ಓಂ .
ಅನವರತವೂ
ನಿನ್ನ ಮಡಿಲೊಳೆಯೆ ಮಲಗಿರುವೆನೆಂಬೊಂದು
ಶಿಶುನಿರ್ಭರತೆ ನನ್ನದಾಗಿರಲಿ, ತಾಯಿ.
ಕಷ್ಟದಲಿ; ನಷ್ಟದಲಿ;
ದುಷ್ಟಪೀಡನೆಯಲ್ಲಿ;
ನಿಂದಾ ಸ್ತುತಿಗಳಲ್ಲಿ
ನಿನ್ನ
ಮಂತ್ರಮಯ ಮಾತೃವಕ್ಷಸ್ತನ್ಯಧೈರ್ಯವನೀಂಟುತಿರಲೆನ್ನ ಬಾಯಿ:
ದೇಹದಲಿ ವಿಶ್ರಾಂತಿ;
ನರಗಳಲಿ ವಿಶ್ರಾಂತಿ;
ಭಾವದಲಿ ವಿಶ್ರಾಂತಿ;
ಹೃದಯದಲಿ ವಿಶ್ರಾಂತಿ;
ಮನದಿ ವಿಶ್ರಾಂತಿ;-
ಚೇತನದಿ ತುಂಬಿ ಬರಲಂಬುಧಿಯ ಗಂಭೀರ ಶಾಂತಿ!
ಓಂ ಶಾಂತಿಃ ಶಾಂತಿಃ ಶಾಂತಿಃ!

೧೫-೫-೧೯೫೯