ಗಾಂಧೀಜಿಯ ಭಾವಚಿತ್ರದನಾವರಣದುತ್ಸವ
ನಡೆಯಿತಂತೆ ಈ ಊರೊಳು, ಈ ಸುದ್ದಿಯ ಚೋದ್ಯವ
ಪತ್ರಿಕೆಯಲಿ ಕಂಡು ನಾನು ಬೆರಗುಹೊಡೆದು ನಿಂತೆನು
ಮಂತ್ರಿವರ್ಯರಮೃತಹಸ್ತ ನಡಸಿತಂತೆ ಇಷ್ಟನೂ !

ಗಾಂಧೀಜಿಯ ಭಾವಚಿತ್ರದನಾವರಣದುತ್ಸವ !
ಆವರಣವೆ ಇಲ್ಲದವರಿಗನಾವರಣವೆಂಥದೋ !
ಇಲ್ಲದಿರುವ ತೆರೆಯನೆಳೆದು ಗಾಂಧೀಜಿಯ ಮೋರೆಗೆ
ಆಮೇಲದ ತೆರೆಯುವಾಟ ನಮ್ಮ ನಾಡ ಮಂದಿಗೆ !

ಅನಾವರಣವಾಯಿತಂತೆ ಗಾಂಧೀಜಿಯ ಚಿತ್ರಕೆ !
ಭಾಷಣಗಳು ನಡೆದುವಂತೆ ಕುಸಿಯಿತೇನೊ ವೇದಿಕೆ
ಹೂಹಾರಗಳುರುಳಿತಂತೆ ಮಾತಾಡಿದ ಕೊರಳಿಗೆ
ಗಾಂಧೀಜಿಯ ಪಟ ಸೇರಿತು ಜೇಡನ ಬಲೆ ನೆರಳಿಗೆ !

ಅನಾವರಣವಾಯಿತಂತೆ ಗಾಂಧೀಜಿಯ ಚಿತ್ರಕೆ
ಸತ್ತ ಗಾಂಧಿ ಅತ್ತನೇನೊ ನಡೆದ ಈ ವಿಚಿತ್ರಕೆ !
ಅನಾವರಣವಾಗಬೇಕು ಮೊದಲು ನಮ್ಮ ಹೃದಯಕೆ
ಅನಾವರಣವಾದಮೇಲೆ ಸಿದ್ಧವಾಗು ಶಿಕ್ಷೆಗೆ.