ಮಾಗಿಯ ಬೆಳಗಿನ ಮನೆಮುಂದಣ ತೋಟದ ದಿಕ್ಕು;
ಮುಚ್ಚಿದ ಬಾಗಿಲ ತೆರೆದೊಡನೆಯೆ ಹಾ ತೆಕ್ಕನೆ ಬಗೆಮಿಕ್ಕು
ಸ್ತಂಭಿತನಾದೆನು ಸಾಕ್ಷಾತ್ಕಾರದ ದಿವ್ಯಾಘಾತಕೆ ಸಿಕ್ಕು,
ಮೇಲ್ವಾಯ್ದಪ್ಪಳಿಸಿರ್ದ ರಸಾನಂದ ಸಮುದ್ರಂಬೊಕ್ಕು!
ಮೂಡುವ ನೇಸರ ಲೀಲಾರಶ್ಮಿ
ಗುರುಸಾಕ್ಷಿಯ ಮಂತ್ರಿಸುತಿರ್ದುದು “ಅಹಮಸ್ಮಿ!”
ಸೌಂದರ್ಯದ ಇಂದ್ರಾಣಿ,
ಉದ್ಯಾನದ ರಾಣಿ,
ಭಗವಂತನ ಭರವಸೆ, ವಾಣಿ,
ಆಶ್ವಾಸನೆ, ಆಕರ್ಷಣೆ,
ಆಲಿಂಗನೆ, ಆಸ್ವಾದನೆ,
ಕಣ್ಮನ ಹೃದಯಂಗಳ ಚುಂಬಿಸಿ,
ಶ್ರದ್ಧೆಯ ಧೈರ್ಯದಿ ಜೀವನ ನಂಬಿಸಿ,
ಕೃಪೆಯನು ಬಿಂಬಿಸಿ, ಬಾಳನು ತುಂಬಿಸಿ,
ತೋಟದೊಳರಳಿದ ಹೂ ತಾನಾದುದು ಶ್ರೀಮದ್‌ ಭಗವದ್ಗೀತೆ;
ಕಂದನ ಕರುಣಿಸಲವತರಿಸಿಹ ಶ್ರೀಸೌಂಧರಿ ತ್ರಿಜಗನ್ಮಾತೆ!
ಅನಿಚ್ಛನ್ನಪಿ ಕೈಮುಗಿದೆಂದೆ ಗುಲಾಬಿಗೆ: “ನಮಸ್‌ ತೇ!”

೨-೨-೧೯೫೦