ಮನೆಯ ಉದ್ಯಾನದಲ್ಲಿ

ಬನ್ನಿ, ಓ ಬಾನಲೆವರೆ, ನಮ್ಮ ತೋಟಕೆ,
ನಂದನವನೆ ಮೀರಿಸುವೀ ದಿವ್ಯನೋಟಕೆ.
ಬನ್ನಿ ಸೌಂದರ್ಯರಸದ ಅಮೃತದೂಟಕೆ,
ಅಲೋಕಸುಖವನೀವ ಈ ಲೋಕಪೀಠಕೆ:

ಕವಿಯ ಮನೆಯ ಅಂಗಳ
ದಿವಿಜರಿಗೂ ಮಂಗಳ!
ಸರಸ್ವತಿಯ ಕಂದನ
ಮನಕೆ ಮಿಗಿಲೆ ನಂದನ?

ಅಲ್ಲಿ ಪಂಕ್ತಿ ಸೂರ್ಯಕಾಂತಿ; ಇಲ್ಲಿ ಪನ್ನೇರಿಳೆ;
ಅಲ್ಲಿ ಹೊಂಗುಲಾಬಿ ಹಂತಿ; ಇಲ್ಲಿ ಚಿನ್ನ ವೂಮಳೆ;
ಇಲ್ಲಿ ಕೆಂಪು; ಅಲ್ಲಿ ಹಳದಿ; ಹಸುರು, ಪಚ್ಚೆ, ನೀಲಿ;
ಹೊಸತೆ ಬಂತೊ ತಾಯ ಹರಕೆ ಹೂವ ರೂಪ ತಾಳಿ!

ಕೋಕಿಲಾದಿ ಕೂಜನ;
ಸ್ಫಟಿಕಪುಷ್ಪ ಲಾಝನ;
ಸರ್ವಸೃಷ್ಟಿಯ ಸರ್ವಸುಖಕೆ
ಸತ್ಯ ಶಿವ ಸೌಂದರ್ಯಮುಖಕೆ
ಕವಿಯ ಯಾಜನ:

ಕವಿಹೃದಯದ ಕರುವೀಂಟುವ ಸೃಷ್ಟಿಗೋ ಪಯೋಧರ
ಸೊರಸುವಮೃತ ಮಧುವಿಗೆಣೆಯೆ ನಿಮ್ಮ ಅಪ್ಸರಾಧರ?
ಓ ದಿವ್ಯ ಚೇತನಗಳೆ,
ಇಳಿದು ಬನ್ನಿ, ಬನ್ನಿ!ಇಳಿಯೆ ನೀವು ಅಳಿಯೆ ನೋವು
ಬುವಿಗೆ ದಿವಿಯ ತನ್ನಿ!
ಕವಿಯ ಕಾಣ್ಬ ಸವಿಯೆ ನನ್ನಿ;
ತಿಳಿಯೆ ನಾವು,
ಬುವಿಯೆ ದಿವಿ ಎನ್ನಿ!
ಕವಿರಸಾನುಭವದ ಸೇತುವಿಂ
ಪ್ರವಾಹವಿಳಿದು ಬನ್ನಿ!
ಬನ್ನಿ, ಓ ಬನ್ನಿ.
ದಿವಿಯನುಳಿದು ಕವಿಯ ಬುವಿಯ ದಿವ್ಯದಿವಿಗೆ ಬನ್ನಿ!

೧೪-೯-೧೯೫೪