ನಾ ಜಂಗಮ ದೇವಸ್ಥಾನ!

ಶತವರ್ಣದೊಳಿರೆ ಉದ್ಯಾನ
ಆತ್ಮದೊಳಿರೆ ಅನುಸಂಧಾನ
ಚಿತ್ತದೊಳಿರೆ ಶ್ರೀಮದ್‌ಧ್ಯಾನ
ನಾ ಜಂಗಮ ದೇವಸ್ಥಾನ!

ನಾಟ್ಯಮಾನ ಭಾವೋಜ್ವಲ ರಕ್ತದಿ
ಬಿಂದು ಬಿಂದುವೊಳೂ ನಂದನ ನರ್ತಿಸೆ
ನರ್ತಿಸುವುವು ಮಂತ್ರಾಪ್ಸರ ವೃಂದಾ!
ಭಗವಚ್ಚಿಂತಾ ಜಟಾಪ್ರಪಾತದಿ
ಧುಮುಕುವ ಸಾವಿರ ಜಿಹ್ವಾಸ್ರೋತದಿ
ಧಮನಿಧಮನಿಯಲಿ ಹರಿವುವು ಗಂಗಾ೧

ಕೋಟಿಕಣ್ಗಳಲಿ ನೋಟವೆ ಆಗಿ
ಕೋಟಿ ಕಿವಿಗಳಲಿ ಝೇಂಕೃತಿಯಾಗಿ
ಕೋಟಿ ರಸನೆಯಲಿ ಹೊಸಜೇನಾಗಿ
ಕೋಟಿ ದೇವರಿಗೆ ದೇಗುಲವಾಗಿ;
ಎಲ್ಲ ದೇವರೂ ನನ್ನೊಳಗಾಗಿ
ನನ್ನ ಎಲ್ಲವೂ ಅನ್ಯವೆ ಆಗಿ
ರಸಯೋಗದೊಳಿರೆ ಎಲ್ಲಮೆ ಆಗಿ,
ನಾ ಜಂಗಮ ದೇವಸ್ಥಾನ!

೨೮-೯-೧೯೫೦