ನಾ ಧನ್ಯ ನಾ ಧನ್ಯ ನಾ ಧನ್ಯನಿಂದು
ಉಷಾರವಿಯ ದರುಶನಕೆ ಇಲ್ಲಿಗೈತಂದು!
ಮಾತೆ ಮೈದೋರಿಹಳು: ಕೈಮುಗಿದು ನಿಂದು
ಕಣ್ತುಂಬಿ ನೋಡು; ಮಾತಾಡದಿರು, ಬಂಧು,
ಆತ್ಮದಾನಂದದಲಿ ಮುಳುಗಿಮುಳುಗಿ ಮಿಂದು
ನಾ ಧನ್ಯ ನಾ ಧನ್ಯ ನಾ ಧನ್ಯನಿಂದು!

ತಾಯಿ ಹರಸಿದಳೆನ್ನ; ನಲ್ಲೆ ವರಿಸಿದಳೆನ್ನ;
ಗುರುವು ಆಶೀರ್ವದಿಸಿ ಕೃಪೆಯೊಳೆನ್ನ
ಪುರಸದನದಲಿ ಬೆಂದು ಕುದಿವೆದಯನೆಳೆತಂದು
ಕ್ಷೀರಾಬ್ಧಿಗದ್ದಿದನೊ ಅಮೃತಸಿಂಧು!
ನಾ ಧನ್ಯ ನಾ ಧನ್ಯ ನಾ ಧನ್ಯನಿಂದು!-
ಉಷಾರವಿಯ ದರುಶನಕೆ ಇಲ್ಲಿಗೈತಂದು!

ಹಿಂಜಿದರಳೆಯ ಹಿಂಡೊ? ಐರಾವತದ ದಂಡೊ?
ಮಂಜೊ? ಇಂಗಡಲೊ? ಸಾಕ್ಷಾತ್ಕಾರವೋ?
ಮಲೆಯ ತಲೆಯಾ ಬಂಡೆಯಲ್ಲೇನ ನಾ ಕಂಡೆ?
ಷಟ್ಚಕ್ರದಗ್ರದ ಸಹಸ್ರಾರವೋ?
ನಾ ಧನ್ಯ ನಾ ಧನ್ಯ ನಾ ಧನ್ಯನಿಂದು
ಉಷಾರವಿಯ ದರುಶನಕೆ ಇಲ್ಲಿಗೈತಂಧು!

ಮಣ್ಣೆಲ್ಲ, ಕಣ್ಣಾಗಿ, ಮೃತ್ತೆಲ್ಲ ಚಿತ್ತಾಗಿ,
ಜಗವೆಲ್ಲ ತಾಯ್‌ ತಳೆದ ತನುವಾದುದೋ?
ಕವಿಯೆನ್ನ ಸವಿಗಾಗಿ ದಿವಿಜವೃಂದವೆ ನೆರೆದು
ಆನಂದರಸವಿಲ್ಲಿ ಮಡುವಾದುದೋ?
ನಾ ಧನ್ಯ ನಾ ಧನ್ಯ ನಾ ಧನ್ಯನಿಂದು
ಉಷಾರವಿಯ ದರುಶನಕೆ ಇಲ್ಲಿಗೈತಂದು!

ಮಂಜು ತುಂಬಿದ ಕಣಿವೆಯಾ ಮಂಜು ಚಿತ್ರದಲಿ
ಕಡಲಿನಿಂದಲ್ಲಲ್ಲಿ ದೀವಿಗಳವೋಲ್‌
ಕಾಡು ತುಂಬಿದ ಮಲೆಯ ಸಾಲ್‌ ನೆತ್ತಿ ತಲೆಯೆತ್ತಿ
ತೋರುತಿರೆ ಚಿನ್ಮಯದಿ ತೇಲ್ವಂತೆವೋಲ್‌,
ನಾ ಧನ್ಯ ನಾ ಧನ್ಯ ನಾ ಧನ್ಯನಿಂದು
ಉಷಾರವಿಯ ದರುಶನಕೆ ಇಲ್ಲಿಗೈತಂದು!

ನನಗಾಗಿ ಸಮೆದಿಹಳು, ಸಂದೇಹವೆನಗಿಲ್ಲ,
ಪ್ರಕೃತಿಯಾಗಿಲಹ ಪರಾಲೋಕಾನಾಥೆ.
ಅಲಭ್ಯವೀ ಸಮಯಕ್ಕಪೂರ್ವದೀ ದೃಶ್ಯ:
ಜಗಕೆ ತಾಯಾದರೂ ನನಗುಮಲ್ತೆ?
ನಾ ಧನ್ಯ ನಾ ಧನ್ಯ ನಾ ಧನ್ಯನಿಂಧು
ಉಷಾರವಿಯ ದರುಶನಕೆ ಇಲ್ಲಿಗೈತಂದು!

ಬಹುದಿನದ ಪ್ರಾರ್ಥನೆಗೆ ಬಹುದಿವ್ಯ ಫಲವಾಯ್ತು;
ಮನಕೆ ನೆಮ್ಮದಿಯಾಯ್ತು; ಧೈರ್ಯವಾಯ್ತು.
ದಿವ್ಯದರುಶನದಿಂದೆ ನವ್ಯಚೇತನವಾಯ್ತು;
ಭವ್ಯಾನುಭವಕಮೃತಕಲಶವಾಯ್ತು!
ನಾ ಧನ್ಯ ನಾ ಧನ್ಯ ನಾ ಧನ್ಯನಿಂಧು
ಉಷಾರವಿಯ ದರುಶನಕೆ ಇಲ್ಲಿಗೈತಂದು!

೩೦-೩-೧೯೪೪