ಫಾಲ್ಗುಣ ಪ್ರಾತಃಕ್ರತುಪುರುಷಂ
ಮೂಡಿದಣಾ ಪ್ರಾಗಗ್ನಿಯ ದಿಗ್ವೇದಿಯೊಳುತ್ತ!
ಕುಂಕುಮ ಸಿಂಚಿತ, ಹೊಲ ನೆಲ ಉತ್ತ!
ಹೃದಯದ ಹಾವಿಗೆ ರವಿರಯಿಹರುಷಂ
ಥೃತಪೋಷಿತ ಗೋಜ್ವಾಲೆಯ ಹುತ್ತ
ವಾಲ್ಮೀಕಿಯ ಸುತ್ತ!
ಚೋರೆ ಗುಬ್ಬಳಿಸಿತ್ತು ಅತ್ತ;
ಕೆಂಬೂತಂ ಪಾರಿತು ಪೊದೆಯಿಂದಿತ್ತ;
ಕಲ್‌ ಮಣ್‌ ಪುಲ್‌ ಏರಿಳಿಯಿತು ಮಾತೆಯ ಚಿತ್ತ!
ಕವಿ ಉನ್ಮತ್ತ!
ಭಾವೋನ್ಮತ್ತ!
ಆನಂದೋನ್ಮತ್ತ!
ಓಂ ಶಾಂತಿಃ ಶಾಂತಿಃ ಶಾಂತಿಃ!

೪-೩-೧೯೫೨