧಿತ ಮಾಹಿತಿ ಹಂಚಬೇಕು. ರೈತ ಜಮೀನಿನಲ್ಲಿ ಬೆಳೆದ ಹಿಪ್ಪೆಬೀಜ, ಹೊಂಗೆ, ಸೀಗೆ, ರಾಮಪತ್ರೆ, ಬಿದಿರು, ಸುವರ್ಣ ಗಡ್ಡೆ ಸೇರಿದಂತೆ ನೂರಾರು ವಸ್ತುಗಳನ್ನು ಇಂದು ಕೃಷಿ ಉತ್ಪನ್ನ ಸಮಿತಿಯಲ್ಲಿ ಮಾರಾಟ ಮಾಡಲು ಅವಕಾಶವಿದೆ.  ಇನ್ನು ಪ್ರಮುಖ ಕಾಡು ಸಸ್ಯಗಳ  ಕೃಷಿ ಉತ್ಪನ್ನಗಳನ್ನು  ಈ ಯಾದಿಗೆ ಸೇರಿಸಬಹುದು.  ಕಿರು ಅರಣ್ಯ ಉತ್ಪನ್ನಗಳ ಅವ್ಯವಸ್ಥಿತ ಕೊಯ್ಲಿನಿಂದ ಅರಣ್ಯದಲ್ಲಿ ಧೂಪ, ದಾಲ್ಚಿನ್ನಿ, ರಾಮಪತ್ರೆ, ಕಾಡು ಕಾಳುಮೆಣಸು ಕಣ್ಮರೆಯಾಗುತ್ತಿವೆ. ಇಂತಹ ಸಸ್ಯಗಳನ್ನು ಸ್ಥಳೀಯ ತೋಟಗಾರಿಕೆಯಲ್ಲಿ ಪೋಷಿಸಲು ಉತ್ತೇಜನ ನೀಡುವುದರಿಂದ ಸಂರಕ್ಷಣೆ ಸುಲಭವಾಗುತ್ತದೆ. ಅರಣ್ಯದ ಕೊಯ್ಲನ್ನು ನಿಯಂತ್ರಿಸುವದಕ್ಕೆ ಚಾಲನೆ ದೊರೆಯುತ್ತದೆ.

ಸಸ್ಯ ವೈವಿಧ್ಯಗಳ ನರ್ಸರಿ ಬೇಕು

ತೋಟಗಾರಿಕೆ ನರ್ಸರಿಗಳು ಮಾವು, ಚಿಕ್ಕು, ಗೇರು, ಲಿಂಬು, ಪೇರಲ, ತೆಂಗು, ಕಾಳುಮೆಣಸು, ಕೊಕ್ಕೊ ಹೀಗೆ ಕೆಲವು ಸಸ್ಯಗಳನ್ನು ಮಾತ್ರ ವ್ಯಾಪಕವಾಗಿ ರೈತರಿಗೆ ಒದಗಿಸುತ್ತಿವೆ. ಕೃಷಿ ಯಶಸ್ಸು ಸಾಧ್ಯವಾಗಲು ಒಂದೇ ಸಸ್ಯವನ್ನು  ಹೆಚ್ಚು ಹೆಚ್ಚು ನೆಡಬೇಕು  ಎಂಬುದನ್ನು ಒಪ್ಪಬಹುದು.  ಆದರೆ  ವೈವಿಧ್ಯಮಯ ಸಸ್ಯ ಕೃಷಿ ಮಾರುಕಟ್ಟೆಯಲ್ಲೂ ಗೆಲ್ಲಲು  ದಾರಿಗಳಿವೆ. ಹಳ್ಳಿ ಮೂಲೆಗೂ ರಸ್ತೆ ಸಂಪರ್ಕ ಸಾಧ್ಯವಿರುವದರಿಂದ ಉತ್ಪನ್ನ ಸ್ಥಳೀಯ ಮಾರುಕಟ್ಟೆಗೆ ಪೂರೈಸಬಹುದು. ಪ್ರದೇಶಗಳ ಮುಖ್ಯ ತೋಟಗಾರಿಕೆ ಬೆಳೆಗಳ ಜತೆಗೆ ರಾಮಪತ್ರೆ, ಜಾಯಿಕಾಯಿ, ನುಗ್ಗೆ, ಅಮಟೆ, ಬೇರು ಹಲಸು, ನೆಲ್ಲಿ, ಹಲಸು, ರಂಬೂಟಾನ್, ಮ್ಯಾಂಗೋಸ್ಟಿನ್, ಗಾರ್ಸಿನಿಯಾ ಕೋವಾ, ಮುರುಗಲು, ಬೆತ್ತ, ಗಡ್ಡೆ ಗೆಣಸು, ವಿವಿಧ ಬಳ್ಳಿಗಳನ್ನು ರೈತರಿಗೆ ಒದಗಿಸುವ ಅನಲಾಗ್ ತೋಟಗಾರಿಕಾ ನರ್ಸರಿಗಳನ್ನು ಅಭಿವೃದ್ಧಿ   ಪಡಿಸಬಹುದು. ಅರಣ್ಯ ಸಸ್ಯಗಳಲ್ಲಿ  ಜೌಷಧೀಯ ಹಾಗೂ  ಆಹಾರ, ವಾಣಿಜ್ಯಿಕ ಮಹತ್ವ ಪಡೆದ ಸಸ್ಯಗಳನ್ನು ಬೆಳೆಸಬಹುದು. ಶ್ರೀಗಂಧವನ್ನು ಖಾಸಗಿ ಭೂಮಿಯಲ್ಲಿ ಬೆಳೆದು  ಮಾರಾಟ ಮಾಡಲು ಕಾನೂನಿನ ತಿದ್ದುಪಡಿಯಾಗಿದೆ. ಬಿದಿರು ಕೃಷಿ ಉತ್ತೇಜಿಸಲು ಕೇಂದ್ರ ಸರಕಾರದ  ರಾಷ್ಟ್ರೀಯ ಬಾಂಬು ಮಿಶನ್’   ಕಾರ್ಯಕ್ರಮಗಳಿವೆ. ಪೂರಕವಾಗಿ  ಇವನ್ನು ಬಳಸಿಕೊಂಡು ಬಿದಿರು ತಳಿಗಳ  ಕೃಷಿ ವಿಸ್ತರಿಸಬಹುದು. ಜೌಷಧ ಸಸ್ಯಗಳ ಪ್ರಾಧಿಕಾರ, ಜೀವ ವೈವಿಧ್ಯ ಮಂಡಳಿ, ಸಾಂಬಾರ ಮಂಡಳಿಯ ಚಟುವಟಿಕೆಗಳು ಮಲೆನಾಡಿನಲ್ಲಿ ಪರಿಣಾಮಕಾರಿಯಾಗಲು ಅನಲಾಗ್ ತೋಟ ಮಾದರಿಯಲ್ಲಿ ಸಾಧ್ಯವಿದೆ. ತೋಟಗಾರಿಕಾ  ಇಲಾಖೆ, ಕೃಷಿ ಇಲಾಖೆ, ಅರಣ್ಯ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆ, ಕೃಷಿ “ಶ್ವ”ದ್ಯಾಲಯಗಳು ಪರಸ್ಪರ ಸಹಯೋಗದಲ್ಲಿ ಅನಲಾಗ್ ಪರಿಕಲ್ಪನೆಯನ್ನು ಸಾಕಾರಗೊಳಿಸಬಹುದು.  ಆಗ ರೈತ ಮನಸ್ಸನ್ನು  ವಿವಿಧ ಬೆಳೆಗಳತ್ತ  ಸೆಳೆಯುವ ಕೆಲಸ ಕೈಗೂಡುತ್ತದೆ.

