ಸ್ವಾಗತಂ ಸುಸ್ವಾಗತಂ,
ಚಕ್ರಚರಣೆಗೆ ಸ್ವಾಗತಂ!
ಗೆಲ್ಗೆ ಕವಿ ಮನೋರಥಂ;
ಬಾಳ್ಗೆ ನಮ್ಮ ನವರಥಂ!

ಬಂದಳಿಂದು ಮನೆಗೆ ಶಕ್ತಿ,
ನೂತ್ನ ಯಂತ್ರ ರೂಪಿಣಿ:
ಲೋಹಕಾಯೆ, ವೇಗತಂತ್ರೆ,
ಅಗ್ನಿ ತೈಲ ವಾಹಿನಿ!

ಆವ ದೇವಿ ರವಿಯ ಸುತ್ತ
ಭೂಗೋಲವ ತಿರುಗಿಸುತ್ತ
ತನ್ನ ರುಂದ್ರ ಲೀಲೆಯತ್ತ
ಸಾಗು ತಿರುವಳೋ,

ಖನಿಜ ಸಸ್ಯ ಪ್ರಾಣಿವರ್ಗ
ಮನುಜ ದನುಜ ಸುರ ನಿಸರ್ಗ
ಯಂತ್ರ ತಂತ್ರ ಮಂತ್ರವಾಗಿ
ನಿಯಂತ್ರಿಸಿರುವಳೋ,

ಅವಳ ಇಂದು ಮನೆಗೆ ಬಂದು
ಇಂತು ನಮ್ಮ ಮುಂದೆ ನಿಂದು
ಹರಸುತಿಹಳು ಭಕ್ತಬಂಧು,
ಈ ವಾಹನ ವೇಷದಿ!

ನಮಸ್ಕರಿಸಿ ಸಮರ್ಪಿಪೆನ್‌,
ಚಕ್ರ ಚರಣೆ, ಜನನಿ, ಇದೆಕೊ
ತವ ಪವಿತ್ರ ಚತುಷ್ಪದಕೆ
ಪ್ರಾಕ್‌ ಮಂತ್ರ ಘೋಷದೀ
ವಾಕ್‌ ಪವಿತ್ರ ಪುಷ್ಪಮಂ!

“ಓಂ
ಯಾ ದೇವೀ ಸರ್ವಭೂತೇಷು ಶಕ್ತಿರೂಪೇಣ ಸಂಸ್ಥಿತಾ
ನಮಸ್ತಸ್ಸೈ ನಮಸ್ತಸ್ಸೈ ನಮಸ್ತಸ್ಸೈ ನಮೋನಮಃ!
ಯಾ ದೇವೀ ಸರ್ವಭೂತೇಷು ಮಾತೃರೂಪೇಣ ಸಂಸ್ಥಿತಾ
ನಮಸ್ತಸ್ಸೈ ನಮಸ್ತಸ್ಸೈ ನಮಸ್ತಸ್ಸೈ ನಮೋನಮಃ!
ಚಿತಿರೂಪೇಣ ಯಾ ಕೃತ್ಸ್ನಮೇತದ್‌ ವ್ಯಾಪ್ಯಸ್ಥಿತಾ ಜಗತ್‌
ನಮಸ್ತಸ್ಸೈ ನಮಸ್ತಸ್ಯೈ ನಮಸ್ತಸ್ಸೈ ನಮೋನಮಃ!
ಸರ್ವಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥಸಾಧಿಕೇ
ಶರಣ್ಯೇ ತ್ಯ್ರಂಬಕೇ ಗೌರಿ ನಾರಾಯಣಿ ನಮೋಸ್ತು ತೇ!
ಸರ್ವಸ್ವರೂಪವೇ ಸರ್ವೇಶೇ ಸರ್ವಶಕ್ತಿ ಸಮನ್ವಿತೇ
ಭಯೇಭ್ಯಸ್ತ್ರಾಹಿ ನೋ ದೇವಿ ದುರ್ಗೇ ದೇವಿ ನಮೋಸ್ತು ತೇ!”
ಓಂ ಶಾಂತಿಃ ಶಾಂತಿಃ ಶಾಂತಿಃ