ಎಚ್ಚರಿಸು ಬಾ, ಗುರುವೆ, ಚಿಚ್ಚರಣ ಕಿರಣದಲಿ
ಬಿಚ್ಚರಳುವಂತೆನ್ನ ಹೃದಯದಕ್ಷಿ;
ಚರಿಸು ಬಾ ಚೇತನದಿ ಗರಿಗೆದರುವಂತೆನ್ನ
ಪ್ರಾಣಚಂಚುವಿನಗ್ನಿ ಪಕ್ಷಿ;
ಮಿಂಚಿ ಬಾ ಮನದಲ್ಲಿ ತಮದ ಘನತಿಮಿರ ತಾ
ಪರಿದು ದರ್ಶನವೀಯೆ ಗೂಹ್ಯಸಾಕ್ಷಿ!

ಜೋತಿವೊನಲಾಗಿ ಬಾ ಬೆಳಗಿ , ಜಡದೊಡಲಲ್ಲಿ
ಚಿನ್ಮಯದ ಕಡಲು ಮೈದೋರುವಂಥೆ;
ಶಕ್ತಿಯೋಲಿಳಿದು ಬಾ ಇಂದ್ರಿಯಗಳಾಸಕ್ತಿ
ಭಕ್ತಿಯ ಅತೀಂದ್ರಿಯತೆಗೇರುವಂಥೆ;
ವಾಙ್ಮಾನಾತೀತವಹ ಮೌನದೋಲಿಳಿದು ಬಾ
ನನ್ನನಿತು ನಿನ್ನೊಳೆಯೆ ಸೇರುವಂತೆ,
ನಿನ್ನನಿತು ನನ್ನನಿತನೂ ಹೀರುವಂತೆ!

೭-೧-೧೯೪೮