ಎಂತಹ ಕೃಪೆ ಈ ಕಣ್ಣು,

ಹೂದೋಟದ ಶ್ರೀನೋಟವ ಸವಿಯುತ್ತಿಹ ಈ ಕಣ್ಣು!
ಭಗವಂತನ ದಯೆ ಘನಿಸಿಹುದಿಲ್ಲಿ;
ಧನ್ಯತೆ ಕ್ಷಣಕ್ಷಣಕೂ ಅವತರಿಸಿದೆ ಇಲ್ಲಿ
ಹೂ ಹೂ ಹೂವಿನ ಸುಂದರ ರೂಪದಲಿ:
ಭಾವಿಸಿದನಿತೂ, ಕಯ್‌ ಮುಗಿಯುತ್ತಿದೆ;
ಚಿಂತಿಸಿದನಿತೂ, ಮನ ಮಲರುತ್ತಿದೆ;
ಧ್ಯಾನಿಸಿದನಿತೂ, ಚೇತನ ರೋಮಾಂಚನವಾಗುತಿದೆ!
ಕಣ್ಣಿನ ಈ ಸೌಭಾಗ್ಯಕೆ
ಜೀವದ ಭಕ್ತಿ ಕೃತಜ್ಞತೆ
ಜಗದಂಬಿಯ ಪಾದಕೆ ಹೂಫವಾರತಿಯೆತ್ತುತಿದೆ!
ಸಾಕ್ಷಾತ್ಕಾರದ ಅಗ್ನಿಯ ಅಂಚಿಗೆ ತಾಗುತ್ತಿದೆ
ಶರಣೆನುವೀ ನನ್ನಾತ್ಮದ ರತಿ,
ಶರಣಾಗತಿ,
ನಮಸ್‌ಕೃತಿ!

ಸೃಷ್ಟಿಯ ಸಾರ್ಥಕತೆಗೆ ಈ ಅಕ್ಷಿಯೆ ಸಾಕ್ಷಿ:
ಅಕ್ಷಿಯ ಪುರುಷಾರ್ಥಕೆ ಈ ಸೃಷ್ಟಿಯೆ ಸಾಕ್ಷಿ;
ಆಕ್ಷಿಯ ಸೃಷ್ಟಿಯ ಸಂಗಮಸೌಭಾಗ್ಯವೆ
ಕೃಪೆಯೆ ಸ್ವಯಂ ತಾನಾಗಿಹ ಈ ದೃಷ್ಟಿ!
ಎಂತಹ ಕೃಪೆ ಓ ಈ ಕಣ್ಣು!
ಎಂತಹ ಭಾಗ್ಯವೋ ಈ ಮಣ್ಣು!

ಕಣ್ಣು
ಬರಿ ಇಂದ್ರಿಯವಲ್ಲೊ:
ಸಾಕ್ಷಾತ್ಕಾರದ ಅಪರೋಕ್ಷದ ಅನುಭೂತಿಯ ಒಂದಂಗ!

೧೨-೧೦-೧೯೫೬


*       ಮನೆಯ ಉದ್ಯಾನದಲ್ಲಿ ಆಶ್ವೀಜಮಾಸದ ಪ್ರಾತಃಸಮಯದ ಹೊಂಬಿಸಿಲಿನಲ್ಲಿ ಹಸುರು ಹೂವುಗಳ ವೈಭವವನ್ನು ಸವಿಯುತ್ತಿರುವಾಗ ಉಂಟಾದ ಅನುಭವ.