ಏಕೆ ಬೇಸರ, ನಿನಗೂ?
ಇಲ್ಲೆ ಇಹೆನಲ್ಲ, ಮಗೂ!

ನಿನಗಾಗಿ ಈ ಹಸುರು ಹುಲ್ಲಾಗಿ
ಬಂದೆ……..
ಮತ್ತೆ…….
ಮುತ್ತಿನಿಬ್ಬನಿಯಾಗಿ
ನಿಂದೆ…….
ಅತ್ತ ರವಿಯಾಗಿ ಮೂಡಿ,
ಇತ್ತ ಕಿರಣವೆ ಆಗಿ ಆಡಿ,
ನೋಡಿಲ್ಲೆ ಮಿರುಗುತಿಹೆ
ನಿನ್ನಿದಿರಿನಲ್ಲೆ!
ಕಲ್ಪನೆಯ ಬಾಹುಗಳ ನೀಡು, ಮಗುವೆ;
ಸೌಂದರ್ಯತನುವೆನ್ನನಪ್ಪು, ಮಗುವೆ:
ಆವೇಶದಧರದಲಿ ಮಾತೃವಕ್ಷವನೊತ್ತಿ
ಸ್ತನ್ಯದಾನಂದವನು ಈಂಟಿ ನಗುವೆ!-
ಇಲ್ಲೆ ಇಹೆನಲ್ಲ, ಮಗೂ!
ಏಕೆ ಬೇಸರ, ನಿನಗೂ?

೩-೧೦-೧೯೬೦