ನೀಲಧಿಯಲಿ ಶಶಿಯ ದೋಣಿ
ಈಸುತಿತ್ತು;
ಮಂದಾನಿಲಂ ಮಂದಮಂದಂ
ಬೀಸುತಿತ್ತು.
ತೇನೆ ಹಕ್ಕಿಯೊಂದು ವಾಣಿ
ಕೇಳುತಿತ್ತು;
ಮುಗಿಲಿನಿಂದ ಜೊನ್ನ ಜೇನು
ಬೀಳುತಿತ್ತು!.

ಕುಳಿತು ಶಶಿಯ ದೋಣಿಯಲ್ಲಿ
ಮುಗಿಲ್ದೆರೆಯ ಬಾನಿನಲ್ಲಿ
ಈಸಿ ಈಸಿ,
ಬೆರೆತು ತಂಪುಗಾಳಿಯಲ್ಲಿ
ಮಲೆಯ ಬನ ಬನಂಗಳಲ್ಲಿ
ಬೀಸಿ ಬೀಸಿ,
ತೇನೆಹಕ್ಕಿ ರೆಕ್ಕೆಯೇರಿ
ಗಾನದಿಂಪಿನಲೆಯ ಸೇರಿ
ಹಾರಿ ಹಾರಿ;
ಸುರಿಯೆ ಪೆರೆಯ ಹಿಳಿದ ಜೇನು
ಜೊನ್ನೆಳೊಂದುಗೂಡಿ ತಾನು
ಸೋರಿ ಸೋರಿ,ಕವಿಯ ಜೀವರಸದ ಲಹರಿ
ಜಗತ್‌ ಪ್ರಾಣನಾಡಿಯಲ್ಲಿ
ಸ್ಪಂದಿಸಿತ್ತು;
ಧ್ಯಾನ ಜ್ಯೋತ್ಸ್ನೆ ಇಹವ ಪರವ
ಬಂಧಿಸಿತ್ತು;
ಶಿವಸಿಂಧುವನಾತ್ಮ ಬಿಂದು
ಸಂಧಿಸಿತ್ತು;
ಅಶ್ರುಪೂರ್ಣ ಕವಿಯ ಹೃದಯ
ಕಲಾರತಿಗೆ ಆರತಿಯೆತ್ತಿ
ವಂದಿಸಿತ್ತು!

೩೧-೩-೧೯೩೫