ರಾಜ್ಯದ ವಿವಿಧ ಪ್ರದೇಶಗಳ ತೋಟಗಳಲ್ಲಿನ ಸಸ್ಯ ವಿಶೇಷಗಳ  ಆಧಾರದಲ್ಲಿ  ತೋಟಗಾರಿಕಾ ಇಲಾಖೆ ನೇತ್ರತ್ವದಲ್ಲಿ ವಿವಿಧ ತಾಲೂಕುಗಳಲ್ಲಿ  ಅನಲಾಗ್ ತೋಟ ಮಾದರಿ ನಿರ್ಮಾಣಕ್ಕೆ ಉತ್ತೇಜನ ನೀಡಬಹುದು. ಕರ್ನಾಟಕ ಸರಕಾರ ಸಾವಯವ ಕೃಷಿ, ಪಶ್ಚಿಮ ಘಟ್ಟ ಸಂರಕ್ಷಣೆ ವಿಚಾರದಲ್ಲಿ ಮಹತ್ವದ ಕಾಳಜಿ ತೋರಿಸಿದೆ. ಸಾವಯವ ಕೃಷಿ ಮಿಷನ್, ಪಶ್ಚಿಮ ಘಟ್ಟ ಕಾರ್ಯಪಡೆಗಳು ರಚನೆಯಾಗಿದೆ. ತೋಟಗಾರಿಕೆಯ ಕೃಷಿ ವಲಯಕ್ಕೆ ಪರಿಸರಪರ ದೃಷ್ಟಿ ನೀಡುವ ಕೆಲಸ ಜಾಗತಿಕ ತಾಪಮಾನ ಹೆಚ್ಚಳದ ಈ ದಿನಗಳಲ್ಲಿ ಜರೂರಿದೆ. ದೇಶದಲ್ಲಿಯೇ ಮೊದಲ ಬಾರಿಗೆ ಅನಲಾಗ್ ನೀತಿಯನ್ನು  ಜಾರಿಗೊಳಿಸುವ  ಚಿಂತನೆಯನ್ನು ಮಾಡಬಹುದು. ಕಳೆದ ೧೫ ವರ್ಷಗಳ ಈಚೆಗೆ ಮಲೆನಾಡಿನ ಸೊರಬ, ಶಿಕಾರಿಪುರ ಪ್ರಾಂತ್ಯಗಳಲ್ಲಿ   ಅಡವಿನಾಶದ ಬಳಿಕ ಪರಿಸರ ಪರಿಸ್ಥಿತಿ ಏನಾಗಿದೆ  ಎಂಬುದರ  ಒಂದು ಅಧ್ಯಯನ ನಡೆದರೆ ಅದು ಕರ್ನಾಟಕದ ಪರಿಸರ ಪರಿಸ್ಥಿತಿಯ ಭವಿಷ್ಯ ಹೇಳುವಷ್ಟು  ಸಮರ್ಥವಾಗುತ್ತದೆ. ಆಗ ಕಾಡು ಬೆಳೆಸುವ ಪರ್ಯಾಯ ಮಾರ್ಗವಾಗಿ ಅನಲಾಗ್ ತೋಟ ಮಹತ್ವ  ಅರ್ಥವಾಗುತ್ತದೆ.

ನಮ್ಮ ಕರ್ನಾಟಕಕ್ಕೆ ಬರೋಬ್ಬರಿ ಎರಡು ಶತಮಾನಗಳ ಅರಣ್ಯೀಕರಣದ ಅನುಭವವಿದೆ. ಆದರೆ ಈವರೆಗಿನ ಹೆಚ್ಚು ಸಮಯ ಬ್ರಿಟೀಷರಿಗೆ ತೇಗ, ಅರಣ್ಯಾದರಿತ ಕೈಗಾರಿಕೆಗಳಿಗೆ ನೆಡುತೋಪು, ಉರುವಲು ಬೆಳೆಸುವದಕ್ಕೆ ವಿನಿಯೋಗವಾಗಿದೆ. ಜೀವ ವೈವಿದ್ಯ ಸಂರಕ್ಷಣೆಯ ಕಾನೂನು ಬಿಗಿಮಾಡುತ್ತ ಬಂದ ಮಾತ್ರಕ್ಕೆ ಸಂರಕ್ಷಣೆ ಸಾಧ್ಯವಾಗುವದಿಲ್ಲ. ಅದರ ಜತೆಗೆ ಕಾಡು ಸಸ್ಯಗಳನ್ನು  ತೋಟದಲ್ಲಿ  ಪ್ರೀತಿಸುವ ಹಸುರು ಹಂಬಲಕ್ಕೆ  ಸರಕಾರದ ಬೆಂಬಲ ಬೇಕಿದೆ.