ಸುರಹೊನ್ನೆಯ ಮರ ದಿಟಕೂ ಸುರವಾಗಿತ್ತು;
ಹೊನ್ನಾಗಿತ್ತು.
ಶ್ರಾವಣಮಾಸದ ಸಿರಿಹೊತ್ತಾರೆಯ ವಾಯು ಮಂಡಲಕೆ
ಕಂಪಿನ ಹೊಳೆ ಹರಿದಿತ್ತು;
ಮರವೇ ಪರಿಮಳ ಪರಿವೇಷವನಾಂತಿಹ ಹೂವಿನ ಕೊಡೆಯಾಗಿತ್ತು.
ಸಾವಿರ ವರುಷದ ಪಂಪನ ಬಣ್ಣನೆ ಇಂದೂ ಸಾರ್ಥಕವಾಗಿತ್ತು!

ಚಿನ್ನದ ನೇಸರು ಕೋಲ್ಗದಿರಿಂ ಚೆಂಬಿಸಿಲಿನ ರಂಗೋಲಿಯನೆಸೆದಿತ್ತು;
ಗರುಕೆಯ ಹಸುರುಕ್ಕುವ ನೆಲ ಪಚ್ಚೆಯ ವೇದಿಕೆಯಾಗಿತ್ತು.

ಜೇನ್ದುಂಬಿಯ ಮೊರೆ, ಹಕ್ಕಿಯ ಇಂಚರ, ಕೈದೋಂಟದ ಹೂಗಳ ಪರಿವಾರ
ಕವಿಹೃದಯಕೆ ತಾನಾದುದು ರಸಲೋಕದ ಅಮೃತಾಹಾರ:
ತೆಕ್ಕನೆ ಮೋಕ್ಷಕೆ ತವರಾದುದೊ ತಾನ್‌ ಈ ಸಂಸಾರ!

ಸಾಮಾನ್ಯದ ಸೀಮೆಯಲಿದ್ದಾ ಸುರಹೊನ್ನೆಯ ಮರದಡಿಗೆ
ಸೌಂದರ್ಯಾವೇಶದಿ ನಡೆದೈತರೆ ಕವಿ,
ಅದ್ಭುತವಾಯಿತ್ತು:

ಸಂಯೋಗದಿ ಅವಿರ್ಭವಿಸಿತು, ಅವತರಿಸಿತು ರಸದೈವಂ ಮುಡಿಗೆ:
ಬಿಚ್ಚಿದ ಸುರುಳಿಯ ಸರ್ಪದ ಹೆಡೆ ತಾಗಿತು ಅಧಿದೇವತೆಯಡಿಗೆ!

ಸ್ಪಂದಿಸಿತಾಕಾಶ!
ಪುಲಕಿಸಿತವನಿ!
ತರುತನು ರೋಮಾಂಚಿಸಿತು!
ಮೃತ್‌ತನು ತಾಂ ಚಿತ್‌ತನುವಾಯ್ತಿ ಪೃಥಿವಿ!

ಅತಿಶೈತ್ಯಕೆ ಕಡಲಿನ ನೀರ್
ಘನವಾಗುವ ಐಕಿಲ್ಬಂಡೆಯ ತೆರದಿ,
ಭಕ್ತಿಯ ಭರಕೆ
ಆಕಾರಕೆ ಅವತರಿಸುವ ಭಗವಂತನ ತೆರದಿ,ಲ
ಕರುವೈತರೆ ಅಕ್ಕರೆಗುಕ್ಕಿ
ಹಾಲ್‌ ಸೊರಸುವ ಸುರಭಿಯ ತೆರದಿ,
ಸಂಭವಿಸಿತು ರಸಸತ್ವಂ ಆ ಮರದಿ!

ಶರಧಿ ಶರೀರೆ; ಗಿರಿವನ ವದನೆ;
ಗಗನಾಂಬರೆ; ಅಧಿಮಾನಸ ಸದನೆ;
ನಯನ ಸರೋವರೆ;
ಭ್ರೂ ಸುಂದರ ಅದ್ರಿ!

ಹಣೆ ಆಕಾಶವ ಕೀಸಿತು. ಪುಲಕಾವೇಶಂ
ವ್ಯೋಮವನಾಚ್ಛಾದಿಸಿತಾತ್ಮದ ಧೂರ್ಜಟಿಕೇಶಂ.
ಕೆದರಿದ ಕೂದಲ ಮೇಘಾಂತರದಲಿ. ಸೆರೆಸಿಕ್ಕಿದ ರವಿ ಚಂದ್ರ
ತಾವಾದರು ರುದ್ರಾಭರಣಂಗಳವೊಲು ಸುಂದರ ರುಂದ್ರ!

ರಸದದ್ರಿಗೆ ದುಮುಕಿದ ನಾನಿಲ್ಲಾಗಿ
ತುಂಬಿದೆನೆಲ್ಲವನಂಬರವಪುವಾಗಿ!
ಹಾಲಾದಳು ತಾಯಾಗಿ;
ಮಧುವಾದಳು ವಧುವಾಗಿ;
ಬೆಳಕಾದಳು ಗುರುವಾಗಿ:

“ಮಧು ವಾತಾ ಋತಾಯತೇ|
ಮಧು ಕ್ಷರಂತಿ ಸಿಂಧವಃ|
ಮಾಧ್ವೀರ್ನ ಸನ್ತ್ವೋಷದಿಃ||”

“ಮಧು ನಕ್ತಮುತೋಷಸೋ!
ಮಧುಮತ್ಪಾರ್ಥೀವಂ ರಜಃ|
ಮಧು ದ್ಯೌರಸ್ತು ನಃ ಪಿತಾ||”

‘ಮಧುಮಾನ್ನೋ ವನಸ್ಪತಿಃ|
ಮಧುಮಾನಸ್ತು ಸೂರ್ಯಃ|
ಮಾಧ್ವೀರ್ಗಾವೋ ಭವನ್ತು ನಃ||”

೧೮-೯-೧೯೫೫