ಕಷ್ಟವಯ್ಯಾ ಹೊಗಲು ಕವಿಹೃದಯಕೆ

ನಷ್ಟವಿಲ್ಲದೆ ನಿನ್ನ ಮಮಕಾರಕೆ.

ದುಷ್ಟ ಮೃಗಗಳು ತುಂಬಿದಡವಿ ಸುತ್ತಿದೆ; ಮುಗಿಲು
ಮುಟ್ಟಿದಾ ಬೆಟ್ಟನೆತ್ತಿಯ ಮೇಲಿದೆ;
ದಟ್ಟಮಂಜಿನ ಗಡ್ಡೆ ಹೆಪ್ಪು ಗಟ್ಟಿದೆ; ನಿದ್ದೆ
ಕಟ್ಟೆಹಾಕಿದೆ; ಸದ್ದು ಹೆಣಬಿದ್ದಿದೆ!

ದುರ್ಗಮವೊ ಮಾರ್ಗವದು ಕವಿಯೆದೆಯ ಕಲ್ಗುಡಿಗೆ;
ಮೆಟ್ಟಿದರೆ ಪಥವೆಲ್ಲ ಮುಳ್ಳುಕಲ್ಲು.
ಕಂಟಕದ ಸಂಕಟವ ಕಳೆದು ಮೇಲೇರ್ದರೂ
ತಟ್ಟಿದೊಡನೆಯೆ ತೆರೆವ ಕದವದಲ್ಲ.

ಕತ್ತಲೆಯ ಗವಿಮಯ್ಯ ಕವಿಹೃದಯದಾ ಗುಹ್ಯ;
ಬಯಲು ಬತ್ತಲೆಗಣ್ಣಿಗದು ಅಸಹ್ಯ:
ಗವಿಯ ಬಾಯೆಡೆ ರಾಸಿ ಬಿಳಿಯೆಲ್ವು ಸುತ್ತಲೂ
ಬೆಚ್ಚಲಾಗಿದೆ ಮಂದಿ ಮುತ್ತದವೊಲು.

ಕಂಡ ಕಂಡರಿಗೆಲ್ಲ ಕಂಡಿ ತೋರುವುದಲ್ಲ;
ಕೊಂಡುಕೊಳಲೂ ಹಣಕೆ ಹವಣದಲ್ಲ.
ಕೆಲಸವಿಲ್ಲದ ಕೂತೂಹಲದ ಕಣ್ಣಿಗೆ ಅಲ್ಲಿ
ಕಲ್ಲಲ್ಲದಿನ್ನಾವ ದೇವರಿಲ್ಲ!

ಮೆಚ್ಚು ಮೆಯ್ ಜೋಡಾಗಿ, ಹೆಮ್ಮೆ ಕಾಲ್‌ಜೋಡಾಗಿ,
ಒದೆದರೂ ಒಲಿಯುವಾ ಮನಸು ಮಾಡಿ
ಏರುವಾ ಪ್ರೇಮವೀರಗೆ ಬೇರೆ ಮೋರೆಯನು
ತೋರುವುದು ತನ್ನೆದೆಯ ಸೂರೆ ನೀಡಿ!

೨೨-೫-೧೯೩೮