ಓ ನೋಡು ಬಾರಾ:
ಗಿಡದ ಕೈಮುಗಿಹ ಮೊಗ್ಗಾಗಿ ಮೈದೋರುತಿದೆ
ಮ್ಯಾಗ್ನೋಲಿಯಾ ಗ್ರಾಂಡಿಫ್ಲೋರಾ!
ತೇರ ಚಲನೆಯ ಸಾರ್ವಭೌಮಿಕ ಉದಾಸೀನ
ನಿರ್ವೇಗದಲಿ, ಎನಿತೊ ದಿನಗಳಿಂದುದ್ಯಾನ
ಯಜ್ಞವೇದಿಯೊಳುದಿಸಿ, ಕವಿ ಮನೋಧ್ಯಾನ
ದೇವತಾ ವಸ್ತುವಾಗಿಹುದೀ ಮಹಾ ಕುಟ್ಮಲಾಕಾರ:
ಹೇವಿಳಂಬಿಯೊಳುದಿಸಿ, ಅರಳಿದೆ ವಿಳಂಬಿಯಲಿ!

ಓ ನೋಡು ಬಾರಾ,
ಓಡಿ ಬಾರಾ:
ಗಿಡದ ಕೈಮುಗಿಹ ಮೊಗ್ಗಾಗಿ ಮೈದೋರುತಿದೆ
ಮ್ಯಾಗ್ನೋಲಿಯಾ ಗ್ರಾಂಡಿಫ್ಲೋರಾ,
ಋತು ವಸಂತನ ಸಖನ ಚೈತ್ರನಾಗಮನಕ್ಕೆ
ಸ್ವಾಗತವ ಬಯಸುವಂಥೆ!
ಇಂದೆಮ್ಮ ಕೋಕಿಲೋದಯ ಚೈತ್ರಮಂ ಮನೆಗೆ
ಹಬ್ಬಕ್ಕೆ ಬರುವನಿಂತೆ!

ಇನಿತು ಕಿರುಗಿಡದೊಳೆನಿತು ಹಿರಿ ಹೂವು ಅಃ
ಬೆಳ್ಳಿಬಿಳಿ ಕಲಶಶಿಶು ಬಾಯ್‌ದುಟಿಯ ತೆರೆವಂತೆ
ಅಲರುತಿದೆ ಮೂರುಲೋಕದ ಮೋಹ ಕರೆವಂತೆ
ದುಗ್ಧಧವಳಿಮ ಮುಗ್ಧತೆಯ ಮೈ ಹೊರೆಯುವಂತೆ
ದಿವ್ಯ ಧಾಮದ ಗರ್ಭಗೃಹವೆ ಕಣ್‌ ತೆರೆಯುವಂತೆ

ಪಂಡರೀಕಂಗಂದು
ಆ ಮಹಾಶ್ವೇತೆ ಮೈದೋರಿದಂತೆ!

ಭೀಮ ತಂದ ಸೌಗಂಧಿಕಾ ಕುಸುಮ
ಇದಕೆ ಅಸಮ!
ಸತ್ಯಭಾಮೆಗಾ ಶ್ರೀ ಕೃಷ್ಣನಿತ್ತ
ಹೂ ಅದೆತ್ತ?

ಅಃ ಇಂತೆ ನಾನರಳಿದರೆ ಧನ್ಯನಲ್ತೆ?
ಬೆಳಕು ಮೂಡೆ ಮಲರಿ,
ಮುಳುಗೆ ಮುಗುಳಿ,
ಬೆಣ್ಣೆಬಿಳಿ ಬಾಳ ಹೂವೆಸಳುಗಳನರಳಿ
ರಾಜರಾಜೇಶ್ವರರ ಸಿರಿಯನಿಳಿಕೆಗೈದು
ಕವಿಯ ಋಷಿಯ ಆಶೀರ್ವಾದಗಳ ಸೂರೆಗೈದು
ಅಃ ಇಂತೆನ್ನ ಬಾಳರಳಿದರೆ ಧನ್ಯನಲ್ತೆ!

ಹೇವಳಿಂಬಿಯಲಿ ಆ ಕೊಡಗುದಾರಿಯಲಿ
ನಡೆದು ಬಂದರು ಅಂದು ಉದಯರವಿಗಾ
ನರವಿಭೂತಿ ಶ್ರೀ ವಿನೋಬಾಜಿ:
ವಿಳಂಬಿಯಲಿ ಗಿಡದ ಈ ಮೈಹಸುರು ದಾರಿಯಲಿ
ನಡೆದೆ ಬಂದಿಹಳಿಂದು ತಾಯಿ ಮ್ಯಾಗ್ನೋಲಿಯಾ
ಸುಮವಿಭೂತಿ ಶ್ರೀ ದಿವ್ಯರಾಜ್ಞಿ!

ಧನ್ಯ ಹೇವಿಳಂಬಿ!….

ಧನ್ಯ ಹೇ ವಿಳಂಬಿ!*

೨೧-೩-೧೯೫೮


*      ವಿಳಬಿ ಸಂವತ್ಸರ, ಉಗಾದಿ