“ಅಹಮಸ್ಮಿ ಅಹಮಸ್ಮಿ ಅಹಂ ಅಸ್ಮಿ!”
ಆಶೀರ್ವದಿಸುತೈತಂದನೈ ಮಹರ್ಷಿ,
ವೈಶಾಖ ಉದಯ ದಿನಮಣಿ ಅರಶ್ಮಿ.
ದೇವ ಧ್ಯೆರ್ಯಾಮೃತವ ಜೀವಲೋಕಕ್ಕೆರೆದು
ಮರ್ತ್ಯಕೆ ಅಮರ್ತ್ಯದ ಗವಾಕ್ಷಮಂ ಕೊರೆದು,
ಕೆಂಗೆಂಡದುಂಡೆಯೋಲ್‌
ದಿವ್ಯಾಗ್ನಿ ಕುಂಡದೋಲ್‌
ದೇವರೂರ್ ಪ್ರತ್ಯಕ್ಷ ರುಂಡದೋಲ್‌
ಮೂಡಿದನ್‌!

ಮೂಡಿದನೆ?
ಮೈದೋರಿದನು ಮಹರ್ಷಿ,
ದಿನಲಮಣಿ ಅರಶ್ಮಿ!
ದಿಗ್ಗಜದ ಬೆನ್ನೇರಿ
ಇಂಧ್ರಾದ್ರಿಯನ್ನೇರಿ
ಶಿಖರರೂಪದ ಮುಗಿಲ ತೇರನೇರಿ
“ಅಹಮಸ್ಮಿ ಅಹಮಸ್ಮಿ ಅಹಂ ಅಸ್ಮಿ!”
ಎಂಬ ಆಶೀರ್ವಾದಮಂ ಲೋಕಲೋಕಕೆ ಸಾರಿ
ಮೈದೋರ್ದನದೊ ಮಹರ್ಷಿ ದಿನಮಣಿ ಅರಶ್ಮಿ!
ಸೃಷ್ಟಿದೇವಿಯ ವಕ್ಷ ಮೃದುತಲ್ಪದಲಿ ನಿಂತು
ದೃಷ್ಟಿಪೂಜೆಯ ಸಲಿಸುತಿರ್ದ ಕಬ್ಬಿಗನೊಳಿಂತು
ಆಘೋಷಿಸಿತು ಉಪನಿಷತ್ತಿನ ಋಷಿಯ ಮಂತ್ರಸಪ್ತತಂತು:

“ಓಂ ಪೂಷನ್ನೇಕರ್ಷೇ
ಯಮ ಸೂರ್ಯ ಪ್ರಾಜಾಪತ್ಯ
ವ್ಯೂಹ ರಶ್ಮೀನ್‌ ಸಮೂಹ!
ತೇಜೋ ಯತ್‌ ತೇ ರೂಪಂ
ಕಲ್ಯಾಣತಮಂ
ತತ್‌ ತೇ ಪಶ್ಯಾಮಿಃ
ಯೋsಸಾವಸೌ ಪುರುಷಃ ಸೋಹಮಸ್ಮಿ!”

೧೯-೪-೧೯೫೨