ಕ್ಗೂ ಕ್ಗೂ ಕ್ಗು! ಕ್ಗೂ ಕ್ಗೂ ಕ್ಗು!
ಕ್ಗೂ ಕ್ಗೂ ಕ್ಗು! ಕ್ಗೂ ಕ್ಗೂ ಕ್ಗು!……
ಹೊರಸಿನುಲಿ!
ಹೊಲದ ವಾಣಿ!! ಕ್ಗೂ ಕ್ಗೂ ಕ್ಗು:

ಏನೊ ಅರ್ಥ! ಏನೊ ಧ್ವನಿ!
ಏನೊ ದರ್ಶನ!
ಬುದ್ಧಿಸ್ಪಷ್ಟವಲ್ಲ, ದಿಟ,
ಸಿದ್ಧಿ ದರ್ಶನ!
ಪೈರು ಕೊಯ್ದ ಬಯಲು ನೆಲ:
ಬೋರೆ, ದಿಣ್ಣೆ; ದಿಣ್ಣೆ, ಬೋರೆ;
ಇಲ್ಲಿ ಅಲ್ಲಿ ಪೊದೆ, ಮರ:
ಇದರ ನಡುವೆ ಉಲಿವ ಚೋರೆ!
ಕ್ಗೂ ಕ್ಗೂ ಕ್ಗು! ಕ್ಗೂ ಕ್ಗೂ ಕ್ಗು; ……

ಹೊರಸಿನುಲಿ! ಹೊಲದ ವಾಣಿ!
ಅಃ ವಿಶ್ವವಾಣಿ!!
ಎಲ್ಲಿಂದಲೊ ಹೊಮ್ಮುತ್ತಿದೆ;
ಹಕ್ಕಿಯಿಂದ ಚಿಮ್ಮುತ್ತಿದೆ;
ಕವಿ ಹೃದಯಕೆ ದುಮುಕುತ್ತಿದೆ
ರಸಜಲಪಾತದ ಘೋಷದಲಿ!
ದೈನಂದಿನ ಸಾಮಾನ್ಯದ
ನೀರಸವನೆ ಉಜ್ವಲಿಸಿದೆ
ಅತಿಇಂದ್ರಿಯ ಆವೇಶದಲಿ!

೯-೨-೧೯೫೭