ಕಂಡವರನು ಕಂಡಿಹೆ ನಾ ಧನ್ಯ:
ಕಂಡವರನು ಕಾಣುವುದೂ ಮೋಕ್ಷಂಕರ ಪುಣ್ಯ!

ಕಡವರದೊಡವೆಯ ಬೆಲೆಯರಿಯದೆ ಹೋಗಿದ್ದೆ;
ಕಡವರವಿದ್ದೂ ಇನಿತೂ ದಿನವೂ ಬಡವನೆ ಆಗಿದ್ದೆ:
ಆತ್ಮವನೆನಗಿತ್ತಾತನ ಸಂಪತ್ತನು ನಾ ಮರೆತಿದ್ದೆ!

ಅದೆಂತಹ ಗುರುಕರುಣೆಯ ತೀರ್ಥದಿ ನಾ ಮಿಂದು
ಅದೆಂತಹ ಗುರುದಯೆ ತೊಟ್ಟಿಲೊಳಾಂ ಮಲಗಿಹೆನೆಂದು
ಗುರುಕೃಪೆಯಿಂಧನುಭವಿಸರಿತೆನು ನಾನಿಂದು!

ಕಲ್ಪತರುವೆ ತಾ ಕಂಭವಾಗಿರುವ ಕಾಮಧೇನುವಿಗೆ ಕರುವಾದೆ:
ಸಚ್ಚಿದಾನಂದ ನಿಚ್ಚ ತಾನಾದ ಪರಮ ಗುರುದೇವ ದಿವ್ಯಬೋಧೆ
ನಿತ್ಯನಿತ್ಯವೂ ಸತ್ಯವಾದವನ ಚರಣತಲದಿ ನಾ ಶರಣಾದೆ.
ಕಂಡ ಗುರುವರನ ಕಂಡು ಕಾಲ್ಮುಟ್ಟಿ
ಕೊಂಡು ದೀಕ್ಷೆಯನು ಧನ್ಯನಾದೆ!

೨೭-೩-೧೯೪೭