ಇದು ದರ್ಶನ:
ಇದು ಸಾಕ್ಷಾತ್ಕಾರ:
ಬರಿ ನೋಡುವುದಲ್ಲೊ!
ಈ ಅನುಭವಕಿನ್ನಾವುದು ಬೇರೆಯ ಹೆಸರಿಲ್ಲೊ!

ಇದು ಬರಿ ಹೂಬಿಡುವಾ
ಸಾಮಾನ್ಯದ ಪ್ರಾಕೃತ ಸಂಗತಿಯಲ್ಲೊ!
ಭಾವಿಸಿ ಕಾಣ್‌:
ಈ ಹೂವಿನ ಭವ್ಯಾಕಾರ
ಸಾರುತ್ತಿದೆ ತನ್ನಷ್ಟಕೆ ತಾನ್‌:
“ನಾನ್‌ ಅವತಾರ!”

ಈ ಉದ್ಯಾನದಿ
ಈ ಹೊತ್ತರೆಯಲಿ
ಈ ಹೂಬಿಸಿಲಲಿ
ಧ್ಯಾನದಿ ನಿಂತವಲೋಕಿಸಿದರೆ ಪ್ರತ್ಯಕ್ಷಂ
ಇದು ಮಹದವತಾರ!
ಇದನೀಕ್ಷಿಸುವುದೆ ಸಾಕ್ಷಾತ್ಕಾರ!
ಹೇ ಭಗವತ್‌ ಪುಷ್ಪಾಕಾರ,
ನಿನಗಿದೋ ನಮಸ್ಕಾರ!
ಸಾಷ್ಟಾಂಗ ನಮಸ್ಕಾರ!