ಪಕ್ಷಿ?
ಅಲ್ತಲ್ತಾ ತರುಚೇತನ ಚೈತ್ಯಾಕ್ಷಿ
ಗರಿ ತಳೆದಿದೆ ಸಸ್ಯಪ್ರಜ್ಞೆಗೆ ಸೇಂದ್ರಿಯ ಸಾಕ್ಷಿ!

ನಿರ್ಜರ ಸಾಧಕನೊರ್ವನ ಶ್ರೀಜಪ ಬಾಯ್ತಪ್ಪಿ
ಪತನ ಪರಾಙ್ಮುಖಿ ತಾಂ ಖಗರೂಪವನಪ್ಪಿ
ಅವತರಿಸಿಹುದೀ ತರುಶಿವ ಜೂಟಾಗ್ರದೊಳೊಪ್ಪಿ!

ಋಷಿಮಾನವನೊರ್ವನ ಹೃದಯ ಅಭೀಪ್ಸಾಗಾಯತ್ರಿ
ಭಗವಚ್ಚರಣಚಿದಂಬರ ಯಾತ್ರಿ
ಮಾರ್ಗಾಯಾಸದಿ ತಂಗಿಹುದೀಯೆಡೆ ನಾಕ್ಷತ್ರಿಕನೇತ್ರಿ!

ಶ್ರೀಗುರುವಿನ ಅಹಮಸ್ಮಿಯ ಆಶೀರ್ವಾದ,
ಭಾಷೆಯ ಅಲ್ಲದ ಅರ್ಥವೆ ಇಲ್ಲದ ಅತಿವಾಙ್ಮಯ ವೇದ,
ಉಲಿವ ವಿಹಂಗಮವಾಗಿದೆ ಆ ಓಂಕಾರದ ನಾದ!

ಗತಕಾಲದ ಭವಭವದಾಚೆಯ ಕವಿಜನ್ಮದೊಳಾನಂದು
ಹೃದಯದಿ ಸಾಕ್ಷಾತ್ಕರಿಸಿದ ರಸಚಿಂತನಬಿಂದು,
ಆಶಿಸಿಯೂ ವಾಗ್‌ರೂಪವ ಧರಿಸದ ಕೃತಿಯೊಂದು,
ಲೋಕಾಲೋಕದೊಳೆನ್ನಂ ಪುಡುಕತಲ್ಯೆತಂದು
ಯಾಚಿಸುತಿಹುದೀ ಕವನಾಕೃತಿಯಂ ಪಕ್ಷಿಯವೋಲಿಂದು!

ಅಲ್ತಲ್ತಾ ವೈದಿಕ ಋಷಿತನು ಈ ಮರವಾಗಿ
ಅಂದಿನ ಋಷಿವಾಣಿಯೆ ಇಂದಿನ ಈ ಖಗವಾಗಿ
ಲೋಕವನೆಚ್ಚರಿಸುತ್ತಿದೆ ತಾರಸ್ವರದಲಿ ಕೂಗಿ:

“ಶೃಣ್ವಂತು ವಿಶ್ವೇ ಅಮೃತಸ್ಯ ಪುತ್ರಾಃ
ಆಯೇ ಧಾಮಾನಿ ದಿವ್ಯಾನಿ ತಸ್ತುಃ
ವೇದಾಹಮೇತಂ ಪುರುಷಂ ಮಹಾನ್ತಂ
ಆದಿತ್ಯವರ್ಣನಂ ತಮಸಃ ಪರಸ್ತಾತ್‌
ತಮೇವ ವಿದಿತ್ವಾತಿಮೃತ್ಯುಮೇತಿ
ನಾನ್ಯಃ ಪನ್ಥಾ ವಿದ್ಯತೇsಯನಾಯ!”