ಮುಕ್ತನಾದೆ, ಇಂದು, ಜೀವನ್‌

ಮುಕ್ತನಾದೆ;- ಗುರುವೆ, ನಿಮ್ಮ
ದೇವಕೃಪೆಯಿಂದೆ!

ಒಂದು ಕೈಯಲಿ ಕೆಲಸ; ಒಂದು ಕೈಯಲಿ ಪಾದ;
ಕರ್ಮಪೂಜೆಗಳೆರಡನೆಸಗುತ್ತ ಬಂದೆ.
ಇಂದಿನಿಂದೆರಡುಕೈಯೊಳೂ ನಿಮ್ಮ ಕಾಲ್ವಿಡಿದು
ಸಾಧನೆಯ ಕೈಕೊಳೆ ಅನುಗ್ರಹಿಸು, ತಂದೆ.

ಸ್ಥಾನದ ಉಪಾಧಿ, ಅಧಿಕಾರದ ಉಪಾಧಿ,
ಮಾನದ ಉಪಾಧಿ, ಅವಮಾನದ ಉಪಾಧಿ,
ವಿದ್ಯೆಯ ಉಪಾಧಿ, ಕೀರ್ತಿಯ ಉಪಾಧಿ,
ಕವಿಯ, ಸಾಹಿತಿಯ, ಕಡೆಗೆ ಕನ್ನಡ ಉಪಾಧಿ;
ನಿನ್ನಡಿಗೆ ಸರ್ವವ ಸಮರ್ಪಿಸಲು ಬಂದೆ;
ಕೈಹಿಡಿದು ಕೃಪೆಗೆಯ್‌, ಅನುಗ್ರಹಿಸು, ತಂದೆ!

ನೀವೆನ್ನ ಕೈವಿಡಿಯೆ ನಾ ನಿಮ್ಮ ಕಾಲ್ವಿಡಿದು
ಪಯಣದಲಿ ತಿಪ್ಪತಿಪ್ಪನೆ ನಡೆವ ಮುಂದೆ:
ಅಂದು ದೀಕ್ಷೆಯನಿತ್ತು ಧೈರ್ಯವನೆರೆದ ತಂದೆ,
ಎತ್ತಿಕೋ; ಒತ್ತಿಕೋ ತಾಯೆದೆಗೆ ಇಂದೇ!


*      ೨೯-೧೨-೧೯೫೯ರಲ್ಲಿ ನಿವೃತ್ತನಾಗಲಿದ್ದಾಗ ಅರ್ಪಿಸಲೆಂದು ಬರೆದ ಪ್ರಾರ್ಥನೆ.