ಪ್ರೀತಿಸು, ಮುದ್ದಿಸು, ಒಲಿ,  ಆಲಿಂಗಿಸು;
ಬರಿ ನೀರಿನ ಹನಿ ಎನಬೇಡ:
ಪಚ್ಚೆಯ ಪುಲಕವೆ ಎಚ್ಚತ್ತೋಲಿಯಹ
ಆಶ್ವೀಜಾಂತ್ಯದ ಹಚ್ಚನೆ ಹಸುರಲಿ
ಬೆಚ್ಚನೆ ಮಲಗಿಹ ಚೊಚ್ಚಲ್‌ ಬಿಸಿಲಲಿ
ಮಿಣುಕಿದೆ ಕಿಡಿಯಿಬ್ಬನಿ ನೋಡ!
ಕಾರಿರುಳಿನ ಮಿಂಚುಂಬುಳುವಂತೆ,
ಕರ್ದ್ದಿಂಗಳ ಬಾನಿನ ಅರಿಲಂತೆ,
ಮುತ್ತಯ್ದೆಯ ಮೂಗುತಿ ಹರಳಂತೆ,
ಧ್ಯಾನಿಯ ಕಣ್ಣಿವೆಗೊದಲಿನಂಚೊಳ್‌
ಹೊಂಚುವ ಬಾಷ್ಪದ ಬಿಂದುವಿನಂತೆ
ಆಶ ಭಾವೋಜ್ವಲ ನೋಡ!
ನಶ್ವರ ಲೀಲಾಸುಖಿ ಈ ಈಶ್ವರನನು ನೋಡ:
ನೋಡಿಯೆ ನಶ್ವರವನು ನೀನ್‌ ಅವಿನಶ್ವರ ಮಾಡ!

ಸ್ಟಾಲಿನ್‌ ಟ್ರೂಮನ್‌ ಭೇಟಿಗೆ ನೂರ್ಮಡಿ
ಮುಖ್ಯಂ ಭವ್ಯಂ ಕವಿಗೀ ನೀರ್ ಕಿಡಿ!
ಹಿಡಿದಿಲ್ಲೀ ಹನಿಗವರಾ ಕೀರ್ತಿಯ ಶನಿ:
ಗುಡಿ ಕಾಣಾ ಶಾಂಥಿಯ ದೇವತೆಗೀ ಇಬ್ಬನಿ!
ಇದು ಗಾಂಧೀಜಿಯ ಸಂದೇಶದ ನುಡಿ:
ಅರಿತೂ ಕಲಿತೂ ಶಾಂತಿಗೆ ದುಡಿ, ಮಡಿ!
ಇಬ್ಬನಿಯಲಿ ಸುಖಿಸುವ ಹೃದಯವೆ ದೇವಗೆ ಗುಡಿ;
ಸಾಮಾನ್ಯದಿ ಸುಖಿಪುದೆ ಚಿರ ಶಾಂತಿಗೆ ಮುನ್ನುಡಿ.
ವೈರ ಚಿಕಿತ್ಸೆಗೆ ಇದೆ ಶಸ್ತ್ರ;
ಅಣುಬಾಂಬಿಗು ತಾ ಪ್ರತ್ಯಸ್ತ್ರ!

ಬರಿ ಹನಿಯಲ್ಲಿದು: ಸ್ವರ್ಗಾದೇಶಂ!
ಬರಿ ಹೊಳಪಲ್ಲಿದು: ದಿವ್ಯಾವೇಶಂ!
ಅವತಾರಗಳಲಿ ಇದೂ ಒಂದೀ ಹಿಮಮಣಿ:
ನಶ್ವರಲೀಲೆಯ ಈ ಶಾಶ್ವತನಿಗೆ ಮಣಿ!
ಕ್ಷಣಿಕಂ? ಅದಕಾಗಿಯೆ ತಡಮಾಡದೆ
ವಂದಿಸು, ಕೀರ್ತಿಸು. ಆಲಿಂಗಿಸು, ಒಲಿ.
ಬರಿ ನೀರಿನ ಹನಿ ಎನಬೇಡ!
ರಸಾನುಭವದೊಳೆಯೆ ಜಗತ್‌ ಶಾಂತಿಗೆ
ಬೆಂಬಲವಾಗುವ ತಪೋರೂಪದೀ
ಸಕ್ರಿಯ ಕಾಣಿಕೆಯನು ನೀಢ!

೨೮-೧೦-೧೯೪೯