ಮ್ಲಾನ, ಶೂನ್ಯ, ದೀರ್ಘ, ನಗ್ನ,
ರಿಕ್ತ, ಋಜು ದಿಗಂತದಿ
ಗಗನಕೆದುರು ನಿಂತಿದೆ ತರು
ಮಸಿಯ ಚಿತ್ತಿನಂದದಿ:
ಹೃದಯವಶದೆ ನೀತಿಗೆಟ್ಟು
ನಿಷ್ಕರುಣ ಸಮಾಜ ಬಿಟ್ಟು
ಕಳೆದನಾಥೆಯಂದದಿ!

ವಕ್ರರೂಪಿ ರೂಕ್ಷದೇಹಿ
ಸಂಗಹೀನ ಮರುತರೂ,
ಏತಕಿಂತು ಒಂಟಿ ನಿಂತು
ತಪಿಸುತಿರುವೆ, ತರುಗುರೂ?
ಜೀವನ ರಸವರತು ಹೋಗಿ
ಜೀವಿ ಬರೆ ಪರೇತವಾಗಿ
ಸಾನುಭೂತಿಯಾಗಿರು!

ನಿರ್ಜನತೆಯ ಸುಖಸಂಗಂ
ಕರುಬಿ ಕೊರೆವ ಮಂದಿಗಿಂ:
ನೀರವತೆಯೆ ಸಂಗೀತಂ
ಬೊಬ್ಬಿರಿಯುವ ಮಂದೆಗಿಂ;
ಎಂದು ನೀನು ದೂರ ನಿಂತೆ,
ತರುತಪಸ್ವಿ, ಮೌನವಾಂತೆ;
ನೀನಿಂದೆನಗೊಂದಿಗಂ!

ಜೀವನದ ದಿಗಂತದಿಲ್ಲಿ
ಸ್ಥಾನ ನಿನ್ನದೆತ್ತರ;
ಮಿರ‍್ತುಮನೆಯ ಹೊಸ್ತಿಲಲ್ಲಿ

ನಿನ್ನ ದೃಷ್ಟಿ ಬಿತ್ತರ:
ನೆತ್ತಿಯ ಗುರಿ ಅಂತರಿಕ್ಷ;
ಬೇರಿನ ನೆಲೆ ಭೂಮಿವಕ್ಷ;
ಲೋಕವೆರಡು ಹತ್ತಿರ!

ಹಣ್ಣು ಹೂವು ಎಲೆಗಳೊಲವೆ?
ಕಾಣೆ ನೀನು, ಚಾಗಿಯೆ!
ದೃಢನಿಶ್ಚಲದೊಂದು ಛಲವೆ
ವ್ರತ ನಿನಗೆ, ವಿರಾಗಿಯೆ!
ಹಕ್ಕಿಯೊಂದು  ನಿನ್ನ ಬಳಿಗೆ
ಹಾರಿಬಂದು ಒಂದು ಗಳಿಗೆ
ಉಳಿವುದಿಲ್ಲ, ಯೋಗಿಯೆ!

ರಂಗನೆರಚೆ ಕೆಂಪು ಸಂಜೆ
ಮುಗಿಲ ರಕ್ತ ರಂಗದಿ
ನಿನ್ನ ಹೃದಯ ಬರಿಯ ಬಂಜೆ
ಭಾವವಿಲ್ಲದಂಗದಿ?
ಜ್ಞಾನ ಮಾತ್ರ ನಿನ್ನ ಬುದ್ಧಿ?
ನಿರ್ಗುಣತೆಯೆ ನಿನಗೆ ಸಿದ್ಧಿ?
ಸಂಗ ತಾನಸಂಗದಿ?

ಪ್ರೇತಹಸ್ತಗಳನು ಚಾಚಿ
ನಿನ್ನ ನಖಪ್ರಾರ್ಥನೆ,
ಓ ವಿರಕ್ತ ತರುಪಿಶಾಚಿ,ಲ
ಪರಚಿ ನಭೋಮುಖವನೆ
ಪರವನೇಕೆ ಕಾಡುತಿಹುದು?
ವರವನೇನು ಬೇಡುತಿಹುದು?
ಪ್ರೀತಿಯ ರಸಸುಖವನೆ

ವ್ಯರ್ಥವಲ್ಲ ತವತಪಸ್ಸು,
ಮರದವಸಿಯ ಮೂರುತಿ.
ಮುಂದಕಿಹುದು ಚಿರಯಶಸ್ಸು:
ನುತಿಯಲ್ಲದ ಕೀರುತಿ!
ನಿನಗೆ ಕಾಯುತಿರುವುದಲ್ಲಿ
ಮುಕುತಿಯ ಕೊನೆಯೊಸಗೆಯಲ್ಲಿ
ಅಮೃತ ಮಂಗಳಾರತಿ!

ಕಣಿವೆ ಬದುಕು ಸೊಗಸು, ತಂಪು?
ಅಲ್ಲಿ ಬಿಸಿಲು ಚುಚ್ಚದು.
ಹಕ್ಕಿಯಿಂಪು; ಹಸುರ ಸೊಂಪು;
ಅಲ್ಲಿ ಚಳಿಯು ಕಚ್ಚದು.
ಅದನು ಬಿಟ್ಟೆ; ದೀಕ್ಷೆ ತೊಟ್ಟೆ:
ತಪದ ಕಠಿನಕೆದೆಯ ಕೊಟ್ಟೆ:
ಅಯ್ಯೊ, ಮಂದಿ ಮೆಚ್ಚದು!

ಮಂದಿ ಮೆಚ್ಚಲದುವೆ ಹೆಚ್ಚೆ?
ಸುಳ್ಳು, ಹೊಳ್ಳು ಆ ಸ್ತುತಿ!
ಮೇಲು ಬಣ್ಣಕದರ ಕಣ್ಣು;
ಅದರದು ಅತಿ ಶಿಶುಮತಿ!
ಗಣಿಸದದನು, ತರುವೆ ನಿಲ್ಲು;
ಮೌನದಿಂದೆ ಮನವ ಗೆಲ್ಲು,
ಹೇ ಸ್ವತಂತ್ರ ವಶಮತಿ!

೨೬-೯-೧೯೩೭