ಈ ಹೂವೂ ಪವಾಡವೆ!

* * *

ಶ್ರೀರಾಮಕೃಷ್ಣಾಶ್ರಮದಿ
ಶ್ರೀಮಾತೆ ಗುರುದೇವರಿದಿರಿನಲ್ಲಿ
ಪಡುಬಿದರೆ ಅಮ್ಮ
ಪ್ರಭುಶಂಕರನ ಕೈಲಿ
ಕುಂಕುಮವನಿಟ್ಟಂದು,
ತೆಕ್ಕನೆಯೆ,
ಬೆಳ್ಳಿ ವಿಗ್ರಹ ಬಂದು
ಬೆರಗಾದರಿನಿಬರೂ ಕುಂಭಕದಿ ನಿಂದು
ಅದ್ಭುತ ಪವಾಡ ಸಂದರ್ಶನಕ್ಕೆ!

ಮನೆಯ ಉದ್ಯಾನದಲ್ಲಿ
ಅಗೆದಗೆದು ಹಸನು ಮಾಡಿದ ಈ ಮಣ್ಣಿನಲ್ಲಿ
ನೀರು ಗೊಬ್ಬರವಿಟ್ಟು
ಗೆಡ್ಡೆ ನಟ್ಟು
ಮೂಡಿದೀ ಡಾಲಿಯಾ ಗಿಡದ ಹಸುರು ಕೈಯಲ್ಲಿ
ಜಗದ ಅಮ್ಮ
ಬಿಸಿಲು ಗಾಳಿಯನಿಡಲು,
ಮೆಲ್ಲನೆಯೆ,
ಮೊಗ್ಗುಗಣ್‌ ತೆರೆತೆರೆಯ ತೆರೆದು,
ಅಲೆಅಲೆಯ ಕಡಲು ಈ ಹೂವು ಬಿಡಲು,
ನಾನಾದರ ದಿವ್ಯ ಸಾನ್ನಿಧ್ಯದಲಿ ಕೈಮುಗಿದು ನಿಂತು
ವಿಸ್ಮಯಾರಾಧನೆಯ ರಸಸಮಾಧಿಯನಾಂತು
ತೂಣಗೊಂಡಿಹೆನಿಂತು

ಮಹಾದ್ಭುತ ಪವಾಡ ಸಂದರ್ಶನಕ್ಕೆ!
*  *  *  *

ಈ ಹೂವೂ ಪವಾಡವೆ!

೯-೧೦-೧೯೫೯