ಮತ್ತೆ ಮತ್ತೆ ಬಳಿಗೆ ಬರುವೆ,
ಮತ್ತೆ ಮತ್ತೆ ನೋಡುತಿರುವೆ;
ನೋಡಿದಷ್ಟೂ ನೋಡಬೇಕು
ಎಂಬ ಆಶೆಗಿಲ್ಲ ಸಾಕು!
ಉದ್ಯಾನವೆ ಹಸುರ ಚೆಲ್ಲಿ
ಬಿಸಿಲ ಹೀರುತಿರುವ ಈ
ಭಾದ್ರಪದದ ಬೆಳಗಿನಲ್ಲಿ
ಈ ಗುಲಾಬಿಯೊಂದು ಹೂವು
ಮದನ ಹೃದಯರತಿಯ ಸಾವು!

ಚುಂಬನ ಕಾತರೆ ನಾಕದ ಅಪ್ಸರಿ
ಋಷಿ ಶಾಪದಿ ಈ ಗಿಡವಾಗೆ
ಅವಳಾ ಹವಳದ ತುಟಿ ಈ ಹೂವಾಗಿ
ಮುಂಬರಿಸುತ್ತಿದೆ ತನ್ನಾ ಕೃತಿಯಂ:
ಚುಂಬನಕಾಹ್ವಾನಿಸಿ ಮೂದಲಿಸುತ್ತಿದೆ ಆ ಯತಿಯಂ!

ನಾನೆಯೆ ಆಗಿದ್ದೆನೆ ಅವನು?
ಆ ಯತಿ?
ಬಲ್ಲನು ಆ ಶಿವನು!
ಪಶುಪತಿ!

೨೦-೯-೧೯೪೯