ತೊಂಡೆ ಹಣ್ಣು ಮಣಿಯೆ ನಾಚಿ
ನಗೆಯ ಚೆಲುವ ತುಟಿಯ ಚಾಚಿ
ಜಗದ ಒಲವನೆಲ್ಲ ಬಾಚಿ
ಜ್ವಲಿಸುವಳೀ ಜರ್ಬರಾ!

ಪಂಚಬಾಣ ರಕ್ತಕಿರಣೆ
ಮನ್ಮಥ ಸತಿ ಅಲಕ್ತಚರಣೆ
ಜೀರ್ಕೋವಿಯ ಓಕುಳಿಯೇಣೆ
ಚಿಮ್ಮುವಳೀ ನಿರ್ಜರಾ!

ನಿಲ್ಲು, ನೋಡು, ಕಾಣ್‌!
ಗಮನಿಸು, ಬಾಗು!
ಪರಿಭಾವಿಸು! ಆಸ್ವಾದಿಸು! ಧ್ಯಾನಿಸು! ಒಂದಾಗು!

ಈ ಒಂದೆ ಹೂ ಜರ್ಬರಾ,
ಮರದ ಬುಡದ ರಾಕರಿಯಲ್ಲಿ
ಮೂಡಿ ಕಠಿನ ಮರ್ತ್ಯದಲ್ಲಿ
ನಾಚುತಿರುವ ನಿರ್ಜರಾಬ
ಬಿಂಬಾಧರದಪ್ಸರಾ!

ನೀನಾಸ್ವಾದಿಸದಿದ್ದರೆ
ಅದು ಇದ್ದೂ ನೀನಿದ್ದೂ
ಅದೂ ಇಲ್ಲ, ನೀನೂ ಇಲ್ಲ;
ಶೂನ್ಯ ಇಬ್ಬರೂ!

ನೀನಾಸ್ವಾದಿಸಿದರೆ
ಅಸ್ತಿ, ಭಾತಿ, ಪ್ರಿಯ:
ಅದೂ ನೀನೂ ಶಾಶ್ವತ!
ಅದೇ ನೀನು, ನೀನೆ ಅದು;
ಎರಡೊಂದಾಗುತ ಶಾಶ್ವತ!
ಒಂದು ಶೂನ್ಯ ಅಧರವಾಗೆ
ಒಂದು ಶೂನ್ಯ ಓಷ್ಠವಗೆ
ಪೂರ್ಣವೊಂದೆ ಚುಂಬಿತ!
ರಸಾನಂದ ಯೋಗಲಯದಿ
ಶೂನ್ಯವನ್ನು ಶೂನ್ಯವಪ್ಪಿ
ಪೂರ್ಣವಿಬ್ಬರೂ! ಋತ!

ನಿಲ್ಲು, ನೋಡು, ಕಾಣ್‌!
ಗಮನಿಸು, ಬಾಗು!
ಪರಿಭಾವಿಸು, ಆಸ್ವಾದಿಸು, ಧ್ಯಾನಿಸು, ಒಂದಾಗು!

೧೦-೯-೧೯೫೮