ಪಿಡಿ, ಬಲ್ವಿಡಿ ಪಿಡಿ:
ಪೊರೆವುದು ಈ ಅಡಿ.
ಇದು ಗುರುವಿಗೆ ಪಡಿ;
ಇದು ದೇವರ ಗುಡಿ;
ಪಣೆಯಿಡು, ಪೊಡೆವಡು,
ಪಾವನವಪ್ಪುದು ನಿನ್ನ ಮುಡಿ!

ಇದು ಭವಕಾನನ
ದಾವಾಗ್ನಿಯ ಕಿಡಿ;
ಇದು ಸುಜ್ಞಾನದ
ಸನ್ಮಂತ್ರದ ನುಡಿ:
ವೈಕುಂಠದ ತಡಿ;
ಕೈಲಾಸದ ಗಡಿ!
ಪಣೆಯಿಡು, ಪೊಡೆವಡು,
ಆಶ್ರಮವಪ್ಪುದು ನಿನ್ನ ಮುಡಿ!

ಇದಕರ್ಪಿಸೆ ದುಡಿ;
ಇದನೊಪ್ಪಿಸೆ ಮಡಿ!
ಈ ಪೂವಡಿಯೊಳ್‌
ನೀನಾರಡಿಯೊಲ್‌
ನಿತ್ಯಾನಂದದ
ನಿಜಮಕರಂದದ
ಭಗವನ್‌ ಮಧುವನ್‌ ಬಯಸಿ ಕುಡಿ !
ಪೂಜಾತೀರ್ಥದಿ ಮಿಂದು ಕುಡಿ!
ಭಕ್ತಿಯ ರಸವನ್‌ ಈಂಟಿ ಕುಡಿ!
ಶ್ರದ್ಧೆಯ ಜೇನನ್‌ ನಂಬಿ ಕುಡಿ!
ಪ್ರೇಮಾಮೃತವನ್‌ ತುಂಬಿ ಕುಡಿ!

೮-೧-೧೯೫೧