ಸರ್ವಮಂಗಳೆ ನೀನೆ
ಪರಮ ಮಂಗಳಕಾಗಿ
ವಿಶ್ವದ ವಿಕಾಸನದ
ಲೀಲೆಯಲಿ ತೊಡಗಿರಲು
ಅರಿವಿನನುಭವಕಿಹುದೆ
ಅಮಂಗಳದ ಭೀತಿ?

ಕಷ್ಟದಲಿ ಸುಖದಲ್ಲಿ
ನಷ್ಟ ನಾಶಗಳಲ್ಲಿ
ದುಷ್ಟರಲಿ ಶಿಷ್ಟರಲಿ
ಇಷ್ಟದೊಳನಿಷ್ಟದಲಿ
ಸಿದ್ಧಿ ಹೊಂದುತಲಿರಲು
ನಿನ್ನಮೃತ ನೀತಿ
ಶ್ರದ್ಧೆಯಿಹ ಧೃತಿಗಿಹುದೆ
ಹೇಳ್‌ ಅಶಿವ ಭೀತಿ?

ಸರ್ವನಾಶದ ಮಧ್ಯೆ
ಆಶಾವಾದಿ ಶ್ರದ್ಧೆ:
ಕನಸು ಕಾಣುವ ನಿದ್ದೆ
ಓಲ್‌ ಈ ಅವಿದ್ಯೆ
ತಾನಲ್ತೆ ರಸಲೀಲೆ
ಎಚ್ಚೆತ್ತ ಮೇಲೆ!

೩೦-೧೧-೧೯೪೫