ಹಲವು ಹತ್ತು ದೇಶಗಳಲ್ಲಿ ಸಂಚರಿಸಿ, ವಾಸ ಮಾಡಿ ಅಲ್ಲಲ್ಲಿನ ವೈಶಿಷ್ಯಗಳನ್ನು ಅರ್ಥ ಮಾಡಿಕೊಂಡು ಅದರಿಂದ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳುವುದು, ಬಂದ ಅವಕಾಶಗಳನ್ನು ಸದುಪಯೋಗಗೊಳಿಸಿಕೊಳ್ಳುವುದೂ ಒಂದು ಕಲೆ. ಇಂತಹ ಕಲೆಯಲ್ಲಿ ನಿಷ್ಣಾತರಾದ ಅನಸೂಯ ಅವರ ಜನನ ೧೯೩೬ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಪದವಿ ಪಡೆದ ಇವರು ಸಂಗೀತದ ಶಿಕ್ಷಣವನ್ನು ವಿದ್ಯಾಸಾಗರ ಆರ್.ಆರ್. ಕೇಶವಕಮೂರ್ತಿಯವರಲ್ಲೂ ನಂತರ ಮೈಸೂರು ಟಿ. ಚೌಡಯ್ಯನವರಲ್ಲೂ ಪಡೆದರು. ಆಕಾಶವಾಣಿಯ ಮೂಲಕ ಇವರ ಗಾಯನ ಕಾರ್ಯಕ್ರಮಗಳು ಪ್ರಸಾರವಾಗುತ್ತಿದ್ದುವು. ವಿದೇಶೀ ವಾದ್ಯಗಳನ್ನು ಅಧ್ಯಯನ ಮಾಡಿ ಮಂಡಿಸಿದ ಮಹಾ ಪ್ರಬಂಧಕ್ಕೆ ಡಾಕ್ಟರೇಟ್‌ ಪದವಿಯನ್ನೂ ಸಹ ಗಳಿಸಿದ್ದಾರೆ.

ವಿವಾಹಾನಂತರ ಪತಿಯೊಡನೆ ಆಫ್‌ಘಾನಿಸ್ಥಾನ, ಮಂಗೋಲಿಯ, ಚೈನಾ, ಇಂಡೋನೇಶಿಯಾ, ಸಿಂಗಪುರ, ಮಲೇಷಿಯಾ, ಪಾಪುವಾನ್ಯಗಿನಿ, ಆಸ್ಟ್ರೇಲಿಯಾ, ಭೂತಾನ್‌, ಫಿಜಿ, ಉಗಾಂಡ, ಎಥಿಯೋಪಿಯಾ, ಕೆನಡೆ, ಅಮೇರಿಕಾ, ಬ್ರಿಟನ್‌ಮುಂತಾದ ದೇಶಗಳಲ್ಲಿ ವಾಸ ಮಾಡುವ ಅವಕಾಶಗಳು ಒದಗಿದುವು. ಆ ದೇಶಗಳಲ್ಲಿ ನೆಲೆಸಿದ್ದ ಸಮಯದಲ್ಲಿ ಆಯಾ ದೇಶಗಳ ಸಂಗೀತ ಪ್ರಕಾರವನ್ನೂ, ಅಲ್ಲಿನ ವಾದ್ಯಗಳನ್ನೂ ಅಭ್ಯಸಿಸಿ ಅವರುಗಳಿಗೆ ನಮ್ಮ ಸಂಗೀತದ ಸೌರಭವನ್ನು ಪರಿಚಯಿಸಿ ಒಂದು ರೀತಿಯಲ್ಲಿ ಸಾಂಸ್ಕೃತಿಕ ರಾಯಭಾರಿಯ ಕರ್ತವ್ಯ ನಿರ್ವಹಿಸಿದ್ದಾರೆನ್ನಬಹುದು. ಹಲವಾರು ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಇವರು ಸಂಗ್ರಹಿಸಿರುವ ವೈವಿಧ್ಯಮಯ ವಾದ್ಯಗಳು ಒಂದು ವಸ್ತುಸಂಗ್ರಹಾಲಯದಂತೆ ಇದ್ದು ಇವರ ಗೃಹ ಆಸಕ್ತರಿಗೊಂದು ಕುತೂಹಲಕಾರಿ ತಾಣವಾಗಿದೆ. ಅಂತಹ ಇಂಡಿಯೋನೇಷಿಯಾದ ಒಂದು ವಾದ್ಯ ‘ಅಂಗ್‌ಕ್ಲುಂಗ್‌’ನಲ್ಲಿ ಭಾರತೀಯ ಸಂಗೀತವನ್ನಳವಡಿಸಿ ಕಛೇರಿ ನೀಡುವ ಮಟ್ಟಿಗೆ ಸಾಧನೆ ಮಾಡಿದ್ದಾರೆ.

ಅನೇಕ ಸಹಾಯಾರ್ಥ ಕಛೇರಿಗಳನ್ನು ನೀಡಿ ಸಂಸ್ಥೆಗಳಿಗೆ ಸಹಾಯ ಮಾಡಿದ್ದಾರೆ. ‘ಇಂಡೋನೇಷಿಯ- ಪಾಪುವಾನ್ಯೂಗಿನಿ ಸಂಗೀತ ವಾದ್ಯಗಳು’, ‘ಭಾರತ-ಇಂಡೋನೇಷಿಯಾಗಳ ಸಂಗೀತ ಪದ್ಧತಿಗಳ ಸಾಮ್ಯ’ ಮತ್ತು ಟಿ. ಚೌಡಯ್ಯನವರ ಕೃತಿಗಳನ್ನಾಧರಿಸಿದ ‘ಸುಕೃತಿ’ ಇವರ ಲೇಖನಿಯಿಂದ ಮೂಡಿದ ಕೃತಿಗಳು. ವಿದೇಶಿವಾದ್ಯವಾದ ಅಂಕ್ಲುಂಗನ್ನು ಕರ್ನಾಟಕ ಸಂಗೀತಕ್ಕೆ ಅಳವಡಿಸಿದ್ದಕ್ಕಾಗಿ ೨೦೦೮ರಲ್ಲಿ ಇವರಿಗೆ ರಾಷ್ಟ್ರೀಯ ಪ್ರಶಸ್ತಿ ತಂದಿದ್ದು ಇದು ಲಿಮ್ಕಾ ಬುಕ್‌ಆಫ್‌ರೇಕಾರ್ಡ್‌‌ನಲ್ಲಿ ಸೇರಿರುವುದು ಇವರ ಹೆಗ್ಗಳಿಕೆ ಆಗಿದೆ. ಹಲವಾರು ಸಂಘ-ಸಂಸ್ಥೆಗಳಿಂದ ಸನ್ಮಾನಿತರಾಗಿರುವ ಇವರಿಗೆ ಅಕಾಡೆಮಿ ‘ಕರ್ನಾಟಕ ಕಲಾಶ್ರೀ ಪ್ರಶಸ್ತಿಯನ್ನು ೧೯೯೬-೯೭ರಲ್ಲಿ ನೀಡಿ ಗೌರವಿಸಿದೆ.